‘ಸ್ವಚ್ಛ ಭಾರತ್’ ಅಭಿಯಾನ ಎಡವುತ್ತಿರುವುದೆಲ್ಲಿ?

ಶೌಚಾಲಯಕ್ಕೆ ನಿರಂತರ ನೀರು ಪೂರೈಕೆಯ ಕೊರತೆ, ಶೌಚಾಲಯಗಳ ಕಳಪೆ ನಿರ್ಮಾಣ ಮತ್ತು ಶೌಚಾಲಯ ಬಳಕೆಯ ಬಗ್ಗೆ ಗ್ರಾಮೀಣ ಮತ್ತು ಆದಿವಾಸಿ ಜನರಲ್ಲಿ ತಪ್ಪುಕಲ್ಪನೆ ಭಾರತದ ನೈರ್ಮಲ್ಯ ಮಿಷನ್‌ನ ಸಾಧನೆಯಲ್ಲಿ ಪ್ರಮುಖ ಸವಾಲುಗಳಾಗಿ ಉಳಿದಿವೆ. ಮೆಟ್ರೋ ಪ್ರದೇಶಗಳಲ್ಲಿ ಸಹ ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ಕೊರತೆಯಿದೆ. ತೆರೆದ ಜಾಗಗಳಲ್ಲಿ ಕಸವನ್ನು ಎಸೆಯುವುದು ಮತ್ತು ಘನ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಇಂದಿಗೂ ಮುಂದುವರಿಯುತ್ತಿದೆ.

Update: 2024-01-11 09:10 GMT

Photo: PTI 

‘ಸ್ವಚ್ಛ ಭಾರತ್’ ಅಭಿಯಾನ ಅಥವಾ ಸ್ವಚ್ಛ ಭಾರತ ಮಿಷನ್ ಭಾರತದಲ್ಲಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನವಾಗಿದೆ. ಈ ವರ್ಷ ಅದಕ್ಕೆ ದಶಕದ ಸಂಭ್ರಮ. ‘ಸ್ವಚ್ಛ ಭಾರತ್’ ಅಭಿಯಾನ ಮೂಲತಃ ಸ್ವಚ್ಛ ಮತ್ತು ಬಯಲು-ಮಲವಿಸರ್ಜನೆ-ಮುಕ್ತ ಭಾರತವನ್ನು ಸಾಧಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಈ ಕಾರ್ಯಕ್ರಮ ಶುಚಿತ್ವದ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ, ಬಯಲು ಮಲವಿಸರ್ಜನೆಯನ್ನು ತೊಡೆದುಹಾಕಲು ಶೌಚಾಲಯಗಳ ನಿರ್ಮಾಣ, ಸರಿಯಾದ ತ್ಯಾಜ್ಯ ನಿರ್ವಹಣೆ, ಕಸ ಮತ್ತು ನೈರ್ಮಲ್ಯ ಅಭ್ಯಾಸಗಳ ವಿಷಯದಲ್ಲಿ ವರ್ತನೆಯ ಬದಲಾವಣೆ ಮತ್ತು ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಸ್ವಚ್ಛ ಭಾರತ ಮಿಷನ್‌ನ ಮೂಲಮಂತ್ರವಾಗಿತ್ತು. ಈ ಕಾರ್ಯಕ್ರಮ ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಪರಿಸರದ ಸುಸ್ಥಿರತೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಶುಚಿತ್ವದ ಮಹತ್ವವನ್ನು ಒತ್ತಿಹೇಳುತ್ತದೆ.

‘ಸ್ವಚ್ಛ ಭಾರತ್’ ಅಭಿಯಾನವು ಸ್ವಚ್ಛತೆ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಒಂದು ಹಂತದವರೆಗೆ ಸಹಾಯ ಮಾಡಿದೆ, ‘ಸ್ವಚ್ಛ ಭಾರತ್’ ಅಭಿಯಾನ ಭಾರತದ ಅನೇಕ ಸಮುದಾಯಗಳಲ್ಲಿ ಆರೋಗ್ಯ ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಮೂಲಸೌಕರ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುವುದಕ್ಕೂ ಸಹಾಯ ಮಾಡಿದೆ. ಅಲ್ಲದೆ ರೂ.1.96 ಲಕ್ಷ ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದಲ್ಲಿ 66 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು 6 ಲಕ್ಷಕ್ಕೂ ಹೆಚ್ಚು ಸಮುದಾಯ/ಸಾರ್ವಜನಿಕ ಶೌಚಾಲಯಗಳನ್ನು ದೇಶಾದ್ಯಂತ ನಿರ್ಮಿಸಿರುವುದಾಗಿ ಕೇಂದ್ರ ಸರಕಾರ ಹೇಳಿಕೊಂಡಿದೆ.

ಆದರೆ ‘ಸ್ವಚ್ಛ ಭಾರತ್’ ಅಭಿಯಾನ ಯಶಸ್ಸಿಗಿಂತ ಹತ್ತು ಹಲವಾರು ಸಮಸ್ಯೆಗಳನ್ನು ಸಹ ಹೊತ್ತಿದೆ. ಬಯಲು ಶೌಚ ಮುಕ್ತ ಸ್ಥಿತಿಯಲ್ಲಿ ಒಂದಿಷ್ಟು ಪ್ರಗತಿ ಸಾಧಿಸಿದ್ದರೂ, ರಾಷ್ಟ್ರದಾದ್ಯಂತ ಸಂಪೂರ್ಣ ಬಯಲು ಶೌಚ ಮುಕ್ತ ಸ್ಥಿತಿಯನ್ನು ಸಾಧಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ. ಸ್ವಚ್ಛ ಭಾರತ ಅಭಿಯಾನವು ದೇಶಾದ್ಯಂತ ನೈರ್ಮಲ್ಯ ಮತ್ತು ಶುಚಿತ್ವವನ್ನು ಸುಧಾರಿಸುವಲ್ಲಿ ಸಾಧಾರಣ ಪ್ರಗತಿಯನ್ನು ಸಾಧಿಸಿದ್ದರೂ, ನಿರಂತರ ಯಶಸ್ಸು ಮತ್ತು ದೀರ್ಘಕಾಲೀನ ಪರಿಣಾಮಕ್ಕಾಗಿ ಇನ್ನೂ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಆದರೆ ಅಂತಿಮ ಗುರಿಗಳನ್ನು ಸಾಧಿಸಲು ಮೂಲಸೌಕರ್ಯ ಅಭಿವೃದ್ಧಿ, ನಡವಳಿಕೆಯ ಬದಲಾವಣೆ ಮತ್ತು ನೀತಿ ಅನುಷ್ಠಾನದಲ್ಲಿ ಶೂನ್ಯ ಪ್ರಯತ್ನವಾಗಿದೆ. ಇಂದಿಗೂ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೈರ್ಮಲ್ಯ ಸೌಲಭ್ಯಗಳ ಲಭ್ಯತೆ ಒಂದು ಪ್ರಮುಖ ಸವಾಲಾಗಿ ಉಳಿದಿದೆ, ಇದು ಇನ್ನೂ ಬಯಲು ಶೌಚಕ್ಕೆ ಕಾರಣವಾಗುತ್ತಿದೆ. ಇದು ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇದುವರೆಗೂ ಸಾಧಿಸಿದ ಶುಚಿತ್ವದ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಮತ್ತು ನಿರಂತರ ನಡವಳಿಕೆಯ ಬದಲಾವಣೆಯನ್ನು ಖಚಿತಪಡಿಸಿಕೊಳ್ಳುವುದು ಒಂದು ಪ್ರಮುಖ ಸವಾಲಾಗಿ ಉಳಿದಿದೆ. ಅಧ್ಯಯನಗಳ ಪ್ರಕಾರ ಉತ್ತಮ ಪ್ರಗತಿಯ ಹೊರತಾಗಿಯೂ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ನೈರ್ಮಲ್ಯ ಸೌಲಭ್ಯಗಳಲ್ಲಿ ಇನ್ನೂ ಗಮನಾರ್ಹ ಅಸಮಾನತೆ ಇದೆ. ಮುಖ್ಯವಾಗಿ ಅನೇಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರಿಯಾದ ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿ ಉಳಿದಿದೆ. ವರದಿಗಳ ಪ್ರಕಾರ ‘ಸ್ವಚ್ಛ ಭಾರತ್’ ಅಭಿಯಾನ ಅಡಿಯಲ್ಲಿ ಮೂಲಸೌಕರ್ಯ ನಿರ್ವಹಣೆ ವಿಚಾರ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿರ್ಮಿಸಿದ ಶೌಚಾಲಯಗಳ ನಿರ್ವಹಣೆ ಮತ್ತು ಸ್ವಚ್ಛತೆಯ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳುವುದು ನಿರಂತರ ಸವಾಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಕಳೆದ ಹತ್ತು ವರ್ಷದಲ್ಲಿ ನಿರ್ಮಿಸಲಾದ ಆರು ಕೋಟಿ ಶೌಚಾಲಯಗಳಲ್ಲಿ ಈಗಾಗಲೇ 1.3 ಕೋಟಿ ನಿಷ್ಕ್ರಿಯವಾಗಿವೆ. ಶೌಚಗೃಹಗಳನ್ನು ಜನರು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ.

ಇದರೊಂದಿಗೆ ಕೆಲವೆಡೆ ಒಳಚರಂಡಿ, ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಮತ್ತು ಶೌಚಾಲಯಗಳ ಸುಸ್ಥಿರ ನಿರ್ವಹಣೆ ಸಂಪೂರ್ಣ ಕುಸಿದಿದೆ. ಕೆಲವು ತಜ್ಞರ ಪ್ರಕಾರ ‘ಸ್ವಚ್ಛ ಭಾರತ್’ ಅಭಿಯಾನದ ಮುಖ್ಯ ದೌರ್ಬಲ್ಯಗಳೆಂದರೆ ಬೇಡಿಕೆಯಿಲ್ಲದ ಶೌಚಾಲಯ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಕಡ್ಡಾಯದ ಬದಲಿಗೆ ಸ್ವಯಂಪ್ರೇರಿತ ಪ್ರಚಾರದ ಸ್ವರೂಪ ಮತ್ತು ನೈರ್ಮಲ್ಯದ ಇತರ ಅಂಶಗಳ ಮೇಲೆ ಕಡಿಮೆ ಗಮನ ಇತ್ಯಾದಿ. ಎನ್‌ಆರ್‌ಎಚ್‌ಎಮ್ ವರದಿಗಳ ಪ್ರಕಾರ ಗ್ರಾಮೀಣ ಜನಸಂಖ್ಯೆಯ ಅರ್ಧದಷ್ಟು ಜನರು (ಶೇ.52.1) ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಾರೆ. ಇದರೊಂದಿಗೆ ಶೌಚಾಲಯಕ್ಕೆ ನಿರಂತರ ನೀರು ಪೂರೈಕೆಯ ಕೊರತೆ, ಶೌಚಾಲಯಗಳ ಕಳಪೆ ನಿರ್ಮಾಣ ಮತ್ತು ಶೌಚಾಲಯ ಬಳಕೆಯ ಬಗ್ಗೆ ಗ್ರಾಮೀಣ ಮತ್ತು ಆದಿವಾಸಿ ಜನರಲ್ಲಿ ತಪ್ಪುಕಲ್ಪನೆ ಭಾರತದ ನೈರ್ಮಲ್ಯ ಮಿಷನ್‌ನ ಸಾಧನೆಯಲ್ಲಿ ಪ್ರಮುಖ ಸವಾಲುಗಳಾಗಿ ಉಳಿದಿವೆ. ಮೆಟ್ರೋ ಪ್ರದೇಶಗಳಲ್ಲಿ ಸಹ ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ಕೊರತೆಯಿದೆ. ತೆರೆದ ಜಾಗಗಳಲ್ಲಿ ಕಸವನ್ನು ಎಸೆಯುವುದು ಮತ್ತು ಘನ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಇಂದಿಗೂ ಮುಂದುವರಿಯುತ್ತಿದೆ.

‘ಸ್ವಚ್ಛ ಭಾರತ್’ ಅಭಿಯಾನ ಸ್ವಚ್ಛತೆ ಮತ್ತು ನೈರ್ಮಲ್ಯದ ಕಡೆಗೆ ಜನರ ಅರಿವು ಮತ್ತು ವರ್ತನೆಯ ಬದಲಾವಣೆಗಳನ್ನು ಉತ್ತೇಜಿಸಲು ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳಲ್ಲಿ ವೈಫಲ್ಯ ಕಂಡಿದೆ. ನಗರ ಪ್ರದೇಶಗಳು ಉತ್ತಮ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದ್ದರೂ, ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳು ಸಾಮಾನ್ಯವಾಗಿ ಮೂಲಭೂತ ನೈರ್ಮಲ್ಯ ಸೌಲಭ್ಯಗಳನ್ನು ಇನ್ನೂ ಹೊಂದಿಲ್ಲ. ಇವರುಗಳ ಮನಸ್ಥಿತಿಯೂ ಬದಲಾಗಿಲ್ಲ. ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಜಾರಿಗೊಳಿಸುವಿಕೆಯು ಸ್ವಚ್ಛ ಭಾರತದ ಯಶಸ್ಸಿಗೆ ತೊಡಕಾಗಿದೆ. ಮರುಬಳಕೆ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ತಂತ್ರಜ್ಞಾನವನ್ನು ಬಳಸುವುದರಲ್ಲಿ ಪರಿಣಾಮಕತೆಯಿಲ್ಲ. ಈ ಸವಾಲುಗಳನ್ನು ಎದುರಿಸಲು ಸರಕಾರದ ಕ್ರಮಗಳು, ಸಮುದಾಯದ ಸಹಭಾಗಿತ್ವ, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವಲ್ಲಿ ಮತ್ತು ಪರಿಣಾಮಕಾರಿ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಂತರ ಪ್ರಯತ್ನಗಳ ವಿಚಾರದಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಇನ್ನೂ ಬಹುದೂರ ಸಾಗಬೇಕಾಗಿದೆ.

ಹೌದು, ವಿಶೇಷವಾಗಿ ಈ ಜಾಗೃತಿ ಅಭಿಯಾನದ ನಂತರ ಸ್ವಚ್ಛತೆಯ ವಿಚಾರದಲ್ಲಿ ಭಾರತದ ಜನರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಷ್ಟಕ್ಕೆ ಅದು ಸಾಲದು. ಆದರೆ ಇದು ಜೀವನವಿಡಿ ಇರಬೇಕು. ಶೌಚಾಲಯ ಬಳಸಲು ಜನರನ್ನು ಪ್ರೇರೇಪಿಸಬೇಕು. ಸ್ವಚ್ಛತೆಯ ವಿಚಾರದಲ್ಲಿ ಜನರಿಗೆ ನಿರಂತರ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಇದರೊಂದಿಗೆ ನಾವು ಸೃಷ್ಟಿಸುವ ಕೊಳೆಯನ್ನು ವಿಲೇವಾರಿ ಮಾಡುವ ನಮ್ಮ ಪೌರಕಾರ್ಮಿಕರನ್ನು ಸಹ ನಾವು ಗೌರವಿಸಬೇಕು. ನಗರ ಮತ್ತು ಇತರ ಪುರಸಭೆಗಳು ಮತ್ತು ಪಂಚಾಯತ್‌ಗಳ ಕಾರ್ಪೊರೇಷನ್‌ಗಳ ದೈನಂದಿನ ಕೂಲಿ ಕಾರ್ಮಿಕರು ಯಾವುದೇ ರಕ್ಷಣಾತ್ಮಕ ಬಟ್ಟೆ, ಕೈಗವಸು ಅಥವಾ ಮುಖವಾಡಗಳಿಲ್ಲದೆ ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಸಮಾಜದ ಎಲ್ಲಾ ವರ್ಗಗಳಿಗೆ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ ಎಲ್ಲಾ ನೈರ್ಮಲ್ಯ ಕಾರ್ಮಿಕರು ಮತ್ತು ಅನೌಪಚಾರಿಕ ತ್ಯಾಜ್ಯ ತೆಗೆಯುವವರಿಗೆ ಗೌರವಯುತ ಜೀವನೋಪಾಯವನ್ನು ಒದಗಿಸಲು ‘ಸ್ವಚ್ಛ ಭಾರತ್’ ಮಿಷನ್ ಮುಖ್ಯವಾಗಿ ಒತ್ತು ನೀಡಬೇಕಾಗಿದೆ. ಶುಚಿತ್ವದತ್ತ ಗಮನಹರಿಸುವುದು ಸರಿಯಾಗಿದೆ. ಆದರೆ ವರ್ಷದ ಒಂದು ದಿನದಲ್ಲಿ ಅದನ್ನು ಮಾಡುವುದು ಮತ್ತು ಉಳಿದ ಎಲ್ಲಾ ದಿನಗಳಲ್ಲಿ ಮರೆಯುವುದು ಆಗಬಾರದು. ಎಲ್ಲಾ ರಾಜ್ಯವು ನಿಜವಾಗಿಯೂ ಬಯಲು ಶೌಚ ಮುಕ್ತವಾಗಿದೆಯೇ ಎಂದು ಸರಕಾರವು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ನಿರಂತರವಾಗಿ ಹಣಕಾಸಿನ ಸೌಲಭ್ಯಗಳನ್ನು ಸರಕಾರಗಳು ಒದಗಿಸಬೇಕಿದೆ. ಸೆಲೆಬ್ರಿಟಿಗಳು ಈ ಕಾರ್ಯಕ್ರಮಗಳಿಗೆ ರಾಯಭಾರಿಗಳಾಗಬೇಕಿದೆ. ಕಾಲಕಾಲಕ್ಕೆ ಇದರ ಮೌಲ್ಯಮಾಪನವಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಡಿ.ಸಿ. ನಂಜುಂಡ

contributor

Similar News