ರಾಹುಲ್ ಗಾಂಧಿಯವರಿಗೆ ಮಂದಿರ ಪ್ರವೇಶ ನಿರ್ಬಂಧ ಯಾವ ರೀತಿಯ ರಾಜಕೀಯ?
ಹಿಂದುತ್ವದ ಹೆಸರಿನ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಅವರದೇ ಪಕ್ಷದ ಅಧಿಕಾರವಿರುವ ಅಸ್ಸಾಂನಲ್ಲಿ ಇದೆಂಥ ಕೀಳು ರಾಜಕೀಯ? ಅಯೋಧ್ಯೆಯ ಕಾರ್ಯಕ್ರಮದಲ್ಲಿ ಭಾಗವಹಿಸದವರೆಂಬ ಕಾರಣಕ್ಕೆ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಭೇಟಿ ನೀಡಬಯಸಿದ್ದ ದೇವಸ್ಥಾನಕ್ಕೆ ಪ್ರವೇಶ ನೀಡದೆ ಸೇಡು ತೀರಿಸಿಕೊಳ್ಳಲಾಯಿತೇ?
ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವಾಗಲೇ ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇವಸ್ಥಾನವೊಂದಕ್ಕೆ ಹೋಗದಂತೆ ತಡೆಯಲಾಗಿದೆ. ಒಂದೆಡೆ ಪ್ರಧಾನಿ ಮಂದಿರಕ್ಕೆ ಹೋಗುವಾಗ ಇಡೀ ದೇಶವೇ ಅದರ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಮಂದಿರಕ್ಕೆ ಹೋಗುತ್ತಿದ್ದ ವಿಪಕ್ಷ ನಾಯಕನಿಗೆ ಪ್ರವೇಶ ನಿರಾಕರಿಸಲಾಗಿದೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ಸಂಸದ ಹಾಗೂ ಶಾಸಕರಿಗೆ ಪ್ರವೇಶ ಕಲ್ಪಿಸಿ ರಾಹುಲ್‌ರನ್ನು ಮಾತ್ರ ತಡೆ ಹಿಡಿಯಲಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ, ತಾವು ಮಾಡಿರುವ ಅಪರಾಧವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶದಲ್ಲಿ ಮಂದಿರವೇ ಆವರಿಸಿಕೊಂಡಿರುವಾಗ ಒಬ್ಬರಿಗೆ ಮಂದಿರ ಪ್ರವೇಶಕ್ಕೆ ನಿರ್ಬಂಧಿಸಿರುವುದು ಯಾವ ರೀತಿಯ ರಾಜಕೀಯ?
ಯಾರನ್ನು ಪಪ್ಪು ಎಂದು ಇದೇ ಬಿಜೆಪಿ ಹಿಂದೊಮ್ಮೆ ಆಡಿಕೊಂಡಿತ್ತೋ, ಆ ರಾಹುಲ್ ಗಾಂಧಿಯವರ ಯಾತ್ರೆಯ ಬಗ್ಗೆ ಬಿಜೆಪಿಗೆ ಈಗ ಭಯವಾಗಿದೆಯೇ? ಇದು ದ್ವೇಷ ರಾಜಕೀಯ ಅಲ್ಲವೇ?
ಭಾರತ ಜೋಡೊ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 15ನೇ ಶತಮಾನದ ಅಸ್ಸಾಮಿ ಸಂತ ಶ್ರೀಮಂತ ಶಂಕರದೇವ ಅವರ ಜನ್ಮ ಸ್ಥಳವಾದ ಬಟದ್ರವ ಸತ್ರ ದೇಗುಲಕ್ಕೆ ಹೋಗದಂತೆ ತಡೆಯಲಾಯಿತು.
ಹಿಂದುತ್ವದ ಹೆಸರಿನ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಅವರದೇ ಪಕ್ಷದ ಅಧಿಕಾರವಿರುವ ಅಸ್ಸಾಂನಲ್ಲಿ ಇದೆಂಥ ಕೀಳು ರಾಜಕೀಯ? ಅಯೋಧ್ಯೆಯ ಕಾರ್ಯಕ್ರಮದಲ್ಲಿ ಭಾಗವಹಿಸದವರೆಂಬ ಕಾರಣಕ್ಕೆ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಭೇಟಿ ನೀಡಬಯಸಿದ್ದ ದೇವಸ್ಥಾನಕ್ಕೆ ಪ್ರವೇಶ ನೀಡದೆ ಸೇಡು ತೀರಿಸಿಕೊಳ್ಳಲಾಯಿತೇ?
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ದಿನವೇ ಸಂತ ಶ್ರೀಮಂತ ಶಂಕರ ದೇವ ಅವರ ಜನ್ಮಸ್ಥಳದ ದೇಗುಲಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವುದು ಸರಿಯಲ್ಲ. ಇದು ಅನಗತ್ಯ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿರುವುದೇ ನಿಜಕ್ಕೂ ವಿಚಿತ್ರವಾಗಿದೆ. ರಾಹುಲ್ ಗಾಂಧಿ ಆ ದೇವಾಲಯಕ್ಕೆ ಭೇಟಿ ನೀಡಿದ್ದರೆ ಅದು ಹೇಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿತ್ತು?
ಪಕ್ಷದ ಸಂಸದ ಗೌರವ್ ಗೊಗೊಯಿ ಹಾಗೂ ಬಟದ್ರವ ಶಾಸಕ ಸಿಬಾಮೋನಿ ಬೋರಾ ಅವರಿಬ್ಬರು ಶಂಕರದೇವರ ಜನ್ಮಸ್ಥಳಕ್ಕೆ ಹೋಗಲು ಅವಕಾಶ ನೀಡಲಾಗಿದೆ.
ಅಸ್ಸಾಂ ಸರಕಾರ ಮುಂದೆ ಮಾಡುತ್ತಿರುವ ನೆಪವೇ ಬಹಳ ವಿಚಿತ್ರವಾಗಿದೆ. ಆದರೆ ಅದರ ರಾಜಕೀಯ ಮಾತ್ರ ಇದರಿಂದ ಬಟಾಬಯಲಾಗಿದೆ.
ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದ, ಈಗ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ಕಟ್ಟಾ ವಿರೋಧಿಯಾಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ರಾಹುಲ್ ನಡುವಿನ ಜಿದ್ದಾಜಿದ್ದಿ ಈಗ ತಾರಕಕ್ಕೆ ಏರಿದೆ. ಇದರ ಒಂದು ದಿನ ಮೊದಲು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ನಡೆದ ಆರೋಪವೂ ಕೇಳಿಬಂದಿದೆ.
ಇದು ಮೇಲ್ನೋಟಕ್ಕೆ ರಾಹುಲ್ ವಿರುದ್ಧದ ಹಿಮಂತ ಬಿಸ್ವಾ ಶರ್ಮಾ ಹಗೆತನದಂತೆ ಕಂಡರೂ, ರಾಹುಲ್ ಪ್ರಕಾರ, ಶರ್ಮಾ ಒಬ್ಬರೇ ಇಂಥದೊಂದು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಅವರು ತಮಗೆ ಮೇಲಿಂದ ಏನು ನಿರ್ದೇಶನ ಇದೆಯೋ ಅದನ್ನು ಪಾಲಿಸಿದ್ದಾರಷ್ಟೆ.
ದೇಗುಲಕ್ಕೆ ಯಾರು ಭೇಟಿ ನೀಡಬೇಕು, ಯಾರು ಭೇಟಿ ನೀಡಬಾರದು ಎಂದು ಪ್ರಧಾನಿ ಮೋದಿ ನಿರ್ಧರಿಸುತ್ತಾರೆಯೇ ಎಂದೂ ರಾಹುಲ್ ಗಾಂಧಿ ಕೇಳಿದ್ದಾರೆ.
ಹಾಗಿದ್ದರೆ ದೇಶದಲ್ಲಿ ವಿಪಕ್ಷ ನಾಯಕರೊಬ್ಬರು ದೇವಸ್ಥಾನ ಪ್ರವೇಶ ಮಾಡಬೇಕೇ ಬೇಡವೇ ಎಂಬುದನ್ನೂ ಪ್ರಧಾನಿಯೇ ನಿರ್ಧರಿಸುವ ಸ್ಥಿತಿ ಬಂದುಬಿಟ್ಟಿದೆಯೆ?
ಕಾನೂನು ಸುವ್ಯವಸ್ಥೆ ಬಿಕ್ಕಟ್ಟು ಎನ್ನಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ಇರುವುದರಿಂದ ಇಲ್ಲಿಯೂ ದೇವಸ್ಥಾನಕ್ಕೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಲಿದ್ದು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡಿದರೆ ನೂಕುನುಗ್ಗಲು ಉಂಟಾಗಬಹುದು ಎಂದೇ ನೆಪ ಹೇಳಲಾಗಿತ್ತು. ಆದರೆ, ಶಂಕರದೇವರ ದೇವಸ್ಥಾನದಲ್ಲಿ ಜನರೇ ಇರಲಿಲ್ಲ, ದೇವಸ್ಥಾನ ಸಂಪೂರ್ಣ ಖಾಲಿಯಿತ್ತು ಎಂಬುದನ್ನು ವರದಿಗಳು ಖಚಿತಪಡಿಸಿವೆ. ಒಳಗೆ ಹೋಗಿದ್ದ ಸಂಸದ ಗೌರವ್ ಗೊಗೊಯಿ ಕೂಡ ಅದನ್ನೇ ಹೇಳಿದ್ದರು. ಹಾಗಾಗಿ ಅಂಥದೊಂದು ನೆಪ ಮುಂದಿಟ್ಟು ರಾಹುಲ್ ಅವರನ್ನು ತಡೆದುದರ ಹಿಂದಿರುವ ರಾಜಕೀಯ ಉದ್ದೇಶ ಏನು ಎನ್ನುವುದು ಸ್ಪಷ್ಟವಾಗುತ್ತದೆ.
ರಾಹುಲ್ ಅವರಿಗೆ ಪ್ರವೇಶ ನಿರಾಕರಿಸಿರುವುದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಮುಖಂಡರು ಧರಣಿ ಕುಳಿತಿದ್ದಾರೆ. ರಾಹುಲ್ ಕೂಡಾ ಇದರಲ್ಲಿ ಪಾಲ್ಗೊಂಡರು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸೇವಾದಳದ ಮುಖ್ಯಸ್ಥ ಲಾಲ್ಜಿ ದೇಸಾಯಿ ಟೀಕಿಸಿದ್ದಾರೆ.
ಶಂಕರದೇವರ ತತ್ವದಲ್ಲಿ ನಂಬಿಕೆಯಿಟ್ಟವನು ನಾನು. ಅಲ್ಲದೆ ನಮಗೆ ಒಗ್ಗೂಡಿಸುವುದರಲ್ಲಿ ನಂಬಿಕೆಯೇ ಹೊರತು ದ್ವೇಷವನ್ನು ಹರಡುವುದರಲ್ಲಲ್ಲ ಎಂದೂ ರಾಹುಲ್ ಹೇಳಿದ್ದಾರೆ.
‘‘ಅಸ್ಸಾಂ ಮತ್ತು ಇಡೀ ದೇಶ ಶಂಕರದೇವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂಬುದು ನನ್ನ ನಂಬಿಕೆ’’ ಎಂಬ ರಾಹುಲ್ ಮಾತು ಮಹತ್ವದ್ದು.
ಹಿಂದುತ್ವದ ಮಾತನಾಡುವ ಮಂದಿ, ನಿಜವಾಗಿಯೂ ಸಂತರಾದವರ ತತ್ವಗಳನ್ನು ಅನುಸರಿಸುತ್ತಿದ್ದಾರೆಯೆ? ರಾಮರಾಜ್ಯದ ಮಾತನಾಡುತ್ತಿರುವವರ ಮನಸ್ಸು ರಾಮನ ಆದರ್ಶಗಳ ಹತ್ತಿರವಾದರೂ ಸುಳಿದಾಡಿದ್ದು ಇದೆಯೆ?
ಇವರಿಗೆ ರಾಜಕಾರಣಕ್ಕಾಗಿ ಮಾತ್ರವೇ ರಾಮ ಬೇಕು, ಮಂದಿರ ಬೇಕು. ಅದನ್ನೂ ದ್ವೇಷ ಹರಡುವುದಕ್ಕಾಗಿಯೇ ಬಳಸಲಾಗುತ್ತಿದೆ ಎಂಬುದೇ ವಿಪರ್ಯಾಸ.
ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆದ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು.
ಅಲ್ಲದೆ, ಯಾತ್ರೆಯಲ್ಲಿ ಪಾಲ್ಗೊಳ್ಳದಿರುವಂತೆ ಜನರನ್ನು ಬೆದರಿಸಲಾಗುತ್ತಿದೆ ಎಂದು ಕೂಡ ರಾಹುಲ್ ಆರೋಪಿಸಿದ್ದರು. ಹಾಗಾದರೆ ಮೋದಿಯವರಿಗೆ, ಹಿಮಂತ ಬಿಸ್ವಾ ಶರ್ಮಾಗೆ, ಬಿಜೆಪಿಗೆ ಯಾಕೆ ರಾಹುಲ್ ಬಗ್ಗೆ ಇಷ್ಟೊಂದು ಭಯ? ಯಾಕೆ ಅವರಿಗೆ ತಮ್ಮ ಬಲಾಢ್ಯ ರಾಜಕೀಯದ ಬಗ್ಗೆ ನಂಬಿಕೆ ಇಲ್ಲವೇ?
ಚುನಾವಣೆಯ ಗೆಲುವಿನ ಆತಂಕ ಬಿಜೆಪಿಯನ್ನು ಕಾಡುತ್ತಿದ್ದು, ಅದು ಆತಂಕದಲ್ಲಿರುವಾಗಲೇ ರಾಹುಲ್ ಜನರ ನಡುವೆ ಹೋಗುತ್ತಿರುವುದು, ಅವರೊಡನೆ ಸಂವಾದದಲ್ಲಿ ತೊಡಗುವುದು, ಜನರ ನಡುವೆ ಅವರು ಹೊಸ ಅಲೆಯೊಂದನ್ನು ಸೃಷ್ಟಿಸುವುದು ಬಿಜೆಪಿಯ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದೆಯೇ?
ಅಯೋಧ್ಯೆಯ ಅಷ್ಟೊಂದು ಅಬ್ಬರದ ಕಾರ್ಯಕ್ರಮದಲ್ಲಿ ತಾನು ಭಾಗಿಯಾಗಿದ್ದುದರ ನಡುವೆಯೂ,
ದೇಶದ ಬಹುತೇಕ ಎಲ್ಲ ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ, ಫೇಸ್‌ಬುಕ್‌ನಲ್ಲಿ, ವಾಟ್ಸ್‌ಆ್ಯಪ್, ಟ್ವಿಟರ್‌ನಲ್ಲಿ, ಗೋಡೆ ಗೋಡೆಗಳಲ್ಲಿ, ಮೊಬೈಲ್‌ಗಳಲ್ಲಿ ರಾಮ ಮಂದಿರ ಹಾಗೂ ಮೋದಿಯವರೇ ಆವರಿಸಿಕೊಂಡಿರುವಾಗ ಒಂದು ದೇವಸ್ಥಾನಕ್ಕೆ ರಾಹುಲ್ ಗಾಂಧಿ ಹೋದ ಕೂಡಲೇ ಏನೋ ಅವಾಂತರ ಆಗಿ ಬಿಡುತ್ತೆ ಎಂದು ಯೋಚಿಸಲು ಕಾರಣವೇನು?
ಬಿಜೆಪಿಯವರ ಪ್ರಕಾರ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಬಿಜೆಪಿಗೇ ಲಾಭ ಆಗುತ್ತದೆ. ಅವರ ಪ್ರಕಾರ ರಾಹುಲ್ ಗಾಂಧಿಯನ್ನು ದೇಶದ ಜನರು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.
ಹಾಗಿದ್ದರೆ ಮತ್ತೆ ಯಾಕೆ ರಾಹುಲ್ ಗಾಂಧಿಯ ಭಾರತ ಜೋಡೋ ನ್ಯಾಯ ಯಾತ್ರೆ ಬಗ್ಗೆ ಬಿಜೆಪಿ ಇಷ್ಟೊಂದು ತಲೆ ಕೆಡಿಸಿಕೊಂಡಿದೆ?