ಕೆಸೆಟ್ ಪರೀಕ್ಷಾ ಪ್ರಶ್ನೆಗಳಲ್ಲಿ ಕರ್ನಾಟಕದ ಪ್ರದರ್ಶನ ಕಲೆಗಳ ನಿರ್ಲಕ್ಷ್ಯ
ಕನ್ನಡ ಸಂಸ್ಕೃತಿ ಕುರಿತು ಈ ಪರೀಕ್ಷಾ ಪ್ರಾಧಿಕಾರಗಳಿಗೆ ಯಾಕಿಷ್ಟು ನಿರ್ಲಕ್ಷ್ಯ? ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಯಲ್ಲೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಪರಿಗಣಿಸದೇ ಇರುವುದು ಅಕ್ಷಮ್ಯ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (KSET)ಗಳನ್ನು ನಿರ್ವಹಿಸುತ್ತದೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳ ಅಧೀನದಲ್ಲಿರುವ ಕಾಲೇಜುಗಳಲ್ಲಿ ಹಾಗೂ ಖಾಸಗಿ ಕಾಲೇಜುಗಳಲ್ಲಿ, ಉಪನ್ಯಾಸಕರಾಗಲು ಬಯಸುವವರು ಈ ಪರೀಕ್ಷೆಯನ್ನು ಖಡ್ಡಾಯವಾಗಿ ಪಾಸ್ ಮಾಡಲೇಬೇಕಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರಿಗೆ ಯಾವುದೇ ಕಾಲೇಜುಗಳಲ್ಲೂ ಉದ್ಯೋಗಾವಕಾಶ ಇಲ್ಲ. ಹೀಗಾಗಿ ಕೆಸೆಟ್ ಪರೀಕ್ಷೆ ಕಡ್ಡಾಯ. ೨೦೨೧ರ ವರೆಗೂ ಮೈಸೂರು ವಿಶ್ವವಿದ್ಯಾನಿಲಯವೇ ಕೆಸೆಟ್ ಪರೀಕ್ಷೆಗಳನ್ನು ನಿರ್ವಹಿಸುತ್ತಿತ್ತು. ಕಾರಣಾಂತರದಿಂದ 2022ರಲ್ಲಿ ಅದು ಪರೀಕ್ಷೆಗಳನ್ನೇ ನಡೆಸಲಿಲ್ಲ. ೨೦೨೩ ರಲ್ಲಿ ಕೆಸೆಟ್ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರಕಾರ ವಹಿಸಿತು.
ಈಗ ತಕರಾರಿರುವುದು ಈ ಪರೀಕ್ಷೆಯ ಬಗ್ಗೆಯಲ್ಲ, ಪರೀಕ್ಷೆ ನಡೆಯುವ ರೀತಿಯ ಕುರಿತೂ ಅಲ್ಲ, ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಿದ್ದರ ಕುರಿತು. ಪ್ರದರ್ಶಕ ಕಲೆಗಳ ವಿಭಾಗದಲ್ಲಿ ಇತ್ತೀಚಿನ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ನೋಡಲೇಬೇಕು.
ಒಟ್ಟು ನೂರು ಪ್ರಶ್ನೆಗಳಿವೆ. ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಪ್ಶನ್ ಉತ್ತರಗಳಿವೆ. ಸರಿಯಾದದ್ದನ್ನು ಟಿಕ್ ಮಾಡಿದವರಿಗೆ ಅಂಕ ಸಿಗುತ್ತದೆ. ಸರಿ. ಆದರೆ ಈ ಪ್ರಶ್ನೆಪತ್ರಿಕೆ ನೋಡಿದ ಪರೀಕ್ಷಾರ್ಥಿಗಳಿಗೆ ದಂಗು ಬಡಿಸಿದ್ದದಂತೂ ಸತ್ಯ. ಯಾಕೆಂದರೆ ಬಹುತೇಕ ಎಲ್ಲಾ ಪ್ರಶ್ನೆಗಳೂ ವಿದೇಶಿ ರಂಗಭೂಮಿ ಇಲ್ಲವೇ ಸಂಸ್ಕೃತ ರಂಗಭೂಮಿಗೆ ಸಂಬಂಧಿಸಿದ್ದವೇ ಆಗಿವೆ. ರಂಗಭೂಮಿ ಅಂದರೆ ಇಷ್ಟೆಯೇ?
ಪರೀಕ್ಷೆ ನಡೆಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ. ಪಾಸಾದವರು ಉಪನ್ಯಾಸ ಕೊಡಬೇಕಾದದ್ದು ಕರ್ನಾಟಕದ ಕಾಲೇಜುಗಳಲ್ಲಿ. ಉಪನ್ಯಾಸಕರಿಗೆ ಇರಬೇಕಾದದ್ದು ಕರ್ನಾಟಕದ ರಂಗಭೂಮಿ ಹಾಗೂ ಸಂಸ್ಕೃತಿಯ ಕುರಿತ ಜ್ಞಾನ. ಆ ಕುರಿತ ಪ್ರಶ್ನೆಗಳಿಲ್ಲದ ಪತ್ರಿಕೆ ಕನ್ನಡ ರಂಗಭೂಮಿಗೆ ಮಾಡಿದ ದ್ರೋಹವಲ್ಲದೇ ಮತ್ತೇನು?
ಪ್ರದರ್ಶನ ಕಲೆಗಳು ಅಂದರೆ ಸಂಸ್ಕೃತ ಭೂವಿಷ್ಟ ಕಲೆಗಳು ಇಲ್ಲವೇ ವಿದೇಶಿ ಕಲೆಗಳು ಮಾತ್ರವಲ್ಲ. ಕರ್ನಾಟಕ ಎನ್ನುವುದು ಪ್ರದರ್ಶನ ಕಲೆಗಳ ಆಗರ. ಇಡೀ ದೇಶದಲ್ಲೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯ ನಮ್ಮದು. ರಂಗಭೂಮಿ ಎನ್ನುವುದೇ ಎಲ್ಲಾ ಪ್ರದರ್ಶನ ಕಲೆಗಳ ಸಮ್ಮಿಲನ. ಕರ್ನಾಟಕದಲ್ಲಿ ವೈವಿಧ್ಯಮಯ ರಂಗಭೂಮಿ ಪ್ರಕಾರಗಳಿವೆ. ಕಂಪೆನಿ ನಾಟಕಗಳ ವೃತ್ತಿ ರಂಗಭೂಮಿ, ನಗರ ಕೇಂದ್ರಿತ ಹಾಗೂ ಗ್ರಾಮೀಣ ಹವ್ಯಾಸಿ ರಂಗಭೂಮಿ, ರೆಪರ್ಟರಿ ರಂಗಭೂಮಿ, ಜಾನಪದ ರಂಗಭೂಮಿ, ಪೌರಾಣಿಕ ರಂಗಭೂಮಿ, ಮಕ್ಕಳ ರಂಗಭೂಮಿ. ಹೀಗೆ ಹಲವಾರು ಪ್ರಕಾರಗಳು ಸೇರಿ ಕನ್ನಡ ರಂಗ ಸಂಸ್ಕೃತಿ ಎನ್ನುವುದು ಕಾಲಕಾಲಕ್ಕೆ ವಿಜೃಂಭಿಸುತ್ತಲೇ ಬಂದಿದೆ.
ಆದರೆ ಈ ರಂಗ ಪ್ರಕಾರಗಳ ಕುರಿತು ಪ್ರಶ್ನೆಗಳೇ ಇಲ್ಲವೆಂದಮೇಲೆ ಪ್ರಶ್ನೆ ಪತ್ರಿಕೆ ತಯಾರಿಸುವವರು ಕನ್ನಡ ರಂಗಭೂಮಿಯನ್ನು ಪರಿಗಣಿಸಿಲ್ಲವೆಂದೇ ಅರ್ಥ. ಬಹುಷಃ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರೋ ಅಥವಾ ಅವರ ಶಿಷ್ಯರೋ ಈ ರೀತಿಯ, ಕನ್ನಡ ರಂಗಭೂಮಿಗೆ ಹೊರತಾದ ಪ್ರಶ್ನೆಪತ್ರಿಕೆಯನ್ನು ಸಿದ್ಧಮಾಡಿಸಿದ ಮಾಹಿತಿ ಇದೆ. ಈ ಅರೆ ಪಂಡಿತರು ಪ್ರದರ್ಶನ ಕಲೆ ಎಂದರೆ ಯಾಕೆ ವಿದೇಶಿ ಇಲ್ಲವೇ ಸಂಸ್ಕೃತ ರಂಗಭೂಮಿ ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಇನ್ನೂ ಆ ಮೋಹದಿಂದ ಹೊರಗೆ ಬಂದಂತಿಲ್ಲ ಅಥವಾ ಕನ್ನಡ ರಂಗಭೂಮಿಯ ಕುರಿತು ಅವರಿಗೆ ಹೆಚ್ಚು ಅರಿವೂ ಇದ್ದಂತಿಲ್ಲ.
ಅಕಾಡಮಿಕ್ ಆಗಿ ಪ್ರದರ್ಶನ ಕಲೆ ಕುರಿತು ಅಭ್ಯಾಸ ಮಾಡುವವರಿಗೆ ಗ್ರೀಕ್ ರಂಗಭೂಮಿ, ಎಪಿಕ್ ರಂಗಭೂಮಿ, ಸಂಸ್ಕೃತ ರಂಗಭೂಮಿ ಹಾಗೂ ಅನ್ಯ ದೇಶಗಳ ರಂಗಭೂಮಿ ಕುರಿತು ಮಾಹಿತಿ ಇರಬೇಕಾಗುತ್ತದೆ. ಅದಕ್ಕೂ ಮಿಗಿಲಾಗಿ ಕನ್ನಡ ರಂಗಭೂಮಿಯ ಬಗ್ಗೆ ಅಪಾರವಾದ ಅರಿವು ಹಾಗೂ ಅನುಭವ ಇರಬೇಕಾಗುತ್ತದೆ. ಬರೀ ಮಾಹಿತಿಗಳೇ ವಿಜೃಂಭಿಸಿ, ನಮ್ಮ ರಂಗ ಸಂಸ್ಕೃತಿಯನ್ನೇ ಕಡೆಗಣಿಸಿದರೆ ಅದು ಕನ್ನಡ ದ್ರೋಹ ಎನ್ನಿಸುತ್ತದೆ.
ನೂರು ಪ್ರಶ್ನೆಗಳಲ್ಲಿ ಕನಿಷ್ಠ ಅರ್ಧದಷ್ಟಾದರೂ ಪ್ರಶ್ನೆಗಳು ಕನ್ನಡ ನಾಡಿನ ಪ್ರದರ್ಶನ ಕಲೆಗಳ ಕುರಿತು ಇರಬೇಕಾದದ್ದು ಅಪೇಕ್ಷಣೀಯ. ಆದರೆ ಹಾಗಿಲ್ಲದೆ ಇರುವುದು ಕನ್ನಡ ಸಂಸ್ಕೃತಿಗೆ ಮಾಡಿದ ಅಪಮಾನ.
ಈ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದರೆ ಸರಿಸುಮಾರು ಶೇ. ೨೦ರಷ್ಟಾದರೂ ಪ್ರಶ್ನೆಗಳು ಕರ್ನಾಟಕ ಪ್ರದರ್ಶನ ಕಲೆಗಳ ಕುರಿತು ಇರುತ್ತಿದ್ದವು. ಆದರೆ ಈ ಸಲ ಅವೂ ಇಲ್ಲವಾಗಿವೆ. ಪ್ರಶ್ನೆ ಪತ್ರಿಕೆಗಳು ಹೀಗೆ ಕರ್ನಾಟಕ ಸಂಸ್ಕೃತಿ ರಹಿತವೆಂದು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಗೊತ್ತಾದರೆ ಅವರೂ ಕನ್ನಡ ಪ್ರದರ್ಶನ ಕಲೆಗಳ ಬಗ್ಗೆ ತಾತ್ಸಾರ ಹೊಂದಿ ಅಭ್ಯಾಸ ಅಧ್ಯಯನ ಮಾಡುವ ಗೋಜಿಗೇ ಹೋಗದೆ ಅನ್ಯ ರಾಜ್ಯ, ಅನ್ಯ ದೇಶದ ರಂಗಭೂಮಿ ಹಾಗೂ ಸಂಸ್ಕೃತ ರಂಗಭೂಮಿಯನ್ನೇ ಪೂರ್ವಭಾವಿ ತಯಾರಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೇನಾದರೂ ಆದರೆ ಮುಂದೆ ಉಪನ್ಯಾಸಕರಾಗುವವರಿಗೆ ಕರ್ನಾಟಕದ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಮಾಹಿತಿ, ಅನುಭವ ಇಲ್ಲದೆ ಹೋಗಿ ವಿದ್ಯಾರ್ಥಿಗಳಿಗೆ ಮತ್ತದೇ ಅನ್ಯ ಭಾಷಾ ಪ್ರದರ್ಶನ ಕಲೆಗಳ ಬಗ್ಗೆ ಹೆಚ್ಚಾಗಿ ಪಾಠ ಮಾಡುತ್ತಾರೆ. ಇದರಿಂದಾಗಿ ಪ್ರದರ್ಶನ ಕಲೆಗಳ ಕುರಿತು ಕಲಿಯಲು ಕಾಲೇಜಿಗೆ ಬರುವವರಿಗೂ ಕರ್ನಾಟಕದ ಕಲೆಗಳ ಬಗ್ಗೆ ಅರಿವು ಅಷ್ಟಕ್ಕಷ್ಟೇ ದೊರೆಯುತ್ತದೆ.
ಇನ್ನೊಂದು ಪ್ರಮುಖ ಸಂಗತಿ ಏನೆಂದರೆ. ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮತ್ತೆ ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲದೇ ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಆಯ್ಕೆಯಾಗಬಹುದಾಗಿದೆ. ಹೀಗೆ ಆಯ್ಕೆಯಾದವರಿಗೆ ಕರ್ನಾಟಕ ಪ್ರದರ್ಶನ ಕಲೆಗಳ ಕುರಿತು ಆಳವಾದ ಅರಿವೂ ಇರಬೇಕಾಗುತ್ತದೆ. ಅಂತಹವರಿಗೆ ಕೆಸೆಟ್ ಪರೀಕ್ಷಾ ಹಂತದಲ್ಲೇ ಕರ್ನಾಟಕ ಕಲೆ ಸಂಸ್ಕೃತಿ ಕುರಿತು ಆಸಕ್ತಿ ಅರಿವು ಮೂಡಿಸಲು ನೆಲಮೂಲ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಪ್ರಶ್ನಾವಳಿಗಳು ಇರಬೇಕಾದದ್ದು ಅತ್ಯಗತ್ಯವಾಗಿದೆ.
ನಮ್ಮ ಭಾಷೆ, ನಮ್ಮ ನಾಡಿನ ಸಂಸ್ಕೃತಿ ಕಲೆಗಳ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಹೀಗೆ ಕನ್ನಡತನವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೂ ಪ್ರಶ್ನೆ ಪತ್ರಿಕೆ ತಯಾರಿ ಮಾಡುವವರಲ್ಲಿ ಈ ರೀತಿಯ ಉಪೇಕ್ಷೆ ಅತಿಯಾಗಿದೆ. ಇನ್ನು ಮುಂದೆ ನಡೆಯುವ (KSET) ಪ್ರದರ್ಶನ ಕಲೆಗಳ ಪರೀಕ್ಷೆಯಲ್ಲಾದರೂ ಈ ರೀತಿ ಕನ್ನಡ ರಂಗಭೂಮಿಯನ್ನು ನಿರ್ಲಕ್ಷಿಸುವ ಪ್ರಯತ್ನ ನಡೆಯದಿರಲಿ. ಈ ರೀತಿ ಆಗದಂತೆ ವಿಶ್ವ ವಿದ್ಯಾನಿಲಯಗಳ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರು ಮುನ್ನೆಚ್ಚರಿಕೆ ವಹಿಸಲಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಶ್ನೆ ಪತ್ರಿಕೆ ತಯಾರಿಸುವವರಿಗೆ ಗೈಡ್‌ಲೈನ್ ರೂಪಿಸಬೇಕು. ಕರ್ನಾಟಕದ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಪ್ರಶ್ನಾವಳಿಗಳು ಇರಲೇಬೇಕು.