ನೆಲಸಮಗೊಂಡಿದ್ದ ಜಾಗದಲ್ಲೇ ಹೊಸ ಮನೆ ನಿರ್ಮಿಸಿಕೊಟ್ಟ ಸಚಿವ ಜಾರ್ಜ್

Update: 2024-08-26 07:18 GMT

ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಮನೆ ನೆಲಸಮಗೊಂಡು ಅಕ್ಷರಶಃ ಬೀದಿಪಾಲಾಗಿ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ವಿಧವೆಯೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕೊಟ್ಟ ಮಾತಿನಂತೆ ಸ್ವಂತ ಖರ್ಚಿನಲ್ಲಿ ಸುಸಜ್ಜಿತವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ.

2022ರಲ್ಲಿ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಅತೀವೃಷ್ಟಿಯಿಂದಾಗಿ ಹಲವಾರು ಮನೆಗಳು ನೆಲಸಮಗೊಂಡಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಜಾದ್ ನಗರದಲ್ಲಿ ಭಾರೀ ಮಳೆಯಿಂದಾಗಿ ಲೀಲಾ ಎಂಬವರ ಮನೆಯೂ ನೆಲಸಮಗೊಂಡಿತ್ತು. ತನ್ನ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನೊಂದಿಗೆ ವಾಸವಾಗಿದ್ದ ಕಚ್ಚಾ ಮನೆ ನೆಲಸಮಗೊಂಡಿದ್ದರಿಂದ ಲೀಲಾ ಹಾಗೂ ಆಕೆಯ ಮಕ್ಕಳು ಅಕ್ಷರಶಃ ಬೀದಿಪಾಲಾಗಿದ್ದರು. ನಂತರ ಸಾಲಸೂಲ ಮಾಡಿಕೊಂಡು ಪ್ಲಾಸ್ಟಿಕ್ ಟಾರ್ಪಲ್, ತಗಡಿನ ಶೀಟುಗಳನ್ನು ಬಳಸಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡಲಾರಂಭಿಸಿದ್ದರು.

ಮೂಲಸೌಕರ್ಯಗಳಿಲ್ಲದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಲೀಲಾ ತನ್ನ ಮಕ್ಕಳನ್ನು ಸಾಕಲು ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಸಂಕಷ್ಟ ನೋಡಲಾಗದೇ ಇಬ್ಬರು ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಪತಿಯನ್ನು ಕಳೆದುಕೊಂಡು ಅನಾಥರಾಗಿದ್ದ ಲೀಲಾ ಇದ್ದ ಒಂದು ಮನೆಯನ್ನೂ ಕಳೆದುಕೊಂಡು ಮಾನಸಿಕವಾಗಿ ಜರ್ಝರಿತವಾಗಿದ್ದರು.

ನಾಲ್ವರು ಮಕ್ಕಳನ್ನು ಕೂಲಿ ಕೆಲಸ ಮಾಡಿಕೊಂಡು ಸಾಕುತ್ತಿದ್ದ ಮಹಿಳೆಯ ದಯನೀಯ ಸ್ಥಿತಿ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಈ ಸುದ್ದಿಯನ್ನು ಗಮನಿಸಿದ್ದ ಕೆ.ಜೆ.ಜಾರ್ಜ್ ಮಹಿಳೆಯ ಸಂಕಷ್ಟಕ್ಕೆ ನೆರವಾಗಲು ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿಕೊಡಲು ಅಂದು ತೀರ್ಮಾನಿಸಿದ್ದರು. ಕೂಡಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದ ತಮ್ಮ ಮಾಲಕತ್ವದ ಕೆಳಚಂದ್ರ ಕಾಫಿ ಎಸ್ಟೇಟ್‌ನ ವ್ಯವಸ್ಥಾಪಕರಿಗೆ ಕರೆ ಮಾಡಿ, ಮಹಿಳೆಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕೆಂದು ಸೂಚಿಸಿದ್ದರು. ಅದರಂತೆ ಎಸ್ಟೇಟ್‌ನ ವ್ಯವಸ್ಥಾಪಕರು ಮಹಿಳೆಯನ್ನು ಭೇಟಿಯಾಗಿ ಜಾರ್ಜ್ ಸೂಚನೆಯಂತೆ ಮಹಿಳೆಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.

ನಂತರ ಮನೆಯ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಂಡ ಜಾರ್ಜ್ ಮಾಲಕತ್ವದ ಎಸ್ಟೇಟ್‌ನ ವ್ಯವಸ್ಥಾಪಕರು ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಎರಡು ವರ್ಷಗಳ ಬಳಿಕ ಲೀಲಾ ಅವರಿಗಾಗಿ ನಿರ್ಮಿಸುತ್ತಿದ್ದ ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಜೆ.ಜಾರ್ಜ್ ಅವರು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಮೂಲಕ ಹೊಸ ಮನೆಯನ್ನು ಸಂತ್ರಸ್ತೆ ಲೀಲಾ ಅವರಿಗೆ ಇತ್ತೀಚೆಗೆ ಹಸ್ತಾಂತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್.ಶಿವು

contributor

Similar News