ಜೋಪಡಿ ಮನೆ, ಮಳೆ ಬಂದರೆ ನೀರು, ವಿಷಜಂತುಗಳ ಕಾಟ!

Update: 2024-06-22 07:17 GMT

ಕುಂದಾಪುರ: ಜೋಪಡಿ ಮನೆ, ಟಾರ್ಪಲು ಹೊದಿಕೆ, ಮಳೆ ಬಂದರೆ ಮನೆಯೊಳಗೆ ನುಗ್ಗುವ ನೀರು, ವಿಷಜಂತುಗಳ ಕಾಟ...ಹೀಗೆ ಗುಲ್ವಾಡಿ ನದಿಯ ಸಮೀಪವಿರುವ ಪರಿಶಿಷ್ಟ ಜಾತಿ ಸಮುದಾಯದ ಎರಡು ಕುಟುಂಬಂಗಳು ಯಾತನೆಯ ಬದುಕು ಸಾಗಿಸುತ್ತಿವೆ.

ಗುಲ್ವಾಡಿ ಕೆರೆಮನೆ ಎಂಬಲ್ಲಿನ ನಿವಾಸಿಗಳಾಗಿರುವ ಗೌರಿ ಹಾಗೂ ಗಿರಿಜಾ ಎಂಬವರ ಮನೆ ಪರಿಸ್ಥಿತಿ ಅಯೋಮಯವಾಗಿದೆ. ಈ ಕುಟುಂಬ ಕಳೆದ 5 ತಲೆಮಾರಿನಿಂದ ಇಲ್ಲಿ ವಾಸವಿದೆ. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಗೌರಿಯವರ ಮುರುಕಲು ಟಾರ್ಪಲು ಹಾಸಿದ ಮನೆಯಲ್ಲಿ ಒಟ್ಟು ಎಂಟು ಮಂದಿ ವಾಸವಿದ್ದು, ಅಲ್ಲಿಯೇ ಎರಡು ಹೆಜ್ಜೆ ದೂರದಲ್ಲಿರುವ ಗಿರಿಜಾರ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಗೌರಿಯವರ ಜೋಪಡಿಗೆ ಮಣ್ಣಿನ ಹಾಸು ಮೇಲೆ ತೆಳು ಪದರದ ಸಿಮೆಂಟ್ ತೇಪೆ ಹಾಕಲಾಗಿದೆ.

ಮೇಲ್ಭಾಗದ ಹೊದಿಕೆಗೆ ತೆಂಗಿನ ಗರಿಯ ಮಡಿಲುಗಳನ್ನು ಮೇಲ್ಮಾಡಾಗಿ ಮಾಡಲಾಗಿದ್ದು ಮಳೆಗಾಲದಲ್ಲಿ ಮಾತ್ರ ನೀರು ಸೋರದಂತೆ ಪ್ರತಿ ವರ್ಷ ಟಾರ್ಪಲ್ ಹೊದಿಕೆ ಅಳವಡಿಸಲಾಗುತ್ತದೆ. ಇನ್ನು ಅಲ್ಲೆ ಮೇಲ್ಬದಿಯಲ್ಲಿ ಗಿರಿಜಾ ಮನೆಯಿದ್ದು ಮನೆ ಹಿಂಭಾಗ ಕುಸಿದಿದೆ. ಮಳೆ ಹೊಡೆತಕ್ಕೆ ಮಣ್ಣಿನ ಗೋಡೆಯೂ ಕುಸಿಯುವ ಭೀತಿಯಲ್ಲಿದೆ. ಎರಡು ಮನೆಗೆ ವಿದ್ಯುತ್ ಸಂಪರ್ಕ, ರೇಶನ್ ಕಾರ್ಡ್ ಸಿಕ್ಕಿದ್ದು ಹಕ್ಕು ಪತ್ರ ಈವರೆಗೆ ಮಂಜೂರಾಗಿಲ್ಲ ಎಂದು ದೂರಲಾಗಿದೆ.

ಗೌರಿಯವರಿಗೆ ಗ್ರಾಪಂ ಮಂಜೂರು ಮಾಡಿದ ವಸತಿ ಯೋಜನೆಯ ಮನೆ ಆರ್ಥಿಕ ಕಾರಣದಿಂದ ಹಲವು ವರ್ಷದಿಂದ ಅರ್ಧಕ್ಕೆ ನಿಂತಿದೆ. ಗಿರಿಜಾ ಗ್ರಾಪಂಗೆ ಮನೆ ಕೋರಿ ನೀಡಿದ ಅರ್ಜಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಈ ನಡುವೆ ಕೆರೆ ಭಾಗದಲ್ಲಿ ಮಣ್ಣು ತುಂಬಿಸಿದ್ದು, ಕೃತಕ ಪೈಪ್ ಅಳವಡಿಕೆ ಮಾಡಿದ್ದರಿಂದ ನೀರು ಹರಿಯಲು ಸಮಸ್ಯೆಯಾಗಿ ಕೆರೆಯಲ್ಲಿ ನೀರು ಹೆಚ್ಚಿ ಮನೆಗೆ ನುಗ್ಗುತ್ತಿದೆ ಎಂದು ಆರೋಪಿಸಲಾಗಿದೆ.

‘ಮನೆಯಲ್ಲಿ ಮಕ್ಕಳು ಇರಲು ಹೆದರಿ ಅವರವರ ಅಜ್ಜಿ ಮನೆಗೆ ಕಳಿದ್ದೇವೆ. ಸ್ನಾನಗೃಹ ಹಾಗೂ ಸಮೀಪದ ಬಾಳೆ ಗಿಡಗಳು ನೀರು ಪಾಲಾಗಿದೆ. ಕೆರೆಯ ಸುತ್ತ ರಿವಿಟ್ಮೆಂಟ್ ನಿರ್ಮಿಸಿದರೆ ನೀರು ನುಗ್ಗುವುದಿಲ್ಲ. ಕೆರೆ ಸಂಪೂರ್ಣ ಮಲೀನವಾಗಿದ್ದು ಪುನಶ್ಚೇತನ ಮಾಡಬೇಕು. ಹಕ್ಕು ಪತ್ರ ಹಾಗೂ ತುರ್ತಾಗಿ ಮನೆಯ ದುರಸ್ಥಿಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎನ್ನುತ್ತಾರೆ ಗೌರಿಯವರ ಮಗ ಸುಧೀರ್.

ಸಮಸ್ಯೆ ಬಗೆಹರಿಸಲು ದಸಂಸ ಆಗ್ರಹ

ಗೌರಿ ಹಾಗೂ ಗಿರಿಜಾ ಕುಟುಂಬಗಳ ಸ್ನಾನ ಗೃಹ ಕೃತಕ ನೆರೆಯಿಂದ ಮುಳುಗಡೆಯಾಗಿದ್ದು ಬಳಸಲು ಯೋಗ್ಯವಿಲ್ಲದಂತಾಗಿ ಹೋಗಿದೆ. ಇಲ್ಲಿ ಕೊಳಚೆ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಆ ಎರಡು ದಲಿತ ಕುಟುಂಬಗಳು ಹಿಂಸೆ ಪಡುವಂತಾಗಿದೆ. ಈ ಕುಟುಂಬಕ್ಕೆ ಮರೀಚಿಕೆಯಾದ ಮೂಲಭೂತ ಸೌಕರ್ಯವನ್ನ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಲು ದಲಿತ ಮುಖಂಡ ಚಂದ್ರಮ ತಲ್ಲೂರು ಕುಂದಾಪುರ ತಹಶೀಲ್ದಾರ್ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ನಮ್ಮ ಪರಿಸ್ಥಿತಿ ಯಾರಿಗೆ ಹೇಳೋದು ಏನು ಮಾಡೋದು? ದೊಡ್ಡ ಮಳೆ ಬಂದರೆ ಪಾತ್ರೆಗಳು ನೀರು ಪಾಲಾಗುತ್ತದೆ. ಭಯದ ನಡುವೆಯೇ ವಾಸ ಮಾಡುತ್ತಿದ್ದೇವೆ.

-ಗೌರಿ, ನೊಂದವರು

ಚುನಾವಣೆ ಬಂದಾಗ ಎಲ್ಲಾ ಸಮಸ್ಯೆ ಬಗೆ ಹರಿಸುತ್ತೇವೆ ಎನ್ನುತ್ತಾರೆ. ಆ ಬಳಿಕ ಇತ್ತ ಗಮನಹರಿಸುವುದಿಲ್ಲ. ಮಳೆಗಾಲದಲ್ಲಿ ಸೊಳ್ಳೆ, ಹಾವುಗಳ ಕಾಟವಿದೆ. ಅದೆಷ್ಟೋ ದಿನ ವಿಷಜಂತುಗಳ ಭೀತಿಯಲ್ಲಿ ರಾತ್ರಿ ಕಳೆದಿದ್ದೇವೆ. ಈ ಬಾರಿ ಕೆರೆ ಭಾಗಕ್ಕೆ ಮಣ್ಣು ತುಂಬಿಸಿ, ನೈಸರ್ಗಿಕ ತೋಡು ಮುಚ್ಚಿದ್ದರಿಂದ ಗುಲ್ವಾಡಿ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ಕೆರೆ ಸೇರಿ ನೀರು ಮನೆಗೆ ನುಗ್ಗುತ್ತಿದೆ. ಅಲ್ಲದೆ ಕುಡಿಯುವ ತೆರೆದ ಬಾವಿಗೆ ಕಲುಷಿತ ನೀರು ಸೇರಿ ಬಾವಿ ನೀರು ಮಲಿನವಾಗಿದೆ.

-ಸುಧೀರ್, ಗೌರಿಯ ಪುತ್ರ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೀಶ್ ಕುಂಭಾಸಿ

contributor

Similar News