ಜಾನುವಾರು ಕ್ರಯ, ವಿಕ್ರಯಕ್ಕೆ ವೇದಿಕೆಯಾದ ಸಿದ್ದಗಂಗಾ ಜಾತ್ರೆ
ಸಿದ್ದಲಿಂಗೇಶ್ವರ ದನಗಳ ಜಾತ್ರೆಯಲ್ಲಿ ನೇಗಿಲು, ನೊಗ, ಅಲಂಕಾರಿಕ ವಸ್ತುಗಳಾದ ಕರಿದಾರ, ಗಂಟೆ, ಜಾಗಟೆ, ಶಂಕಗಳಿಂದ ಅಲಂಕೃತವಾದ ಹಗ್ಗಗಳು, ದೃಷ್ಟಿ ದಾರಗಳು ದೊರೆಯುತ್ತವೆ. ಇದನ್ನು ಮಾರಾಟ ಮಾಡಲು ಉತ್ತರ ಕರ್ನಾಟಕದಿಂದಲೂ ವ್ಯಾಪಾರಿಗಳು ಬರುತ್ತಾರೆ.
ತುಮಕೂರು: ಸಿದ್ದಗಂಗಾ ತುಮಕೂರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿನ ಸಿದ್ದಗಂಗಾ ಮಠ, ಪ್ರತೀ ವರ್ಷ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ತ್ರಿವಿಧ ದಾಸೋಹ ಮಠ ಎಂದೇ ಪ್ರಸಿದ್ಧಿ ಪಡೆದಿದೆ.
ಪ್ರತೀ ವರ್ಷ ಸಿದ್ದಗಂಗಾ ಮಠದಲ್ಲಿ ಮಹಾಶಿವರಾತ್ರಿಯ ಮುನ್ನಾ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆ ಶ್ರೀಚನ್ನಬಸವೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಹಾಗೂ ಶ್ರೀಸಿದ್ದಲಿಂಗೇಶ್ವರ ದನಗಳ ಜಾತ್ರೆ.
ಪ್ರತೀ ಶಿವರಾತ್ರಿ ಸಂದರ್ಭದಲ್ಲಿ ಸುಮಾರು 15 ದಿನಗಳಿಗೂ ಹೆಚ್ಚು ಕಾಲ ಶ್ರೀಚನ್ನಬಸವೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತ್ರುಪ್ರರ್ದಶನ ಮತ್ತು ದನಗಳ ಜಾತ್ರೆ 60 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಡಾ.ಶಿವಕುಮಾರ ಸ್ವಾಮೀಜಿಯವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಆಗುವ ಹೊಸ ಆವಿಷ್ಕಾರಗಳು ಈ ಭಾಗದ ಜನರಿಗೆ ಲಭ್ಯವಾಗಬೇಕು ಎಂಬ ಮಹತ್ವಾಕಾಂಕ್ಷೆ ಯೊಂದಿಗೆ ವಸ್ತುಪ್ರದರ್ಶನ ಆರಂಭಿಸಿದರು. ಇದರ ಜೊತೆ ಜೊತೆಗೆ ದನಗಳ ಜಾತ್ರೆಯೂ ಆರಂಭಗೊಂಡಿತು.
ಭಾರತ ಕೃಷಿ ಪ್ರಧಾನ ರಾಷ್ಟ್ರ. ಕೃಷಿಯ ಮೂಲ ಜಾನುವಾರು. ಅದರಲ್ಲಿಯೂ ಬಯಲು ಸೀಮೆಗಳಲ್ಲಿ ಕೃಷಿಗೆ ಪ್ರಧಾನವಾಗಿ ಎತ್ತುಗಳನ್ನು ಬಳಸುವುದು ಹಿಂದಿನಿಂದಲು ನಡೆದುಬಂದಿರುವ ವಾಡಿಕೆ. ಹಾಗಾಗಿ ಶ್ರೀಮಠಕ್ಕೆ ಹೊಂದಿಕೊಂಡಂತೆ ಇರುವ ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲದೆ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ,ಬಳ್ಳಾರಿ ಜಿಲ್ಲೆಗಳಲ್ಲದೆ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಗಡಿ ಭಾಗಗಳಾದ ಅನೇಕಲ್ ಹೊಸಪೇಟೆ ಮತ್ತಿತರರ ಕಡೆಗಳಿಂದಲೂ ಜಾನುವಾರುಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಸಿದ್ದಲಿಂಗೇಶ್ವರ ದನಗಳ ಜಾತ್ರೆ ಒಂದು ಉತ್ತಮ ವೇದಿಕೆಯಾಗಿದೆ.
ಸಿದ್ದಲಿಂಗೇಶ್ವರ ದನಗಳ ಜಾತ್ರೆಯಲ್ಲಿ ಪ್ರಮುಖವಾಗಿ ದೇಶಿ ತಳಿಗಳಾದ ಹಳ್ಳಿಕಾರ್, ಕಿಲಾರ, ಅಮೃತ ಮಹಲ್, ಮಲೆನಾಡು ಗಿಡ್ಡ ಹೀಗೆ ಹತ್ತು ಹಲವರು ಜಾತಿಯ ದೇಶಿ ತಳಿಗಳ ಹಸು, ಕರು, ಹೋರಿ, ಎತ್ತುಗಳು ಇಲ್ಲಿ ಮಾರಾಟ ಮಾಡಲು, ಕೊಳ್ಳಲು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ.
ಸ್ಥಳೀಯರದ್ದೇ ಕಾರುಬಾರು: ಸಿದ್ದಗಂಗಾ ಮಠದಲ್ಲಿ ದನಗಳ ಜಾತ್ರೆ ಆರಂಭವಾದ ನಂತರದಲ್ಲಿ ಜಿಲ್ಲೆಯಲ್ಲಿ ಹವ್ಯಾಸಕ್ಕಾಗಿ ದನಗಳು ಅದರಲ್ಲಿಯೂ ಹಳ್ಳಿಕಾರ್ ಹೋರಿ ಕರುಗಳನ್ನು ಸಾಕುವವರ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ ಹೆಬ್ಬೂರು ಹೋಬಳಿ ಚಿಕ್ಕಣ್ಣನಹಟ್ಟಿ ಸುಕ್ಷೇತ್ರದ ಪ್ರಧಾನ ಆರ್ಚಕ ಪಾಪಣ್ಣ ಅವರ ಕುಟುಂಬ, ತುಮಕೂರು ನಗರದ ಕೋರಿ ಮಂಜುನಾಥ್ ಕುಟುಂಬ ಸಹಿತ ಹಲವಾರು ಕುಟುಂಬಗಳು ಈ ರೀತಿ ಕೃಷಿಯ ಜೊತೆ ಜೊತೆಗೆ ಹವ್ಯಾಸಕ್ಕಾಗಿ ಪಶುಸಂಗೋಪನೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಇವರು ಸಿದ್ದಲಿಂಗೇಶ್ವರ ದನಗಳ ಜಾತ್ರೆಯಲ್ಲಿ ಟೆಂಟ್‌ಗಳನ್ನು ನಿರ್ಮಿಸಿ, ತಾವು ಸಾಕಿದ ಹೋರಿ, ಎತ್ತುಗಳನ್ನು ಮೆರವಣಿಗೆಯ ಮೂಲಕ ಕರೆತಂದು, ಜಾತ್ರೆಯಲ್ಲಿ ಪ್ರದರ್ಶಿಸುತ್ತಾರೆ.
ಸಿದ್ದಲಿಂಗೇಶ್ವರ ದನಗಳ ಜಾತ್ರೆಯಲ್ಲಿ ಒಂದು ಜೋಡಿ ಜಾನುವಾರು ಐದು ಲಕ್ಷದಿಂದ ಐವತೈದು ಲಕ್ಷ ರೂ.ಗಳವರೆಗೆ ಮಾರಾಟವಾದ ಉದಾಹರಣೆಯಿದೆ. 15 ದಿನಗಳಲ್ಲಿ ಉತ್ತಮ ವ್ಯಾಪಾರ ನಡೆಯುತ್ತದೆ. ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮಸಾಲ ಜಯರಾಮ್ 6 ಲಕ್ಷ ರೂ.ಗಳಿಗೆ ಒಂದು ಜೋಡಿ ಹಳ್ಳಿಕಾರ್ ಹೋರಿ ಕರುಗಳನ್ನು ಕೊಂಡಿದ್ದಾರೆ. ಹೋರಿ ಕರುಗಳಲ್ಲದೆ, ಹಾಲು ನೀಡುವ ಹಸುಗಳು, ಅದರಲ್ಲಿಯೂ ನಾಟಿ ಹಸುಗಳು ಸಹ ಒಳ್ಳೆಯ ಬೆಲೆಗೆ ಮಾರಾಟವಾದ ಉದಾಹರಣೆ ಇದೆ. ಜಾತ್ರೆಯಲ್ಲಿ ಹಾಲು ಹಲ್ಲಿನ ಕರುಗಳಿಂದ ಹಲ್ಲುಗೂಡಿದ ಎತ್ತುಗಳವರೆಗೂ ಎಲ್ಲ ರೀತಿಯ ರಾಸುಗಳು ಮಾರಾಟಕ್ಕೆ ಸಿಗಲಿವೆ.
ಜಾಗದ ಕೊರತೆ:
ಈ ಹಿಂದೆ ಮಠದ ಸುತ್ತಮುತ್ತ ಸಾಕಷ್ಟು ಜಾಗವಿತ್ತು. ರಾಸುಗಳನ್ನು ಕಟ್ಟಲು ಯಾವುದೇ ತೊಂದರೆ ಇರಲಿಲ್ಲ. ಇತ್ತೀಚೆಗೆ ಮಠದ ಅಕ್ಕಪಕ್ಕದ ಇದ್ದ ಖಾಲಿ ಜಾಗಗಳಿಗೆ ಅದರ ಮಾಲಕರು ಪೆನ್ಸಿಂಗ್ ಹಾಕಿರುವುದರಿಂದ ಜಾನುವಾರುಗಳನ್ನು ಕಟ್ಟಲು ಜಾಗದ ಕೊರತೆ ಇದೆ. ಅಲ್ಲದೆ ಕೈಗಾರಿಕಾ ವಸ್ತುಪ್ರದರ್ಶನದ ಆವರಣದಲ್ಲಿ ಸಂಪೂರ್ಣವಾಗಿ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಿದ ಕಾರಣ, ಜಾಗದ ಕೊರತೆಯಾಗಿದೆ. ಉಳಿದಂತೆ ಯಾವುದೇ ತೊಂದರೆ ಇಲ್ಲ ಎಂದು ಹೈನುಗಾರರು ಹೇಳುತ್ತಾರೆ.
ತುಮಕೂರು ಹಾಗೂ ಸುತ್ತಮುತ್ತಲ ಜಿಲ್ಲೆಯ ಕೃಷಿಕರು ತಮ್ಮ ಜಾನುವಾರಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗೇಶ್ವರ ದನಗಳ ಜಾತ್ರೆ ಉತ್ತಮ ವೇದಿಕೆಯಾಗಿದೆ.ಚಿಕ್ಕಣ್ಣನಹಟ್ಟಿಯ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದಿಂದ ಪ್ರತೀ ವರ್ಷ ಇಲ್ಲಿ ಜಾನುವಾರುಗಳನ್ನು ಕಟ್ಟುತ್ತೇವೆ. ಜಾತ್ರೆಗೆ ಬರುವವರಿಗೆ ಮಠದಲ್ಲಿಯೇ ಮೂರು ಹೊತ್ತು ದಾಸೋಹ ಸಿಗಲಿದೆ. ದೂರದ ಮಹಾರಾಷ್ಟ್ರದಿಂದಲೂ ಜನರು ಇಲ್ಲಿಗೆ ಜಾನುವಾರು ಕೊಂಡುಕೊಳ್ಳಲು ಬರುತ್ತಾರೆ. ಈ ಬಾರಿ ನಮ್ಮ ಹೋರಿಗಳನ್ನು ಮಾಜಿ ಶಾಸಕ ಮಸಾಲೆ ಜಯರಾಂ ಅವರು 6 ಲಕ್ಷ ರೂ.ಗೆ ಖರೀದಿಸಿದ್ದಾರೆ. ಅಲ್ಲದೆ ಮಠದವರು ನಡೆಸುವ ಉತ್ತಮ ರಾಸು ಸ್ಪರ್ಧೆಯಲ್ಲಿ ನಮ್ಮ ನಾಲ್ಕು ಹಲ್ಲಿನ ಹೋರಿ ಪ್ರಥಮ ಸ್ಥಾನ ಪಡೆದಿದೆ.
-ಶಿವಕುಮಾರಸ್ವಾಮಿ, ಚಿಕ್ಕಣ್ಣನಹಟ್ಟಿ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ