"ಸೇಡಂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರು ಹಾಕಿದ ಸಂಘಟಕರ ವಿರುದ್ಧ ಕ್ರಮವಾಗಲಿ"
ಸೇಡಂನ ಸಂಘಿ ಕಾರ್ಯಕ್ರಮದಲ್ಲಿ ನೀವು ಭಾಗವಹಿಸದಿರುವುದು ಸರಿಯಾದ ನಿರ್ಧಾರ. ಆದರೆ ನಿಮ್ಮ ಸಚಿವ ಸಂಪುಟದ ಇತರ ಮಂತ್ರಿಗಳು ಮತ್ತು ಇಲಾಖೆಗಳು?
ಮಾನ್ಯ ಮುಖ್ಯಮಂತ್ರಿಗಳೇ, ಸೇಡಂ ನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಹೆಸರಿನ ಸಂಘಿ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುತ್ತಿಲ್ಲ ಎಂದು ತಮ್ಮ X ಖಾತೆಯಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದೀರಿ.
ಇದು ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ತೆಗೆದುಕೊಂಡ ಪ್ರತಿಜ್ಞೆಗೆ ಸರಿಯಾದ ನಿರ್ಧಾರ. ಆದರೆ ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ ನಿಮ್ಮ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯ ಪ್ರಕಾರ ನಿಮ್ಮ ಅರ್ಧ ಸಚಿವ ಸಂಪುಟವೇ ಅದರಲ್ಲಿ ಭಾಗವಹಿಸುತ್ತಿದೆ ಮತ್ತು ಆ ಪ್ರದೇಶದ ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರೂ ಇದರಲ್ಲಿ ಭಾಗವಹಿಸಲಿದ್ದಾರೆ.
ಉದಾಹರಣೆಗೆ 28-1-2025 ರಂದು ಪ್ರಾರಂಭಿಕ ಶೋಭಾ ಯಾತ್ರೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಾದ ಶರಣ ಪ್ರಕಾಶ್ ಪಾಟೀಲ್ ಮತ್ತು ಕಾಂಗ್ರೆಸ್ ಸಂಸದರಾದ ರಾಧಾಕೃಷ್ಣ ದೊಡ್ಡಮನಿಯವರು ಭಾಗವಹಿಸುತ್ತಿದ್ದಾರೆ. 29-1-2025 ರಂದು ಶುರುವಾಗುವ ಮೊದಲ ದಿನ ಕಾರ್ಯಕ್ರಮದಲ್ಲಿ ಮಂತ್ರಿ ಪ್ರಿಯಾಂಕಾ ಖರ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
30-1-2025 ರಂದು ನಡೆಯಲಿರುವ ಶಿಕ್ಷಣದ ಹೆಸರಿನ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ವಹಿಸಿಕೊಳ್ಳಲಿದ್ದಾರೆ. 1-2-2025 ರಂದು ನಡೆಯಲಿರುವ ಕೃಷಿ ಹೆಸರಿನ ಸಂಜೆಯೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ವಹಿಸಿಕೊಳ್ಳುತ್ತಿದ್ದಾರೆ. 3-2-2025 ರಂದು ನಡೆಯಲಿರುವ ಸ್ವಯಂ ಉದ್ಯೋಗದ ಹೆಸರಿನ ಕಾರ್ಯಕ್ರಾಮದ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ಸಿನ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್ ಭಾಗವಹಿಸಲಿದ್ದಾರೆ.
4-2-2025 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕಾರಾಮ್ ಭಾಗವಹಿಸಲಿದ್ದಾರೆ.
ಅಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕಾಂಗ್ರೆಸ್ಸಿನ ಅಜಯ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದಲ್ಲದೆ ಆ ಸಂಘಟನೆ ನಡೆಸುವ ಏಳು ದಿನಗಳ ವಿವಿಧ ಹೆಸರಿನ ಕಾರ್ಯಕ್ರಮದಲ್ಲಿ ಸರ್ಕಾರದ ಇಲಾಖೆಗಳೂ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಯೂ ಸಹಕರಿಸುತ್ತಿದೆ.
ಹೀಗಾಗಿ. 1) ತಾವು ಮಾತ್ರ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರೆ ಸಾಲದು.
2) ಸಚಿವ ಸಂಪುಟದ ಮುಖ್ಯಸ್ಥರಾಗಿ ತಾವು ಯಾವ ಕಾರಣಕ್ಕೆ ಆ ಸಭೆಯಲ್ಲಿ ಭಾಗವಹಿಸುತ್ತಿಲ್ಲವೋ , ಅದೇ ಕಾರಣಕ್ಕಾಗಿ ತಮ್ಮ ಸಚಿವ ಸಂಪುಟದ ಯಾರೂ ಕೂಡ ಈ ಸಂವಿಧಾನ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು.
3) ಜೊತೆಗೆ ಸರ್ಕಾರದ ಯಾವ ಇಲಾಖೆಗಳೂ ಕೂಡ ಇದರಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಬಾರದು.
4) ಹಾಗೆಯೇ ತಮ್ಮ ಒಪ್ಪಿಗೆಯಿಲ್ಲದೆ, ತಮ್ಮ ಗಮನಕ್ಕೆ ತರದೇ ತಮ್ಮ ಹೆಸರನ್ನು ಬಳಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಕೂಡ ತಾವು ಪರಿಶೀಲಿಸಬೇಕು
5) ಮುಖ್ಯಮಂತ್ರಿ ಕಚೇರಿಯ ಅಧಿಕೃತ ಒಪ್ಪಿಗೆ ಇಲ್ಲದೆ ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಬಳಸಿಕೊಂಡ ಸಂಘಟಕರ ಮೇಲೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು..
-ಶಿವಸುಂದರ್