4 ಟ್ರಿಲಿಯನ್ ಡಾಲರ್ ಮರೀಚಿಕೆ: ಮೋದಿ ಭರವಸೆಗಳಡಿ ಭಾರತದ ಆರ್ಥಿಕ ಅಭಿವೃದ್ಧಿಯ ಹುಸಿ ನಿರೂಪಣೆ

Update: 2023-11-21 16:56 GMT

 ಪ್ರಧಾನಿ ನರೇಂದ್ರ ಮೋದಿ (PTI)

ನವೆಂಬರ್ ತಿಂಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 2047ರ ವೇಳೆಗೆ ಮುಂದುವರಿದ ರಾಷ್ಟ್ರವನ್ನಾಗಿಸುವ 'ಮೋದಿ ಗ್ಯಾರಂಟಿ' ಎಂಬ ಭರವಸೆಯನ್ನು ನೀಡಿದರು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿದೆ, ಹಾಗೂ ಜಗತ್ತಿನಲ್ಲಿ ಐದನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬ ಸಂದೇಶ ವ್ಯಾಪಕವಾಗಿ ಹರಿದಾಡಿತ್ತು. ಆದರೆ, ನವೆಂಬರ್ 19ರಂದು, ಭಾರತ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಈಗಾಗಲೇ ಜಗತ್ತಿನ ನಾಲ್ಕನೆಯ ಶ್ರೀಮಂತ ರಾಷ್ಟ್ರವಾಗಿದೆ ಎಂಬ ಒಂದು ಸುಳ್ಳು ಮಾಹಿತಿಯೂ ಪ್ರಸಾರವಾಗತೊಡಗಿತು. ಈ ತಪ್ಪು ಮಾಹಿತಿಯನ್ನು ಇನ್ನೂ ಗುರುತಿಸಿಲ್ಲದ ಮೂಲವೊಂದು ಪ್ರಚಾರಗೊಳಿಸಿತ್ತು.

ಆಶ್ಚರ್ಯಕರ ಬೆಳವಣಿಗೆಯಲ್ಲಿ, ರಾಜಕಾರಣದ ಪ್ರಭಾವಶಾಲಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು, ಸಚಿವರು, ಹಾಗೂ ಉದ್ಯಮ ಮುಖಂಡರು ನಾ ಮುಂದು ತಾ ಮುಂದು ಎಂದು ಈ ನಿಜವಲ್ಲದ ಕತೆಯನ್ನು ಹಂಚಿಕೊಳ್ಳತೊಡಗಿದರು. ಸಾಮಾನ್ಯವಾಗಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಕೀಯವಾಗಿ ಪ್ರಯೋಜನಕರವಾಗಬಲ್ಲ, ಆದರೆ ನಿಜವಲ್ಲದ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಲು ಹೋಗದ ಕಾರಣ, ಈ ನಿರ್ದಿಷ್ಟ ಮಾಹಿತಿಯೂ ಆ ವರ್ಗದ್ದಾದ್ದರಿಂದ, ಇದು ವ್ಯಾಪಕವಾಗಿ ಪ್ರಚಾರ ಪಡೆಯತೊಡಗಿತು.

ಕೇಂದ್ರ ಕಾನೂನು ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗೌತಮ್ ಅದಾನಿ (ಪ್ರಧಾನಿ ಮೋದಿಯವರ ವಿವಾದಾತ್ಮಕ ಮಿತ್ರ), ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್, ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಹಾಗೂ ಮತ್ತಿತರ ಪ್ರಮುಖ ವ್ಯಕ್ತಿಗಳು ಭಾರತ ಈಗಾಗಲೇ ಜಗತ್ತಿನ ನಾಲ್ಕನೆಯ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ ಎಂಬ ತಪ್ಪು ನಿರೂಪಣೆಯನ್ನು ಹಂಚಿಕೊಂಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ, ಅದಾನಿ, ಮೇಘವಾಲ್ ಅಂತವರು ತಮ್ಮ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದರು.

ಅದಾನಿ ಭಾರತಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಜಾಗತಿಕ ಜಿಡಿಪಿಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿರಲಿದೆ ಎಂದಿದ್ದರು. ಈ ಸಾಧನೆ ಮಾಡುವುದೆಂದರೆ, ಭಾರತ 4.4 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಜಪಾನ್ ಹಾಗೂ 4.3 ಟ್ರಿಲಿಯನ್ ಜಿಡಿಪಿ ಹೊಂದಿರುವ ಜರ್ಮನಿಗಳನ್ನು ಹಿಂದಿಕ್ಕಬೇಕಾಗುತ್ತದೆ. ಅದಾನಿ ಅವರ ಸಾಮಾಜಿಕ ಜಾಲತಾಣದ ಬರಹ ಭಾರತದ ನಿರಂತರ ಅಭಿವೃದ್ಧಿಯ ಆಶಾಭಾವವನ್ನು ಹೊಂದಿತ್ತು. ಅದರೊಡನೆ, ರಾಷ್ಟ್ರೀಯತೆಯ ಭಾವ ಮೂಡಿಸಲು ಭಾರತದ ತ್ರಿವರ್ಣ ಧ್ವಜ ಮತ್ತು ಜೈ ಹಿಂದ್ ಘೋಷವಾಕ್ಯವನ್ನೂ ಒಳಗೊಂಡಿತ್ತು.

ಸಾಕಷ್ಟು ಜನರು ಈ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, ಭಾರತದಾದ್ಯಂತ, ಅದರಲ್ಲೂ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಮೋದಿಯವರ ಹೆಸರಿನಲ್ಲಿ ಮತ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಈಗ ಈ ವಿಧಾನಸಭಾ ಚುನಾವಣೆಗಳನ್ನು ಮೋದಿಯವರ ಹೆಸರಿನಲ್ಲೇ ಎದುರಿಸುತ್ತಿದೆ.

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನವೆಂಬರ್ 23ರಂದು ಕೊನೆಗೊಳ್ಳಲಿದೆ. ಚುನಾವಣಾ ಪ್ರಚಾರದ ಪ್ರಮುಖ ಗಮನ ಅಭಿವೃದ್ಧಿ ಕೇಂದ್ರಿತವಾಗಿದ್ದು, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರಗೊಳಿಸುತ್ತಿದೆ. ಇನ್ನೊಂದೆಡೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಯಾವ ರಾಜ್ಯದಲ್ಲಾದರೂ ಅಧಿಕಾರಾವಧಿಯಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿ, ಭ್ರಷ್ಟಾಚಾರದಲ್ಲಿ ತೊಡಗಿತ್ತು ಎಂದು ಆರೋಪಿಸಿದ್ದಾರೆ. ಭಾರತದ ಅಭಿವೃದ್ಧಿಯ ಸುಳ್ಳು ನಿರೂಪಣೆ ಮೊದಲು ಛತ್ತೀಸ್ಗಢದಲ್ಲಿ ಹರಿಬಿಡಲಾಗಿತ್ತು. ಈಗ ಅದನ್ನೇ ಮತ್ತೆ ರಾಜಸ್ಥಾನದಲ್ಲಿ ಪ್ರಚುರಪಡಿಸಲಾಗುತ್ತಿದೆ. ಕೇಂದ್ರ ಸಚಿವರು, ರಾಜಸ್ಥಾನದವರೇ ಆದ ಗಜೇಂದ್ರ ಸಿಂಗ್ ಶೆಖಾವತ್ ಸಹ ಈ ನಿರೂಪಣೆಯನ್ನು ಪ್ರಚಾರಪಡಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಭಿವೃದ್ಧಿಯ ನಿರೂಪಣೆಯನ್ನು ರಾಜಸ್ಥಾನದಲ್ಲಿ ಬಿಜೆಪಿ ತನ್ನದೇ ಆದ ಇನ್ನೊಂದು ಸತ್ಯವಲ್ಲದ ನಿರೂಪಣೆಯೊಡನೆ ಎದುರಿಸುತ್ತಿದೆ.

190 ರಾಷ್ಟ್ರಗಳ ಪ್ರಸ್ತುತ ಜಿಡಿಪಿ ಅಂಕಿಅಂಶ ಎಂದು ಹೇಳಲಾದ, ಸುಳ್ಳು ಮಾಹಿತಿಗಳನ್ನು ಒಳಗೊಂಡ ಸ್ಕ್ರೀನ್ ಶಾಟ್‌ಗಳನ್ನು ಹರಿಬಿಡಲಾಗಿದ್ದು, ಇದು ಭಾರತದ ಜಿಡಿಪಿ ಈಗಾಗಲೇ ನಾಲ್ಕು ಟ್ರಿಲಿಯನ್ ಡಾಲರ್‌ಗೂ ಹೆಚ್ಚಿದ್ದು, ನಾಲ್ಕನೆಯ ಅತಿದೊಡ್ಡ ಆರ್ಥಿಕತೆಯಾಗಿದೆ ಎನ್ನುತ್ತಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ, ಭಾರತ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಿರುವುದು ಈ ಸುಳ್ಳು ನಿರೂಪಣೆ ಇನ್ನಷ್ಟು ವ್ಯಾಪಕವಾಗಿ ಹರಿದಾಡಲು ಬೆಂಬಲ ಸೂಚಿಸುತ್ತಿದೆ. ಈ ಸುಳ್ಳು ಮಾಹಿತಿಗಳ ಮೂಲ ಯಾವುದು ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಾಹಿತಿಯನ್ನು ಹಂಚಿಕೊಳ್ಳುವ ಜೊತೆಗೆ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇನ್ನೂ ಆಗದಿರುವ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದು ಶ್ಲಾಘಿಸಿದ್ದರು!

ಗಮನಿಸಬೇಕಾದ ಅಂಶವೆಂದರೆ, ಭಾರತ ಸೆಪ್ಟೆಂಬರ್ 2023ಕ್ಕೆ ಕೊನೆಯಾದ ತ್ರೈಮಾಸಿಕದ ಅಧಿಕೃತ ಜಿಡಿಪಿ ಮಾಹಿತಿಗಳನ್ನು ನವೆಂಬರ್ ಕೊನೆಯಲ್ಲಿ ಹಂಚಿಕೊಳ್ಳಬೇಕಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯ ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ಜಿಡಿಪಿ ದರ 8% ಅಭಿವೃದ್ಧಿ ಸಾಧಿಸಿದ್ದು, ಹಿಂದಿನ 65.43 ಲಕ್ಷ ಕೋಟಿಗೆ ಹೋಲಿಸಿದರೆ 70.67 ಲಕ್ಷ ಕೋಟಿಯಾಗಿದೆ ಎಂದು ವರದಿ ಮಾಡಿದೆ.

ಸರ್ಕಾರಿ ಮಾಹಿತಿಗಳನ್ನು ವಿಶ್ಲೇಷಿಸುವ ಅರ್ಥಶಾಸ್ತ್ರಜ್ಞರ ಪ್ರಕಾರ, ಭಾರತದ ಆರ್ಥಿಕತೆ 4 ಟ್ರಿಲಿಯನ್ ಡಾಲರ್ ಗಡಿಯನ್ನು 2024-25ರಲ್ಲಿ ದಾಟಲಿದೆ. ಆದರೆ, ಐಎಂಎಫ್ ದಾಖಲೆಗಳ ಪ್ರಕಾರ, ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಹೊಂದಿದ್ದು, ಅದನ್ನು 2026-27ರ ವೇಳೆಗೆ ಸಾಧಿಸುವ ನಿರೀಕ್ಷೆಗಳಿವೆ. ಆದರೆ, ಅದನ್ನು ಸಾಧಿಸಲು ಸಂಭಾವ್ಯ ಅಪಾಯಗಳನ್ನು ತಪ್ಪಿಸಿಕೊಂಡು ಮುಂದುವರಿಯುವ ಅವಶ್ಯಕತೆಯಿದೆ.

ರಾಜಕೀಯ ದೃಷ್ಟಿಕೋನದಿಂದ ನೋಡಿದರೆ, ಗಾಳಿಸುದ್ದಿ ಕಾರ್ಖಾನೆಗಳು ಈಗಾಗಲೇ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ ಎಂಬ ಸುದ್ದಿಗಳನ್ನು ಪರಿಣಾಮಕಾರಿಯಾಗಿ ಹಬ್ಬಿಸಿಬಿಟ್ಟಿವೆ. ಇದು ಯಾವ ಮಟ್ಟಿಗೆ ಆಗಿದೆಯೆಂದರೆ, ಜನರು 'ಒಂದು ವೇಳೆ ಭಾರತ ಜಗತ್ತಿನ ನಾಲ್ಕನೆಯ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ, ಪ್ರಧಾನಿ ಮೋದಿಯವರು ಯಾಕೆ ಇನ್ನೂ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ (ಬಡವರಿಗೆ ಆಹಾರ ಒದಗಿಸುವ ಯೋಜನೆ - ಪಿಎಂಜಿಕೆಎವೈ) ಒತ್ತು ನೀಡುತ್ತಿದ್ದಾರೆ?' ಎಂಬ ಸರಳ ಪ್ರಶ್ನೆಯನ್ನೂ ಕೇಳದೆ ಅವಾಸ್ತವಿಕ ವಿಚಾರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಉಚಿತ ದವಸ ವಿತರಣೆಯನ್ನು 2028ರ ತನಕ, ಐದು ವರ್ಷಗಳ ಅವಧಿಗೆ ಮುಂದುವರಿಸುವುದಾಗಿ ಹೇಳಿದ್ದರು. ಆದರೆ, ಭಾರತ ಆರ್ಥಿಕವಾಗಿ ಇಷ್ಟೊಂದು ಮುಂದುವರಿದಿದ್ದರೆ, 80 ಕೋಟಿಗೂ ಅಧಿಕ ಭಾರತೀಯರು ಯಾಕೆ ಇಂದಿಗೂ ಅವರ ಆಹಾರವನ್ನು ಹೊಂದಲು ಸಾಧ್ಯವಾಗುತ್ತಿಲ್ಲ? ಎಂಬ ಸೂಕ್ತ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಈ ಆಯಾಮದಲ್ಲಿ ಗಮನಿಸುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಗಳು ಭಾರತದಲ್ಲಿ ಶ್ರೀಮಂತ ವರ್ಗದವರಿಗೆ ಇನ್ನಷ್ಟು ಶ್ರೀಮಂತರಾಗಲು ವಿಪುಲ ಅವಕಾಶಗಳಿದ್ದು, ಸಾಮಾನ್ಯ ನಾಗರಿಕರು ಬಡತನದಲ್ಲಿಯೇ ಉಳಿಯುವಂತಹ ಪರಿಸ್ಥಿತಿ ಇದೆ ಎಂದು ತೋರಿಸುತ್ತಿವೆ. ಇದು ಒಂದು ರೀತಿಯಲ್ಲಿ ಬಡವರಿಗೆ ಒಂದಷ್ಟು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ, ನೈಜ ಸಂಪತ್ತು ಕೆಲವೇ ಶ್ರೀಮಂತರ ಪಾಲಿಗೆ ಇರುವಂತಹ ಊಳಿಗಮಾನ್ಯ ನೀತಿಯನ್ನು ಹೋಲುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಎಂಬ ಯೋಜನೆಯ ಹೆಸರೇ ಸಂಕೀರ್ಣ ಯೋಜನೆಗಳನ್ನು ಜಾರಿಗೆ ತಂದು ಬಡತನ ನಿವಾರಿಸುವ ಬದಲು, ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಸೂಚಿಸುತ್ತದೆ.

ಭಾರತ ಇಂದಿಗೂ ಬಡತನ ರೇಖೆಯ ಕೆಳಗೆ ಅತ್ಯಧಿಕ ಜನರನ್ನು ಹೊಂದಿರುವ ರಾಷ್ಟ್ರವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರ ಪ್ರಕಾರ, 81.35 ಕೋಟಿ ಜನರು ಆಹಾರ ಭದ್ರತೆಯಡಿ ಬರುತ್ತಾರೆ. ಇದು ಭಾರತದ 75% ಗ್ರಾಮೀಣ ಜನಸಂಖ್ಯೆ ಮತ್ತು 50% ನಗರ ಪ್ರದೇಶದ ಜನಸಂಖ್ಯೆಯನ್ನು ವ್ಯಾಪಿಸುತ್ತದೆ. ಈ ಅಂಕಿಅಂಶಗಳನ್ನು 2011ರ ಜನಗಣತಿಯ ಆಧಾರದಲ್ಲಿ ನಿರೂಪಿಸಲಾಗಿದೆ. ಆದರೆ, ಹತ್ತು ವರ್ಷಗಳ ಬಳಿಕ ಇಂದಿಗೂ ಆಹಾರ ಭದ್ರತೆಯ ಅವಶ್ಯಕತೆ ಇರುವ ಜನರನ್ನು ಪೂರ್ಣವಾಗಿ ಗುರುತಿಸಲು ಸಾಧ್ಯವಾಗಿಲ್ಲ. ನವೆಂಬರ್ 15ರಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ನೀಡಿರುವ ಮಾಹಿತಿಯ ಪ್ರಕಾರ, ಎರಡನೆಯ ಹಂತದ ಚುನಾವಣೆಗಳು ಮುಗಿದ ಬಳಿಕ, ಕೇವಲ 80.48 ಕೋಟಿ ಜನರು ಪಿಎಂಜಿಕೆಎವೈ ಅಡಿ ಗುರುತಿಸಲ್ಪಟ್ಟಿದ್ದಾರೆ.

ಈ ನೂತನ ವರದಿಗಳು ಬಹುತೇಕ ಹತ್ತು ದಿನಗಳ ಹಿಂದೆ ಛತ್ತೀಸ್ಗಢದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರು ಉಚಿತ ಆಹಾರ ಧಾನ್ಯ ಪೂರೈಕೆ 2028ರ ತನಕ ಮುಂದುವರಿಯುವುದಾಗಿ ಘೋಷಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಆಶ್ಚರ್ಯಕರವಾಗಿ ಪಿಐಬಿ ವರದಿ ಈ ಘೋಷಣೆಯ ವಿವರವನ್ನು ಒಳಗೊಂಡಿಲ್ಲ. ಅದು ಕೇವಲ ಈ ಉಚಿತ ಪಡಿತರ ಪೂರೈಕೆ ಯೋಜನೆ ಜನವರಿ 1, 2023ರಿಂದ ಆರಂಭಗೊಂಡು, ಒಂದು ವರ್ಷದ ಅವಧಿಗೆ ಕಾರ್ಯರೂಪದಲ್ಲಿರಲಿದೆ ಎಂದಿದೆ.

ವಿಶ್ವಬ್ಯಾಂಕ್ ಪ್ರಕಾರ, ಭಾರತದಲ್ಲಿ 97 ಕೋಟಿಗೂ ಅಧಿಕ ಜನರು ಪೌಷ್ಟಿಕ ಆಹಾರವನ್ನು ಹೊಂದಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇದು ಮೋದಿ ಗ್ಯಾರಂಟಿ ಯೋಜನೆ ನಿಜವಾಗಿಯೂ ಸಾಮಾನ್ಯ ನಾಗರಿಕರಿಗೆ ಏನು ಪ್ರಯೋಜನ ಎಂಬ ಪ್ರಶ್ನೆಯನ್ನೂ ಮೂಡಿಸುತ್ತಿದೆ. 2014ರಲ್ಲಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, 'ಅಚ್ಚೇ ದಿನ್' (ಒಳ್ಳೆಯ ದಿನಗಳು) ತರುವ ನಿಟ್ಟಿನಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿತ್ತು. ಆ ಎಲ್ಲ ಭರವಸೆಗಳೂ ಹುಸಿಯಾಗಿವೆ. ಅದರೊಡನೆ ಈಗ ಗಾಳಿ ಸುದ್ದಿ ಕಾರ್ಖಾನೆಗಳು ಆರ್ಥಿಕ ಪ್ರಗತಿಯ ಕುರಿತು ಹೊಸ ಸುಳ್ಳು ಪರಿಕಲ್ಪನೆಗಳನ್ನು ಹರಿಬಿಡುತ್ತಿದ್ದು, ಭಾರತ ಈಗಾಗಲೇ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ ಎನ್ನುತ್ತಿವೆ. ಇದು ಚುನಾವಣಾ ವರ್ಷವಾಗಿರುವುದರಿಂದ, ಮತದಾರರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇದು ಚುನಾವಣಾ ಸೆಮಿಫೈನಲ್ ಆಗಿದ್ದು, 2024ರ ಲೋಕಸಭಾ ಚುನಾವಣೆ ಫೈನಲ್ ಆಗಿದ್ದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿದೆ.

 

ಗಿರೀಶ್ ಲಿಂಗಣ್ಣ

-ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ಗಿರೀಶ್ ಲಿಂಗಣ್ಣ

contributor

Similar News