ಹಾಸನ: ಜೆಡಿಎಸ್-ಬಿಜೆಪಿ ಒಳ ತಿಕ್ಕಾಟ ಕಾಂಗ್ರೆಸ್‌ಗೆ ಲಾಭ ತರಲಿದೆಯೇ?

ಹಾಸನವೆಂದರೆ ಜೆಡಿಎಸ್ ಎನ್ನುವಷ್ಟು ಮಟ್ಟಿಗೆ ರಾಜಕಾರಣದಲ್ಲಿ ಗುರುತಿದೆ. ಆದರೆ ಈಚೆಗೆ ಜೆಡಿಎಸ್‌ಗೆ ಕಾಂಗ್ರೆಸ್‌ಗಿಂತಲೂ ಹೆಚ್ಚು ಪೈಪೋಟಿಯೊಡ್ಡುವ ಪಕ್ಷವಾಗಿ ಅಲ್ಲಿ ಬಿಜೆಪಿ ಕಾಣಿಸಿಕೊಂಡಿದೆ. ಬಿಜೆಪಿ ಜೊತೆಗಿನ ಮೈತ್ರಿ ಮೂಲಕ ಅದರ ಮತಗಳನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿರುವ ಜೆಡಿಎಸ್ ಈ ಸಲವೂ ಗೆಲ್ಲಬಹುದೆ? ಅಥವಾ ಲೆಕ್ಕಾಚಾರಗಳು ತಲೆಕೆಳಗಾಗಲಿವೆಯೇ ಎಂಬುದು ಸದ್ಯದ ಕುತೂಹಲ. ಮೈತ್ರಿಯ ವಿರುದ್ಧ ಪ್ರಬಲ ರಣತಂತ್ರಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿರುವ ಹಾಗಿದೆ.

Update: 2024-03-03 06:04 GMT

ಸರಣಿ- 22

ಪ್ರಾಥಮಿಕ ಮಾಹಿತಿಗಳು

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ. 76.07. ಈ ಲೋಕಸಭಾ ಕ್ಷೇತ್ರದಲ್ಲಿನ ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಹಾಗೂ ಸಕಲೇಶಪುರ.

ಈಗ 4 ಕ್ಷೇತ್ರಗಳಲ್ಲಿ ಜೆಡಿಎಸ್, 2ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಕ್ಷೇತ್ರದ ಒಟ್ಟು 17 ಲಕ್ಷ ಮತದಾರರಲ್ಲಿ ಪುರುಷರು -8,51,100, ಮಹಿಳೆಯರು -8,50,500 ಮತ್ತು ಇತರರು-50

ಹಿಂದಿನ ಚುನಾವಣೆಗಳ ಫಲಿತಾಂಶ

2014ರಲ್ಲಿ ಜೆಡಿಎಸ್‌ನ ಎಚ್.ಡಿ. ದೇವೇಗೌಡ ಗೆಲುವು ಸಾಧಿಸಿದ್ದರೆ, 2019ರಲ್ಲಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಗೆಲುವು ಕಂಡಿದ್ದಾರೆ.

ಹಿಂದಿನ ಚುನಾವಣೆಗಳಲ್ಲಿ 2014ರಲ್ಲಿ ಜೆಡಿಎಸ್‌ಗೆ ಶೇ.44.44, ಕಾಂಗ್ರೆಸ್ ಗೆ ಶೇ.35.69 ಮತ ಹಂಚಿಕೆಯಾದರೆ, 2019ರಲ್ಲಿ ಜೆಡಿಎಸ್‌ಗೆ ಶೇ.52.91, ಬಿಜೆಪಿಗೆ ಶೇ.41.87 ಮತ ಹಂಚಿಕೆಯಾಗಿದೆ.

ಹಾಸನ ಲೋಕಸಭಾ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರ ಎಂದೇ ಖ್ಯಾತಿ ಪಡೆದಿದೆ. ದೇಶಕ್ಕೆ ಪ್ರಧಾನಿಯನ್ನು ನೀಡಿದ ಜಿಲ್ಲೆ ಇದು. ಹಾಗೆಯೇ ರೈತ ಹಾಗೂ ದಲಿತ ಚಳವಳಿಯನ್ನು ಗಟ್ಟಿಯಾಗಿ ಕಟ್ಟಿದ ಹೆಗ್ಗಳಿಕೆ ಹಾಸನದ್ದು. ಹಾಸನ ಜಿಲ್ಲೆ ಪ್ರವಾಸೋದ್ಯಮಕ್ಕೂ ಹೆಸರಾಗಿದೆ.

ಹಲವು ಹೆಗ್ಗಳಿಕೆಗಳ ನಡುವೆಯೂ, ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ತೆಂಗು ಬೆಳೆಗೆ ವೈಜ್ಞಾನಿಕ ಬೆಲೆ ದೊರಕಿಲ್ಲದಿರುವುದು. ಕೇಂದ್ರ ಹಾಗೂ ರಾಜ್ಯ ಸರಕಾರ ಬೆಂಬಲ ಬೆಲೆ ನೀಡುವಂತೆ ಇಲ್ಲಿಯ ತೆಂಗು ಬೆಳೆಗಾರರು ಮನವಿಮಾಡಿದ್ದಾರೆ. ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆಲೂಗೆಡ್ಡೆ ಶೀತಲ ಕೇಂದ್ರವೂ ರೈತರ ಬೇಡಿಕೆಗಳಲ್ಲಿ ಒಂದಾಗಿದೆ.

ಕ್ಷೇತ್ರದ ರಾಜಕೀಯ ಮಹತ್ವ ಹೇಳುವುದಾದರೆ, ಜೆಡಿಎಸ್ ಮೂಲ ಹಾಸನ ಜಿಲ್ಲೆಯಾಗಿರುವುದರಿಂದ ಜೆಡಿಎಸ್ ರಾಜಕಾರಣದ ರಿಮೋಟ್ ಇಲ್ಲಿದೆ ಎಂಬ ಖ್ಯಾತಿ ಪಡೆದಿದೆ.

ಪ್ರಮುಖ ರಾಜಕೀಯ ಚುನಾವಣಾ ದಾಖಲೆಗಳು

ಹಾಸನ ಲೋಕಸಭಾ ಕ್ಷೇತ್ರ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರನ್ನು ಅನೇಕ ಬಾರಿ ಗೆಲ್ಲಿಸಿದೆ ಹಾಗೂ ಸೋಲಿನ ಪಾಠವನ್ನೂ ಕಲಿಸಿದೆ. 1991ರಿಂದ 1994, 1998, 2004 ಮತ್ತು 2014ರಲ್ಲಿ ದೇವೇಗೌಡರು ಗೆಲುವು ಸಾಧಿಸಿದ್ದರು.

ಒಂದು ಉಪಚುನಾವಣೆಯೂ ಸೇರಿ ಈವರೆಗಿನ 17 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಗೆದ್ದಿದೆ. 7 ಬಾರಿ ಜೆಡಿಎಸ್ ಗೆಲುವು ಕಂಡಿದೆ.

ಉಳಿದಂತೆ ಒಮ್ಮೆ ಸ್ವತಂತ್ರ ಪಾರ್ಟಿ, ಒಮ್ಮೆ ಜನತಾ ದಳ ಗೆದ್ದಿದ್ದವು. 2004ರಿಂದ 2014ರವರೆಗೆ ಸತತ 3 ಚುನಾವಣೆಗಳನ್ನು ಗೆದ್ದ ಹೆಗ್ಗಳಿಕೆ ದೇವೇಗೌಡರದು.

ಈ ಸಲದ ಟಿಕೆಟ್ ಆಕಾಂಕ್ಷಿಗಳು

ಜೆಡಿಎಸ್‌ನಲ್ಲಿ ಪ್ರಜ್ವಲ್ ರೇವಣ್ಣ ಇಲ್ಲವೇ ಹೃದ್ರೋಗ ತಜ್ಞ. ಡಾ. ಸಿ.ಎನ್. ಮಂಜುನಾಥ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಜೆಡಿಎಸ್‌ನಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಎಂದು ದೇವೇಗೌಡರು ಈಗಾಗಲೇ ಹೇಳಿರುವುದೂ ಇದೆ. ಬಿಜೆಪಿ ಜೊತೆ ಚರ್ಚಿಸಿ ನಿರ್ಧಾರ ಅಂತಿಮಗೊಳಿಸುವ ಸಾಧ್ಯತೆ ಇದೆ. ಆದರೆ ಪ್ರಜ್ವಲ್ ವರ್ಚಸ್ಸು ತಗ್ಗಿದೆ, ದೇವೇಗೌಡರೇ ಇಲ್ಲಿ ಅಭ್ಯರ್ಥಿಯಾಗಬೇಕು ಎಂಬುದು ಅನೇಕ ಜೆಡಿಎಸ್ ಕಾರ್ಯಕರ್ತರ ಒತ್ತಾಯ.

ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಹೆಸರುಗಳು

ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ, ಹೊಳೆನರಸೀಪುರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ ಮತ್ತು ಬೇಲೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವರಾಂ ಅಲ್ಲದೆ 2013, 2018ರಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಮಹೇಶ್, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ, 40 ವರ್ಷಗಳ ರಾಜಕೀಯ ಅನುಭವವಿರುವ ಬೀರೂರು ದೇವರಾಜ್ ಹೆಸರು ಕೂಡಾ ಕೇಳಿಬರುತ್ತಿದೆ

ಬಿಜೆಪಿಯಲ್ಲಿಯೂ ಕೆ.ಪಿ.ಎಸ್. ಗ್ರೂಪ್ ಮಾಲಕ ಕಿರಣ್ ಗೌಡ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮೊದಲಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ನಿರ್ಧಾರವಾಗಬೇಕಿದೆ.

ಜೆಡಿಎಸ್ ಬಲ

ಜೆಡಿಎಸ್ ರಾಜಕೀಯವಾಗಿ ಪ್ರಾಬಲ್ಯ ಹೊಂದಿದೆ. ಸ್ಥಳೀಯ ಸಂಸ್ಥೆ, ಸಹಕಾರಿ ಸಂಘಗಳಲ್ಲೂ ಪ್ರಾಬಲ್ಯವಿದೆ. ಅಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಾಭದ ನಿರೀಕ್ಷೆಯಿದೆ. ಬಿಜೆಪಿ ಸಾಂಪ್ರದಾಯಿಕ ಮತ ಒಗ್ಗೂಡಿದರೆ ಜೆಡಿಎಸ್‌ಗೆ ಲಾಭ.

ಜೆಡಿಎಸ್‌ಗೆ ತೊಡಕಾಗುವ ಸಂಗತಿಗಳು

ಮೈತ್ರಿಯಿಂದ ಅಲ್ಪಸಂಖ್ಯಾತ ಮತ್ತು ದಲಿತ ಮತ ಇಳಿಕೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಹೆಚ್ಚಿದೆ

ಪ್ರಜ್ವಲ್ ರೇವಣ್ಣ ವಿರುದ್ಧ ಜನತೆ ಅಸಮಾಧಾನ, ಮೈತ್ರಿಗೆ ಅಸಮಾಧಾನವಿದ್ದು, ಕೆಲ ಮುಖಂಡರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಬಿಜೆಪಿ ನಾಯಕರಾದ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಎ.ಟಿ. ರಾಮಸ್ವಾಮಿ ಅಸಮಾಧಾನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್.ಡಿ. ರೇವಣ್ಣ ಕುಟುಂಬದ ಭವಾನಿ ರೇವಣ್ಣ ಅವರ ವರ್ತನೆ ಕೂಡ ತೊಡಕಾಗುವ ಸಾಧ್ಯತೆ ಇದೆ. ಒಟ್ಟಾರೆ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ಮುಖಂಡರುಗಳ ವೈಯಕ್ತಿಕ ತಿಕ್ಕಾಟಗಳು ಚುನಾವಣೆ ಫಲಿತಾಂಶದ ಮೇಲೆ ನಕರಾತ್ಮಕ ಪರಿಣಾಮ ಬೀರಲಿವೆ.

ಕಾಂಗ್ರೆಸ್ ಬಲ

ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಕೆ ಹೆಚ್ಚಳ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಅಹಿಂದ ಮತಗಳು ಏರಿಕೆಯಾಗುವ ಸಾಧ್ಯತೆ, ಸರಕಾರದ ಗ್ಯಾರಂಟಿ ಯೋಜನೆಗಳ ಲಾಭ ಮತ್ತು ಪುರಸಭೆ ಚುನಾವಣೆಯಲ್ಲಿನ ಗೆಲುವು ಕೂಡ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್ ಎದುರಿನ ತೊಡಕುಗಳು

ವರ್ಚಸ್ಸಿನ ಪ್ರಬಲ ಅಭ್ಯರ್ಥಿಯ ಕೊರತೆ, ಸ್ಥಳೀಯ ಮುಖಂಡರಲ್ಲಿ ಹೊಂದಾಣಿಕೆ ಕೊರತೆ, ಭಿನ್ನಾಭಿಪ್ರಾಯದ ಅತಿರೇಕ, ಕಾಂಗ್ರೆಸ್ ಯೋಜನೆಗಳ ಯಶಸ್ಸನ್ನು ಜನರಿಗೆ ತಲುಪಿಸುವಲ್ಲಿ ವಿಫಲ ಮತ್ತು ಜೆಡಿಎಸ್-ಬಿಜೆಪಿ ಪ್ರಾಬಲ್ಯ ಎದುರಿಸಲು ಸಾಮರ್ಥ್ಯದ ಕೊರತೆ.

ಜೆಡಿಎಸ್‌ಗೆ ಸವಾಲು?

ಈ ಸಲದ ಸಂಸತ್ ಚುನಾವಣೆ ದೇವೇಗೌಡ ಮತ್ತು ಜೆಡಿಎಸ್ ಪಕ್ಷಕ್ಕೆ ಸವಾಲಾಗಿದೆ. ಸ್ಥಾನವನ್ನು ಉಳಿಸಿಕೊಳ್ಳಲೇಬೇಕಾಗಿದೆ. ಅಕಸ್ಮಾತ್ ಜೆಡಿಎಸ್ ಇಲ್ಲಿ ಸೋತರೆ, ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನದ ಲಾಭವಾದರೆ, ಬಿಜೆಪಿಗೆ ರಾಜಕೀಯವಾಗಿ ಬಹಳಷ್ಟು ಲಾಭವಾಗಲಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಬಿಜೆಪಿಯ ಗೆಲುವಿನ ಹಾದಿಗೆ ಅಂದರೆ ವಿಧಾನಸಭೆ ಚುನಾವಣೆ ತಾ.ಪಂ., ಜಿ.ಪಂ., ನಗರಸಭೆ, ಪುರಸಭೆ, ಸಂಘ ಸಂಸ್ಥೆಗಳ ಚುನಾವಣೆಗೆ ಅಡ್ಡಿಯಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆ ನೇರ ಸ್ಪರ್ಧೆಗಿಳಿಯಲು ಜೆಡಿಎಸ್ ಸೋಲು ಬಿಜೆಪಿಗೆ ಅನುಕೂಲವಾಗಲಿದೆ.

ಬಿಜೆಪಿ ಕಾರ್ಯಕರ್ತರು ರಾಜಕೀಯ ಲೆಕ್ಕಾಚಾರಕ್ಕಾಗಿ ಮೈತ್ರಿಗೆ ಬೆಂಬಲಿಸಬಹುದು ಅಥವಾ ಸ್ವಾರ್ಥ ರಾಜಕೀಯ ಲೆಕ್ಕಾಚಾರ ಹಾಕಿದರೆ ಜೆಡಿಎಸ್‌ಗೆ ನಷ್ಟವಾಗಲಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಅರಿತಿರುವ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಿದಂತೆ ಮಾಡುತ್ತಲೇ ನೇರವಾಗಿ ಬಿಜೆಪಿಯ ಮತಗಳನ್ನು ಪಡೆಯಲು ಕಾರ್ಯತಂತ್ರ ರೂಪಿಸುತ್ತಿದೆ.

ಹಾಸನದಲ್ಲಿ ಜೆಡಿಎಸ್‌ಗೆ ಬಿಜೆಪಿಯು ಕಾಂಗ್ರೆಸ್‌ಗಿಂತಲೂ ಹೆಚ್ಚು ಸ್ಪರ್ಧೆಯೊಡ್ಡುವ ಪಕ್ಷವಾಗಿದ್ದು, ಬಿಜೆಪಿ ಶಾಸಕರು, ಮಾಜಿ ಶಾಸಕರು ಮತ್ತು ಕಾರ್ಯಕರ್ತರನ್ನು ಸೆಳೆಯುವುದು ಜೆಡಿಎಸ್ ಗೆ ಕಠಿಣ ಕೆಲಸವಾಗಿದೆ.

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಪ್ರಬಲ ಜಾತಿಗಳಲ್ಲಿ ಒಕ್ಕಲಿಗರು ಮೊದಲ ಸ್ಥಾನದಲ್ಲಿದ್ದಾರೆ. ಒಕ್ಕಲಿಗರು ಜೆಡಿಎಸ್‌ಗೆ ಬೆಂಬಲ ನೀಡಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರ ಮತಗಳು ಕಾಂಗ್ರೆಸ್ ಪರವಾಗಿದ್ದು ಲೋಕಸಭೆ ಚುನಾವಣೆಯಲ್ಲಿಯೂ ಸಹ ಪುನರಾವರ್ತನೆಯಾಗುವ ಸಂಭವವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮುಸ್ಲಿಮ್, ಕುರುಬ, ಕ್ರೈಸ್ತ ಹಾಗೂ ಇತರ ಅಹಿಂದ ವರ್ಗದ ಮತಗಳು ಕಾಂಗ್ರೆಸ್ ಪರವಾಗಿವೆ.

ಜಾತಿ ಸಮೀಕರಣದಲ್ಲಿ ಎರಡೂ ಪಕ್ಷಗಳು ಸಮಬಲವಾಗಿವೆ. ವೀರಶೈವ ಲಿಂಗಾಯತರ ಮತಗಳು ಇಲ್ಲಿ ನಿರ್ಣಾಯಕ.

ಜೆಡಿಎಸ್ ಈಗಾಗಲೇ ಅಭ್ಯರ್ಥಿ ಹೆಸರನ್ನು ಅಂದಾಜಿಸಿದ್ದು, ಕಾಂಗ್ರೆಸ್ ಹೇಳಿಕೊಳ್ಳುವಂತಹ ಕಾರ್ಯತಂತ್ರವನ್ನು ರೂಪಿಸದಿದ್ದರೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ. ಬಿಜೆಪಿಯ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದು.

ರಾಜ್ಯಮಟ್ಟದ ಒಕ್ಕಲಿಗ ನಾಯಕ ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಕ್ಕಲಿಗರ ಮತಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರವಿದ್ದು, ಬೆಂಗಳೂರು ಗ್ರಾಮಾಂತರದ ಹಾಲಿ ಸಂಸದ ಡಿ.ಕೆ. ಸುರೇಶ್ ಅವರನ್ನು ಕಣಕ್ಕಿಳಿಸುವ ಯೋಚನೆಯೂ ಇದೆಯೆಂದು ಹೇಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನಾಯಕರು ಸ್ಪರ್ಧೆಗೆ ಇಳಿದರೆ ಡಿ.ಕೆ. ಶಿವಕುಮಾರ್ ಸಹ ಹಾಸನದ ಅಭ್ಯರ್ಥಿಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಫಲಿತಾಂಶ ನಿರ್ಧರಿಸುವ ಸಂಗತಿಗಳು

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪ್ರಬಲವಾದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಅದು ಸಹಕಾರಿಯಾಗಲಿದೆ.

ಆದರೆ ಈ ಮೈತ್ರಿಯಲ್ಲೇ ಅಲ್ಪಸ್ವಲ್ಪ ವ್ಯತ್ಯಾಸವಾದರೆ ಕಾಂಗ್ರೆಸ್ ಗೆಲುವಿಗೆ ಅದು ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ ಆದರೆ ಈ ಚುನಾವಣೆಯಲ್ಲಿ ಈ ಅಂಶಗಳು ಲೆಕ್ಕಕ್ಕೆ ಬರುವುದು ಅಷ್ಟಕ್ಕಷ್ಟೆ ಎನ್ನಲಾಗುತ್ತಿದೆ.

ಸದ್ಯದ ಮಟ್ಟಿಗೆ ಜೆಡಿಎಸ್ - ಬಿಜೆಪಿ ಮೈತ್ರಿ ಹಾಗೂ ಕಾಂಗ್ರೆಸ್ ನಡುವೆ ಸಮಬಲವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಲ್ನಾಡ್ ಮೆಹಬೂಬ್

contributor

Similar News