ಕಾಸ್ಮೆಟಿಕ್ ಸರ್ಜರಿ ಹೆಸರಿನಲ್ಲಿ ಅಕ್ರಮಗಳು

Update: 2024-09-30 10:00 GMT

 ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ವಿವಾಹಿತ ಯುವಕ ಸಾವಿಗೀಡಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ.

ಮಂಗಳೂರಿನ ಪಕ್ಕದ ಉಳ್ಳಾಲದ ಅಕ್ಕರೆಕೆರೆ ನಿವಾಸಿ, 32 ವರ್ಷದ ಮುಹಮ್ಮದ್ ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಸಣ್ಣದೊಂದು ಸರ್ಜರಿಗೆ ಒಳಪಟ್ಟವರು ಜೀವಂತವಾಗಿ ಕುಟುಂಬದೆದುರು ವಾಪಸ್ ಬರಲೇ ಇಲ್ಲ. ಸುಂದರ, ಆರೋಗ್ಯವಂತ ಯುವಕನೊಬ್ಬ ಮನೆಯಿಂದ ಮಧ್ಯಾಹ್ನ ಹೋಗಿ ಹೀಗೆ ರಾತ್ರಿ ಶವವಾಗಿ ಮನೆಗೆ ವಾಪಸ್ ಬಂದರೆ ಆತನ ತಂದೆ ತಾಯಿಗೆ, ಪತ್ನಿಗೆ ಅದೆಂತಹ ಆಘಾತ ಆಗಿರಬೇಡ?

ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೂ ಇಲ್ಲದೆ ಸಣ್ಣದೊಂದು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋದವನು ಹೀಗೆ ದುರಂತ ಅಂತ್ಯ ಕಂಡರೆ ಯಾರಿಗಾದರೂ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ ?

ಅರ್ಧ ಗಂಟೆಯ ಸರ್ಜರಿ ಸಂಜೆಯಾದರೂ ಮುಗಿಯದೇ ಇದ್ದಾಗ, ಹೊರಗೆ ಕಾಯುತ್ತಿದ್ದ ಅವರ ತಾಯಿ ಮತ್ತು ಪತ್ನಿ ಆತಂಕಗೊಂಡಿದ್ದರು. ಆ ಕ್ಲಿನಿಕ್‌ನವರು ಮಾತ್ರ ಏನನ್ನೂ ಹೇಳದೆ ಅಷ್ಟು ಹೊತ್ತು ಕಳೆದುಬಿಟ್ಟಿದ್ದರು. ಕಡೆಗೆ ಸಂಶಯಗೊಂಡು ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದರ ಬಗ್ಗೆ ಬಾಯ್ಬಿಟ್ಟಿದ್ದರು. ತಕ್ಷಣವೇ ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕಾಸ್ಮೆಟಿಕ್ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂಬುದು ಮಾಝಿನ್ ಕುಟುಂಬದವರ ಆರೋಪ.

ಸರ್ಜರಿ ನಡೆಸಿದ ಫ್ಲಾಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್‌ಗೆ ಈಗ ಬೀಗ ಬಿದ್ದಿದೆ. ಕ್ಲಿನಿಕ್‌ನಲ್ಲಿ ಮೂಲಭೂತ ಸೌಕರ್ಯವೇ ಇರಲಿಲ್ಲ ಎಂಬುದು ಆರೋಗ್ಯಾಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಬಲಿಯಾಗಿ ಹೋದ ಯುವಕನ ಜೀವ, ಆತನ ಕುಟುಂಬದವರ ಸಂಕಟ ಇವೆಲ್ಲವೂ ನಮ್ಮ ಕಣ್ಣೆದುರು ನಿಂತು ಕಾಡುವ ಸಂಗತಿಗಳಾಗಿಯೇ ಉಳಿಯುತ್ತವೆ.

ದೇಶದಲ್ಲಿ ಕಾಸ್ಮೆಟಿಕ್ ಸರ್ಜರಿ ಹೆಚ್ಚುತ್ತಲೇ ಇರುವ ಈ ಕಾಲದಲ್ಲಿ, ಹೊರಗಷ್ಟೇ ಥಳುಕು ಬಳುಕು ತೋರಿಸುವ, ಮೂಲಭೂತ ಸೌಕರ್ಯ ಮತ್ತು ಅಗತ್ಯ ಪರಿಣತಿಯ ಮಾನ್ಯತೆಯನ್ನೂ ಹೊಂದಿರದ ಕ್ಲಿನಿಕ್‌ಗಳು ಕೂಡ ನಾಯಿಕೊಡೆಗಳಂತೆ ಬೆಳೆದಿವೆ. ಜಾಹೀರಾತುಗಳ ಮೂಲಕವೇ ಮರುಳು ಮಾಡುವ ಇಂಥ ಬೋಗಸ್ ಕಾಸ್ಮೆಟಿಕ್ ಕ್ಲಿನಿಕ್‌ಗಳು ಅಂತಿಮವಾಗಿ ಇಂಥ ಘೋರ ದುರಂತಕ್ಕೆ ಕಾರಣವಾಗುತ್ತವೆ.

ಸಮಸ್ಯೆ ಇರುವುದೇ ನಾವು ಕ್ಲಿನಿಕ್‌ಗಳನ್ನು ಆಯ್ದುಕೊಳ್ಳುವಲ್ಲಿ. ಸಾಮಾನ್ಯವಾಗಿ ಇಂಥ ಕ್ಲಿನಿಕ್‌ಗಳು ಮಾರ್ಕೆಟಿಂಗ್ ಗಿಮಿಕ್ ಮೂಲಕವೇ ಆಕರ್ಷಿಸಿಬಿಡುತ್ತವೆ. ನಿಜವೆಂದೇ ನಂಬುವ ಜನ ಮೋಸ ಹೋಗುತ್ತಾರೆ.ಮಂಗಳೂರಿನಲ್ಲಿಯ ದುರಂತ ಕೂಡ ಕಾಸ್ಮೆಟಿಕ್ ಸರ್ಜರಿ ಉದ್ಯಮದ ಅಕ್ರಮದ ಮುಖವನ್ನು ಹೊರಗೆಳೆದಿದ್ದು, ಮತ್ತೊಮ್ಮೆ ಇದು ಚರ್ಚೆಗೆ ಬರುವಂತಾಗಿದೆ.

ಈಗಾಗಲೇ ಹೇಳಿದಂತೆ, ಮಾರ್ಕೆಟಿಂಗ್ ತಂತ್ರದ ಮೂಲಕವೇ ಸೆಳೆಯುವ ಇಂಥ ಬಹಳಷ್ಟು ಕ್ಲಿನಿಕ್‌ಗಳು ವೈದ್ಯಕೀಯ ಮಾನ್ಯತೆಯನ್ನೇ ಹೊಂದಿರುವುದಿಲ್ಲ. ತಮ್ಮ ಬಗ್ಗೆ ಕೊಚ್ಚಿಕೊಳ್ಳುವ ಅವುಗಳ ಬಡಾಯಿ ನಿಜವಿರುವುದಿಲ್ಲ. ಹಾಗಾಗಿ, ಚಿಕಿತ್ಸೆ ಮತ್ತು ಸರ್ಜರಿಗೆಂದು ಕ್ಲಿನಿಕ್ ಆಯ್ದುಕೊಳ್ಳುವಾಗ ಎಲ್ಲಾ ಆಯಾಮದಿಂದಲೂ ಕ್ಲಿನಿಕ್ ಬಗ್ಗೆ ತಿಳಿದುಕೊಳ್ಳುವುದು ಮೊದಲ ಅಗತ್ಯ.

ಅಲ್ಲಿನ ವೈದ್ಯಕೀಯ ಸಿಬ್ಬಂದಿಯ ಶೈಕ್ಷಣಿಕ ಅರ್ಹತೆ, ಅವರ ಅನುಭವ, ಅಲ್ಲಿರುವ ವ್ಯವಸ್ಥೆ ಎಲ್ಲದರ ಬಗ್ಗೆಯೂ ವಿವರವಾಗಿ ತಿಳಿದೇ ಮುಂದಿನ ಹೆಜ್ಜೆಯಿಡಬೇಕು.

ಅಲ್ಲಿನ ಸಂಪೂರ್ಣ ಆರೋಗ್ಯ ಸುರಕ್ಷಾ ವ್ಯವಸ್ಥೆ, ಸರ್ಜನ್‌ಗಳು, ಅರಿವಳಿಕೆ ತಜ್ಞರು, ಬ್ಯಾಕ್ ಅಪ್ ಐಸಿಯು ಸೇವೆ ಮತ್ತು ಎಮರ್ಜೆನ್ಸಿ ಹೊತ್ತಿನಲ್ಲಿಯ ತಜ್ಞರ ಲಭ್ಯತೆ ಇವೆಲ್ಲದರ ಜೊತೆಗೆ, ವೈದ್ಯಕೀಯ ಮಾನ್ಯತೆ ಇದೆಯೇ ಎನ್ನುವಲ್ಲಿಯವರೆಗೂ ಖಚಿತಪಡಿಸಿಕೊಳ್ಳಬೇಕು.ಅರಿವಳಿಕೆ ನೀಡುವುದು ಅಗತ್ಯವಿರುವ ಚಿಕಿತ್ಸೆಗಳಲ್ಲಿ ಇನ್ನಷ್ಟು ಜಾಗರೂಕತೆ ಅತ್ಯಗತ್ಯ.

ಕರ್ನಾಟಕದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಕೆಪಿಎಂಇ ಅಡಿಯಲ್ಲಿ, ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ನೋಂದಣಿ ಹೊಂದಿರುವುದು ಕಡ್ಡಾಯ.

ಕರ್ನಾಟಕದಲ್ಲಿ 2007ರಿಂದ 2023ರವರೆಗೆ 1,436 ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳು ಮತ್ತು ಲ್ಯಾಬ್‌ಗಳನ್ನು ಮುಚ್ಚಲಾಗಿದೆ.

ಕಾಸ್ಮೆಟಿಕ್ ಉದ್ಯಮದ ಔಟ್ಲೆಟ್ ತನ್ನನ್ನು ಒಂದು ಕ್ಲಿನಿಕ್ ಎಂದು ಹೇಳಿಕೊಂಡು ಬೋರ್ಡ್ ಹಾಕಿಕೊಂಡ ತಕ್ಷಣ ಅದು ಸೂಕ್ತ ವೈದ್ಯಕೀಯ ಮಾನ್ಯತೆ ಪಡೆದಿದೆ ಎಂದೇನೂ ಅಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಸಂಪೂರ್ಣವಾಗಿ ಕ್ಲಿನಿಕ್ ಬಗ್ಗೆ ತಿಳಿಯದೆ, ಅದರ ತಜ್ಞರ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಬಗ್ಗೆ ತಿಳಿಯದೆ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುವುದು ಹೀಗೆ ಜೀವಕ್ಕೇ ಅಪಾಯ ತಂದಿಡಬಹುದು.

ಮಂಗಳೂರಿನಲ್ಲಿ ನಡೆದ ಪ್ರಕರಣ ಮಾತ್ರವಲ್ಲ, ಕಾಸ್ಮೆಟಿಕ್ ಸರ್ಜರಿ ಹೊತ್ತಿನ ಯಡವಟ್ಟಿನಿಂದ ಇನ್ನೂ ಹಲವು ದುರಂತ ಘಟನೆಗಳು ನಡೆದಿವೆ.

ಹೈದರಾಬಾದ್‌ನಲ್ಲಿ 28 ವರ್ಷದ ಲಕ್ಷ್ಮೀ ನಾರಾಯಣ್ ಎಂಬ ಯುವಕನೊಬ್ಬ ತನ್ನ ಮದುವೆಗೆ ಕೆಲವೇ ದಿನಗಳ ಮೊದಲು ತಾನು ಹೆಚ್ಚು ಹಸನ್ಮುಖಿಯಾಗಿ ಕಾಣಬೇಕೆಂದು ಖಾಸಗಿ ಕ್ಲಿನಿಕ್‌ನಲ್ಲಿ ಕಾಸ್ಮೆಟಿಕ್ ಡೆಂಟಲ್ ಪ್ರಕ್ರಿಯೆಗೆ ಒಳಗಾಗಿದ್ದರು. ಆದರೆ ಆನಂತರ ಅವರ ಜೀವವೇ ಹೋಗಿತ್ತು.

ರೋಗಿ ನೇರವಾಗಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಅವಶ್ಯ. ಯಾರೋ ನಿಮ್ಮನ್ನು ಎದುರು ಕೂರಿಸಿಕೊಂಡು ಮರುಳಾಗುವ ಹಾಗೆ ಮಾತಾಡಿ, ಸರ್ಜರಿಗೆ ಒಪ್ಪಿಸುತ್ತಾರೆ, ಇನ್ನಾರೋ ಸರ್ಜರಿ ಮಾಡುತ್ತಾರೆ. ಹೀಗಾಗಕೂಡದು. ನಿಮ್ಮ ವೈದ್ಯರು ಶೈಕ್ಷಣಿಕವಾಗಿ ಹಾಗೂ ಅನುಭವದ ಆಧಾರದಲ್ಲಿ ಅರ್ಹರೇ, ಆತ್ಮವಿಶ್ವಾಸದಿಂದ ಅವರನ್ನು ಒಪ್ಪಬಹುದು ಎನ್ನಿಸುತ್ತದೆಯೇ ಎಂಬುದು ಕೂಡ ಖಚಿತವಾಗಬೇಕು.

ರೋಗಿ ಮತ್ತು ಸರ್ಜನ್ ನಡುವೆ ಬೆಳೆಯುವ ಈ ಬಾಂಧವ್ಯದ ಪಾಲು ಸರ್ಜರಿಯ ಯಶಸ್ಸಿನಲ್ಲಿ ಸಮ ಸಮವಾಗಿ ಕೆಲಸ ಮಾಡುತ್ತದೆ ಎಂಬುದನ್ನು ತಜ್ಞರು ಕೂಡ ಒತ್ತಿಹೇಳುತ್ತಾರೆ.

ಆರೋಗ್ಯ ರಕ್ಷಣೆಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಅಳವಡಿಸಿಕೊಂಡ ಆಸ್ಪತ್ರೆಗಳನ್ನು ಆರಿಸಿಕೊಳ್ಳಬೇಕು. ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗುವುದಾದರೆ ಆರೋಗ್ಯ ರಕ್ಷಣೆ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿ ಎನ್‌ಎಬಿಎಚ್‌ನಿಂದ ಆ ಆಸ್ಪತ್ರೆ ಮಾನ್ಯತೆ ಪಡೆದಿವೆಯೇ ಎಂಬುದನ್ನು ಖಚಿತಪಡಿಸಿ

ಕೊಳ್ಳಬೇಕು. ಎನ್‌ಎಬಿಎಚ್‌ನಿಂದ ಮಾನ್ಯತೆ ಪಡೆದಿದ್ದರೆ ಗುಣಮಟ್ಟದ ಚಿಕಿತ್ಸೆ, ರೋಗಿಗಳ ಉತ್ತಮ ಆರೈಕೆ, ಶುಚಿತ್ವ, ರೋಗಿಗಳ ಹಕ್ಕುಗಳ ಪರವಿರುವುದು, ಅಗ್ನಿ ಸುರಕ್ಷತಾ ಕ್ರಮಗಳು, ಸೋಂಕು ನಿಯಂತ್ರಣ ಮತ್ತು ದಾಖಲೆಗಳ ನಿರ್ವಹಣೆ ಈ ಎಲ್ಲದರ ಬಗ್ಗೆಯೂ ಅಂಥ ಆಸ್ಪತ್ರೆಗಳು ಬದ್ಧವಾಗಿರುತ್ತವೆ. ಕಾಸ್ಮೆಟಿಕ್ ಪ್ರಕ್ರಿಯೆಗೆ ಸಂಬಂಧಿಸಿದ ಅಪಾಯಗಳು ಎದುರಾಗದೇ ಇರಲು ಮಾನ್ಯತೆ ಹೊಂದಿರುವ ಆಸ್ಪತ್ರೆಗಳನ್ನೇ ಆಯ್ಕೆ ಮಾಡಬೇಕು ಎಂಬುದು ತಜ್ಞ ವೈದ್ಯರ ಸಲಹೆ.

ನಮಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದೇ ಇರಬಹುದು, ನಾವು ಕೇವಲ ಸೌಂದರ್ಯ ವರ್ಧನೆಯ ಉದ್ದೇಶಕ್ಕೆ ಹೋಗುತ್ತಿರಬಹುದು. ಆದರೆ ನಮ್ಮ ದೇಹದ ಮೇಲೆ ಅವರು ಅರಿವಳಿಕೆ, ಶಸ್ತ್ರ ಚಿಕಿತ್ಸೆ ಇತ್ಯಾದಿ ಯಾವುದೇ ವೈದ್ಯಕೀಯ ಪ್ರಕ್ರಿಯೆ ನಡೆಸುತ್ತಾರೆ ಎಂದಾದರೆ ಅದಕ್ಕೆ ಅವರು ಅರ್ಹರೇ, ಅವರ ಕ್ಲಿನಿಕ್ ಅದನ್ನು ಮಾಡಲು ಸಶಕ್ತವೇ ಎಂಬುದು ಖಚಿತವಾಗಬೇಕು. ಇಂತಹ ಚಿಕಿತ್ಸೆಗಳಿಗೆ ಸರಿಯಾದ ಆಸ್ಪತ್ರೆ ಹಾಗೂ ಅನುಭವಿ ವೈದ್ಯರ ಬಳಿಯೇ ಹೋಗುವುದು ಎಲ್ಲಕ್ಕಿಂತ ಉತ್ತಮ. ಆರೋಗ್ಯಕ್ಕೆ ಸಂಬಂಧಿಸಿ ಯಾವತ್ತೂ ರಾಜಿ ಮಾಡಿಕೊಳ್ಳ ಬಾರದು.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ಎಸ್. ಕುಮಾರ್

contributor

Similar News