ರಾಜಕೀಯ ಬೆರೆತ ಜಾತಿ ಜನಗಣತಿಗೆ ಬಿಡುಗಡೆಯ ಭಾಗ್ಯ ದೊರಕೀತೆ?

ಬಲಿಷ್ಠರಲ್ಲಿ ಕೆಲವರು ಹೇಳುವ ಹಾಗೆ ಯಾವುದೇ ಉಪಜಾತಿ ಪಟ್ಟಿಯಿಂದ ಬಿಟ್ಟು ಹೋಗಿಲ್ಲ. ಉದಾಹರಣೆಗೆ: ಒಕ್ಕಲಿಗರಲ್ಲಿ 20 ಜಾತಿ, ಉಪಜಾತಿಗಳಿವೆ. ಅವುಗಳೆಲ್ಲದರಲ್ಲೂ ಸಂಗ್ರಹಿಸಿರುವ ಜನಸಂಖ್ಯೆಯನ್ನು ಒಟ್ಟುಗೂಡಿಸಿ ಒಟ್ಟು ಒಕ್ಕಲಿಗರ ಜನಸಂಖ್ಯೆಯನ್ನು ಹೇಳಲಾಗಿದೆ. ಯಾವುದೂ ಬಿಟ್ಟು ಹೋಗಿಲ್ಲ. ಆದ್ದರಿಂದ ಅವರ ಆತಂಕಕ್ಕೆ ಕಾರಣವೇ ಇಲ್ಲ.

Update: 2024-10-15 05:55 GMT

Will political mixed caste census be released?ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂದರೆ ಜಾತಿ ಜನಗಣತಿ ಕಾರ್ಯ ನಡೆದು 9 ವರ್ಷಗಳು ಕಳೆದು ಹೋಗಿವೆ. ಒಂದಲ್ಲಾ ಒಂದು ನೆಪದಿಂದ ಅದನ್ನು ಸರಕಾರ ಸ್ವೀಕರಿಸುವ ದಿನಗಳು ಮುಂದೆ ಹೋಗಿ ಕೊನೆಗೂ ಅಳೆದು-ಸುರಿದು ಸ್ವೀಕರಿಸುವಂತಾಯಿತು. ಆದರೆ, ಅದರ ಬಿಡುಗಡೆಗೆ 108 ವಿಘ್ನಗಳು. ಮೊಸರಲ್ಲಿ ಕಲ್ಲು ಹುಡುಕುವ ಮಹಾನುಭಾವರಿಗೆ ಅದು ಬಿಡುಗಡೆ ಆಗ ಕೂಡದು.

ಅದೇ ಮಾತು ‘ಅಹಿಂದ’ ವರ್ಗಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಅಹಿಂದ ವರ್ಗ ಬಿಡುಗಡೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಆದರೆ ಬಲಹೀನ ಈ ವರ್ಗಗಳು ಪತ್ರಿಕಾ ಹೇಳಿಕೆಗಳಿಗೆ ಸೀಮಿತ. ಹಾಗಾಗಿ ಅದು ಕಾಡಿನಲ್ಲೊಂದು ನರಿ ಕೂಗಿದಂತಾಗಿದೆ. ಆದರೆ ಅದೇ ಬಲಿಷ್ಠರ ಎರಡೂ ಸಮೂಹ ರಾಜ್ಯದ ಯಾವುದೇ ಮೂಲೆಯಲ್ಲಿ ಕ್ಷೀಣ ಅಪಸ್ವರ ಎತ್ತಿದರೂ ಸಾಕು, ಸರಕಾರ ಮುಲುಗುಡುತ್ತದೆ. ಇಷ್ಟೆಲ್ಲಾ ಅಪಸ್ವರದ ನಡುವೆಯೂ, ಜನಗಣತಿಯ ಕರ್ತೃ ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢ ಮನಸ್ಸಿನಿಂದ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಜಾತಿ ಜನಗಣತಿಯನ್ನು ಬಿಡುಗಡೆ ಮಾಡಿಯೇ ಸಿದ್ಧ ಎಂದು ಆರ್ಭಟಿಸಿದರು. ಆದರೆ ಅದು ಆರ್ಭಟವಾಗಿಯೇ ಉಳಿಯದಿರಲಿ ಎಂಬುದೇ ಬಿಡುಗಡೆ ಬಯಸುವವರ ಸೌಭಾಗ್ಯ.

ಈ ನಿಟ್ಟಿನಲ್ಲಿ, ಇತ್ತೀಚೆಗೆ ಕೆಲವು ಹಿಂದುಳಿದ ವರ್ಗಗಳು ಶಾಸಕರು ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರುಗಳು ಡಾ. ಸಿ.ಎಸ್. ದ್ವಾರಕಾನಾಥ್ ಅವರ ಮಧ್ಯಸ್ಥಿಕೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಅರ್ಪಿಸಿ ಚರ್ಚಿಸಿದ ಫಲವಾಗಿ ಇದೇ ಅಕ್ಟೋಬರ್ 18ರಂದು ನಡೆಯುವ ಸಂಪುಟದ ಸಭೆಯಲ್ಲಿ ಮಂಡಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದೂ ಅಹಿಂದ ವರ್ಗಗಳ ಪಾಲಿಗೆ ಹಾಲೋಗರ ತಿಂದಂತಾಗಿದೆ.

ವೈಜ್ಞಾನಿಕವೋ? ಅವೈಜ್ಞಾನಿಕವೋ?

2014ರಲ್ಲಿ ಕರ್ನಾಟಕ ಸರಕಾರ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢ ಇಚ್ಛಾಶಕ್ತಿಯ ಫಲವಾಗಿ ಜಾತಿವಾರು ಸಮಗ್ರ ಜನಗಣತಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲು ನಿರ್ಧರಿಸಿತು. ಅಂದಿನ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಗಣತಿ ಕಾರ್ಯ ಹಮ್ಮಿಕೊಳ್ಳಲು ಆಯೋಗ ಮುಂದಾಯಿತು. ಅಷ್ಟರಲ್ಲಾಗಲೇ, ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪ್ರಾರಂಭಿಕ ಹಂತದ ಕಾರ್ಯಗಳನ್ನು ಪೂರೈಸಿ ಜನಗಣತಿ ಕಾರ್ಯಕ್ಕೆಂದೇ ಕೈಪಿಡಿಯೊಂದನ್ನು ಸಿದ್ಧಪಡಿಸಲಾಗಿತ್ತು. ಕೈಪಿಡಿ ಸಿದ್ಧಪಡಿಸುವ ಉದ್ದೇಶದಿಂದ ಹಲವು ಮಾನವ ಶಾಸ್ತ್ರಜ್ಞರು, ಪರಿಣಿತ ಅಧಿಕಾರಿಗಳು ಮತ್ತು ತಂತ್ರಜ್ಞರು ಹಾಗೂ ಆಯೋಗದ ಮಾಜಿ ಅಧ್ಯಕ್ಷರುಗಳು ಮುಂತಾದವರ ಪೂರ್ವಭಾವಿ ಸಭೆಗಳನ್ನು ನಡೆಸಿ ಅವರ ಸಲಹೆ-ಸೂಚನೆಗಳನ್ನು ಪಡೆಯಲಾಗಿತ್ತು. ಇದಷ್ಟೇ ಅಲ್ಲದೆ ಬಹುಮುಖ್ಯವಾಗಿ ಬೇಕಾಗಿದ್ದ, ರಾಷ್ಟ್ರೀಯ ಜನಗಣತಿ ಅನುಸರಿಸುವ ಪದ್ಧತಿಯಂತೆ ಮನೆಗಳ ಪಟ್ಟಿಯ ಬ್ಲಾಕ್‌ಗಳನ್ನು, ಕೇಂದ್ರ ಸರಕಾರದ ಜನಗಣತಿಯ ಅಧಿಕಾರಿಗಳಿಂದಲೇ ಪಡೆದುಕೊಳ್ಳಲಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಜನಗಣತಿ ಕಾರ್ಯ ಕೈಗೊಳ್ಳಲು ತಂತ್ರಾಂಶದ ಅವಶ್ಯಕತೆ ಇದ್ದುದರಿಂದ, ಅದನ್ನು ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ ಮಾಡಿಸಲಾಯಿತು ಮತ್ತು ಅದೇ ಸಂಸ್ಥೆಯ ನೇರ ನಿಯಂತ್ರಣದಲ್ಲಿ ಸಮೀಕ್ಷೆ ಕೈಗೊಳ್ಳಲು ಸಹ ಕೋರಲಾಯಿತು.

ಸಮೀಕ್ಷಾ ಪೂರ್ವ ಕರ್ತವ್ಯಗಳು:

2011ರ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತೀ ಗಣತಿ ಬ್ಲಾಕ್‌ಗೆ ಸಂಬಂಧಿಸಿದಂತೆ Lom( block layout map) ಹಾಗೂ AHL(Abridged house list)ಗಳನ್ನು ಸಿದ್ಧಪಡಿಸುವುದು ಮತ್ತು ಗಣತಿ ಪ್ರದೇಶದಲ್ಲಿ ಕೆಲವು ಬದಲಾವಣೆಗಳು ಆಗಿರುವುದು ಸ್ವಾಭಾವಿಕ. ಕೆಲವು ಮನೆಗಳು ಹೆಚ್ಚಾಗಿರಬಹುದು; ಹಿಂದೆ ವಾಸಿಸುತ್ತಿದ್ದ ಕೆಲವು ಕುಟುಂಬಗಳು ಅಲ್ಲಿಂದ ಸ್ಥಳಾಂತರ ಹೊಂದಿರಬಹುದು; ಸರಹದ್ದುಗಳನ್ನು ತೋರಿಸುವ ಮುಖ್ಯರಸ್ತೆ-ಗಡಿಗಳಲ್ಲಿ ಸ್ವಲ್ಪಮಟ್ಟಿಗೆ ಮಾರ್ಪಾಡುಗಳಾಗಿರಬಹುದು. ಇಂಥ ಅಂಶಗಳನ್ನು ಗುರುತಿಸುವುದಕ್ಕಾಗಿ ಮೇಲಿನ ದಾಖಲೆಗಳ ಪರಿಷ್ಕರಣ ಕಾರ್ಯವನ್ನು ಗಣತಿದಾರರಿಗೆ ಸಮೀಕ್ಷೆ ಪ್ರಾರಂಭಿಸುವ ಮೊದಲೇ ಕೈಗೊಳ್ಳಲು ಸೂಚಿಸಲಾಗಿತ್ತು. ಒಬ್ಬೊಬ್ಬ ಗಣತಿದಾರರಿಗೆ ಸಾಮಾನ್ಯವಾಗಿ 750 ಜನಸಂಖ್ಯೆಯನ್ನು ಹೊಂದಿರುವ ಹಾಗೂ 150ರಿಂದ 175 ಕುಟುಂಬಗಳು ವಾಸಿಸುವ ಬ್ಲಾಕನ್ನು ಗಣತಿಗಾಗಿ ಹಂಚಿಕೆ ಮಾಡಲಾಗಿತ್ತು. ಗಣತಿದಾರರಿಗೆ ಪೂರ್ವಭಾವಿಯಾಗಿ ಎರಡು ಸುತ್ತಿನ ತರಬೇತಿಯನ್ನು ತಾಲೂಕು ಮಟ್ಟದಲ್ಲಿ ನೀಡಲಾಗಿತ್ತು. ಗಣತಿದಾರರೆಲ್ಲರೂ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಉಪಾಧ್ಯಾಯರುಗಳೇ ಆಗಿದ್ದರು. ಆ ಕಾರಣದಿಂದಲೇ ಬೇಸಿಗೆ ರಜಾ ಅವಧಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು.

ಕೈಪಿಡಿಯಲ್ಲಿ ಸರಕಾರದಲ್ಲಿ ದಾಖಲಾಗಿರುವ ಜಾತಿಗಳು ಮತ್ತು ಉಪಜಾತಿಗಳನ್ನು ಪಟ್ಟಿ ಮಾಡಿದುದಲ್ಲದೆ, ಒಂದಕ್ಕೂ ಹೆಚ್ಚು ಬಾರಿ, ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ, ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಬೇರೆ ಯಾವುದಾದರೂ ಜಾತಿ ಉಪಜಾತಿಗಳು ಇದ್ದಲ್ಲಿ ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಅಂತೆಯೇ ನೂರಾರು ಅರ್ಜಿಗಳು ಕೋರಿಕೆ ಮೇರೆಗೆ ಸಲ್ಲಿಕೆಯಾದವು. ಅಂತಹವುಗಳನ್ನು ಸೇರಿಸಿಕೊಂಡು ಕೈಪಿಡಿಯಲ್ಲಿ 1,351 ಜಾತಿ ಉಪಜಾತಿಗಳನ್ನು ಅಂತಿಮ ಪಟ್ಟಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಯಾವುದಾದರೂ ಜಾತಿ, ಉಪಜಾತಿ ಬಿಟ್ಟು ಹೋಗಿದ್ದಲ್ಲಿ ಅಂಥವನ್ನು ಹೊಸದಾಗಿ ಬರೆದುಕೊಂಡು ವಿವರಗಳನ್ನು ಸಂಗ್ರಹಿಸಲೂ ಗಣತಿದಾರರಿಗೆ ಹೇಳಲಾಗಿತ್ತು. ಗಣತಿದಾರರಿಗೆ ಕೈಪಿಡಿಯಲ್ಲಿ ಅಂಗೈ ಹುಣ್ಣಿನಂತೆ ಮಾಹಿತಿಗಳನ್ನು ಒದಗಿಸಲಾಗಿತ್ತು. ಇಂದಿಗೂ ಆಯೋಗದ ಕಚೇರಿಯಲ್ಲಿ ಕೈಪಿಡಿಗಳು ದೊರಕುತ್ತವೆ. ಸಂಶಯಕ್ಕೊಳಪಟ್ಟ ಯಾವುದೇ ವ್ಯಕ್ತಿಯು ಅದನ್ನು ಇಂದಿಗೂ ಪರಿಶೀಲಿಸಲು ಅವಕಾಶವಿದೆ. ಅದು ಗಣತಿದಾರರ ‘ಬೈಬಲ್’.

ಅಂದುಕೊಂಡಂತೆ, ಸಮೀಕ್ಷಾ ಕಾರ್ಯವು 2015ರ ಎಪ್ರಿಲ್ 15ರಿಂದ ಪ್ರಾರಂಭಿಸಿ ಮೇ 15ರ ಒಳಗೆ ಮುಗಿಸಬೇಕಾಗಿತ್ತು. ಆದರೆ ಬೆಂಗಳೂರು ನಗರದಲ್ಲಿ ಹಿನ್ನಡೆ ಉಂಟಾದುದರಿಂದ ಮತ್ತೆ ಎರಡು ವಾರಗಳ ಕಾಲ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸಮೀಕ್ಷಾ ಕಾರ್ಯವನ್ನು ವಿಸ್ತರಿಸಲಾಯಿತು. ಬೆಂಗಳೂರು ನಗರವನ್ನು ಹೊರತುಪಡಿಸಿ ಬೇರೆಡೆ ಶೇ. 99ರಷ್ಟು ಗಣತಿ ಕಾರ್ಯ ನಡೆದಿರುವುದು ತಿಳಿದು ಬರುತ್ತದೆ. ಆದರೆ ಬೆಂಗಳೂರು ನಗರದ ಬಿಬಿಎಂಪಿ ಅಧಿಕಾರಿಗಳ ಕಾರ್ಯಭಾರವೋ ಏನೋ ನಗರದ ಸಮಗ್ರ ಕುಟುಂಬಗಳನ್ನು ಕವರ್ ಮಾಡಲಾಗಲಿಲ್ಲ. ಅದಕ್ಕೆ ಅಧಿಕಾರಿಗಳು ನೀಡುವ ಕಾರಣ, ಬಹುತೇಕ ಉತ್ತರ ಭಾರತೀಯರು ನೆಲೆಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಗಣತಿ ಕಾರ್ಯ ನಡೆಸಲು ಗಣತಿದಾರರನ್ನು ಒಳಕ್ಕೆ ಬಿಟ್ಟುಕೊಳ್ಳದಿರುವುದು ಮತ್ತು ಗಣತಿದಾರರನ್ನು ನಾಯಿಗಳನ್ನು ಬಿಟ್ಟು ಓಡಿಸಿದ್ದು ಮುಂತಾದ ಅನಿಷ್ಟ ಕೃತ್ಯಗಳನ್ನು ನಿವಾಸಿಗಳು ಎಸಗಿದುದರಿಂದ ಹಿನ್ನಡೆಯಾಯಿತು. ಬೆಂಗಳೂರು ನಗರದಲ್ಲಿ ಸುಮಾರು 10ರಿಂದ 15 ಲಕ್ಷ ಜನ ಸಂಖ್ಯೆಯ ಗಣತಿ ಕಾರ್ಯ ಆಗದಿರುವುದು ಸರಿ. ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗ-ವ್ಯಾಪಾರದ ನಿಮಿತ್ತ ಬಂದ ಕುಟುಂಬಗಳಷ್ಟೇ ಕೈ ಬಿಟ್ಟು ಹೋಗಿವೆ. ಕರ್ನಾಟಕದ ಮೂಲ ನಿವಾಸಿಗಳ ಜನಸಂಖ್ಯೆ ಕೈ ಬಿಟ್ಟು ಹೋಗಿರುವುದು ಶೇ. ಒಂದರಷ್ಟಿರಬಹುದು.

ಗಣತಿ ಕಾರ್ಯಕ್ಕೆ ನೇಮಕ ಮಾಡಿದ ಗಣತಿದಾರರ ಸಂಖ್ಯೆ 1,33,140 (ಇವರಾರೂ ಒಂದೇ ಜಾತಿಯವರಲ್ಲ). ಪ್ರತೀ ಆರು ಮಂದಿ ಗಣತಿದಾರರಿಗೆ ಮೇಲ್ವಿಚಾರಣೆ ಮಾಡಲು 22,190 ಮಂದಿಯನ್ನು ನೇಮಕ ಮಾಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿ ಮತ್ತು ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಮೇಲುಸ್ತುವಾರಿಯಲ್ಲಿ ಸಮೀಕ್ಷೆ ಕಾರ್ಯ ನಡೆದಿರುವುದು ವಿಶೇಷ. ಮನೆಗಣತಿ ಕಾರ್ಯ ಮುಗಿದು ಒಂದೆರಡು ದಿನಗಳಲ್ಲಿ ಸಮೀಕ್ಷೆಯಲ್ಲಿ ತಪ್ಪಿ ಹೋದ ಮನೆಗಳ ಹಾಗೂ ಕುಟುಂಬಗಳ ಮಾಹಿತಿಯನ್ನು ಪಡೆಯುವುದು ಮತ್ತು ಸಮೀಕ್ಷೆ ಮುಗಿಸಿದ ಪ್ರಕರಣಗಳಲ್ಲಿ ಅಗತ್ಯ ಇರುವ ಕಡೆಗಳಲ್ಲಿ ದಾಖಲೆ ಮಾಡಿದ ವಿವರಗಳನ್ನು ಸರಿಪಡಿಸುವುದು, ಈ ಅವಧಿಯಲ್ಲಿ ಗಣತಿ ಬ್ಲಾಕಿನಲ್ಲಿರುವ ವಸತಿ ರಹಿತ ಕುಟುಂಬಗಳನ್ನು ಗಣತಿಗೆ ಒಳಪಡಿಸಿ ಸದರಿ ಕುಟುಂಬಗಳ ಮಾಹಿತಿಗಳನ್ನು ನಮೂನೆ 3ರಲ್ಲಿ ದಾಖಲಿಸುವ ಕೆಲಸ ಗಣತಿದಾರರದಾಗಿತ್ತು. ಗಣತಿದಾರರು ಅನುಸೂಚಿಯ ಎಲ್ಲಾ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ದಾಖಲಿಸಿದ ಅಂಶಗಳನ್ನು ಕುಟುಂಬದ ಮುಖ್ಯಸ್ಥ ಅಥವಾ ಮಾಹಿತಿದಾರರಿಗೆ ತೋರಿಸಿ ಅವರಿಂದ ಸಹಿ ಪಡೆಯ ಬೇಕಾಗಿತ್ತು.

ಬಲಿಷ್ಠರಲ್ಲಿ ಕೆಲವರು ಹೇಳುವ ಹಾಗೆ ಯಾವುದೇ ಉಪಜಾತಿ ಪಟ್ಟಿಯಿಂದ ಬಿಟ್ಟು ಹೋಗಿಲ್ಲ. ಉದಾಹರಣೆಗೆ: ಒಕ್ಕಲಿಗರಲ್ಲಿ 20 ಜಾತಿ, ಉಪಜಾತಿಗಳಿವೆ. ಅವುಗಳೆಲ್ಲದರಲ್ಲೂ ಸಂಗ್ರಹಿಸಿರುವ ಜನಸಂಖ್ಯೆಯನ್ನು ಒಟ್ಟುಗೂಡಿಸಿ ಒಟ್ಟು ಒಕ್ಕಲಿಗರ ಜನಸಂಖ್ಯೆಯನ್ನು ಹೇಳಲಾಗಿದೆ. ಯಾವುದೂ ಬಿಟ್ಟು ಹೋಗಿಲ್ಲ. ಆದ್ದರಿಂದ ಅವರ ಆತಂಕಕ್ಕೆ ಕಾರಣವೇ ಇಲ್ಲ.

ಇಡೀ ರಾಜ್ಯದ ಎಲ್ಲಾ ಫಾರಂಗಳನ್ನು ಆಯೋಗಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ವಹಿಸಲಾಗಿತ್ತು. ಅವರು ಹಾಗೆ ಸಂಗ್ರಹಿಸಿದ ಎಲ್ಲಾ ನಮೂನೆ 3 ಅನ್ನು ಆಯೋಗಕ್ಕೆ ತಲುಪಿಸಿದ್ದರು. ಯಾವ ನಮೂನೆಯೂ ತಪ್ಪಿ ಹೋಗದಂತೆ ನೋಡಿಕೊಳ್ಳಲಾಗಿತ್ತು.

ನಮೂನೆಯ ಎಲ್ಲಾ 55 ಕಾಲಂಗಳನ್ನು ಕೋಡೆಡ್ ವರ್ಡ್ಸ್‌ನಲ್ಲಿ ತುಂಬಲಾಗಿತ್ತು. ಡಿಕೋಡಿಂಗ್ ಮಾಡುವ ವ್ಯವಸ್ಥೆಗಾಗಿ ತಕ್ಕುದಾದ ನಮೂನೆಯನ್ನು ತಯಾರಿಸಿ, ಬಿಇಎಲ್ ಸಂಸ್ಥೆಯವರ ಮಾರ್ಗದರ್ಶನದಲ್ಲಿ ಅವರು ತಯಾರಿಸಿದ ತಂತ್ರಾಂಶವನ್ನು ಉಪಯೋಗಿಸಿ ಎಲ್ಲಾ ಕಾಲಂಗಳನ್ನು ಡಿಕೋಡ್ ಮಾಡಲಾಯಿತು. ಗಣತಿಗಾಗಿ ಆಯೋಗ ಕೈಗೊಂಡ ಎಲ್ಲಾ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಇದರಲ್ಲಿ ಯಾವುದೇ ಉಪದ್ವಾಪ ನಡೆದ ಉದಾಹರಣೆಯೇ ಇಲ್ಲ. ವಿರೋಧಿಸುವವರು ಮತ್ತೊಂದು ವಾದವನ್ನು ಮುಂದಿಡುತ್ತಿದ್ದಾರೆ. ಗಣತಿ ಕಾರ್ಯ ನಡೆದು ಈಗಾಗಲೇ 9 ವರ್ಷಗಳು ಕಳೆದಿವೆ ಎಂದು. ರಾಷ್ಟ್ರೀಯ ಜನಗಣತಿ ಮಾನದಂಡಗಳ ಪ್ರಕಾರ ಶೇ. ಒಂದರಷ್ಟು ಜನಸಂಖ್ಯೆಯನ್ನು ಪ್ರತಿವರ್ಷ ಸೇರಿಸಿಕೊಂಡಲ್ಲಿ, ಪ್ರೊಜೆಕ್ಟೆಡ್ ಜನಸಂಖ್ಯೆ ಸಿಗುವುದು. ಕೇಂದ್ರ ಸರಕಾರವು ಕೂಡ ಇದೇ ತತ್ವವನ್ನು ಬಳಸುತ್ತದೆ.

2011ರಲ್ಲಿ ರಾಷ್ಟ್ರೀಯ ಜನಗಣತಿ ಆದ ಸಂದರ್ಭದಲ್ಲಿ ಕುಟುಂಬಗಳ ಸಂಖ್ಯೆ ಒಂದು ಕೋಟಿ 33 ಲಕ್ಷ ಇತ್ತು. ಆದರೆ ಆಯೋಗ ಮಾಡಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕಾರ ಕುಟುಂಬಗಳ ಸಂಖ್ಯೆ ಒಂದು ಕೋಟಿ 35 ಲಕ್ಷ. ಸಮೀಕ್ಷೆಯಲ್ಲಿ ಎರಡು ಲಕ್ಷ ಕುಟುಂಬಗಳು ಹೆಚ್ಚಿವೆ.

ವೈಜ್ಞಾನಿಕವಾಗಿ ಗಣತಿ ಮಾಡಿರುವುದಿಲ್ಲ ಎಂದು ಹೇಳುವವರ ಆತಂಕಕ್ಕೆ ಕಾರಣ, ಸುದ್ದಿ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಸಮೀಕ್ಷಾ ವರದಿ ಲೀಕ್ ಆಗಿದೆ ಎಂದು ಬೊಬ್ಬೆ ಹೊಡೆದು ಕೆಲ ಪ್ರಮುಖ ಜಾತಿಗಳ ಊಹಾಪೋಹ ಅಂಕಿ ಅಂಶಗಳನ್ನು ‘ಬಹಿರಂಗ’ಪಡಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡವು. ಈ ರೀತಿ ಪ್ರಸಾರಗೊಂಡ ಅಂಕಿ ಅಂಶಗಳು ಸತ್ಯವಾಗಿರಲಿಲ್ಲ. ತಕ್ಷಣದಲ್ಲಿ ಆಯೋಗವು ಯಾವುದೇ ನೈಜ ಅಂಕಿ ಅಂಶಗಳು ‘ಬಹಿರಂಗ’ ಆಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿತು. ಆದರೆ ಕೆಲ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ದೃಶ್ಯ ಮಾಧ್ಯಮಗಳಲ್ಲಿ ಬಂದ ಅಂಕಿ ಅಂಶಗಳೇ ನಿಜ ಎಂದು ನಂಬಿಕೊಂಡಿದ್ದು ಆಯೋಗ ಯಾವುದೇ ಪೂರ್ವಗ್ರಹ ಇಲ್ಲದೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಗೆ ಗ್ರಹಣ ಬಡಿಯಿತು. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ - ಮೊದಲೇ ಸಮೀಕ್ಷೆಯನ್ನು ವಿರೋಧಿಸಿದ್ದಂತಹ ಕೆಲವು ರಾಜಕೀಯ ಶಕ್ತಿಗಳು ಎಚ್ಚರಗೊಂಡು ‘ಕೆಲವರ’ ರಾಜಕೀಯ ಹಿತಾಸಕ್ತಿಗೆ ಮಾರಕವಾಗಬಹುದೆಂದು ಆ ವರ್ಗಗಳ ರಾಜಕಾರಣಿಗಳು ಅಂತರಂಗದಲ್ಲಿ ಸಮೀಕ್ಷೆ ಅಂಕಿ ಅಂಶಗಳು ಬಹಿರಂಗಗೊಳ್ಳಬಾರದು ಎಂಬ ನಿಲುವಿಗೆ ಬಂದ ಹಾಗೆ ಕಾಣಿಸುತ್ತಿದೆ. ಆದರೆ ಅವರಾರೂ ಸಮೀಕ್ಷೆ ಅವೈಜ್ಞಾನಿಕ ಎಂಬುದಕ್ಕೆ ಸಕಾರಣವನ್ನು ನೀಡುತ್ತಿಲ್ಲ.

ಸಮೀಕ್ಷೆಗಾಗಿ ಖರ್ಚು ಮಾಡಿದ ಹಣ ಕಡಿಮೆಯೆದೇನಲ್ಲ. ಬರೋಬ್ಬರಿ 160 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ಇದು ಜನಸಾಮಾನ್ಯರ ತೆರಿಗೆ ಹಣ. ತತ್ವಬದ್ಧ ಹಿನ್ನೆಲೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ರಾಜಕೀಯ ಒಳಸುಳಿಗಳಿಗೆ ಸಿಲುಕಿ ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ ಹಣ ಅಪವ್ಯಯವಾಗಬಾರದು.

ಈ ಹಿನ್ನೆಲೆಯಲ್ಲಿ ಸರಕಾರ ಮಾತುಕತೆಯ ಮೂಲಕ ಗಣತಿಯನ್ನು ವಿರೋಧಿಸುವವರ ಮನವೊಲಿಸುವ ಕಾರ್ಯ ಮಾಡಬೇಕಾಗಿದೆ. ಯಾವುದೇ ತೋಳ್ಬಲಕ್ಕೆ ಅಂಜಿ ಸರಕಾರ ಅಂಕಿ ಅಂಶಗಳನ್ನು ಬಹಿರಂಗಗೊಳಿಸದಿದ್ದಲ್ಲಿ ಬಲಹೀನ ಅಹಿಂದ ವರ್ಗಗಳ ‘ಶಾಪ’ ಸರಕಾರ ಮತ್ತು ವಿರೋಧಿಸುವವರಿಗೆ ತಟ್ಟುವುದು. ಇದು ಸತ್ಯಸ್ಯ ಸತ್ಯ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News