ಸುಳ್ಳುಗಳ ಸರದಾರರ ಬಂಡವಾಳ ಬಯಲು ಮಾಡುವ ಫ್ಯಾಕ್ಟ್ ಚೆಕ್

ಶ್ವೇತಭವನದಲ್ಲಿದ್ದಾಗಲೂ ಸುಳ್ಳುಗಳನ್ನು ಹೇಳಿದ್ದ, ಈಗ ಮತ್ತೊಮ್ಮೆ ಅಲ್ಲಿಗೆ ಪ್ರವೇಶಿಸುವ ಪ್ರಯತ್ನದಲ್ಲಿ ಸುಳ್ಳುಗಳನ್ನು ಹೇಳುತ್ತಿರುವ ಟ್ರಂಪ್ ಕೆಲವು ರಾಜ್ಯಗಳಲ್ಲಿನ ಜನಾಭಿಪ್ರಾಯದ ಪ್ರಕಾರ, ಹ್ಯಾರಿಸ್‌ಗಿಂತಲೂ ಮುಂದಿದ್ದಾರೆ. ಸುಳ್ಳುಗಳ ಮೇಲೆಯೇ ದರ್ಬಾರು ನಡೆಸಬಹುದು ಎಂಬುದಕ್ಕೆ ಇದು ಸಾಕ್ಷಿ. ಯಾಕೆಂದರೆ ಅಂಥವರಿಗೆ ತಮ್ಮ ಹಸಿ ಹಸಿ ಸುಳ್ಳುಗಳು ಬಯಲಾದ ಮೇಲೆಯೂ ಏನೇನೂ ಅನ್ನಿಸದ ಭಂಡತನವಿರುತ್ತದೆ. ಭಾರತದಲ್ಲೂ ನಾವು ಅದನ್ನು ಬಹಳ ಢಾಳಾಗಿ ನೋಡುತ್ತಿದ್ದೇವೆ. ಇಲ್ಲಿನ ಅತ್ಯಂತ ಜನಪ್ರಿಯ ನಾಯಕರೇ ಸರಣಿ ಸುಳ್ಳುಗಳನ್ನು ಹೇಳುತ್ತಾರೆ. ಅದನ್ನು ಪರಮ ಸತ್ಯ ಎಂಬಂತೆ ಮಡಿಲ ಮೀಡಿಯಾಗಳು ಪ್ರಸಾರ ಮಾಡುತ್ತವೆ.

Update: 2024-09-13 09:05 GMT

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಚರ್ಚೆಯಲ್ಲಿ ಗೆದ್ದವರು ಯಾರು ಮತ್ತು ಯಾರು ಅತಿ ಹೆಚ್ಚು ಸುಳ್ಳುಗಳನ್ನು ಹೇಳಿದ್ದಾರೆ ಎಂಬ ವಿಚಾರ ಅಮೆರಿಕದ ಮಾಧ್ಯಮಗಳಲ್ಲೀಗ ಬಯಲಾಗುತ್ತಿದೆ.

ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಮಾತುಗಳ ಕುರಿತ ಫ್ಯಾಕ್ಟ್ ಚೆಕಿಂಗ್ ಶುರುವಾಗಿದೆ.

ಇಬ್ಬರಲ್ಲಿ ಯಾರು ಅತಿ ದೊಡ್ಡ ಸುಳ್ಳುಗಾರರು?

ಇದು ಈಗಿನ ಪ್ರಶ್ನೆ.

ಕೇವಲ ಸುಳ್ಳುಗಳನ್ನಲ್ಲ, ದಾರಿ ತಪ್ಪಿಸುವ ಹೇಳಿಕೆಗಳನ್ನೂ ಕೊಟ್ಟಿದ್ದಾರೆ. ಸುಳ್ಳುಗಳನ್ನು ನಿರಾಯಾಸವಾಗಿ ಹೇಳಿ ನಿರಾಳವಾಗಿಯೇ ಇರಬಲ್ಲ ನಾಯಕರ ಮುಖವಾಡ ಬಯಲು ಮಾಡಲು ಫ್ಯಾಕ್ಟ್ ಚೆಕಿಂಗ್ ನೆರವಿಗೆ ಬರುತ್ತದೆ.

ಫ್ಯಾಕ್ಟ್ ಚೆಕಿಂಗ್ ಇತಿಹಾಸವೇನು?

ಅದು ಯಾವಾಗಿಂದ ಶುರುವಾಯಿತು ಎಂಬುದು ಬಾಸ್ಟನ್ ಯೂನಿವರ್ಸಿಟಿಯ ವೆಬ್‌ಸೈಟ್‌ನಲ್ಲಿ ದಾಖಲಾಗಿದೆ.

ಅದರಲ್ಲಿ ಜಗತ್ತಿನಾದ್ಯಂತದ ಪ್ರಮುಖ ಫ್ಯಾಕ್ಟ್ ಚೆಕರ್‌ಗಳ ಹೆಸರು ಉಲ್ಲೇಖಿಸಲಾಗಿದೆ.

ಆ ಸತ್ಯಶೋಧಕರ ಪರಿಚಯ ಕೂಡ ಲಭ್ಯವಿದೆ.

ಅವರಲ್ಲಿ ಒಬ್ಬರು ಸಿಎನ್‌ಎನ್‌ನ ಡ್ಯಾನಿಯಲ್ ಡೇಲ್,

ಅವರು ಸೆಪ್ಟಂಬರ್ 10ರ ಚರ್ಚೆಯಲ್ಲಿ ಟ್ರಂಪ್ ಅವರ 30ಕ್ಕೂ ಹೆಚ್ಚು ಸುಳ್ಳುಗಳು ಮತ್ತು ಹ್ಯಾರಿಸ್ ಅವರ ಒಂದು ಸುಳ್ಳು ಅಥವಾ ದಾರಿ ತಪ್ಪಿಸುವ ಹೇಳಿಕೆಯನ್ನು ಪತ್ತೆ ಮಾಡಿದ್ದಾರೆ.

‘ಟೈಮ್’ ಪತ್ರಿಕೆಯ ಒಂದು ಫೋಟೊ ಕೂಡ ಆ ವೆಬ್‌ಸೈಟ್‌ನಲ್ಲಿದೆ. ಅದು 1933ರ ಚಿತ್ರ.

1938ರಲ್ಲಿ ಟೈಮ್ ಮ್ಯಾಗಝಿನ್‌ನಲ್ಲಿನ ಪ್ರಕಟಣೆಯೊಂದು ಅದರ ಫ್ಯಾಕ್ಟ್ ಚೆಕರ್‌ಗಳ ಸಂಖ್ಯೆಯನ್ನು 10ರಿಂದ 22ಕ್ಕೆ ಹೆಚ್ಚಿಸುವುದಾಗಿ ಹೇಳಿತ್ತು.

ನ್ಯಾನ್ಸಿ ಫೋರ್ಡ್ ಎಂಬಾಕೆ ಟೈಮ್‌ನ ಮೊದಲ ಫ್ಯಾಕ್ಟ್ ಚೆಕರ್ ಆಗಿದ್ದರು.

ಮತ್ತು ಅವರು ಯಾವುದೇ ವಿಚಾರವನ್ನು ದೃಢಪಡಿಸಲು ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಯ ಮಾಹಿತಿ ಡೆಸ್ಕ್ ಅನ್ನೇ ಸಂಪರ್ಕಿಸುತ್ತಿದ್ದರು.

ಕಾಲೇಜು ಮುಗಿಸಿದವರೇ ನ್ಯಾನ್ಸಿ ಫ್ಯಾಕ್ಟ್ ಚೆಕರ್ ಕೆಲಸವನ್ನು ಇಷ್ಟಪಟ್ಟು ಆರಿಸಿಕೊಂಡಿದ್ದರು.

ಜರ್ಮನ್‌ನ ‘ಡೆರ್ ಸ್ಪಿಗಲ್’ ಎಂಬ ಪತ್ರಿಕೆ ತನ್ನ ಬಳಿ ಫ್ಯಾಕ್ಟ್ ಚೆಕರ್‌ಗಳ ದೊಡ್ಡ ತಂಡವಿದೆ ಎಂದು ಹೇಳಿಕೊಂಡಿತ್ತು. ಆದರೆ ಅದರ ವರದಿಗಾರನೊಬ್ಬ ಫ್ಯಾಕ್ಟ್ ಚೆಕರ್‌ಗಳು ಪತ್ತೆ ಮಾಡುವುದಕ್ಕೇ ಆಗದಂಥ ಕಟ್ಟುಕಥೆಗಳನ್ನು ವರದಿ ಹೆಸರಲ್ಲಿ ಪ್ರಕಟಿಸುತ್ತಿದ್ದ ಎಂಬುದು ಬಯಲಾಗಿತ್ತು.

2018ರಲ್ಲಿ ಇದರ ಬಗ್ಗೆ ನ್ಯೂಯಾರ್ಕರ್ ವಿಸ್ತಾರವಾಗಿ ಬರೆದಿತ್ತು. 1930ರ ದಶಕದಿಂದ ಶುರುವಾಗಿ ಈಗ 2024ರವೆರೆಗೂ ಅದು ಬಂದಿದೆ. ಈ ದಿನಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಎನ್ನುವುದು ಎಲ್ಲ ದಿಕ್ಕುಗಳಿಂದಲೂ ಬಹಳ ಹೆಚ್ಚಾಗಿಯೇ ಕಿವಿ ಮೇಲೆ ಬೀಳುತ್ತಿದೆ. ಇಷ್ಟಾದರೂ ರಾಜಕೀಯ ನಾಯಕರು ಸುಳ್ಳುಗಳನ್ನು ಹೇಳುವುದು ಮಾತ್ರ ಏನೇನೂ ಕಡಿಮೆಯಾಗಿಲ್ಲ. ಸುಳ್ಳುಗಾರರನ್ನು ಹಿಡಿದುಹಾಕುವುದು ಹೆಚ್ಚಿದ್ದರೂ, ಸುಳ್ಳು ಹೇಳುವವರು ಕಮ್ಮಿಯಾಗಿಲ್ಲ.

ಡ್ಯೂಕ್ ಯೂನಿವರ್ಸಿಟಿಯ ರಿಪೋರ್ಟರ್ಸ್ ಲ್ಯಾಬ್ ವೆಬ್‌ಸೈಟ್ ಜಗತ್ತಿನಾದ್ಯಂತದ 442 ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಮತ್ತು ಸಂಸ್ಥೆಗಳ ಹೆಸರನ್ನು ದಾಖಲಿಸಿದೆ.

ಕ್ಯಾಂಡಿಡ್ ಇಶ್ಯೂ ಲ್ಯಾಬ್ ಎಂಬ ಮತ್ತೊಂದು ಸಂಶೋಧನಾ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ 2012ರಲ್ಲಿ ವಾಶಿಂಗ್ಟನ್ ಪೋಸ್ಟ್‌ನಲ್ಲಿ ಫ್ಯಾಕ್ಟ್‌ಚೆಕ್ ಕಾಲಂ ಬರೆಯುವ ಮೈಖೆಲ್ ಡಾಬ್ಸ್ ಬರಹವೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಆಧುನಿಕ ಫ್ಯಾಕ್ಟ್ ಚೆಕಿಂಗ್ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ವಿಚಾರದೊಂದಿಗೆ ಶುರುವಾಗುತ್ತದೆ.

ಅವರೊಮ್ಮೆ ವಾಹನಗಳಿಗಿಂತ ಮರಗಳಿಂದ ನಾಲ್ಕು ಪಟ್ಟು ಹೆಚ್ಚು ವಾಯು ಮಾಲಿನ್ಯವಾಗುತ್ತದೆ ಎಂದಿದ್ದರು. ಎಂತೆಂಥವರೆಲ್ಲ ಜಗತ್ತಿನಲ್ಲಿ ರಾಷ್ಟ್ರಗಳ ಅಧ್ಯಕ್ಷರಾಗಿ ಹೋಗಿದ್ದಾರೆ ನೋಡಿ.

2004ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಬುಷ್ ಮತ್ತು ಜಾನ್ ಕ್ಯಾರಿ ಮುಖಾಮುಖಿಯಾಗಿದ್ದ ಹೊತ್ತಲ್ಲಿಯೇ ರಾಜಕೀಯ ಬ್ಲಾಗ್‌ಗಳೂ ಶುರುವಾಗತೊಡಗಿದ್ದವು. ಆಗ ಮುಖ್ಯಧಾರೆಯ ಮೀಡಿಯಾಗಳೂ ಫ್ಯಾಕ್ಟ್ ಚೆಕಿಂಗ್ ವಿಚಾರಕ್ಕೆ ಒತ್ತುಕೊಡುವ ಅನಿವಾರ್ಯತೆ ತಲೆದೋರಿತ್ತು. ಇಂಟರ್‌ನೆಟ್ ಬಂದ ಮೇಲಂತೂ ಫ್ಯಾಕ್ಟ್ ಚೆಕಿಂಗ್ ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದೆ. ಮೀಡಿಯಾಗಳಲ್ಲದೆ ಜನಸಾಮಾನ್ಯರೂ ಸತ್ಯ ಪತ್ತೆ ಮಾಡಬಹುದಾಗಿದೆ.

ಫ್ಯಾಕ್ಟ್ ಚೆಕಿಂಗ್ ಎನ್ನುವುದು ಈಗ ಮೀಡಿಯಾ ಎಕೊಸಿಸ್ಟಮ್‌ನ ಭಾಗವೆಂದೇ ಪರಿಗಣಿತವಾಗಿದೆ.

ಚುನಾವಣೆ ಸಮಯದಲ್ಲಿ ಫ್ಯಾಕ್ಟ್ ಚೆಕಿಂಗ್ ಮಹತ್ವ ಬಹಳ ಹೆಚ್ಚಿರುತ್ತದೆ. ವಾಶಿಂಗ್ಟನ್ ಪೋಸ್ಟ್‌ನ ಫ್ಯಾಕ್ಟ್ ಚೆಕಿಂಗ್ ಬ್ಲಾಗ್‌ನ ವ್ಯೆಸ್ ತಿಂಗಳಲ್ಲಿ 10 ಲಕ್ಷ ಇರುತ್ತದೆ. ಜಗತ್ತಿನಾದ್ಯಂತ ಫ್ಯಾಕ್ಟ್ ಚೆಕಿಂಗ್ ಎನ್ನುವುದು ಅಭಿಯಾನದ ರೂಪ ಪಡೆದಿದೆ. ಪ್ಯಾಕ್ಟ್ ಚೆಕರ್ ಮೀಡಿಯಾ ಆ್ಯಕ್ಟಿವಿಸ್ಟ್ ಎಂದು ಪರಿಗಣಿಸಲ್ಪಡುವುದನ್ನೂ ಗಮನಿಸಬಹುದು.

ವಾಶಿಂಗ್ಟನ್ ಪೋಸ್ಟ್ ಒಂದು ಲೈ ಟ್ರ್ಯಾಕರ್ ಶುರು ಮಾಡಿತ್ತು. 2021ರಲ್ಲಿ ಅದನ್ನು ಮುಚ್ಚಿತು. ಅದಕ್ಕೂ ಮೊದಲು ಅದು ಡೊನಾಲ್ಡ್ ಟ್ರಂಪ್ ಬಗ್ಗೆ ಒಂದು ವಿಚಾರವನ್ನು ಬರೆದಿತ್ತು. ಅದರ ಪ್ರಕಾರ, 2020ರ ಚುನಾವಣೆಗೆ ಮುಂಚಿನ ಒಂದೇ ದಿನದಲ್ಲಿ ಟ್ರಂಪ್ 503 ಸುಳ್ಳುಗಳನ್ನು ಅಥವಾ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರು.

ವಾಶಿಂಗ್ಟನ್ ಪೋಸ್ಟ್ ನಿತ್ಯವೂ ಟ್ರಂಪ್ ಸುಳ್ಳುಗಳನ್ನು ಲೆಕ್ಕ ಹಾಕುತ್ತಿತ್ತು. 4 ವರ್ಷಗಳಲ್ಲಿ ಟ್ರಂಪ್ 30,573 ಸುಳ್ಳುಗಳನ್ನು ಅಥವಾ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರೆಂಬುದು ಬಯಲಾಗಿತ್ತು.

ಇನ್ನು ಸೆಪ್ಟಂಬರ್ 10ರ ಚರ್ಚೆಯಲ್ಲಿ ಟ್ರಂಪ್ ಮತ್ತು ಹ್ಯಾರಿಸ್ ಎಷ್ಟು ಸುಳ್ಳುಗಳನ್ನು ಹೇಳಿದರು ಎಂಬ ಚರ್ಚೆ ಅಮೆರಿಕದಲ್ಲಿ ಈಗ ಜೋರಾಗಿದೆ.

ಜೂನ್ ತಿಂಗಳ ಚರ್ಚೆಯಲ್ಲಿ ಟ್ರಂಪ್ ಹಾಲಿ ಅಧ್ಯಕ್ಷ ಬೈಡನ್ ಅವರ ಬೆವರಿಳಿಸಿಬಿಟ್ಟಿದ್ದರು. ಅದರ ಪರಿಣಾಮವಾಗಿಯೇ ಬೈಡನ್ ಚುನಾವಣೆಯಿಂದಲೇ ಹಿಂದೆ ಸರಿಯುವ ಸ್ಥಿತಿ ಬಂತು.

ಅವತ್ತು ಟ್ರಂಪ್ ಎದುರು ಬೈಡನ್ ಜರ್ಜರಿತವಾದದ್ದರ ಬಗ್ಗೆ ಬರೆದಿದ್ದ ಮೀಡಿಯಾಗಳು, ಈಗ ಗರ್ಭಪಾತ, ಆರ್ಥಿಕತೆ, ಪ್ರಜಾಪ್ರಭುತ್ವ ವಿಷಯಗಳ ಚರ್ಚೆಯಲ್ಲಿ ಟ್ರಂಪ್ ಎದುರು ಬೈಡನ್‌ಗಿಂತಲೂ ಶಕ್ತಿಶಾಲಿಯಾಗಿ ಹ್ಯಾರಿಸ್ ಕಾಣಿಸಿಕೊಂಡಿರುವ ಬಗ್ಗೆ ಬರೆದಿವೆ. ಎಬಿಸಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಟ್ರಂಪ್ ಮತ್ತು ಹ್ಯಾರಿಸ್ ಮುಖಾಮುಖಿಯಾದರು.

ಜೂನ್‌ನಲ್ಲಿ ಗೆದ್ದಿದ್ದ ಟ್ರಂಪ್ ಮೊನ್ನೆಯ ಚರ್ಚೆ ಕುರಿತ ಮೀಡಿಯಾ ಹೆಡ್‌ಲೈನ್‌ಗಳಲ್ಲಿ ಹಿನ್ನಡೆ ಕಂಡಿದ್ದಾರೆ. ಕಮಲಾ ಹ್ಯಾರಿಸ್ ಗೆದ್ದು ಬೀಗಿದ್ದಾರೆ.

ಅಚ್ಚರಿಯೆಂದರೆ, ಚರ್ಚೆ ಮುಗಿದ ಬೆನ್ನಲ್ಲೇ ಎಬಿಸಿ ಫ್ಯಾಕ್ಟ್ ಚೆಕ್ ಕೂಡ ತಯಾರಾಗಿಬಿಟ್ಟಿತ್ತು.

ಅಮೆರಿಕದ ಚುನಾವಣೆಯೆಂದರೆ ಜಗತ್ತೇ ಗಮನಿಸುತ್ತದೆ. ಹಾಗೆಯೇ ಅದಕ್ಕೂ ಮೊದಲಿನ ಈ ಚರ್ಚೆಗಳನ್ನೂ ಗಂಭೀರವಾಗಿ ಗಮನಿಸಲಾಗುತ್ತದೆ.

ಒಂದೆಡೆ ಟ್ರಂಪ್ ಮತ್ತು ಹ್ಯಾರಿಸ್ ಚರ್ಚೆ ನಡೆದಿದ್ದರೆ, ಇನ್ನೊಂದೆಡೆ ಒSಓಃಅ, ಅಓಓ, ಃಃಅ ಅಂಥ ಮಾಧ್ಯಮ ಸಂಸ್ಥೆಗಳು ತಮ್ಮದೇ ಆದ ಫ್ಯಾಕ್ಟ್ ಚೆಕಿಂಗ್ ಕೊಡುವುದನ್ನು ಶುರು ಮಾಡಿದ್ದವು. ಯಾರು ಯಾರ ಸುಳ್ಳುಗಳನ್ನು ಮೊದಲು ಬಯಲು ಮಾಡುತ್ತಾರೆ ಎಂಬ ಪೈಪೋಟಿ ಅಲ್ಲಿತ್ತು.

ಅಮೆರಿಕ ಮೀಡಿಯಾಗಳ ಈ ತಯಾರಿಯಿಂದಲೇ, ನಾಯಕರು ಸುಳ್ಳು ಹೇಳುವುದು ಪಕ್ಕಾ ಎಂಬ ಅನುಮಾನ ಮೊದಲೇ ಅವುಗಳಿಗಿರುತ್ತದೆ ಎಂಬುದು ತಿಳಿಯುತ್ತದೆ.ಸತ್ಯವನ್ನು ಜನರ ಮುಂದಿಡಲು ಅವು ಪೈಪೋಟಿಗೆ ಇಳಿಯುತ್ತವೆ.

ಎಬಿಸಿಯ ಮಾಡರೇಟರ್ ಸರಿಯಾಗಿ ಫ್ಯಾಕ್ಟ್ ಚೆಕ್ ಮಾಡಿದರೋ ಇಲ್ಲವೋ ಎಂಬುದನ್ನೂ ಹುಡುಕಲಾಗುತ್ತದೆ.

ಎದುರಲ್ಲೇ ನಾಯಕನೊಬ್ಬ ಸುಳ್ಳು ಹೇಳಿದರೆ ಅದನ್ನು ಆಗಲೇ ಬಯಲು ಮಾಡುವುದು ಚರ್ಚೆಯನ್ನು ನಿರ್ವಹಿಸುವವರ ಹೊಣೆಗಾರಿಕೆ. ಅದನ್ನು ಎಬಿಸಿ ಮಾಡರೇಟರ್ ಕೂಡ ಮಾಡಿದ್ದರು.

ಎಬಿಸಿ ಆ್ಯಂಕರ್ ಲೈವ್ ಫ್ಯಾಕ್ಟ್ ಚೆಕಿಂಗ್ ಮೂಲಕ ಚರ್ಚೆಗೆ ಮಹತ್ವ ತಂದುಕೊಟ್ಟರು ಎಂದು ವಾಶಿಂಗ್ಟನ್ ಪೋಸ್ಟ್ ಹೊಗಳಿದೆ.

ಅಂಪೈರ್‌ಗಳ ರೀತಿಯಲ್ಲಿ ಆ್ಯಂಕರ್‌ಗಳು ಸುಳ್ಳುಗಳನ್ನು ಹಿಡಿದು ಹಿಡಿದು ಹಾಕಿದ್ದರು.

ಆದರೆ ಭಾರತದಲ್ಲಿ ಹೀಗಾಗುತ್ತದೆಯೇ?

ಭಾರತದಲ್ಲಿ ಯಾರೂ, ಹೇಗೂ, ಏನನ್ನೂ ಹೇಳಬಹುದು ಎನ್ನುವಂತಹ ಪರಿಸ್ಥಿತಿ ಇದೆ.

ಮಡಿಲ ಮಿಡಿಯಾಗಳ ಆ್ಯಂಕರ್‌ಗಳು ಎಷ್ಟು ಬಾರಿ ಮೋದಿಯ ಇಂಟರ್‌ವ್ಯೆ ಮಾಡಿದರೂ, ಫ್ಯಾಕ್ಟ್ ಚೆಕಿಂಗ್ ಮಾಡಲಾರರು ಮತ್ತು ಪ್ರಶ್ನೆ ಕೇಳಲಾರರು.

ವಲಸಿಗರ ಬಗ್ಗೆ ಟ್ರಂಪ್ ಅದೆಷ್ಟು ಕೆಟ್ಟದಾಗಿ ಮಾತನಾಡಿದ್ದರು.

‘‘ಅವರು ನಾಯಿ, ಬೆಕ್ಕುಗಳನ್ನೆಲ್ಲ ತಿನ್ನುತ್ತಾರೆ’’ ಎನ್ನುವಲ್ಲಿಯವರೆಗೂ ಅವರ ಮಾತು ಮುಂದುವರಿದಿತ್ತು.

ಭಾರತದಲ್ಲಿಯೂ ವಲಸಿಗರ ಬಗ್ಗೆ ಅದೆಂಥ ಅಸಹನೆ ಇದೆಯೆಂಬುದು ಕಳೆದ ಕೆಲ ವರ್ಷಗಳಲ್ಲಿನ ಆಡಳಿತ ಪಕ್ಷದ ರೀತಿ ನೋಡಿದರೆ ತಿಳಿಯುತ್ತದೆ.

ಬಾಂಗ್ಲಾ ವಲಸಿಗರನ್ನು ‘ಗೆದ್ದಲುಗಳು’ ಎಂದು ಕರೆಯುವವರನ್ನು ನೋಡಿದ್ದೇವೆ.

ಭಾರತದಲ್ಲೂ ಫ್ಯಾಕ್ಟ್ ಚೆಕ್ ನಡೆಯುತ್ತದೆ.

ಆಲ್ಟ್ ನ್ಯೂಸ್, ಬೂಮ್ ಲೈವ್ ಇಂಥ ಹಲವು ಸಂಸ್ಥೆಗಳಿವೆ.

ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕಿಂಗ್ ವಿಷಯದಲ್ಲಿ ಅದ್ಭುತ ಕೆಲಸ ಮಾಡುತ್ತಿದೆ. ಅದೆಷ್ಟೋ ಗಲಭೆಗಳನ್ನು ಅದು ಸುಳ್ಳನ್ನು ಬಯಲು ಮಾಡುವ ಮೂಲಕ ತಪ್ಪಿಸಿದೆ.

ಆದರೆ ಅಮೆರಿಕದಲ್ಲಿಯಂತೆ ಭಾರತದಲ್ಲಿ ಫ್ಯಾಕ್ಟ್ ಚೆಕ್ ಆಗುತ್ತಿಲ್ಲ. ಇಲ್ಲಿ ಎಲ್ಲವೂ ಯಾರದೋ ಮಾತು ಕೇಳಿಕೊಂಡು ಹರಡುವ ಸುಳ್ಳುಗಳೇ ಆಗಿರುತ್ತವೆ. ಇಲ್ಲಿನ ಪ್ರಮುಖ ಚಾನೆಲ್‌ಗಳು ಹಾಗೂ ಪತ್ರಿಕೆಗಳು ಫ್ಯಾಕ್ಟ್ ಚೆಕ್ ಮಾಡುವುದೇ ಇಲ್ಲ. ಯಾಕೆಂದರೆ ಫ್ಯಾಕ್ಟ್ ಚೆಕ್ ಮಾಡಿದರೆ ಮೊದಲು ಬಯಲಾಗುವುದು ಅವರೇ. ಅದೆಷ್ಟು ಸುಳ್ಳುಗಳನ್ನು ಹೇಳುತ್ತಾರೆ ಇಲ್ಲಿನ ಪ್ರಮುಖ ಚಾನೆಲ್‌ಗಳ ಆ್ಯಂಕರ್‌ಗಳು?

ಯಾವ ವಲಸಿಗರ ಬಗ್ಗೆ ಟ್ರಂಪ್ ಅಷ್ಟು ಕೆಟ್ಟದಾಗಿ ಮಾತಾಡಿದರೋ ಅಂಥ ವಲಸಿಗರಲ್ಲಿ ಭಾರತೀಯರೂ ಇದ್ದಾರೆ. ವಲಸಿಗರ ಕುರಿತ ಟ್ರಂಪ್ ಹೇಳಿಕೆಗಳಿಗೆ, ಲಕ್ಷಾಂತರ ಸಂಖ್ಯೆಯಲ್ಲಿ ಪ್ರತೀ ತಿಂಗಳೂ ಅಮೆರಿಕದೊಳಕ್ಕೆ ಬರುತ್ತಾರೆ, 21 ಮಿಲಿಯನ್‌ಗೂ ಅಧಿಕ ಮಂದಿ ಅಮೆರಿಕಕ್ಕೆ ಬರುತ್ತಿದ್ದಾರೆ ಎಂಬ ಅವರ ಆರೋಪಗಳಿಗೆ ಆಧಾರಗಳೇ ಇಲ್ಲ.

ಆದರೆ ಫ್ಯಾಕ್ಟ್ ಚೆಕ್ ಪ್ರಕಾರ, ಜುಲೈ ತಿಂಗಳಲ್ಲಿ ಮೆಕ್ಸಿಕೊದಿಂದ ಬಂದ 56,408 ಜನರನ್ನು ಬಂಧಿಸಲಾಗಿದೆ. ಫ್ಯಾಕ್ಟ್ ಚೆಕ್ ಪ್ರಕಾರ, ವಲಸಿಗರು ಬರುತ್ತಿರುವುದು ನಿಜವಾದರೂ ಸಂಖ್ಯೆ ಹೆಚ್ಚಿಲ್ಲ. ಟ್ರಂಪ್ ಸುಳ್ಳುಗಳಲ್ಲಿ ನಿರ್ದಿಷ್ಟ ಸಮುದಾಯಗಳ ಬಗೆಗಿನ ಅವರ ಅಸಹನೆ, ದ್ವೇಷ ಸ್ಪಷ್ಟ.

ಅಮೆರಿಕ ಚುನಾವಣೆಯಲ್ಲಿ ಒಪೀನಿಯನ್ ಪೋಲ್ ಮಹತ್ವದ ಪಾತ್ರ ವಹಿಸುತ್ತದೆ. ಈ ಚರ್ಚೆಯ ನಂತರ ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ ಕಮಲಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಮಲಾ ಅವರ ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೇಲರ್, ಕಮಲಾ ಅವರಿಗೇ ಮತ ಹಾಕುವುದಾಗಿ ಹೇಳಿದ್ದಾರೆ.

ಆಡುವ ಮಾತು ಅದನ್ನು ಆಡಿದವನ ಜಾತಕವನ್ನೇ ತೆರೆದಿಡುತ್ತದೆ.

ಸುಳ್ಳುಗಳ ಸರದಾರ ಟ್ರಂಪ್ ಸುಳ್ಳುಗಳು ನಿಲ್ಲುವುದಿಲ್ಲ. ಶ್ವೇತಭವನದಲ್ಲಿದ್ದಾಗಲೂ ಸುಳ್ಳುಗಳನ್ನು ಹೇಳಿದ್ದ, ಈಗ ಮತ್ತೊಮ್ಮೆ ಅಲ್ಲಿಗೆ ಪ್ರವೇಶಿಸುವ ಪ್ರಯತ್ನದಲ್ಲಿ ಸುಳ್ಳುಗಳನ್ನು ಹೇಳುತ್ತಿರುವ ಟ್ರಂಪ್ ಕೆಲವು ರಾಜ್ಯಗಳಲ್ಲಿನ ಜನಾಭಿಪ್ರಾಯದ ಪ್ರಕಾರ, ಹ್ಯಾರಿಸ್‌ಗಿಂತಲೂ ಮುಂದಿದ್ದಾರೆ. ಸುಳ್ಳುಗಳ ಮೇಲೆಯೇ ದರ್ಬಾರು ನಡೆಸಬಹುದು ಎಂಬುದಕ್ಕೆ ಇದು ಸಾಕ್ಷಿ. ಯಾಕೆಂದರೆ ಅಂಥವರಿಗೆ ತಮ್ಮ ಹಸಿ ಹಸಿ ಸುಳ್ಳುಗಳು ಬಯಲಾದ ಮೇಲೆಯೂ ಏನೇನೂ ಅನ್ನಿಸದ ಭಂಡತನವಿರುತ್ತದೆ.

ಭಾರತದಲ್ಲೂ ನಾವು ಅದನ್ನು ಬಹಳ ಢಾಳಾಗಿ ನೋಡುತ್ತಿದ್ದೇವೆ. ಇಲ್ಲಿನ ಅತ್ಯಂತ ಜನಪ್ರಿಯ ನಾಯಕರೇ ಸರಣಿ ಸುಳ್ಳುಗಳನ್ನು ಹೇಳುತ್ತಾರೆ. ಅದನ್ನು ಪರಮ ಸತ್ಯ ಎಂಬಂತೆ ಮಡಿಲ ಮೀಡಿಯಾಗಳು ಪ್ರಸಾರ ಮಾಡುತ್ತವೆ.

ಆಲ್ಟ್ ನ್ಯೂಸ್‌ನಂತಹ ಕೆಲವೇ ಕೆಲವರು ಮಾತ್ರ ಫ್ಯಾಕ್ಸ್ ಚೆಕ್ ಮಾಡಿ ಸತ್ಯ ಹೇಳುತ್ತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News