ಅತ್ಯಾಧುನಿಕ ಆರೋಗ್ಯ ಸೇವೆ ಒದಗಿಸುವ ಹೊನ್ನಾವರ ಪಿಎಚ್‌ಸಿ

Update: 2024-06-10 05:46 GMT

ಮಂಡ್ಯ: ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಜಿಲ್ಲೆಯಲ್ಲಿ ಕೆಲವು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದಕ್ಕೆ ಹೊರತಾಗಿವೆ. ನಾಗಮಂಗಲ ತಾಲೂಕಿನ ಹೊನ್ನಾವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಸಜ್ಜಿತ ಪ್ರಯೋಗಾಲಯ, ಉತ್ತಮ ಔಷಾಧಾಲಯ, ಸಕಲ ಪರಿಕರಗಳುಳ್ಳ ಚಿಕಿತ್ಸಾ ಕೊಠಡಿ, ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಆರೋಗ್ಯ ಸಿಬ್ಬಂದಿ ಕೊಠಡಿ, ಲಸಿಕಾ ಕೊಠಡಿ, ಸಭಾಂಗಣ, ಹೆರಿಗೆ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಡ್ರೆಸ್ಸಿಂಗ್ ರೂಂ, ರೋಗಿಗಳ ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳು ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇವೆ. ಇಲ್ಲಿ ದೊರಕುವ ಉತ್ತಮ ಚಿಕಿತ್ಸಾ ಸೌಲಭ್ಯಗಳ ಮಾಹಿತಿ ಜನರ ಬಾಯಿಯಿಂದ ಬಾಯಿಗೆ ಹರಡಿದ್ದು, ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಚ್.ಭೂವನಹಳ್ಳಿ, ಮಲ್ಲೇನಹಳ್ಳಿ, ಬೀಚನಹಳ್ಳಿ, ಮಾಚನಾಯಕನಹಳ್ಳಿ, ಎಚ್.ಕೋಡಿಹಳ್ಳಿ, ಮಂಗರಬಳ್ಳಿ, ಮಾದಿಹಳ್ಳಿ, ಸಾತೇನಹಳ್ಳಿ, ಕ್ಯಾತನಹಳ್ಳಿ, ವಡ್ಡರಹಳ್ಳಿ, ತುರುಬನಹಳ್ಳಿ ಸೇರಿದಂತೆ ೨೧ ಗ್ರಾಮಗಳ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಇದಲ್ಲದೆ ಪಕ್ಕದ ಹಾಸನ ಜಿಲ್ಲೆಯ ಬೆಟ್ಟದಹಳ್ಳಿ, ಜುಟ್ಟನಹಳ್ಳಿ, ಆಯಿರಳ್ಳಿ, ಶ್ರವಣಬೆಳಗೊಳ, ಕುಮ್ಮೇನಹಳ್ಳಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳ ಜನರೂ ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯಿಂದ ಪ್ರತೀ ತಿಂಗಳು ಒಂದು ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಹೃದಯ ವೈಶಾಲ್ಯ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಉಚಿತ ಇಸಿಜಿ ಮತ್ತು ಹೃದ್ರೋಗ ತಪಾಸಣೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಮುಗುಳ್ನಗೆ ಸಿಂಚಿನ ಕಾರ್ಯಕ್ರಮದಡಿಯಲ್ಲಿ ದಂತ ತಪಾಸಣಾ ಶಿಬಿರವನ್ನೂ ತಪ್ಪದೇ ಮಾಡಲಾಗುತ್ತಿದೆ.

ಈ ಆಸ್ಪತ್ರೆಗೆ ಆಧುನಿಕ ಆಧನಿಕ ಸ್ಪರ್ಶ ನೀಡುವಲ್ಲಿ ಇಲ್ಲಿಯ ವೈದ್ಯಾಧಿಕಾರಿ ಡಾ.ಟಿಪ್ಪುಸುಲ್ತಾನ್ ಅವರ ಪರಿಶ್ರಮ ಬಹಳ ಮುಖ್ಯವಾಗಿದೆ. ಸರಕಾರದಿಂದ ದೊರೆಯುವ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಆಸ್ಪತ್ರೆಯನ್ನು ಸುಧಾರಣೆ ಮಾಡಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆ ಇದ್ದಾಗ ಡಾ.ಟಿಪ್ಪು ಸುಲ್ತಾನ್ ರೋಗಿಯ ಮನೆಗೇ ತೆರಳಿ ನೀಡಿ ಚಿಕಿತ್ಸೆ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಷ್ಟೆಲ್ಲಾ ಚಿಕಿತ್ಸಾ ಸೌಲಭ್ಯವನ್ನು ಹೊಂದಿರುವ ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದೆ. ಸಿಬ್ಬಂದಿ ಕೊರತೆಯಿಂದ ಇರುವ ವೈದ್ಯರು ಮತ್ತು ಸಿಬ್ಬಂದಿಗೆ ಒತ್ತಡ ಹೆಚ್ಚಾಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿದರೆ ಜನರಿಗೆ ಇನ್ನೂ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬಡ, ಮಧ್ಯಮವರ್ಗದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟ. ಅವರಿಗೆ ಸರಕಾರಿ ಆಸ್ಪತ್ರೆಗಳೇ ಆಧಾರ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವ ಬಹುತೇಕ ಚಿಕಿತ್ಸಾ ಸೌಲಭ್ಯಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ದೊರೆಯಬೇಕು, ಉತ್ತಮ ವಾತಾವರಣ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ.

-ಡಾ.ಟಿಪ್ಪು ಸುಲ್ತಾನ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News