ಗುಡಿಬಂಡೆ ವಾರದ ಸಂತೆ ನಡೆಸಲು ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ಗುಡಿಬಂಡೆ: ಪಟ್ಟಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ನಡೆಸದೇ ಇರುವುದರಿಂದ ಅನೇಕ ಬಡ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಮನೆಗೆ ಬೇಕಾಗಿರುವಂತಹ ದಿನಸಿ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅಂಗಡಿಗಳಲ್ಲಿ ದುಬಾರಿ ಬೆಲೆಗಳನ್ನು ಕೊಟ್ಟು ತರುವಂತೆ ಆಗುತ್ತಿದೆ. ಆದ್ದರಿಂದ ಜನರ ಅನುಕೂಲಕ್ಕಾಗಿ ವಾರದ ಸಂತೆಯನ್ನು ಪ್ರಾರಂಭಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಬ್ರಾಹ್ಮನರಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಪ್ರತೀ ರವಿವಾರ ಗುಡಿಬಂಡೆ ವಾರದ ಸಂತೆ ನಡೆಯುತ್ತಿತ್ತು. ಈ ಸಂತೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಸಂತೆಯಲ್ಲಿ ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವಂತಹ ಎಲ್ಲ ರೀತಿಯ ಸರಕು ಸಾಮಗ್ರಿಗಳು ಒಂದೇ ಸೂರಿನ ಅಡಿಯಲ್ಲಿ ಸಿಗುತ್ತಿದ್ದವು ಎಂದು ಸಾರ್ವಜನಿಕರು ಮಾತಾಗಿದೆ.
ಗ್ರಾಮೀಣ ಭಾಗದ ಜನರು ಸೇರಿದಂತೆ ಪಟ್ಟಣದ ನಿವಾಸಿಗಳು ವಾರದ ಪೂರ್ತಿ ದುಡಿಮೆ ಮಾಡಿ ಈ ಸಂತೆಗೆ ಬಂದು ಮನೆಗೆ ಬೇಕಾಗುವಂತಹ ಸರಕುಗಳು, ತರಕಾರಿ, ಬಟ್ಟೆಗಳು ಸೇರಿದ್ದಂತೆ ಇನ್ನಿತರ ವಸ್ತುಗಳು ಕೊಂಡು ಕೊಂಡು ಹೋಗುತ್ತಿದ್ದರು. ಸಂತೆಯಲ್ಲಿ ತರಕಾರಿಗಳು, ದಿನಸಿ ಸಾಮಾಗ್ರಿಗಳು, ಬಟ್ಟೆಗಳು, ಮಕ್ಕಳಿಗೆ ತಿಂಡಿ ತಿನಿಸುಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಿದ್ದವು.
ಕೋವಿಡ್ ನಂತರದಿಂದ ಇದುವರೆಗೂ ಸಹ ವಾರದ ಸಂತೆ ನಡೆಸದೇ ಇರುವುದರಿಂದ ವಸ್ತುಗಳನ್ನು ಕೊಳ್ಳಲು ಅಂಗಡಿಗಳಿಗೆ ಹೋದರೆ ದುಬಾರಿ ಹಣವನ್ನು ಕೊಟ್ಟು ತರುವಂತ ಪರಿಸ್ಥಿತಿ ಎದುರಾಗಿದೆ. ಪ್ರತಿ ದಿನ ಕೂಲಿ ಮಾಡಿಕೊಂಡು ಅದರಿಂದ ಬರುವಂತಹ ಹಣದಲ್ಲಿ ಮನೆಗೆ ಬೇಕಾಗುವಂತಹ ವಸ್ತುಗಳನ್ನು ಕೊಂಡು ಕೊಂಡು ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬುವುದು ಸ್ಥಳೀಯರ ಆರೋಪವಾಗಿದೆ.
ಕೋವಿಡ್ ದೂರವಾಗಿ ಕೆಲವು ವರ್ಷಗಳು ಕಳೆದರೂ ಗುಡಿಬಂಡೆ ಪಟ್ಟಣ ಪಂಚಾಯತ್‌ಅಧಿಕಾರಿಗಳು ಮಾತ್ರ ಸಂತೆಯನ್ನು ಪ್ರಾರಂಭಿಸಲು ಯಾವುದೇ ರೀತಿಯಲ್ಲಿ ಕ್ರಮವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂತೆಯಿಂದ ಪಟ್ಟಣ ಪಂಚಾಯತ್‌ಗೆ ವಿವಿಧ ರೀತಿಯಲ್ಲಿ ಲಾಭವಾಗುವುದರ ಜೊತೆಗೆ ಸುಂಕ ವಸೂಲಾತಿಯಿಂದ ಆದಾಯವು ಹೆಚ್ಚಾಗುತ್ತದೆ.
ವಾರದ ಸಂತೆಯಲ್ಲಿ ವ್ಯಾಪಾರ ಮಾಡುವಂತಹ ವ್ಯಾಪಾರಸ್ಥರಿಗೆ ಇದರಿಂದ ತುಂಬಾ ಆರ್ಥಿಕವಾಗಿ ತೊಂದರೆಯಾಗಿರುವುದರಿಂದ ಕೆಲವರು ಸಂತೆ ವ್ಯಾಪಾರವನ್ನು ಬಿಟ್ಚು ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ ಎಂದು ಬಹುತೇಕರ ಮಾತಾಗಿದೆ. ತಾಲೂಕಿನ ಅನೇಕ ಜನರ ಜೀವನೋಪಾಯಕಿದ್ದ ರವಿವಾರ ಸಂತೆಯನ್ನು ಶಾಸಕ ಸುಬ್ಬಾರೆಡ್ಡಿಯವರು, ಪಟ್ಟಣ ಪಂಚಾಯತ್ ಅಧಿಕಾರಿಗಳು ನಡೆಸಲು ಕ್ರಮವಹಿಸುವವರೇ ಎಂಬುದು ಅನೇಕ ಸಾರ್ವಜನಿಕರ ಆಶಯವಾಗಿದೆ.
ಗುಡಿಬಂಡೆ ವಾರದ ಸಂತೆಯನ್ನು ನಡೆಸಲು ಸಾರ್ವಜನಿಕರಿಂದ ನನಗೆ ಮನವಿ ಪತ್ರಗಳು ಬಂದರೆ ಸಂತೆಯನ್ನು ಮುಂದುವರಿಸಲು ಕ್ರಮ ವಹಿಸಲಾಗುವುದು.
-ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ, ಗುಡಿಬಂಡೆ
ಸುಮಾರು ವರ್ಷಗಳಿಂದ ನಡೆಯುತ್ತಿದ್ದ ಗುಡಿಬಂಡೆ ಸಂತೆಯು ನಿಂತಿರುವುದರಿಂದ ಹಳ್ಳಿಯ ಜನರಿಗೆ ಪಟ್ಟಣದ ಪ್ರದೇಶದ ಬಡಜನರಿಗೆ ತುಂಬಾ ತೊಂದರೆಯಾಗಿದೆ. ಸಂತೆಯನ್ನು ನಂಬಿಕೊಂಡಿದ್ದ ಜನರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಮತ್ತೇ ಪ್ರತಿ ರವಿವಾರವು ನಿರಂತರವಾಗಿ ಸಂತೆಯನ್ನು ಪ್ರಾರಂಭಿಸಿ.
-ಚೆಂಡೂರು ರಮಣ, ತಾಲೂಕು ಸಂಚಾಲಕ, ದಸಂಸ