ರಾಜಕಾರಣದ ಎಡವಟ್ಟು ಮತ್ತು ಆಪತ್ತು

ಈ ಬಗೆಯ ರಾಜಕಾರಣ ದೇಶವನ್ನು ಎಲ್ಲಾದರೂ ಕೊಂಡುಹೋಗಲಿ, ಭವಿಷ್ಯದ ಪೀಳಿಗೆಯನ್ನಂತೂ ಹತಾಶರನ್ನಾಗಿಸಬಹುದು. ಸಿದ್ದರಾಮಯ್ಯನವರ ಎಡವಟ್ಟು ಅವರಿಗೆ ಆಪತ್ತಾಗಲೂಬಹುದು; ಪರಿಶುದ್ಧರಾಮಯ್ಯನಾಗಿಸಲೂಬಹುದು. ಸಿದ್ದರಾಮಯ್ಯನವರ ಈಗಿನ ಪರಿಸ್ಥಿತಿಯು 1970ರ ದಶಕದ ಅರಸು ರಾಜಕೀಯವನ್ನು ಇನ್ನೊಂದು ರೀತಿಯಲ್ಲಿ ಪರೀಕ್ಷೆಗೆ ಒಡ್ಡಿರುವುದಂತೂ ಖಂಡಿತ.

Update: 2024-10-03 06:24 GMT

ನಾನು ಕೇಳಿದ ಒಂದು ಕಥೆ ಹೀಗಿತ್ತು: ತುಪ್ಪದ ವ್ಯಾಪಾರಸ್ಥನೊಬ್ಬ ತೀರಾ ಕಳಪೆ ಮತ್ತು ಅಸಹನೀಯ ವಾಸನೆ ಬರುವ ಒಂದು ಲೀಟರ್ ತುಪ್ಪವನ್ನು ಮಾರಿದ. ಆ ಗ್ರಾಹಕ ಕೋಪಗೊಂಡು ರಾಜನಿಗೆ ದೂರಿತ್ತ. ರಾಜ ವ್ಯಾಪಾರಿಯನ್ನು ಕರೆಸಿ ವಿಚಾರಣೆ ಮಾಡಿದಾಗ ಆರೋಪ ಸತ್ಯವೆಂದು ಸಾಬೀತಾಯಿತು. ರಾಜನಿಗೆ ಈತನನ್ನು ದಂಡಿಸಬೇಕು ಮತ್ತು ಅದು ಇತರರಿಗೆ ಮಾದರಿಯಾಗಬೇಕು ಎಂಬ ಇಚ್ಛೆಯಿತ್ತು. ಆತ ವ್ಯಾಪಾರಿಗೆ ಮೂರು ಆಯ್ಕೆಗಳನ್ನು ನೀಡಿದ: 1. ಅದೇ ತುಪ್ಪವನ್ನು ವ್ಯಾಪಾರಿ ಕುಡಿಯಬೇಕು. 2. ನೂರು ಕೊರಡೆಯೇಟು ತಿನ್ನಬೇಕು. 3. ನೂರು ರೂಪಾಯಿ ದಂಡ ಕಟ್ಟಬೇಕು. ವ್ಯಾಪಾರಿ ಬುದ್ಧಿವಂತ. ಆತ ಮೊದಲನೆಯದನ್ನು ಆಯ್ದುಕೊಂಡ. ಕೊಂದ ಪಾಪ ತಿಂದು ಪರಿಹಾರ! ಹಾಗೂ ಹೀಗೂ ಅರೆವಾಸಿ ಕುಡಿದ. ಮುಂದೆ ಕುಡಿಯುವುದು ಅವನಿಗೂ ಆಗಲಿಲ್ಲ. ಈಗ ಯೋಚಿಸಿ ಎರಡನೆಯ ಆಯ್ಕೆಯ ಶಿಕ್ಷೆಗೆ ಒಪ್ಪಿದ. ಹಣ ಉಳಿಯುತ್ತದಲ್ಲ! ಸರಿ; ಕೊರಡೆಯೇಟು ಆರಂಭವಾಯಿತು. 50 ಏಟು ಬೀಳುವಾಗ ವ್ಯಾಪಾರಿ ಸುಸ್ತಾದ. ಬೆನ್ನೆಲ್ಲ ಬಾಸುಂಡೆಯಾಗಿತ್ತು. ಈಗ ಅನಿವಾರ್ಯವಾಗಿ ದಂಡ ಕಟ್ಟಿದ. ಆರಂಭದಲ್ಲೇ ದಂಡಕಟ್ಟಿದ್ದರೆ ಅರೆವಾಸಿ ತುಪ್ಪ ಕುಡಿಯುವುದನ್ನೂ, ಅರ್ಧಾಂಶ ಏಟನ್ನೂ ತಪ್ಪಿಸಿಕೊಳ್ಳಬಹುದಿತ್ತು.

ವ್ಯಾಪಾರಿಗೆ ಬಂದ ಈ ಸ್ಥಿತಿ ಹಗರಣವನ್ನು ಎದುರಿಸುವ ಪ್ರತಿಯೊಬ್ಬ ರಾಜಕಾರಣಿಯೂ (ಮತ್ತು ಇತರ ಕುಪ್ರಸಿದ್ಧರೂ ಎದುರಿಸಲೇ ಬೇಕಾದ ‘ಅಗ್ನಿದಿವ್ಯ’. ಈ ಅಗ್ನಿದಿವ್ಯದಲ್ಲಿ ಅಗ್ನಿಯೇ ನಾಚಿ ಆರಿಹೋಗಬೇಕೇ ವಿನಾ ಅದನ್ನೆದುರಿಸುವವನಲ್ಲ. ಅಂದರೆ ಹಗರಣಗಳು ನಮಗೆ ನಿಮಗೆ ಅಪಮಾನಕಾರಿಯಾದರೂ ರಾಜಕಾರಣಿಗಳಿಗಲ್ಲ. ಹಗರಣವನ್ನು ಎದುರಿಸದಿದ್ದರೆ, ಒಂದಾದರೂ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗದಿದ್ದರೆ ಆತ ರಾಜಕಾರಣದಲ್ಲಿ ಉಳಿಯುವುದು ಕಷ್ಟ. ಸ್ತ್ರೀಪಾತ್ರಕ್ಕಾಗಿ ಸದಾ ಮುಖ ಬೋಳಿಸಿಕೊಳ್ಳಬೇಕಾದ ನಟನಂತೆ ಎಂತಹ ಸಭ್ಯನಾದರೂ, ಗಣ್ಯನಾದರೂ ರಾಜಕಾರಣದಲ್ಲಿ ಉಳಿಯಬೇಕಾದರೆ ಆತ್ಮಾಭಿಮಾನವನ್ನು ತೊರೆಯಲೇಬೇಕು. ನಡೆ-ನುಡಿಯ ಘನತೆಯನ್ನು ಮರೆಯಬೇಕು. ಜನರೊಂದಿಗೆ ಬೆರೆಯುವ ನೆಪದಲ್ಲಿ ಹಗುರಾಗಬೇಕು. ಕೃತಕ ಬುದ್ಧಿಮತ್ತೆ ಸಹಜ ಮೂಢರಲ್ಲಿ ಕಾಣಬೇಕಾದರೆ ರಾಜಕಾರಣಿಗಳನ್ನು ಗಮನಿಸಬೇಕು. ಘನತೆಯನ್ನು ಉಳಿಸಿಕೊಂಡು ರಾಜನಾಗುವುದು ಸುಲಭ; ಆದರೆ ರಾಜನಿಲ್ಲದಲ್ಲಿ ಮಂತ್ರಿಯಾಗುವುದು ಕಷ್ಟ. ರಾಜರ ಕತೆ ಮುಗಿದಿದೆ; ಈಗ ಏನಿದ್ದರೂ ಅರಾಜ-ಕತೆ. ಮೈಸೂರಿನ ಸಂಸದ ಯದುವೀರ ಒಡೆಯರ್ ಆವರೆಗೆ ಒಂದು ದಿನವೂ ಬದುಕದ ರೀತಿಯಲ್ಲಿ ಲೋಕಸಭಾ ಚುನಾವಣೆಗೆ ನಿಂತಾಕ್ಷಣ ಬದುಕಲಾರಂಭಿಸಿದರು. ಈಗಂತೂ ಅವರ ಭಾಷೆಯೂ ಹಗುರಾಗಿದೆ. ದ್ವೇಷಭಾಷೆ ರಾಜಕಾರಣಕ್ಕೆ ಅನಿವಾರ್ಯವೆಂಬಂತೆ ಅವರು ತನಗೆಂದೂ ಹಗೆಯಾಗಿರದಿದ್ದವರ ವಿರುದ್ಧ ದೂಷಣೆಯನ್ನು ಮಾಡಲಾರಂಭಿಸಿದ್ದಾರೆ. ಅವರೀಗ ನಳನಲ್ಲ; ಬಾಹುಕ ಅಥವಾ ಅಜ್ಞಾತವಾಸದ ಪಾಂಡವ. ಕಂಗನಾ ರಣಾವತ್ ಎಂಬ ಚಲನಚಿತ್ರ ನಟಿ ತನ್ನ ಬೇಳೆ ಬೇಯಬೇಕಾದರೆ ಯಾವ ಕಡೆಗೆ ಗಾಳಿ ಸಂಚರಿಸಬೇಕೆಂಬುದನ್ನು ಬಲ್ಲ ಬುದ್ಧಿವಂತೆಯಾಗಿ ಸಂಸದೆಯಾದಳು. ಈಗ ಆಕೆ ಹೊಸಬಗೆಯ ವರ್ಚಸ್ಸನ್ನು ಪಡೆದುಕೊಂಡಿದ್ದಾಳೆ; ಜೋಕುಮಾರಿಯಾದಂತಿದ್ದಾಳೆ; ಇಷ್ಟಬಂದಂತೆ ಮಾತನಾಡಿ ಸ್ವಕೀಯರಿಗೇ ಭಾರವಾಗುತ್ತಿದ್ದಾಳೆ.

ಸದ್ಯ ಕರ್ನಾಟಕದಲ್ಲಿ ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇಂತಹ ಹಗರಣಗಳು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿರುವ ಕುಮಾರಸ್ವಾಮಿ, ಯಡಿಯೂರಪ್ಪ ಇವರನ್ನೂ ಬಾಧಿಸಿದೆ. ಆದರೆ ಇವರಲ್ಲಿ ಬದಲಾಯಿಸಬಲ್ಲ ಬಣ್ಣಗಳಿವೆ; ಉಡುಪುತೊಡುಪುಗಳಿವೆ. ಊಸರವಳ್ಳಿಯೇ ಮುಂದೊಂದು ದಿನ ಭಾರತದ ರಾಷ್ಟ್ರೀಯ ಲಾಂಛನವಾದರೆ ಅಚ್ಚರಿಯಿಲ್ಲ. ಆದರೆ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಿಂದ ತಾತ್ವಿಕ/ರಾಜಕೀಯ ಭಿನ್ನಾಭಿಪ್ರಾಯದಿಂದ ದೇವೇಗೌಡರ ಕುಟುಂಬವನ್ನು ತೊರೆದ ಬಳಿಕ ಸುಮಾರಾಗಿ ಒಂದೇ ಬಗೆಯ ರಾಜಕಾರಣವನ್ನು ಮಾಡುತ್ತ ಬಂದವರು.

ಮೈಸೂರಿನ ಮುಡಾ ಹಗರಣವು ಇತರ ಹಗರಣಗಳಿಗೆ ಹೋಲಿಸಿದರೆ ರಾಜಕಾರಣದ ಅಳತೆಯಲ್ಲಿ ತೀರಾ ಚಿಕ್ಕದು. ರಾಜಕಾರಣದಲ್ಲಿ ಸಾವಿರಸಾವಿರ ಕೋಟಿಯ ಹಗರಣಗಳಷ್ಟೇ ದೊಡ್ಡವು. ಆದರೆ ದಡ್ಡನಿಗೆ ಒಂದು ಕಡೆ; ದೊಡ್ಡವರಿಗೆ ಮೂರು ಕಡೆ ಎಂಬಂತೆ ಈ ಪುಟ್ಟಗುಳ್ಳೆ ದೊಡ್ಡದಾಗಿ ಸಿದ್ದರಾಮಯ್ಯನವರ ಕೊರಳಿಗೆ ಕುಣಿಕೆಯಾಗುವಷ್ಟು ಬೆಳೆದದ್ದು ಅವರ ಪ್ರತಿಕ್ರಿಯೆಯಿಂದಾಗಿ. ಮೊದಲನೆಯದಾಗಿ ಈ ಹಗರಣದ ಗುಸುಗುಸು ಆರಂಭವಾಗುವ ಹೊತ್ತಿನಲ್ಲೇ ಮುಖ್ಯಮಂತ್ರಿಗಳು ತಮ್ಮ ಪತ್ನಿಯ ಹೆಸರಿಗೆ ವರ್ಗಾಯಿಸಲಾದ ನಿವೇಶನಗಳನ್ನು ಮರಳಿಸಬಹುದಿತ್ತು. ಅಲ್ಲಿಗೆ ಪ್ರಕರಣವೇ ಇಲ್ಲದಾಗುತ್ತಿತ್ತು. ಇದರಿಂದ ಆಗಬಹುದಾಗಿದ್ದ ಅಪಪ್ರಚಾರವಾಗಲೀ, ಅವಮಾನವಾಗಲೀ, ನಷ್ಟವಾಗಲೀ ತೀರ ಕಡಿಮೆ ಪ್ರಮಾಣದ್ದು. ಆದರೆ ಹಾಗೆ ಮಾಡದ್ದರಿಂದ ಅದು ಬೇರುಬಿಟ್ಟಿತು.

ಎರಡನೆಯದಾಗಿ ರಾಜ್ಯಪಾಲರು ಹೇಳಿಕೇಳಿ ಭಾಜಪದ ಕೈಗೊಂಬೆ. ಅವರು ತನಿಖೆಗೆ ಮಂಜೂರಾತಿ ನೀಡಿದಾಕ್ಷಣ ಅದೇನೂ ಬಹಳ ಗುರುತರವಾಗಿ ಗೋಚರಿಸುತ್ತಿರಲಿಲ್ಲ. ಅದನ್ನು ಬೆಳೆಯಲು ಅವಕಾಶ ಮಾಡಿಕೊಟ್ಟದ್ದು, ಬೆಳೆಸಿದ್ದು ಪ್ರತಿಕ್ರಿಯಾತ್ಮಕ ಕಾಂಗ್ರೆಸಿಗರೇ. ಸ್ವಲ್ಪ ಮಟ್ಟಿಗೆ ಇದರಿಂದ ಸಿದ್ದರಾಮಯ್ಯನವರಿಗೆ ತೊಂದರೆಯಾಗದಿದ್ದರೂ ಅವಮಾನವಾದರೂ ಆಗಲಿ ಎಂದು ತಿಳಿದ ಕಾಂಗ್ರೆಸಿಗರು ಅನೇಕರಿದ್ದರು. ಇಂತಹ ಹಲವು ಬೃಹಸ್ಪತಿಗಳು ಈ ಮಂಜೂರಾತಿಯ ವಿರುದ್ಧ ‘ಕಾನೂನಾತ್ಮಕ’ ಹೋರಾಟವನ್ನು ನಡೆಸಲು ಸಲಹೆ ನೀಡಿರಬೇಕು. ಈ ಪ್ರಕರಣದ (ನೆನಪಿಡಿ, ಹಗರಣ ಬೇರೆ, ಪ್ರಕರಣ ಬೇರೆ) ಫಲಿತಾಂಶ ಮೊದಲೇ ನಿರ್ಧರಿಸಬಹುದಿತ್ತು. ಅನೇಕ ಹಿರಿಯ ಅಥವಾ ಜನಪ್ರಿಯರು ಸೇರಿ ಇದರ ಸಮುದ್ರಮಥನ ನಡೆಸಿದರು. ಒಳ್ಳೆಯ ಅಥವಾ ಸುವಸ್ತುಗಳೆಂದು ಕರೆಸಿಕೊಳ್ಳಬಹುದಾದವು ಹೊರಬಂದದ್ದು ಕಡಿಮೆ; ಹಾಲಾಹಲವೇ ಹೆಚ್ಚು. ರಾಜ್ಯಪಾಲರು ನೀಡಿದ ರಾಜಕೀಯ ಆದೇಶಕ್ಕೆ ಕಾಂಗ್ರೆಸಿಗರು ಉಚ್ಚ ನ್ಯಾಯಾಲಯದ ಮೂಲಕ ಕಾನೂನಿನ ಮುದ್ರೆಯನ್ನು ಒತ್ತಿಸಿದರು.

ಈ ಹೋರಾಟದ ತಾರ್ಕಿಕ ಮುನ್ನಡೆಯೆಂದರೆ ತನಿಖೆ. ಈ ಹೊತ್ತಿಗೆ ಎಲ್ಲ ವಕ್ರಗಳೂ ಸೇರಿಕೊಳ್ಳುವುದು ಸಹಜ. ಭಾಜಪ ಇಂತಹ ಅವಕಾಶಗಳನ್ನು ಕಳೆದುಕೊಂಡದ್ದು ಕಡಿಮೆ. ‘ಮರ್ಕಟಸ್ಯ ಸುರಾಪಾನಂ..’ ಎಂಬ ಉಕ್ತಿಯಂತೆ ಭಾಜಪದೊಂದಿಗೆ ಜೆಡಿಎಸ್ ಸೇರಿಕೊಂಡರೆ ಕೇಳಬೇಕೇ? ದೇವೇಗೌಡರ ಆಮರಣ ಅವಿರತ ಹೋರಾಟಕ್ಕೆ ಮೋದಿ ಸಂಜೀವಿನಿ ಸಖ್ಯವಾಗಿ ಕುಮಾರಸ್ವಾಮಿಯವರೂ ಉಕ್ಕಿನ ಮನುಷ್ಯರಾದರು. ಈಗ ಅವರಿಗೆ ಈ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ ಹೀಗೆ ಇಡೀ ಭಾರತವನ್ನೇ ಕರ್ನಾಟಕದಲ್ಲಿ ಪ್ರತಿಷ್ಠಾಪಿಸಲು ಅನುಕೂಲವಾಯಿತು. ಈ.ಡಿ.ಯಂತೂ ಮನೆಯೊಳಗೆ ಸೇರಿಕೊಂಡ ಹಾವಿನಂತೆ. ವಿಷವಿದ್ದರೂ ಇಲ್ಲದಿದ್ದರೂ ಅದು ಅಪಾಯವೇ; ನಿದ್ರೆಯಂತೂ ಬಾರದು. ಈ ಹಂತದಲ್ಲಿ ಸಿದ್ದರಾಮಯ್ಯನವರಿಗೆ ಇರುವ ಜನಾಭಿಪ್ರಾಯ ಅವರ ನೆರವಿಗೆ ಬಾರದು. ಕೇಜ್ರಿವಾಲ್ ದಿಲ್ಲಿಯ ಕುಲದೇವರಾಗಿಯೂ ರಾಷ್ಟ್ರಮಟ್ಟದ ಚುನಾವಣೆಯಲ್ಲಿ ಜನರ ಒಲವನ್ನುಗಳಿಸಲು ವಿಫಲರಾದರು. ‘ದಿಳ್ಳೀಶ್ವರೋವಾ ಜಗದೀಶ್ವರೋವಾ’ ಎಂಬ ವಾಡಿಕೆಯ ಮಾತಿಗೆ ಹೊರತಾಗಿ ಅವರ ಸ್ಥಾನಮಾನವು ದಿಲ್ಲಿಗೆ ಸೀಮಿತವಾಯಿತು. ಹೀಗಾಗಿ ಜೈಲು ಸೇರಿ ಹೊರಬರಬೇಕಾಯಿತು. ಭಾಜಪ ಸೇರಿದ್ದರೆ ಅವರು ಆಳುವ ಪಕ್ಷ ಸೇರಿದ ಅಸ್ಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಂತೆ, ಮಹಾರಾಷ್ಟ್ರದ ಹಲವು ಪ್ರತಿಪಕ್ಷ ರಾಜಕಾರಣಿಗಳಂತೆ, ಸುಖವಾಗಿರಬಹುದಿತ್ತು. ಆದರೆ ಅವರು ತ್ರಿಜನ್ಮ ಮೋಕ್ಷವನ್ನೇ ಆರಿಸಿಕೊಂಡರು.

ಈ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ತಾನು ಪಡೆದ ನಿವೇಶನಗಳನ್ನು ಮರಳಿಸುವುದಾಗಿ ಪತ್ರ ಬರೆದಿದ್ದಾರೆಂದು ವರದಿಯಾಗಿದೆ. ಇದರ ಸತ್ಯಾಸತ್ಯತೆಯು ಏನೇ ಇರಲಿ, ಅದೀಗ ಮಜ್ಜಿಗೆಯನ್ನು ಮರಳಿ ಹಾಲಾಗಿಸುವ ಪ್ರಯತ್ನದಂತಿದೆ. ಇದನ್ನೇ ಆರಂಭದಲ್ಲೇ ಮಾಡಿದ್ದರೆ ಪರಿಸ್ಥಿತಿ, ಪರಿಣಾಮ, ಫಲಿತಾಂಶ ಬೇರೆಯೇ ಇರುತ್ತಿತ್ತು. ಈಗ ಪರಿಸ್ಥಿತಿ ಕೈಮೀರಿದೆಯೋ ಅಥವಾ ಕೈಹಿಡಿದಿದೆಯೇ ಕಾದು ನೋಡಬೇಕು. ವ್ಯತಿರಿಕ್ತ ಪರಿಣಾಮವಾದರೆ ಅದೊಂದು ದುರಂತ ಕಥೆ. ಆರಂಭದಲ್ಲಿ ಹೇಳಿದ ತುಪ್ಪದ ವ್ಯಾಪಾರಿಯ ಕಥೆ ಸಿದ್ದರಾಮಯ್ಯನವರದ್ದೂ ಆಗಬಹುದು.

ಇಂತಹ ಸ್ಥಿತಿ ನಮ್ಮ ಬಹುತೇಕ ರಾಜಕಾರಣಿಗಳಿಗೆ ಇದೆ. ಬಹುತೇಕ ಯಾಕೆಂದರೆ ಅಲ್ಲೋ ಇಲ್ಲೋ ಪ್ರಾಮಾಣಿಕತೆಯ ಓಯಸಿಸ್‌ಗಳು ಇರಬಹುದು. ಈ ಒಳ್ಳೆಯತನವನ್ನು ಊಹಿಸುತ್ತೇನೆಯೇ ಹೊರತು ಸಾಬೀತುಪಡಿಸಲಾರೆ. ಆದರೆ ಅವರಿಗೆ ಇರುವ ಭಂಡಧೈರ್ಯವೆಂದರೆ ಎದುರಿನಿಂದ ಯಾರೂ ತಮ್ಮನ್ನು ದೂಷಿಸುವುದಿಲ್ಲ ಎಂಬ ಸತ್ಯ.

ಭಾರತದ ರಾಜಕಾರಣ ಎಷ್ಟು ಹೊಲಸಾಗಿದೆಯೆಂದರೆ ಒಂದಿಷ್ಟು ಲಜ್ಜೆಯಿರುವವರೂ ಅಲ್ಲಿ ಒಂದು ದಿನವೂ ಇರಲಾರರು. ಇದು ಅಮೃತಕಾಲವಲ್ಲ, ಮಾನದ ಮೃತಕಾಲ. ರಾಜಕಾರಣಿಗಳ ನಡೆ-ನುಡಿ ಎಷ್ಟು ಕೆಟ್ಟುಹೋಗಿದೆಯೆಂದರೆ ಅವರಿಂದ ಇತರರು ಬಿಡಿ, ಅವರ ಮನೆಮಂದಿಯೂ ಕಲಿಯುವಂಥಾದ್ದೇನೂ ಇಲ್ಲ. ಮಾಸ್ಟರ್ ಹಿರಣ್ಣಯ್ಯನವರ ಭ್ರಷ್ಟಾಚಾರ, ಲಂಚಾವತಾರ ಮುಂತಾದ ನಾಟಕಗಳಿಗೆ ಜೀವಂತ ಸಾಕ್ಷಿಗಳಾಗುವವರೆಂದರೆ ಸದ್ಯದ ಭಾರತೀಯ ರಾಜಕಾರಣಿಗಳು. (‘ಭಾರತೀಯ’ ಎಂಬ ಪದವನ್ನು ಒಂದು ಭೌಗೋಳಿಕ ವ್ಯಾಪ್ತಿಯ ಗುರುತಿಗಾಗಿ ಉಲ್ಲೇಖಿಸಿದ್ದೇನೇ ಹೊರತು ಸಂಸ್ಕೃತಿಸೂಚಕವಾಗಿ ಅಲ್ಲ. ಏಕೆಂದರೆ ಸಂಸ್ಕೃತಿ ಅನ್ನುವುದು ಈ ದೇಶದ ರಾಜಕಾರಣದಿಂದ ಬಹಿಷ್ಕೃತವಾಗಿದೆ.) ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ‘‘I stopped making cartoons of politicians..... After Cartoons became Politicians...’’ (ವ್ಯಂಗ್ಯಚಿತ್ರಗಳು ರಾಜಕಾರಣಿಗಳಾದ ಬಳಿಕ ನಾನು ರಾಜಕಾರಣಿಗಳ ವ್ಯಂಗ್ಯಚಿತ್ರಗಳನ್ನು ನಿಲ್ಲಿಸಿದೆ) ಎಂದು ಒಂದು ಕಡೆ ಹೇಳಿ ಪತ್ರಿಕೆಯಡಿ ಮುಖಮುಚ್ಚಿಕೊಂಡ ಶ್ರೀಸಾಮಾನ್ಯನ ಚಿತ್ರವನ್ನು ಕಾಣಿಸಿದ್ದರು.

ಆದರೆ ರಾಜಕಾರಣವನ್ನು ಯಾವುದೇ ದೇಶವಾಗಲೀ, ಜನತೆಯಾಗಲೀ ಬಹಿಷ್ಕರಿಸಲು ಸಾಧ್ಯವಿಲ್ಲ. ಏಕೆಂದರೆ ಅದಿಲ್ಲದೆ ಬದುಕಿಲ್ಲ. ಸಭ್ಯರಂತೆ ಮಾತನಾಡುವ ಬಹುತೇಕ ರಾಜಕಾರಣಿಗಳು 999 ಇಲಿಗಳನ್ನು ತಿಂದ ಬಳಿಕ ತೀರ್ಥಯಾತ್ರೆಗೆ ಹೊರಟ ಬೆಕ್ಕುಗಳೇ ಆಗಿವೆ. ವೇಶ್ಯಾವೃತ್ತಿಗಾದರೂ ಒಂದು ಗೌರವವಿದೆ. ಸೀಮಿತ ಅವಧಿಗಾದರೂ ಅವರ ನಿಷ್ಠೆ ಒಬ್ಬರ ಮೇಲಿದೆ. ಅಲ್ಲದೆ ಅವರ ಆದಾಯದ ಮೂಲ ಅವರಿಗೂ ಗಿರಾಕಿಗಳಿಗೂ ತಿಳಿದಿದೆ. ಆದರೆ ರಾಜಕಾರಣಿಗಳ ಆದಾಯದ ಮೂಲ ಇತರರಿಗೆ ಮಾತ್ರವಲ್ಲ ಅವರಿಗೇ ಗೊತ್ತಿಲ್ಲ. ರಾಜಕಾರಣಿಗಳು ಜನತೆ ಮತ್ತು ದೇಶವನ್ನು ಬಿಟ್ಟು ಇತರ ಎಲ್ಲ ಐಹಿಕ ಸುಖಭೋಗಗಳಿಗೆ ನಿಷ್ಠರಾಗಿರುತ್ತಾರೆ. ಅವರು ಯಾವ ಘಳಿಗೆಯಲ್ಲಿ ಯಾರಿಗೆ ನಿಷ್ಠೆ ತೋರುತ್ತಾರೆಂದು ಮತ್ತು ಯಾಕೆ ಹಾಗಿರುತ್ತಾರೆಂದು ಹೇಳಲು, ಊಹಿಸಲೂ ಸಾಧ್ಯವಿಲ್ಲ. ಮಾನಗೇಡಿತನದಿಂದ ವರ್ತಿಸದಿರಿ ಎಂದು ರಾಜಕಾರಣಿಗಳಿಗೆ ಹೇಳುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಇಷ್ಟಕ್ಕೂ ಬಹುಪಾಲು ಇಲಿಗಳು ಆಗಲೇ ಈ ಬೆಕ್ಕುಗಳೊಂದಿಗೆ ಸೇರಿಕೊಂಡು ಮನೆಯಲ್ಲಿರುವ ಆಹಾರ ಪದಾರ್ಥಗಳನ್ನು ಮುಕ್ಕುತ್ತಿವೆ; ಕುದಿಸಿ ಆರಿಸಿಟ್ಟ ಹಾಲನ್ನು ಬೆಕ್ಕು ಕುಡಿಯುವುದನ್ನು ನೋಡುತ್ತಲೇ ಇವೆ.

ಈ ಸ್ಥಿತಿಗೆ ಯಾರು ಕಾರಣ? ಇದನ್ನು ನೋಡಿ ಸುಮ್ಮನಿರುವ ಮತ್ತು ಕಲೆ, ಸಾಹಿತ್ಯ ಮುಂತಾದವುಗಳೊಂದಿಗೆ ಆತ್ಮಮೈಥುನ ಮಾಡಿಕೊಂಡ ಬದುಕೇ ಬೇರೆ, ತಾವು ನಡೆಸುತ್ತಿರುವ ಕಲೆಯೇ ಬೇರೆ ಎಂದುಕೊಳ್ಳುವ ಸ್ವಾರ್ಥಿ ಬುದ್ಧಿವಂತರು. ಇವರಿಗೆ ಸಂವೇದನಾಶೀಲರು ಎಂಬ ಬಿರುದು ಬೇರೆ ಕೇಡು. ಇರಲಿ: ಇದು ಪ್ರತ್ಯೇಕ ಚರ್ಚೆಗೆ ಗ್ರಾಸ; ಗೋಗ್ರಾಸ.

ಸದ್ಯ ನಮ್ಮ ದೇಶದಲ್ಲಿರುವ ರಾಜಕಾರಣಿಗಳು ಒಕ್ಕೂಟ ವ್ಯವಸ್ಥೆಯ ಕೇಂದ್ರದಲ್ಲಿ ಆಡಳಿತ ನಡೆಸುವವರಾದರೆ ಅವರು ಸುರಕ್ಷಿತ. ಅಮೃತ ಸವಿಯುವ ಈ ಪಟ್ಟಿ ಬಹಳ ದೊಡ್ಡದಿದೆ. ಈ ಪಟ್ಟಿಗೆ ಸೇರದವರೆಂದರೆ ಭಿನ್ನರು, ಪ್ರತಿಪಕ್ಷದವರು. ಹಾವಿನಹೆಡೆಯಡಿ ತಾವು ಸುರಕ್ಷಿತರೆಂದು ತಿಳಿಯುತ್ತ ಒಮ್ಮೆಲೇ ಆಪತ್ತಿಗೆ ಸಿಲುಕುತ್ತಾರೆ. ಆಗ ಇರುವ ಹಾದಿಯೆಂದರೆ ಆಳುವವರೊಂದಿಗೆ ರಾಜಿಮಾಡಿಕೊಳ್ಳುವುದು; ಒಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಜೈ! ಅದಲ್ಲದಿದ್ದರೆ ಹುತಾತ್ಮರಾಗುವುದು. ಜೈಲು ಸೇರಿ ಜಾಮೀನು ಸಿಗುವ ವರೆಗೆ ಹಿಂಸೆ ಮತ್ತು ಅವಮಾನವನ್ನನುಭವಿಸಿ ರಾಜಕಾರಣವನ್ನು ತಮಿಳುನಾಡಿನಲ್ಲೂ, ಕೇರಳದಲ್ಲೂ ಇದೇ ಬಗೆಯ ಪರಿಸ್ಥಿತಿಯಿದೆ. ಆದರೆ ಅಲ್ಲಿನ ಜನರ ಅಸ್ಮಿತೆ ಕನ್ನಡಿಗರಿಗಿಂತ ಘನವಾದದ್ದು. ಅವರದ್ದು ದ್ರಾವಿಡ ಅಸ್ಮಿತೆಯಾದರೆ ನಮ್ಮದು ರೂಢಿಯ ದ್ರಾವಿಡ ಪ್ರಾಣಾಯಾಮ. ಈ ಬಗೆಯ ರಾಜಕಾರಣ ದೇಶವನ್ನು ಎಲ್ಲಾದರೂ ಕೊಂಡುಹೋಗಲಿ, ಭವಿಷ್ಯದ ಪೀಳಿಗೆಯನ್ನಂತೂ ಹತಾಶರನ್ನಾಗಿಸಬಹುದು. ಸಿದ್ದರಾಮಯ್ಯನವರ ಎಡವಟ್ಟು ಅವರಿಗೆ ಆಪತ್ತಾಗಲೂಬಹುದು; ಪರಿಶುದ್ಧರಾಮಯ್ಯನಾಗಿಸಲೂಬಹುದು. ಸಿದ್ದರಾಮಯ್ಯನವರ ಈಗಿನ ಪರಿಸ್ಥಿತಿಯು 1970ರ ದಶಕದ ಅರಸು ರಾಜಕೀಯವನ್ನು ಇನ್ನೊಂದು ರೀತಿಯಲ್ಲಿ ಪರೀಕ್ಷೆಗೆ ಒಡ್ಡಿರುವುದಂತೂ ಖಂಡಿತ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News