ಡಿಜಿಟಲ್ ಭಾರತ ಎಂಬುದು ಹಾವನ್ನು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಆಗದಿರಲಿ

ಸರಕಾರ ಚಾಪೆಯಡಿ ನುಸುಳಿದರೆ, ವಂಚಕರು ರಂಗೋಲಿಯಡಿ ತೂರಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಕಾರದ ಪ್ರಯತ್ನಗಳು ಅಂಕಿ ಸಂಖ್ಯೆವಹಿಗಳ ಪ್ರಕಾರ ಏನೇನೂ ಸಾಲದು ಅನ್ನಿಸುವಂತಿದೆ. ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹದ ಜೊತೆಗೆ ಡಿಜಿಟಲ್ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದು ಸುರಕ್ಷಿತ ಎಂಬ ಭಾವನೆ ಕೂಡ ಸಾರ್ವಜನಿಕರಲ್ಲಿ ಮೂಡುವುದು ಅಗತ್ಯವಿದೆ. ಯಾಕೆಂದರೆ ಭಾರತದ ಡಿಜಿಟಲ್ ಸಾಕ್ಷರತೆಯ ಪ್ರಮಾಣ ಇನ್ನೂ ಶೇ. 30ರ ಆಸುಪಾಸಿನಲ್ಲಿದ್ದು, ಹಳ್ಳಿಗಳಲ್ಲಿ ಆ ಪ್ರಮಾಣ ಎರಡಂಕೆಯನ್ನು ದಾಟುವುದಿಲ್ಲ ಎನ್ನುತ್ತವೆ ದಾಖಲೆಗಳು. ಹಾಗಾಗಿ ಡಿಜಿಟಲ್ ಭಾರತ ಎಂಬುದು ಹಾವು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಆಗದಿರಲಿ.

Update: 2024-01-13 05:00 GMT

Photo: freepik

ಆನ್‌ಲೈನ್ ವ್ಯಾಪಾರ, ಡಿಜಿಟಲ್ ಪಾವತಿಗಳು, ಹೆಚ್ಚುತ್ತಿರುವ ಸೈಬರ್ ಕೊಡು-ಕೊಳ್ಳುವಿಕೆಗಳ ನಡುವೆ, ಸಜೀವ ಜಗತ್ತಿನಲ್ಲಿರುವಂತೆ ವರ್ಚುವಲ್ ಜಗತ್ತಿನಲ್ಲೂ ಕಳ್ಳರು, ವಂಚಕರು, ದಗಾಕೋರರು ಕಾಣಿಸಿಕೊಳ್ಳತೊಡಗಿದ್ದಾರೆ. ಸಜೀವ ಜಗತ್ತಿನಲ್ಲಿ ಇರುವಷ್ಟು ಭಯವೂ ಅಲ್ಲಿ ಸದ್ಯಕ್ಕೆ ಇಲ್ಲದಿರುವುದರಿಂದಾಗಿ, ಅವರು ಆಡಿದ್ದೇ ಆಟವಾಗಿದೆ. ತಂತ್ರಜ್ಞಾನದ ವೇಗಕ್ಕೆ ವ್ಯವಸ್ಥೆಯ ವೇಗ ಎಲ್ಲೂ ಸರಿಸಾಟಿಯಾಗಿ ನಿಲ್ಲದಿರುವುದರ ಪರಿಣಾಮವಾಗಿ ಡಿಜಿಟಲ್ ಮೋಸ ಎಂಬುದು ಬರ್ಮುಡಾ ತ್ರಿಕೋನವಾಗಿ ಬಿಟ್ಟಿದೆ. ಅಲ್ಲಿ ಮುಳುಗಿದ್ದು ಮತ್ತೆ ಏಳುವುದಿಲ್ಲ!

ಸೈಬರ್ ಅಪರಾಧಗಳು ಪೊಲೀಸ್ ವ್ಯವಸ್ಥೆಯ ಅಡಿ ಬರುತ್ತವೆ. ಹಾಗಾಗಿ ಸಂವಿಧಾನದ ಏಳನೇ ಷೆಡ್ಯೂಲಿನ ಅನ್ವಯ ಅವು ರಾಜ್ಯ ಪಟ್ಟಿಯ ಸಂಗತಿಗಳು. ಇಂಟರ್‌ನೆಟ್ ಬಂದ ಬಳಿಕ ಜಗತ್ತೇ ಅಂಗೈಯೊಳಗೆ ಬಂದಿರುವಾಗ ಈ ವಿಭಜನೆ ಅಪ್ರಸ್ತುತ ಎಂಬುದು ಗಂಭೀರವಾಗಿ ಭಾರತ ಸರಕಾರದ ಗಮನಕ್ಕೆ ಬಂದು, ಅದು ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದು ತೀರಾ ಇತ್ತೀಚೆಗೆ. 2019ರ ಆಗಸ್ಟ್ ತಿಂಗಳಿನಲ್ಲಿ ಭಾರತ ಸರಕಾರದ ಗೃಹ ಇಲಾಖೆಯು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (www.cybercrime.gov.in) ಆರಂಭಿಸಿದ್ದು, ಇಂಡಿಯನ್ ಸೈಬರ್ ಕ್ರೈಂ ಕಾರ್ಡಿನೇಷನ್ ಸೆಂಟರ್ (ಅ14) ಮೂಲಕ ಸೈಬರ್ ಅಪರಾಧಗಳನ್ನು ರಾಜ್ಯಗಳ ಸಹಕಾರದೊಂದಿಗೆ ಸಮಗ್ರವಾಗಿ ನಿಭಾಯಿಸಲು ಪ್ರಯತ್ನಿಸುತ್ತಿದೆ.

ಸೋವಿ ದರದಲ್ಲಿ ಸಿಗುವ ಮೊಬೈಲ್ ಡೇಟಾದ ಕಾರಣದಿಂದಾಗಿ, ತಮ್ಮ ಬಲಿಪಶುಗಳಿಗೆ ಗಾಳ ಹಾಕುವವರು ಮತ್ತು ಪಿಗ್ಗಿ ಬೀಳುವವರ ಪ್ರಮಾಣ ಹೌಹಾರುವಂತಿದೆ. 2019ರಲ್ಲಿ ಭಾರತದಲ್ಲಿ ದಾಖಲಾದ ಸೈಬರ್ ಕ್ರೈಂಗಳ ಪ್ರಮಾಣ ಕೇವಲ 26,049. ಆದರೆ 2023ರಲ್ಲಿ ಈ ಪ್ರಮಾಣ 15.5 ಲಕ್ಷಕ್ಕೆ ಏರಿದೆ. ಅಂದರೆ, ಈಗ ಪ್ರತಿದಿನ ದೇಶದಲ್ಲಿ ಸುಮಾರು 5,000 ಸೈಬರ್ ಅಪರಾಧದ ದೂರುಗಳು ಸರಕಾರವನ್ನು ತಲುಪುತ್ತಿವೆ. ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 31 ಲಕ್ಷ ಸೈಬರ್ ಅಪರಾಧಗಳು ಸರಕಾರಕ್ಕೆ ವರದಿ ಆಗಿದ್ದು, ಅವುಗಳಲ್ಲಿ 66 ಸಾವಿರ ಅಪರಾಧಗಳ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. 2021-22ರ ನಡುವೆ ಈ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವವರು ಕೇವಲ 1,143 ಮಂದಿ ಎಂದು ಎನ್‌ಸಿಆರ್‌ಬಿ ದಾಖಲೆಗಳು ಹೇಳುತ್ತಿವೆ.

ಕೇವಲ ಕಳೆದ ಮೂರು ತಿಂಗಳುಗಳ ದೇಶದ ಪ್ರಮುಖ ಸುದ್ದಿ ಪತ್ರಿಕೆಗಳ ಅಪರಾಧ ಸುದ್ದಿಗಳನ್ನು ಗಮನಿಸಿದರೆ, ಕುಸಿದು ಬಿದ್ದು ಹಠಾತ್ ಸಾವು, ಆತ್ಮಹತ್ಯೆಗಳ ಜೊತೆಗೆ ಲಕ್ಷಗಳಲ್ಲಿ ಅಥವಾ ಕೋಟಿಗಳಲ್ಲಿ ‘ಆನ್‌ಲೈನ್’ ವಂಚನೆಗೆ ಪಿಗ್ಗಿ ಬಿದ್ದಿರುವವರ ಸುದ್ದಿಗಳಿಲ್ಲದ ದಿನಗಳೇ ಇಲ್ಲ ಎನ್ನಬಹುದು. ಹಿರಿಯ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಸಿನೆಮಾ ನಟರು ಯಾರನ್ನೂ ಈ ಸೈಬರ್ ಅಪರಾಧಿಗಳು ಬಿಟ್ಟಿಲ್ಲ. ಈ ವಂಚನೆ ಪ್ರಕರಣಗಳ ಗಾತ್ರದ ಒಂದು ಸಣ್ಣ ಪರಿಚಯ ಬೇಕೆಂದರೆ, 2021ರ ಎಪ್ರಿಲ್‌ನಿಂದ 2023ರ ಡಿಸೆಂಬರ್ ನಡುವೆ ಎರಡು ವರ್ಷಗಳಲ್ಲಿ 10,319 ಕೋಟಿ ರೂ. ವಂಚಕರ ಪಾಲಾಗಿದೆ. ಅ14 ಪ್ರಯತ್ನಗಳ ಫಲವಾಗಿ, ಈ ಅವಧಿಯಲ್ಲಿ 1,127 ಕೋಟಿ ರೂ.ಗಳಷ್ಟು ಹಣ ವಂಚಕರ ಪಾಲಾಗದಂತೆ ಬ್ಯಾಂಕುಗಳಲ್ಲೆ ತಡೆಹಿಡಿಯುವುದು ಸಾಧ್ಯವಾಗಿದೆಯಂತೆ. ಆದರೆ ಒಮ್ಮೆ ವಂಚಕರ ಪಾಲಾದ ದುಡ್ಡಿನಲ್ಲಿ ವಸೂಲಿ ಮಾಡಿ, ಅದರ ಮಾಲಕರಿಗೆ ಹಿಂದಿರುಗಿಸಲಾಗಿರುವ ಹಣದ ಪ್ರಮಾಣ 10 ಸಾವಿರ ಕೋಟಿಯಲ್ಲಿ ಕೇವಲ 100 ಕೋಟಿಗಿಂತಲೂ ಕಡಿಮೆ. ಅಂದರೆ ಕೇವಲ ಶೇ. 9-10ರಷ್ಟು ಮಾತ್ರ. ಇದು ಆತಂಕಕಾರಿ ಸಂಗತಿ.

ಬ್ಲೇಡ್ ಕಂಪೆನಿಗಳ ಹೂಡಿಕೆ ಆಮಿಷ, ಸಾಲದ ಆ್ಯಪ್‌ಗಳು, ಫೇಕ್ ಕಸ್ಟಮರ್‌ಕೇರ್ ಕರೆಗಳು, ಸೆಕ್ಸ್‌ಟಾರ್ಶನ್, ಆಧಾರ್; ಯುಪಿಐ; ಇ-ವಾಲೆಟ್; ಡೆಬಿಟ್-ಕ್ರೆಡಿಟ್ ಕಾರ್ಡ್ ಮೋಸಗಳು; ಪಾರ್ಟ್ ಟೈಂ ಉದ್ಯೋಗದ ಹೆಸರಿನ ಟೋಪಿ... ಹೀಗೆ ನೂರಾರು ಬಗೆಯಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಈ ವಂಚನೆಗಳಲ್ಲಿ ಶೇ. 50-60ರಷ್ಟು ದೇಶದೊಳಗಿನ ವಂಚಕರಿಂದಲೇ ಸಂಭವಿಸುತ್ತಿದೆ.

ಜಾರ್ಖಂಡ್‌ನ ಪ್ರಸಿದ್ಧ ಜಮ್‌ತಾರಾ, ದೇವಗಢ, ಗಿರಿಧ್ ಪ್ರದೇಶಗಳು, ಬಿಹಾರ, ಪ.ಬಂಗಾಳ, ರಾಜಸ್ಥಾನ, ದಿಲ್ಲಿ, ಹರ್ಯಾಣ ಮತ್ತು ಉತ್ತರ ಪ್ರದೇಶಗಳಿಂದ ಈ ವಂಚಕರ ಜಾಲಗಳು ಕಾರ್ಯಾಚರಿಸುತ್ತಿವೆ. ಹೆಚ್ಚಿನಂಶ ಡಿಜಿಟಲ್ ಸ್ನೇಹಿ ಆದ ಆಧುನಿಕ ಪೊಲೀಸ್ ವ್ಯವಸ್ಥೆ ಅಲ್ಲಿ ಇನ್ನೂ ಲಭ್ಯವಿಲ್ಲ. ಇದಲ್ಲದೇ ದೇಶದಿಂದ ಹೊರಗೆ ಮ್ಯಾನ್ಮಾರ್, ವಿಯೆಟ್ನಾಂ ಮತ್ತು ಚೀನಾಗಳಿಂದಲೂ ಸೈಬರ್ ವಂಚನೆ ಜಾಲಗಳು ಕಾರ್ಯಾಚರಿಸುತ್ತಿವೆ. ಇದೆಲ್ಲ ಪಿನ್-ಟು-ಪಿನ್ ಪೊಲೀಸ್ ವ್ಯವಸ್ಥೆಗೆ ಮಾಹಿತಿ ಇದೆಯಾದರೂ, ಇವು ಅಂತರ್-ರಾಜ್ಯ ವ್ಯವಹಾರಗಳಾಗಿರುವುದರಿಂದ ಸುಲಭ ಕಾರ್ಯಾಚರಣೆಗೆ ಮಿತಿಗಳಿವೆ. ಆ ಸಡಿಲುಗಳನ್ನೇ ವಂಚಕರು ತಮ್ಮ ಭರಪೂರ ಲಾಭಕ್ಕೆ ಬಳಸಿಕೊಳ್ಳುತ್ತಾ ಬಂದಿದ್ದಾರೆ.

ಈಗ ದೇಶದಾದ್ಯಂತ 1930 ನಂಬರಿನ ರಾಷ್ಟ್ರೀಯ ಹೆಲ್ಪ್‌ಲೈನ್ ಲಭ್ಯವಿದ್ದು, ಸೈಬರ್ ಅಪರಾಧಗಳು ಸಂಭವಿಸಿ ಒಂದು ಗಂಟೆಯ ಒಳಗೆ ಮಾಹಿತಿ ಸಿಕ್ಕಿದರೆ, ಬ್ಯಾಂಕುಗಳಿಂದ ಹಣ ವಂಚಕರ ಕೈಗೆ ವರ್ಗಾವಣೆ ಆಗುವ ಮುನ್ನವೇ ಕ್ರಮಕೈಗೊಳ್ಳುವುದು ಸಾಧ್ಯವಾಗಲಿದೆ ಎಂದ ಅ14ನ ಮುಖ್ಯಸ್ಥರು ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿತ್ತು. ಜೊತೆಗೆ ಈ ಸಂದರ್ಭದಲ್ಲಿ ಬ್ಯಾಂಕುಗಳು, ಕಾನೂನು ಅನುಷ್ಠಾನ ಏಜನ್ಸಿಗಳು ಮತ್ತಿತರರು ಸಂಘಟಿತವಾಗಿ, ಯೋಜನಾಬದ್ಧವಾಗಿ ಹೇಗೆ ಕಾರ್ಯಾಚರಿಸಬೇಕೆಂಬುದಕ್ಕೆ ಕಾರ್ಯಾಚರಣಾ ನಿಯಮಗಳನ್ನು (SoP) ಭಾರತ ಸರಕಾರದ ಗೃಹ ಇಲಾಖೆ ಸಿದ್ಧಪಡಿಸುತ್ತಿದೆಯಂತೆ.

ಈ ಇಡಿಯ ಗದ್ದಲದಲ್ಲಿ ಆತಂಕಕಾರಿಯಾಗಿರುವುದು, ಮುಳುಗಿ ಹೋಗಿರುವ ಹಣದ ರಿಕವರಿಯ ಪ್ರಮಾಣ. ಬಹುತೇಕ ಪ್ರಕರಣಗಳಲ್ಲಿ ಹಣ ಸಿಗುವುದಿಲ್ಲ ಎಂಬುದು ಖಚಿತವಾಗಿರುವ ಜನಸಾಮಾನ್ಯರು, ಸೈಬರ್ ವಂಚನೆ ಪ್ರಕರಣಗಳಲ್ಲಿ ದೂರು ಸಲ್ಲಿಸುವುದೇ ತೀರಾ ಕಡಿಮೆ. ದೂರು ಸಲ್ಲಿಕೆಯಾದಾಗಲೂ, ವಂಚನೆಗೆ ತಡೆಯಲು ಸಾಧ್ಯವಾಗಿರುವುದು ತೀರಾ ಕಡಿಮೆ. 2021ರಲ್ಲಿ 35.38 ಕೋಟಿ ರೂ. (ಶೇ. 6.73); 2022ರಲ್ಲಿ 169.04 ಕೋಟಿ ರೂ. (ಶೇ.7.35); ಮತ್ತು 2023ರಲ್ಲಿ 921.59 ಕೋಟಿ ರೂ. (ಶೇ.12.32) ವಂಚಕರ ಪಾಲಾಗದಂತೆ ತಡೆಯಲಾಗಿದೆ ಎಂದು ಅ14 ದಾಖಲೆಗಳು ಹೇಳುತ್ತವೆ. ಜೊತೆಗೆ 2023ರಲ್ಲಿ 46,229 ಇಂಟರ್ ನ್ಯಾಷನಲ್ ಮೊಬೈಲ್ ಇಕ್ಯುಪ್‌ಮೆಂಟ್ ಐಡೆಂಟಿಟಿ ನಂಬರ್ಸ್ (ಐಎಂಇಐ) ಗಳನ್ನು ಬ್ಲಾಕ್ ಮಾಡಲಾಗಿದೆ ಮತ್ತು ದೇಶದ ಒಳಗೆ ವಂಚನೆ ಜಾಲದ ಭಾಗವಾಗಿರುವ 2,95,461 ಸಿಮ್‌ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗಿದೆ; 2,810 ಫಿಶಿಂಗ್ ವೆಬ್‌ಸೈಟ್‌ಗಳು ಮತ್ತು 595 ಮೊಬೈಲ್ ಆಪ್ಲಿಕೇಶನ್‌ಗಳನ್ನು ಬ್ಲಾಕ್ ಮಾಡಲಾಗಿದೆಯಂತೆ.

ಆದರೆ ಸರಕಾರ ಚಾಪೆಯಡಿ ನುಸುಳಿದರೆ, ವಂಚಕರು ರಂಗೋಲಿಯಡಿ ತೂರಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಕಾರದ ಪ್ರಯತ್ನಗಳು ಅಂಕಿ ಸಂಖ್ಯೆವಹಿಗಳ ಪ್ರಕಾರ ಏನೇನೂ ಸಾಲದು ಅನ್ನಿಸುವಂತಿದೆ. ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹದ ಜೊತೆಗೆ ಡಿಜಿಟಲ್ ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದು ಸುರಕ್ಷಿತ ಎಂಬ ಭಾವನೆ ಕೂಡ ಸಾರ್ವಜನಿಕರಲ್ಲಿ ಮೂಡುವುದು ಅಗತ್ಯವಿದೆ. ಯಾಕೆಂದರೆ ಭಾರತದ ಡಿಜಿಟಲ್ ಸಾಕ್ಷರತೆಯ ಪ್ರಮಾಣ ಇನ್ನೂ ಶೇ. 30ರ ಆಸುಪಾಸಿನಲ್ಲಿದ್ದು, ಹಳ್ಳಿಗಳಲ್ಲಿ ಆ ಪ್ರಮಾಣ ಎರಡಂಕೆಯನ್ನು ದಾಟುವುದಿಲ್ಲ ಎನ್ನುತ್ತವೆ ದಾಖಲೆಗಳು. ಹಾಗಾಗಿ ಡಿಜಿಟಲ್ ಭಾರತ ಎಂಬುದು ಹಾವು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಆಗದಿರಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News