ಇವಿಎಂಗಳಿಗೆ ತಾಂತ್ರಿಕ ಮಾನ್ಯತೆ ನೀಡುವ ಸಮಿತಿಯ ಬಗ್ಗೆಯೇ ಕಾಡುತ್ತಿರುವ ಹಲವು ಪ್ರಶ್ನೆಗಳು
ಇವಿಎಂಗಳ ಕುರಿತ ಅನುಮಾನಗಳು, ಅವುಗಳನ್ನು ಇಟ್ಟುಕೊಂಡು ಬಿಜೆಪಿ ಆಡಬಹುದಾದ ಆಟಗಳ ಬಗೆಗಿನ ಆತಂಕಗಳು ತೀವ್ರವಾಗಿರುವಾಗಲೇ ಮತ್ತೂ ಒಂದು ದೊಡ್ಡ ಸಮಸ್ಯೆ ಎದುರಾಗಿದೆ. ಇವಿಎಂಗಳಿಗೆ ತಾಂತ್ರಿಕ ಮಾನ್ಯತೆ ನೀಡುವ ಸಮಿತಿಯ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿವೆ. ಆ ಸಮಿತಿಯೊಳಗೇ ವೈರುಧ್ಯಗಳು, ಗೊಂದಲಗಳಿವೆ ಎಂಬ ವಿಚಾರ ಬಯಲಾಗಿದ್ದು, thenewsminute.comನಲ್ಲಿ ನೀಲ್ ಮಾಧವ್ ಮತ್ತು ಪಾರ್ಥ್ ಎಂ.ಎನ್. ಬರೆದಿರುವ ತನಿಖಾ ವರದಿಯಲ್ಲಿರುವ ಮುಖ್ಯ ವಿವರಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ.
ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ಬಗ್ಗೆ ಹೇಳುವ ಮೊದಲು ಅದರ ಭಾಗವಾಗಿರುವ ಒಬ್ಬ ಪ್ರಮುಖ ವ್ಯಕ್ತಿಯ ಬಗ್ಗೆ ಸ್ವಲ್ಪ ಗಮನಿಸಬೇಕಿದೆ.
ಅವರ ಹೆಸರು ಪ್ರೊ.ರಜತ್ ಮೂನಾ.
ಐಐಟಿ ಕಾನ್ಪುರ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪದವೀಧರರು.
ಹಲವಾರು ಐಐಟಿಗಳಲ್ಲಿ ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC)ನಂತಹ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರು ವವರು.
ಕಳೆದೊಂದು ವರ್ಷದಲ್ಲಿಯೇ ವಿವಿಧ ಸಂಸ್ಥೆಗಳಲ್ಲಿ ಮೂರು ಪ್ರಭಾವಿ ನಿರ್ದೇಶಕ ಸ್ಥಾನಗಳಿಗೆ ನೇಮಕಗೊಂಡಿದ್ದಾರೆ, ಅವುಗಳಲ್ಲಿ ಎರಡು ಸರಕಾರದ ಒಡೆತನ ಅಥವಾ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳಾಗಿವೆ.
ದೇಶದ ಇವಿಎಂಗಳ, ಅದರಲ್ಲೂ ವಿವಿಪ್ಯಾಟ್‌ನ ಪ್ರಮುಖ ಆರ್ಕಿಟೆಕ್ಟ್‌ಗಳಲ್ಲಿ ಮೂನಾ ಕೂಡ ಇದ್ದಾರೆ.
ಚುನಾವಣಾ ಆಯೋಗದ ಪರವಾಗಿ ಇವಿಎಂ ವ್ಯವಸ್ಥೆಗೆ ಮಾನ್ಯತೆ ನೀಡಲು ನೇಮಕಗೊಂಡ ತಾಂತ್ರಿಕ ತಜ್ಞರ ಸಮಿತಿಯ ನಾಲ್ವರು ತಜ್ಞರಲ್ಲಿ ಮೂನಾ ಒಬ್ಬರು. ಕಳೆದ ಹಲವು ವರ್ಷಗಳಿಂದ ಅವರು ದೇಶದಲ್ಲಿನ ಇವಿಎಂ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡೇ ಬಂದಿದ್ದಾರೆ. ಈಗ ಈ ತಾಂತ್ರಿಕ ತಜ್ಞರ ಸಮಿತಿಯ ಒಟ್ಟು ಕಾರ್ಯನಿರ್ವಹಣೆ ಮತ್ತದರ ತೀರ್ಮಾನಗಳ ವಿಚಾರವಾಗಿಯೇ ಹಲವು ಪ್ರಶ್ನೆಗಳು ಎದ್ದಿವೆ.
ಈ ಸಮಿತಿ ಸ್ಥಾಪನೆಯಾದದ್ದು 1990ರಲ್ಲಿ. ಮತ್ತು ಚುನಾವಣಾ ಆಯೋಗದ ಪರವಾಗಿ ಇವಿಎಂ ವ್ಯವಸ್ಥೆಯ ಸಮಗ್ರತೆ ಖಾತರಿ ಪಡಿಸಿಕೊಳ್ಳುವುದಕ್ಕೆ ಅದನ್ನು ರೂಪಿಸಲಾಯಿತು. ಇವಿಎಂ ಸುರಕ್ಷಿತ ಎಂದು ಪ್ರಮಾಣೀಕರಿಸುವುದು, ಟ್ಯಾಂಪರಿಂಗ್ ಕುರಿತ ಅನುಮಾನಗಳನ್ನು ಪರಿಹರಿಸುವುದು ಮತ್ತು ಅವುಗಳಲ್ಲಿ ಸುಧಾರಣೆಗೆ ಯತ್ನಿಸುವುದು ಈ ಸಮಿತಿಯ ಕೆಲಸ.
ಇವಿಎಂಗಳಲ್ಲಿ ನಾಲ್ಕು ಯೂನಿಟ್‌ಗಳಿರುತ್ತವೆ.
ಮೊದಲನೆಯದು ಮತ ಹಾಕಲು ಬಟನ್ ಒತ್ತುವ ಬ್ಯಾಲೆಟ್ ಯೂನಿಟ್. ಎರಡನೆಯದು, ತಾನು ಹಾಕಿರುವ ಮತ ಸರಿಯಾಗಿದೆ ಎಂದು ಮತದಾರ ತಿಳಿಯಲು ಕೆಲವೇ ಸೆಕೆಂಡುಗಳವರೆಗೆ ಸ್ಲಿಪ್ ಅನ್ನು ತೋರಿಸುವ ವಿವಿಪ್ಯಾಟ್. ಮೂರನೆಯದು, ಮತವನ್ನು ದಾಖಲಿಸುವ ಕಂಟ್ರೋಲ್ ಯೂನಿಟ್ ಹಾಗೂ ನಾಲ್ಕನೆಯದು, ಲ್ಯಾಪ್‌ಟಾಪ್‌ನಿಂದ ನಿರ್ದಿಷ್ಟ ಕ್ಷೇತ್ರದ ಚುನಾವಣಾ ಚಿಹ್ನೆಗಳು ಮತ್ತು ಅಭ್ಯರ್ಥಿ ಪಟ್ಟಿಗಳನ್ನು ಕ್ಷೇತ್ರದಲ್ಲಿ ವಿವಿಪ್ಯಾಟ್‌ಗೆ ವರ್ಗಾಯಿಸಲು ಬಳಸಲಾಗುವ ಸಿಂಬಲ್ ಲೋಡಿಂಗ್ ಯುನಿಟ್ (ಎಸ್‌ಎಲ್‌ಯು).
ಇವಿಎಂನ ಕಾರ್ಯನಿರ್ವಹಣೆಯನ್ನು ನಿರ್ದೇಶಿಸುವ ಸೋರ್ಸ್ ಕೋಡ್‌ಗಳನ್ನು ನಮ್ಮಲ್ಲಿ ಸರಕಾರದ್ದೇ ಆದ ಪರಿಣಿತರು ಆಡಿಟ್ ಮಾಡುವ ವ್ಯವಸ್ಥೆಯಿಲ್ಲ. ಆ ಕೆಲಸವನ್ನು ಈ ತಾಂತ್ರಿಕ ತಜ್ಞರ ಸಮಿತಿಯೇ ಮಾಡುವುದರಿಂದ, ಇದಕ್ಕೆ ಬಹಳ ಮಹತ್ವವಿದೆ.
ಚುನಾವಣೆಗಳು ನ್ಯಾಯಸಮ್ಮತವಾಗಿ, ವಿಶ್ವಾಸಾರ್ಹ ಎನ್ನುವಂತೆ ನಡೆಯುತ್ತದೆಯೇ ಎನ್ನುವುದು ಈ ಸಮಿತಿಯ ಅಭಿಪ್ರಾಯವನ್ನೇ ಅವಲಂಬಿಸಿದೆ.
ಈಗ ಇರುವ ತಾಂತ್ರಿಕ ತಜ್ಞರ ಸಮಿತಿ ಮನಮೋಹನ್ ಸಿಂಗ್ ಅವಧಿಯಲ್ಲಿ 2010ರ ನವೆಂಬರ್‌ನಲ್ಲಿ ರಚನೆಯಾದದ್ದು.
ಈಗಿನ ನಾಲ್ವರು ತಜ್ಞರೆಂದರೆ, ಐಐಟಿ ಕಾನ್ಪುರದ ರಜತ್ ಮೂನಾ, ಬಾಂಬೆ ಐಐಟಿಯ ದಿನೇಶ್ ಕೆ. ಶರ್ಮಾ, ದಿಲ್ಲಿ ಐಐಟಿಯ ಡಿ.ಟಿ. ಶಹಾನಿ ಮತ್ತು ಎ.ಕೆ. ಅಗರ್ವಾಲ್.
ವಿವಿಪ್ಯಾಟ್‌ಗಳನ್ನು ಮೊದಲು ಪ್ರಾಯೋಗಿಕವಾಗಿ ಬಳಸಿದ್ದು 2013ರ ಉಪಚುನಾವಣೆಯಲ್ಲಿ. ನಂತರ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗಶಃ ಅದನ್ನು ಬಳಕೆಗೆ ತರಲಾಯಿತು.
2013ರ ಕೊನೆಯಲ್ಲಿ ಸುಪ್ರೀಂ ಕೋರ್ಟ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಪೇಪರ್ ಟ್ರಯಲ್ ಅಗತ್ಯ ಎಂದು ತೀರ್ಪು ನೀಡಿತು.
ದೇಶದಲ್ಲಿ ಇವಿಎಂಗಳನ್ನು ತಯಾರಿಸುವ ಎರಡು ಸರಕಾರಿ ನಿರ್ವಹಣೆಯ ಕಂಪೆನಿಗಳಲ್ಲಿ ಒಂದಾದ ರಕ್ಷಣಾ ಸಚಿವಾಲಯದ ಸಾರ್ವಜನಿಕ ವಲಯದ ಘಟಕ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದು 2018ರಲ್ಲಿ. ಮತವನ್ನು ಮುದ್ರಿಸುವ ವಿವಿಪ್ಯಾಟ್ ಮೇಲಿನ ಬೌದ್ಧಿಕ ಮಾಲಕತ್ವಕ್ಕಾಗಿ ಬಿಇಎಲ್ ಕೋರಿತ್ತು.
ಆಗ ಬಿಇಎಲ್ ತನ್ನ ಅರ್ಜಿಯಲ್ಲಿ ವಿವಿಪ್ಯಾಟ್‌ನ ಸಂಶೋಧಕರೆಂದು ಪಟ್ಟಿ ಮಾಡಿದ್ದ 12 ಪರಿಣಿತರಲ್ಲಿ ಈ ನಾಲ್ವರು ತಜ್ಞರಾದ ಮೂನಾ, ಶರ್ಮಾ, ಶಹಾನಿ ಮತ್ತು ಅಗರ್ವಾಲಾ ಕೂಡ ಇದ್ದರು.
ಅಂದರೆ ವಿವಿ ಪ್ಯಾಟ್‌ಗಳ ವಿನ್ಯಾಸಕಾರರು ಹಾಗೂ ಅದು ಸರಿಯಿದೆ ಎಂದು ಪ್ರಮಾಣೀಕರಿಸುವವರು ಇಬ್ಬರೂ ಅವರೇ! ಇಲ್ಲಿನ ತಮಾಷೆಯೇನೆಂದರೆ, ಇವಿಎಂ ವ್ಯವಸ್ಥೆಯನ್ನು ಪ್ರಮಾಣೀಕರಿಸುವವರು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಂಡಂತಾಗುತ್ತಿದೆ.
ಇವಿಎಂಗಳನ್ನು ಚುನಾವಣಾ ಆಯೋಗ ತನ್ನದೇ ಪರಿಣಿತರ ಮೂಲಕ ಆಡಿಟ್ ಮಾಡಿಸಬೇಕೆಂಬುದು ನಾಗರಿಕ ಸಮಾಜದ ಬೇಡಿಕೆ. ಆದರೆ ಅದನ್ನು ನಿರಾಕರಿಸುವ ಚುನಾವಣಾ ಆಯೋಗ, ಪ್ರಮಾಣೀಕರಿಸಲು ವಿವಿಪ್ಯಾಟ್ ಪೇಟೆಂಟ್ ಹೊಂದಿರುವವರನ್ನೇ ಅವಲಂಬಿಸಿರುವುದು ಕಳವಳದ ವಿಷಯ ಎಂಬುದು ನಿವೃತ್ತ ಐಎಎಸ್ ಅಧಿಕಾರಿ ಇ.ಎ.ಎಸ್. ಶರ್ಮಾ ಅಭಿಪ್ರಾಯ.
ಇದು ಸ್ಪಷ್ಟವಾಗಿ ಹಿತಾಸಕ್ತಿ ಸಂಘರ್ಷದ ವಿಚಾರವಾಗಿದ್ದು, ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ ಅವರು.
ಇವಿಎಂಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥಾಪಕ ಜಗದೀಪ್ ಚೋಕರ್ ಪ್ರಕಾರ, ತಾಂತ್ರಿಕ ಅರ್ಹತೆ ಇರುವ ಸ್ವತಂತ್ರ ಮೌಲ್ಯಮಾಪಕರು ಬೇಕಾದಷ್ಟಿದ್ದಾರೆ. ಆದರೆ ಇಲ್ಲಿ ಮಾತ್ರ ವಿನ್ಯಾಸಕಾರರೇ ಪ್ರಮಾಣಪತ್ರ ಕೊಟ್ಟುಕೊಳ್ಳುವುದು ನಡೆಯುತ್ತಿದೆ.
ತಾಂತ್ರಿಕ ಸಮಿತಿಯಲ್ಲಿನ ತಜ್ಞರಲ್ಲೊಬ್ಬರಾದ ದಿನೇಶ್ ಶರ್ಮಾ ಅವರನ್ನು ಪ್ರತಿಕ್ರಿಯೆಗೆ ಕೇಳಿದರೆ, ತಾವು ಮಾಧ್ಯಮಗಳೊಂದಿಗೆ ಮಾತನಾಡಲು ಬರುವುದಿಲ್ಲ ಎನ್ನುವ ಅವರು, ಆಯೋಗವನ್ನೇ ಕೇಳಬೇಕು ಎನ್ನುತ್ತಾರೆ.
ಹಿತಾಸಕ್ತಿ ಸಂಘರ್ಷದ ಬಗ್ಗೆ ಕೇಳಿದಾಗ, ಅವರು ಕೊಟ್ಟ ಉತ್ತರ ಬಿಇಎಲ್ ತನ್ನ ಪೇಟೆಂಟ್ ದಾಖಲೆಗಳಲ್ಲಿ ಹೇಳಿಕೊಂಡಿರುವುದಕ್ಕೆ ತದ್ವಿರುದ್ಧ. ಬಿಇಎಲ್ ಕೊಟ್ಟಿರುವ ವಿವಿಪ್ಯಾಟ್ ಸಂಶೋಧಕರ ಪಟ್ಟಿಯಲ್ಲಿ ಶರ್ಮಾ ಕೂಡ ಇದ್ದಾರೆ.
ಆದರೆ, ತಾವು ವಿವಿಪ್ಯಾಟ್ ಸಂಶೋಧಿಸಿಲ್ಲ. ಅದರಲ್ಲಿ ಸುಧಾರಣೆಗೆ ಅಗತ್ಯವಾದ ಸಲಹೆಗಳನ್ನು ಮಾತ್ರವೇ ಚುನಾವಣಾ ಆಯೋಗ ಕೇಳಿದಾಗ ನೀಡುತ್ತೇವೆ ಎಂಬುದು ಅವರ ಉತ್ತರ.
ಆದರೆ ಪ್ರೊ.ರಜತ್ ಮೂನಾ ಹೇಳುವುದೇ ಬೇರೆ. ತಮ್ಮ ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ಅವರು, ಇವಿಎಂಗಳ ತಾಂತ್ರಿಕ ಸಮಿತಿಯ ಸದಸ್ಯನೆಂದು ಉಲ್ಲೇಖಿಸಿದ್ದಾರೆ. ತಾವು ಎಂ3 ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಇಲ್ಲಿ ಎಂ3 ಎಂದರೆ ಪ್ರಸಕ್ತ ಬಳಕೆಯಲ್ಲಿರುವ ಇವಿಎಂಗಳ ಆವೃತ್ತಿ.
2017ರಲ್ಲಿ ಪ್ರೊ.ರಜತ್ ಮೂನಾ ಅ-ಆಂಅನಲ್ಲಿದ್ದಾಗ, ಆ ಸಂಸ್ಥೆ ಇವಿಎಂಗಳಿಗಾಗಿ ಮೂಲ ಮಾದರಿಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿತ್ತು ಎಂಬುದನ್ನೂ ಇಲ್ಲಿ ಗಮನಿಸಬೇಕು.
ಪ್ರತೀ ಇವಿಎಂಗೂ ವಿವಿಪ್ಯಾಟ್ ಜೋಡಿಸಿ ನಡೆಸಿದ ಮೊದಲ ಚುನಾವಣೆ 2019ರ ಸಾರ್ವತ್ರಿಕ ಚುನಾವಣೆ.
ಆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೂ ಆಯೋಗ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತ ಆರೋಪಕ್ಕೆ ತುತ್ತಾಗಿತ್ತು.
ಮೋದಿ ಎರಡನೇ ಅವಧಿಗೆ ಅಧಿಕಾರ ಹಿಡಿದರು. ಬಿಇಎಲ್‌ಗೆ 2022ರ ಮೇ 24ರಂದು ಪೇಟೆಂಟ್ ನೀಡಲಾಯಿತು.
ಅದೇ ವರ್ಷದ ಸೆಪ್ಟಂಬರ್ ಹೊತ್ತಿಗೆ ಗುಜರಾತ್ ಅಸೆಂಬ್ಲಿ ಚುನಾವಣೆಗೆ ತಿಂಗಳುಗಳ ಮೊದಲು ಐಐಟಿ ಭಿಲಾಯಿ ನಿರ್ದೇಶಕರಾಗಿದ್ದ ಪ್ರೊ.ರಜತ್ ಮೂನಾ ಅವರನ್ನು ಐಐಟಿ ಗಾಂಧಿನಗರದ ನಿರ್ದೇಶಕರನ್ನಾಗಿ ನೇಮಿಸಲಾಯಿತು.
2023ರ ಮಾರ್ಚ್‌ನಲ್ಲಿ ಗಿಫ್ಟ್ ಸಿಟಿ ಎಂದೇ ಪರಿಚಿತವಾಗಿರುವ ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಕಂಪೆನಿ ಲಿಮಿಟೆಡ್‌ನಲ್ಲಿ ಕಡಲಾಚೆಯ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಬಯಸುವ ವಿದೇಶಿ ವಿಶ್ವವಿದ್ಯಾಲಯಗಳ ಅರ್ಜಿಗಳ ಮೌಲ್ಯಮಾಪನ ಮಾಡುವ ಮೂವರು ತಜ್ಞರ ಸಮಿತಿಯಲ್ಲಿ ಪ್ರೊ.ರಜತ್ ಮೂನಾ ಅವರನ್ನು ಸೇರಿಸಲಾಯಿತು.
ಜುಲೈ ವೇಳೆಗೆ ಉದ್ಯಮಿ ಗೌತಮ್ ಅದಾನಿ, ರಾಜಕಾರಣಿ ಮತ್ತು ಕೈಗಾರಿಕೋದ್ಯಮಿ ಪರಿಮಳ್ ನಾಥ್ವಾನಿ, ಬ್ಯಾಂಕರ್ ಉದಯ್ ಕೋಟಕ್ ಮತ್ತು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಭರತ್ ಭಾಸ್ಕರ್ ಸೇರಿದಂತೆ ಹಲವರು ಇದ್ದ ‘ವೈಬ್ರಂಟ್ ಗುಜರಾತ್’ ಎಂಬ ಉದ್ಯಮ ಈವೆಂಟ್‌ನ ಸಲಹಾ ಸಮಿತಿಗೆ ಪ್ರೊ. ರಜತ್ ಮೂನಾ ಅವರನ್ನು ನೇಮಿಸಲಾಯಿತು.
ಅದೇ ತಿಂಗಳು ಮೂನಾ ಅವರನ್ನು ಗಿಫ್ಟ್ ಸಿಟಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಯಿತು. ವರ್ಷದ ಕೊನೆಯಲ್ಲಿ ಅವರೇ ನಿರ್ದೇಶಕರಾದರು.
ಸುಮಾರು ಹದಿನೈದು ದಿನಗಳ ನಂತರ, 2024ರ ಜನವರಿ 9ರಂದು ಪ್ರೊ.ರಜತ್ ಮೂನಾ ಅವರನ್ನು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮುಂಬೈ ಮೂಲದ ಅಂಗಸಂಸ್ಥೆಯಾದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್(ಎನ್‌ಎಸ್‌ಡಿಎಲ್)ಗೆ ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕರಾಗಿ ಸೆಬಿ ನೇಮಿಸಿತು. ವಿಶ್ವದ ದೊಡ್ಡ ಡಿಪಾಸಿಟರಿಗಳಲ್ಲಿ ಒಂದಾದ ಎನ್‌ಎಸ್‌ಡಿಎಲ್ ಹೂಡಿಕೆದಾರರ ಷೇರುಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸುತ್ತದೆ.
ಎನ್‌ಎಸ್‌ಡಿಎಲ್‌ನಲ್ಲಿ ನೇಮಕಗೊಂಡ ಒಂದು ವಾರದೊಳಗೆ ಪ್ರೊ. ರಜತ್ ಮೂನಾ ಅವರು ಗುಜರಾತ್ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಗೂ ನೇಮಕಗೊಂಡರು. ಅದು ಗುಜರಾತ್‌ನಲ್ಲಿ ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಪ್ರಸರಣದ ಜವಾಬ್ದಾರಿ ಹೊಂದಿರುವ ರಾಜ್ಯ ಸರಕಾರಿ ಸ್ವಾಮ್ಯದ ಹಿಡುವಳಿ ಕಂಪೆನಿ.
ಈ ನೇಮಕಾತಿಗಳ ಹಿನ್ನೆಲೆಯಲ್ಲಿ ಮೂನಾ ಅವರಿಗೆ ಸಿಗುತ್ತಿರುವ ಸಂಬಳ ಮತ್ತಿತರ ಸವಲತ್ತುಗಳ ಕುರಿತು ಯಾವುದೇ ಅಧಿಕೃತ ದಾಖಲಾತಿಗಳಿಲ್ಲ. ಇದಾವುದಕ್ಕೂ ಪ್ರತಿಕ್ರಿಯಿಸಲು ನಿರಾಕರಿಸಿರುವ ಪ್ರೊ.ರಜತ್ ಮೂನಾ, ಚುನಾವಣೆ ಹೊತ್ತಿನ ನೆಪ ಮುಂದೆ ಮಾಡಿದರೂ, ಅದಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಸೂಚಿಸಿರುವುದನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಜಗದೀಪ್ ಚೋಕರ್ ಅವರ ಪ್ರಕಾರ, ಪ್ರೊ.ರಜತ್ ಮೂನಾ ನೇಮಕಾತಿಗಳು ಕಾನೂನಿಗೆ ವಿರುದ್ಧವಲ್ಲವಾದರೂ, ಹೆಚ್ಚು ಸೂಕ್ಷ್ಮ ವಿಚಾರವೂ ಹೌದು.
ತಂತ್ರಜ್ಞಾನದಂತಹ ನಿರ್ಣಾಯಕ ವಿಷಯಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾರ್ಗದರ್ಶನ ನೀಡುವ ತಜ್ಞರೊಬ್ಬರು ಸರಕಾರದ ಹುದ್ದೆಗಳಲ್ಲೂ ಇರುವುದು ಚುನಾವಣಾ ಆಯೋಗದ ಸ್ವಾತಂತ್ರ್ಯದ ವಿಚಾರವಾಗಿ ಅನುಮಾನ ಮೂಡಿಸುತ್ತದೆ ಎನ್ನುತ್ತಾರೆ ಚೋಕರ್.
ಪ್ರೊ.ರಜತ್ ಮೂನಾ ಅವರು ಇತರ ಸರಕಾರಿ ಹುದ್ದೆಗಳಲ್ಲಿರುವುದು ತಾಂತ್ರಿಕ ಸಮಿತಿಯಲ್ಲಿನ ಅವರ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಭಾವಿಸುವುದಿಲ್ಲ.
ಆದರೆ ನಿವೃತ್ತ ಐಎಎಸ್ ಅಧಿಕಾರಿ ಇ.ಎ.ಎಸ್. ಶರ್ಮಾ ಅವರಿಗೆ ಇದು ಹಿತಾಸಕ್ತಿಯ ಸಂಘರ್ಷದ ಪ್ರಶ್ನೆಯೆನ್ನಿಸಿದೆ. ಬಿಜೆಪಿ ಜೊತೆ ಸಂಬಂಧ ಇರುವವರೆಂಬ ಆರೋಪವಿರುವ ನಾಲ್ವರು ಬಿಇಎಲ್ ನಿರ್ದೇಶಕರನ್ನು ತೆಗೆದುಹಾಕುವಂತೆಯೂ ಅವರು ಆಯೋಗವನ್ನು ಒತ್ತಾಯಿಸಿದ್ದಾರೆ.
ಪ್ರೊ. ರಜತ್ ಮೂನಾ ಅವರು ಇತರ ಸರಕಾರಿ ಹುದ್ದೆಗಳಲ್ಲಿಯೂ ಇರುವುದರಿಂದ ಇವಿಎಂಗಳ ವಿಚಾರದಲ್ಲಿ ಅವರು ತಪ್ಪಾಗಿ ವರ್ತಿಸುತ್ತಾರೆ ಎನ್ನಲಾಗದಿದ್ದರೂ, ಆ ಕುರಿತ ವಸ್ತುನಿಷ್ಠತೆಯಲ್ಲಿ ಅವರು ರಾಜಿಯಾಗುವ ಸಾಧ್ಯತೆ ಬರಬಹುದು ಎಂಬುದು ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾ.ಅಂಜನಾ ಪ್ರಕಾಶ್ ಅಭಿಪ್ರಾಯ.
ಟ್ವಿಟರ್‌ನ ತಮ್ಮ ವೈಯಕ್ತಿಕ ಖಾತೆ ಮೂಲಕ ಪ್ರೊ.ರಜತ್ ಮೂನಾ ಅವರು ಪ್ರಧಾನಿ ಕುರಿತಾಗಿರುವ ಬಿಜೆಪಿ ನಾಯಕರ ಪೋಸ್ಟ್‌ಗಳನ್ನು ಮತ್ತು ಪ್ರಧಾನಿ ಕಚೇರಿಯ ಪೋಸ್ಟ್‌ಗಳನ್ನು ಆಗಾಗ ಲೈಕ್ ಮಾಡಿರುವ ಬಗ್ಗೆಯೂ ಬರಹದಲ್ಲಿ ಉಲ್ಲೇಖಿಸಲಾಗಿದೆ.
ಕೃಪೆ: thenewsminute.com