‘ಮೋದಿ ಮುಖ’ದಿಂದ ಬಿಜೆಪಿ ನಾಯಕರು ಕಲಿಯಬೇಕಿರುವ ಪಾಠ...

Update: 2024-03-17 06:44 GMT

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಕರ್ನಾಟಕದ 20 ಅಭ್ಯರ್ಥಿಗಳ ಹೆಸರೂ ಇದೆ. ನಿರೀಕ್ಷೆಯಂತೆ ಘಟಾನುಘಟಿ ನಾಯಕರುಗಳಿಗೇ ಟಿಕೆಟ್ ಕೈತಪ್ಪಿದೆ. ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಮೈಸೂರಿನಿಂದ ಪ್ರತಾಪ ಸಿಂಹ, ಬಿಜೆಪಿಯ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮಂತ್ರಿ ಈಶ್ವರಪ್ಪನ ಮಗ ಕಾಂತೇಶ್ ಟಿಕೆಟ್ ತಪ್ಪಿಸಿಕೊಂಡಿದ್ದಾರೆ. ಇವರೆಲ್ಲ ಟಿಕೆಟ್‌ಗಾಗಿ ಭಾರೀ ಪ್ರಯತ್ನಪಟ್ಟವರು, ಅಷ್ಟೇ ಪ್ರಮಾಣದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದವರು. ಇನ್ನು ದಾವಣಗೆರೆಯ ಜಿ.ಎಂ. ಸಿದ್ದೇಶ್ವರ್ ಹೇಗೋ ತಮ್ಮ ಹೆಂಡತಿಗೆ ಟಿಕೆಟ್ ದಕ್ಕಿಸಿಕೊಳ್ಳುವಷ್ಟರ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದರೆ, ಶೋಭಾ ಕರಂದ್ಲಾಜೆ ತನ್ನ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಎತ್ತಂಗಡಿಯಾಗಿ, ಹೊಸ ಕ್ಷೇತ್ರಕ್ಕೆ ವರ್ಗಾಯಿಸಲ್ಪಟ್ಟಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿದ್ದ ಇಂತಹವರ ಜೊತೆ ಬಿಜೆಪಿ ಹೈಕಮಾಂಡ್ ಇಷ್ಟು ನಿಕೃಷ್ಟವಾಗಿ ನಡೆದುಕೊಳ್ಳಲು ಸಾಧ್ಯವಾದದ್ದು ಹೇಗೆ? ಹೀಗೆ ಹೋಲ್‌ಸೇಲಾಗಿ ಇವರನ್ನೆಲ್ಲ ಎದುರುಹಾಕಿಕೊಂಡರೆ ತನಗೆ ಭಿನ್ನಮತದ ಬಿಸಿ ತಟ್ಟಬಹುದೆನ್ನುವ ಅಳುಕು ಬಿಜೆಪಿ ಹೈಕಮಾಂಡಿಗೆ ಇಲ್ಲವಾದದ್ದೇಕೆ?

ಈ ಪ್ರಶ್ನೆಗೆ, ಈಗ ಟಿಕೆಟ್ ತಪ್ಪಿಸಿಕೊಂಡು ಹ್ಯಾಪು ಮೋರೆ ಹಾಕಿಕೊಂಡಿರುವ ಈ ನಾಯಕರೇ ಉತ್ತರ! ಒಬ್ಬ ಜನಪ್ರತಿನಿಧಿಯಾದವನಿಗೆ ತನ್ನದೇ ಐಡೆಂಟಿಟಿ ಇರಬೇಕು, ಜನರ ನಡುವೆ ವೈಯಕ್ತಿಕ ವರ್ಚಸ್ಸು ಸೃಷ್ಟಿಸಿಕೊಂಡಿರಬೇಕು. ಆದರೆ ಇವರೆಲ್ಲ ಮಾಡಿದ್ದೇನು? ‘‘ನಮ್ಮ ಮುಖ ನೋಡಿ ಮತ ಹಾಕಬೇಡಿ, ಮೋದಿ ಮುಖ ನೋಡಿ ವೋಟು ಹಾಕಿ’’ ಎಂದು ಬಹಿರಂಗವಾಗಿ ಬೇಡಿಕೊಂಡು ತಿರುಗಾಡಿದರು. ‘ತಾವು ಗೆದ್ದಿದ್ದೇ ಮೋದಿ ವರ್ಚಸ್ಸಿನಿಂದ’ ಎಂಬ ಸೃಷ್ಟಿತ ಅರೆಸುಳ್ಳನ್ನು, ಸಂಪೂರ್ಣ ಸತ್ಯವೆಂದು ತಾವೂ ಸ್ವೀಕರಿಸಿ, ಅದನ್ನು ಯಾವ ಮುಜುಗರವಿಲ್ಲದೆ ಜನರ ಮುಂದೆಯೂ ಹೇಳಿಕೊಂಡು ಓಡಾಡಿದರು. ಇದರಿಂದಾಗಿ ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಜನರ ನಡುವೆ ಇವರ ಅಸ್ತಿತ್ವ ಟೊಳ್ಳಾಗುತ್ತಾ ಬಂತು. ಎಲ್ಲದಕ್ಕೂ ಮೋದಿಯೇ ಕಾರಣ, ಇವರ ಕೊಡುಗೆ ಏನೂ ಇಲ್ಲ; ಇವರಿಗೆ ಕೊಡುಗೆ ಕೊಡುವ ಸಾಮರ್ಥ್ಯವೂ ಇಲ್ಲ ಎಂಬ ಅಭಿಪ್ರಾಯ ಉತ್ಪಾದನೆಯಾಗುತ್ತಾ ಬಂತು. ಆ ಉತ್ಪಾದನೆಯನ್ನು ನಮ್ಮ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾಗಳ ಚಕ್ರವ್ಯೆಹದ ಮೂಲಕ ವ್ಯವಸ್ಥಿತವಾಗಿ ಉದ್ದೀಪಿಸಲಾಯ್ತು.

ಮೋದಿಯ ಮುಖವನ್ನು ಅಡವಿಟ್ಟು ವೋಟು ಕೇಳಿದ ಇವರನ್ನು; ಅಧಿಕಾರಕ್ಕೇರಿದ ನಂತರವೂ ಮೋದಿಯ ಜಪ ಮಾಡುವುದರಲ್ಲೇ ಮಗ್ನರಾದ ಇವರನ್ನು; ಮೋದಿಯಿಂದಲೇ ಮತ್ತೊಮ್ಮೆ ಗೆದ್ದುಬಿಡುತ್ತೇವೆ ಎಂಬ ಹೊಣೆಗೇಡಿ ಹೇಳಿಕೆ ನೀಡುವ ಇವರನ್ನು ಜನರಾಗಲಿ, ಬಿಜೆಪಿ ಹೈಕಮಾಂಡಾಗಲಿ ಗಂಭೀರವಾಗಿ ಪರಿಗಣಿಸಲು ಸಾಧ್ಯವಾದೀತೆ? ಮೊದಲೇ ಹೇಳಿದಂತೆ ಟೊಳ್ಳಾದರು.

ಏಕವ್ಯಕ್ತಿ ಕೇಂದ್ರಿತ ರಾಜಕಾರಣವನ್ನು ಸೃಷ್ಟಿಸುವ ಚಕ್ರವ್ಯೆಹದ ಸೆಳೆವಿನೊಳಕ್ಕೆ ತಮಗರಿವಿಲ್ಲದಂತೆಯೇ ಸಿಲುಕುತ್ತಾ ಬಂದ ಇವರು ಈಗ ಹೀನಾಯವಾಗಿ ಟಿಕೆಟ್ ನಿರಾಕರಿಸಲ್ಪಡುವಷ್ಟು ಡಮ್ಮಿಗಳಾಗಿದ್ದಾರೆ. ಕಡೇಪಕ್ಷ, ತಮಗಾದ ಅವಮಾನವನ್ನು ಮನಬಿಚ್ಚಿ ಹೇಳಿಕೊಳ್ಳುವ, ಅಸಹನೆಯನ್ನು ಹೊರಹಾಕುವ ಸ್ವಂತಿಕೆಯೂ ಇಲ್ಲದೆ ‘ಪಕ್ಷಕ್ಕಾಗಿ ನಾನು ಸಾಮಾನ್ಯ ಕಾರ್ಯಕರ್ತನಾಗಬಲ್ಲೆ; ಕರಪತ್ರ ಹಂಚಬಲ್ಲೆ; ನೆಲ ಗುಡಿಸಿ, ಒರೆಸಬಲ್ಲೆ’ ಎಂಬ ಸುಳ್ಳುಗಳ ಮೂಲಕ ತಮ್ಮನ್ನೇ ತಾವು ವಂಚಿಸಿಕೊಳ್ಳಬೇಕಾಗಿ ಬಂದಿದೆ.

ರಾಜಕಾರಣದಲ್ಲಿ ಮೇಲಕ್ಕೇರುವುದೆಂದರೆ, ಕೇವಲ ಅಧಿಕಾರ ದಕ್ಕಿಸಿಕೊಳ್ಳುವುದು ಮಾತ್ರವಲ್ಲ; ತಮ್ಮದೇ ಆದ ಐಡೆಂಟಿಟಿಯನ್ನು, ವರ್ಚಸ್ಸನ್ನೂ ಸೃಷ್ಟಿಸಿಕೊಳ್ಳುವುದು; ಅಗತ್ಯಬಿದ್ದಾಗ ಸೆಟೆದು ನಿಲ್ಲುವಷ್ಟು ಸ್ವಂತಿಕೆ ಉಳಿಸಿಕೊಳ್ಳುವುದೂ ಹೌದು. ಯಾರದೋ ಭಜನೆಯಲ್ಲಿ ಗುಲಾಮಗಿರಿ ಮಾಡಲು ಮುಂದಾದರೆ ಇಂತಹ ಬೋಳೆತನವೇ ಗತಿಯಾಗುತ್ತದೆ.

ಯಡಿಯೂರಪ್ಪನವರನ್ನು ಸೈಡ್‌ಲೈನ್ ಮಾಡಲು ಬಿಜೆಪಿಯ ಹೈಕಮಾಂಡ್, ಅರ್ಥಾತ್ ಮೋದಿ-ಶಾ-ಸಂತೋಷ್ ತ್ರಿವಳಿ ಕೂಟ ಎಷ್ಟೆಲ್ಲ ಪ್ರಯತ್ನಪಟ್ಟಿದೆ. ಆದರೂ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಮತ್ತೆಮತ್ತೆ ಮೇಲ್ನೋಟಕ್ಕಾದರೂ ಮಣೆ ಹಾಕಲೇಬೇಕಾಗುತ್ತಿದೆ. ರಾಜಕೀಯ ಅನುಭವವಿಲ್ಲದ ಅವರ ಮಗ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಕೂಡಾ ಯಡಿಯೂರಪ್ಪನವರ ಅನಿವಾರ್ಯತೆಯ ಕಾರಣಕ್ಕೆ. ಇದು ಸಾಧ್ಯವಾದದ್ದು, ಕೇವಲ ಅವರ ಬೆನ್ನಿಗಿರುವ ಜಾತಿಯಿಂದ ಮಾತ್ರವಲ್ಲ, ತನ್ನ ಭ್ರಷ್ಟಾಚಾರ-ಕೋಮುವಾದ-ಜಾತೀಯತೆಯ ಹೊರತಾಗಿಯೂ ಅವರು ಸೃಷ್ಟಿಸಿಕೊಂಡಿರುವ ವರ್ಚಸ್ಸು ಮತ್ತು ರಾಜಕೀಯ ಐಡೆಂಟಿಟಿಯ ಕಾರಣಕ್ಕೂ ಹೌದು. ಆಗಿಂದಾಗ ಸೆಟೆದು ನಿಲ್ಲುವ, ತನ್ನ ಸಾಮರ್ಥ್ಯ ಸಾಬೀತು ಮಾಡುವ ಎಲ್ಲಾ ರಿಸ್ಕುಗಳನ್ನು ಅವರು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದರಿಂದ ಅವರಿಗೆ ಈ ಐಡೆಂಟಿಟಿ ಸಾಧ್ಯವಾಗಿದೆ ಮತ್ತು ಆ ಐಡೆಂಟಿಟಿಗೆ ಹೈಕಮಾಂಡ್ ಕೂಡ ಒಲ್ಲದ ಮನಸ್ಸಿನಿಂದ ಮಣಿಯಬೇಕಾಗಿದೆ.

ಆದರೆ ಈಗ ಟಿಕೆಟ್ ತಪ್ಪಿಸಿಕೊಂಡವರು ಅಂತಹ ಐಡೆಂಟಿಟಿಯನ್ನು ಸೃಷ್ಟಿಸಿಕೊಳ್ಳುವ ಉಸಾಬರಿಗೇ ಹೋಗಲಿಲ್ಲ. ಮೋದಿಯ ಮುಖ ನೋಡಿ ವೋಟು ಕೊಡಿ ಎನ್ನುತ್ತಾ ತರಗೆಲೆಗಳಾಗಿ ಹೋದರು. ಅದಕ್ಕೆ ತಕ್ಕ ಬೆಲೆಯನ್ನೇ ಇವತ್ತು ತೆತ್ತಿದ್ದಾರೆ.

‘ಹೊಸ ಮುಖಗಳಿಗೆ ಅವಕಾಶ ಕೊಡಬೇಕು’ ಎಂದು ಬಿಜೆಪಿ ಹೈಕಮಾಂಡ್ ಹೇಳುತ್ತಿರುವುದಾಗಲಿ ಅಥವಾ ಟಿಕೆಟ್ ತಪ್ಪಿಸಿಕೊಂಡವರು ಅದೇ ಮಾತು ಪುನರುಚ್ಚರಿಸುತ್ತಾ ಸಾಂತ್ವನ ಮಾಡಿಕೊಳ್ಳುತ್ತಿರುವುದಾಗಲಿ ಎಲ್ಲವೂ ನಕಲಿ. ಅದೇ ನಿಜವಾಗಿದ್ದರೆ, ವಯಸ್ಸಿನಲ್ಲಿ ಎಪ್ಪತ್ತೈದರ ಸನಿಹಕ್ಕೆ ಬಂದಿರುವ ಸ್ವತಃ ಮೋದಿಯೇ ಈ ಚುನಾವಣೆಯಿಂದ ಹಿಂದೆ ಸರಿದು ಬೇರೆ ಹೊಸ ಮುಖಕ್ಕೆ ಅವಕಾಶ ಕೊಡಬೇಕಿತ್ತಲ್ಲವೇ? ‘ಬಾರ್ ಬಾರ್ ಮೋದಿ ಸರಕಾರ್’ ಎಂಬ ಘೋಷಣೆ ಯಾಕೆ ಮೊಳಗುತ್ತಿತ್ತು.

ಪ್ರತಿಭಟಿಸುವ, ಪ್ರತಿರೋಧಿಸುವ, ಕಡೇಪಕ್ಷ ಪ್ರತಿಕ್ರಿಯಿಸುವ ‘ಧಮ್ಮು, ತಾಕತ್ತು’ಗಳನ್ನೂ ನೀವು ಕಳೆದುಕೊಂಡು, ಗುಲಾಮಗಿರಿ ಮನಸ್ಥಿತಿಗೆ ತಲುಪಿದ್ದೀರಿ ಎನ್ನುವುದು ಎದುರಿನವರಿಗೆ ಗೊತ್ತಾದರೆ, ಅವರು ಸುಲಭವಾಗಿ ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಎತ್ತಿ ಪಕ್ಕಕ್ಕಿಡುತ್ತಾರೆ, ನಿಮ್ಮ ಬೆನ್ನಮೇಲೆ ಹೆಜ್ಜೆ ಇಟ್ಟು ಮುಂದೆ ಸಾಗುತ್ತಾರೆ. ‘ಮೋದಿ ಮುಖ’ದ ಜಪ ಮಾಡಿದ ಇವರಿಗೆಲ್ಲ ಇಂದು ಎದುರಾಗಿರುವುದು ಇದೇ ಪರಿಸ್ಥಿತಿ!

ಈ ಮುಂದಿನ ಹೋಲಿಕೆ ಕೆಲವರಿಗೆ ತುಸು ಘಾಟು ಅಂತನ್ನಿಸಬಹುದು. ಆದರೂ ರಾಜಕೀಯ ವಿದ್ಯಮಾನವಾಗಿ ಇದನ್ನಿಲ್ಲಿ ಪ್ರಸ್ತಾಪಿಸುವುದು ಸೂಕ್ತ ಅಂದುಕೊಳ್ಳುತ್ತೇನೆ. ಮೋದಿ ಜಪ ಮಾಡುವ ಇವರೆಲ್ಲ ನಿಜಕ್ಕೂ ಮೋದಿಯ ಅನುಯಾಯಿಗಳೇ ಆಗಿದ್ದರೆ, ಸ್ವತಃ ಮೋದಿಯ ರಾಜಕೀಯ ಜೀವನವೇ ಇವರಿಗೆ ಪಾಠವಾಗಬೇಕಿತ್ತು. ಅಡ್ವಾಣಿಗೆ ಚಾಕರಿ ಮಾಡಿದರೂ, ಅಡ್ವಾಣಿಯ ಗುಲಾಮನಾಗಲಿಲ್ಲ; ಕೇಶುಭಾಯ್ ಪಟೇಲ್ ಜೊತೆಗೇ ಇದ್ದರೂ, ಅವರ ನೆರಳಾಗಲಿಲ್ಲ... ಇವರಿಬ್ಬರಿಗೂ ಚಳ್ಳೆಹಣ್ಣು ತಿನ್ನಿಸಿ ಅವರಿಗೆ ದಕ್ಕಬೇಕಿದ್ದ ಸ್ಥಾನಗಳನ್ನು ತಾನು ಆಕ್ರಮಿಸಿಕೊಂಡರು. ಆರೆಸ್ಸೆಸ್‌ನ ಆಣತಿಗೆ ತಲೆಬಾಗುವ ಗುಲಾಮನಂತೆ ಕಂಡರೂ, ಸಂಘಪರಿವಾರವನ್ನು ಮೀರಿ ತನ್ನದೇ ‘ಮೋದಿ ಪರಿವಾರ’ ಕಟ್ಟಿಕೊಳ್ಳುವಷ್ಟು ಮೋದಿ ತನ್ನ ವರ್ಚಸ್ಸು ಸೃಷ್ಟಿಸಿಕೊಂಡಿರುವುದರಿಂದಲೇ ಇವತ್ತು ಮೋದಿಯ ಮುಂದೆ ಆರೆಸ್ಸೆಸ್ ಕೂಡಾ ಪೇಲವವಾದಂತೆ ಭಾಸವಾಗುತ್ತಿದೆ. ಮೋದಿಯದ್ದು, ರಾಜಕೀಯ ಐಡೆಂಟಿಟಿಯನ್ನು ಸೃಷ್ಟಿಸಿಕೊಳ್ಳುವ ಅಪಾಯಕಾರಿ, ಅತಿರೇಕದ ಮಾಡೆಲ್. ಅದು ಅನುಕರಣೀಯವಾದುದು ಎಂದು ನಾನಿಲ್ಲಿ ಸಮರ್ಥಿಸುತ್ತಿಲ್ಲ. ಆದರೆ ರಾಜಕಾರಣದಲ್ಲಿ ಮೇಲೇರಲು, ದೀರ್ಘಕಾಲ ಉಳಿಯಲು, ಎಲ್ಲಕ್ಕಿಂತ ಮುಖ್ಯವಾಗಿ ಒಂದು ಘನತೆಯುಕ್ತ ನಿವೃತ್ತಿಯನ್ನು ಹೊಂದಲು ಸ್ವಂತಿಕೆಯ ಐಡೆಂಟಿಟಿಯ ಅಗತ್ಯ ಎಷ್ಟು ಅನಿವಾರ್ಯ ಎಂಬುದನ್ನು ಹೇಳುತ್ತಿದ್ದೇನಷ್ಟೆ.

ಅಷ್ಟಕ್ಕೂ, ಇದು ಬಿಜೆಪಿಯವರಿಗೆ ಮಾತ್ರವೇ ಸೀಮಿತವಾದುದಲ್ಲ. ಈ ವಿದ್ಯಮಾನದಿಂದ ಕಾಂಗ್ರೆಸ್ ಪಕ್ಷವೂ ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳ ರಾಜಕಾರಣಿಗಳೂ ಕಲಿಯಬೇಕಾದದ ಐಡೆಂಟಿಟಿಯ ಪಾಠವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಾಚಯ್ಯ ಎಂ. ಹಿಪ್ಪರಗಿ

contributor

Similar News