ಕಾಫಿನಾಡಿನಲ್ಲಿ ಕಣ್ಮರೆಯಾಗುತ್ತಿವೆ ಭತ್ತದ ಗದ್ದೆಗಳು: ಕಡಿಮೆ ಲಾಭಕ್ಕೆ ಬೇಸತ್ತು ಕಾಫಿ, ಅಡಿಕೆಯತ್ತ ಮುಖಮಾಡುತ್ತಿರುವ ಕೃಷಿಕರು

Update: 2024-08-26 08:33 GMT

ಚಿಕ್ಕಮಗಳೂರು: ಭತ್ತ ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾಗಿದ್ದು, ಇತ್ತೀಚೆಗೆ ಭತ್ತದ ಗದ್ದೆಗಳನ್ನು ಕಾಫಿ, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ಈ ಕಾರಣದಿಂದಾಗಿ ಮಲೆನಾಡಿನ ಸಾಂಪ್ರದಾಯಿಕ ಭತ್ತದ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದು, ಲಾಭದ ಬೆಳೆಗಳತ್ತ ಮುಖಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಇಡೀ ಮಲೆನಾಡು ಭತ್ತದ ಕೃಷಿಗೆ ಹೆಸರುವಾಸಿಯಾಗಿತ್ತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಭತ್ತದ ಗದ್ದೆಗಳ ಹಸಿರ ಸಾಲು ಕಣ್ಣಿಗೆ ರಾಚುತ್ತಿತ್ತು. ಭತ್ತದ ಕೃಷಿ ಮಲೆನಾಡಿನಲ್ಲಿ ವಿಶಿಷ್ಟ, ವೈವಿಧ್ಯ ಸಂಸ್ಕೃತಿಗೂ ನಾಂದಿ ಹಾಡಿತ್ತು, ಅಲ್ಲದೇ ಭತ್ತದ ಗದ್ದೆಗಳು ವಿವಿಧ ಜೀವವೈವಿಧ್ಯಗಳ ಆಶ್ರಯತಾಣವಾಗಿತ್ತು. ಮಲೆನಾಡಿನ ಕೂಲಿ ಕಾರ್ಮಿಕರಿಗೆ ಭತ್ತದ ಕೃಷಿ ಋತುಮಾನದ ಉದ್ಯೋಗ ನೀಡುತ್ತಾ ಬಡವರ ಕೂಳಿಗೂ ಆಶ್ರಯವಾಗಿತ್ತು.

ಆದರೆ ಪ್ರಸಕ್ತ ಮಲೆನಾಡಿನಲ್ಲಿ ಭತ್ತದ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದು, ಭತ್ತದ ಗದ್ದೆಗಳಲ್ಲಿ ಕಾಫಿ, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಭತ್ತದ ಗದ್ದೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಸಣ್ಣ ಕೃಷಿಕರಿಂದ ಹಿಡಿದು ಭೂ ಮಾಲಕರೂ ನೂರಾರು ಎಕರೆ ಭತ್ತದ ಕೃಷಿ ಮಾಡುತ್ತಾ ನೆಮ್ಮದಿ ಜೀವನ ನಡೆಸುತ್ತಿದ್ದ ಕಾಲ ಪ್ರಸಕ್ತ ಮಲೆನಾಡಿನಲ್ಲಿಲ್ಲ. ಇದಕ್ಕೆ ಭತ್ತದ ಕೃಷಿ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಕಾರಣವಾಗಿವೆ.

ಭತ್ತದ ಕೃಷಿಕರು ಪ್ರಸಕ್ತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಭತ್ತದ ಕೃಷಿಗೆ ತಗಲುವ ಅಧಿಕ ವೆಚ್ಚ, ಕಾರ್ಮಿಕರ ಕೊರತೆ, ಅತೀವೃಷ್ಟಿ, ರಸಗೊಬ್ಬರಗಳ ಬೆಲೆ ಗಗನಕ್ಕೇರಿರುವುದು ರೈತರು ಭತ್ತದ ಕೃಷಿಯಿಂದ ವಿಮುಖರಾಗಲು ಪ್ರಮುಖ ಕಾರಣವಾಗಿದೆ.

ಈ ಮಧ್ಯೆ ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರೀ ಮಳೆಯಿಂದಾಗಿ ನದಿ, ಹಳ್ಳಕೊಳ್ಳಗಳಲ್ಲಿ ನೆರೆ ಉಂಟಾಗಿ ನೀರು ನದಿ ಪಾತ್ರದಲ್ಲಿನ ಭತ್ತದ ಗದ್ದೆಗಳನ್ನು ಆಪೋಶನ ಪಡೆಯುತ್ತಿವೆ. ಭತ್ತದ ಗದ್ದೆಗಳಲ್ಲಿ ನದಿಗಳ ಹೂಳು ತುಂಬಿಕೊಂಡು ಭತ್ತದ ಕೃಷಿಗಳು ಫಲವತ್ತತೆಯನ್ನೇ ಕಳೆದುಕೊಳ್ಳುತ್ತಿವೆ.

ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಭತ್ತದ ಕೃಷಿಕರಿದ್ದು, ಬಹುತೇಕ ಗದ್ದೆಗಳು ಹಳ್ಳಕೊಳ್ಳಗಳ ಪಾತ್ರದಲ್ಲಿರುವುದರಿಂದ ಭಾರೀ ಮಳೆ ಸಂದರ್ಭ ಹಳ್ಳಗಳ ನೆರೆ ನೀರು ಭತ್ತದ ಗದ್ದೆಗಳ ಮೇಲೆ ಹರಿದು ಬೆಳೆ ನಷ್ಟ ಸಂಭವಿಸುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆಗೆ ನಾಟಿ ಮಾಡಿದ್ದ ನೂರಾರು ಎಕರೆ ಭತ್ತದ ಗದ್ದೆಗಳು ನೆರೆ ನೀರಿಗೆ ಸಿಲುಕಿ ಬೆಳೆ ನಾಶವಾಗಿದೆ. ಬೆಳೆ ನಷ್ಟಕ್ಕೆ ಸರಕಾರ ನೀಡುವ ಕನಿಷ್ಠ ಪರಿಹಾರಧನ ರೈತರು ಕೃಷಿಗೆ ಮಾಡಿದ ಖರ್ಚಿಗೂ ಸಾಲದಾಗಿದ್ದು ಪರಿಣಾಮ ಭತ್ತದ ಕೃಷಿ ಮಲೆನಾಡಿನಿಂದ ಹಂತಹಂತವಾಗಿ ಕಣ್ಮರೆಯಾಗುವಂತಾಗಿದೆ. ಸರಕಾರ ಭತ್ತದ ಬೆಳೆಗೆ ಬೆಂಬಲ ಬೆಲೆಯಂತಹ ಪ್ರೋತ್ಸಾಹದ ಮೂಲಕ ಉತ್ತೇಜನ ನೀಡದಿದ್ದಲ್ಲಿ ಮಲೆನಾಡಿನಿಂದ ಭತ್ತದ ಕೃಷಿ ಸಂಪೂರ್ಣ ಕಣ್ಮರೆಯಾಗುವ ದಿನ ದೂರವಿಲ್ಲ.

ಭತ್ತ ಬೆಳೆದರೆ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಸಿಗುವುದಿಲ್ಲ. ಭತ್ತದ ಕೃಷಿ ಬಿಟ್ಟು ಅಡಿಕೆ ಕೃಷಿ ಮಾಡುವ ಚಿಂತನೆ ಮಾಡಿದ್ದೆ. ಭತ್ತ ಬೆಳೆಯದಿದ್ದಲ್ಲಿ ನನ್ನ ಕುಟುಂಬ ಉಪವಾಸ ಬೀಳುತ್ತದೆ. ಆದ್ದರಿಂದ ಇರುವ ಸ್ವಲ್ಪ ಜಾಗದಲ್ಲಿ ಭತ್ತವನ್ನೇ ಬೆಳೆಯುತ್ತಿದ್ದೇನೆ. ಆದರೆ ಭಾರೀ ಮಳೆಯಿಂದಾಗಿ ಈ ಬಾರಿ ನಾಟಿ ಮಾಡಿದ್ದ ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ಸರಕಾರ ನಮ್ಮಂತಹ ಕೃಷಿಕರ ನೆರವಿಗೂ ಬರುತ್ತಿಲ್ಲ. ಹೊಟ್ಟೆಪಾಡಿಗಾಗಿ ಭತ್ತದ ಕೃಷಿ ಮಾಡುತ್ತಿದ್ದೇವೆ. ಇದರಿಂದ ಲಾಭ ಇಲ್ಲ, ಪ್ರತೀ ಬಾರಿ ಭತ್ತ ಬೆಳೆಯಲು ಸಾಲ ಮಾಡಲೇಬೇಕು. 1ಎಕರೆ ಭತ್ತದ ಗದ್ದೆ ಇದ್ದರೂ ಕೂಲಿ ಕೆಲಸ ಮಾಡಲೇಬೇಕು. 1ಎಕರೆಯಲ್ಲಿ ಕಾಫಿ, ಅಡಿಕೆ ತೋಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ. ನಷ್ಟದ ಕಾರಣದಿಂದಾಗಿ ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಕಣ್ಮರೆಯಾಗುತ್ತಿವೆ.

- ಆನಂದ, ಭತ್ತದ ಕೃಷಿಕ, ಕೋಣೇಬೈಲು, ಕಳಸ ತಾಲೂಕು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್.ಶಿವು

contributor

Similar News