ನನ್ನ ಬಳಿ ಯಾರೂ ಬಂದಿಲ್ಲ, ಲಂಚ ಕೇಳಿಲ್ಲ: ವಿವಾದದ ಬಳಿಕ ಪಂಡಿತ್ ರಾಜೀವ್‌ ತಾರಾನಾಥ್‌ ಸ್ಪಷ್ಟನೆ

Update: 2023-10-14 10:34 GMT

ಮೈಸೂರು: ʼʼನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ, ಲಂಚ ಕೇಳಿಲ್ಲʼʼ ಎಂದು ಖ್ಯಾತ ಸರೋದ್‌ ವಾದಕ ಪಂಡಿತ್ ರಾಜೀವ್‌ ತಾರಾನಾಥ್‌ ಅವರು  ತಮ್ಮನ್ನು ಭೇಟಿ ಮಾಡಿದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. 

ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಸಂಭಾವನೆಯಲ್ಲಿ ಪಂಡಿತ ರಾಜೀವ್‌ ತಾರಾನಾಥ್‌ ಅವರ ಬಳಿ ಅಧಿಕಾರಿಗಳು ಕಮಿಷನ್'ಗೆ ಬೇಡಿಕೆ ಇಟ್ಟಿದ್ದಾರೆನ್ನಲಾದ ಬಗ್ಗೆ ʼಆಂದೋಲನʼ ಪತ್ರಿಕೆಯಲ್ಲಿ ವರದಿಗಾರ ನಝೀರ್‌ ಅಹ್ಮದ್‌ ಅವರ ವಿಶೇಷ ವರದಿ ಪ್ರಕಟಗೊಂಡಿತ್ತು. ಆದರೆ ವಿವಾದದ ಬಳಿಕ ಇದೀಗ ತಾರಾನಾಥ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.   

ಪತ್ರಿಕೆಯ ವರದಿಯಲ್ಲೇನಿದೆ? 

ಇಬ್ಬರು ಅಧಿಕಾರಿಗಳು ತಾರಾನಾಥ ಅವರನ್ನು ಸಂಪರ್ಕಿಸಿ “ನೀವು ಕೇಳಿದ ಸಂಭಾವನೆಗಿಂತ 3 ಲಕ್ಷ ರೂ. ಹೆಚ್ಚು ಕೊಡು ತ್ತೇವೆ. ಹಣ ಆರ್‌ಟಿಜಿಎಸ್ ಮೂಲಕ ನಿಮ್ಮ ಖಾತೆಗೆ ಬರುತ್ತದೆ. ಹೆಚ್ಚುವರಿಯಾಗಿ ಜಮೆಯಾಗುವ 3 ಲಕ್ಷ ರೂ. ಹಣವನ್ನು ನಮಗೆ ವಾಪಸ್ ನೀಡಬೇಕು” ಎಂದು ಕೋರಿದರೆನ್ನಲಾಗಿದೆ. ತಮ್ಮ ನೇರ ಮಾತು ಮತ್ತು ನಡವಳಿಕೆಗೆ ಹೆಸರಾದ ಪಂಡಿತ ತಾರಾನಾಥರು ಇದರಿಂದ ವ್ಯಗ್ರ ರಾಗಿ, ಕಮೀಷನ್ ಕೇಳಿದ ಅಧಿಕಾರಿಗಳಿಗೆ ಛೀಮಾರಿ ಹಾಕಿ ವಾಪಸ್ ಕಳಿಸಿ ದರು. ನಂತರದ ಬೆಳವಣಿಗೆಯಲ್ಲಿ ಅವರನ್ನು ದಸರಾ ಕಾರ್ಯಕ್ರಮದಿಂದ ಕೈಬಿಡಲಾಯಿತು ಎಂದು ಆಂದೋಲನ ಪತ್ರಕೆಯ ವರದಿ ತಿಳಿಸಿದೆ. 

ಇನ್ನು ಪ್ರಜಾವಾಣಿ ಪತ್ರಿಕೆಯಲ್ಲಿ, ಖ್ಯಾತ ಸಂಗೀತ ಕಲಾವಿದರೊಬ್ಬರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿರುವ ಇಬ್ಬರು ಅಧಿಕಾರಿಗಳು 8ಲಕ್ಷ ಕೇಳಿ, 5 ಲಕ್ಷ ನೀವಿಟ್ಟುಕೊಳ್ಳಿ, 3 ಲಕ್ಷ ನಮಗೆ ಕೊಡಿ' ಎಂದು ಹೇಳಿರುವುದು ಮೂಲಗಳು ತಿಳಿಸಿವೆ. ಅದರಿಂದ ಸಿಟ್ಟಾದ ಕಲಾವಿದರು ಅವರನ್ನು ಇದೆಲ್ಲವೂ ಗಲೀಜು' ಎಂದು ಬೈದು ಮನೆಯಿಂದ ಹೊರ ಕಳುಹಿಸಿದರು ಎಂದು ವರದಿ ಮಾಡಿದೆ.

ಈ ಬಗ್ಗೆ ʼಆಂದೋಲನʼ ಪತ್ರಿಕೆಯ ವರದಿಗಾರ ನಝೀರ್‌ ಅಹ್ಮದ್‌ ಅವರನ್ನು‌ ʼವಾರ್ತಾ ಭಾರತಿʼ ಸಂಪರ್ಕಿಸಿದಾಗ, ʼʼ ಕಮಿಷನ್‌ ಬೇಡಿಕೆ ಬಗ್ಗೆ  ತಾರಾನಾಥ್‌ ಅವರು ಅವರ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರ ಆಪ್ತರೊಬ್ಬರು ನಮ್ಮ ಪತ್ರಿಕೆಯ ಕಚೇರಿಗೆ ಫೋನ್‌ ಮೂಲಕ ಮಾಹಿತಿ ನೀಡಿದ್ದು, ಈ ವಿಷಯದ ಬಗ್ಗೆ ನಾನು ಖುದ್ದು ತಾರಾನಾಥ್‌ ಅವರನ್ನು ಭೇಟಿಯಾಗಿ ವಿಚಾರಿಸಿದಾಗ, ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದರು. ಆದರೆ, ತಮ್ಮ ಬಳಿ ಅಧಿಕಾರಿಗಳು ಕಮಿಷನ್‌ ಗೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರುʼʼ ಎಂದು ಹೇಳಿದರು. 

ಸಚಿವ ಡಾ. ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ

ʼಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆʼ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. 

ʼʼಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಹಾಗೂ ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದುʼʼ ಸಚಿವ ಎಚ್.ಸಿ.ಮಹದೇವಪ್ಪ ಅವರು ಸೂಚನೆ ನೀಡಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News