ವಾಲ್ಮೀಕಿ ಬರೆದ ರಾಮಾಯಣ!

ಕವಿಮಹರ್ಷಿ ಅಂದು ಹಾಡಿದ ರಾಮಾಯಣ ಇಂದು ಮತ್ತೊಮ್ಮೆ ನಮ್ಮಲ್ಲಿ ಮೂಡದ ಹೊರತು ಸಾರ್ಥಕವಾಗುವುದಿಲ್ಲ. ಏಕೆಂದರೆ ಕೃತಿಯ ರಸಾಸ್ವಾದನೆಯೂ ಕೃತಿರಚನೆಯಂತೆ ಒಂದು ಸೃಷ್ಟಿಕಾರ್ಯ. ಓದುವ ಅಥವಾ ಆಲಿಸುವ ನಮ್ಮ ಒಬ್ಬೊಬ್ಬರ ಹೃದಯದಲ್ಲಿಯೂ ರಾಮಾಯಣದ ಪುನಃಸೃಷ್ಟಿಯಾಗಬೇಕು. ಹಾಗೆ ಒಂದೊಂದು ಚೇತನದಲ್ಲಿಯೂ ರಾಮಾಯಣಾವತಾರವಾಗುವುದರಲ್ಲಿಯೆ ವಾಲ್ಮೀಕಿಯ ಕೃತಿ ಸಾರ್ಥಕತೆ ಪಡೆಯುತ್ತದೆ; ನಮ್ಮ ಬಾಳುವೆಗೂ ಪುರುಷಾರ್ಥ ಸಿದ್ಧಿಯಾಗುತ್ತದೆ.

Update: 2024-01-22 04:43 GMT

ವಾಲ್ಮೀಕಿ ನಿಷಾದರ ಕುಲದಲ್ಲಿ  ಹುಟ್ಟಿದನು. ನಿಷಾದರು ಅತ್ಯಂತ ಅಜ್ಞರೆಂದಾಗಲಿ ಕ್ರೂರಿಗಳಾದ ಕಾಡುಜನರೆಂದಾಗಲಿ ಭಾವಿಸಬೇಕಾಗಿಲ್ಲ. ಶ್ರೀರಾಮನ ಪ್ರಿಯ ಸ್ನೇಹಿತನಾದ ಗುಹನೂ ಬೇಡರ ದೊರೆ ಎಂಬುದನ್ನು ಗಮನಿಸಿದರೆ ನಿಷಾದರಿಗೂ ಅವರ ನೆಲದ ಕುಲದ ವಿದ್ಯೆ ಸಂಸ್ಕೃತಿ ಇದ್ದುವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

ವ್ಯಾಧರ ಕುಲದಲ್ಲಿ ಹುಟ್ಟಿದ ವಾಲ್ಮೀಕಿ ವ್ಯಾಧವೃತ್ತಿಯಿಂದ ಬಾಳುತ್ತಿದ್ದನೆಂದರೆ ಅಧರ್ಮವೂ ಅಲ್ಲ ಆಶ್ಚರ್ಯವೂ ಅಲ್ಲ. ಅರಣ್ಯಗಳಲ್ಲಿ ಬಿಲ್ಲುಬಾಣ ಕತ್ತಿ ಈಟಿಗಳನ್ನು ಹಿಡಿದು ತನ್ನವರ ಕೂಡೆ ನಡೆದು ಹುಲಿ ಸಿಂಹ ಆನೆ ಕಡವೆ ಮಿಗ ಮೊದಲಾದ ವನ್ಯಜಂತುಗಳನ್ನು ಬೇಟೆಯಾಡಿರಬೇಕು, ದಂತ ಚರ್ಮ ಉಗುರು ಮೊದಲಾದುವುಗಳನ್ನು, ಶೇಖರಿಸಿರಬೇಕು. ಹೊಳೆ ಕೆರೆಗಳಲ್ಲಿ ಬಲೆ ಬೀಸಿಯೋ ಗಾಳ ಹಾಕಿಯೋ ಸಿಡಿಯೊಡ್ಡಿಯೋ ಮೀನು ಹಿಡಿದಿರಬೇಕು, ಈಸಾಡಿರಬೇಕು. ತರತರದ ಮರಗಳಲ್ಲಿ ತರತರದ ರುಚಿಯ ಹಣ್ಣು ಹಂಪಲುಗಳನ್ನು ಕಿತ್ತಿರಬೇಕು, ವಿಧವಿಧವಾದ ಗಿಡಬಳ್ಳಿಗಳನ್ನು ಹುಡುಕಿ ಗೆಡ್ಡೆಗೆಣಸುಗಳನ್ನು ಅಗೆದು ತನಗೂ ತನ್ನವರಿಗೂ ಆಹಾರ ಒದಗಿಸಿರಬೇಕು. ಬದುಕಿನ ಈ ಎಲ್ಲ ಅನಿವಾರ‌್ಯವಾದ ಲೌಕಿಕ ನಿಮಿತ್ತಗಳಿಂದಾಗಿ ವಾಲ್ಮೀಕಿ ಪ್ರಕೃತಿದೇವಿಯ ಸೌಂದರ‌್ಯ ಸಾಮ್ರಾಜ್ಯದ ವಿವಿಧ ಸಂಪತ್ತುಗಳನ್ನು ವಿವರವಾಗಿ ಹೃದಯಂಗಮವಾಗಿ ಅನುಭವಿಸಿರಬೇಕು.

ಮೊದಲ ಕವಿಯಾಗುವ ತನ್ನ ಮೆಚ್ಚಿನ ಕಂದನನ್ನು ವ್ಯಾಧನನ್ನಾಗಿ ಹುಟ್ಟಿಸುವಂತೆ ವಾಗ್ದೇವಿ ತನ್ನ ಪತಿಯನ್ನು ಪ್ರೇರಿಸಿದಳು ಎಂದು ತೋರುತ್ತದೆ. ಇಲ್ಲದಿದ್ದರೆ ರಾಮಾಯಣ ಈಗಿರುವುದಕ್ಕಿಂತಲೂ ಸಂಪೂರ್ಣವಾಗಿ ಅನ್ಯಪ್ರಕಾರದಲ್ಲಿ ನಮಗೆ ದೊರೆಯುತ್ತಿತ್ತು ಎಂದು ಧೈರ‌್ಯವಾಗಿ ಊಹಿಸಬಹುದು. ವಾಲ್ಮೀಕಿಯ ಬಾಲ್ಯ ಮತ್ತು ತಾರುಣ್ಯ ಕಾಲಗಳ ಅರಣ್ಯಪರಿಚಯದ ಪೂರ್ಣಫಲ ಅವನ ದಿವ್ಯಕೃತಿಯಲ್ಲಿ ಪ್ರತಿಫಲಿತವಾಗಿರುವುದನ್ನು ನಾವು ಕಾಣುತ್ತೇವೆ. ಆ ಕಾಡಿನ ಒಲವು ಆ ಮರಮರದ ಗಿಡಗಿಡದ ಬಳ್ಳಿಬಳ್ಳಿಯ ಆತ್ಮೀಯವಾದ ಪರಿಚಯ, ಹೂವು ಹಣ್ಣು ಹಕ್ಕಿ ಮೊದಲಾದುವುಗಳ ಸೌಂದರ್ಯದಲ್ಲಿರುವ ಆ ಆವೇಶಪೂರ್ಣವಾದ ಆಸಕ್ತಿ, ಅವುಗಳ ಒಂದೊಂದು ವಿವರದಲ್ಲಿಯೂ ನಿಕಟವೂ ದೀರ್ಘವೂ ಆದ ಅನುಭವದಿಂದಲೇ ಒದಗುವ ಆ ರಸರುಚಿ, ಋತುಋತುಗಳಲ್ಲಿ ವ್ಯತ್ಯಸ್ತವಾಗುವ ಪ್ರಕೃತಿಸೌಂದರ್ಯದ ಆ ವಿವರಜ್ಞಾನ,- ಇವು ವ್ಯಾಧವೃತ್ತಿಗಲ್ಲದೆ ಅಷ್ಟು ಆತ್ಮೀಯವಾಗಿ ಲಭಿಸುವುದು ಸುಲಭವಲ್ಲ. ವಾಲ್ಮೀಕಿಯ ನಾಳನಾಳಗಳಲ್ಲಿ ಬಾನು ಮುಗಿಲು ಬೆಟ್ಟ ಕಾಡು ಮಿಗ ಹಕ್ಕಿ ಮಳೆ ಬಿಸಿಲು ಚಳಿ ಮಂಜು ಬೆಳಗು ಬೈಗು ನೇಸರು ತಿಂಗಳು ಇವೆಲ್ಲವೂ ನೆತ್ತರಾಗಿ ಹರಿಯುತ್ತಿರುವುದು ಅವನು ನಿಷಾದನಾಗಿ ಸಂಭವಿಸಿದ ಪುಣ್ಯದಿಂದಲ್ಲದೆ  ಬೇರೆ ಅಲ್ಲ.

ಹೀಗೆ ಹುಟ್ಟಿನಿಂದಲೇ ಕವಿಯಾಗಿದ್ದ ವ್ಯಾಧರ ತರುಣನಿಗೆ ‘ನಾರದ’ರಂತಹ ಗುರುವಿನ ಅನುಗ್ರಹವೂ ದೊರೆಯಿತು. ನಾರದ ಎಂಬ ಮಾತಿಗೆ ಜ್ಞಾನವನ್ನು ದಯಪಾಲಿಸುವಾತನು  ಎಂಬರ್ಥವಿರುವುದನ್ನು ಗಮನಿಸಿದರೆ ಯಾವ ದಿವ್ಯ ಗುರುವನ್ನಾದರೂ ಕಾವ್ಯದ ಪ್ರತಿಮಾವಿಧಾನ ಆ ಹೆಸರಿನಿಂದ ಕರೆಯುವುದರಲ್ಲಿ ಔಚಿತ್ಯವಿದೆ.

ಗುರುಕೃಪೆ ದೂರೆತ ಮೇಲೆ ಬೇಡರ ತರುಣನು ವಲ್ಮೀಕಾಶ್ರಮದಲ್ಲಿ ಪಾಠ ಪ್ರವಚನ ಆಧ್ಯಯನ  ಧ್ಯಾನರೂಪವಾದ ಉಗ್ರತಪಸ್ಯೆಯಲ್ಲಿ ಹಲವು ವರ್ಷಗಳನ್ನು ಹೆಚ್ಚಾಗಿ  ಹೊರಗೆಲ್ಲಿಯೂ ಬಾರದೆ ತೋರದೆ, ಕಳೆದಿರಬೇಕು. ಅವನ ಮೇಲೆ ಹುತ್ತ ಬೆಳೆದಿತ್ತು ಎಂಬ ಪ್ರತಿಮೆಯಲ್ಲಿ ಅದು ಸೂಚಿತವಾಗುತ್ತದೆ. ಗುರು ನಾರದರ ಪ್ರಸಾದದಿಂದ ರಾಮಮಂತ್ರ ಮತ್ತು ರಾಮಾಯಣದ ಕಥೆ ಎರಡರ ಸಿದ್ಧಿಯೂ ದೊರೆತು ಕೊನೆಗೆ ವಾಕ್ಯವಿಶಾರದನಾದ ವ್ಯಾಧನು ಮಹರ್ಷಿಯಾದನು.

ಅಂತ ಅನರ್ಘ್ಯದಿವ್ಯವಾದ ಲೋಕೋತ್ತರ ರಸಭಾರದಿಂದ ಪರಿಪೂರ್ಣವಾಗಿದ್ದ ಅವನ ಕವಿಚೇತನ ಭುವನಭಾಗ್ಯಕಾರಣವಾಗಿ ಕಾವ್ಯ ರೂಪದಲ್ಲಿ ಅವತರಿಸುವುದಕ್ಕೆ  ಒಂದು ನಿಮಿತ್ತ ಮಾತ್ರ ಘಟನೆ ಸಂಭವಿಸಿತು. ಒಮ್ಮೆ ಆತನು ತನ್ನ ಆಶ್ರಮದ ಬಳಿಯ ತಮಸಾ ನದಿಗೆ ಬೆಳಗ್ಗಿನ ಹೊತ್ತು ಅಕರ್ದಮವೂ ರಮಣೀಯವೂ ಪ್ರಸನ್ನಾಂಬುವೂ ಆಗಿದ್ದ ತೀರ್ಥದಲ್ಲಿ ಮೀಯಲು ಹೋಗಿದ್ದನು. ಕೌಂಚಪಕ್ಷಿಗಳೆರಡು ಅಲ್ಲಿಯ ವಿಪುಲ ವನವಿಸ್ತೀರ್ಣದ ಮೇಲುಗಡೆ ತಿಳಿಯಾದ ವಾಯುಮಂಡಲದಲ್ಲಿ ಉಲಿದು ಹಾರಾಡುತ್ತಿದ್ದುವು, ತಮ್ಮ ದಾಂಪತ್ಯ ಮಾಧುರ್ಯವನ್ನು ಲೋಕಕ್ಕೆ ತೋರಿ ಸಾರುವಂತೆ. ವಾಲ್ಮೀಕಿ ರಸಸುಖಪುಲಕಿತನಾಗಿ ಅವುಗಳ ಆನಂದದಲ್ಲಿ ಭಾಗಿಯಾಗಿ ನೋಡು ನೋಡುತ್ತಿದ್ದಂತೆಯೇ ಮರಗಳ ಮರೆಯಲಿ ಹೊಂಚಿದ್ದ ಬೇಡನೊಬ್ಬನು ಬಿಟ್ಟ ಬಾಣಕ್ಕೆ ಗಂಡುಕೊಂಚೆ ಬಲಿಯಾಗಿ ರಕ್ತಮಯವಾಗಿ ಬಾಣಸಹಿತವಾಗಿ ಆತನ ಸಮೀಪದಲ್ಲಿಯೇ ಉರುಳಿತು. ಹೆಣ್ಣು ಹಕ್ಕಿ ಹಾರಾಡಿ ರೋದಿಸತೊಡಗಿತು. ವಾಲ್ಮೀಕಿಗೆ ಕರುಣವುಕ್ಕಿ ಸ್ವಧರ್ಮಚಾರಿ ಯಾದ ಆ ಶಬರನನ್ನು ಅಧರ್ಮಚಾರಿಯೆಂದು ಬಗೆದು ಇಂತು ಶಪಿಸಿದನು:

‘‘ಮಾ ನಿಷಾದ ಪ್ರತಿಷ್ಯಾಂ ತ್ವಮಗಮಃ ಶಾಶ್ವತೀಃ ಸಮಾಃ

ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!’’

‘‘ಹೇ ನಿಷಾದ, ಕಾಮಮೋಹಿತವಾದ ಕ್ರೌಂಚದಂಪತಿಯಲ್ಲಿ ಒಂದನ್ನು ಕೊಂದೆಯಲ್ಲಾ; ಎಂದೆಂದಿಗೂ ನಿನಗೆ ಏಳಿಗೆಯಾಗದಿರಲಿ!’’

ಒಡನೆಯೇ ಋಷಿ ತನ್ನ ಕಠಿನವಾಕ್ಯಕ್ಕೆ ತಾನೆ ನೊಂದುಕೊಂಡು ‘ಹಕ್ಕಿಯ ದುಃಖಕ್ಕೆ ಮರುಗಿ ಕೋಪವಶನಾಗಿ ಏನು ಮಾಡಿಬಿಟ್ಟೆ! ಎಂದು ತನ್ನ ವೈರಗ್ರಹಣ ಬುದ್ಧಿಗಾಗಿ ಪಶ್ಚಾತ್ತಾಪಪಟ್ಟು ಸಮೀಪದಲ್ಲಿದ್ದ ಶಿಷ್ಯನಿಗೆ ತಾನೆಂದು ಶ್ಲೋಕಮಾತ್ರವಾಗಲಿ, ಶಾಪವಾಗುವುದು ಬೇಡ ಎಂಬ ಮನಸ್ಸಿನಿಂದ ಹೀಗೆ ಹೇಳಿದನಂತೆ:

‘‘ಪಾದಬದ್ಧೋಕ್ಷರಸಮಸ್ತಂತ್ರೀಲಯಸಮನ್ವಿತಃ

ಶೋಕಾರ್ತಸ್ಯ ಪ್ರವೃತ್ತೋ ಮೇ  ಶ್ಲೋಕೋ ಭವತು ನಾನ್ಯಥಾ’’

ನದೀತೀರ್ಥದಲ್ಲಿ ಯಥಾವಿಧಿಯಾಗಿ ಸ್ನಾನಮಾಡಿ ಆಶ್ರಮಕ್ಕೆ ಹಿಂದಿರುಗಿ ಆ ಮಹರ್ಷಿ ಧ್ಯಾನಕ್ಕೆ ಕುಳಿತನು. ಆಗ ಲೋಕಕರ್ತನೂ ಸ್ವಯಂ ಪ್ರಭುವೂ ಚತುರ್ಮುಖನೂ ಮಹಾತೇಜನೂ 

ಆದ ಬ್ರಹ್ಮದೇವನು ಗೋಚರನಾಗಿ ತನ್ನ ಕೋಪಕ್ಕೂ ಕೊಟ್ಟ ಶಾಪಕ್ಕೂ ಚಿಂತಾಕ್ರಾಂತನಾಗಿದ್ದ ಮಹಾಮುನಿಗೆ ಸಮಾಧಾನ ಹೇಳಿ ಇಂತು ಆದೇಶವಿತ್ತನಂತೆಃ

‘‘ಶ್ಲೋಕ ಏವ ತ್ವಯಾ ಬದ್ಧೋ ನಾತ್ರ ಕಾರ್ಯಾ ವಿಚಾರಣಾ

ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ

ರಾಮಸ್ಯ ಚರಿತಂ ಕೃತ್ಸ್ನಂ ಕುರು ತ್ವಮೃಷಿತ್ತಮ

ಧರ್ಮಾತ್ಮನೋ ಗುಣವತೋ ಲೋಕೇ ರಾಮಸ್ಯ ಧೀಮತಃ

ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಾಚ್ಛ್ರ ತಮ್

ರಹಸ್ಯಂ ಚ ಪ್ರಕಾಶಂ ಚ ಯದ್ವತ್ತಂ ತಸ್ಯ ಧೀಮತಃ

ರಾಮಸ್ಯ ಸಹಸೌಮಿತ್ರೇ ರಾಕ್ಷಸಾನಾಂ ಚ ಸರ್ವಶಃ

ವೈದೇಹ್ಯಾಶ್ಚೈವ ಯದ್ ವೃತ್ತಂ ಪ್ರಕಾಶಂ ಯದಿ ವಾ ರಹಃ

ಯಚ್ಚಾಷ್ಯವಿದಿತಂ ಸರ್ವ ವಿದಿತಂ ತೇ ಭವಿಷ್ಯತಿ

ನ ತೇ ವಾಗನ್ಯತಾ ಕಾವ್ಯೇ ಕಾಚಿದತ್ರ ಭವಿಷ್ಯತಿ

ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್

ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ

ತಾವತ್ ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ

ಯಾವತ್ ರಾಮಾಯಣಕಥಾ ತ್ವತ್‌ಕೃತಾ ಪ್ರಚರಿಷ್ಯತಿ

ತಾವದೂಧ್ವಮಧಶ್ವ ತ್ವಂ ಮಲ್ಲೋಕೇಷು ನಿವತ್ಸ್ಯಸಿ’’

‘‘ನೀನು ಆ ನಿಷಾದನನ್ನು ಕುರಿತೆಂದುದರಲ್ಲಿ ಒಂದು ಶ್ಲೋಕ ರಚಿತವಾಗಿದೆ. ಅದಕ್ಕಾಗಿ ಶೋಕವೇಕೆ? ಆ ನನ್ನ ಛಂದಸ್ವರೂಪಿಣಿ ಸರಸ್ವತಿಯೇ ನಿನ್ನಲ್ಲಿ ಅವತರಿಸಿದ್ದಾಳೆ. ಧೀಮಂತನೂ ಧರ್ಮಾತ್ಮನೂ ವೀರನೂ ಆಗಿರುವ ರಾಮನ ಚರಿತೆಯನ್ನು ನೀನು ನಾರದ ಮಹಿರ್ಷಿಯಿಂದ ಕೇಳಿದಂತೆ ಶ್ಲೋಕಬದ್ಧವನ್ನಾಗಿ ಮಾಡು. ಆ ಚರಿತೆಯಲ್ಲಿ ಲೋಕಕ್ಕೆ ಗೋಚರವಾಗುವಂತೆ ಪ್ರಕಾಶವಾದ ವೃತ್ತವಾಗಲಿ ಅಥವಾ ಅಗೋಚರವಾಗಿ ರಹಸ್ಯವಾಗಿರುವ ವೃತ್ತವಾಗಲಿ, ಅವಿದಿತವಾಗಿದ್ದರೂ ಸರ್ವವೂ ನಿನಗೆ ವಿದಿತವಾಗಲಿ. ಸೀತಾರಾಮ ಲಕ್ಷ್ಮಣರಿಗೆ ಸಂಬಂಧಪಟ್ಟಿರಲಿ ರಾಕ್ಷಸರಿಗೆ ಸಂಬಂಧಪಟ್ಟಿರಲಿ, ಯಾರ ವೃತ್ತವಾಗಲಿ ಯಾರ ಚಿತ್ತವಾಗಲಿ ಎಲ್ಲವೂ ನಿನಗೆ ಸಂಪೂರ್ಣವಾಗಿ ದರ್ಶನ ಪ್ರತ್ಯಕ್ಷವಾಗುತ್ತದೆ. ನಿನ್ನ ವಾಣಿಯಲ್ಲಿ ಅನೃತವೆಂಬುದು ಒಂದಿನಿತೂ ಪ್ರವೇಶಿಸುವುದಿಲ್ಲ. ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿನದಿಗಳಿರುತ್ತಮೊ ಆವರೆಗೆ ಲೋಕಲೋಕಗಳಲ್ಲಿ ರಾಮಾಯಣ ಕಥೆ ಪ್ರಚುರವಾಗಿರುತ್ತದೆ ಎಲ್ಲಿಯವರೆಗೆ ನಿನ್ನ ರಾಮಾಯಣ ಕಥಾಕೃತಿ ಪ್ರಚುರವಾಗಿರುತ್ತದೆಯೋ ಅಲ್ಲಿಯವರೆಗೆ ನೀನು ನನ್ನ ಕೃತಿಯಾಗಿರುವ ಈ ಮೇಲಣ ಮತ್ತು ಕೆಳಗಣ ಹದಿನಾಲ್ಕು ಲೋಕಗಳಲ್ಲಿಯೂ ಸರ್ವ ವ್ಯಾಪಿಯಾಗಿ ಸರ್ವತೋಮುಖವಾಗಿ ಸರ್ವೋದಯ ಕಾರಣನಾಗಿ ಸರ್ವರಸಾನಂದ ರೂಪನಾಗಿರುತ್ತೀಯ’’.

 

ಬ್ರಹ್ಮನ ಪ್ರತ್ಯಕ್ಷದ ಮತ್ತು ಆದೇಶದ ಈ ಪ್ರತಿಮೆಯಲ್ಲಿ ಇಂಗಿತವಾಗಿರುವ ದರ್ಶನ ಧ್ವನಿಯನ್ನು ನಾವು ಹೃದಯತಃ ಅರಿಯಬೇಕು. ಬ್ರಹ್ಮನ ಇಚ್ಛೆಯೇ ವಾಲ್ಮೀಕಿಯಲ್ಲಿ ಪ್ರವಹಿಸಿತು ಎಂಬುದರ ಸಂಪೂರ್ಣಾರ್ಥವನ್ನು ಮನನ ಮಾಡಬೇಕು. ಕವಿಕೃತಿ ಬ್ರಹ್ಮಕೃತಿ ಅಲ್ಲದಿದ್ದರೂ ಬ್ರಹ್ಮನು ಸಂಪೂರ್ಣವಾಗಿ ತನ್ನದನ್ನಾಗಿ ಒಪ್ಪಿಕೊಂಡದ್ದು ಎಂಬುದನ್ನು ಗ್ರಹಿಸಬೇಕು. ಅದಕ್ಕೆ, ಎಂದರೆ ಕವಿ ಕೃತಿಗೆ, ಕನಿಷ್ಠವೆಂದರೆ ಬ್ರಹ್ಮಕೃತಿಗೆ ಸಮನಾದ ಗೌರವ ಸಲ್ಲುತ್ತದೆ. ‘ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ ತಾವತ್ ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ’ ಎಂಬಲ್ಲಿ ಬ್ರಹ್ಮಕೃತಿಗಳಾದ ಪರ್ವತಾರಣ್ಯನದಿಗಳಂತ ಕವಿಕೃತಿಯಾದ ರಾಮಾಯಣವೂ ಪ್ರಕೃತಿಯ ಸತ್ಯಾಂಶವಾಗಿರುತ್ತದೆ ಎಂಬ ಆಶ್ವಾಸನೆಯಿದೆ. ಅದಕ್ಕಿಂತಲೂ ಅತಿಶಯವಾಗಿ, ಈ ಪೃಥ್ವಿಯ ಪರ್ವತಾರಣ್ಯಗಳ ಸತ್ಯ ಈ ಒಂದು ಲೋಕದಲ್ಲಿ ಮಾತ್ರ ಪ್ರಚುರವಾಗಿರುವುದಾದರೆ ಋಷಿಕವಿ ಕೃತಿಯ ಸತ್ಯ ಅನೇಕ ಲೋಕಚರವಾಗುತ್ತೆ ಎಂಬ ಅತೀಂದ್ರಿಯ ಯೌಗಿಕವೂ ಆಗಿರುವ ಸತ್ಯಸ್ಯ. ಸತ್ಯವೂ ಪ್ರತಿಬೋಧಿತವಾಗಿರುವಂತೆ ಭಾಸವಾಗುತ್ತದೆ, ‘ಮಹೀತಲೇ’ ‘ಲೋಕೇಷು’ ಎಂಬ ಪದಗಳಲ್ಲಿ. ಮುಂದಿನ ಎರಡು ಪಂಕ್ತಿಗಳಲ್ಲಿ ಬ್ರಹ್ಮನಂತೆ ವಾಲ್ಮೀಕಿಯೂ ಲೋಕಲೋಕಾಂತರ ವ್ಯಾಪ್ತನಾಗಿರುತ್ತಾನೆ ಎಂಬ ಧ್ವನಿಯಿದೆ. ರಾಮಾಯಣ ಬರಿಯ ಲೌಕಿಕವಾದ ಚರಿತ್ರೆಯಂತಲ್ಲ ಎಂಬುದು ‘ರಹಸ್ಯಂ ಚ ಪ್ರಕಾಶಂ ಚ’ ಎಂಬಲ್ಲಿಯೂ ‘ಯಚ್ಚಾಪ್ಯವಿದಿತಂ ಸರ್ವಂ ವಿದಿತಂ ತೇ ಭವಿಷ್ಯತಿ’ ಎಂಬಲ್ಲಿಯೂ ಸ್ಪಷ್ಟವಾಗುತ್ತದೆ. ಅಲ್ಲದೆ ಅದು ಸತ್ಯಾಧಾರವಿಲ್ಲದ ಬರಿಯ ಬಾಲ ಕಲ್ಪನಾವಿನೋದದ ಕಟ್ಟು ಕಥೆಯಂತೆ ಅನೃತಸೃಷ್ಟಿಯಲ್ಲ; ಅದೂ ಒಂದು ಋತಚಿದ್ವನ್ಯಾಸ, ವಾಲ್ಮೀಕಿಯ ಕೃತಿಯಲ್ಲಿ ಎಲ್ಲಿಯೂ ಸುಳ್ಳು ಹೊಳ್ಳು ಹುಸಿ ಹೋಗುವುದಿಲ್ಲ. ಮಾತ್ರವಲ್ಲ, ಋಷಿಯ ವಾಕ್‌ಶಕ್ತಿ ಬ್ರಹ್ಮನ ವಾಕ್‌ಶಕ್ತಿಯಿಂದ ಸಮನ್ವಿತವಾಗಿರುವುದರಿಂದ ಅದು ಏನನ್ನು ವಚಿಸಿದರೂ ಅದು ‘ರಚಿತ’ವಾಗಿಯೇ ಸತ್ಯವಾಗುತ್ತದೆ. ‘ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ’ ‘ಕಾವ್ಯವಾಗುವ ನಿನ್ನ ವಾಕ್ಕಿನಲ್ಲಿ ಅಪ್ಪಿತಪ್ಪಿಯೂ ಅನೃತವುಂಟಾಗುವುದಿಲ್ಲ’ ಎಂಬ ಬ್ರಹ್ಮವಾಣಿಯಲ್ಲಿ ಸುಸ್ಪಷ್ಟವಾಗಿದೆ, ಕವಿಕೃತಿಯ ಮೇಲೆ ಸಂಸ್ಥಾಪಿತವಾಗಿರುವ ಸಾಕ್ಷಾತ್ ಬ್ರಹ್ಮಮುದ್ರೆ.

ವಾಲ್ಮೀಕಿಯ ಕೃತಿ ಅದು ಹುಟ್ಟಿದಂದು ‘ಕವಿಕೃತಿ’ಯಾಗಿತ್ತು. ಇಂದು ‘ಪ್ರಕೃತಿ’ಯಾಗಿದೆ. ಭಾರತೀಯರ ಬಾಳುವೆಯ ಲೋಕದಲ್ಲಿ ಪರ್ವತ ಅರಣ್ಯ ಸಮುದ್ರ ಆಕಾಶಗಳಿರುವಂತೆ ರಾಮಾಯಣವೂ ‘ಇದೆ’. ಬಹುಶಃ ಅವುಗಳಿಗಿಂತಲೂ ಸುಸ್ಥಿರವಾಗಿ ಸಮಧಿಕವಾಗಿ ಸತ್ಯತರವಾಗಿ ಬಾಹ್ಯಾಭ್ಯಂತರಗಳನ್ನೂ ಲೋಕಾಲೋಕಗಳನ್ನೂ ಆಕ್ರಮಿಸಿ, ವ್ಯಾಪಿಸಿ, ಸೃಷ್ಟಿಯ ವಿಕಾಸರೂಪವಾದ ಪರಿಣಾಮಪಥದಲ್ಲಿ ಒಂದು ಪರಿವರ್ತನಾಸಮರ್ಥ ವಾದ ಸಾರಥಿಶಕ್ತಿಯಾಗಿದೆ. ಪ್ರಕೃತಿಯ ಪರ್ವತಾರಣ್ಯಗಳನ್ನು ಯಥಾಶಕ್ತಿಯಾಗಿ ಉಪಯೋಗಿಸಿಕೊಳ್ಳುವಂತೆ ರಾಮಾಯಣವನ್ನೂ ಉಪಯೋಗಿಸಿಕೊಳ್ಳಬಹುದು. ಆ ಪರ್ವತದ ಬಂಡೆಗಳಲ್ಲಿ ಸಾಮರ್ಥ್ಯವಿರುವವರು ಯಾರು ಬೇಕಾದರೂ ತಮ್ಮ ತಮ್ಮ ಪ್ರತಿಭೆಯ ಕಲ್ಪನಾಕೃತಿಗಳನ್ನು ಕಾಣಬಹುದು, ಶಿಲ್ಪಕೃತಿಗಳನ್ನು ಕಡೆಯಬಹುದು. ಆ ಅರಣ್ಯದ ಅಂಶದಿಂದ ತಂತಮ್ಮ ದರ್ಶನಕ್ಕೆ ಅನುರೂಪವಾಗಿ ಎಂಥ ನಂದನೋದ್ಯಾನಗಳನ್ನು ಬೇಕಾದರೂ ರಚಿಸಿಕೊಳ್ಳಬಹುದು. ವಾಲ್ಮೀಕಿಯ ದಿವ್ಯಕೃತಿ ಪ್ರಕೃತಿಯ ಮೂಲಭೂತ ವಸ್ತುಗಳಂತೆ, ಶಕ್ತಿಗಳಂತೆ. ಅಪೌರುಷೇಯವಾಗಿ ಹೋಗಿದೆ. ಆದ್ದರಿಂದಲೇ ಅದು ವೇದಪಟ್ಟಕ್ಕೂ ಏರಿದೆ.

ಕವಿಮಹರ್ಷಿ  ಅಂದು ಹಾಡಿದ ರಾಮಾಯಣ ಇಂದು ಮತ್ತೊಮ್ಮೆ ನಮ್ಮಲ್ಲಿ ಮೂಡದ ಹೊರತು ಸಾರ್ಥಕವಾಗುವುದಿಲ್ಲ. ಏಕೆಂದರೆ ಕೃತಿಯ ರಸಾಸ್ವಾದನೆಯೂ ಕೃತಿರಚನೆಯಂತೆ ಒಂದು ಸೃಷ್ಟಿಕಾರ್ಯ. ಓದುವ ಅಥವಾ ಆಲಿಸುವ ನಮ್ಮ ಒಬ್ಬೊಬ್ಬರ ಹೃದಯದಲ್ಲಿಯೂ ರಾಮಾಯಣದ  ಪುನಃಸೃಷ್ಟಿಯಾಗಬೇಕು. ಹಾಗೆ ಒಂದೊಂದು ಚೇತನದಲ್ಲಿಯೂ ರಾಮಾಯಣಾವತಾರವಾಗುವುದರಲ್ಲಿಯೇ ವಾಲ್ಮೀಕಿಯ ಕೃತಿ  ಸಾರ್ಥಕತೆ ಪಡೆಯುತ್ತದೆ; ನಮ್ಮ ಬಾಳುವೆಗೂ ಪುರುಷಾರ್ಥ ಸಿದ್ಧಿಯಾಗುತ್ತದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News