ಇವಿಎಂ ಭೂತವನ್ನು ಯಾವತ್ತೋ ಭಾರತದಿಂದ ಓಡಿಸಬಹುದಿತ್ತು

Update: 2024-12-03 05:56 GMT

ಈಗ ಮಹಾರಾಷ್ಟ್ರದ ಚುನಾವಣೆಯಲ್ಲಿ ಹೀನಾಯ ಸ್ಥಿತಿ ತಲುಪಿದ ಮೇಲೆಯೇ ಕಾಂಗ್ರೆಸ್‌ನವರಿಗೆ ಬುದ್ಧಿ ಬಂದು ಇವಿಎಂ ನಿಷೇಧಿಸಬೇಕು ಹಾಗೂ ಎಲ್ಲಾ ಚುನಾವಣೆಗಳು ಬ್ಯಾಲೆಟ್-ಮತಪತ್ರದಿಂದ ಆಗಬೇಕು ಎಂಬ ಅಭಿಯಾನಕ್ಕೆ ಅಣಿಯಾಗಿದ್ದಾರೆ. ಒಂದು ವೇಳೆ 2018ರಲ್ಲಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್‌ರವರ ಕ್ಷೇತ್ರದಲ್ಲಿ ನಡೆದ ಇವಿಎಂನಲ್ಲಿಯ ಮೋಸದಾಟವನ್ನು ಕೋರ್ಟ್‌ನಲ್ಲಿ ಬಯಲಿಗೆಳೆದಿದ್ದರೆ 2018ರಲ್ಲಿಯೇ ಇವಿಎಂ ಭೂತವನ್ನು ಭಾರತದಿಂದ ಶಾಶ್ವತವಾಗಿ ಓಡಿಸಬಹುದಿತ್ತು.

2018ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್’ ಕ್ಷೇತ್ರದಲ್ಲಿ ಮತ ಎಣಿಕೆಯ ದಿನ, ಚುನಾವಣಾ ಅಧಿಕಾರಿಯವರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 21,306 ಮತಗಳ ಅಂತರದಿಂದ ಜಯಿಸಿದ್ದಾರೆ ಎಂದು ಘೋಷಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಲವಡೆಯವರು ಇದನ್ನು ಒಪ್ಪದೆ, ಸಂಪೂರ್ಣ ವಿವಿಪ್ಯಾಟ್ ಸ್ಲಿಪ್ ಎಣಿಸಲೇ ಬೇಕು ಇಲ್ಲದಿದ್ದರೆ ತಾನು ಬೆಂಕಿ ಹಚ್ಚಿಕೊಳ್ಳುವುದಾಗಿ ಹಠ ಹಿಡಿದಾಗ (ಅವರು ತಮ್ಮ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ಕೊಂಡಿದ್ದರು) ಚುನಾವಣಾ ಅಧಿಕಾರಿಗಳು ಗತ್ಯಂತರವಿಲ್ಲದೆ ಹುಬ್ಬಳ್ಳಿ ಕ್ಷೇತ್ರದ ಸಂಪೂರ್ಣ ವಿವಿಪ್ಯಾಟ್ ಸ್ಲಿಪ್‌ಗಳನ್ನು ಅದೇ ರಾತ್ರಿ ಎಣಿಸಿದರು. ಈ ಎಣಿಕೆಯಿಂದ ಬಿಜೆಪಿಗೆ 21,000 ಮತಗಳು ಕಡಿಮೆ ಬಿದ್ದಿವೆ ಎಂದು ಸಾಬೀತಾಯಿತು ಹಾಗೂ ಬಿಜೆಪಿ ಕೇವಲ 300 ವೋಟುಗಳಿಂದ ಗೆದ್ದಿದೆ ಎಂದು ಚುನಾವಣಾ ಅಧಿಕಾರಿಯೇ ಘೋಷಿಸಿದರು. (ಆರು ವರ್ಷ ಹಳೆಯ ಈ ವಿಷಯವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇಂದಿನ ವರೆಗೂ ಅಪ್ಲೋಡ್ ಮಾಡಿಲ್ಲ. ಯಾಕೆಂದರೆ ಇದನ್ನು ಅಪ್ಲೋಡ್ ಮಾಡಿದರೆ ತಮ್ಮ ತಪ್ಪನ್ನು ಚು.ಆಯೋಗವೇ ಅಧಿಕೃತವಾಗಿ ಒಪ್ಪಿಕೊಂಡಂತೆ ಆಗುತ್ತದೆ ಹಾಗೂ ಇವಿಎಂ ಮೋಸದಾಟ ಜಗಜ್ಜಾಹೀರು ಆಗುತ್ತದೆ ತಾನೇ!) ಆಗ ಈ ಕ್ಷೇತ್ರದಲ್ಲಿ ಒಟ್ಟು 400ಕ್ಕೂ ಹೆಚ್ಚು ಇವಿಎಂಗಳ ಬಳಕೆ ಆಗಿದ್ದು ಪ್ರತೀ ಇವಿಎಂನಲ್ಲಿಯೂ 50ಕ್ಕೂ ಹೆಚ್ಚು ಮತಗಳು ಹೆಚ್ಚುವರಿಯಾಗಿ ಇದ್ದವು, ಅರ್ಥಾತ್ ಪ್ರತಿಯೊಂದು ವಿವಿಪ್ಯಾಟ್‌ನಲ್ಲೂ 50ಕ್ಕೂ ಹೆಚ್ಚು ಮತಗಳು ಕಡಿಮೆ ಇದ್ದವು. ಹಾಗಾದರೆ ಆ ಕ್ಷೇತ್ರದ ಪ್ರತಿಯೊಂದು ಇವಿಎಂನಲ್ಲೂ ಒಂದೇ ರೀತಿಯಾಗಿ 50 ವೋಟು ಹೆಚ್ಚುವರಿಯಾಗಿ ಬೀಳುವುದು ಹೇಗೆ ಸಾಧ್ಯ? ಹೀಗೆ ಶೇ. 100 ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಯಿಂದ ಮಾತ್ರ ಇವಿಎಂನಲ್ಲಿಯ ಮೋಸ ಬಹಿರಂಗ ಪಡಿಸಲು ಸಾಧ್ಯ ಎಂದು 2018 ರಲ್ಲಿಯೇ ಜಗದೀಶ್ ಶೆಟ್ಟರ್‌ರ ಕ್ಷೇತ್ರದಲ್ಲಿ ಸಾಬೀತಾಗಿತ್ತು. ಇಷ್ಟಾದರೂ ಕರ್ನಾಟಕ ಕಾಂಗ್ರೆಸ್‌ನ ನಾಯಕರು ಈ ಸುವರ್ಣಾವಕಾಶವನ್ನು ಕೈಚೆಲ್ಲಿ ಇವಿಎಂನಲ್ಲಿಯ ಅತಿ ದೊಡ್ಡ ನ್ಯೂನತೆಯನ್ನು ಸಾಕ್ಷಿ ಸಹಿತ ಎತ್ತಿ ತೋರಿಸುವ ಚಾನ್ಸ್ ಕಳೆದುಕೊಂಡರು.

ದೂರದಿಂದ ರಿಮೋಟ್ ಮೂಲಕ ಇವಿಎಂ ಹ್ಯಾಕ್ ಮಾಡುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಇವಿಎಂನ್ನು ಚುನಾವಣಾ ಬೂತ್ ನಿಂದ ಸ್ಟ್ರಾಂಗ್ ರೂಮಿಗೆ ಸಾಗಿಸುವಾಗ, ದಾರಿಯಲ್ಲಿ ಮೂಲ ಇವಿಎಂ ಗಳನ್ನು ಬದಲಿಸಿ ಬೇರೊಂದು ಪ್ರೀ-ಲೋಡೆಡ್ ಇವಿಎಂ ಇಡುವುದು ಸುಲಭ ಸಾಧ್ಯ. ಆಗ ಜತೆಗೇ ವಿವಿಪ್ಯಾಟ್‌ಗಳನ್ನೂ ಬದಲಿಸಿರದಿದ್ದರೆ ಮಾತ್ರ ವಿವಿಪ್ಯಾಟ್ ಸ್ಲಿಪ್‌ಗಳ ಶೇ. 100 ಎಣಿಕೆಯಿಂದ ಈ ಮೋಸ ಬಹಿರಂಗ ಆಗುವುದು ಸಾಧ್ಯ. 2018ರಲ್ಲಿ ಹುಬ್ಬಳ್ಳಿಯಲ್ಲಿ ಈ ಮೋಸದ ಪ್ರಕರಣ ಬಹಿರಂಗವಾದಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಂ ರಮೇಶ್ ಕರ್ನಾಟಕದ ಚುನಾವಣೆಯ ಉಸ್ತುವಾರಿ ಆಗಿದ್ದರು. ದುರದೃಷ್ಟಕ್ಕೆ ಇವರೇ ತಮ್ಮ ಪಕ್ಷದ ಸೋತ ಅಭ್ಯರ್ಥಿ ಮಹೇಶ್ ನಲವಡೆಯವರು ಈ ವಿಷಯದಲ್ಲಿ ಉಚ್ಚ ನ್ಯಾಯಾಲಯಕ್ಕೆ ಹೋಗುವುದನ್ನು ತಡೆದಿದ್ದು! ಇಲ್ಲದಿದ್ದರೆ 2018ರಲ್ಲಿಯೇ ಇವಿಎಂ ಮೋಸಗಳು ಉಚ್ಚ ನ್ಯಾಯಾಲಯದಲ್ಲಿಯೇ ಬಹಿರಂಗವಾಗಿರುತ್ತಿತ್ತು ಹಾಗೂ ನಮ್ಮ ದೇಶ ಮಹಾ ವಂಚಕರ ಕೈಯಿಂದ 2018-19ರಲ್ಲಿಯೇ ಪಾರಾಗುತ್ತಿತ್ತು.

ಈಗಿನ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಹೇಳಬೇಕೆಂದರೆ, ಇವಿಎಂ ಕುರಿತು ಸಂದೇಹ ಇರುವ ಎಲ್ಲಾ ರಾಜಕೀಯ ಪಕ್ಷಗಳು ಮೊದಲು ಕೇವಲ ಶೇ. 99 ಚಾರ್ಜ್ ತೋರಿಸುವ ಇವಿಎಂಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕು ಮತ್ತು ಇಂತಹ ಇವಿಎಂಗಳಿಗೆ ಸಲಗ್ನ ವಿವಿಪ್ಯಾಟ್‌ಗಳಲ್ಲಿಯ ಸ್ಲಿಪ್‌ಗಳನ್ನು ಶೇ. 100 ಎಣಿಸಲು ಚುನಾವಣಾ ಆಯೋಗಕ್ಕೆ ಅಥವಾ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು. ಈ ವಿಷಯದಲ್ಲಿ ಈ ಕೆಳಗಿನ ಅಂಶಗಳ ಮೇಲೆ ಗಮನ ಇಡಬೇಕು.

1) ಮೊತ್ತ ಮೊದಲು ಶೇ. 99 ಚಾರ್ಜ್ ತೋರಿಸುವ ಇವಿಎಂ ಗಳೊಂದಿಗೆ ಜೋಡಿಸಿದ್ದ ಎಲ್ಲಾ ವಿವಿಪ್ಯಾಟ್‌ಗಳನ್ನು ಪ್ರತ್ಯೇಕವಾಗಿ ರಕ್ಷಿಸಿ ಇಡಲು ಕೋರ್ಟಿಗೆ ವಿನಂತಿಸಬೇಕು. (ವಿವಿಪ್ಯಾಟ್‌ಗಳಲ್ಲೂ ಚಾರ್ಜ್ ಮಾಡಬಲ್ಲ ಪ್ರತ್ಯೇಕ ಬ್ಯಾಟರಿಗಳು ಇದ್ದರೆ ಅವುಗಳಲ್ಲಿ ಎಷ್ಟು ಚಾರ್ಜ್ ಬಾಕಿ ಇದೆ ಎಂಬುದನ್ನೂ ಗಮನಿಸಬೇಕು)

2) ಆನಂತರ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಆ ನಿರ್ದಿಷ್ಟ ಇವಿಎಂನ್ನು ಕನಿಷ್ಠ ಎರಡು ಗಂಟೆಗಳ ಕಾಲ ‘ಆನ್’ ಸ್ಥಿತಿಯಲ್ಲಿ ಚಾಲೂ ಇಡಬೇಕು. ತರುವಾಯ ಆ ಇವಿಎಂನಲ್ಲಿಯ ಬ್ಯಾಟರಿ ಚಾರ್ಜ್ ಎರಡು ಗಂಟೆಯಲ್ಲಿ ಶೇಕಡಾವಾರು ಎಷ್ಟು ಬಳಕೆ ಆಯಿತು ಎಂಬುದನ್ನು ಕೋರ್ಟ್ ನವರೇ ಪರಿಶೀಲಿಸಬೇಕು. (ನಮ್ಮ ಮೊಬೈಲ್ ಫೋನ್‌ಗಳನ್ನು ನಾವು ‘ಆನ್’ ಇಟ್ಟು ಮಾತಾಡಲು ಬಳಸದಿದ್ದರೂ ಆ ಫೋನಿನ ಬ್ಯಾಟರಿ ಚಾರ್ಜ್ ಕಡಿಮೆ ಆಗುತ್ತಾ ಹೋಗುತ್ತದೆ. ಇದೇ ನಿಯಮ ಇವಿಎಂ ಬ್ಯಾಟರಿಗೂ ಅನ್ವಯ) ಒಂದು ವೇಳೆ ಈ ಎರಡು ಗಂಟೆಯಲ್ಲಿ ಇವಿಎಂಗಳ ಚಾರ್ಜ್ ತನ್ನಿಂದ ತಾನೇ ಕಡಿಮೆ ಆಗುತ್ತಾ ಹೋದರೆ ಆ ಇವಿಎಂನಲ್ಲಿ ಯಾವುದೇ ಯಾಂತ್ರಿಕ ತೊಂದರೆ ಇಲ್ಲ ಹಾಗೂ ಇದು ಚುನಾವಣೆ ಸಮಯದಲ್ಲಿ ಬಳಸಿದ ಇವಿಎಂ ಆಗಿರದೆ ಅದು ಚುನಾವಣೆಯ ನಂತರ ಸ್ಟ್ರಾಂಗ್ ರೂಂ ನಲ್ಲಿ ಬದಲಾಯಿಸಿದ ಡುಪ್ಲಿಕೇಟ್ ಇವಿಎಂ ಆಗಿದೆ ಎಂದು ಕೋರ್ಟ್ ಸುಲಭವಾಗಿ ನಿರ್ಧರಿಸಬಹುದು. (ಮತದಾನದ ದಿನ, ಈ ನಿರ್ದಿಷ್ಟ ಇವಿಎಂನ್ನು ಬೆಳಿಗ್ಗೆ 6ರಿಂದ ಸಂಜೆ 6 ರವರೆಗೆ ಕನಿಷ್ಠ 12 ಗಂಟೆಗಳ ಕಾಲ ಸತತ ‘ಆನ್’ ಮಾಡಿ ಇಡಲಾಗಿತ್ತು, ಆದರೆ ಅದು ಕೇವಲ ಶೇ. 1 ಬ್ಯಾಟರಿ ಚಾರ್ಜನ್ನು ಮಾತ್ರ ಬಳಸಿದ್ದು ಸಂದೇಹಾಸ್ಪದ ಎಂಬುದನ್ನು ಸಾಬೀತು ಮಾಡುತ್ತದೆ).

3) ಆ ಬಳಿಕ ಕೇವಲ ಅಂತಹ ಶೇ. 99 ಚಾರ್ಜ್ ಆಗಿರುವ ಇವಿಎಂಗಳಿಗೆ ಸಂಬಂಧಿಸಿದ ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳ ಸಂಪೂರ್ಣ ಎಣಿಕೆಗೆ ಒತ್ತಾಯಿಸಬೇಕು, ತದನಂತರ ವಿವಿಪ್ಯಾಟ್‌ನಲ್ಲಿನ ಒಟ್ಟು ಮತಗಳ ಸಂಖ್ಯೆಯನ್ನು ಇವಿಎಂನಲ್ಲಿಯ ಒಟ್ಟು ಮತಗಳ ಸಂಖ್ಯೆಗೆ ಹೋಲಿಕೆ ಮಾಡಬೇಕು.

4) ಆನಂತರ ವಿವಿಪ್ಯಾಟ್ ಸ್ಲಿಪ್‌ಗಳನ್ನು ಪಕ್ಷವಾರು ವಿಂಗಡಿಸಬೇಕು ಮತ್ತು ಇವಿಎಂ ಎಣಿಕೆಯ ಸಮಯದಲ್ಲಿ ಪಡೆದ ಪಕ್ಷವಾರು ಫಲಿತಾಂಶಗಳೊಂದಿಗೆ ಹೋಲಿಸಬೇಕು.

5) ಒಂದು ವೇಳೆ ಆ (ಶೇ.99ರ) ಇವಿಎಂ ಮತ್ತು ವಿವಿಪ್ಯಾಟ್ ಮತಗಳ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದರೆ, ಆ ನಿರ್ದಿಷ್ಟ ಕ್ಷೇತ್ರದಲ್ಲಿ ಎಲ್ಲಾ ವಿವಿಪ್ಯಾಟ್‌ಗಳ ಎಣಿಕೆಗೆ ಒತ್ತಾಯಿಸಬೇಕು.

6) ಎಲ್ಲಾ ವಿವಿಪ್ಯಾಟ್‌ಗಳನ್ನು ಎಣಿಸಿದ ನಂತರ, ಆ ನಿರ್ದಿಷ್ಟ ಕ್ಷೇತ್ರದ ಅಂತಿಮ ಫಲಿತಾಂಶವು ನವೆಂಬರ್ 23ರ ಫಲಿತಾಂಶಕ್ಕಿಂತ ಭಿನ್ನವಾಗಿದ್ದರೆ, ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಲ್ಲಿನ ಸಮಸ್ತ ವಿವಿಪ್ಯಾಟ್‌ಗಳ ಶೇ. 100 ಎಣಿಕೆಗೆ ಒತ್ತಾಯಿಸಲು ಗಟ್ಟಿ ಆಧಾರ ಸಿಗುತ್ತದೆ.

7) ಭವಿಷ್ಯದಲ್ಲಿ ಎಲ್ಲಾ ಪಕ್ಷಗಳು ಪ್ರತೀ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳಿಂದ ನೀಡಲ್ಪಡುವ ಫಾರ್ಮ್ 17-ಸಿಯಲ್ಲಿ ಇವಿಎಂನಲ್ಲಿ ಬಳಕೆಯಾದ ಬ್ಯಾಟರಿ ಚಾರ್ಜ್ ಮತ್ತು ಉಳಿದಿರುವ ಶೇಕಡಾವಾರು ಚಾರ್ಜ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಹೊಸದೊಂದು ಕಾಲಂನ್ನು ಸೇರಿಸುವಂತೆ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ವಿನಂತಿಸಬೇಕು. ವಿವಿಪ್ಯಾಟ್‌ಗಳೂ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನು ಹೊಂದಿದ್ದರೆ, ಫಾರ್ಮ್ 17-ಸಿಯಲ್ಲಿ ವಿವಿಪ್ಯಾಟ್‌ನಲ್ಲಿ ಬಳಕೆಯಾದ ಬ್ಯಾಟರಿಯ ಶೇಕಡಾವಾರು ಪ್ರಮಾಣವನ್ನು ಸಹ ಉಲ್ಲೇಖಿಸಬೇಕು. ಮತ ಎಣಿಕೆಯ ದಿನದಂದು ಈ ಫಾರ್ಮ್ 17-ಸಿಯಲ್ಲಿ ನಮೂದಿತ ‘ಬಾಕಿ ಉಳಿದಿರುವ ಬ್ಯಾಟರಿ ಚಾರ್ಜನ್ನು’ ಇವಿಎಂನೊಂದಿಗೆ ಹೋಲಿಸಿ ಮರು-ಪರಿಶೀಲಿಸಲು ಬಳಸಬಹುದು. ಇಂತಹ ಫಾರ್ಮ್ 17-ಸಿ ಪರಿಶೀಲನೆಯಿಂದ ಆ ನಿರ್ದಿಷ್ಟ ಇವಿಎಂನಲ್ಲಿ ಬ್ಯಾಟರಿ ಘಟಕವು ಮತದಾನದ ದಿನ ತಾಂತ್ರಿಕ ಸಮಸ್ಯೆಯನ್ನು ಹೊಂದಿತ್ತು, ಹಾಗಾಗಿ ಅದು ಶೇ. 99 ಚಾರ್ಜ್ ಎಂದು ತಪ್ಪಾಗಿ ತೋರಿಸುತ್ತಿದೆ ಎಂದು ಚುನಾವಣಾಧಿಕಾರಿಗಳು ಸುಳ್ಳು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಹೀಗಾಗಿ, ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂನಲ್ಲಿ ನಡೆದಿರಬಹುದಾದ ವಂಚನೆಯನ್ನು ಬಹಿರಂಗ ಪಡಿಸಲು ವಿಪಕ್ಷಗಳಿಗೆ ಲಭ್ಯ ಇರುವ ಏಕೈಕ ಮಾರ್ಗವೆಂದರೆ ಶೇ. 99 ಚಾರ್ಜ್ ತೋರಿಸುವ ಇವಿಎಂಗಳಿಗೆ ಸಲಗ್ನವಿದ್ದ ವಿವಿಪ್ಯಾಟ್‌ನಲ್ಲಿಯ ಸಮಸ್ತ ಸ್ಲಿಪ್‌ಗಳ ಎಣಿಕೆಗೆ ಒತ್ತಾಯಿಸುವುದು. ಜತೆಗೆ 2018ರಲ್ಲಿ ಹುಬ್ಬಳಿಯಲ್ಲಿ ಶೇ. 100 ವಿವಿಪ್ಯಾಟ್ ಎಣಿಕೆಯಿಂದ ಕಂಡು ಬಂದ ಫಲಿತಾಂಶವನ್ನು ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳು ಪ್ರಚಾರ ಮಾಡಬೇಕು.

ಚುನಾವಣೆಗೆ ಮೊದಲು, ಒಂದು ಕ್ಷೇತ್ರದಲ್ಲಿ ಯಾವೆಲ್ಲ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಖಚಿತವಾದ ಮೇಲೆ ಚು.ಆಯೋಗದ ಇಂಜಿನಿಯರುಗಳು ಪ್ರತಿಯೊಂದು ಇವಿಎಂನ ವೋಟಿಂಗ್ ಘಟಕದಲ್ಲಿ ಎಲ್ಲಾ ಅಭ್ಯರ್ಥಿಗಳ ಚಿಹ್ನೆಯನ್ನು ಅಪ್ಲೋಡ್ ಮಾಡುತ್ತಾರೆ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಸ್ವತಂತ್ರ ಅಭ್ಯರ್ಥಿಗಳು ಇರುವುದರಿಂದಾಗಿ ಅವರವರ ಚಿಹ್ನೆಗಳನ್ನು ಚು. ಆಯೋಗದ ಲ್ಯಾಪ್‌ಟಾಪ್ ಮೂಲಕ ಇವಿಎಂನಲ್ಲಿ ಫೀಡ್ ಮಾಡಲು ಹಲವು ಸಾಫ್ಟ್‌ವೇರ್ ಇಂಜಿನಿಯರ್‌ಗಳು ನೇಮಕ ಆಗಿರುತ್ತಾರೆ. ಈ ಹಂತದಲ್ಲಿ ಆ ಇಂಜಿನಿಯರ್‌ಗಳು ಇವಿಎಂನ ಸಾಫ್ಟ್ ವೇರ್‌ನಲ್ಲಿ ಏನಾದರೂ ಕೈಚಳಕ ತೋರಿಸಿದ್ದಾರೋ ಎಂಬುದನ್ನೂ ಪರಿಶೀಲಿಸುವುದು ಅಗತ್ಯ. ಚುನಾವಣೆಗೆ ಮೊದಲು, ಒಂದು ಕ್ಷೇತ್ರದಲ್ಲಿ ಯಾವೆಲ್ಲ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಖಚಿತವಾದ ಮೇಲೆ ಚು.ಆಯೋಗದ ಇಂಜಿನಿಯರುಗಳು ಪ್ರತಿಯೊಂದು ಇವಿಎಂನ ವೋಟಿಂಗ್ ಘಟಕದಲ್ಲಿ ಎಲ್ಲಾ ಅಭ್ಯರ್ಥಿಗಳ ಚಿಹ್ನೆಯನ್ನು ಅಪ್ಲೋಡ್ ಮಾಡುತ್ತಾರೆ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಸ್ವತಂತ್ರ ಅಭ್ಯರ್ಥಿಗಳು ಇರುವುದರಿಂದಾಗಿ ಅವರವರ ಚಿಹ್ನೆಗಳನ್ನು ಚು. ಆಯೋಗದ ಲ್ಯಾಪ್‌ಟಾಪ್ ಮೂಲಕ ಇವಿಎಂನಲ್ಲಿ ಫೀಡ್ ಮಾಡಲು ಹಲವು ಸಾಫ್ಟ್‌ವೇರ್ ಇಂಜಿನಿಯರ್‌ಗಳು ನೇಮಕ ಆಗಿರುತ್ತಾರೆ. ಈ ಹಂತದಲ್ಲಿ ಆ ಇಂಜಿನಿಯರ್‌ಗಳು ಇವಿಎಂನ ಸಾಫ್ಟ್ ವೇರ್‌ನಲ್ಲಿ ಏನಾದರೂ ಕೈಚಳಕ ತೋರಿಸಿದ್ದಾರೋ ಎಂಬುದನ್ನೂ ಪರಿಶೀಲಿಸುವುದು ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಪ್ರವೀಣ್.ಎಸ್.ಶೆಟ್ಟಿ

contributor

Similar News