ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ನೈತಿಕತೆ ಜನಾರ್ದನ ರೆಡ್ಡಿಯವರಿಗಿದೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಜ ಜೀವನ ಹಾದಿಯಲ್ಲಿ ನಡೆದು ಬಂದವರು. ಜನಾರ್ದನ ರೆಡ್ಡಿಯವರ ಹಾಗೆ ವೈಭೋಗದ ಹುಚ್ಚು ಭ್ರಮೆಯ ಬದುಕಿಗೆ ರಾಜಕೀಯ ಮಾಡುತ್ತಿಲ್ಲ. ಜನಾರ್ದನ ರೆಡ್ಡಿ ನಡೆದು ಬಂದ ದಾರಿ, ಮಾಧ್ಯಮಗಳಲ್ಲಿ ಪ್ರಸಾರಗೊಂಡ ಅವರ ಆ ವಜ್ರ-ವೈಢೂರ್ಯದ ಕಿರೀಟ, ಬಂಗಾರದ ಕುರ್ಚಿ- ಕಮೋಡುಗಳನ್ನು ಈ ರಾಜ್ಯದ ಜನ ಮರೆಯಲು ಸಾಧ್ಯವೇ? ನೈತಿಕತೆ ಎನ್ನುವ ಪದ ಬಳಕೆ ಮಾಡುವ ಮೊದಲು ಜನಾರ್ದನ ರೆಡ್ಡಿ ತಮ್ಮ ಕಳೆದ ಬದುಕನ್ನು ಒಂದು ಸಲ ನೆನಪುಮಾಡಿಕೊಳ್ಳಲಿ.
ಮುಡಾ ಪ್ರಕರಣದ ಕುರಿತು ನ್ಯಾಯಾಲಯದ ತೀರ್ಪು ಬಂದ ಮೇಲೆ, ಒಂದು ವಿರೋಧ ಪಕ್ಷವಾಗಿ ಬಿಜೆಪಿ ಮತ್ತು ಮೈತ್ರಿಪಕ್ಷ ಜೆಡಿಎಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಹಕ್ಕು. ಅದಕ್ಕೆ ಯಾರದೇ ಆಕ್ಷೇಪವಿಲ್ಲ. ಆದರೆ, ಗಂಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೈತಿಕತೆಯ ಕುರಿತು ಮಾತನಾಡುತ್ತಿರುವುದೇ ನಾಚಿಕೆಗೇಡುತನ.
ಶಾಸಕ ಜನಾರ್ದನ ರೆಡ್ಡಿ ಸೆರೆಮನೆಗೆ ಹೋಗಿದ್ದು ಅವರ ಸ್ವಯಂಕೃತ ಅಪರಾಧದ ಹಿನ್ನೆಲೆಯಲ್ಲಿ. ಅಂದು ರಾಜ್ಯದ ನಿಸರ್ಗ ಸಂಪತ್ತು ಲೂಟಿ ಮಾಡಿದ ಪರಿಶ್ರಮಕ್ಕಾಗಿ, ತಾವು ವಿಶ್ರಾಂತಿ ಪಡೆಯಲು ಸೆರೆಮನೆ ವಾಸ ಮಾಡಿದ್ದಾರೆಯೇ ಹೊರತು ದೇಶಸೇವೆಗಾಗಿ ಅಲ್ಲ.
ಅವರ ಮೇಲೆ ಇರುವ ಕೇಸು ಒಂದೇ ಎರಡೇ? ಹಾಗಾಗಿಯೇ, ಸುಪ್ರೀಂ ಕೋರ್ಟ್ ಅವರನ್ನು ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿತ್ತು. ಅದರ ಫಲಶೃತಿಯಾಗಿ ಅವರು ಕಟ್ಟಿದ್ದ ಅರಮನೆಯಲ್ಲಿ ಮೂರು ತಿಂಗಳು ವಾಸಮಾಡಲೂ ಅವರಿಗೆ ಆಗಲಿಲ್ಲ.
ಹೊಸ ತಂತ್ರಗಾರಿಕೆ ಮಾಡಿ, ಕೆಆರ್‌ಪಿಪಿ ಪಕ್ಷದ ಮೂಲಕ ಗಂಗಾವತಿ ಕ್ಷೇತ್ರದಲ್ಲಿ ನೆಲೆಯೂರಿ, ತಮ್ಮ ರಾಜಕೀಯ ದಾಳಕ್ಕೆ ಅಂಜನಾದ್ರಿ ಬೆಟ್ಟವನ್ನು ಕೇಂದ್ರ ಬಿಂದುವಾಗಿಸಿಕೊಂಡು, ಗಂಗಾವತಿ ಕ್ಷೇತ್ರದ ಮತದಾರರಿಗೆ ಸಾಲು ಸಾಲು ಸುಳ್ಳು ಭರವಸೆಗಳನ್ನು ನೀಡುವುದರ ಮೂಲಕ ಶಾಸಕರಾಗಿ ಈಗ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದಾರೆ.
ಗಾಲಿ ಜನಾರ್ದನ ರೆಡ್ಡಿಯವರಿಗೆ ಅವರದೇ ಮಾತುಗಳು ನೆನಪಿದೆಯೇ? ‘‘ನಾನು ಗೆದ್ದು ಎಂಎಲ್‌ಎ ಆದರೆ, ಗಂಗಾವತಿ ಕ್ಷೇತ್ರವನ್ನು ಸಿಂಗಾಪುರ ಮಾಡುವೆ, ಮನೆ ಇಲ್ಲದವರಿಗೆ ಡುಪ್ಲೆಕ್ಸ್ ಮನೆ ಕಟ್ಟಿ ಕೊಡುವೆ’’ ಎಂದು ಆಶ್ವಾಸನೆ ನೀಡಿ, ಹಣವನ್ನು ನೀರಿನಂತೆ ಹಂಚಿ, ಜನರ ಕಣ್ಣಿಗೆ ಮಂಕು ಬೂದಿ ಎರಚಿದ್ದರು ಅವರು.
ಜನಾರ್ದನ ರೆಡ್ಡಿ ರಾಜಕೀಯಕ್ಕೆ ಮರಳಿ ಬಂದಿರುವುದು ಸೇವೆಗಾಗಿಯೂ ಅಲ್ಲ, ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಉದ್ಧಾರಕ್ಕೂ ಅಲ್ಲ. ಹಿಂದೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಮರಳಿ ಹೋಗುವುದಿಲ್ಲ ಎಂದು ಹೇಳಿಕೆ ಕೊಟ್ಟು, ಮರಳಿ ಬಿಜೆಪಿಯ ಕದತಟ್ಟಿ, ಅಮಿತ್ ಶಾ ಅವರಿಗೆ ಶರಣಾಗಿ ಬಿಜೆಪಿ ಸೇರಿಕೊಂಡಿರುವುದು ಅವರ ಕೇಸುಗಳ ಖುಲಾಸೆ ಮಾಡಿಕೊಳ್ಳಲೇ ಹೊರತು, ಇನ್ಯಾವ ಸಾಧನೆಗೂ ಅಲ್ಲವೆಂಬುದು ಕಟುಸತ್ಯ.
ಮೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸ್ವಯಂಪ್ರೇರಿತರಾಗಿ ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿ, ನಿಗದಿತ ಅವಧಿಯೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಎಸ್‌ಐಟಿಗೂ ಖುದ್ದಾಗಿ ವಹಿಸಿಕೊಟ್ಟಿದ್ದಾರೆ.
ಮುಖ್ಯಮಂತ್ರಿಗಳು ನ್ಯಾಯಾಲಯದ ಮೆಟ್ಟಲೇರಿರುವುದು ರಾಜ್ಯಪಾಲರ ಅಸಾಂವಿಧಾನಿಕ ನಡೆಯ ವಿರುದ್ಧ. ಬಂದಿರುವ ಆದೇಶದಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪವಿಲ್ಲವೆಂದೇ ಹೇಳಿರುವುದು. ಆದರೆ ಬಿಜೆಪಿಯವರು ಅಧಿಕಾರದ ದುರಾಸೆಗಾಗಿ, 7 ಕೋಟಿ ಕನ್ನಡಿಗರಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವನ್ನು ಒಬ್ಬ ನಾಮಿನೇಟ್ ಆದ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಬೀಳಿಸಲು ನಡೆಸುತ್ತಿರುವ ಹುನ್ನಾರವಿದು.
ಸೈದ್ಧಾಂತಿಕ ಹಿನ್ನೆಲೆಯ ಸಿದ್ದರಾಮಯ್ಯನವರು ಬಿಜೆಪಿಗೂ, ಮೋದಿ-ಶಾರಿಗೂ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಹೀಗಾಗಿ ಅವರ ತೇಜೋವಧೆ ಮಾಡುವ ಷಡ್ಯಂತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.
ಒಂದು ವೇಳೆ ರಾಜ್ಯಪಾಲರು ಪಾರದರ್ಶಕ ತನಿಖೆ ಮಾಡಲು ಆದೇಶ ಮಾಡಿದ್ದರೆ, ಇಂದು ಜನಾರ್ದನ ರೆಡ್ಡಿ ಕೂಡ ತನಿಖೆಗೆ ಒಳಪಡುತ್ತಿದ್ದರು ಎನ್ನುವುದನ್ನು ಅವರು ಮರೆಯಬಾರದು.
ಕರ್ನಾಟಕದಲ್ಲಿ ಬಿಜೆಪಿ ಯಾವತ್ತೂ ಅಸಾಂವಿಧಾನಿಕವಾಗಿ ಸರಕಾರ ರಚನೆ ಮಾಡಿರುವುದು ಇಡೀ ದೇಶಕ್ಕೆ ತಿಳಿದ ವಿಷಯ. ಕಳೆದ ಬಾರಿಯ ಹಾಗೆ ಈ ಬಾರಿಯೂ ಆಪರೇಷನ್ ಕಮಲ ಮಾಡ ಹೊರಟರೆ, ಜನ ಉಗಿಯುತ್ತಾರೆ ಎಂಬ ಕಾರಣಕ್ಕೆ ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ನೈತಿಕತೆ ಕುರಿತು ಮಾತಾಡುವ ಜನಾರ್ದನ ರೆಡ್ಡಿಯವರ ಪಕ್ಷದ ಸರ್ವೋಚ್ಚ ನಾಯಕ, ಸ್ವಯಂಘೋಷಿತ ದೇವಮಾನವ ಮೋದಿಯವರು, ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಅಸಾಂವಿಧಾನಿಕವೆಂದು ಹೇಳಿದಾಗ, ಯಾಕೆ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಲಿಲ್ಲ?
ಸದಾ ದೇವರು- ಧರ್ಮ- ಸಂಸ್ಕೃತಿ- ಸಂಸ್ಕಾರವನ್ನು ಹೋಲ್‌ಸೇಲ್ ಗುತ್ತಿಗೆ ಹಿಡಿದ ಬಿಜೆಪಿ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದರೂ, ತುಟಿಪಿಟಿಕ್ ಎನ್ನದೆ ಇಂದಿನವರೆಗೂ ಒಂದೇ ಒಂದು ಸೌಜನ್ಯದ ಭೇಟಿ ಮಾಡದ ಪ್ರಧಾನಿಯವರಿಗೆ ನೈತಿಕತೆ ಎಂಬ ಶಬ್ದದ ಪರಿಚಯವಿದೆಯೇ? ಕೊನೆಯ ಪಕ್ಷ ಮಣಿಪುರದ ವಿಷಯದಲ್ಲಿ ಪ್ರಧಾನಿಯವರ ನಡೆ ಸರಿಯೇ ಎನ್ನುವುದಕ್ಕೆ ಜನಾರ್ದನ ರೆಡ್ಡಿ ಉತ್ತರಿಸಬಲ್ಲರಾ? ಕೇಳಲು ಪ್ರಶ್ನೆಗಳು ಸಾವಿರ ಇವೆ. ಉತ್ತರಿಸುವ ನೈತಿಕತೆ ಅವರಿಗಿದೆಯೇ ?
ಅಷ್ಟಕ್ಕೂ, ಶ್ರೀಮತಿ ಪಾರ್ವತಿ ಸಿದ್ದರಾಮಯ್ಯನವರಿಗೆ ಜಮೀನು ಕೊಟ್ಟ ಅವಧಿಯಲ್ಲಿದ್ದ ಮುಡಾ ಅಧ್ಯಕ್ಷರ ಮೇಲೆ ಯಾಕೆ ತನಿಖೆ ಆಗುತ್ತಿಲ್ಲ? ಆ ಜಮೀನು ವಿತರಿಸುವಾಗ ಯಾವ ಪಕ್ಷ ಅಧಿಕಾರದಲ್ಲಿತ್ತು? ಅಂದಿನ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಯಾರಾಗಿದ್ದರು? ಅವರ ಮೇಲೆ ಯಾಕೆ ದೂರು ನೀಡಲಿಲ್ಲ?
ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲ ಎನ್ನುವುದೂ ಜನಾರ್ದನ ರೆಡ್ಡಿ ಮತ್ತು ಅವರ ಪಕ್ಷಕ್ಕೂ ಗೊತ್ತಿದೆ. ಆದರೆ ಅವರ ತೇಜೋವಧೆ ಮಾಡಲು, ಅವರು ಭಾಗಿಯಾಗದ ಪ್ರಕರಣವನ್ನು ಅವರ ತಲೆಗೆ ಕಟ್ಟಿ, ಅವರ ರಾಜೀನಾಮೆ ಕೇಳುತ್ತಿರುವುದು, ಅಧಿಕಾರದ ದುರಾಸೆಗಾಗಿ ಎಂಬುದು ಸ್ಪಷ್ಟ. ಜನಾರ್ದನ ರೆಡ್ಡಿಯವರಿಗೆ ಹಾಗೂ ಅವರ ಪಕ್ಷಕ್ಕೆ ಕೇವಲ ಅಧಿಕಾರ ಮುಖ್ಯವೇ ಹೊರತು, ಜನಪರ ಆಡಳಿತವಲ್ಲ.
ನಿಜವಾಗಿಯೂ ಜನಾರ್ದನ ರೆಡ್ಡಿಯವರಿಗೆ ಜನಪರ ಕಾಳಜಿ ಇದ್ದಿದ್ದರೆ, ಕನ್ನಡನಾಡಿನ ಅಭಿವೃದ್ಧಿ ಅರಿವು ಕಿಂಚಿತ್ತಾದರೂ ಇದ್ದರೆ, ಮೊದಲು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣವನ್ನು ತೆಗೆದುಕೊಂಡುಬರಲಿ ಅದು ಅವರಿಂದ ಸಾಧ್ಯವೇ?
ಇದ್ಯಾವುದು ನೈತಿಕತೆಯ ಪರಧಿಯೊಳಗೆ ಬರುವುದಿಲ್ಲವೇ? ಮೋದಿ-ಶಾ ಮುಂದೆ ಮಾತಾಡಲು ಎದೆಗಾರಿಕೆ ಇಲ್ಲದವರು, ಸಿದ್ದರಾಮಯ್ಯನವರ ಕುರಿತು ಮಾತಾಡುವ ಯೋಗ್ಯತೆ ಇದೆಯೇ?
ಬಿಜೆಪಿಯ ಷಡ್ಯಂತ್ರದ ಮೂಲ ಉದ್ದೇಶವೇ ಸಿದ್ದರಾಮಯ್ಯನವರ ರಾಜೀನಾಮೆ. ಅದನ್ನು ತಿಳಿದೇ ಮುಖ್ಯಮಂತ್ರಿಗಳು ಎದೆಯೊಡ್ಡಿ ಇಡೀ ಮುಡಾ ಪ್ರಕರಣ ಎದುರಿಸುತ್ತಿದ್ದಾರೆ. ಇದು ಅವರ ನೈತಿಕತೆಯ ತಾಕತ್ತಿನಿಂದ ಎಂಬುವುದು ಜನಾರ್ದನ ರೆಡ್ಡಿಯವರಿಗೆ ಅರ್ಥವಾಗಲಾರದು.
ಮುಖ್ಯಮಂತ್ರಿಗಳು ಸಹಜ ಜೀವನ ಹಾದಿಯಲ್ಲಿ ನಡೆದು ಬಂದವರು. ಜನಾರ್ದನ ರೆಡ್ಡಿಯವರ ಹಾಗೆ ವೈಭೋಗದ ಹುಚ್ಚು ಭ್ರಮೆಯ ಬದುಕಿಗೆ ರಾಜಕೀಯ ಮಾಡುತ್ತಿಲ್ಲ. ಜನಾರ್ದನ ರೆಡ್ಡಿ ನಡೆದು ಬಂದ ದಾರಿ, ಮಾಧ್ಯಮಗಳಲ್ಲಿ ಪ್ರಸಾರಗೊಂಡ ಅವರ ಆ ವಜ್ರ-ವೈಢೂರ್ಯದ ಕಿರೀಟ, ಬಂಗಾರದ ಕುರ್ಚಿ- ಕಮೋಡುಗಳನ್ನು ಈ ರಾಜ್ಯದ ಜನ ಮರೆಯಲು ಸಾಧ್ಯವೇ?
ನೈತಿಕತೆ ಎನ್ನುವ ಪದ ಬಳಕೆ ಮಾಡುವ ಮೊದಲು ಜನಾರ್ದನ ರೆಡ್ಡಿ ತಮ್ಮ ಕಳೆದ ಬದುಕನ್ನು ಒಂದು ಸಲ ನೆನಪುಮಾಡಿಕೊಳ್ಳಲಿ.
ಶ್ರೀಮತಿ ಪಾರ್ವತಿ ಸಿದ್ದರಾಮಯ್ಯನವರು, ತಮ್ಮ ಪತಿಯ ಸುದೀರ್ಘ ರಾಜಕಾರಣದಲ್ಲಿ ಎಂದೂ ಸಾರ್ವಜನಿಕವಾಗಿ ಗುರುತಿಕೊಂಡವರಲ್ಲ. ಒಂದು ಸಭೆ ಸಮಾರಂಭಕ್ಕೂ ಬಂದವರಲ್ಲ. ಅಂತಹ ಒಬ್ಬ ಸಜ್ಜನ ಮಹಿಳೆಯ ವ್ಯಕ್ತಿತ್ವಕ್ಕೆ, ಬಿಜೆಪಿ ಹಾಗೂ ಜೆಡಿಎಸ್‌ನವರು ಅವರ ರಾಜಕೀಯ ತೆವಲಿಗಾಗಿ ತೇಜೋವಧೆ ಮಾಡುತ್ತಿರುವುದು ಮಹಿಳೆಯರ ಮೇಲಿನ ಮನುಸಂಸ್ಕೃತಿಯ ಮನಸ್ಥಿತಿಯ ಕೈಗನ್ನಡಿಯಷ್ಟೇ.
ಒಂದೇ ಮಾತಲ್ಲಿ ಮುಡಾ ಪ್ರಕರಣವನ್ನು ಉಲ್ಲೇಖ ಮಾಡುವುದಾದರೆ, ನಾಮನಿರ್ದೇಶನದಿಂದ ನೇಮಕಗೊಂಡ ರಾಜ್ಯಪಾಲರ ಮೂಲಕ, ಜನಾದೇಶ ಪಡೆದ ಸರಕಾರವನ್ನು ಉರಳಿಸುವ ಪ್ರಯತ್ನವಿದು.