ಸುಳ್ಯದ ಉದ್ಯಮಿ ಅಶ್ರಫ್‌ರಿಂದ ಕ್ಷೀರ ಕ್ರಾಂತಿ : ಫಾರ್ಮ್‌ನಲ್ಲಿವೆ ವಿವಿಧ ತಳಿಯ 120ಕ್ಕೂ ಅಧಿಕ ಹಸುಗಳು
ಮಂಗಳೂರು: ಹಿಂದಿನ ಕಾಲದಲ್ಲಿ ಹಾಲು, ಗೊಬ್ಬರಕ್ಕಾಗಿ ಬಹುತೇಕ ಮನೆಗಳಲ್ಲಿ ಹಸುಗಳನ್ನು ಸಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಸುಗಳನ್ನು ಸಾಕುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಒಂದೆರೆಡು ಹಸುಗಳನ್ನು ಸಾಕಲು ಕಷ್ಟಪಡುವ ಈಗಿನ ಕಾಲದಲ್ಲಿ ಇಲ್ಲೊಬ್ಬರು 120ಕ್ಕೂ ಅಧಿಕ ಹಸುಗಳ ಸಾಕಣೆಯಲ್ಲಿ ತೊಡಗಿಸಿಕೊಂಡು ಕ್ಷೀರ ಕ್ರಾಂತಿ ಮಾಡಿದ್ದಾರೆ.
ಸುಳ್ಯದ ಇಂಡಿಯನ್ ಟೈಲ್ಸ್ ಮಾಲಕ ಉದ್ಯಮಿ, ಕೃಷಿಕ ಮುಹಮ್ಮದ್ ಅಶ್ರಫ್ ಅವರೇ ಈ ಯಶಸ್ವಿ ಹೈನುಗಾರ. ಪರಪ್ಪೆ ಸಮೀಪದ ಚೆಂಡೆಮೂಲೆ ಮತ್ತು ಗಾಳಿಮುಖ ಎಂಬಲ್ಲಿರುವ ಅವರ ಫಾರ್ಮ್‌ಗಳಲ್ಲಿ 120ಕ್ಕೂ ವಿವಿಧ ತಳಿಯ ಹಸುಗಳಿವೆ.
‘ಏಳು ವರ್ಷಗಳ ಹಿಂದೆ ಚಿಕ್ಕ ಫಾರ್ಮ್ ಆರಂಭಿಸಿ 10 ಹಸುಗಳನ್ನು ಸಾಕಿದೆ. ಬಳಿಕ ಹೈನುಗಾರಿಕೆಯನ್ನು ಹೆಚ್ಚು ಆಸ್ಥೆಯಿಂದ ಮಾಡಲು ಮುಂದಾದೆೆ. ಹಸುಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದೆ. ಸದ್ಯ ನನ್ನ ಫಾರ್ಮ್‌ನಲ್ಲಿ 120ಕ್ಕೂ ಅಧಿಕ ವಿವಿಧ ತಳಿಯ ಹಸುಗಳಿವೆ. ಇದರಲ್ಲಿ ಹಾಲು ಕೊಡುವ 80 ಹಸುಗಳು, 20 ಗಬ್ಬದ ಹಸುಗಳು ಮತ್ತು 20 ಕರುಗಳಿವೆ’ ಎಂದು ಅಶ್ರಫ್ ಹೇಳುತ್ತಾರೆ.
ಎರಡು ಫಾರ್ಮ್: ಅಶ್ರಫ್‌ರ ಪರಪ್ಪೆ ಸಮೀಪದ ಚೆಂಡೆಮೂಲೆಯ ಫಾರ್ಮ್‌ನಲ್ಲಿ ಹಾಲು ಕೊಡುವ ಮತ್ತು ಗಬ್ಬದ ಹಸುಗಳಿವೆ. ಗಾಳಿಮುಖದ ಇನ್ನೊಂದು ಫಾರ್ಮ್‌ನಲ್ಲಿ ಕರುಗಳ ಸಹಿತ ಇನ್ನಿತರ ಹಸುಗಳನ್ನು ಸಾಕಲಾಗುತ್ತದೆ.
ಜೆರ್ಸಿ, ಎಚ್‌ಎಫ್, ಗೀರ್, ಮಲೆನಾಡ ಗಿಡ್ಡ ಸೇರಿದಂತೆ ವಿವಿಧ ತಳಿಗಳ ಹಸುಗಳು ಇವರಲ್ಲಿವೆ. ಹೆಚ್ಚು ಹಾಲು ನೀಡುವ ಜೆರ್ಸಿ, ಎಚ್‌ಎಫ್ ತಳಿಗಳ ಹಸುಗಳ ಸಂಖ್ಯೆ ಅಧಿಕ.
ದಿನದಲ್ಲಿ 730 ಲೀಟರ್ ಹಾಲು: ಅಶ್ರಫ್‌ರ ಫಾರ್ಮ್ ನಿಂದ ಪ್ರತಿನಿತ್ಯ 730 ಲೀಟರ್ ಹಾಲು ಲಭಿಸುತ್ತದೆ. 650 ಲೀಟರ್ ಹಾಲನ್ನು ಸ್ಥಳೀಯ ಹಾಲು ಸೊಸೈಟಿಗೆ ನೀಡುತ್ತಾರೆ. 80 ಲೀಟರ್ ಹಾಲನ್ನು ಊರವರಿಗೆ ಮಾರಾಟ ಮಾಡುತ್ತಾರೆ.
ಹೈಜೆನಿಕ್ ಫಾರ್ಮ್: 120 ಹಸುಗಳನ್ನು ಆರೈಕೆ ಮಾಡಲು ವಿಶಾಲವಾದ ಹಟ್ಟಿ ನಿರ್ಮಿಸಲಾಗಿದೆ. ಅದನ್ನು ದಿನನಿತ್ಯ ತೊಳೆದು, ಹಸುಗಳನ್ನು ಸ್ನಾನ ಮಾಡಿಸಿ ಸ್ವಚ್ಛವಾಗಿಡಲಾಗುತ್ತದೆ. ಕಾಲಕಾಲಕ್ಕೆ ಪಶು ವೈದ್ಯರನ್ನು ಕರೆಸಿ ಪಶುಗಳ ತಪಾಸಣೆ ಮಾಡಿಸಲಾಗುತ್ತದೆ. ಅವಶ್ಯವಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಫಾರ್ಮ್‌ನಲ್ಲೇ ಪಶುಗಳಿಗೆ ಆಹಾರ ತಯಾರಿ: ಸುಮಾರು ಐದು ಎಕರೆ ಜಾಗದಲ್ಲಿ ಹುಲ್ಲು ಬೆಳೆಯಲಾಗುತ್ತದೆ. ಅಲ್ಲದೆ ಜೋಳದ ದಂಟನ್ನು ತಂದು ಫಾರ್ಮ್‌ನಲ್ಲೇ ಶೈಲೇಝ್ ಪಶು ಆಹಾರವನ್ನು ತಯಾರಿಸಿ ಹಸುಗಳಿಗೆ ನೀಡಲಾಗುತ್ತದೆ. ಹಾಗಾಗಿ ಹೊರಗಿನ ಆಹಾರವನ್ನು ಫಾರ್ಮ್‌ಗಳಲ್ಲಿ ಬಳಕೆ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳುತ್ತಾರೆ ಅಶ್ರಫ್.
ಫಾರ್ಮ್ ವಿಸ್ತರಣೆ: ಹಸುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಅಶ್ರಫ್ ತನ್ನ ಈ ಫಾರ್ಮ್‌ನ್ನು ವಿಸ್ತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಸಾವಯವ ಕೃಷಿಕ: ಅಶ್ರಫ್ ಕೃಷಿಯಲ್ಲೂ ಎತ್ತಿದ ಕೈ. ದೇಲಂಪಾಡಿ ಗ್ರಾಪಂ ಮಟ್ಟದ ಹೈನು ಕೃಷಿಕ ಮಾತ್ರವಲ್ಲದೆ ಉತ್ತಮ ಸಾವಯವ ಕೃಷಿಕರೂ ಆಗಿದ್ದಾರೆ. ಜಾನುವಾರು ಸಾಕಣೆಯು ಇವರ ಸಾವಯವ ಕೃಷಿಗೆ ಪೂರಕವಾಗಿದೆ. ಗೊಬ್ಬರ, ಸ್ಲರಿ ಹೈನುಗಾರಿಕೆಯಿಂದ ದೊರೆಯುತ್ತದೆ. ಸ್ಲರಿ ತಯಾರಿಸಿ ಅಡಿಕೆ ತೋಟಕ್ಕೆ ಬಿಡುತ್ತಾರೆ. ಸೆಗಣಿಯನ್ನು ಗೊಬ್ಬರ ಮಾಡಿ ತಮ್ಮ ತೋಟಕ್ಕೆ ಬೇಕಾದಷ್ಟು ಬಳಸುತ್ತಾರೆ. ಉಳಿದ ಸೆಗಣಿಯನ್ನು ಒಣಗಿಸಿ ಪುಡಿ ಮಾಡಿ ಗೊಬ್ಬರ ಮಾಡಿ ಬೇಡಿಕೆ ಇದ್ದವರಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಪೂರ್ತಿಯಾಗಿ ಸಾವಯವ ಕೃಷಿ ಮಾಡಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಅಶ್ರಫ್ ಅಭಿಪ್ರಾಯಪಡುತ್ತಾರೆ.
ಮೂರು ಬಾರಿ ಕೇರಳ ರಾಜ್ಯ ಪ್ರಶಸ್ತಿ
ದೇಲಂಪಾಡಿ ಗ್ರಾಪಂ ಮತ್ತು ಕಾರಡ್ಕ ಬ್ಲಾಕ್ ಮಟ್ಟದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ಹೈನು ಕೃಷಿಕರಾಗಿರುವ ಅಶ್ರಫ್‌ರಿಗೆ ಕೇರಳ ರಾಜ್ಯಮಟ್ಟದಲ್ಲಿ ಮೂರು ಬಾರಿ ‘ಅತ್ಯುತ್ತಮ ಹೈನುಗಾರ’ ಪ್ರಶಸ್ತಿ ಲಭಿಸಿದೆ. ಅಲ್ಲದೆ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲೂ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ.
ಉದ್ಯಮ, ಕೃಷಿ ಮಾಡುತ್ತಿದ್ದರೂ ಹೈನುಗಾರಿಕೆ ನನಗೆ ಅಚ್ಚುಮೆಚ್ಚು. ಮುಂಜಾನೆ 5 ಗಂಟೆಗೆ ಎದ್ದು ನಾನು, ಪತ್ನಿ, ಪುತ್ರ ಮತ್ತು ಸೊಸೆ ಜೊತೆಯಾಗಿ ಹಸುಗಳ ಆರೈಕೆ, ಇನ್ನಿತರ ಕೆಲಸಗಳಲ್ಲಿ ತೊಡಗುತ್ತೇವೆ. ಬೆಳಗ್ಗೆ 10 ಗಂಟೆಯ ತನಕ ಇದು ಮುಂದುವರಿಯುತ್ತದೆ. ಬಳಿಕ ನನ್ನ ಸುಳ್ಯದ ಅಂಗಡಿಗೆ ತೆರಳುತ್ತೇನೆ. ಹೈನುಗಾರಿಕೆಗೆ ಎರಡು ಫಾರ್ಮ್‌ಗಳಲ್ಲಿ 14 ಕೆಲಸಗಾರರು ಸಹಾಯಕ್ಕೆ ಇದ್ದಾರೆ.
-ಅಶ್ರಫ್, ಫಾರ್ಮ್ ಮಾಲಕ