16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ನಿಷೇಧ : ಆಸ್ಟ್ರೇಲಿಯದ ನಡೆಯನ್ನು ಭಾರತದಲ್ಲೂ ಅನುಸರಿಸಬೇಕೇ?
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ನಿರ್ಧಾರವನ್ನು ಆಸ್ಟ್ರೇಲಿಯ ತೆಗೆದುಕೊಂಡಿದೆ.
ಈ ನಿಟ್ಟಿನಲ್ಲಿ ಮಸೂದೆಯನ್ನು ಸಂಸತ್‌ನ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಬುಧವಾರ ಅಂಗೀಕರಿಸಿದೆ.
ಭಾರತವೂ ಇದೇ ನಡೆಯನ್ನು ಅನುಸರಿಸಬೇಕೆಂದು ಈಗ ಎಲ್ಲೆಡೆ ಕೇಳಿ ಬರುತ್ತಿದೆ.
ಜಗತ್ತಿನಾದ್ಯಂತ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಸ್ನ್ಯಾಪ್‌ಚಾಟ್, ಟಿಕ್‌ಟಾಕ್, ರೆಡಿಟ್, ಎಕ್ಸ್ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಮುಳುಗಿರುತ್ತಾರೆ.
ಆಸ್ಟ್ರೇಲಿಯದಲ್ಲಿ 16ರೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವುದನ್ನು ಶೇ.77ರಷ್ಟು ಆಸ್ಟ್ರೇಲಿಯನ್ನರು ಬೆಂಬಲಿಸಿದ್ದಾರೆ ಎಂದು ಅಲ್ಲಿನ You Gov ಸಮೀಕ್ಷೆ ಕಂಡುಕೊಂಡಿದೆ.
ಆಸ್ಟ್ರೇಲಿಯದ ಕಾನೂನನ್ನು ಪಾಲಿಸದ ಸೋಷಿಯಲ್ ಮೀಡಿಯಾ ಕಂಪೆನಿಗಳಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವ ಕ್ರಮವನ್ನು ಶೇ.87ರಷ್ಟು ಆಸ್ಟ್ರೇಲಿಯನ್ನರು ಬೆಂಬಲಿಸಿದ್ದಾರೆ ಎಂದು ಅದೇ ಸರ್ವೇ ಹೇಳುತ್ತದೆ.
ಭಾರತದಲ್ಲಿ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವುದನ್ನು ತಡೆಯಲು ಸಾಧ್ಯವೇ ಇಲ್ಲವಾಗಿದೆ.
ಆದರೆ ಸೋಷಿಯಲ್ ಮೀಡಿಯಾದಿಂದ ಪ್ರಭಾವಿತರಾಗುವವರು ಮಕ್ಕಳು ಮಾತ್ರವಲ್ಲ, ದೊಡ್ಡವರೂ ಅಷ್ಟೇ ಪ್ರಭಾವಿತರಾಗುತ್ತಾರೆ.
ಭಾರತದಲ್ಲಿನ ಸರಕಾರ ಮತ್ತದರ ರಾಜಕೀಯವಂತೂ ವಿರೋಧಿಗಳ ವಿರುದ್ಧ ಟ್ರೋಲ್‌ಗೆ ಸೋಷಿಯಲ್ ಮೀಡಿಯಾವನ್ನು ಆಟದ ಮೈದಾನದಂತೆ ಮಾಡಿಕೊಂಡಿದೆ. ದ್ವೇಷ ಹರಡುವುದಕ್ಕೂ ವ್ಯಾಪಕವಾಗಿ ಅದರ ಬಳಕೆಯಾಗುತ್ತಿದೆ.
ಅಮೆರಿಕದಲ್ಲಂತೂ ಪೋಷಕರು ಫೇಸ್‌ಬುಕ್ ಅಂಥವುಗಳ ವಿರುದ್ಧ ದಾವೆ ಹೂಡುತ್ತಿದ್ದಾರೆ. ಮಕ್ಕಳು ಆಕರ್ಷಿತರಾಗುವ ಹಾಗೆ ಅದರ ವಿನ್ಯಾಸವಿರುತ್ತದೆ ಎಂಬುದು ಅವರ ಆರೋಪ.
ಮಕ್ಕಳು ಓದನ್ನು ಬಿಟ್ಟು ಗಂಟೆಗಟ್ಟಲೆ ಹೊತ್ತು ಅದರಲ್ಲೇ ಮುಳುಗಿರುತ್ತಾರೆ. ಇಂಥ ಗೀಳು ಕಡೆಗೆ ಅನಾರೋಗ್ಯಕರವಾಗಿ ಪರಿಣಮಿಸುತ್ತದೆ.
ಝುಕರ್ ಬರ್ಗ್ ಅಮೆರಿಕದಲ್ಲಿ ಪೋಷಕರ ಕ್ಷಮೆ ಕೇಳಿದ್ದಾರೆ. ನ್ಯಾಯಾಲಯ ಈ ವಿಷಯಕ್ಕಾಗಿ ಶಿಕ್ಷೆ ನಿರಾಕರಿಸಿದೆ.
ಆಸ್ಟ್ರೇಲಿಯದಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧವನ್ನು ಹೆಡ್‌ಲೈನ್ ಆಗುವುದಕ್ಕೋಸ್ಕರ ಮಾಡಲಾಯಿತೇ ಎನ್ನುವ ಸಂಶಯವಿದೆ.
ಯಾಕೆಂದರೆ ಕಾನೂನನ್ನೇನೋ ಅದು ಮಾಡಿಬಿಟ್ಟಿದೆ. ಆದರೆ ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬುದರ ಬಗ್ಗೆ ಸರಕಾರಕ್ಕೇ ಸ್ಪಷ್ಟತೆಯಿಲ್ಲ.
ಭಾರತದಲ್ಲಿಯೂ ಮಹಿಳಾ ಮೀಸಲಾತಿ ಅಂಗೀಕಾರವಾಯಿತು, ಹೆಡ್‌ಲೈನ್‌ಗಳು ಬಂದವು. ಆದರೆ ಅದು ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.
ಆಸ್ಟ್ರೇಲಿಯದ ಈ ಕಾನೂನು ಕೂಡ ಹಾಗೆಯೇ ಇದೆ.
ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಬದಲು ಆ ಕಂಪೆನಿಗಳ ಮೇಲೆಯೇ ನಿರ್ಬಂಧ ಹೇರಬೇಕು ಎಂಬ ಒತ್ತಾಯಗಳೂ ಕೇಳಿಬಂದಿವೆ.
ಆಸ್ಟ್ರೇಲಿಯ ಸರಕಾರದ ಈ ಕ್ರಮ ಹಿಂಬಾಗಿಲಿನಿಂದ ಇಂಟರ್ನೆಟ್ ಬಳಸುವುದನ್ನು ನಿಯಂತ್ರಿಸುವುದೇ ಆಗಿದೆ ಎಂದು ಎಲಾನ್ ಮಸ್ಕ್ ಹೇಳುತ್ತಿದ್ದಾರೆ.
ಬ್ಯಾನ್ ಮಾಡಿದ ತಕ್ಷಣ ಅದು ಫಲಕಾರಿ ಯಾಗುವುದಿಲ್ಲ. ಬಳಕೆಗೆ ಅಡ್ಡದಾರಿ ನೋಡಲಾಗುತ್ತದೆ.
ಮೊದಲು ಡೇಟಾ ಪ್ರೊಟೆಕ್ಷನ್ ಕಾನೂನು ಜಾರಿಗೊಳಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಆ ಮೂಲಕ, 18 ವರ್ಷದೊಳಗಿನ ಮಕ್ಕಳು ಸೋಷಿಯಲ್ ಮೀಡಿಯಾ, ಒಟಿಟಿ, ವೀಡಿಯೊ ಮತ್ತು ಆನ್‌ಲೈನ್ ಗೇಮಿಂಗ್ ವೇದಿಕೆಗಳಿಗೆ ಹೋಗುತ್ತಿದ್ದಂತೆ ಅವು ಪೋಷಕರ ಒಪ್ಪಿಗೆಯನ್ನು ಕೇಳುತ್ತವೆ.
ಬ್ಯಾನ್ ಮಾಡುವುದರಿಂದ ಏನೂ ಆಗದು ಎಂದೇ ಪರಿಣಿತರು ಹೇಳುತ್ತಿದ್ದಾರೆ. ಅದಕ್ಕೆ ಬದಲಾಗಿ ಮಕ್ಕಳಿಗೆ ಪ್ರೀತಿಯಿಂದ ಹೇಳುವ ಮೂಲಕ ಮನದಟ್ಟು ಮಾಡಿಕೊಡಬೇಕು.
ಸೋಷಿಯಲ್ ಮೀಡಿಯ ಎನ್ನುವುದು ರಸ್ತೆಯ ಹಾಗೆ. ಅದು ಸಂಪರ್ಕ ಮಾಧ್ಯಮ. ಅಲ್ಲಿ ಅಪಘಾತವಾಗುತ್ತದೆ ಎಂದು ಹೋಗದೇ ಇರಲು ಆಗುವುದಿಲ್ಲ. ನಿಧಾನವಾಗಿ, ಎಲ್ಲ ಎಚ್ಚರದೊಂದಿಗೆ ಹೋಗಬೇಕು. ಸೋಷಿಯಲ್ ಮೀಡಿಯಾ ಕೂಡ ಸರಿಯಾಗಿ ಬಳಸಿದರೆ ಉಪಯುಕ್ತವಾಗಿರುವಂಥದ್ದು.
ಎಲ್ಲಕ್ಕಿಂತ ಮುಖ್ಯವಾಗಿ, ದೊಡ್ಡವರು ಏನು ಮಾಡುತ್ತಾರೆ ಎಂದು ನೋಡುತ್ತ ಮಕ್ಕಳು ಕಲಿಯುತ್ತವೆ. ದೊಡ್ಡವರು ಕಡಿಮೆ ಪ್ರಮಾಣದಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಮಾಡಿದರೆ, ಮಕ್ಕಳು ಕೂಡ ಕಡಿಮೆ ನೋಡುವಂತೆ ಮಾಡಲು ಸಾಧ್ಯವಿದೆ.
ಆಸ್ಟ್ರೇಲಿಯದ 6 ನ್ಯೂಸ್ ಎಂಬ ಚಾನೆಲ್ ಒಂದು ಹೇಳಿಕೆ ಬಿಡುಗಡೆ ಮಾಡಿದೆ.
ತಮ್ಮ ತಂಡದಲ್ಲಿ ಯುವ ಪತ್ರಕರ್ತರೇ ಹೆಚ್ಚಿದ್ದಾರೆ. ಕೆಲವರಂತೂ ಇನ್ನೂ ಹೈಸ್ಕೂಲಿನಲ್ಲಿ ಇರುವವರೇ ಆಗಿದ್ದಾರೆ. ಮತ್ತೆ ಕೆಲವರು ಯೂನಿವರ್ಸಿಟಿಗಳಿಗೆ ಪ್ರವೇಶ ಪಡೆಯುವ ಹಂತದಲ್ಲಿದ್ದಾರೆ.
ಅವರು ಪತ್ರಿಕೋದ್ಯಮದಲ್ಲಿನ ತಮ್ಮದೇ ಆಸಕ್ತಿಯಿಂದ ಕೆಲಸ ಮಾಡುತ್ತಿರುವವರು.
13-15ರ ವಯೋಮಾನದ ಅವರಿಗೆ ಸೋಷಿಯಲ್ ಮೀಡಿಯಾ ನಿಷೇಧ ಮಾಡುವುದರಿಂದ ಅದು ಅವರ ಸೃಜನಶೀಲತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಷೇಧ ಹೇರುವುದು ಅಪಾಯಕಾರಿ ಎಂದಿದೆ.
ಈ ನಿಷೇಧ ಸರಿಯಾದ ಕ್ರಮವಲ್ಲ ಎಂದೇ ಹೆಚ್ಚಿನವರು ಅಭಿಪ್ರಾಯ ಪಡುತ್ತಿದ್ದಾರೆ. ಸಮಸ್ಯೆಯ ಸಂಕೀರ್ಣತೆಯನ್ನು ಎದುರಿಸುವ ಬದಲು ನಿಷೇಧ ಮಾಡಿರುವುದು ತಪ್ಪು ಹೆಜ್ಜೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಒಳ್ಳೆಯದೂ ಇವೆೆ. ಅವನ್ನು ನೋಡಬೇಕಾಗಿದೆ.
ಬೆಟರ್ ಇಂಟರ್ನೆಟ್ ಫಾರ್ ಕಿಡ್ಸ್ ಎಂಬ ಪೋರ್ಟಲ್ ಕಾರ್ಯಕ್ರಮದ ಪ್ರಕಾರ, ಮಕ್ಕಳು ಹಾನಿಕಾರಕ ವಿಷಯಗಳ ಸಂಪರ್ಕಕ್ಕೆ ಹೋಗದಂತೆ ತಡೆಯಲು ಸುರಕ್ಷಿತ ಡಿಜಿಟಲ್ ವಾತಾವರಣವನ್ನು ನಿರ್ಮಿಸಬೇಕು.
ಡಿಜಿಟಲ್ ಲೋಕದಲ್ಲಿ ಮಕ್ಕಳನ್ನು ತಾವೇ ನಿಭಾಯಿಸಲು ಬಿಡಬೇಕು. ಹೆಚ್ಚು ಸೃಜನಶೀಲವಾಗಿ ಪಾಲ್ಗೊಳ್ಳುವ ಹಾಗಾಗಬೇಕು.
ಭಾರತದಲ್ಲಿ ಸೋಷಿಯಲ್ ಮೀಡಿಯದಿಂದ ದಾರಿ ತಪ್ಪಿರುವುದು ಮಕ್ಕಳು ಮಾತ್ರವಲ್ಲ, ಹಿರಿಯರೇ ಹೆಚ್ಚು ದಾರಿ ತಪ್ಪಿದ್ದಾರೆ.
ಸೋಷಿಯಲ್ ಮೀಡಿಯಾ ಈಗ ಸುಳ್ಳು ಹಾಗೂ ದ್ವೇಷ ಪ್ರಸಾರ ಮಾಡುವ ಮೀಡಿಯಾ ಆಗಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದಕ್ಕೆ ಅಂತಹ ಸೋಷಿಯಲ್ ಮೀಡಿಯಾ ಕಂಪೆನಿ ಹಾಗೂ ಅದರಲ್ಲಿ ಸುಳ್ಳು, ದ್ವೇಷ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಆದರೆ ಆ ಕೆಲಸ ಇಲ್ಲಿ ಆಗುವುದೇ ಇಲ್ಲ.
ಫೇಕ್ ನ್ಯೂಸ್, ದ್ವೇಷ ಇತ್ಯಾದಿ ಹರಡುವವರಿಗೆ ಧಾರಾಳ ಅವಕಾಶ ಮಾಡಿ ಕೊಟ್ಟು ಜನಪರವಾಗಿ ಬರೆಯುವವರನ್ನೇ ನಿರ್ಬಂಧಿಸಲಾಗುತ್ತದೆ.
ದುಡ್ಡು ಕೊಟ್ಟರೆ ಈ ಸೋಷಿಯಲ್ ಮೀಡಿಯಾ ಕಂಪೆನಿಗಳು ತಮ್ಮ ವೇದಿಕೆಯಲ್ಲಿ ಏನನ್ನು ಬೇಕಾದರೂ ಪ್ರಚಾರ ಮಾಡಲು ಅವಕಾಶ ಕೊಡುತ್ತವೆ. ಸರಕಾರ ಅದಕ್ಕೆ ಕಡಿವಾಣ ಹಾಕಬೇಕು, ಈ ಕಂಪೆನಿಗಳ ಆಟಾಟೋಪದ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕು, ಜೊತೆಗೆ ಆ ವೇದಿಕೆಯಲ್ಲಿ ಸುಳ್ಳು, ದ್ವೇಷ ಇತ್ಯಾದಿ ಹರಡುವ ಬಳಕೆದಾರರನ್ನೂ ಹೆಡೆಮುರಿ ಕಟ್ಟಬೇಕು.
ನಿಷೇಧವೊಂದೇ ದಾರಿಯಲ್ಲ. ಎಚ್ಚರದಿಂದ ಬಳಸಿದರೆ ಲಾಭ ಇದ್ದೇ ಇದೆ.
ರಸ್ತೆಯನ್ನು ಬಳಸಲೇಬೇಕಿರುವಾಗ, ರಸ್ತೆ ಸರಿಯಿರುವಂತೆ ಮಾಡುವುದು ಅಗತ್ಯ.
ಹೊರತು, ಬಳಸಲೇಬೇಡಿ ಎನ್ನುವುದಲ್ಲ.