ಮೊಬೈಲ್ ಬಳಕೆಗೆ ಮಿತಿಯಿರಲಿ
ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಬಳಸುತ್ತಿರುವ ಪ್ರತಿಯೊಂದು ವಸ್ತುವನ್ನು ತಯಾರಿಸುವಾಗ ಮತ್ತು ಅವುಗಳನ್ನು ಸಾಗಿಸುವಾಗ ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತಿವೆ. ಪ್ರಸ್ತುತ ಭಾರತ ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಒಂದು ವರ್ಷಕ್ಕೆ ಸರಿಸುಮಾರು 2 ಟನ್‌ನಷ್ಟು ಶಾಖವರ್ಧಕ ಅನಿಲಗಳನ್ನು ಉತ್ಪಾದಿಸುತ್ತಿದ್ದಾನೆ. ನೆನಪಿರಲಿ ಈ ಶಾಖವರ್ಧಕ ಅನಿಲಗಳು ತಾಪಮಾನ ಏರಿಕೆಗೆ ಹಾಗೂ ಹವಾಮಾನ ಬದಲಾವಣೆಗೆ ಕಾರಣವಾಗಿವೆ. ಅಕಾಲಿಕ ಮಳೆ, ಸುಡುವ ಬಿರು ಬಿಸಿಲು, ಬಿಸಿಗಾಳಿ, ಕಾಡ್ಗಿಚ್ಚುನಂತಹವು ಈ ತಾಪಮಾನದ ಸಂತಾನ.
ಈ ದುರಂತಕ್ಕೆ ನಾವು ಬಳಸುತ್ತಿರುವ ಮೊಬೈಲ್ ಹಾಗೂ ಅಂತರ್ಜಾಲ ಕೂಡಾ ಕಾರಣವಾಗಿದೆ. ಪ್ರಪಂಚದಾದ್ಯಂತ ಸುಮಾರು 730 ಕೋಟಿ ಜನರು ಮೊಬೈಲ್ ಬಳಸುತ್ತಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 100 ಕೋಟಿ ಜನರು ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮೊಬೈಲ್‌ಗಳನ್ನು ತಯಾರಿಸಲು ಲೀಥಿಯಂ, ತಾಮ್ರ, ಅಲ್ಯುಮಿನಿಯಂ, ಕಬ್ಬಿಣ, ಪ್ಲಾಸ್ಟಿಕ್ ಇತ್ಯಾದಿಗಳು ಹಾಗೂ ಇದನ್ನು ಬಳಸಲು ಅಗತ್ಯವಿರುವ ವಿದ್ಯುತ್ ಅನ್ನು ಗಣಿಗಾರಿಕೆಯಿಂದ ಆಚೆ ತೆಗೆದ ಕಲ್ಲಿದ್ದಲಿನಿಂದ ತಯಾರಿಸಲಾಗುತ್ತಿದೆ. ಇವೆಲ್ಲವುಗಳಿಂದ ಒಂದು ಮೊಬೈಲ್ ಅನ್ನು ಉತ್ಪಾದಿಸುವಾಗ ಮತ್ತು ಅವುಗಳನ್ನು ಸಾಗಿಸುವಾಗ ಸುಮಾರು ೮೦ ಕೆಜಿಯಷ್ಟು ಶಾಖವರ್ಧಕ ಅನಿಲಗಳು ಉತ್ಪತ್ತಿಯಾಗುತ್ತದೆ.
ಹಾಗೆಯೇ ಈ ಮೊಬೈಲ್‌ಗಳಲ್ಲಿ ಅಂತರ್ಜಾಲವನ್ನು ಬಳಸುವಾಗಲೂ ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತವೆ. ಗೂಗಲ್‌ನಲ್ಲಿ 5 ನಿಮಿಷ ಏನನ್ನಾದರೂ ಹುಡುಕಿದರೆ ಸುಮಾರು ೫ ರಿಂದ 8 ಗ್ರಾಂ, ಒಂದು ಟೆಕ್ಸ್ಟ್ ಮೆಸೇಜ್ ಕಳುಹಿಸಲು 0.8 ರಿಂದ 1 ಗ್ರಾಂ, ಒಂದು ಗಂಟೆಯ ಒಂದು ಜೂಮ್‌ನಲ್ಲಿ ಮೀಟಿಂಗ್ ಮಾಡುವುದರಿಂದ 10 ರಿಂದ 50 ಗ್ರಾಂನಷ್ಟು ಶಾಖವರ್ಧಕ ಅನಿಲಗಳು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ. ಹೀಗೆ ನಾವು ಪ್ರತಿದಿನವೂ ಒಂದು ಗಂಟೆ ಮೊಬೈಲ್ ಬಳಸಿದರೆ ಒಂದು ವರ್ಷದಲ್ಲಿ ಸುಮಾರು 63 ಕೆಜಿಯಷ್ಟು ಶಾಖವರ್ಧಕ ಅನಿಲಗಳು ಉತ್ಪತ್ತಿಯಾಗುತ್ತವೆ ಎಂದು ಮೈಕ್ ಬೇನ್ರಿಸ್ ಹಾಗೂ ಲೀ ರವರು ತಮ್ಮ ಸಂಶೋಧನೆಯ ಮೂಲಕ ತಿಳಿಸುತ್ತಾರೆ.
ಪ್ರಪಂಚದಾದ್ಯಂತ ಅಂತರ್ಜಾಲ ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳಿಂದ ವಾರ್ಷಿಕವಾಗಿ ಸುಮಾರು ೪೦ ಶತಕೋಟಿ ಟನ್‌ನಷ್ಟು ಶಾಖವರ್ಧಕ ಅನಿಲಗಳು ಉತ್ಪಾದನೆಯಾಗುತ್ತಿದೆ ಹಾಗೂ ಪ್ರಪಂಚದಾದ್ಯಂತ ಇರುವ ಮೊಬೈಲ್‌ಗಳಿಂದ ಸರಿಸುಮಾರು 580 ಮಿಲಿಯನ್ ಟನ್‌ನಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಅಂತರ್ಜಾಲ ಬಳಕೆಯಿಂದಲೇ ಸುಮಾರು ಶೇ. ೪ರಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತಿದ್ದು, ಇದು ಭತ್ತವನ್ನು ಬೆಳೆಯುತ್ತಿರುವ ಕೃಷಿ ಭೂಮಿಯಲ್ಲಿ ಉತ್ಪಾದನೆಯಾಗುತ್ತಿರುವ ಅನಿಲಗಳಿಗಿಂತಲೂ ಹೆಚ್ಚಿನ ಪ್ರಮಾಣದ್ದಾಗಿದೆ.
ಇನ್ನು ಈ ಮೊಬೈಲ್‌ಗಳಲ್ಲಿ ಬಳಸಲಾಗುತ್ತಿರುವ ನೀಲಿ ಬಣ್ಣದ ಲೈಟ್‌ನ ಬಗ್ಗೆ ತಿಳಿಯಲೇ ಬೇಕಾಗಿದೆ. ಏಕೆಂದರೆ ಮೊಬೈಲ್, ಟಿವಿ, ಟ್ಯಾಬ್ ಮುಂತಾದವುಗಳಲ್ಲಿ ಬಳಸುವ ನೀಲಿ ಬಣ್ಣದ ಬೆಳಕಿನ ಪ್ರಖರತೆಯನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಕಣ್ಣುಗಳಿಗಿಲ್ಲ. ನಾವು ಮೊಬೈಲ್‌ಗಳನ್ನು ನೋಡುವಾಗ ನೀಲಿ ಬೆಳಕು ಕಣ್ಣಿನ ಮುಂಭಾಗದ ಕಾರ್ನಿಯಾ ಮತ್ತು ಲೆನ್ಸ್‌ನ ಮೂಲಕ ಹಾದು ರೆಟಿನಾವನ್ನು ತಲುಪುತ್ತದೆ. ಕಾಲಾಂತರದಲ್ಲಿ ಈ ನೀಲಿ ಬೆಳಕು ರೆಟಿನಾದ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಎಂದು ನ್ಯಾಷನಲ್ ಐ ಇನ್‌ಸ್ಟಿಟ್ಯೂಟ್‌ನ ದೃಷ್ಟಿ ಅಧ್ಯಯನ ಸಂಸ್ಥೆ ತಿಳಿಸುತ್ತದೆ. ಹಾಗೂ ಅತೀ ಹೆಚ್ಚು ಕಾಲ ಮೊಬೈಲ್ ಬಳಸುವುದರಿಂದ ವಯಸ್ಕರಿಗಿಂತ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸುತ್ತಾರೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಯು ಸ್ಕೂಲ್‌ಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕಣ್ಣಿನ ತೊಂದರೆ ಹೆಚ್ಚಾಗುತ್ತಿರುವುದನ್ನು ದೃಢಪಡಿಸಿದ್ದಾರೆ.
ಸ್ವೀಡಿಷ್ ಸಂಶೋಧಕರಾದ ಲೆನಾರ್ಟ್ ಹಾರ್ಡೇಲ್ ಮತ್ತು ಓರೆಬ್ರೊ ಯುನಿವರ್ಸಿಟಿಯವರು ನಡೆಸಿದ ಅಧ್ಯಯನದಲ್ಲಿ, ಹೆಚ್ಚು ಕಾಲ ಮೊಬೈಲ್ ಅನ್ನು ಬಳಸುವವರಿಗೆ ಸಾವಿನ ದವಡೆಗೆ ನೂಕುವ ಗ್ಲಿಯೋಮಾ ಎನ್ನುವ ಮಾರಣಾಂತಿಕ ಗಡ್ಡೆ (ಟ್ಯೂಮರ್) ಬರುವ ಸಾಧ್ಯತೆ ಶೇ. 400ರಷ್ಟಿದೆ ಎಂದು ತಿಳಿಸುತ್ತಾರೆ. ಇನ್ನು ಈ ಮೊಬೈಲ್‌ಗಳನ್ನು ಬಳಸುವಾಗ ಅದರಿಂದ ಹೊರಡುವ ತರಂಗಾಂತರಗಳು ಮೈಕ್ರೋವೇವ್‌ಗಳಿದ್ದಂತೆ. ಮೈಕ್ರೋವೇವ್‌ಗಳು ಆಹಾರವನ್ನು ಹೇಗೆ ಬಿಸಿ ಮಾಡುತ್ತವೆಯೋ ಹಾಗೆಯೇ ಈ ಮೊಬೈಲ್ ತರಂಗಾಂತರಗಳು ನಮ್ಮ ಮೆದುಳನ್ನು, ನರನಾಡಿಗಳನ್ನು, ಜೀವಕೋಶಗಳನ್ನು ಬಿಸಿಮಾಡುತ್ತವೆ.
ಇಲೆಕ್ಟ್ರೋಮ್ಯಾಗ್ನೆಟಿಕ್ ಬಯಾಲಜಿ ಮತ್ತು ಮೆಡಿಸಿನ್ ಸೆಂಟರ್‌ನವರು ದಿನದ ನಾಲ್ಕೈದು ಗಂಟೆ ಕಾಲ ಮೊಬೈಲ್ ಬಳಕೆಯಿಂದ ತಲೆ ನೋವು, ಏಕಾಗ್ರತೆಯ ಕೊರತೆ, ನಿದ್ರೆಯ ತೊಂದರೆಗಳ ಜೊತೆ ಜ್ಞಾಪಕಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಬಹಳ ಮುಖ್ಯವಾಗಿ ಯುವಕರು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವು ಶೇ. 250 ಹೆಚ್ಚಿದೆ, ವಯಸ್ಕರಿಗೆ ಕ್ಯಾನ್ಸರ್ ಅಪಾಯವು ಶೇ. 27ರಷ್ಟು ಹೆಚ್ಚಿದೆ ಎಂದು ತಮ್ಮ ಆಂತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಹಳ ಮುಖ್ಯವಾಗಿ ಈ ಫೋನ್‌ಗಳಿಂದಲೇ ಹಾದಿ ತಪ್ಪುತ್ತಿರುವ ಮಕ್ಕಳನ್ನು ಕಾಣುತ್ತಿದ್ದೇವೆ. ವಾಟ್ಸ್‌ಆ್ಯಪ್, ಫೇಸ್‌ಬುಕ್ ಯೂನಿವರ್ಸಿಟಿ ಎಂದು ಕರೆಯುವ ತಾಣಗಳಲ್ಲಿ ಸಂಬಂಧಗಳನ್ನು ಹಾಳುಗೆಡಹುವ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಇದರಿಂದ ಪರಸ್ಪರ ಅನ್ಯೋನ್ಯವಾಗಿದ್ದ ಸಂಬಂಧಗಳು ಹದಗೆಡಹುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ.
ಹಾಗಾದರೆ ಇದಕ್ಕೆ ಪರಿಹಾರ ಏನು? ಪ್ರಕೃತಿ-ಪರಿಸರ ಹಾಗೂ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಹಾಗೂ ಅಂತರ್ಜಾಲವನ್ನು ಬಳಸುವಂತಾಗಬೇಕು. ಮಕ್ಕಳಿಗೆ ಸ್ಕೂಲು, ಕಾಲೇಜುಗಳಲ್ಲಿ ಮೊಬೈಲ್‌ನಿಂದಾಗುವ ಅನಾಹುತಗಳನ್ನು ತಿಳಿಸಲೇಬೇಕು. ಪೋಷಕರು ಮಕ್ಕಳ ಮುಂದೆ ಫೋನ್ ಬಳಕೆ ಮಾಡದೆ ಮಾದರಿಯಾಗಬೇಕಾಗಿದೆ. ಇನ್ನು ನಮ್ಮ ಸರಕಾರಗಳು ಮೊಬೈಲ್ ಹಾಗೂ ಅಂತರ್ಜಾಲದ ಬಳಕೆಗೆ ಕಡಿವಾಣ ಹಾಕಲೇಬೇಕಾಗಿದೆ. ಅನಗತ್ಯವಾದ ಉತ್ಪಾದನೆಯನ್ನು ನಿಷೇಧಿಸಬೇಕಾಗಿದೆ. ಮುಖ್ಯವಾಗಿ ಮೊಬೈಲ್‌ಗಳನ್ನು ಉತ್ಪಾದಿಸುವಾಗ ಪುನರ್ಬಳಕೆ ಮಾಡುವಂತಹ ಪದಾರ್ಥಗಳನ್ನು ಬಳಸುವ ಕಾರ್ಖಾನೆಗಳಿಗೆ ಮಾತ್ರ ಪರವಾನಿಗೆ ನೀಡಬೇಕು. ಹಾಗೆಯೇ ಸರಕಾರಿ ಕಚೇರಿಗಳು, ಇಂಟರ್‌ನೆಟ್ ಸೆಂಟರ್‌ಗಳು ಅಥವಾ ಇನ್ನಾವುದೇ ಅಗತ್ಯ ಸ್ಥಳಗಳಲ್ಲಿ ಮೊಬೈಲ್ ಹಾಗೂ ಅಂತರ್ಜಾಲವನ್ನು ಬಳಸಲೇಬೇಕು ಎನ್ನುವಾಗ ಸೌರಶಕ್ತಿಯಿಂದ ಉತ್ಪಾದಿಸುತ್ತಿರುವ ವಿದ್ಯುತ್ ಅನ್ನು ಮಾತ್ರವೇ ಬಳಸಬೇಕು ಎನ್ನುವ ನಿರ್ಧಾರಕ್ಕೆ ಬರಬೇಕಾಗಿದೆ. ಇದಕ್ಕೆ ಬೇಕಾದದ್ದು ಇಚ್ಛಾಶಕ್ತಿ ಮತ್ತು ವಿವೇಕ.