ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತೆ ಶಂಕರಮ್ಮಗೆ 4 ವರ್ಷಗಳು ಕಳೆದರೂ ಸಿಗದ ಪಿಎಫ್
ಬೆಂಗಳೂರು: ‘ಸುವರ್ಣ ಮಹೋತ್ಸವ ಪ್ರಶಸ್ತಿ’ ಪುರಸ್ಕೃತೆ ಶಂಕರಮ್ಮ ಪೌರಕಾರ್ಮಿಕ ವೃತ್ತಿಯಿಂದ ನಿವೃತ್ತಿಯಾಗಿ ನಾಲ್ಕು ವರ್ಷಗಳು ಕಳೆದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಭವಿಷ್ಯ ನಿಧಿ ಕಚೇರಿಯಿಂದ ಇನ್ನೂ ಪಿಎಫ್ ಭಾಗ್ಯ ದೊರಕದೇ ಜೀವನ ನಡೆಸಲು ಪರದಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ ತಲಮಾರಿ ಗ್ರಾಮದ ಮೂಲದ ಶಂಕರಮ್ಮ 2000ನೇ ಇಸವಿಯಲ್ಲಿ ಬಿಬಿಎಂಪಿಯ ವಾರ್ಡ್ ನಂ.85ರಲ್ಲಿ ಪೌರಕಾರ್ಮಿಕರಾಗಿ ಗುತ್ತಿಗೆ ಪದ್ಧತಿಯಡಿ ಕೆಲಸಕ್ಕೆ ಸೇರಿದ್ದು, ಶಂಕರಮ್ಮರ ಬದುಕು ಈಗಲೂ ಕಷ್ಟದಿಂದಲೇ ಸಾಗುತ್ತಿದೆ.
ಶಂಕರಮ್ಮ ತನ್ನ ಸಂಪೂರ್ಣ ಜೀವನವನ್ನು ಪೌರಕಾರ್ಮಿಕಳಾಗಿ ಬಿಬಿಎಂಪಿಗೆ ಮುಡಿಪಿಟ್ಟು ನಗರವನ್ನು ಸ್ವಚ್ಛವಾಗಿಡಲು ಶ್ರಮಿಸಿದ್ದಾರೆ. ಕಾನೂನು ಬದ್ಧವಾಗಿ ದೊರಕಬೇಕಾಗಿದ್ದ ಗ್ರಾಚ್ಯುಟಿ, ಪಿಂಚಣಿ ಅಥವಾ ಯಾವುದೇ ನಿವೃತ್ತಿ ಸೌಲಭ್ಯಗಳು ನಾಲ್ಕು ವರ್ಷಗಳಾದರೂ ದೊರಕಿಲ್ಲ. ಬಿಬಿಎಂಪಿ ಅಧಿಕಾರಿಗಳು ಅವರಿಗೆ ಪಿಎಫ್ ಮೊತ್ತವನ್ನು ದೊರಕಿಸಿಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶಂಕರಮ್ಮ 2021ರಲ್ಲಿ ನಿವೃತ್ತಿ ಹೊಂದುತ್ತಾರೆ. ನಿವೃತ್ತಿಯಾದ ನಂತರ ಅವರಿಗೆ ಪಿಎಫ್ ಸೌಲಭ್ಯ ಸಿಗದ ಕಾರಣ ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಮನೆಗಳಲ್ಲಿ ಕಸ-ಮೊಸರೆ ತಿಕ್ಕುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ವಯಸ್ಸಾದಷ್ಟು ತನ್ನ ದೈಹಿಕ ಶಕ್ತಿ ಕುಂಠಿತಗೊಳ್ಳುತ್ತಿದ್ದರಿಂದ ಮತ್ತು ನಗರದಲ್ಲಿ ಬದುಕುವಷ್ಟು ಹಣ ಸಿಗದ ಕಾರಣ ತನ್ನ ಹುಟ್ಟೂರು ರಾಯಚೂರಿಗೆ ಮರಳಿದ್ದಾರೆ.
ಸರಕಾರ ಆರ್‌ಟಿಜಿಎಸ್ ಮೂಲಕ ವೇತನ ಪಾವತಿ ಮಾಡಬೇಕೆಂಬ ಕಡ್ಡಾಯ ನಿಯಮ ಮಾಡಿದ್ದರಿಂದ, ಗುತ್ತಿಗೆದಾರರು ಎಲ್ಲ ಪೌರಕಾರ್ಮಿಕರಿಂದ ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ರಾವಣಮ್ಮ ಮತ್ತು ಶಂಕರಮ್ಮ ಇವರ ವಿರುದ್ಧ ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಕಚೇರಿಯಲ್ಲಿ ಹೋರಾಟವನ್ನು ರೂಪಿಸಿ ಎಲ್ಲ ಪೌರಕಾರ್ಮಿಕರಿಗೆ ಬ್ಯಾಂಕ್ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡ್‌ಗಳನ್ನು ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಯಂಲೋಕ್ ಹೊಟೇಲ್‌ನಲ್ಲಿ ಶೌಚಾಲಯ ಗುಂಡಿ ಸ್ವಚ್ಛಗೊಳಿಸುವುದಕ್ಕಾಗಿ ಕಳುಹಿಸಿಕೊಟ್ಟಿದ್ದ ಗುತ್ತಿಗೆದಾರ ಮತ್ತು ಬಿಬಿಎಂಪಿ ವಿರುದ್ಧ ಹೋರಾಟ ಮಾಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಮೂಲಕ ಪೌರಕಾರ್ಮಿಕ ಪರ ದಿಟ್ಟ ಹೋರಾಟ ಪ್ರದರ್ಶಿಸಿದ್ದರು. 2016ರಲ್ಲಿ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವಲ್ಲಿ ಶಂಕರಮ್ಮ ಮತ್ತು ರಾವಣಮ್ಮ ಮಹತ್ವದ ಪಾತ್ರವಹಿಸಿದ್ದರು.
ಈ ಹೋರಾಟದ ಫಲವಾಗಿ ಸರಕಾರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪೌರಕಾರ್ಮಿಕರಿಗೆ ನೇರ ಪಾವತಿಯನ್ನು ಪರಿಚಯಿಸುತ್ತದೆ. 2024ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಎಲ್ಲ ನೇರ ವೇತನ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತದೆ. ಆದರೆ, ಪೌರಕಾರ್ಮಿಕರ ಪರವಾಗಿ ಹೋರಾಟ ನಡೆಸಿದ ಶಂಕರಮ್ಮ ಮತ್ತು ರವಣಮ್ಮ ಅವರು ದುರದೃಷ್ಟವಶಾತ್ ತಾವು ಖಾಯಂ ನೌಕರರಾಗುವ ಮುನ್ನವೇ ನಿವೃತ್ತರಾಗುತ್ತಾರೆ.
ಸಂಕಷ್ಟದಲ್ಲಿರುವ ರಾವಣಮ್ಮ
ಬೆಂಗಳೂರು ನಗರದಲ್ಲಿಯೇ ಹುಟ್ಟಿದ ರಾವಣಮ್ಮ 1995ರಲ್ಲಿ ಬಿಬಿಎಂಪಿಯ ವಾರ್ಡ್ ನಂ.151ರಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಪೌರಕಾರ್ಮಿಕ ವೃತ್ತಿಯನ್ನು ನಿಕೃಷ್ಟ ವೃತ್ತಿಯೆಂದು ಹೀಗಳೆಯುವ ಜನರ ನಡುವೆ ರಾವಣಮ್ಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ನಿಂದನೆ, ಸವಾಲುಗಳನ್ನು ಎದುರಿಸಿದ್ದಾರೆ.
ಮಾದಿಗ ಸಮುದಾಯಕ್ಕೆ ಸೇರಿದ್ದಾರೆನ್ನುವ ಕಾರಣಕ್ಕೆ ಜಾತಿ, ಲಿಂಗ ಮತ್ತು ವರ್ಗ ತಾರತಮ್ಯ ಎದುರಿಸಬೇಕಾದ ಅನಿವಾರ್ಯತೆಗೆ ಈ ಸಮಾಜ ಇವರನ್ನೂ ದೂಡಿದೆ. ಎಲ್ಲ ಸವಾಲುಗಳನ್ನು ಎದುರಿಸಿ ‘ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆ’ಯ ಮೂಲಕ ಪೌರಕಾರ್ಮಿಕರ ಸಮುದಾಯಕ್ಕೆ ಆಗುತ್ತಿದ್ದಂತಹ ಅನ್ಯಾಯ, ದೌರ್ಜನ್ಯ ವಿರುದ್ಧ ಗಟ್ಟಿ ಧ್ವನಿಯಾಗಿ ನಿಲ್ಲುತ್ತಾರೆ.
2020ರಲ್ಲಿ ಪೌರಕಾರ್ಮಿಕ ವೃತ್ತಿಯಿಂದ ನಿವೃತ್ತಗೊಂಡ ನಂತರ ರಾವಣಮ್ಮ ಕುಟುಂಬ ನಿಭಾಯಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಷ್ಟೋ ದಿನಗಳ ನಂತರ ಬಿಬಿಎಂಪಿ ಇವರಿಗೆ ಕಳೆದ ವರ್ಷ ಪಿಎಫ್ ಮೊತ್ತವನ್ನು ಒದಗಿಸಿದ್ದಾರೆ.
ತಿಂಗಳಿಗೊಮ್ಮೆ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ನನ್ನ ಪಿಎಫ್ ಒದಗಿಸಿ ಕೊಡಿ ಎಂದು ಕೇಳುತ್ತಿದ್ದರೂ, 4ವರ್ಷಗಳು ಕಳೆದರೂ ಇನ್ನೂ ದೊರಕಿಲ್ಲ. ಬದುಕು ಕಟ್ಟಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದ ನಾನು, ನಿವೃತ್ತಿ ಹೊಂದಿದ ನಂತರ ನಗರದಲ್ಲಿ ಜೀವನ ನಡೆಸಲು ಆಗದೆ ವಾಪಸ್ ಹೋಗಿದ್ದೇನೆ. ಅಲ್ಲಿ ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಜೀವನ ನಡೆಸುವುದೇ ಕಷ್ಟವಾಗಿದೆ.
-ಶಂಕರಮ್ಮ, ಪ್ರಶಸ್ತಿ ಪುರಸ್ಕೃತೆ