ಜಾತಿ ಜನಗಣತಿ ಚುನಾವಣಾ ಪ್ರಣಾಳಿಕೆ ವಿಚಾರವೇಕಾಯಿತು?
ಕೋವಿಡ್-2019 ತರುವಾಯ ಜನಗಣತಿ-2021 ತಡವಾಗಿಯಾದರೂ ಆರಂಭವಾಗುವುದೆಂಬ ಆಶಯಗಳು ಮುಖ್ಯವಾಹಿನಿ ಚರ್ಚೆಯಲ್ಲಿ ದನಿಗೂಡಿದ್ದವು. ಆದರೆ ಭಾಜಪ ನೇತೃತ್ವದ ಎನ್‌ಡಿಎ ಕೇಂದ್ರ ಸರಕಾರ ಅದನ್ನು ಮುನ್ನಡೆಸುವ ಧೈರ್ಯ ಮಾಡಲಿಲ್ಲ. ಈ ಬಗ್ಗೆ ಅನೇಕ ಒತ್ತಡಗಳಿದ್ದರೂ ನಿರಾಸಕ್ತಿಯ ಉತ್ತರ ಮೌನದಲ್ಲಿತ್ತು. ಬಹುಶಃ ಅದು ಜನರ ಆಶೋತ್ತರಗಳನ್ನು ಈಡೇರಿಸಿದ್ದರೆ ಹಿಂದುಳಿದ ವರ್ಗಗಳ ಜನಸಂಖ್ಯಾ ದತ್ತಾಂಶ ಅಭಿವೃದ್ಧಿಯ ಚರ್ಚಾ ಮಾನದಂಡವಾಗುತ್ತಿತ್ತು. ರಾಜಕೀಯ ಪಕ್ಷಗಳಿಂದು ಜಾತಿ ಜನಗಣತಿಯನ್ನು ಲೋಕಸಭಾ ಚುನಾವಣಾ ಜಗಲಿಯ ಮೇಲೇರಿಸಲು ಬರುತ್ತಿರಲಿಲ್ಲ. ಈ ಅವಕಾಶಗಳನ್ನು ಬಳಸಿಕೊಂಡಿರುವ, ಕಾಂಗ್ರೆಸ್ ಮತ್ತು ಅದರ ಅಂಗ ಪಕ್ಷಗಳು ಜಾತಿ ಜನಗಣತಿ ನಡೆಸುವ ವಿಚಾಕ್ಕೆ ತಮ್ಮ ಪ್ರಣಾಳಿಕೆಯಲ್ಲಿ ಪ್ರಾಶಸ್ತ್ಯ ನೀಡಿ ಜನ ಬೆಂಬಲಕ್ಕೆ ಮುಂದಾಗಿವೆ. ಈ ಘೋಷಣೆ ಅಸಾಂವಿಧಾನಿಕವಲ್ಲ ಅಥವಾ ಯಾವುದೇ ಸಮುದಾಯ ಹಿತಾಸಕ್ತಿಯ ವಿರುದ್ಧವಾಗಿಲ್ಲ.
ಜನಗಣತಿ ದೇಶದ ಜನಸಂಖ್ಯೆ ಗುಣವಿಶೇಷಣಗಳನ್ನು ಸಾದರಪಡಿಸುವ ವೈಜ್ಞಾನಿಕ ವಿಧಾನ. ಅದರ ಪರಿಭಾಷೆಯಲ್ಲೇ ಹೇಳುವುದಾದರೆ, ಸಾರ್ವಜನಿಕರ (Pubಟiಛಿs) ಎಣಿಕೆ (ಅouಟಿಣ) ಎಂದಾಗುತ್ತದೆ. ಜಾಗತಿಕವಾಗಿ ಜನಗಣತಿ ಸಾಮಾನ್ಯವಾಗಿ ಮಾನವ ಬಂಡವಾಳ ಮತ್ತು ಅದರ ಗುಣಸ್ವಭಾವವನ್ನು ಮಾಹಿತಿ ಸ್ವರೂಪದಲ್ಲಿ ಪ್ರಚುರ ಮಾಡುತ್ತದೆ. ಭಾರತದಲ್ಲಿಯೂ ಜನಗಣತಿ ಪ್ರಾಚೀನದಿಂದಲೂ ಪ್ರಾದೇಶಿಕ ಮತ್ತು ಸೂಕ್ಷ್ಮ ಮಟ್ಟದಲ್ಲಿ ಜರುಗಿವೆ. ಮೊಗಲರ ಕಾಲದಲ್ಲಿಯೂ ನಡೆದಿದ್ದು, ಅಕ್ಬರ್‌ನ ‘ಐನ್ಹೀ-ಇ-ಅಕ್ಬರಿ’ಯಲ್ಲಿ ಅವನ ಸಾಮ್ರಾಜ್ಯದ ಸಮಸ್ತ ವಿಷಯಗಳ ಕುರಿತಾದ ಉಲ್ಲೇಖವಿದೆ. ಬ್ರಿಟಿಷರ ಕಂಪೆನಿ ಆಡಳಿತವಿದ್ದಾಗ ಅಲಹಬಾದ್(1824), ಬನಾರಸ್(1827-28) ಇತರ ಪಟ್ಟಣ/ಪ್ರದೇಶಗಳಲ್ಲಿ ಪುರಸಭೆಗಳಿಂದ ಜನಗಣತಿ ನಡೆದಿದೆ. ಆದರೆ, ಪ್ರಥಮ ಸಾರ್ವತ್ರಿಕ ಜನಗಣತಿ 1872ರಲ್ಲಿ ಆದಾಗ 17 ಪ್ರಶ್ನಾವಳಿಗಳಿದ್ದವು. ಜನರಲ್ ಮೆಯೋ 1881ರಲ್ಲಿ ಅದನ್ನು ಪರಿಷ್ಕರಿಸಿದ; ಡಬ್ಲು.ಸಿ. ಪ್ಲೋಡೆನ್ ಆಯುಕ್ತರಾಗಿದ್ದರು. ಬ್ರಿಟಿಷ್‌ಭಾರತದಲ್ಲಿ 1881-1941 ಸಾರ್ವತ್ರಿಕ 7 ಜನಗಣತಿ ನಡೆದಿದ್ದು, ಅವುಗಳು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗಿ 13, 14, 16, 16, 16, 18 ಮತ್ತು 22 ಪ್ರಶ್ನಾವಳಿಗಳನ್ನು ಅನುಕ್ರಮವಾಗಿ ಸಾದರಪಡಿಸಿವೆ. ಅವುಗಳಲ್ಲಿ ಜನಾಂಗ, ಭಾಷೆ, ಧರ್ಮ, ಜಾತಿ/ಪ್ರವರ್ಗ ಹಾಗೂ ಜನ ಜೀವನ ಸ್ವರೂಪಗಳ ಕಡೆಗೂ ದೃಷ್ಟಿ ಹರಿಸಿದ್ದವು. ಅಲ್ಲಿಯ ತನಕ ಜಾತಿ, ಮತ್ತು ಅದರ ಮೇಲಿನ ಸಂಗತಿಗಳು ಸ್ಥಾನಿಕವಾಗಿದ್ದರೂ ವರ್ಣಾಶ್ರಮ ಸಾಮಾಜಿಕ ವಿಂಗಡನೆಗೆ ಅನುಗುಣವಾಗಿದ್ದವು.
ಇಂದಿಗೂ ಜಾತಿಗಳು ಬ್ರಿಟಿಷರಿಂದ ಉಗಮವಾದವೆಂದು ಪ್ರತಿಪಾದಿಸುವ ಜಾಣರಿದ್ದಾರೆ. ನೈಜವಾಗಿ ಹೇಳುವುದಾದರೆ, ಜಾತಿಗಳು ಪೂರ್ವದಿಂದಲೂ ಸಾಮಾಜಿಕ ಜಡತ್ವದ ಪಂಜರದಲ್ಲಿದ್ದವು. ಜನಗಣತಿಗಳಿಂದ ಬೆಳಕು ಪ್ರಜ್ವಲಿಸಿದ ಕಾರಣ ಎಲ್ಲಾ ಜಾತಿ, ಉಪ ಜಾತಿ, ಸಮುದಾಯ ಮತ್ತು ಅವರ ಕುಲ ಸಂಬಂಧಿತ ಸಾಮಾಜಿಕ ಸಚಿತ್ರಣಗಳೆಲ್ಲವೂ ಕೈಗನ್ನಡಿ ಮಾಹಿತಿಗಳಾದವು. ಅದುಮಿದ್ದ ವೈರುಧ್ಯದ ಭಾರತದ ಸಾಮಾಜಿಕತೆಗಳು ಜಾಗತಿಕವಾಗಿ ತೆರೆದುಕೊಂಡವು. 1901ರ ತರುವಾಯ ಜನಗಣತಿಗಳು ಭಾರತೀಯ ಸಾಮಾಜಿಕ ವೈರುಧ್ಯಗಳನ್ನು ಜಾತಿಯ ಮತ್ತು ಅವುಗಳ ಸಾಂಸ್ಕೃತಿಕ ಅಳತೆಗೋಲಿನಡಿ ವಿಶ್ಲೇಷಿಸಲ್ಪಟ್ಟಿದ್ದವು. ಅವುಗಳೆಲ್ಲವೂ ಬ್ರಾಹ್ಮಣರ ಆಚಾರ, ವಿಚಾರಗಳ ಮುಖೇನ ಉಳಿದೆಲ್ಲ ಸಮುದಾಯಗಳನ್ನು ವರ್ಗೀಕರಿಸಿದವು. ಅದರಲ್ಲೂ 1931ರ ಜನಗಣತಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರನ್ನು ಪ್ರಾದೇಶಿಕವಾರು, ಧರ್ಮವಾರು, ಜನಾಂಗೀಯ, ಜಾತಿ, ಉಪಜಾತಿವಾರು ಸಂಖ್ಯಾಬಲಗಳನ್ನು ಸಾದರಪಡಿಸಿದಾಗ ಅಸಮಾನತೆಯ ಆರಾಧಕರಲ್ಲಿ ಕಂಪನ ಮೂಡಲಾರಂಭಿಸಿದ್ದವು.
ಸ್ವತಂತ್ರ ಭಾರತದ 1951ರ ಜನಗಣತಿ ಮುಖೇನ ಅದರ ಸಾಂಸ್ಥಿಕ ವಿರೋಧಿಗಳೆಲ್ಲರೂ ಸರ್ವ ಜಾತಿ, ಉಪಜಾತಿ ಸಂಖ್ಯಾಬಲಗಳ ಎಣಿಕೆಯನ್ನು ಸಾರ್ವತ್ರಿಕವಾಗಿಸಲು ಬಿಡಲಿಲ್ಲ. ಇದರ 13 ಪ್ರಶ್ನಾವಳಿಗಳು ಸಾರ್ವತ್ರಿಕವಾಗಿಸಿದ್ದರೂ ಕೆಲವು ರಾಜ್ಯಗಳಿಗೆ ಐಚ್ಛಿಕವಾಗಿಸಿತ್ತು (Optional). ಸಾಮಾನ್ಯ ಮತ್ತು ಹಿಂದುಳಿದವರ ಮಾಹಿತಿಗಳನ್ನು ಐಚ್ಛಿಕೇತರವಾಗಿಸಿತ್ತು (Non-optional). ಆದುದರಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರ ಮಾಹಿತಿಗಳನ್ನಷ್ಟೇ ಸಾಂವಿಧಾನಿಕವೆಂದು ಮಾನ್ಯ ಮಾಡಿತ್ತು. ಸಂವಿಧಾನೋತ್ತರದಲ್ಲಿ ಪ್ರತೀ ಜನಗಣತಿಯು 14,13,17,16,23,23 ಮತ್ತು 29 (1951-2011) ಪ್ರಶ್ನಾವಳಿಗಳನ್ನು ಅನುಕ್ರಮವಾಗಿ ಕೇಳಿದ್ದವು. ಅವುಗಳಾವುವೂ ಹಿಂದುಳಿದ ವರ್ಗಗಳ ಜನಸಂಖ್ಯಾ ಬಲಗಳನ್ನು ಸಾದರಪಡಿಸದೆ ಬಿಗಿತನವನ್ನು ಮುಂದುವರಿಸಿದವು. ಈ ಕಾರಣದಿಂದಲೇ ಕಾಕಾ ಕಾಳೇಕರ್ ಆಯೋಗ ಹಿಂದುಳಿದವರ ಸಮಾಜೋಆರ್ಥಿಕತೆಗಳನ್ನು ನಿರ್ಧರಿಸಲು ಹಿಂದಿನ ಜನಗಣತಿಗಳ ಪ್ರಾದೇಶಿಕವಾರು ಹಂಚಿಕೆಯನ್ನು ಕ್ರೋಡೀಕರಿಸಿ ವಿಶ್ಲೇಷಿಸಿದೆ. ಹಾವನೂರು ಆಯೋಗ ತನ್ನ ಪ್ರಾತಿನಿಧಿಕ ಸಮೀಕ್ಷೆ ಜತೆಗೆ ಕಾಳೇಕರ್ ಆಯೋಗದ ಜನಸಂಖ್ಯೆಯ ಅನುಸರಣ ಪ್ರಮಾಣವನ್ನು ಅಳವಡಿಸಿ ಹಿಂದುಳಿದವರನ್ನು ನಿರ್ಧರಿಸಿತ್ತು. ಈ ಸೂತ್ರದಂತೆ, ಬಹುತೇಕ ರಾಜ್ಯ ಹಿಂದುಳಿದ ಆಯೋಗಳು ಪ್ರಾತಿನಿಧಿಕ ಸಮೀಕ್ಷೆ ಮೂಲಕ ಹಿಂದುಳಿದವರನ್ನು ಗುರುತಿಸಿವೆ. ಬಹುಶಃ 1951ರಿಂದ ಎಲ್ಲಾ ಜಾತಿ- ಪ್ರವರ್ಗಗಳ ಸಂಖ್ಯಾಬಲಗಳನ್ನು ಸಮಾನ ಮತ್ತು ಏಕ ರೂಪ ಮಾನದಂಡಗಳಡಿ ಕ್ರೋಡೀಕರಿಸಿದ್ದರೆ ಯಾವುದೇ ಸಮುದಾಯ ‘ಜನಸಂಖ್ಯಾ ಯಾದವೀ ಕದನ’ಕ್ಕೆ ಮುಂದಾಗುತ್ತಿರಲಿಲ್ಲ.
ಕೇಂದ್ರ ಸರಕಾರ 2018ರಲ್ಲಿ ಹಿಂದುಳಿದ ವರ್ಗಗಳ ಸಂಖ್ಯಾಬಲವನ್ನು ರಾಜ್ಯವಾರು ಪ್ರಕಟಿಸಿದೆ. ಅದು ಸಹ ಒಂದು ಅಂದಾಜು ದತ್ತಾಂಶವಾಗಿದೆಯೇ ವಿನಃ ಸಮಗ್ರ ಸಮೀಕ್ಷಾ ಮಾಹಿತಿಗಳಲ್ಲ. ಹಿಂದೂ ಸಮಾಜದ ಒಟ್ಟು ಜನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರನ್ನು ಕಳೆದರೆ ಉಳಿದವರು ಹಿಂದುಳಿದ ವರ್ಗಗಳು ಮತ್ತು ಇತರ ಸಮುದಾಯದವರಾಗುತ್ತಾರೆ. ಇದೊಂದು ಸರಳ ವಿಶ್ಲೇಷಣೆಯಾಗುತ್ತದೆ. ಆದರೆ ಭಾರತೀಯ ಕುಲಶಾಸ್ತ್ರೀಯ ಸಮೀಕ್ಷಾ (ಎಎಸ್‌ಐ) ಸಂಸ್ಥೆಯು ಧಾರ್ಮಿಕ ಮತ್ತು ಸಾಮುದಾಯಿಕ ವೈರುಧ್ಯಗಳ ಬಗ್ಗೆ ವಿಶ್ಲೇಷಣೆ ನಡೆಸಿ, ಗುರುತಿಸಿರುವ 5,963 ಸಮುದಾಯಗಳ ಪೈಕಿ, ಹಿಂದೂಗಳಲ್ಲಿ 3,539, ಮುಸ್ಲಿಮರಲ್ಲಿ 584, ಕ್ರೈಸ್ತರಲ್ಲಿ 339, ಸಿಖ್ಖರಲ್ಲಿ 130, ಬೌದ್ಧರಲ್ಲಿ 93, ಜೈನರಲ್ಲಿ 100, ಪಾರ್ಸಿಗಳಲ್ಲಿ 9 ಹಾಗೂ ಜೂಹಿಗಳಲ್ಲಿ 7 ಸಮುದಾಯಗಳಿವೆ ಎಂದು ಅಧಿಕೃತವಾಗಿ ದೃಢಪಡಿಸಿದೆ. ಈ ಪೈಕಿ 411 ಸಮುದಾಯಗಳಲ್ಲಿ ವಿಶಿಷ್ಟವಾದ ಬುಡಕಟ್ಟು ಧಾರ್ಮಿಕತೆಗಳಿರುವುದನ್ನು ಸಹ ದೃಢಪಡಿಸಿದೆ. ಇವರೆಲ್ಲರಲ್ಲಿ ಹಿಂದುಳಿದ ವರ್ಗಗಳು ಅಧಿಕರು; ಒಟ್ಟು 1,536 ಸಮುದಾಯಗಳಿರುವುದನ್ನು ಗುರುತಿಸಿದ್ದರೂ ಇವರ ನಿಖರವಾದ ಜನಸಂಖ್ಯೆ ರಾಷ್ಟ್ರೀಯ ದಾಖಲೆಗಳಲ್ಲಿ ಸಿಗುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರನ್ನು ನಿಖರವಾಗಿ ಗುರುತಿಸುವ ಜನಗಣತಿ ದತ್ತಾಂಶವಿದೆ. ಆದರೆ ಬಹುಸಂಖ್ಯಾತ ಹಿಂದುಳಿದವರ ಜನಸಂಖ್ಯಾ ದತ್ತಾಂಶಗಳು ಯಾವುದೇ ಮಾದರಿಯಲ್ಲಿಯೂ ಸಿಗುತ್ತಿಲ್ಲ. ಅವರ ಆಸ್ತಿ ಮತ್ತು ಸಂಪತ್ತಿನ ಸ್ವರೂಪ, ಬಡತನ, ನಿರುದ್ಯೋಗ, ಸಾಂಸ್ಥಿಕ ರಚನೆ ತಿಳಿಯುವುದು ಇನ್ನೂ ಜಟಿಲ ಸಮಸ್ಯೆಯಾಗಿದೆ. ಆದುದರಿಂದ, ಅನೇಕ ವೈಜ್ಞಾನಿಕ ದತ್ತಾಂಶ ಜಿಜ್ಞಾಸೆಗಳು ಮಂಡಲ ವರದಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಂದೆ ಬೆಳಕಿಗೆ ಬಂದಿದೆ. ಮತ್ತೊಂದು ಕಡೆ, ಪರಿಶಿಷ್ಟ ಜಾತಿ, ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯಾ ದತ್ತಾಂಶಗಳ ಬಗ್ಗೆ ಅಪಸ್ವರ, ಸಂಶಯಗಳು ವ್ಯಕ್ತವಾಗುತ್ತಿದೆ. ಒಟ್ಟಾರೆ, ರಾಷ್ಟ್ರಾಡಳಿತಕ್ಕೆ ಪ್ರಮಾಣೀಕೃತ ದತ್ತಾಂಶಗಳಿಲ್ಲದಿರುವ ಕೊರತೆ ಎದ್ದುಕಾಣುತ್ತಿದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲಾತಿ ನೀಡುವಾಗಲೂ ಈ ಸಮಸ್ಯೆಗೆ ಸಮರ್ಪಕ ಉತ್ತರ ಕೇಂದ್ರ ಸರಕಾರದ ಬಳಿಯೂ ಇರಲಿಲ್ಲ. ಗುಂಪಿನಲ್ಲಿ ಗೋವಿಂದ ಎಂಬಂತೆ ಅದರ ಶಾಸನ ಜಾರಿಯಾಗಿದೆ. ಈ ವರ್ಗದ ಅಭ್ಯರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಅಭ್ಯರ್ಥಿಗಳಿಗಿಂತಲೂ ಕೆಳಮಟ್ಟದ ಅಂಕ ಗಳಿಸಿದವರು ಆಯ್ಕೆ ಆಗಿರುವುದು ಸಾದರವಾಗಿದೆ.
ಭಾರತ ಜಾತಿಗಳ ನಾಡು. ಜಾತಿಗಳ ಜನಸಂಖ್ಯೆಯನ್ನು ಎಣಿಸುವುದು ಅವೈಜ್ಞಾನಿಕವೂ ಅಲ್ಲ; ಸಾಂವಿಧಾನಿಕ ವಿರೋಧಿ ಅಲ್ಲವೇ ಅಲ್ಲ. ಹನ್ನೆರಡನೆಯ ಪಂಚ ವಾರ್ಷಿಕ ಯೋಜನೆಯ ಜಾರಿ ತನಕ ಹಿಂದುಳಿದವರ ಜನ ಕಲ್ಯಾಣಗಳಿಗೆ ಕೇವಲ ಅಂದಾಜಿನ ದತ್ತಾಂಶದಡಿ ಸಂಪನ್ಮೂಲಗಳನ್ನು ವಿತರಿಸಲಾಗಿತ್ತು. ಒಂದು ವೇಳೆ, ನೈಜ ದತ್ತಾಂಶವಿದ್ದಿದ್ದರೆ ಸಾರ್ವಜನಿಕ ಹಣಕಾಸಿನ ವಿನಿಯೋಗಕ್ಕೆ ಆಶ್ರಯವಾಗುತ್ತಿತ್ತು. ಕೇವಲ ಸಾವಿರಾರು ಸಿರಿವಂತರಿಂದ ದೇಶದ ಸಂಪತ್ತು ವೃದ್ಧಿಸದೆ, ಸಮಸ್ತ ನಾಗರಿಕರ ಶ್ರಮದಾನದಿಂದ ಅದರ ಆದಾಯ ಏರುತ್ತಿರುತ್ತದೆ. ಒಂದುವೇಳೆ, ಹಿಂದುಳಿದ ವರ್ಗಗಳ ಜನಸಂಖ್ಯಾ ದತ್ತಾಂಶ ಪ್ರಚುರವಾದರೆ ಯಾವುದೇ ವ್ಯಕ್ತಿ-ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗದೆ ಅನೇಕ ಯಾದವೀ ಕಿತ್ತಾಟಗಳಿಗೆ ಕಡಿವಾಣ ಬೀಳುತ್ತದೆ. ಪ್ರಕಟವಾಗುವ ಅಂಕಿ-ಅಂಶಗಳ ಮೂಲಕ ಅವರ ಸಮಾಜೋಆರ್ಥಿಕ ಸ್ಥಿತಿಗಳ ನೈಜ ಹೂರಣ ಜಾಗತಿಕವಾಗುತ್ತದೆ.
ಕೋವಿಡ್-2019 ತರುವಾಯ ಜನಗಣತಿ-2021 ತಡವಾಗಿಯಾದರೂ ಆರಂಭವಾಗುವುದೆಂಬ ಆಶಯಗಳು ಮುಖ್ಯವಾಹಿನಿ ಚರ್ಚೆಯಲ್ಲಿ ದನಿಗೂಡಿದ್ದವು. ಆದರೆ ಭಾಜಪ ನೇತೃತ್ವದ ಎನ್‌ಡಿಎ ಕೇಂದ್ರ ಸರಕಾರ ಅದನ್ನು ಮುನ್ನಡೆಸುವ ಧೈರ್ಯ ಮಾಡಲಿಲ್ಲ. ಈ ಬಗ್ಗೆ ಅನೇಕ ಒತ್ತಡಗಳಿದ್ದರೂ ನಿರಾಸಕ್ತಿಯ ಉತ್ತರ ಮೌನದಲ್ಲಿತ್ತು. ಬಹುಶಃ ಅದು ಜನರ ಆಶೋತ್ತರಗಳನ್ನು ಈಡೇರಿಸಿದ್ದರೆ ಹಿಂದುಳಿದ ವರ್ಗಗಳ ಜನಸಂಖ್ಯಾ ದತ್ತಾಂಶ ಅಭಿವೃದ್ಧಿಯ ಚರ್ಚಾ ಮಾನದಂಡವಾಗುತ್ತಿತ್ತು. ರಾಜಕೀಯ ಪಕ್ಷಗಳಿಂದು ಜಾತಿ ಜನಗಣತಿಯನ್ನು ಲೋಕಸಭಾ ಚುನಾವಣಾ ಜಗಲಿಯ ಮೇಲೇರಿಸಲು ಬರುತ್ತಿರಲಿಲ್ಲ. ಈ ಅವಕಾಶಗಳನ್ನು ಬಳಸಿಕೊಂಡಿರುವ, ಕಾಂಗ್ರೆಸ್ ಮತ್ತು ಅದರ ಅಂಗ ಪಕ್ಷಗಳು ಜಾತಿ ಜನಗಣತಿ ನಡೆಸುವ ವಿಚಾರಕ್ಕೆ ತಮ್ಮ ಪ್ರಣಾಳಿಕೆಯಲ್ಲಿ ಪ್ರಾಶಸ್ತ್ಯ ನೀಡಿ ಜನ ಬೆಂಬಲಕ್ಕೆ ಮುಂದಾಗಿವೆ. ಈ ಘೋಷಣೆ ಅಸಾಂವಿಧಾನಿಕವಲ್ಲ ಅಥವಾ ಯಾವುದೇ ಸಮುದಾಯ ಹಿತಾಸಕ್ತಿಯ ವಿರುದ್ಧವಿಲ್ಲ. ಒಟ್ಟಾರೆ, ಹಿಂದುಳಿದ ವರ್ಗಗಳ ಆಶಯಗಳನ್ನು ಈಡೇರಿಸುವ ಪ್ರಜಾಸಂಕಲ್ಪವಾಗಿದೆ. ಏತನ್ಮಧ್ಯೆ, 75 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಿಂದುಳಿದ ವರ್ಗಗಳ ನಿಖರ ಸಂಖ್ಯಾಬಲವನ್ನು ನಿರ್ಧರಿಸಲು ಜಾತಿ ಜನಗಣತಿಯಿಂದ ಸಾಧ್ಯವಾಗುತ್ತದೆ. ಮೀಸಲಾತಿ ಮತ್ತು ಇತರ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಒಂದು ವೈಜ್ಞಾನಿಕ ಮಾನದಂಡಗಳಡಿ ನಿರೂಪಿಸಿ ಅನುಷ್ಠಾನಕ್ಕೆ ತರಲು ಸಹಕಾರಿ ಆದೀತು.
ಹಿಂದುಳಿದ ವರ್ಗಗಳ ದತ್ತಾಂಶದ ಬಗ್ಗೆ ಮಡುಗಟ್ಟಿರುವ ಭಿನ್ನಾಭಿಪ್ರಾಯದ ಜಿಜ್ಞಾಸೆಯ ಬೀದಿ ಕಾಳಗಕ್ಕೆ ಇತಿಶ್ರೀಯಾಡಬಲ್ಲದು. ಜಾತಿ ಜನಗಣತಿ ಚುನಾವಣೆ ವಿಚಾರ ಅನ್ನುವುದಕ್ಕಿಂತ ಸಮುದಾಯಗಳ ಉನ್ನತಿಯ ಪ್ರಶ್ನೆಯಾಗಿದೆ. ಸರ್ವ ಸಮುದಾಯಗಳ ಜನಸಂಖ್ಯೆ ನಿಖರತೆ ಸಾಮಾಜಿಕ ಪ್ರಶ್ನೆಯಾಗಿದೆ. ಒಟ್ಟಾರೆ, ಸಂವಿಧಾನದ ಆಶಯಗಳನ್ನು ಬೆಂಬಲಿಸುವ ಗುಣಾತ್ಮಕವಾದ ಸಂಗತಿಯಾಗಿದೆ.