ಮಂಡ್ಯ ರೈತರಿಗೆ ಪರ್ಯಾಯ ಕೃಷಿ ಪಾಠ ಹೇಳುತ್ತಿರುವ ದಂಪತಿ

Update: 2024-08-19 07:07 GMT

ಮಂಡ್ಯ: ಸಾಫ್ಟ್‌ವೇರ್, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಮತ್ತು ಸರಕಾರಿ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡವರು ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸಿಗುತ್ತಾರೆ. ಅವರಲ್ಲಿ ಬಹುತೇಕರು ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಆದರೆ, ಕೈತುಂಬಾ ಸಂಬಳದ ಸಾಫ್ಟ್‌ವೇರ್ ಇಂಜಿನಿಯರ್‌ನ ಪತ್ನಿ ತನ್ನೂರಿಗೆ ಬಂದು ಕೃಷಿ ಮಾಡುತ್ತಿರುವುದು, ಆಕೆಯ ಕೆಲಸಕ್ಕೆ ಪತಿಯೂ ಕೈಜೋಡಿಸಿರುವುದು ಗಮನ ಸೆಳೆದಿದೆ.

ಮದ್ದೂರು ತಾಲೂಕಿನ ಚಾಮಲಾಪುರ ಗ್ರಾಮದ ರಾಮಕೃಷ್ಣ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್. ಇವರ ಪತ್ನಿ ಕುಸುಮಾ, ಚಾಮಲಾಪುರ ಪಕ್ಕದಲ್ಲೇ ಇರುವ ಕೊತ್ತನಹಳ್ಳಿಯವರು. ಈಕೆಯ ತಂದೆ ಬೆಂಗಳೂರಿನಲ್ಲಿ ಉನ್ನತ ಸರಕಾರಿ ಉದ್ಯೋಗದಲ್ಲಿದ್ದವರು. ಕುಸುಮಾ ರಾಮಕೃಷ್ಣ ದಂಪತಿಯ ಇಬ್ಬರು ಪುತ್ರಿಯರಲ್ಲಿ ಒಬ್ಬಾಕೆ ಮದುವೆಯಾಗಿ ಅಮೆರಿಕದಲ್ಲಿದ್ದಾರೆ. ಮತ್ತೊಬ್ಬಳು ಅಮೆರಿಕದಲ್ಲೇ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ದಂಪತಿ ಬೆಂಗಳೂರಿನ ಜಯನಗರದಲ್ಲಿ ಸ್ವಂತ ಮನೆಯಲ್ಲಿ ಇದ್ದಾರೆ.

ಬೆಂಗಳೂರಿನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುವ ಕುಸುಮಾ ಅವರಿಗೆ ಮೊದಲಿನಿಂದಲೂ ಕೃಷಿಯ ಬಗ್ಗೆ ಮಮತೆ, ಸೆಳೆತ. ಆಕೆಗೆ ಸ್ಫೂರ್ತಿ ಕೃಷಿಕ ತಾತನಂತೆ. ಹಾಗಾಗಿ ತನ್ನ ಪ್ರೀತಿಯ ಮೊಮ್ಮಗಳಿಗೆ ತಾತ ಚಾಮಲಾಪುರದ ಬಳಿ ಮದ್ದೂರು-ಕೊಪ್ಪ ರಸ್ತೆಯಲ್ಲಿರುವ ಎರಡು ಎಕರೆ ಭೂಮಿಯನ್ನು ಕೊಟ್ಟಿದ್ದರು. ಆ ಎರಡು ಎಕರೆ ಬರಡು ಭೂಮಿ, ಕುಸುಮಾ ಅವರ ಶ್ರಮದಿಂದ ಈಗ ಡ್ರ್ಯಾಗನ್ ಫ್ರೂಟ್ ತೋಟವಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ.

ಪತಿಯ ಸಲಹೆ ಮೇರೆಗೆ ಕುಸಮಾ ಅವರು ತಾತ ನೀಡಿದ್ದ ಎರಡು ಎಕರೆ ಬರಡು ಭೂಮಿಯಲ್ಲಿ ಒಂದು ಕೊಳವೆ ಬಾವಿ ತೋಡಿಸಿ, ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಮೊದಲ ಭಾರಿಯ ಫಸಲು ಭರ್ಜರಿಯಾಗಿ ಬಂದಿದೆ. ತೋಟದ ಎದುರು ರಸ್ತೆಯಲ್ಲಿ ಸಾಗುವ ಜನರು ತಾಜಾ ತಾಜಾ ಡ್ರ್ಯಾಗನ್ ಫ್ರೂಟ್ ಸವಿಯನ್ನು ಸವಿದು, ತಮ್ಮ ಕುಟುಂಬದವರಿಗೂ ಕೊಂಡುಕೊಳ್ಳುತ್ತಿದ್ದಾರೆ. ಸುಮಾರು ದಿನಕ್ಕೆ 100 ಕೆಜಿ ಹಣ್ಣು ಮಾರಾಟವಾಗುತ್ತಿದೆ. ಕಿಲೋ ಹಣ್ಣಿಗೆ ಸುಮಾರು 200 ರೂ. ನಿಗದಿ ಮಾಡಲಾಗಿದೆ. ಹೆಚ್ಚುವರಿ ಹಣ್ಣನ್ನು ಬೆಂಗಳೂರಿನ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ಕುಸುಮಾ ಅವರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿ ಅಪ್ಪಟ ರೈತನ ಮಗಳಾಗಿದ್ದಾರೆ. ತೋಟದ ಸುತ್ತ ರಕ್ಷಕ ಬೇಲಿ ಹಾಕಿದ್ದಾರೆ. ಕೆಲವು ಕೆಲಸದವರು ಇರುತ್ತಾರೆ. ಜತೆಗೆ ಕಾವಲಿಗಾಗಿ ನಾಯಿಗಳು ಇವೆ. ಪ್ರತಿದಿನ ಕುಸುಮಾ ಅವರು ಬೆಂಗಳೂರಿನಿಂದ ಬಂದು ತೋಟದ ಕೆಲಸದಲ್ಲಿ ತೊಡಗುತ್ತಾರೆ. ಪತಿ ರಾಮಕೃಷ್ಣ ವಾರದ ರಜೆ ದಿನಗಳಲ್ಲಿ ಬಂದು ಪತ್ನಿಯ ಕೆಲಸಕ್ಕೆ ಕೈಜೋಡಿಸುತ್ತಿದ್ದಾರೆ. ಈ ಕೃಷಿಯಲ್ಲಿ ಲಾಭ ಮಾಡುವ ಉದ್ದೇಶ ದಂಪತಿಗೆ ಇಲ್ಲ. ಅದೊಂದು ಖುಷಿಯ ವಿಷಯವಂತೆ. ಮೇಲಾಗಿ ಮಂಡ್ಯ ಜಿಲ್ಲೆಯ ರೈತರಿಗೆ ಪರ್ಯಾಯ ಬೆಳೆಯ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶ ಎಂದು ಒತ್ತಿ ಹೇಳುತ್ತಾರೆ ಕುಸುಮಾ ಪತಿ ರಾಮಕೃಷ್ಣ.

ಡ್ರ್ಯಾಗನ್ ಫ್ರೂಟ್ ವಿಶೇಷತೆ ಏನು?

ಡ್ರ್ಯಾಗನ್ ಫ್ರೂಟ್ ಉಷ್ಟವಲಯದ ಬೆಳೆ. ಇದರ ಮೂಲ ಮೆಕ್ಸಿಕೋ ಹಾಗೂ ದಕ್ಷಿಣ ಅಮೆರಿಕ. ಇತ್ತೀಚೆಗೆ ಏಷ್ಯಾಖಂಡದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆರೋಗ್ಯಕ್ಕೆ ಉತ್ತಮವಾದ ಹಣ್ಣು ಇದಾಗಿದೆ. ಕರ್ನಾಟಕ ರಾಜ್ಯದಲ್ಲೂ ಬೆಳೆಯುತ್ತಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಅಷ್ಟಾಗಿ ಬೆಳೆಯುತ್ತಿಲ್ಲ. ಕೆಲವರು ಮನೆಯ ಅಂಗಳದಲ್ಲಿ ಒಂದೆರಡು ಸಸಿ ಹಾಕಿದ್ದಾರೆ ಅಷ್ಟೇ. ಕುಸುಮಾ ದಂಪತಿ ಕೃಷಿಯಲ್ಲಿ ಡ್ರ್ಯಾಗನ್ ಫ್ರೂಟ್‌ಗೂ ಸ್ಥಾನ ದೊರಕಿಸುವ ಪ್ರಯತ್ನ ಮಾಡಿದ್ದಾರೆ. ಆಸಕ್ತರಿಗೆ ಈ ಹಣ್ಣಿನ ಬೇಸಾಯದ ಬಗ್ಗೆ ಅವರಲ್ಲಿ ಮಾಹಿತಿ ಪಡೆಯಬಹುದು.

ನನ್ನ ಪತ್ನಿಯ ಆಸಕ್ತಿಯಿಂದಾಗಿ ಡ್ರ್ಯಾಗನ್ ಫ್ರೂಟ್ ಬೇಸಾಯ ಆರಂಭಿಸಿ ಫಸಲು ತೆಗೆಯುತ್ತಿದ್ದೇವೆ. ಭೂಮಿ ಹದಗೊಳಿಸುವುದು ಸೇರಿದಂತೆ ಸಾಕಷ್ಟು ಖರ್ಚು ಇದ್ದೇ ಇದೆ. ಉತ್ತಮ ಫಸಲು ಬರುತ್ತಿರುವುದು ನನ್ನ ಪತ್ನಿಗೆ, ನನಗೂ ಖುಷಿ ನೀಡಿದೆ. ಇದಕ್ಕಾದ ವೆಚ್ಚವೆಷ್ಟು, ಲಾಭದ ನಿರೀಕ್ಷೆ ಏನು? ಎಂಬುದು ಅಗತ್ಯ ಇಲ್ಲ. ಮುಖ್ಯವಾಗಿ ಮಂಡ್ಯ ರೈತರು ಕಬ್ಬು, ಭತ್ತ, ರಾಗಿಯಂತಹ ಸಾಂಪ್ರದಾಯಿಕ ಬೆಳೆಗಳಿಗೆ ಜೋತುಬಿದ್ದಿದ್ದು, ಬದಲಾಗಬೇಕಾಗಿದೆ. ಯಾವುದೇ ಬೆಳೆ ಒಂದು ಜಿಲ್ಲೆ, ಪ್ರದೇಶಕ್ಕೆ ಸೀಮಿತವಲ್ಲ. ಲಾಭ ತರುವಂತಹ ಪರ್ಯಾಯ ಬೆಳೆಗಳ ಕಡೆಗೆ ಗಮನಹರಿಸಬೇಕು. ಆ ನಿಟ್ಟಿನಲ್ಲಿ ನನ್ನ ಪತ್ನಿ ಡ್ರ್ಯಾಗನ್ ಫ್ರೂಟ್ ಬೆಳೆದು ಮಾದರಿಯಾಗುತ್ತಿದ್ದಾರೆ.

-ರಾಮಕೃಷ್ಣ, ಕುಸುಮಾ ಪತಿ, ಸಾಫ್ಟ್‌ವೇರ್ ಇಂಜಿನಿಯರ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News