ಭಾವ ಬುದ್ಧಿಗಳ ವಿದ್ಯುದಾಲಿಂಗನ - ಅನುರಕ್ತಿ

Update: 2024-10-06 05:01 GMT

ಕುವೆಂಪು ಈ ಲೋಕ ಕಂಡ ಅಗ್ರಗಣ್ಯ ಕವಿಗಳಲ್ಲಿ ಒಬ್ಬರು ನಿಜ. ಅವರು ವಿಶ್ವಕವಿ. ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ನಾವೆಲ್ಲಾ ಸೋತಿದ್ದೇವೆ ಅನ್ನಿಸುತ್ತದೆ. ಅವರು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಅವರೊಬ್ಬ ಏಕಾಂಗಿ ಹೋರಾಟಗಾರ. ಕುವೆಂಪು ಕನ್ನಡ ಭಾಷೆಯನ್ನು ಮಾತ್ರ ವಿಶ್ವಕ್ಕೆ ವಿಸ್ತರಿಸಲಿಲ್ಲ, ಕನ್ನಡದ ಪ್ರಜ್ಞೆಯನ್ನೂ ವಿಸ್ತರಿಸಿದರು. ಸಮಾಜದ ಸಮತೆಗಾಗಿ ಬರೆದರು. ಹೇಗೆ ವಚನಕಾರರಿಲ್ಲದ ಕನ್ನಡವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲವೋ ಹಾಗೆಯೇ, ಕುವೆಂಪು ಅವರಿಲ್ಲದೆಯೂ ಕನ್ನಡವನ್ನು ಕಲ್ಪಿಸಿಕೊಳ್ಳಲಾಗದು.

ಮನಸ್ಸಿನ ಚಿಂತೆಗೆ ಓದೇ ಮದ್ದು. ಡಾ.ಭೀಮಾ ಸಾಹೇಬರ ಈ ಮಾತು ನನಗೆ ಮತ್ತೆ ಮತ್ತೆ ನೆನಪಾಗುತ್ತದೆ. ಅವರು ಓದಿನಿಂದಲೇ ಎಲ್ಲವನ್ನೂ ತಿಳಿದುಕೊಂಡರು. ಓದಿ, ಅನುಭವಿಸಿ, ಬರೆದು ದೊಡ್ಡವರಾದವರು. ಒಮ್ಮೊಮ್ಮೆ ಅನ್ನಿಸುತ್ತದೆ, ಪುಸ್ತಕ ಇಲ್ಲದೆ ಹೋಗಿದ್ದರೆ ಜಗತ್ತಿನಲ್ಲಿ ಇನ್ನೆಷ್ಟು ಯುದ್ಧಗಳಾಗುತ್ತಿದ್ದವೋ. ಯಾರು ಪುಸ್ತಕಗಳಲ್ಲಿ ಮುಳುಗೆದ್ದರೋ ಅವರೆಲ್ಲಾ ಮಹಾಸಾಧಕರಾಗಿದ್ದಾರೆ. ಓದು ಎಂದರೆ ಜ್ಞಾನ, ಅರಿವು ಪಡೆದುಕೊಳ್ಳುವುದು ಎಂದರ್ಥ. ದುರ್ಬಲ ಮನಸ್ಸನ್ನು ನಿಗ್ರಹಿಸುತ್ತಾ ಮತ್ತಷ್ಟು ಗಟ್ಟಿಗೊಳಿಸಿದರೆ ಅಲ್ಲಿ ಸಮಾಧಾನ ನೆಲೆಯಾಗುತ್ತದೆ. ಮನಸ್ಸು ಸ್ಥಿಮಿತವಾಗಿರುತ್ತದೆ. ಸಣ್ಣ ಸಣ್ಣ ಮಿಣುಕು ಹುಳಗಳ ಬೆಳಕು ಚೆಲ್ಲಿದಂತೆ ಭಾಸವಾಗುತ್ತದೆ. ಓದುತ್ತಾ ಓದುತ್ತಾ ಓದಿನ ಹಸಿವು ಹೆಚ್ಚಾಗುತ್ತದೆ. ಅದು ಒಂದು ರೀತಿಯ ತಪಸ್ಸಿನ ಮಾರ್ಗವೂ ಆಗಿರುತ್ತದೆ. ಆಗ ಜೀವಪ್ರೀತಿ ಉಕ್ಕುತ್ತದೆ, ಹಾಗೆಯೇ ನಿರಂತರ ಓದು ಮನಸ್ಸಿನೊಳಗಿದ್ದ ದುಷ್ಟತೆಯನ್ನೂ ಕಡಿಮೆಮಾಡುತ್ತದೆ. ಮನಸ್ಸಿನ ಪ್ರಶಾಂತತೆ ಹಾಗೂ ಪ್ರಸನ್ನತೆ ಹೆಚ್ಚುತ್ತದೆ.

ಮೊನ್ನೆ ಸೆಪ್ಟಂಬರ್ 21ರಂದು ನಾನು ಬರೆದ ಲೇಖನಗಳ ಕೃತಿ ‘ದುಃಖ ಆರದ ನೆಲದಲ್ಲಿ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರವಿತ್ತು. ಹುಲಿಕುಂಟೆ ಮೂರ್ತಿ, ಮಂಜಣ್ಣ, ವಿಕಾಸ, ಸತ್ಯಮಂಗಲ, ಎಲ್ಲಾ ಸೇರಿಕೊಂಡು ಹತ್ತು ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಪುಸ್ತಕದ ಬಿಡುಗಡೆಗೆ ಚಿತ್ರಕಲಾ ಪರಿಷತ್ತಿನಲ್ಲಿ ವ್ಯವಸ್ಥೆ ಮಾಡಿದ್ದರು. ಅಂದೇ ನನ್ನ ಹುಟ್ಟುಹಬ್ಬ ಕೂಡಾ ಇತ್ತು. ಒಂದು ಅಂದಾಜಿನಲ್ಲಿ ನನ್ನ ತಂದೆ ತಾಯಿಗಳು ಅನಕ್ಷರಸ್ಥರಾದ್ದರಿಂದ ಯಾವುದೋ ಹಬ್ಬದ ಹಿಂದೆ, ಊರ ಸುಗ್ಗಿಯ ಹಬ್ಬದ ನಡುವೆ ಮೇಲ್ಕಂಡ ದಿನಾಂಕದಂದು ಶಾಲೆಗೆ ಸೇರಿಸಿದ್ದಾರೆ. ಹುಟ್ಟಿದಾಗಿನಿಂದಲೂ ಈವರೆಗೆ ಸಾರ್ವಜನಿಕವಾಗಿ ಹೇಳಿಕೊಳ್ಳದಿದ್ದರೂ ಪುಸ್ತಕ ಬಿಡುಗಡೆ ಈ ದಿನವೇ ಮಾಡಬೇಕೆಂದು ತೀರ್ಮಾನಿಸಿದ್ದರಿಂದ ಆ ದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ನಲವತ್ತೈದು ವರ್ಷಗಳ ಹಿಂದೆ ನಾನು ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯನಾಗಿದ್ದಾಗ, ಬೆಂಗಳೂರಿನ ಗಾಜಿನಮನೆಯಲ್ಲಿ ಒಂದು ಮಹಾಸಮ್ಮೇಳನ ನಡೆದಿತ್ತು. ಆ ಸಮ್ಮೇಳನಕ್ಕೆ ಡಾ. ಸಿದ್ದಲಿಂಗಯ್ಯನವರು ಬರುತ್ತಾರೆಂಬ ಕರಪತ್ರವನ್ನು ನೋಡಿ, ಊರಿನಿಂದ ಇಡೀ ರಾತ್ರಿ ಲಾರಿಯಲ್ಲಿ ನಿಂತುಕೊಂಡು ಪ್ರಯಾಣಮಾಡಿ ಬಂದಿದ್ದೆ. ಆದರೆ ಸಾವಿರಾರು ವಿದ್ಯಾರ್ಥಿಗಳ ನಡುವೆ ಸಿದ್ದಲಿಂಗಯ್ಯ ಕಾಣಿಸಲಿಲ್ಲ. ನಿರಾಶನಾಗದೆ ಮಾರನೆಯ ದಿನ ಅವರನ್ನು ನೋಡಲು ಜ್ಞಾನಭಾರತಿಗೆ ಹೋದೆ. ಆಗ ನನಗೆ ಮೊದಲು ಸಿಕ್ಕಿದ್ದೇ ಬರಗೂರು ರಾಮಚಂದ್ರಪ್ಪ ಸರ್. ನನಗೆ ಅವರೇ ಬರಗೂರು ಎಂದು ಗೊತ್ತಿರಲಿಲ್ಲ. ಅವರಿಗೆ ನಮಸ್ಕಾರ ಮಾಡಿ ಸಿದ್ದಲಿಂಗಯ್ಯನವರನ್ನು ಕೇಳಿದೆ. ಆಗ ಅವರು ಕುರ್ಚಿಯ ಕಡೆ ನೋಡಿ ಅವರ ಬ್ಯಾಗು ನೇತಾಡುತ್ತಿರುವುದನ್ನು ಗಮನಿಸಿ ಅವರು ‘‘ಬರುತ್ತಾರೆ ಕುಳಿತುಕೊಳ್ಳಿ’’ ಎಂದರು. ನನ್ನನ್ನು ನೋಡಿದರೆ ದಪ್ಪಕೂದಲಿನ ಹಳ್ಳಿ ಪೆಕರನ ತರ ಇದ್ದರೂ, ತುಂಬಾ ಪ್ರೀತಿ ಮತ್ತು ಸಜ್ಜನಿಕೆಯಿಂದ ಮಾತನಾಡಿಸಿದರು. ಊಟದ ಡಬ್ಬಿ ಹಿಡಿದುಕೊಂಡಿದ್ದ ಅವರು ‘‘ಬನ್ನಿ ಊಟಮಾಡಿ’’ ಎಂದರು. ನಾನು ‘‘ನನ್ನದು ಊಟ ಆಯ್ತು ಸರ್’’ ಎಂದು ಸುಳ್ಳು ಹೇಳಿದೆ. ಅವರು ಊಟ ಮಾಡಿದ ಮೇಲೆ ಆ ಡಬ್ಬಿಯನ್ನು ವಿದ್ಯಾರ್ಥಿನಿಯರು ತೊಳೆದರು. ಆಗ ನನ್ನದು ಮಹಾ ಕ್ರಾಂತಿಕಾರಿಯ ಮನಸ್ಸು. ನನಗೆ ಅವರು ಮಾಡಿದ್ದು ಸರಿಕಾಣಲಿಲ್ಲ. ಸ್ವಲ್ಪ ಸಮಯದ ನಂತರ ಸಿದ್ದಲಿಂಗಯ್ಯ ಬಂದರು. ಅವರನ್ನು ಮಾತನಾಡಿಸುತ್ತಿದ್ದಾಗ, ಬರಗೂರು ಸರ್ ತರಗತಿಗಳಿಗೆ ಹೋದರು. ಸಿದ್ದಲಿಂಗಯ್ಯ ಅವರ ಬಗ್ಗೆ ‘‘ಅವರು ನಮ್ಮ ಗುರುಗಳು ಬರಗೂರು ರಾಮಚಂದ್ರಪ್ಪ’’ ಅಂದರು. ನನಗೆ ತುಂಬಾ ಖುಷಿಯಾಯಿತು. ಬರಗೂರು ಹೆಸರನ್ನು ಕೇಳಿದ್ದೆ. ನಾನು ನೋಡಿರಲಿಲ್ಲ. ಸಿದ್ದಲಿಂಗಯ್ಯನವರು ನನ್ನ ವಿಚಾರಿಸಿ ಊಟಮಾಡಿಸಿ ಕೈಗೆ ಬೇಡವೆಂದರೂ ಐವತ್ತು ರೂಪಾಯಿ ಕೊಟ್ಟರು. ನಾನು ಊರಿಗೆ ತೆರಳಲು ಆ ಹಣ ನನಗೆ ಸಹಾಯವಾಯಿತು. ಊರಿಗೆ ಬಂದವನೇ ಬರಗೂರು ಸರ್‌ಗೆ ಪತ್ರ ಬರೆದೆ ‘‘ನೀವು ವಿದ್ಯಾರ್ಥಿನಿಯರ ಕೈಯ್ಯಲ್ಲಿ ನಿಮ್ಮ ಊಟದ ಡಬ್ಬಿಯನ್ನು ತೊಳೆಸಿದ್ದು ನನಗೆ ಇಷ್ಟವಾಗಲಿಲ್ಲ’’ ಎಂದು ಇನ್ನೂ ಏನೇನೋ ಬರೆದಿದ್ದೆ. ಅದನ್ನು ಗಮನಿಸಿದ್ದರು ಬರಗೂರು ಸರ್. ನನ್ನಂತಹ ಸಾವಿರಾರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿದ ಅವರಿಗೆ ತಳಸಮುದಾಯದ ಬಗ್ಗೆ ಕಾಳಜಿ ಕೂಡ ಇತ್ತು ಎನ್ನುವುದು ಅವರು ನನಗೆ ಉತ್ತರಿಸಿದ ಪತ್ರದಲ್ಲಿ ಅವರ ದೃಷ್ಟಿ ಮತ್ತು ಧೋರಣೆ ಅರ್ಥವಾಗಿತ್ತು. ನಾನು ಅವರ ಶಿಷ್ಯನಲ್ಲದಿದ್ದರೂ ಅವರು ನನ್ನನ್ನು ಅವರ ಶಿಷ್ಯನೆಂದೇ ಭಾವಿಸಿ ಅವರು ಪತ್ರ ಬರೆದಿದ್ದರು ಆ ಪತ್ರದಲ್ಲಿ ಅವರು ಬರೆದ ಕೊನೆಯ ಸಾಲು ಹೀಗಿತ್ತು- ‘‘ಈ ಕಿಚ್ಚು ಆರದಂತೆ ನೋಡಿಕೊಳ್ಳಿ ನಿಮಗೆ ಒಳ್ಳೆಯದಾಗಲಿ’’ ಎಂದಿದ್ದರು. ಇದನ್ನು ನಾನು ಸಾರ್ಥಕಮಾಡಿಕೊಳ್ಳಬೇಕಿತ್ತು. ಅವರು ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದು ತುಂಬಾ ಪ್ರೀತಿಯ ಮಾತುಗಳನ್ನಾಡಿದರು. ‘‘ಖಡ್ಗವಾಗಲಿ ಕಾವ್ಯ ಬಡಜನರ ನೋವಿಗೆ ಮಿಡಿವ ಪ್ರಾಣಮಿತ್ರ’’ ಎನ್ನುವ ಬಂಡಾಯ ಚಳವಳಿಯ ಧ್ಯೇಯವಾಕ್ಯದಂತೆ ಬರಗೂರು ಸರ್ ಬದುಕಿದ್ದಾರೆ. ಬರಗೂರು ಸರ್ ಅಂದರೆ ಬಂಡಾಯವನ್ನು ಒಂದು ಮನೋಧರ್ಮ ಎಂದು ಬದುಕಿ ತೋರಿಸಿಕೊಟ್ಟವರು. ನೊಂದವರ, ಬಡವರ, ಶೋಷಿತರ, ಶಿಕ್ಷಕವರ್ಗದವರ ಬಗ್ಗೆ ಅಪಾರವಾದ ಕಾಳಜಿಯಿಂದ ಮತ್ತು ಬದ್ಧತೆಯಿಂದ ಈಗಲೂ ಕೆಲಸಮಾಡುತ್ತಾರೆ. ಅಪಾರವಾದ ಪ್ರೀತಿ ಮತ್ತು ಕಾಳಜಿ ಸಮಾಜದ ದಮನಿತರ ಕುರಿತು ಈಗಲೂ ಹಾಗೆಯೇ ಇದೆ. ಬರಗೂರು ಸರ್ ಈ ಪುಸ್ತಕ ಲೋಕಾರ್ಪಣೆ ನೆರವೇರಿಸಿದ್ದು ನನಗೆ ತುಂಬಾ ಸಂತೋಷವಾಯಿತು. ಬರಗೂರು ಸರ್ ಅವರ ‘ಜನ ಕನ್ನಡಂ ಗೆಲ್ಗೆ’ ಘೋಷವಾಕ್ಯ ಜನಮನಕ್ಕೆ ಅವರು ಕೊಟ್ಟ ಹೊಸ ಉತ್ಸಾಹ ಮತ್ತು ಕನ್ನಡದ ಏಳ್ಗೆಗೆ ಅವರು ಕಟ್ಟಿದ ಸಹಜ ಮತ್ತು ಸುಂದರ ನುಡಿಗಟ್ಟು. ಅವರೊಟ್ಟಿಗೆ ಅಪಾರ ಆಳವಾದ ಅಧ್ಯಯನ ಅರಿವು ಪಡೆದಿರುವ ನೆಲ್ಲುಕುಂಟೆ ವೆಂಕಟೇಶ್ ಮತ್ತು ಡಾ. ಕೆ.ಪಿ. ಅಶ್ವಿನಿ, ನಮ್ಮ ಗಡ್ಡಂ ವೆಂಕಟೇಶಣ್ಣ ಇವರೆಲ್ಲರೂ ಮಾತನಾಡಿದ್ದು ಸಭೆಗೂ ನನಗೂ ಖುಷಿ ಕೊಟ್ಟಿತ್ತು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ತುಂಬಾ ದೊಡ್ಡದೊಡ್ಡವರಿದ್ದರು. ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಶಿವಾರೆಡ್ಡಿ, ದ್ವಾರಕಾನಾಥ್ ಮತ್ತು ಇನ್ನೂ ಅನೇಕರು ಅಲ್ಲಿ ನೆರೆದಿದ್ದರು. ಸಭೆಯ ಪ್ರಾರಂಭಕ್ಕೂ ಮುನ್ನ ಶಿವಾರೆಡ್ಡಿಯವರು ನನಗೊಂದು ದೊಡ್ಡ ಬ್ಯಾಗಿನಲ್ಲಿ ಒಂದು ಪುಸ್ತಕವನ್ನು ಕೊಟ್ಟರು. ಅದನ್ನು ಅಲ್ಲಿ ನೋಡುವುದಕ್ಕೆ ಸಾಧ್ಯವಿರಲಿಲ್ಲ. ವೇದಿಕೆಯ ಮೇಲಿದ್ದಾಗಲೂ ಯಾವ ಪುಸ್ತಕ ಕೊಟ್ಟಿರಬಹುದೆಂದು ಯೋಚಿಸುತ್ತಿದ್ದೆ. ಎಲ್ಲಾ ಮುಗಿಸಿ ಮನೆಗೆ ಬಂದು ಬ್ಯಾಗಿನಲ್ಲಿದ್ದ ಪುಸ್ತಕವನ್ನು ತೆಗೆದು ನೋಡಿದೆ. ಅನನ್ಯ ದೃಷ್ಟಿಕೋನದ ಕುವೆಂಪು ಅವರ ಪುಸ್ತಕ ‘ಅನುರಕ್ತಿ: ಕವಿತೆ-ಚಿತ್ರ’. ಪುಸ್ತಕದ ಒಂದೊಂದೇ ಪುಟ ತಿರುಗಿಸುತ್ತಾ ಹೋದೆ, ಪುಟವಿಟ್ಟ ಚಿನ್ನ ಎಂದು ಬಳಸುತ್ತಾರಲ್ಲ ಅಂತಹ ಪುಸ್ತಕ ಇದು. ಪ್ರತೀ ಪುಟಗಳಲ್ಲಿಯೂ ಕಣ್ಣಿಗೆ ಹಬ್ಬ, ಬುದ್ಧಿಗೆ ಬೆಳಕು, ದೃಶ್ಯಕಾವ್ಯ. ಎಲ್ಲಾ ಕವಿತೆಯ ಸಾಲುಗಳಲ್ಲೂ ಕುವೆಂಪು ಅವರ ವಿಚಾರ ಧಾರೆ. ಪ್ರತೀ ಪುಟಗಳು ಕುವೆಂಪು ಕಣ್ಣುಗಳೇ ಅನ್ನಿಸುವಂತೆ. ಈ ಪುಸ್ತಕ ಮಾಡಲು ತಪಸ್ಸೇ ಮಾಡಿರಬೇಕು. ಅಂತಹ ಧ್ಯಾನಸ್ಥ ಮನಸ್ಸಿನಿಂದ ಮಾತ್ರ ಇಂತಹ ಅಪೂರ್ವ ಕೃತಿ ರೂಪಿಸಲು ಸಾಧ್ಯ. ಇದನ್ನು ಕೈಚಳಕ ಎಂದು ಹೇಳಲಾಗದು. ಇಂತಹ ಪುಸ್ತಕ ಜೋಡಣೆಗೆ ಒಂದು ದೊಡ್ಡ ಸಿದ್ಧತೆ ಬೇಕಾಗುತ್ತದೆ. ಇದೊಂದು ಮನಸ್ಸಿನ ಸಿದ್ಧಿ ಎಂದು ಹೇಳಿದರೂ ತಪ್ಪಾಗಲಾರದು.

ಕುವೆಂಪು ಈ ಲೋಕ ಕಂಡ ಅಗ್ರಗಣ್ಯ ಕವಿಗಳಲ್ಲಿ ಒಬ್ಬರು ನಿಜ. ಅವರು ವಿಶ್ವಕವಿ. ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ನಾವೆಲ್ಲಾ ಸೋತಿದ್ದೇವೆ ಅನ್ನಿಸುತ್ತದೆ. ಅವರು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಅವರೊಬ್ಬ ಏಕಾಂಗಿ ಹೋರಾಟಗಾರ. ಕುವೆಂಪು ಕನ್ನಡ ಭಾಷೆಯನ್ನು ಮಾತ್ರ ವಿಶ್ವಕ್ಕೆ ವಿಸ್ತರಿಸಲಿಲ್ಲ, ಕನ್ನಡದ ಪ್ರಜ್ಞೆಯನ್ನೂ ವಿಸ್ತರಿಸಿದರು. ಸಮಾಜದ ಸಮತೆಗಾಗಿ ಬರೆದರು. ಹೇಗೆ ವಚನಕಾರರಿಲ್ಲದ ಕನ್ನಡವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲವೋ ಹಾಗೆಯೇ, ಕುವೆಂಪು ಅವರಿಲ್ಲದೆಯೂ ಕನ್ನಡವನ್ನು ಕಲ್ಪಿಸಿಕೊಳ್ಳಲಾಗದು. ಅವರ ಪ್ರಜ್ಞೆ, ಜಲಗಾರನಿಂದ ಅನಿಕೇತನವನ್ನು ಕಂಡುಂಡ ಹಾಗೆ. ಇದೇ ಮಾದರಿ ದೇವನೂರ ಮಹಾದೇವರ ಒಡಲಾಳದಲ್ಲಿ ಬರುವ ಪುಟ್ಟಗೌರಿಯು ನವಿಲ ಚಿತ್ರವನ್ನು ಕಾಲಿನಿಂದ ಪ್ರಾರಂಭಿಸುತ್ತಾಳೆ. ಹೂವಯ್ಯ ಕಂಡ ಜೀವಪ್ರೀತಿ, ದೇವನೂರು ಮಹಾದೇವ ಅವರಲ್ಲಿ ಮುಂದುವರಿದಿರುವುದನ್ನು ನಾವು ಕಾಣಬಹುದು. ಅದಕ್ಕೆ ಮಹಾದೇವ ಅವರು ತನ್ನ ಕೃತಿ ‘ಕುಸುಮ ಬಾಲೆ’ ‘ಮಲೆಗಳಲ್ಲಿ ಮದುಮಗಳ’ ಮೊಮ್ಮಗಳು ಆಗುವುದಾದರೆ ನನಗೆ ಸಂತೋಷವಾಗುತ್ತದೆ ಎಂದಿರುವುದು. ದೊಡ್ದವರ ಬಗ್ಗೆ ದೊಡ್ಡವರು ಆಡುವ ಮಾತುಗಳು ಇವು.

ಯಾವಕಾಲದ ಶಾಸ್ತ್ರ ಏನು ಹೇಳಿದರೇನು

ಎದೆಯದನಿಗೂ ಮಿಗಿಲು ಶಾಸ್ತ್ರವಿಹುದೇನು

ನಿನ್ನ ಎದೆಯ ದನಿಯೇ ನಿನಗೆ ಋಷಿ

ಮನು ನಿನಗೆ ನೀನು

ಕುವೆಂಪು ಅವರ ಮಾತುಗಳು ಹೃದಯಕ್ಕೆ ಶ್ರೀಧರ್ಮ ಸೂತ್ರ, ಬದುಕಿಗೆ ಋಷಿತ್ವವನ್ನು ತಂದುಕೊಡುವ ಜೀವಾಕ್ಷರಗಳು. ಕುವೆಂಪು ಅಂದರೆ ಸಮಾನತೆಯ ಕನಸುಗಾರ. ಅವರ ವಿಚಾರಧಾರೆ ಅಲ್ಪಮತಿಗಳಿಗೆ ಅರ್ಥವಾಗುವುದಿಲ್ಲ. ಕುವೆಂಪು ಅರ್ಥವಾಗುವುದಕ್ಕೆ ಜಲಗಾರನ ಮನಸ್ಥಿತಿ ಇರಬೇಕು. ಆಗ ಕುವೆಂಪು ಕಾವ್ಯ ಮತ್ತು ವಿಚಾರ ಹಾಗೂ ಕತೆ ಕಾದಂಬರಿಗಳು ಅರ್ಥವಾಗಲು ಸಾಧ್ಯ. ಕುವೆಂಪು ಎಂದರೆ ಒಂದು ಮಹಾ ವೃಕ್ಷ. ಅದು ಗಾಳಿಗೆ ಮಾತ್ರ ಅಲುಗಾಡುತ್ತದೆಯೇ ಹೊರತು ಅಲ್ಪಮತಿಗಳಿಗೆ ಅವರ ವಿಚಾರ ಧಾರೆ ಕಿವಿಗೊಡುವುದಿಲ್ಲ. ಹಾಗೆಂದು ನಾವೆಲ್ಲ ಅವರ ಪೂರ್ಣದೃಷ್ಟಿ, ಸಮನ್ವಯ, ಸರ್ವೋದಯ ತತ್ವವನ್ನು ಅರ್ಥಮಾಡಿಕೊಂಡಿದ್ದೇವೆಯೇ ಎಂದರೆ, ಅವರ ಹಾದಿಯಲ್ಲಿದ್ದೇವೆ ಅಷ್ಟೇ. ಇದಕ್ಕೆ ಪೂರಕವೆಂಬಂತೆ ಪ್ರಜಾಪ್ರಭುತ್ವ ಕೂಡ ನಮಗೆ ನೆರಳಾಗಿದೆ. ಆದರೆ ಈ ಅಲ್ಪಮತಿಗಳು ಅದನ್ನು ಪೂರ್ಣಮಾಡಲು ಬಿಡುತ್ತಿಲ್ಲ. ಕುವೆಂಪು ಹೇಳುವ ವಿಚಾರದ ಕೆಲವು ಸಾಲುಗಳನ್ನು ಗಮನಿಸಿ

ಇಲ್ಲಿ

ಯಾರೂ ಮುಖ್ಯರಲ್ಲ,

ಯಾರೂ ಅಮುಖ್ಯರಲ್ಲ

ಇಲ್ಲಿ

ಯಾವುದೂ ಯಕಶ್ಚಿತವಲ್ಲ,

ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ಅಂತ್ಯವಿಲ್ಲ

ಇಲ್ಲಿ

ಅವಸರವೂ ಸಾವಧಾನದ ಬೆನ್ನೇರಿದೆ

ಯಾವುದು ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ

ಇಲ್ಲಿ

ಎಲ್ಲದಕ್ಕೂ ಇದೆ ಅರ್ಥ

ಯಾವುದೂ ಅಲ್ಲ ವ್ಯರ್ಥ

ನೀರೆಲ್ಲವೂ ತೀರ್ಥ

ಇಂತಹ ಸರಳ ಅದ್ಭುತ ಸಾಲುಗಳನ್ನು ಓದಿದಾಗ, ಮನನ ಮಾಡಿಕೊಂಡಾಗ ಲೋಕವನ್ನೇ ಆವರಿಸಿಕೊಳ್ಳುವ ಪ್ರಜ್ಞೆ ಕುವೆಂಪು ಅವರದು ಎಂದು ಒಂದು ಸಲ ಚಕಿತಗೊಳ್ಳುವಂತೆ ಮಾಡುತ್ತದೆ. ಜನ ಈ ಲೋಕ ಪ್ರಜ್ಞೆಯನ್ನು ಬರೀ ಓದಿಕೊಳ್ಳಲಷ್ಟೇ ಎಂದು ತಿಳಿದಿದ್ದಾರೆ. ಲೋಕಜ್ಞಾನ ಎಂದು ತಿಳಿದುಕೊಂಡವರು ಕಡಿಮೆ ಜನ ಇದ್ದಾರೆ. ಆದರೆ ಕುವೆಂಪು ಅವರು ಎಲ್ಲವನ್ನೂ ಸೇರಿ ಹೇಳಿದ್ದಾರೆ.

ಎಲ್ಲರನ್ನೂ ಒಳಗೊಳ್ಳಬೇಕೆಂಬುದು ಬುದ್ಧ, ಬಸವಣ್ಣ, ಬಾಬಾ ಸಾಹೇಬರ ಆದಿಯಾಗಿ ದೇವನೂರ ಮಹಾದೇವ ಅವರಂತಹ ಎಲ್ಲಾ ಮಹನೀಯರು ಎಲ್ಲರೂ ಎಲ್ಲವನ್ನೂ ಒಳಗೊಳ್ಳುವ ಜೀವ ಪ್ರೇಮದ ಮಾತುಗಳನ್ನೇ ಆಡಿದ್ದಾರೆ. ಅವರೆಲ್ಲಾ ಪ್ರೀತಿಯ ಕರುಳು ಬಳ್ಳಿಯನ್ನು ಕಟ್ಟುತ್ತಲೇ ಬಂದಿದ್ದಾರೆ. ಆದರೆ ಕೆಲವು ದುಷ್ಟರು ಜಾತಿ, ಧರ್ಮ, ದೇವರು ಎಂದು ಅದನ್ನು ಕತ್ತರಿಸುತ್ತಲೇ ಬಂದಿದ್ದಾರೆ. ನಾವು ಇಂತಹವರ ತಳಹದಿಯ ಮೇಲೆ ಮುರಿದಲ್ಲೇ ಕಟ್ಟುವ ಕೆಲಸಮಾಡಬೇಕಿದೆ. ಕುವೆಂಪು ಅವರನ್ನ ಮುಟ್ಟಬೇಕು, ಓದಬೇಕು. ಅವರನ್ನು ಮುಟ್ಟದೆ ಅರ್ಥವಾಗದು ಎನ್ನುವುದು ತಿಳಿಯಬೇಕು. ಪೂರ್ಣಚಂದ್ರ ತೇಜಸ್ವಿಯವರ ಕುರಿತು ಅವರ ಸಮಗ್ರ ಬರಹಗಳನ್ನು 14 ಸಂಪುಟಗಳಲ್ಲಿ ಸಂಪಾದಿಸಿ ‘ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’ ಎನ್ನುವ ಅಭೂತಪೂರ್ವ ಕಾರ್ಯಕ್ರಮವನ್ನು ಸಂಘಟಿಸಿದ ರೂವಾರಿ ಪ್ರೊ.ಕೆ.ಸಿ. ಶಿವಾರೆಡ್ಡಿ ಅವರಿಗೆ ನಾನು ಅಭಿನಂದಿಸುತ್ತೇನೆ.

ಸರ್ವೇಂದ್ರಿಯ ಸುಖನಿಧಿ ಅಲ್ಲಿ ಸರ್ವಾತ್ಮರ ಸನ್ನಿಧಿ ಅಲ್ಲಿ

ಸಕಲಾರಾಧನ ಸಾಧನಬೋಧನದನುಭವರಸ ತಾನುಹುದಲ್ಲಿ

ಪುಸ್ತಕ ಪ್ರೀತಿ ನಿಮಗಿದ್ದರೆ, ಅಖಂಡ ಕನ್ನಡ ಪ್ರೇಮ ನಿಮ್ಮೆದೆಯಲ್ಲಿದ್ದರೆ, ಕುವೆಂಪು ಅವರ ‘ಅನುರಕ್ತಿ: ಕವಿತೆ-ಚಿತ್ರ’ ಪುಸ್ತಕ ನಿಮ್ಮ ಮನೆಯಲ್ಲಿರಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸುಬ್ಬು ಹೊಲೆಯಾರ್

contributor

Similar News