ಧರ್ಮದ ಪಾತ್ರ, ಸಂವಿಧಾನದ ಅಗತ್ಯ; ಜನಸಾಮಾನ್ಯರ ನಿಲುವು

ಯಾವುದೇ ಧರ್ಮದ ಅನುಯಾಯಿಗಳಲ್ಲಿ ಅಭದ್ರತೆ ಮೂಡಿಸುವುದು, ಒಂದು ಸಮುದಾಯದವರಿಗೆ ಮತದಾನದ ಹಕ್ಕು ಇರಬಾರದು ಎಂದು ನುಡಿಯುವ ಆಯಾ ಜಾತಿಯ/ಧರ್ಮದ ಸಾಧು ಸಂತರಿಗೆ ಶೋಭೆ ತರುವುದಿಲ್ಲ. ಸಂವಿಧಾನ ನಮಗೆ ಒದಗಿಸಿರುವ ಮುಕ್ತ ವಾತಾವರಣದಲ್ಲಿ ನಾವು ಸ್ವತಂತ್ರವಾಗಿ ಯೋಚಿಸಬೇಕು. ಯಾವುದೇ ಧಾರ್ಮಿಕ ಮುಖಂಡರ ನುಡಿಗಳಂತೆ ಅಲ್ಲ.

Update: 2024-12-02 06:07 GMT

‘‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ’’ ಎಂದು ಸಂತ ಸಮಾವೇಶದಲ್ಲಿ ಪ್ರತಿಪಾದಿಸಿರುವ ಸ್ವಾಮೀಜಿಗಳು ಸನಾತನ ಮಂಡಳಿಗೆ ಆಗ್ರಹವನ್ನಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಧುನಿಕ ಸಮಾಜದ ನಡವಳಿಕೆಗಳನ್ನು ನಿರ್ದೇಶಿಸಬಲ್ಲ ಸಂವಿಧಾನವು ಧರ್ಮಗ್ರಂಥಗಳಿಗಿಂತ ನಮಗೇಕೆ ಪ್ರಸ್ತುತವಾಗಬೇಕು ಎಂಬುದನ್ನು ಪುನಃ ನೆನಪಿಸಿಕೊಳ್ಳುವ ಅವಶ್ಯಕತೆಯಿದೆ.

ಸಂವಿಧಾನ ಆಡಳಿತದ ಸೂತ್ರಧಾರಿ. ಯಾವುದೇ ರಾಜಕೀಯ ವ್ಯವಸ್ಥೆ ಸರ್ವಾಧಿಕಾರಿಯಾಗದಂತೆ ಪ್ರಜೆಗಳ ಹಕ್ಕುಗಳಿಗೆ ರಕ್ಷಣೆ ಕೊಡುವ ಸಾಧನ. ಸಮಾಜದ ಸುಧಾರಣೆಗೆ ಅತ್ಯಮೂಲ್ಯವಾದ ಮಾರ್ಗದರ್ಶಿ. ಸಾಂಸ್ಥಿಕ ಧರ್ಮ ಮತ್ತು ಅದರ ಪ್ರತಿಪಾದಕರು ಇದರಿಂದ ಅಂತರ ಕಾಯ್ದುಕೊಳ್ಳಬೇಕು. ಆದರೆ, ಯಾವುದೇ ಸಾಂಸ್ಥಿಕ ಧರ್ಮದ ಸಾಧು ಸಂತರು ಅವರವರ ಧರ್ಮದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಪ್ರತಿಪಾದಿಸುತ್ತಾರೆ. ಧರ್ಮಗ್ರಂಥಗಳನ್ನು ಮುಂದಿಡುತ್ತಾರೆ. ಅವರ ನಿರ್ದೇಶನದಂತೆ ಆಯಾ ಧರ್ಮದ ಅನುಯಾಯಿಗಳು ಅವರವರ ಧರ್ಮದ ಬಗ್ಗೆ ತೆಗೆದುಕೊಂಡಿರುವ ನಿಲುವನ್ನು ನಾವು ಗಮನಿಸಬೇಕು. ಅಂದರೆ, ಪ್ರಜಾಪ್ರಭುತ್ವದಲ್ಲಿ ಅವರವರ ಇಚ್ಛೆಯನುಸಾರ ಧರ್ಮ ಪರಿಪಾಲನೆಯ ಸ್ವಾತಂತ್ರವನ್ನು ಸಂವಿಧಾನದ ಮೂಲಕ ಪಡೆದಿರುವ ಸಾಮಾನ್ಯ ಪ್ರಜೆಗಳ ನಿಲುವೇನು?

ಪ್ರಜಾಪ್ರಭುತ್ವದ ಆಧುನಿಕ ಸಮಾಜದಲ್ಲಿ ಬದುಕುವ ಪ್ರಜೆಗಳು ಅವರ ಧಾರ್ಮಿಕ ನಂಬಿಕೆಗಳಿಗೆ ಕಾರಣಗಳನ್ನು ನೀಡುತ್ತಾರೆ. ಮುಖ್ಯವಾಗಿ, ನಮ್ಮ ಧರ್ಮ ಕಾಲಕ್ಕೆ ತಕ್ಕಂತೆ ಸುಧಾರಣೆಗೊಳಪಟ್ಟಿದೆಯೆಂದು ಪ್ರತಿಪಾದಿಸಲು ನಿರಂತರ ಪ್ರಯತ್ನಿಸುತ್ತಿರುತ್ತಾರೆ. ತಮ್ಮ ಧರ್ಮವೇ ಅಂತಿಮ ಸತ್ಯ ಎಂಬುದು ಆಯಾ ಧರ್ಮಪಾಲಕರ ನಂಬಿಕೆ. ಯಾವುದೇ ಧರ್ಮದ ಸುಧಾರಣೆ ಎಂದರೆ ಏನು? ಧರ್ಮವು ಅಂತಿಮವಾದರೆ ಅದು ಸುಧಾರಣೆಗೆ ತೆರೆದುಕೊಳ್ಳುವ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆಯೇ? ಕಾಲಕಾಲಕ್ಕೆ ಸುಧಾರಣೆಗೊಂಡಿರುವ ಧರ್ಮಗಳ ಉದಾಹರಣೆಗಳನ್ನು ನಾವು ಪರಿಶೀಲಿಸಿದಾಗ, ಸುಧಾರಣೆಗೊಳ್ಳುವುದು ಆ ಧರ್ಮದ ಮೂಲ ಸ್ವರೂಪವಲ್ಲ. ಬದಲಾಗಿ ಸುಧಾರಣೆಯಾಗಿರುವುದು ಮನುಷ್ಯನ ಬೌದ್ಧಿಕ ಮತ್ತು ಭಾವನಾತ್ಮಕ ವಿಕಸನದಿಂದ ಕಂಡುಕೊಂಡಿರುವ ನೈತಿಕ ಮೌಲ್ಯಗಳಲ್ಲಿ.

ಧರ್ಮ ಗ್ರಂಥಗಳು ಸಾವಿರ ವರ್ಷಗಳ ಹಿಂದೆ ಬರೆದಿರುವ ಮೌಲ್ಯಗಳನ್ನೇ ಅಂತಿಮವೆನ್ನುತ್ತಿವೆಯಾದರೂ ಪ್ರಜಾಪ್ರಭುತ್ವ ಉಳಿಯಲು, ಜಾತ್ಯತೀತ ಜೀವಪರ ಸೌಹಾರ್ದ ಬದುಕು ಅರಳಲು ಸುಧಾರಣೆಗೆ ಮುಕ್ತವಾಗಿರುವ ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ.

ಬೌದ್ಧಿಕ ವಿಕಸನದಿಂದ ನಾವು ಧರ್ಮ ಗ್ರಂಥಗಳನ್ನು ಅರ್ಥೈಸಿಕೊಳ್ಳುವಲ್ಲಿ ಕೂಡ ಸುಧಾರಣೆ ಹೊಂದಿದ್ದೇವೆ. ಧರ್ಮಗ್ರಂಥಗಳಲ್ಲಿ ಯಾವ ಮೌಲ್ಯಗಳು ನಮಗೆ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆಯೋ ಅದಷ್ಟನ್ನು ಮಾತ್ರ ಎತ್ತಿಹಿಡಿದು ಈ ಕಾಲಕ್ಕೆ ಸೂಕ್ತವಲ್ಲದ್ದನ್ನು ತಿರಸ್ಕರಿಸಿದ್ದೇವೆ ಇಲ್ಲವೇ ನಿರ್ಲಕ್ಷಿಸಿದ್ದೇವೆ. ತಿರಸ್ಕರಿಸಿರುವುದಕ್ಕಿಂತ ನಿರ್ಲಕ್ಷಿಸಿರುವುದೇ ಹೆಚ್ಚು. ಆದ್ದರಿಂದ ಅವುಗಳ ಅರ್ಥವಿಲ್ಲದ ಪತನಗೊಂಡಿರುವ ನೈತಿಕ ಮೌಲ್ಯಗಳು ನಮಗೆ ಕಾಣದಿರಬಹುದು. ಆದರೆ ಮೂಲಭೂತವಾದಿಗಳು ಧರ್ಮ ಗ್ರಂಥಗಳ ಈ ನಿರ್ಲಕ್ಷ್ಯಗೊಂಡ ಅವೈಜ್ಞಾನಿಕ ಮೌಲ್ಯಗಳನ್ನು ಚಾಚೂತಪ್ಪದೆ ಪ್ರತಿಪಾದಿಸುತ್ತಾರೆ. ಇದನ್ನು ಸಮಾಜವು ಬೇರ್ಪಡಿಸಿ ನೋಡುವುದರಿಂದ ಉಗ್ರವಾದಿಗಳು ಮಾತ್ರ ಧರ್ಮವನ್ನು ಹಾಳುಗೆಡುವುತ್ತಿದ್ದಾರೆ ಎಂಬಂತೆ ಕಾಣುತ್ತದೆ. ಇದರಲ್ಲಿ ನಮ್ಮಂತಹ ಸಾಮಾನ್ಯ ಜನರು ಧರ್ಮ ಗ್ರಂಥಗಳಲ್ಲಿನ ಅಪಾಯಕಾರಿ ಮೌಲ್ಯಗಳ ಬಗ್ಗೆ ತಮ್ಮ ನಿರ್ಲಕ್ಷದ ಮೂಲಕ ಪರೋಕ್ಷವಾಗಿ ಉಗ್ರವಾದಕ್ಕೆ ಎಡೆಮಾಡಿಕೊಟ್ಟಿರುವುದನ್ನು ಗ್ರಹಿಸಲು ಸೋಲುತ್ತೇವೆ. ಸಂವಿಧಾನ ಮತ್ತು ಕಾನೂನಿನ ರಕ್ಷಣೆಯಲ್ಲಿ ಸಮಾಜವು ಅಭಿವೃದ್ಧಿಯ ಹಾದಿ ಹಿಡಿದಿದೆಯೇ ಹೊರತು ಧರ್ಮ ಗ್ರಂಥಗಳ ರಕ್ಷಣೆಯಲ್ಲಿ ಅಲ್ಲ.

ಸಂವಿಧಾನವು ಪ್ರಜೆಗಳ ಸೃಜನಶೀಲ ಬೆಳವಣಿಗೆಗೆ ರಕ್ಷಣೆ ಕೊಡುತ್ತದೆ. ಸೌಹಾರ್ದ ಮತ್ತು ಶಾಂತಿ ಪ್ರಜಾಪ್ರಭುತ್ವದ ವಾತಾವರಣದಲ್ಲಿ ಅರಳುವ ಕುಸುಮಗಳು. ಯಾವುದೇ ಧರ್ಮದ ಅನುಯಾಯಿಗಳಲ್ಲಿ ಅಭದ್ರತೆ ಮೂಡಿಸುವುದು, ಒಂದು ಸಮುದಾಯದವರಿಗೆ ಮತದಾನದ ಹಕ್ಕು ಇರಬಾರದು ಎಂದು ನುಡಿಯುವ ಆಯಾ ಜಾತಿಯ/ಧರ್ಮದ ಸಾಧು ಸಂತರಿಗೆ ಶೋಭೆ ತರುವುದಿಲ್ಲ. ಸಂವಿಧಾನ ನಮಗೆ ಒದಗಿಸಿರುವ ಮುಕ್ತ ವಾತಾವರಣದಲ್ಲಿ ನಾವು ಸ್ವತಂತ್ರವಾಗಿ ಯೋಚಿಸಬೇಕು. ಯಾವುದೇ ಧಾರ್ಮಿಕ ಮುಖಂಡರ ನುಡಿಗಳಂತೆ ಅಲ್ಲ. ಬಹು ಧರ್ಮೀಯರು ಬಾಳುವ ನಾಡು ನಮ್ಮದು. ಇದಕ್ಕೆ ಪೂರಕವಾಗಿ ಭಾರತ ದೇಶದ ಪ್ರಜೆಗಳಾದ ನಾವೆಲ್ಲರೂ ಧರ್ಮಗಳ ನಡುವಿನ ಸಂವಾದಕ್ಕೆ ಅವಕಾಶಗಳನ್ನು ಒದಗಿಸಬೇಕು. ಸಂವಾದದ ಮೂಲಕ ನಮಗೆ ತಿಳಿಯುವ ವಿಷಯಗಳು ಅಪಾರ. ಹೊಸ ಜ್ಞಾನವು ನಮ್ಮನ್ನು ಧರ್ಮಾತೀತವಾಗಿ ಬದುಕಲು ಅನುವು ಮಾಡಿಕೊಡಬಲ್ಲದು.

ಬಹುತ್ವವನ್ನು ಸಂಭ್ರಮಿಸುವ, ಸಹಜ ಮಾನವೀಯ ಸಂಬಂಧಗಳ ಪ್ರೀತಿ ವಿಶ್ವಾಸಗಳಲ್ಲಿ ಬೆರೆತು ಹೋಗಿದ್ದ ಭಾರತೀಯತೆ ಎಂಬ ಅಸ್ಮಿತೆ ಇಂದು ರಾಷ್ಟ್ರೀಯತೆ ಎಂಬ ಸಂಕುಚಿತ ಸಿದ್ಧಾಂತಕ್ಕೆ ಬಲಿಯಾಗುತ್ತಿದೆ. ರಾಷ್ಟ್ರೀಯತೆಯೆಂದರೆ ಏಕ ಸಂಸ್ಕೃತಿಯನ್ನು ಬಲವಂತವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯನ್ನಾಗಿಸಿರುವ ಕಾಲದಲ್ಲಿ ನಾವಿದ್ದೇವೆ. ಇತರ ಧರ್ಮೀಯರ ಜೊತೆಗೆ ಸಹಬಾಳ್ವೆ ಮಾಡುವ ದಿಕ್ಕಿನತ್ತ ನಡೆಯುತ್ತಿದ್ದ ಭಾರತದ ಮನಸ್ಸಿಗೆ ಇತ್ತೀಚಿನ ಅಪಾಯಕಾರಿ ಬದಲಾವಣೆಗಳನ್ನು ಹಿಮ್ಮೆಟ್ಟುವ ಶಕ್ತಿ ಇದೆ.

ಭಾರತೀಯರ ಇತಿಹಾಸ ತಿಳಿದುಕೊಳ್ಳುವ ಮನಸ್ಸು ಮತ್ತು ಆ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ರಾಜಕೀಯ ತಿರುವುಗಳಲ್ಲಿ ಭಾಗೀದಾರರಾಗುವುದು, ಸಾಂಸ್ಕೃತಿಕ ದಬ್ಬಾಳಿಕೆಯನ್ನು ತಿರಸ್ಕರಿಸುವುದು, ಬಹುತ್ವಕ್ಕೆ ಅಪಾಯಕಾರಿಯಾದ ಧರ್ಮಾಂಧತೆಯನ್ನು ತಿರಸ್ಕರಿಸುವುದು, ಶಿಕ್ಷಣದಲ್ಲಿ ವೈಚಾರಿಕತೆಯ ಸ್ಪರ್ಶ ನೀಡುವುದು, ವ್ಯಾವಹಾರಿಕ ಜೀವನವಷ್ಟೇ ಮಾಡದೆ ಸಹಬಾಳ್ವೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸುವುದು ಇವೆಲ್ಲಾ ನಮ್ಮ ಜವಾಬ್ದಾರಿಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಡಾ. ಸುಶಿ ಕಾಡನಕುಪ್ಪೆ

contributor

Similar News