ಆ ಒಂದು ಮಾತಿಗೆ ಇವೆ ಎರಡು ಲೆಕ್ಕಾಚಾರಗಳು
ಕರ್ನಾಟಕದ ಗ್ಯಾರಂಟಿ ಮಾಡೆಲ್‌ನಿಂದ ಜನರನ್ನು ‘ಡಿಸ್ಟರ್ಬ್’ಗೊಳಿಸುವ ಬಿಜೆಪಿಯ ಪ್ರತಿತಂತ್ರದ ಭಾಗವೇ ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ‘ಭ್ರಷ್ಟ ಮತ್ತು ಅಸ್ಥಿರ’ ಸರಕಾರದ ಇಮೇಜನ್ನು ನೇತುಹಾಕುವುದು. ಅವತ್ತು ಮೋದಿಯವರು ಆಡಿದ ಮಾತಿನ ಪ್ರಮುಖ ಮರ್ಮವೇ ಇದು! ಕರ್ನಾಟಕ ಎಂದಾಕ್ಷಣ, ಪ್ರತಿಪಕ್ಷಗಳು ಈಗಾಗಲೇ ಜನರ ಮನಸ್ಸಲ್ಲಿ ಮೂಡಿಸಿರುವ ಗ್ಯಾರಂಟಿ ಬ್ರ್ಯಾಂಡಿಂಗ್ ಅಳಿಸಿಹೋಗಿ, ‘ಭ್ರಷ್ಟ ಮತ್ತು ಅಧಿಕಾರ ಕಚ್ಚಾಟ’ದ ಬ್ರ್ಯಾಂಡಿಂಗ್ ಗಾಢವಾದರೆ, ಕರ್ನಾಟಕದ ಫಲಿತಾಂಶದ ಪರಿಣಾಮಗಳನ್ನು ತಗ್ಗಿಸಬಹುದೆನ್ನುವುದು ಇದರ ಹಿಂದಿರುವ ಲೆಕ್ಕಾಚಾರ.
ಇತ್ತೀಚೆಗೆ ಮಧ್ಯಪ್ರದೇಶದ ಖಂಡ್ವಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕದ ರಾಜಕೀಯ ಸನ್ನಿವೇಶಗಳನ್ನು ಉಲ್ಲೇಖಿಸಿ ಮಾತಾಡಿದ್ದು, ಸಾಕಷ್ಟು ಚರ್ಚೆಯಾಯಿತು. ಅದಕ್ಕೆ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯೆ ಕೊಟ್ಟಿದ್ದೂ ಆಯಿತು. ‘‘ಅಕಸ್ಮಾತ್ತಾಗಿ ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೋ ಅಲ್ಲಿ ಸಿಎಂ, ಡೆಪ್ಯುಟಿ ಸಿಎಂಗಳ ಮೂಲಕ ರಾಜ್ಯದ ಲೂಟಿಗೆ ಇಳಿಯುತ್ತದೆ. ಕರ್ನಾಟಕದಲ್ಲಿ ಈಗ ಆಗುತ್ತಿರುವುದು ಅದೇ. ಅಲ್ಲದೆ, ಅಧಿಕಾರಕ್ಕಾಗಿ ಈ ಜನ ಎಷ್ಟು ಕಚ್ಚಾಡುತ್ತಾರೆಂದರೆ, ಅಲ್ಲಿನ ಸಿಎಂ ಸಿದ್ದರಾಮಯ್ಯರಿಗೇ ಸ್ವತಃ ತಾನು ಎಷ್ಟು ದಿನ ಸಿಎಂ ಆಗಿರುವೆ ಎಂಬ ಖಾತ್ರಿ ಇಲ್ಲ’’ ಎಂಬುದು ಮೋದಿಯವರ ಮಾತಿನ ಒಟ್ಟಾರೆ ಸಾರಾಂಶ. ಚುನಾವಣಾ ತಂತ್ರಗಾರಿಕೆಗಳನ್ನೇ ಉಸಿರಾಗಿಸಿಕೊಂಡ ಮೋದಿ ಯವರಾಗಲಿ, ಬಿಜೆಪಿಯವರಾಗಲಿ ನೀಡುವ ಇಂತಹ ಹೇಳಿಕೆಗಳಲ್ಲಿ ಅಚ್ಚರಿ ಪಡುವಂತಹದ್ದು ಏನೂ ಇಲ್ಲ. ತಮ್ಮ ರಾಜಕೀಯ ಎದುರಾಳಿಯಾದ ಕಾಂಗ್ರೆಸ್‌ನ ವಿರುದ್ಧ ಈ ಬಗೆಯ ಲೆಕ್ಕವಿಲ್ಲದಷ್ಟು ಆರೋಪಗಳನ್ನು ಅವರು ಈ ಹಿಂದೆ ಮಾಡಿದ್ದುಂಟು. ಅಂತಹವುಗಳಲ್ಲಿ ಇದೂ ಒಂದು. ಆದರೂ, ಮೋದಿಯವರ ಈ ಮಾತಿನ ಹಿಂದಿರುವ ಎರಡು ಸೂಕ್ಷ್ಮತೆಗಳು ಕುತೂಹಲಕಾರಿ ಎನಿಸುತ್ತವೆ.
ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಪ್ರಾದೇಶಿಕ ರಾಜಕಾರಣವನ್ನು ಉಲ್ಲೇಖಿಸುವ ಅನಿವಾರ್ಯತೆ ಮೋದಿಯವರಿಗೆ ಎದುರಾದದ್ದು ಏಕೆ? ಈ ಒಂದು ಪ್ರಶ್ನೆ ನಮ್ಮನ್ನು ಆ ಎರಡು ಕಾರಣಗಳತ್ತ ಕೊಂಡೊಯ್ಯುತ್ತದೆ. ರಾಜಕಾರಣದಲ್ಲಿ ‘ಪಿಆರ್ ಸಟ್ಯೆಾಟಜಿ’ಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ರಾಜಕಾರಣಿಗಳ ಪೈಕಿ ಮೋದಿಯವರು ಅಗ್ರಸ್ಥಾನದಲ್ಲಿ ನಿಲ್ಲುವಂತಹವರು. ವ್ಯಾಪಕ ವ್ಯಾಪ್ತಿ ಹೊಂದಿದ ‘ಕೋಮುವಾದ’ ಮತ್ತು ‘ರಾಷ್ಟ್ರೀಯತೆಗಳು’ ಅವರ ಪಕ್ಷದ ಅಧಿಕೃತ ರಾಜಕೀಯ ಸಿದ್ಧಾಂತಗಳಾಗಿದ್ದರೂ (ಆ ಕಾರಣಕ್ಕೇ ಅವರು ‘‘ಪ್ರಾದೇಶಿಕತೆಯನ್ನು ಕಿತ್ತೊಗೆಯಿರಿ’’ ಎಂದು ಬಹಿರಂಗ ಕರೆ ಕೊಟ್ಟಿದ್ದು), ಮೋದಿಯವರು ಆಯಾ ರಾಜ್ಯಗಳ ಚುನಾವಣೆಯಲ್ಲಿ ಸ್ಥಳೀಯ ಇಶ್ಯೂ ಮತ್ತು ಎಮೋಷನ್‌ಗಳನ್ನು ಬಳಸಿಕೊಳ್ಳುವಲ್ಲಿ ನಿಸ್ಸೀಮರು. ಅಲ್ಲಿನ ರಾಜಕೀಯ ಸನ್ನಿವೇಶಗಳು ಮಾತ್ರವಲ್ಲ, ಪ್ರಾದೇಶಿಕ ವೇಷಭೂಷಣ ಮತ್ತು ಸ್ಥಳೀಯ ಭಾಷೆಯಲ್ಲೇ ಭಾಷಣ ಮಾಡುವ ಯತ್ನಗಳನ್ನು ನಾವು ಕಂಡಿದ್ದೇವೆ. ಆದರೆ, ಮಧ್ಯಪ್ರದೇಶದ ಚುನಾವಣೆಯ ನಟ್ಟನಡುವೆ, ಅವರು ಮಧ್ಯಪ್ರದೇಶದೊಟ್ಟಿಗೆ ಯಾವ ಸಂಬಂಧವೂ ಇಲ್ಲದ ಕರ್ನಾಟಕದ ರಾಜಕೀಯವನ್ನು ಎಳೆದು ತಂದಿದ್ದು ಏಕೆ? ರಾಜಕೀಯ ಅಸ್ಥಿರತೆಯನ್ನು ಉಲ್ಲೇಖಿಸುವುದೇ ಅವರ ಕಾಳಜಿಯಾಗಿದ್ದಿದ್ದರೆ, ಮಧ್ಯಪ್ರದೇಶದ ಮೇಲೆ ರಾಜಕೀಯ ಇನ್‌ಫ್ಲ್ಯುಯೆನ್ಸ್ ಹೊಂದಿರುವ ಹಾಗೂ ಜೊತೆಜೊತೆಯಲ್ಲೇ ಚುನಾವಣೆ ಎದುರಿಸುತ್ತಿರುವ ನೆರೆ ರಾಜ್ಯವಾದ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಅವರು ಉಲ್ಲೇಖಿಸಬಹುದಿತ್ತು. ಅಲ್ಲಿನ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷ ರಾಷ್ಟ್ರಮಟ್ಟದಲ್ಲಿ ಚರ್ಚೆಯಾದಂತಹದ್ದು ಮತ್ತು ಸುದೀರ್ಘವಾದಂತಹದ್ದು. ಆದಾಗ್ಯೂ, ಕರ್ನಾಟಕಕ್ಕೆ ಅವರು ಹೆಚ್ಚು ಒತ್ತುಕೊಟ್ಟು ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಎರಡು ಕಾರಣಗಳಿವೆ.
ಕರ್ನಾಟಕದ ಚುನಾವಣೆಯ ಸೋಲು ಬಿಜೆಪಿ ಹೈಕಮಾಂಡ್‌ನಲ್ಲಿ ಸಾಕಷ್ಟು ತಲ್ಲಣಗಳನ್ನು ಹುಟ್ಟುಹಾಕಿರುವುದು ಸುಳ್ಳಲ್ಲ. ರಾಜ್ಯ ಬಿಜೆಪಿ ನಾಯಕರ ಜೊತೆ ಅವರು ಅನಾದರವಾಗಿ ವರ್ತಿಸುತ್ತಿರುವ ರೀತಿ ಮತ್ತು ವಿಪಕ್ಷ ನಾಯಕನ ಆಯ್ಕೆಗೆ ಹೈಕಮಾಂಡ್ ತೋರುತ್ತಿರುವ ನಿರಾಸಕ್ತಿಗಳೇ ಇದನ್ನು ಸಾಕ್ಷೀಕರಿಸುತ್ತವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲೂ ರಾಜ್ಯ ನಾಯಕರನ್ನು ಹೈಕಮಾಂಡ್ ಸಂಪೂರ್ಣ ನಿರ್ಲಕ್ಷಿಸಿದ್ದನ್ನು ಮರೆಯಲಾಗದು. ಕರ್ನಾಟಕದ ಸೋಲನ್ನು ಬಿಜೆಪಿ ಹೈಕಮಾಂಡ್, ಮುಖ್ಯವಾಗಿ ಮೋದಿ-ಶಾ ಜೋಡಿ, ತಮ್ಮ ಪ್ರತಿಷ್ಠೆಗೆ ಬಿದ್ದ ಪೆಟ್ಟು ಎಂಬಂತೆ ಸ್ವೀಕರಿಸಿರುವುದು ಇವುಗಳಿಂದ ಸಾಬೀತಾಗುತ್ತದೆ.
ಇದು ಪ್ರತಿಷ್ಠೆಯ ಪ್ರಶ್ನೆ ಮಾತ್ರವಲ್ಲ, ಲೋಕಸಭಾ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಹಾಗೂ ಕರ್ನಾಟಕದ ನಂತರ ಎದುರಾಗಲಿದ್ದ ನಿರ್ಣಾಯಕವೆನಿಸುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಕರ್ನಾಟಕದ ಆ ಫಲಿತಾಂಶ ಬೀರಬಹುದಾದ ಅಡ್ಡಪರಿಣಾಮಗಳು ಕೂಡಾ ಬಿಜೆಪಿ ಹೈಕಮಾಂಡನ್ನು ಅಧೀರಗೊಳಿಸಿವೆ. ಒಂದೊಮ್ಮೆ, ಈಗ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ, ಬಿಜೆಪಿಯ ಪಾಲಿಗೆ ಮುಖ್ಯವೆನಿಸಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಆ ಪಕ್ಷವೇನಾದರೂ ಕಳಪೆ ಸಾಧನೆ ಮಾಡಿದರೆ, ಆ ಸೋಲಿಗೆ ಕರ್ನಾಟಕದ ಫಲಿತಾಂಶವೇ ಮುನ್ನುಡಿಯಾಗಿರಲಿದೆ. ಮಾತ್ರವಲ್ಲ, ಲೋಕಸಭಾ ಚುನಾವಣೆಗೆ ಬಿಜೆಪಿಯ ಜಂಘಾಬಲವನ್ನೇ ಉಡುಗಿಸಲಿದೆ. ಈ ಕಾರಣಕ್ಕಾಗಿ ಕರ್ನಾಟಕದ ಸೋಲು ಬಿಜೆಪಿ ಹೈಕಮಾಂಡನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಬೆಲೆಯೇರಿಕೆ ಮತ್ತು ಬಿಜೆಪಿ ಮೇಲಿನ ಭ್ರಷ್ಟಾಚಾರದಂತಹ ಆರೋಪಗಳ ಮುಂದೆ ಮೋದಿಯವರ ‘ಸ್ಥಾಪಿತ ವರ್ಚಸ್ಸು’ ಕೂಡಾ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ ಎಂಬ ಜನಾಭಿಪ್ರಾಯ ರೂಪಿಸುವಲ್ಲಿ ವಿರೋಧ ಪಕ್ಷಗಳ ಕೈಗೆ ಕರ್ನಾಟಕ ಫಲಿತಾಂಶ ದೊಡ್ಡ ಅಸ್ತ್ರವಾಗಿ ಲಭಿಸಿದೆ (ಅದನ್ನು ವಿರೋಧ ಪಕ್ಷಗಳು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳಿವೆ). ಕರ್ನಾಟಕದ ಫಲಿತಾಂಶವು ಬೀರಬಹುದಾದ ಇಂತಹ ಸಾಧ್ಯಂತ ಪರಿಣಾಮಗಳನ್ನು ನಿಶ್ಯಕ್ತಗೊಳಿಸಲು ಬಿಜೆಪಿ ಹೈಕಮಾಂಡ್ ಕಂಡುಕೊಂಡ ಪ್ರತ್ಯಸ್ತ್ರವೇ ‘ಕರ್ನಾಟಕದ ಆ ಫಲಿತಾಂಶವೇ ದೋಷಮಯವಾದುದು’ ಎಂಬ ಪ್ರತಿ-ಅಭಿಪ್ರಾಯವನ್ನು ಜನರಲ್ಲಿ ಮೂಡಿಸುವುದು. ಕರ್ನಾಟಕದ ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ವಿಪರೀತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂಬ ನೆರೇಟಿವಿಟಿಯನ್ನು ಹುಟ್ಟುಹಾಕಲು ಮತ್ತು ಆ ಮೂಲಕ ಕರ್ನಾಟಕದ ಫಲಿತಾಂಶ ದೇಶದ ಬೇರೆಡೆಗೆ ವಿಸ್ತಾರಗೊಳ್ಳದಂತೆ ನೋಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯ ಬಿಜೆಪಿ ಘಟಕದ ಮೂಲಕ ಕಾಂಗ್ರೆಸ್ ಸರಕಾರದ ಮೇಲೆ ನಿರಂತರ ದಾಳಿಗಳನ್ನು ವಿನ್ಯಾಸಗೊಳಿಸುತ್ತಿರುವುದಾಗಲಿ, ಜೆಡಿಎಸ್ ಜೊತೆಗಿನ ಮೈತ್ರಿಯ ಮೂಲಕ ಕುಮಾರಸ್ವಾಮಿಯವರನ್ನೂ ಈ ಕಾರ್ಯದಲ್ಲಿ ಜೊತೆಗೂಡಿಸಿಕೊಂಡಿರುವುದಾಗಲಿ, ಎಲ್ಲವೂ ಆ ಪ್ರತ್ಯಸ್ತ್ರದ ಭಾಗವೇ ಆಗಿವೆ. ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಪಕ್ಕದ ತೆಲಂಗಾಣದಲ್ಲೂ ಕರ್ನಾಟಕವನ್ನು ಕರಾಳಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿರುವುದನ್ನು ನಾವು ಕಾಣಬಹುದು. ಅದರ ಮುಂದುವರಿದ ಆವೃತ್ತಿಯೇ ಅವತ್ತು ಖಂಡ್ವಾದಲ್ಲಿ ಮೋದಿಯವರ ಬಾಯಿಂದ ಹೊರಬಿದ್ದ ಆರೋಪ.
ಮೋದಿಯವರ ಆ ಆರೋಪದ ಹಿಂದೆ ಇದಕ್ಕಿಂತಲೂ ಮುಖ್ಯವಾದ ಇನ್ನೂ ಒಂದು ಆಯಾಮವಿದೆ. ಕರ್ನಾಟಕ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವು ಕೇವಲ ಒಂದು ರಾಜಕೀಯ ಗೆಲುವು ಮಾತ್ರವಾಗಿ ಉಳಿದಿಲ್ಲ. ಚುನಾವಣೆಯ ನೆರೇಟೀವಿಟಿಯ ಕೇಂದ್ರವನ್ನೇ ಅದು ಬದಲಾಯಿಸಿದೆ. ಅದಕ್ಕೆ ಮುಖ್ಯ ಕಾರಣ, ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ‘ಗ್ಯಾರಂಟಿ’ ಆಶ್ವಾಸನೆಗಳು! ಬಿಜೆಪಿಯ ಪ್ರಬಲ ಅಸ್ತ್ರಗಳಾದ ಧರ್ಮ, ಕೋಮುವಾದ, ರಾಷ್ಟ್ರೀಯತೆಗಳಂತಹ ಚರ್ಚೆಗಳನ್ನು ಹಿನ್ನೆಲೆಗೆ ತಳ್ಳಿ, ಜನಸಾಮಾನ್ಯರ ಬದುಕುಗಳ ಖಾತರಿಯನ್ನು ಚುನಾವಣಾ ಚರ್ಚೆಯ ಕೇಂದ್ರವಾಗಿಸುವಲ್ಲಿ ಈ ಗ್ಯಾರಂಟಿಗಳು ದೊಡ್ಡ ಪಾತ್ರ ವಹಿಸಿವೆ. ಆರಂಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಿದೆ, ಆರ್ಥಿಕತೆ ಮಕಾಡೆ ಮಲಗಲಿದೆ; ಫ್ರೀಬೀ, ಬಿಟ್ಟಿಭಾಗ್ಯ ಎಂದೆಲ್ಲ ಲೇವಡಿ ಮಾಡುತ್ತಿದ್ದ ಬಿಜೆಪಿಯೇ ಕೊನೆಗೆ ಉಚಿತ ಯೋಜನೆಗಳನ್ನು ಘೋಷಿಸಬೇಕಾದ ಅನಿವಾರ್ಯತೆ ತಲುಪಿದೆ. ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುತ್ತಿದ್ದ ಐದು ಕೆಜಿ ಉಚಿತ ಅಕ್ಕಿಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿದ್ದಾಗಿ ಸ್ವತಃ ಮೋದಿಯವರೂ ಉಚಿತ ಘೋಷಣೆಯ ಮೊರೆ ಹೋಗಬೇಕಾಯಿತು.
ಈ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಆಶ್ವಾಸನೆಗಳು ಮಾತ್ರವಾಗಿದ್ದಿದ್ದರೆ, ಮೋದಿಯವರು ಆವತ್ತು ತಮ್ಮ ಭಾಷಣದಲ್ಲಿ ಕರ್ನಾಟಕವನ್ನು ಎಳೆದುತರುವ ಜರೂರು ಬರುತ್ತಿರಲಿಲ್ಲ. ಆದರೆ, ತಾನು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪ್ರಯತ್ನಶೀಲವಾಗಿರುವುದೇ ಬಿಜೆಪಿಗೆ ಈಗ ನುಂಗಲಾರದ ತುತ್ತಾಗಿದೆ. ಆಕಸ್ಮಾತ್ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕಾಂಗ್ರೆಸ್ ಸರಕಾರ ತುಸುವೇ ನಿರಾಸಕ್ತಿ ತೋರಿದ್ದರೂ, ‘ಇವು ಕಾಂಗ್ರೆಸ್‌ನ ಎಲೆಕ್ಷನ್ ಜುಮ್ಲಾಗಳು’ ಎಂದು ಬಿಜೆಪಿ ಬಲಾಢ್ಯ ಪ್ರಚಾರಕ್ಕಿಳಿಯಬಹುದಿತ್ತು. ಆದರೆ ಸಿದ್ದರಾಮಯ್ಯನವರ ಸರಕಾರ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ, ಐದನೇ ಗ್ಯಾರಂಟಿಯ ಅನುಷ್ಠಾನದತ್ತಲೂ ಕಾರ್ಯಮಗ್ನವಾಗಿದೆ.
ಇದನ್ನೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಬಲವಾಗಿ ಬಳಸಿಕೊಳ್ಳುತ್ತಿದೆ. ‘‘ಅಧಿಕಾರಕ್ಕೆ ಬಂದರೆ, ನಾವು ಕೊಟ್ಟ ಗ್ಯಾರಂಟಿ ಆಶ್ವಾಸನೆಗಳನ್ನು ಖಡಾಖಂಡಿತವಾಗಿ ಅನುಷ್ಠಾನಕ್ಕೆ ತರುತ್ತೇವೆ; ಇದಕ್ಕೆ ಕರ್ನಾಟಕದ ನುಡಿದಂತೆ ನಡೆದ ಮಾದರಿಯೇ ಸಾಕ್ಷಿ’’ ಎಂಬುದನ್ನು ಖರ್ಗೆ, ರಾಹುಲ್ ಗಾಂಧಿಯೂ ಸೇರಿದಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎಲ್ಲಾ ಕಡೆ ಪುನರುಚ್ಚರಿಸುತ್ತಿದ್ದಾರೆ. ಜನ ಕೂಡಾ ಇದಕ್ಕೆ ಆಕರ್ಷಿತರಾಗುತ್ತಿದ್ದಾರೆ. ಆ ಕಾರಣಕ್ಕೆ ಕರ್ನಾಟಕ ಈಗ ರಾಷ್ಟ್ರ ರಾಜಕಾರಣದಲ್ಲಿ ‘ಗ್ಯಾರಂಟಿ ಮಾಡೆಲ್’ ಆಗಿ ಗುರುತಿಸಿಕೊಳ್ಳುತ್ತಿದೆ.
ಕರ್ನಾಟಕದ ಗ್ಯಾರಂಟಿ ಮಾಡೆಲ್‌ನಿಂದ ಜನರನ್ನು ‘ಡಿಸ್ಟರ್ಬ್’ಗೊಳಿಸುವ ಬಿಜೆಪಿಯ ಪ್ರತಿತಂತ್ರದ ಭಾಗವೇ ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ‘ಭ್ರಷ್ಟ ಮತ್ತು ಅಸ್ಥಿರ’ ಸರಕಾರದ ಇಮೇಜನ್ನು ನೇತುಹಾಕುವುದು. ಅವತ್ತು ಮೋದಿಯವರು ಆಡಿದ ಮಾತಿನ ಪ್ರಮುಖ ಮರ್ಮವೇ ಇದು! ಕರ್ನಾಟಕ ಎಂದಾಕ್ಷಣ, ಪ್ರತಿಪಕ್ಷಗಳು ಈಗಾಗಲೇ ಜನರ ಮನಸ್ಸಲ್ಲಿ ಮೂಡಿಸಿರುವ ಗ್ಯಾರಂಟಿ ಬ್ರ್ಯಾಂಡಿಂಗ್ ಅಳಿಸಿಹೋಗಿ, ‘ಭ್ರಷ್ಟ ಮತ್ತು ಅಧಿಕಾರ ಕಚ್ಚಾಟ’ದ ಬ್ರ್ಯಾಂಡಿಂಗ್ ಗಾಢವಾದರೆ, ಕರ್ನಾಟಕದ ಫಲಿತಾಂಶದ ಪರಿಣಾಮಗಳನ್ನು ತಗ್ಗಿಸಬಹುದೆನ್ನುವುದು ಇದರ ಹಿಂದಿರುವ ಲೆಕ್ಕಾಚಾರ.
ಬಿಜೆಪಿ ಪಾಲಿನ ಅದೃಷ್ಟವೆಂದರೆ, ಯಾವೆಲ್ಲ ನಿರೀಕ್ಷೆಗಳನ್ನಿಟ್ಟುಕೊಂಡು ಅದು ಇಂತಹ ತಂತ್ರಗಳನ್ನು ರೂಪಿಸುತ್ತಿದೆಯೋ, ಅದಕ್ಕೆ ಪೂರಕವಾಗಿಯೇ ರಾಜ್ಯ ಕಾಂಗ್ರೆಸ್ ಘಟಕ ಅನಗತ್ಯವಾಗಿ ಮುಗ್ಗರಿಸುತ್ತಿದೆ. ಆ ಮೂಲಕ, ರಾಷ್ಟ್ರ ರಾಜಕಾರಣದಲ್ಲಿ ‘ಮಾಡೆಲ್’ ಆಗಬೇಕಿದ್ದ ಅವಕಾಶವನ್ನು ತಾನಾಗಿಯೇ ಹಾಳು ಮಾಡಿಕೊಂಡು, ‘ಶ್ಯಾಡೋ ಮಾಡೆಲ್’ ನ ಅಪವಾದಕ್ಕೆ ತುತ್ತಾಗುವತ್ತ ಹೆಜ್ಜೆ ಹಾಕುತ್ತಿದೆ.