ಕೊರೋನ ಕಾಲದ ಅನ್ಯಾಯಗಳ ಬಗ್ಗೆ ಸಮಗ್ರ ತನಿಖೆಯಾಗಲೇ ಬೇಕು

ಕೊರೋನ ಸಾಂಕ್ರಾಮಿಕದ ನೆಪದಲ್ಲಿ ಅಸಾಂವಿಧಾನಿಕ, ಅವೈಜ್ಞಾನಿಕ, ಅನಗತ್ಯ, ಅಪಾಯಕಾರಿ ಹಾಗೂ ಅಸಂಬದ್ಧವಾದ ನಿಯಮಗಳನ್ನು ಜನರ ಮೇಲೆ ಹೇರಿ, ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿ, ರಾಜ್ಯದ ಆರ್ಥಿಕತೆಗೆ, ಮಕ್ಕಳ ಶಿಕ್ಷಣ ಹಾಗೂ ಬೆಳವಣಿಗೆಗಳಿಗೆ ಕೊಡಲಿಯೇಟು ಕೊಟ್ಟ ಕ್ರಮಗಳ ಬಗ್ಗೆ ಮತ್ತು ಅವುಗಳಿಂದ ರಾಜ್ಯದ ಬೊಕ್ಕಸಕ್ಕೆ ಮಾತ್ರವಲ್ಲ ಜನಸಾಮಾನ್ಯರಿಗೂ ಆಗಿರುವ ನಷ್ಟಗಳ ಬಗ್ಗೆ ಹಾಗೂ ಇವುಗಳಲ್ಲಿ ಒಳಗೊಂಡಿದ್ದವರ ಹಗರಣಗಳ ಬಗ್ಗೆ ರಾಜಕೀಯ ಮೇಲಾಟಗಳ ಬಗ್ಗೆ ಸಮಗ್ರವಾದ, ವಸ್ತುನಿಷ್ಠವಾದ ತನಿಖೆಯಾಗಬೇಕು.

Update: 2024-09-10 06:22 GMT

ಕೊರೋನ ಸಾಂಕ್ರಾಮಿಕದ ನಿಭಾವಣೆಯಲ್ಲಿ ಆಗಿನ ಸರಕಾರವು ಅನಗತ್ಯವಾಗಿ ದುಂದು ವೆಚ್ಚ ಮಾಡಿದೆ, ಭ್ರಷ್ಟಾಚಾರವೂ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸಲು ಈಗಿನ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರವು ನ್ಯಾ. ಮೈಕೆಲ್ ಡಾ’ಕುನ್ಹಾ ನೇತೃತ್ವದ ಸಮಿತಿಯನ್ನು ರಚಿಸಿತ್ತು, ಆ ಸಮಿತಿಯ ಮಧ್ಯಂತರ ವರದಿಯ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳಿಗೆ ಸಚಿವ ಸಂಪುಟವು ನಿರ್ದೇಶನ ನೀಡಿದೆ. ತಾನು ತನ್ನ ಜೀವವನ್ನೇ ಪಣಕ್ಕಿಟ್ಟು ಕೋವಿಡ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸಿದ್ದೇನೆ, ತಜ್ಞರ ಕಾರ್ಯಪಡೆಯು ಹೇಳಿದ್ದನ್ನಷ್ಟೇ ತಮ್ಮ ಸರಕಾರವು ಮಾಡಿತ್ತು, ತಮ್ಮಿಂದ ಯಾವುದೇ ಹಗರಣವಾಗಿಲ್ಲ ಎಂದು ಕೋವಿಡ್ ಕಾಲದಲ್ಲಿ ಆರೋಗ್ಯ ಸಚಿವರಾಗಿ ಬಂದು ಕೆಲಸ ಮಾಡಿದ್ದ ಡಾ. ಸುಧಾಕರ್ ಹೇಳಿದ್ದಾರೆ. ವರದಿಯನ್ನು ನೋಡದೆಯೇ ಕುಂಬಳಕಾಯಿ ಕಳ್ಳನಂತೆ ವರ್ತಿಸುವುದೇಕೆ ಎಂದು ಸಿದ್ದರಾಮಯ್ಯನವರು ಸುಧಾಕರ್ ಅವರನ್ನು ಜರೆದಿದ್ದಾರೆ.

ಈ ಮಧ್ಯಂತರ ವರದಿಯಲ್ಲಿ ಏನಿದೆ ಎನ್ನುವುದು ಇನ್ನಷ್ಟೇ ಹೊರಬರಬೇಕಿದ್ದರೂ, ಈಗಾಗಲೇ ನಡೆದಿರುವ ಕಟಕಿಯಾಟವನ್ನು ನೋಡಿದಾಗ, ಈ ತನಿಖೆಯು ಪೂರ್ಣಗೊಳ್ಳಲು ಇನ್ನೂ ಕೆಲವು ಕಾಲ ಹಿಡಿಯಬಹುದು ಎನ್ನುವುದಂತೂ ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಅಂದಿನ ಆರೋಗ್ಯ ಸಚಿವರೇ ಸೂಚಿಸಿರುವಂತೆ, ಕೋವಿಡ್ ನಿಭಾವಣೆಯಲ್ಲಿ ತಥಾಕಥಿತ ತಜ್ಞರ ತಥಾಕಥಿತ ಕಾರ್ಯಪಡೆಯ ಪಾತ್ರವಿದ್ದುದನ್ನು ಕಡೆಗಣಿಸಲಾಗದು ಎನ್ನುವುದೂ ಸ್ಪಷ್ಟವಾಗುತ್ತದೆ. ಆದ್ದರಿಂದ, ಈ ಮಧ್ಯಂತರ ವರದಿಯಲ್ಲಿ ಏನೇ ಇರಲಿ, ಇಲ್ಲದಿರಲಿ, ಈ ತನಿಖೆಯ ಆಳ-ಅಗಲಗಳನ್ನು ಇನ್ನಷ್ಟು ವಿಸ್ತರಿಸಿ, ಕೋವಿಡ್ ನಿಭಾವಣೆಯ ಎಲ್ಲ ಮಜಲುಗಳ ಬಗ್ಗೆಯೂ ವೈಜ್ಞಾನಿಕವಾದ, ವಸ್ತುನಿಷ್ಠವಾದ ತನಿಖೆಯಾಗಿಸಿದರೆ ಮುಂದೆಂದಾದರೂ ಇಂಥದ್ದೇ ಸನ್ನಿವೇಶವೊದಗಿದರೆ ಅದನ್ನು ನಿಭಾಯಿಸಲು ವೈಜ್ಞಾನಿಕವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲು, ಕೋವಿಡ್ ಕಾಲದಲ್ಲಾದ ತಪ್ಪುಗಳು ಪುನರಾವರ್ತಿಸದಂತೆ ತಡೆಯಲು ಸಾಧ್ಯವಾಗಬಹುದು. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಕೆಳಗಿನ ಎಲ್ಲಾ ವಿಷಯಗಳನ್ನೂ ತನಿಖೆಯ ವ್ಯಾಪ್ತಿಗೆ ಸೇರಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಕೊರೋನ ನಿಯಂತ್ರಿಸಲು ಪ್ರಯಾಣ ನಿರ್ಬಂಧಗಳು, ಲಾಕ್‌ಡೌನ್ ಇತ್ಯಾದಿ ಕಠಿಣ ಕ್ರಮಗಳ ಅಗತ್ಯವಿಲ್ಲ, ಅವು ಭಾರತದಂತಹ ದೇಶದಲ್ಲಿ ಹಾನಿಯನ್ನೇ ಮಾಡಬಹುದು ಎಂದು ನಮ್ಮ ದೇಶದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ ಮಾರ್ಚ್ 2020ರಲ್ಲೇ ಹೇಳಿತ್ತು, ಆ ಬಗ್ಗೆ ಸವಿವರವಾದ ವಿಶ್ಲೇಷಣೆಯನ್ನು ಅದರ ವಿದ್ವತ್ ಪತ್ರಿಕೆಯಲ್ಲಿ 2020ರ ಎಪ್ರಿಲ್ ಮೊದಲಲ್ಲೇ ಪ್ರಕಟಿಸಲಾಗಿತ್ತು. ಹಾಗಿರುವಾಗ ನಮ್ಮ ರಾಜ್ಯದಲ್ಲಿ ಕೇವಲ 11 ಪ್ರಕರಣಗಳು ವರದಿಯಾಗಿದ್ದಾಗ ಇಡೀ ರಾಜ್ಯದಲ್ಲೇ ಎಲ್ಲಾ ಕಾರ್ಯಕ್ರಮಗಳ ಮೇಲೆ ಏಕಾಏಕಿಯಾಗಿ ನಿರ್ಬಂಧ ಹೇರಿ, ಸಮಾರಂಭಗಳು, ಮಳಿಗೆಗಳು, ಚಿತ್ರಮಂದಿರಗಳು, ಶಾಲೆ-ಕಾಲೇಜುಗಳು ಎಲ್ಲವನ್ನೂ ಮುಚ್ಚುವ ನಿರ್ಧಾರವನ್ನು ಮಾರ್ಚ್ 13, 2020ರಂದು ರಾಜ್ಯ ಸರಕಾರದ ಸಭೆಯು ಕೈಗೊಳ್ಳಲು ಕಾರಣವೇನಿತ್ತು? ಅಂಥ ಅನಗತ್ಯವಾಗಿದ್ದ, ಜನವಿರೋಧಿಯೂ, ನಿರುಪಯುಕ್ತವೂ ಆಗಿದ್ದ ಕ್ರಮವನ್ನು ಯಾರಾದರೂ ತಜ್ಞರು ಸೂಚಿಸಿದ್ದರೇ ಎನ್ನುವುದು ಬಹಿರಂಗವಾಗಬೇಕು, ಆ ಸಭೆಯ ನಡಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇಂಥ ಅತಿ ಮುಖ್ಯ ವಿಷಯಗಳನ್ನು ಚರ್ಚಿಸುವ ಸಭೆಗಳಿಗೆ ವಿಷಯ ತಜ್ಞರಲ್ಲದವರನ್ನು ಆಹ್ವಾನಿಸುವುದೇಕೆ, ಅಂಥ ಸ್ವಘೋಷಿತ ತಜ್ಞರ ಆಧಾರರಹಿತ ಸಲಹೆಗಳಿಗೆ ಸರಕಾರವು ಮನ್ನಣೆ ನೀಡುವುದೇಕೆ ಅಥವಾ ಬಗ್ಗುವುದೇಕೆ ಎನ್ನುವುದೆಲ್ಲವೂ ತನಿಖೆಗೆ ಒಳಪಡಬೇಕು, ಮುಂದೆಂದಿಗೂ ಇಂಥವು ಘಟಿಸಲೇಬಾರದು.

ರಾಜ್ಯದಲ್ಲಿ ಅವೈಜ್ಞಾನಿಕ ನಿರ್ಬಂಧಗಳನ್ನು ಹೇರಿದ ಒಂದೇ ವಾರದಲ್ಲಿ ಇಡೀ ದೇಶದಲ್ಲೇ ಲಾಕ್‌ಡೌನ್ ಹೇರಲಾಯಿತು, ಮೊದಲಲ್ಲಿ 21 ದಿನಗಳೆಂದು ಹೇಳಿ ನಂತರ ವಿಸ್ತರಿಸಲಾಯಿತು. ಲಾಕ್‌ಡೌನ್ ಸಡಿಲಿಸುವಾಗ ಮೇ ಮಧ್ಯದ ವೇಳೆಗೆ ಒಂದೇ ಒಂದು ಹೊಸ ಪ್ರಕರಣಗಳಿರುವುದಿಲ್ಲ ಎಂದು ನೀತಿ ಆಯೋಗದ ಸಲಹೆಗಾರರು ಹೇಳಿದ್ದು ನಗೆಗೀಡಾಯಿತು. ಲಾಕ್ ಡೌನ್ ಘೋಷಿಸಿದಾಗ ಇಡೀ ದೇಶದಲ್ಲಿ ಕೇವಲ 560ರಷ್ಟು ಪ್ರಕರಣಗಳಿದ್ದರೆ, ಮೇ ಮಧ್ಯದಲ್ಲಿ ಹೊಸ ಪ್ರಕರಣಗಳು ಸೊನ್ನೆಯಾಗುತ್ತವೆ ಎಂದಿದ್ದಲ್ಲಿ ಅವು 4,600ನ್ನು ಮೀರಿದ್ದವು, ಸೆಪ್ಟಂಬರ್ ವೇಳೆಗೆ ದೇಶದ ಶೇ. 40 ಜನರಿಗೆ ಕೊರೋನ ಸೋಂಕು ತಗಲಿತೆಂದು ಕೇಂದ್ರ ಸರಕಾರವೇ ಹೇಳಿತು; ಅದರೊಂದಿಗೆ, ಲಾಕ್‌ಡೌನ್ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದ, ತಪ್ಪಾಗಿದ್ದ ನಿರ್ಧಾರವಾಗಿತ್ತೆನ್ನುವುದು ಸಾಬೀತಾಗಿತ್ತು. ಇಂಥ ಬರ್ಬರ ಕ್ರಮಗಳಿಂದಾದ ಸಕಲ ಕಷ್ಟನಷ್ಟಗಳ ಬಗ್ಗೆ ತನಿಖೆಯಾಗಲೇ ಬೇಕು.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇಶದ ಎಲ್ಲೂ ಮಾಡಿರದಿದ್ದ 72 ಗಂಟೆಗಳ ಸಂಪೂರ್ಣ ಕರ್ಫ್ಯೂ ಹೇರಲಾಗಿತ್ತು. ಇದಕ್ಕೆ ಕಾರಣಕರ್ತರು ಯಾರು, ಆಧಾರಗಳೇನು ಎನ್ನುವುದು ಕೂಡ ತನಿಖೆಯಾಗಬೇಕು.

ಈ ಬರ್ಬರ ಲಾಕ್‌ಡೌನ್ ಕಾಲದಲ್ಲಿ ಆಸ್ಪತ್ರೆಗಳಿಗೆ ತೆರಳುತ್ತಿದ್ದವರನ್ನೂ ಕೂಡ ತಡೆಯಲಾಗುತ್ತಿತ್ತು, ಜನರನ್ನು ಬೆದರಿಸಲಾಗುತ್ತಿತ್ತು. ಅನೇಕರ ಮೇಲೆ ಪ್ರಕರಣಗಳೂ ದಾಖಲಾಗಿದ್ದವು. ಕೂಗುಮಾರಿ ಮಾಧ್ಯಮಗಳಂತೂ ಯಾವ ನಿರ್ಬಂಧವೂ ಇಲ್ಲದೆ, ಯಾರ ಖಾಸಗಿತನಕ್ಕೂ ಬೆಲೆ ಕೊಡದೆ ಸಿಕ್ಕಸಿಕ್ಕಲ್ಲಿ ಕ್ಯಾಮರಾ ಹಿಡಿದು ತಮ್ಮ ಕಷ್ಟಗಳಿಗೆ ಅಂಗಡಿಗಳಿಗೆ ಹೋದವರು, ಆಸ್ಪತ್ರೆಗೆ ಹೋದವರು ಲಾಕ್‌ಡೌನ್ ಮುರಿಯುತ್ತಿರುವ ದೇಶದ್ರೋಹಿಗಳೆಂಬಂತೆ, ಸಮಾಜಘಾತುಕರೆಂಬಂತೆ ವರದಿಗಳನ್ನು ಬಿತ್ತರಿಸುತ್ತಿದ್ದವು, ಜೊತೆಗೆ ಕೋವಿಡ್ ಬಗ್ಗೆಯೂ ಆಧಾರರಹಿತವಾದ, ಭೀತಿಯುಂಟು ಮಾಡುವ ಸುದ್ದಿಗಳನ್ನು ನಿರಂತರವಾಗಿ ಬಿತ್ತರಿಸುತ್ತಿದ್ದವು. ಆಡಳಿತ ಪಕ್ಷಕ್ಕೆ ಹತ್ತಿರವಿದ್ದವರು ವಿದೇಶದಿಂದ ಮರಳಿ ತಮ್ಮ ಮನೆಮಂದಿಗೆ ಕೋವಿಡ್ ನೀಡಿದರೂ ಅವನ್ನು ಮುಚ್ಚಿಹಾಕಿ, ಚಿಕಿತ್ಸೆ ನೀಡಿದ ಕುಟುಂಬ ವೈದ್ಯರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಎರಡು ವಾರ ದಿಗ್ಬಂಧನದಲ್ಲಿಟ್ಟದ್ದು, ವೈದ್ಯರನ್ನು ಒಳಗೆಯೇ ಇಟ್ಟು ಆಸ್ಪತ್ರೆಯನ್ನು ಮೂರು ವಾರ ಮುಚ್ಚಿ ಹಾಕಿದ್ದು, ಪ್ರಕರಣಗಳ ತನಿಖೆಗೆ ರಾಜಕೀಯ ಹಿತಾಸಕ್ತಿ ಉಳ್ಳವರ ಸಮಿತಿ ರಚಿಸಿ ದೂರನ್ನು ನೆರೆ ರಾಜ್ಯದ ಅನ್ಯರ ಮೇಲೆ ಕಟ್ಟಲು ವಿಫಲ ಪ್ರಯತ್ನ ಮಾಡಿದ್ದು ಎಲ್ಲವೂ ಆಗಿದ್ದವು. ಇವೆಲ್ಲವೂ ನಡೆದದ್ದು ಏಕೆ, ಎಲ್ಲಿ, ಎಷ್ಟು, ಹೇಗೆ ಎನ್ನುವುದು ತನಿಖೆಯಾಗಬೇಕು.

ಕೊರೋನ ಸಾಂಕ್ರಾಮಿಕದ ಮೊದಲ ಆರೇಳು ತಿಂಗಳು ವಿದೇಶಗಳಿಂದಷ್ಟೇ ಅಲ್ಲದೆ ನಮ್ಮ ನೆರೆಯ ರಾಜ್ಯಗಳಿಂದಲೂ ಬಂದವರನ್ನು ಹೊಟೇಲ್ ಮುಂತಾದೆಡೆ ದಿಗ್ಬಂಧಿಸಿಡುವ ನೀತಿಯನ್ನು ಹೇರಲಾಗಿತ್ತು. ರಾಜ್ಯದೊಳಗೆಯೇ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ಹೊರಗಿನಿಂದ ಬಂದವರನ್ನು ಹಿಡಿದಿಡುವುದರಿಂದ ಯಾವ ಉಪಯೋಗವೂ ಇಲ್ಲದಿದ್ದರೂ ಇಂತಹ ತೀರಾ ಅವೈಜ್ಞಾನಿಕ ಕ್ರಮಗಳನ್ನು ಹೇರಲಾಗಿತ್ತು. ನಂತರ, ಕೊರೋನ ಸೋಂಕು ಗಣನೀಯವಾಗಿ ಇಳಿಕೆಯಾದಾಗಲೂ, ಯಾವ ಅಪಾಯವೂ ಇರದಿದ್ದ 2022ರ ಡಿಸೆಂಬರ್‌ನಲ್ಲೂ ಹೀಗೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ ನೀತಿಯನ್ನು ಮುಂದುವರಿಸಲಾಗಿತ್ತು. ಬೇರೆ ಯಾವ ರಾಜ್ಯಗಳಲ್ಲೂ ಇಲ್ಲದಿದ್ದ ಈ ಸಾಂಸ್ಥಿಕ ಕ್ವಾರಂಟೈನ್ ನೀತಿಯನ್ನು ನಮ್ಮ ರಾಜ್ಯದಲ್ಲಿ ಹೇರಲು ಕಾರಣಗಳೇನಿದ್ದವು, ಆಧಾರಗಳೇನಿದ್ದವು, ಯಾವ ಹೊಟೇಲುಗಳಿಗೆ ಈ ನೀತಿಗಳಿಂದ ಎಷ್ಟು ಪ್ರಯೋಜನವಾಗಿತ್ತು, ಇವುಗಳ ಆಯ್ಕೆಯಲ್ಲಿ ಕಾರ್ಯಪಡೆ ಹಾಗೂ ಆಡಳಿತದ ಪಾತ್ರವೇನಿತ್ತು, ಎನ್ನುವುದೆಲ್ಲವೂ ತನಿಖೆಯಾಗಬೇಕು.

ಕೊರೋನ ಕಾಲದುದ್ದಕ್ಕೂ ನಿಂತಲ್ಲಿ ಕೂತಲ್ಲಿ ಹೋದಲ್ಲಿ ಬಂದಲ್ಲಿ ಪಿಸಿಆರ್ ಪರೀಕ್ಷೆ ಮಾಡಿಸಬೇಕೆನ್ನುವ ನಿಯಮಗಳನ್ನು ಮಾಡಲಾಗಿತ್ತು. ಕೊರೋನ ಸೋಂಕು ಆಗಲೇ ರಾಜ್ಯದಾದ್ಯಂತ ಹರಡುತ್ತಿದ್ದುದರಿಂದ ಇಂಥ ಪರೀಕ್ಷೆಗಳು ಅನಗತ್ಯವೂ, ನಿರುಪಯುಕ್ತವೂ ಆಗಿದ್ದವು. ಆದರೂ ಇದು ತಮ್ಮ ಕಾರ್ಯಪಡೆಯ ಮಹಾನ್ ಟಿಟಿಟಿ ನಿಯಂತ್ರಣಾ ವಿಧಾನವೆಂದು ಕಾರ್ಯಪಡೆಯ ವೈದ್ಯರು ಭಾಷಣ ಬಿಗಿಯುತ್ತಲೇ ಹೋದರು. ಈ ಪರೀಕ್ಷೆಗಳಿಗೆ ಸರಕಾರಕ್ಕೂ, ಜನಸಾಮಾನ್ಯರಿಗೂ ಆದ ವೆಚ್ಚವೆಷ್ಟು, ಅದರಿಂದ ಕೋವಿಡ್ ನಿಯಂತ್ರಣಕ್ಕಾದ ಪ್ರಯೋಜನಗಳೇನು, ಯಾವ ಯಾವ ಕಂಪೆನಿಗಳು ಹಾಗೂ ಪರೀಕ್ಷಾ ಕೇಂದ್ರಗಳು ಇದರಲ್ಲಿ ಭಾಗಿಯಾಗಿದ್ದವು ಮತ್ತು ಎಷ್ಟು ವಹಿವಾಟು ಮಾಡಿದವು, ಈ ಪರೀಕ್ಷೆಗಳ ನೀತಿಯ ಪಡೆಗೆ ಕೋವಿಡ್ ಸೋಂಕಿಗಾಗಲೀ, ಪರೀಕ್ಷಾ ವಿಶೇಷತೆಗಾಗಲೀ ಯಾವುದೇ ಸಂಬಂಧವೇ ಇಲ್ಲದಿದ್ದ ಹೃದ್ರೋಗ ತಜ್ಞರೊಬ್ಬರನ್ನು ಅಧ್ಯಕ್ಷರನ್ನಾಗಿಸಿದ್ದೇಕೆ ಎನ್ನುವುದೆಲ್ಲವೂ ತನಿಖೆಯಾಗಬೇಕು.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗಳನ್ನು ನಡೆಸುವುದಕ್ಕೆ ಸ್ಪಷ್ಟ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಇಲಾಖೆ ಹಾಗೂ ಐಸಿಎಂಆರ್ ಮಾರ್ಚ್ 15, 2020ರಂದೇ ಪ್ರಕಟಿಸಿದ್ದವು. ಅದರಲ್ಲೆಲ್ಲೂ ಅಂತ್ಯಕ್ರಿಯೆಗಳನ್ನು ಮನೆಯವರು ಮಾಡಬಾರದೆಂದಾಗಲೀ, ಮೃತದೇಹವನ್ನು ಮನೆಯವರಿಗೆ ಒಪ್ಪಿಸಬಾರದೆಂದಾಗಲೀ ಹೇಳಿರಲೇ ಇಲ್ಲ. ಹಾಗಿದ್ದರೂ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರನ್ನು ನೋಡುವುದಕ್ಕೂ ಬಿಡದೆ, ಮೃತರ ದೇಹಗಳನ್ನೂ ನೀಡದೆ, ಹಲವೆಡೆ ಅಂತ್ಯಕ್ರಿಯೆಯನ್ನೂ ಆಡಳಿತದ ವತಿಯಿಂದಲೇ ನಡೆಸಲಾಯಿತು, ಕೇಂದ್ರ ಸಚಿವರೊಬ್ಬರ ಮೃತದೇಹವನ್ನು ಜೆಸಿಬಿಯಲ್ಲಿ ಎತ್ತಿ ಮಣ್ಣೊಳಕ್ಕಿಳಿಸಿದ ಚಿತ್ರಗಳು ಕೂಡ ಬಿತ್ತರವಾದವು. ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಬ್ಬರು ತನ್ನ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತರಾದವರ ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು ರಾದ್ಧಾಂತ ಮಾಡಿದರೆ, ತನ್ನ ಅಪ್ಪಣೆಯಿಲ್ಲದೆ ಯಾರ ಆಂತ್ಯಕ್ರಿಯೆಯೂ ಸಾಧ್ಯವಿಲ್ಲವೆಂದು ಸಂಸದರೊಬ್ಬರು ಹೇಳಿದರು. ಇಂಥದ್ದೆಲ್ಲ ನಡೆಯುವಾಗ ಸರಕಾರದಿಂದ ಒಂದೇ ಒಂದು ಅಕ್ಷರದ ಹೇಳಿಕೆಯಾಗಲೀ, ಸಾಂತ್ವನವಾಗಲೀ, ಮಾರ್ಗಸೂಚಿಯಾಗಲೀ ಬರಲೇ ಇಲ್ಲ. ಇವೆಲ್ಲವೂ ನಡೆಯಲು ಕಾರಣಗಳೇನು, ಸರಕಾರವೇ ಅಂತ್ಯಕ್ರಿಯೆ ನಡೆಸಲು ಆಗಿರಬಹುದಾದ ಖರ್ಚುಗಳೆಷ್ಟು, ಆ ಕೆಲಸವನ್ನು ಯಾರಿಗೆ ಯಾವ ಆಧಾರದಲ್ಲಿ ನಿರ್ವಹಿಸಲಾಗಿತ್ತು ಎಂಬುದು ಕೂಡ ತನಿಖೆಯಾಗಬೇಕು. ಮೊದಲ ಅಲೆಯ ವೇಳೆ ಅಂತ್ಯಕ್ರಿಯೆಯ ಬಗ್ಗೆ ಹೇರಿದ್ದ ನಿರ್ಬಂಧಗಳು ಮೇ 2021ರ ಬಳಿಕ ಎದ್ದಿದ್ದ ಎರಡನೇ ಅಲೆಯ ವೇಳೆಗೆ ಯಾಕೆ ಮಾಯವಾದವು ಎನ್ನುವುದನ್ನೂ ತನಿಖೆ ಮಾಡಬೇಕು.

ಕೊರೋನ ಚಿಕಿತ್ಸೆಗೆ ರಾಜ್ಯ ಸರಕಾರವು ಹೊರಡಿಸಿದ್ದ ಮಾರ್ಗಸೂಚಿಯು ಸಂಪೂರ್ಣವಾಗಿ ಅಸಂಬದ್ಧವೂ, ಅವೈಜ್ಞಾನಿಕವೂ ಆಗಿತ್ತೆನ್ನುವುದನ್ನು ಸಾಧಾರವಾಗಿ ಆ ಕೂಡಲೇ ಇದೇ ಪತ್ರಿಕೆಯಲ್ಲಿ ಬರೆದಿದ್ದೆ. ಆದರೆ ಅದನ್ನು ಕಡೆಗಣಿಸಿ ಅದೇ ಆಧಾರರಹಿತ ಮಾರ್ಗಸೂಚಿಯನ್ನೇ ಎಲ್ಲೆಡೆ ಒದಗಿಸಲಾಯಿತು, ಮಾತ್ರವಲ್ಲ, ಅದರ ಪಾಲನೆಯ ಬಗ್ಗೆ ನಿಗಾವಹಿಸಲು ಬೆಂಗಳೂರಿನಲ್ಲೊಂದು ಕೇಂದ್ರವನ್ನು ಸ್ಥಾಪಿಸಲಾಗಿತ್ತು, ಆ ಕೇಂದ್ರಕ್ಕೆ ಕೋವಿಡ್ ನಿರ್ವಹಣೆಗೆ ಯಾವುದೇ ಸಂಬಂಧವೇ ಇರದಿದ್ದ ಕ್ಯಾನ್ಸರ್ ತಜ್ಞರನ್ನು ನೇಮಿಸಲಾಗಿತ್ತು. ಹೈಡ್ರಾಕ್ಸಿ ಕ್ಲೋರೋಕ್ವಿನ್, ಅಜಿತ್ರೋ ಮೈಸಿನ್, ಒಸೆಲ್ಟಾಮಿವಿರ್, ಬಳಿಕ ರೆಂಡಿಸಿವಿರ್, ಟೊಸುಲುಲಿಸಿಮಾಬ್, ಫಾಮಿಪಿರಾವಿರ್, ಮೊಳ್ನುಪಿರಾವಿರ್ ಇತ್ಯಾದಿ ಔಷಧಗಳನ್ನು ಅವುಗಳ ಸಾಧಕ-ಬಾಧಕಗಳ ಬಗ್ಗೆ ಯಾವುದೇ ಆಧಾರಗಳಿರದಿದ್ದರೂ, ಜಗತ್ತಿನ ಬಹುತೇಕ ದೇಶಗಳಲ್ಲಿ ಅವನ್ನು ಬಳಸದೆಯೇ ಇದ್ದರೂ, ರಾಜ್ಯದಲ್ಲಿ ಹೇರಲಾಯಿತು. ಇವಲ್ಲಿ ಕೆಲವು ಕಾಳಸಂತೆಗೆ ಹೋದವು, ಅದಕ್ಕಾಗಿ ಉಚ್ಚ ನ್ಯಾಯಾಲಯಕ್ಕೂ ಹೋದದ್ದೂ ಆಯಿತು. ಇಂಥ ಅನಗತ್ಯವಾಗಿದ್ದ, ಆಧಾರರಹಿತವಾಗಿದ್ದ, ಅಪಾಯಕಾರಿಯೂ ಆಗಬಹುದಾಗಿದ್ದ ಔಷಧಗಳನ್ನು ಬಳಸುವ ಕಾರ್ಯಸೂಚಿಯನ್ನು ಸಿದ್ಧಪಡಿಸಿದ ಹಿಂದಿನ ಕಾರಣಗಳ ಬಗ್ಗೆಯೂ ತನಿಖೆಯಾಗಬೇಕು. ಈ ಔಷಧಗಳನ್ನು ಯಾವ ಕಂಪೆನಿಗಳಿಂದ ಎಷ್ಟು ಪ್ರಮಾಣದಲ್ಲಿ ಎಷ್ಟಕ್ಕೆ ಖರೀದಿಸಲಾಗಿತ್ತು, ಅವು ವ್ಯರ್ಥವೆನಿಸಿದಾಗ ಆ ದಾಸ್ತಾನುಗಳ ಗತಿಯೇನಾಯಿತು, ಅದರಿಂದ ನಷ್ಟವೆಷ್ಟಾಯಿತು ಎನ್ನುವುದೆಲ್ಲವೂ ತನಿಖೆಯಾಗಲೇಬೇಕು.

ಕೊರೋನ ಚಿಕಿತ್ಸೆಗೆ ಆಯುರ್ವೇದ ಕಿಟ್ ಎಂದು ಪ್ರಚಾರ ಮಾಡಲು ಅವಕಾಶ ನೀಡಲಾಯಿತು, ಮಾತ್ರವಲ್ಲ, ಕೆಲವು ಸಚಿವರೇ ತಮ್ಮ ಕ್ಷೇತ್ರಗಳಲ್ಲಿ ಅವನ್ನು ಹಂಚುವುದಾಗಿ ಪ್ರಕಟಿಸಿದ್ದೂ ಆಯಿತು. ಒಬ್ಬ ವೈದ್ಯರಂತೂ ತಾನು ಕೊರೋನ ಚಿಕಿತ್ಸೆಗೆ ಅದ್ಭುತ ಚಿಕಿತ್ಸೆಯನ್ನು ಕಂಡುಹಿಡಿದಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಅದರ ಅಧ್ಯಯನ ನಡೆಯುತ್ತಿದೆ ಎಂದು ಪ್ರಚಾರ ಮಾಡಿಕೊಂಡು ಕೋಟಿಗಟ್ಟಲೆ ಸಂಪಾದಿಸಿದ್ದೂ ಆಯಿತು. ಹೀಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದ, ಅಪಾಯಕಾರಿಯೂ ಆಗಬಲ್ಲ ಚಿಕಿತ್ಸೆಗಳಿಗೆ ಸುಳ್ಳು ಪ್ರಚಾರ ನೀಡುವುದಕ್ಕೆ ಅವಕಾಶ ಕೊಟ್ಟದ್ದು ಹೇಗೆ, ಅಂಥವನ್ನು ಆಡಳಿತದಲ್ಲಿದ್ದವರೇ ಖರೀದಿಸಿ ಹಂಚಲು ಹೊರಟದ್ದು ಹೇಗೆ ಎನ್ನುವುದನ್ನೂ ತನಿಖೆ ಮಾಡಬೇಕು.

ಕೊರೋನ ಚಿಕಿತ್ಸೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡುವ ದೊಡ್ಡ ಕೆಲಸವೇ ನಡೆದಿತ್ತು, ಸಮುದಾಯ ಭವನಗಳು, ಕ್ರೀಡಾಂಗಣಗಳು ಮುಂತಾದೆಡೆ ಒಂದಷ್ಟು ಹಾಸಿಗೆಗಳನ್ನು ಹಾಕಿಸಲಾಗಿತ್ತು. ಇವುಗಳ ಒಂದೇ ಒಂದು ಹಾಸಿಗೆಯಲ್ಲಿ ಯಾರೂ ದಾಖಲಾಗಿರುವ ಮಾಹಿತಿ ಇಲ್ಲದಿದ್ದರೂ, ಇವನ್ನು ಮಾಡುವಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆ ದಿನಗಳಲ್ಲೇ ದೂರುಗಳಿದ್ದವು. ಆಸ್ಪತ್ರೆಗಳಲ್ಲೂ ಕೂಡ ಕೊರೋನ ಪೀಡಿತರನ್ನು ದಾಖಲಿಸುವ ಬಗ್ಗೆ ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸಿ ಹಾಸಿಗೆಗಳನ್ನು ಕಾದಿರಿಸುವುದು, ಆಮ್ಲಜನಕ ಹಾಗೂ ಔಷಧಗಳನ್ನು ಪೂರೈಸುವುದು ಎಲ್ಲವೂ ಬಹು ಕಷ್ಟದ ಕೆಲಸಗಳೆಂಬಂತೆ ಮಾಡಿ, ದಂಧೆಯೇ ನಡೆಯಿತು. ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣವೆಂದೇ ದೊಡ್ಡದಾಗಿ ವರದಿಯಾಯಿತು, ಕೆಲವು ಎಂಎಲ್‌ಎ, ಎಂಪಿಗಳ ಹೆಸರುಗಳೂ ಅದರಲ್ಲಿ ಕೇಳಿಬಂದವು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಕೆಲವು ಸರಕಾರಿ ಸಿಬ್ಬಂದಿಯ ಮೇಲೆ ಗೂಬೆ ಕೂರಿಸಿ ಅವರನ್ನು ಅಮಾನತುಗೊಳಿಸಿ ನಂತರ ಹಿಂದೆಗೆದದ್ದೂ ಆಯಿತು. ಈ ಎಲ್ಲವುಗಳ ಬಗ್ಗೆಯೂ ಆಳವಾದ ತನಿಖೆಯಾಗಬೇಕು.

ಕೊರೋನ ನೆಪದಲ್ಲಿ ಶಾಲೆ-ಕಾಲೇಜುಗಳನ್ನು ಮುಚ್ಚಿದ್ದು ಅನಗತ್ಯ ಹಾಗೂ ಅವೈಜ್ಞಾನಿಕವಾಗಿತ್ತು ಮಾತ್ರವಲ್ಲ, ಮಕ್ಕಳ ಶೈಕ್ಷಣಿಕ, ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಶಾಶ್ವತವಾಗಿ ಹಾನಿಮಾಡುವ ಮಾರಕ ಹೊಡೆತವಾಗಿತ್ತು. ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಗಳ ಬಗ್ಗೆ ಯಾವುದೇ ಪರಿಣತಿಯಿಲ್ಲದವರೇ ತುಂಬಿದ್ದ ಕೊರೋನ ಕಾರ್ಯಪಡೆಯ ಈ ಅಸಂಬದ್ಧವಾಗಿದ್ದ ನಿರ್ಧಾರವನ್ನು ನಾವು ಹಲವರು ಮೊದಲಿನಿಂದಲೇ ತೀವ್ರವಾಗಿ ವಿರೋಧಿಸುತ್ತಲೇ ಇದ್ದರೂ, ಅದನ್ನು ಲೆಕ್ಕಿಸದೆ ಶಾಲೆಗಳನ್ನು ಮುಚ್ಚಿಯೇ ಇರಿಸಲಾಯಿತು. ನಡುವಲ್ಲಿ ‘ವಿದ್ಯಾಗಮ’ ಎಂಬ ಕಾರ್ಯಕ್ರಮವನ್ನು ಆರಂಭಿಸಲಾಯಿತಾದರೂ, ಮೂರನೇ ಅಲೆಯು ಅಪ್ಪಳಿಸಲಿದೆ ಎಂದೆಲ್ಲ ಭೀತಿ ಹರಡಿ ಅದನ್ನೂ ನಿಲ್ಲಿಸಲಾಯಿತು. ಹೀಗೆ ಶಾಲೆಗಳನ್ನು ಮುಚ್ಚಿಸಿದ್ದರಿಂದ ರಾಜ್ಯದ ಎಲ್ಲಾ ಮಕ್ಕಳ ವಿದ್ಯಾಭ್ಯಾಸವು ಶಾಶ್ವತವಾಗಿ ಕುಂಠಿತಗೊಂಡದ್ದು ಮಾತ್ರವಲ್ಲ, ಮಕ್ಕಳು ಮೊಬೈಲ್ ಸಾಧನಗಳ ದಾಸರಾಗುವಂತಾಗಿದೆ, ಅದೀಗ ಬಹು ದೊಡ್ಡ ಸಮಸ್ಯೆಯಾಗಿ ಬೆಳೆಯುವಂತಾಗಿದೆ. ಹೀಗೆ ಶಾಲೆಗಳನ್ನು ಮುಚ್ಚುವ ಅವೈಜ್ಞಾನಿಕ ನಿರ್ಧಾರಗಳ ಹಿಂದೆ ಯಾವ ಶಕ್ತಿಗಳ ಕೈವಾಡವಿತ್ತು, ಶಾಲೆಗಳ ಆಡಳಿತ ಮಂಡಳಿಗಳು, ಮೊಬೈಲ್ ಸೇವಾ ಕಂಪೆನಿಗಳು, ಮೊಬೈಲ್ ತಯಾರಕ ಕಂಪೆನಿಗಳು ಯಾವ ಪಾತ್ರ ವಹಿಸಿದ್ದವು, ಯಾವ ಪ್ರಭಾವಗಳನ್ನು ಬಳಸಿದ್ದವು, ಕಾರ್ಯಪಡೆಯ ಸದಸ್ಯರು ಮತ್ತು ಆಡಳಿತದಲ್ಲಿದ್ದವರ ಪಾತ್ರಗಳೇನಿದ್ದವು ಎನ್ನುವುದೆಲ್ಲವೂ ತನಿಖೆಯಾಗಬೇಕು.

ಮೂರನೇ ಅಲೆಯು ಮಕ್ಕಳನ್ನು ಅಪ್ಪಳಿಸಿ ಅನಾಹುತವುಂಟುಮಾಡಲಿದೆ ಎಂದು ಮಕ್ಕಳ ಕೊರೋನ ಸೋಂಕಿಗೆ ಯಾವುದೇ ಸಂಬಂಧವೇ ಇಲ್ಲದ, ಪರಿಣತಿಯೂ ಇಲ್ಲದ ಹೃದಯ ಶಸ್ತ್ರಚಿಕಿತ್ಸಕರ ನೇತೃತ್ವದಲ್ಲಿ ಅದಕ್ಕೆಂದೇ ಕಾರ್ಯಪಡೆ ರಚಿಸಲಾಗಿತ್ತು. ಆ ಅಧ್ಯಕ್ಷರು ಮತ್ತು ಕಾರ್ಯಪಡೆ ಮಾಡಿದ ಯಾವೊಂದು ಅಂದಾಜು ಕೂಡ ಸರಿಯಾಗಲೇ ಇಲ್ಲ, ಮೂರನೇ ಅಲೆಯೂ ಬರಲಿಲ್ಲ. ಬರುವ ಸಾಧ್ಯತೆಗಳೇ ಇರದಿದ್ದ ಮೂರನೇ ಅಲೆಗೆ ಈ ತಜ್ಞರಲ್ಲದವರ ಸಮಿತಿಯು ನೀಡಿದ್ದ ಸಲಹೆಗಳಂತೆ ಮಾಡಿದ ಐಸಿಯುಗಳೆಷ್ಟು, ಇತರ ಸಿದ್ಧತೆಗಳೆಷ್ಟು, ಅದಕ್ಕೆ ಉಪಕರಣಗಳನ್ನು ಪೂರೈಸಿದವರಾರು, ಖರ್ಚೆಷ್ಟು ಎಂಬುದೆಲ್ಲವೂ ತನಿಖೆಯಾಗಬೇಕು.

ಕೊರೋನ ಕಾಲದಲ್ಲಿ ಅನೇಕ ಐಟಿ ಕಂಪೆನಿಗಳು ಹಾಗೂ ಇತರ ಕಂಪೆನಿಗಳು ತಮ್ಮ ಕಚೇರಿಗಳನ್ನು ಮುಚ್ಚಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ತಂದವು. ಈ ವ್ಯವಸ್ಥೆಯು ಈಗಲೂ ಮುಂದುವರಿದಿದ್ದು, ಮನೆಯೇ ಕಚೇರಿಯಾಗಿ ಅನೇಕ ಕುಟುಂಬಗಳಿಗೆ ಮಾನಸಿಕ, ದೈಹಿಕ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿವೆ. ಅತ್ತ, ಬೆಂಗಳೂರಿನಂತಹ ನಗರಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಕಚೇರಿಗಳನ್ನು ಶಾಶ್ವತವಾಗಿ ತೊರೆದಿದ್ದು, ಅನೇಕ ಕಟ್ಟಡಗಳು ಬಿಕೋ ಎನ್ನುತ್ತಿವೆ, ಮಾತ್ರವಲ್ಲ, ಈ ಸಂಸ್ಥೆಗಳಿಗೆ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನೋದ್ಯಮವು ಅಪಾರವಾಗಿ ತೊಂದರೆಗೀಡಾಗಿದೆ. ಇದರಿಂದ ಸ್ಥಳೀಯಾಡಳಿತಗಳು, ವಿದ್ಯುತ್ ಮತ್ತಿತರ ಸೇವಾಸಂಸ್ಥೆಗಳು, ಬ್ಯಾಂಕ್‌ಗಳು ಇತ್ಯಾದಿಗಳು ನಷ್ಟಕ್ಕೀಡಾಗಿವೆ. ಇಂಥ ವ್ಯವಸ್ಥೆಯನ್ನು ತರುವುದರ ಹಿಂದೆ ಯಾವ ವೈಜ್ಞಾನಿಕ ಕಾರಣಗಳಿದ್ದವು, ಈ ಕಂಪೆನಿಗಳು ತಮ್ಮ ಮನಬಂದಂತೆ ಹೀಗೆ ಕಚೇರಿಗಳಿಗೆ ಬೀಗ ಜಡಿಯುವುದಕ್ಕೆ, ಸಿಬ್ಬಂದಿಯನ್ನು ಮನೆಗಳಿಗೆ ತಳ್ಳುವುದಕ್ಕೆ ಅಥವಾ ಕೆಲಸದಿಂದ ತೆಗೆಯುವುದಕ್ಕೆ ಹೇಗೆ ಸಾಧ್ಯವಾಯಿತು, ಇವೆಲ್ಲವುಗಳಿಂದ ಆಗಿರುವ ಕಷ್ಟನಷ್ಟಗಳೇನು ಎನ್ನುವುದೆಲ್ಲವೂ ತನಿಖೆಯಾಗಬೇಕು.

ಕೊರೋನ ನಿಯಂತ್ರಣಕ್ಕೆಂದು ಲಸಿಕೆಗಳು ಬಂದಾಗ, ಅವನ್ನು ಪಡೆಯುವುದು ಐಚ್ಛಿಕ ಮಾತ್ರವೆಂದು ಕೇಂದ್ರ ಸರಕಾರವೇ ಸ್ಪಷ್ಟವಾಗಿ ಹೇಳಿತ್ತು. ಲಸಿಕೆ ಬರುವ ವೇಳೆಗಾಗಲೇ ದೇಶದ ಶೇ. 60ರಷ್ಟು ಜನರು ಕೊರೋನದಿಂದ ಸೋಂಕಿತರಾಗಿ ರೋಗರಕ್ಷಣೆಯನ್ನು ಪಡೆದಿದ್ದಾರೆ ಎಂದೂ ಕೇಂದ್ರ ಸರಕಾರವೇ ಹೇಳಿತ್ತು, ಕೊರೋನ ಯುದ್ಧವನ್ನು ಜಯಿಸಿ ಆಗಿದೆ ಎಂದು ಪ್ರಧಾನಿಗಳೂ ಹೇಳಿದ್ದರು. ಹಾಗಿರುವಾಗ ಲಸಿಕೆ ನೀಡುವ ಬಗ್ಗೆ ಒಂದು ವೈಜ್ಞಾನಿಕವಾದ, ವಿವೇಚನಾಯುತವಾದ ನೀತಿಯನ್ನು ಮಾಡುವ ಅಗತ್ಯವಿತ್ತು. ಆದರೆ ಅದಾವುದೂ ಆಗಲಿಲ್ಲ. ಕೊರೋನ ಸೋಂಕಿಗೆ ಸಂಬಂಧವಾಗಲೀ, ಪರಿಣತಿಯಾಗಲೀ ಇಲ್ಲದೇ ಇದ್ದವರೇ ತುಂಬಿದ್ದ ಕಾರ್ಯಪಡೆಯವರು ಎಲ್ಲರೂ ಲಸಿಕೆ ಪಡೆಯಬೇಕೆಂದು ಪ್ರಚಾರ ಮಾಡಿದರು. ಆಗಿನ ಉನ್ನತ ಶಿಕ್ಷಣ ಸಚಿವರಂತೂ ಲಸಿಕೆ ಪಡೆಯದ ಮಕ್ಕಳು ಕಾಲೇಜು ಮೆಟ್ಟಿಲನ್ನೇ ಏರುವಂತಿಲ್ಲ ಎಂದರು. ಇದನ್ನು ಪ್ರಶ್ನಿಸಿ ಅವರಿಗೆ ಕಾನೂನು ಕ್ರಮದ ನೋಟಿಸ್ ನೀಡಿದ್ದರೂ ಲೆಕ್ಕಿಸದೆ ಹಿಂದೊಂದು, ಮುಂದೊಂದು ಹೇಳಿಕೆಗಳನ್ನು ನೀಡಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲಾಯಿತು. ಶಾಲಾ ಮಕ್ಕಳಿಗೆಂದು ವಿಶ್ವದ ಬೇರೆಲ್ಲೂ ಬಳಸದೇ ಇದ್ದ ಲಸಿಕೆಯನ್ನು ಇಲ್ಲಿ ತಂದಾಗ ಅದನ್ನೂ ಹಾಕಿಸಿಕೊಳ್ಳುವಂತೆ ಒತ್ತಡ ಹೇರಲಾಯಿತು. ಸರಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಮಳಿಗೆಗಳು, ಚಿತ್ರಮಂದಿರಗಳು ಮುಂತಾದೆಡೆ ಪ್ರವೇಶಿಸುವುದಕ್ಕೂ ಲಸಿಕೆ ಹಾಕಿರಬೇಕೆಂಬ ನಿಯಮಗಳನ್ನು ಮಾಡಲಾಯಿತು. ಇಂಥ ಒತ್ತಡದ ತಂತ್ರಗಳೆಲ್ಲವೂ ಕೇಂದ್ರ ಸರಕಾರದ ಸೂಚನೆಗಳಿಗೆ, ಈ ದೇಶದ ಕಾನೂನುಗಳಿಗೆ, ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ವ್ಯತಿರಿಕ್ತವೇ ಆಗಿದ್ದವು. ಹೀಗೆ ಒತ್ತಡದಿಂದ ಲಸಿಕೆ ಹಾಕಿಸಿ, ಈಗ ಅಲ್ಲಲ್ಲಿಂದ ಹಠಾತ್ ಸಾವುಗಳ ವರದಿಗಳಾಗುತ್ತಿರುವಾಗ ಕಾರ್ಯಪಡೆಯ ತಜ್ಞರುಗಳು ಬಾಯಿ ಬಿಡುವುದು ಕಾಣುತ್ತಿಲ್ಲ. ಆದ್ದರಿಂದ ಈ ಎಲ್ಲಾ ವಿಷಯಗಳ ಬಗ್ಗೆಯೂ ತನಿಖೆಯಾಗಬೇಕು.

ಒಟ್ಟಿನಲ್ಲಿ, ಕೊರೋನ ಸಾಂಕ್ರಾಮಿಕದ ನೆಪದಲ್ಲಿ ಅಸಾಂವಿಧಾನಿಕ, ಅವೈಜ್ಞಾನಿಕ, ಅನಗತ್ಯ, ಅಪಾಯಕಾರಿ ಹಾಗೂ ಅಸಂಬದ್ಧವಾದ ನಿಯಮಗಳನ್ನು ಜನರ ಮೇಲೆ ಹೇರಿ, ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿ, ರಾಜ್ಯದ ಆರ್ಥಿಕತೆಗೆ, ಮಕ್ಕಳ ಶಿಕ್ಷಣ ಹಾಗೂ ಬೆಳವಣಿಗೆಗಳಿಗೆ ಕೊಡಲಿಯೇಟು ಕೊಟ್ಟ ಕ್ರಮಗಳ ಬಗ್ಗೆ ಮತ್ತು ಅವುಗಳಿಂದ ರಾಜ್ಯದ ಬೊಕ್ಕಸಕ್ಕೆ ಮಾತ್ರವಲ್ಲ, ಜನಸಾಮಾನ್ಯರಿಗೂ ಆಗಿರುವ ನಷ್ಟಗಳ ಬಗ್ಗೆ ಹಾಗೂ ಇವುಗಳಲ್ಲಿ ಒಳಗೊಂಡಿದ್ದವರ ಹಗರಣಗಳ ಬಗ್ಗೆ, ರಾಜಕೀಯ ಮೇಲಾಟಗಳ ಬಗ್ಗೆ ಸಮಗ್ರವಾದ, ವಸ್ತುನಿಷ್ಠವಾದ ತನಿಖೆಯಾಗಬೇಕು. ಇನ್ನು ಮುಂದೆ ಎಂದಿಗೂ ಯಾವುದೇ ಸೋಂಕು ಅಥವಾ ಇನ್ಯಾವುದೇ ನೆಪವೊಡ್ಡಿ ಕೊರೋನ ಕಾಲದಲ್ಲಿ ಮಾಡಿದಂಥ ಅನ್ಯಾಯಗಳು ಪುನರಾವರ್ತಿಸಲು ಸಾಧ್ಯವಾಗದಂತಹ ಕಠಿಣ ಕ್ರಮಗಳನ್ನು ಜರುಗಿಸಬೇಕು, ವೈಜ್ಞಾನಿಕ ನೀತಿಗಳನ್ನೂ ರೂಪಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಶ್ರೀನಿವಾಸ ಕಕ್ಕಿಲ್ಲಾಯ

contributor

Similar News