‘ಮಹಿಳೆ’ ಎಂಬ ಹೊಸ ‘ವೋಟ್ ಬ್ಯಾಂಕ್’

ಮಹಿಳೆಯರಿಗೆ ‘ರಾಜಕೀಯ ಶಕ್ತಿ ನೀಡಲಾಗುತ್ತಿದೆ’ ಎಂಬ ನೆರೇಟಿವ್ ಮೂಲಕ, ಮಹಿಳೆಯರನ್ನು ‘ವೋಟ್‌ಬ್ಯಾಂಕ್’ ಮಟ್ಟಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂಬುದು ಅರ್ಥ ಆದಾಗ ಮಾತ್ರ ನಡೆಯುತ್ತಿರುವ ರಾಜಕೀಯ ಹುನ್ನಾರ ಏನೆಂಬುದು ಸ್ಪಷ್ಟಗೊಳ್ಳುತ್ತದೆ.

Update: 2024-12-07 04:43 GMT

ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ಕಳೆದ ಐದಾರು ವರ್ಷಗಳಿಂದ ಹೊಸದೊಂದು ನೆರೇಟಿವ್ ಕಟ್ಟಿ ಮುಂದಿಡುತ್ತಿವೆ. ಮಹಿಳೆಯರು ಒಂದು ಮತಬ್ಯಾಂಕ್ ಆಗಿ ರೂಪುಗೊಳ್ಳುತ್ತಿದ್ದಾರೆ ಮತ್ತು ರಾಜಕೀಯ ಪಕ್ಷಗಳು ಆ ಮತಬ್ಯಾಂಕಿನಲ್ಲಿ ತಮ್ಮ ಶೇರು ಪಡೆಯಲು ಬಗೆಬಗೆಯ ಹಾದಿಗಳನ್ನು ಹುಡುಕಿಕೊಳ್ಳುತ್ತಿವೆ ಎಂಬ ನೆರೇಟಿವ್ ಇದು. ಈ ನೆರೇಟಿವ್ ಒಂದು ವಾಸ್ತವವನ್ನು ಹೆಚ್ಚಿನಂಶ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಆ ಮುಚ್ಚಿಟ್ಟಿರುವ ವಾಸ್ತವವನ್ನು ಎದುರಿಗಿಟ್ಟುಕೊಂಡು, ಈ ‘ಮಹಿಳಾ ವೋಟ್‌ಬ್ಯಾಂಕ್’ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ವಾಸ್ತವ ಇದು:

2049ರ ಮಹಾಚುನಾವಣೆಗಳ ಹೊತ್ತಿಗೆ ಭಾರತದ ಮತದಾರರ ಪೈಕಿ, ಶೇ. 55 ಮಹಿಳೆಯರು ಮತ್ತು ಶೇ. 45 ಪುರುಷರು ಇರಲಿದ್ದಾರೆ. ಅಂದರೆ, ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಶೇ. 10 ಹೆಚ್ಚಿರಲಿದೆ. ಅವರು ಈ ದೇಶದ ರಾಜಕಾರಣದ ನಿರ್ಣಾಯಕ ಸ್ಥಾನದಲ್ಲಿ ಇರಲಿದ್ದಾರೆ.

ಹೂಡಿಕೆ ಮತ್ತು ಹಣಕಾಸು ನಿರ್ವಹಣೆಗಳ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಕ್ಸ್, ಇತ್ತೀಚೆಗೆ ತನ್ನದೊಂದು ಸಂಶೋಧನಾ ವರದಿಯಲ್ಲಿ, ಭಾರತದ ಒಂಭತ್ತು ರಾಜ್ಯಗಳು ತಮ್ಮಲ್ಲಿ ಮಹಿಳೆಯರಿಗಾಗಿ ನೇರ ನಗದು ವರ್ಗಾವಣೆ ಯೋಜನೆಗಳನ್ನು ರೂಪಿಸಿದ್ದು, ಅದರ ಅನ್ವಯ 2024-25ನೇ ಬಜೆಟ್ ವರ್ಷದಲ್ಲಿ ಸುಮಾರು 1.52 ಲಕ್ಷ ಕೋಟಿ ರೂ.ಗಳ ಮೊತ್ತವನ್ನು ತೆಗೆದಿರಿಸಿವೆ ಎಂದು ಗುರುತಿಸಿದೆ. ಇದು ಭಾರತದ ಒಟ್ಟು ಜಿಡಿಪಿಯ ಶೇ. 0.5ರಷ್ಟಾಗುತ್ತದೆ ಎಂದು ಅದು ಹೇಳಿದೆ.

ಇತ್ತೀಚೆಗೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ‘ಮಹಾಯುತಿ’ಯ ಅನಿರೀಕ್ಷಿತ ವಿಜಯದ ಹಿಂದಿರುವುದು, 2023ರಲ್ಲಿ ಏಕನಾಥ್ ಶಿಂದೆ ಅವರು ಜಾರಿಗೆ ತಂದ ‘ಲಾಡಕಿ ಬಹೀಣ’ ಯೋಜನೆ ಎಂಬ ಚರ್ಚೆಗಳ ಹಿನ್ನೆಲೆಯಲ್ಲಿ ಈ ‘ಮಹಿಳಾ ಮತಬ್ಯಾಂಕ್’ ವಾದ ಮುನ್ನೆಲೆಗೆ ಬಂದಿದೆ. ವಾರ್ಷಿಕ 3 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವ, 21-60 ಪ್ರಾಯವರ್ಗದ ಅರ್ಹ ಮಹಿಳೆಯರಿಗೆ ಪ್ರತೀ ತಿಂಗಳು 1,500 ರೂ. ನಗದನ್ನು ಸರಕಾರ ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾಯಿಸುವ ಯೋಜನೆ ಇದು. ಇದಕ್ಕಾಗಿ ಮಹಾರಾಷ್ಟ್ರ ಸರಕಾರ ವಾರ್ಷಿಕ 45,000 ಕೋಟಿಗೂ ಮಿಕ್ಕಿ ಹಣವನ್ನು ವ್ಯಯಿಸಿದ್ದು, ಈ ಮೊತ್ತ ಆ ರಾಜ್ಯದ ಜಿಎಸ್‌ಡಿಪಿಯ ಶೇ. 1.1ರಷ್ಟಾಗುತ್ತದೆ.

ಇಂತಹದೇ ಇನ್ನೊಂದು ಯಶಸ್ವೀ ಮಾದರಿ ಕರ್ನಾಟಕದ್ದೇ ಇದೆ. ಇಲ್ಲಿ ಕೂಡ ಮಹಿಳೆಯರಿಗೆ ಪ್ರತೀ ತಿಂಗಳು 2,000 ರೂ. ನಗದನ್ನು ಸರಕಾರದ ಕಡೆಯಿಂದ ಪಂಚಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ಯ ಭಾಗವಾಗಿ ವರ್ಗಾಯಿಸಲಾಗುತ್ತಿದೆ. ರಾಜ್ಯದ ಜಿಎಸ್‌ಡಿಪಿಯ ಅಂದಾಜು ಶೇ. 1ರಷ್ಟಾಗುವ ಈ ದೊಡ್ಡ ಮೊತ್ತದ ಭರವಸೆಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲು ಕಾರಣವಾಯಿತು ಎಂಬ ವಾದ ಇದೆ.

ಇದಲ್ಲದೆ ಹರ್ಯಾಣ, ಮಧ್ಯಪ್ರದೇಶ, ದಿಲ್ಲಿ, ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಜಾರ್ಖಂಡ್ ರಾಜ್ಯಗಳೂ ಈ ರೀತಿ ಮಹಿಳೆಯರಿಗೆ ನಗದು ವರ್ಗಾವಣೆ ತಂತ್ರವನ್ನು ಅಳವಡಿಸಿಕೊಂಡಿವೆ.

ನೋಟು ರದ್ದತಿ ಮತ್ತು ಆ ಬಳಿಕ ಕೋವಿಡ್ ಜಗನ್ಮಾರಿಗಳು ದೇಶದ ಪ್ರತಿಯೊಂದು ಅಡುಗೆಕೋಣೆಯಲ್ಲಿದ್ದ, ವರ್ಷಗಳ ಸಾಸಿವೆ ಡಬ್ಬಿ ಉಳಿತಾಯಗಳನ್ನೆಲ್ಲ ಕೊಚ್ಚಿಕೊಂಡು ಹೋಗಿರುವುದು ಈಗ ಇತಿಹಾಸ. ಕುಟುಂಬದ ನಿರ್ವಾಹಕಿಯಾದ ಮಹಿಳೆಯ ಕೈ ಖಾಲಿ ಆದರೆ, ಅದು ಒಟ್ಟು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರಬಲ್ಲುದು ಎಂಬುದನ್ನು ಸರಕಾರಗಳು ಈಗ ಅನುಭವಿಸಿವೆ.

ಕೋವಿಡ್ ಬಳಿಕ ಆರ್ಥಿಕತೆ ಇನ್ನೂ ಪುಟಿದೇಳುವಷ್ಟು ಸುಧಾರಿಸಿಲ್ಲ ಎಂಬ ಕಾರಣಕ್ಕೇ ಭಾರತ ಸರಕಾರ, ಈ ಬಜೆಟ್ ವರ್ಷದಲ್ಲಿ ಮೂಲ ಸೌಕರ್ಯರಂಗಕ್ಕೆ (ಕ್ಯಾಪೆಕ್ಸ್) ಸುಮಾರು 4.41 ಲಕ್ಷ ಕೋಟಿ ರೂ. ಉತ್ಪಾದನೆ ಆಧರಿತ ಪ್ರೋತ್ಸಾಹ ಧನಕ್ಕೆ (ಪಿಎಲ್‌ಐ) ಅಂದಾಜು 30,000ಕೋಟಿ ರೂ.ಗಳ ವೆಚ್ಚ ಮಾಡಿದೆ. ಇದೆಲ್ಲವೂ ಕೈಗಾರಿಕೆಗಳು-ಕಾಸಿನ ಕುಳಗಳ ಕಡೆ ಹೋಗುವ ಹೂಡಿಕೆಗಳು. ಅವೆಲ್ಲವನ್ನೂ ಎದ್ದು ಕಾಣಿಸದಂತೆ ಬದಿಗೆ ಸರಿಸಿ, ದೇಶದ ಮಹಿಳೆಯರಿಗೆ ಒಂದೂವರೆ ಲಕ್ಷ ಕೋಟಿ ರೂ.ಗಳ ‘ನಗದು ವರ್ಗಾವಣೆ’ಗಳತ್ತ ಮಾತ್ರ ಬೊಟ್ಟು ಮಾಡುತ್ತಿರುವುದರ ಹಿಂದಿನ ರಾಜಕೀಯ-ಸಾಮಾಜಿಕ ಹಿತಾಸಕ್ತಿಗಳು ಕುತೂಹಲಕರ. ಮಹಿಳೆಯರಿಗೆ ಹೀಗೆ ಹಣ ಒದಗಿಸಿದ ಎಲ್ಲ ರಾಜ್ಯಗಳಲ್ಲೂ ಅದು ಯೂನಿವರ್ಸಲ್ ಬೇಸಿಕ್ ಇನ್‌ಕಂ (ಯುಬಿಐ) ಪರಿಕಲ್ಪನೆಯಡಿಯೇ ಕೆಲಸ ಮಾಡಿದೆ ಮತ್ತು ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದೆ ಎಂಬುದು ಈಗ ನಿಚ್ಚಳವಾಗಿ ಕಾಣಿಸುತ್ತಿದೆ. ಹಾಗಾಗಿಯೇ ಹಲವು ರಾಜ್ಯಗಳು ಈ ‘ಯಶಸ್ವಿ’ ಹಾದಿ ಹಿಡಿಯತೊಡಗಿವೆ.

ಮಹಿಳೆಯರೇ ರಾಜಕೀಯ ಶಕ್ತಿ ಆದರೆ?

ಮಹಿಳೆಯರ ಮೊಣಕೈಗೆ ಹೀಗೆ ಬೆಲ್ಲ ಸವರಿ, ಅದು ‘ತಮ್ಮ ವೋಟ್‌ಬ್ಯಾಂಕ್’ ಎಂದು ರಾಜಕೀಯವಾಗಿ ಗಟ್ಟಿಮಾಡಿಕೊಳ್ಳುವ ಈ ಸರಕಾರ-ಮಾಧ್ಯಮಗಳ ಜಂಟಿ ಆರ್ಕೆಸ್ಟ್ರಾದ ನಿಜ ಸ್ವರೂಪ ಗೊತ್ತಾಗಬೇಕಾದರೆ, ಭಾರತ ಸರಕಾರ ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಕಾನೂನನ್ನು (ನಾರೀಶಕ್ತಿ ವಂದನ್ ಅಧಿನಿಯಮ್-2023) ಗಮನಿಸಬೇಕು. ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸಂಸತ್ ಸ್ಥಾನಗಳನ್ನು ಮೀಸಲಿಡುವ ಈ ಕಾನೂನು ಜಾರಿಗೆ ಬರಬೇಕೆಂದರೆ, ಡಿಲಿಮಿಟೇಷನ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈಗಾಗಲೇ ಖಾನೇಶುಮಾರಿ 3-4 ವರ್ಷ ವಿಳಂಬ ಆಗಿಯಾಗಿದೆ. ಅದಾದ ಬಳಿಕ ಲೋಕಸಭಾಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಆರಂಭಗೊಳ್ಳಬೇಕು. ಹಾಗಾಗಿ 2030-35ರ ತನಕವೂ ಇದೆಲ್ಲ ಆದೀತೆಂಬ ಭರವಸೆ ಇಲ್ಲ. ವಾಸ್ತವ ಹೀಗಿದ್ದರೂ, ಮಹಿಳೆಯರಿಗೆ ತಾವು ಗುರುತರವಾದದ್ದೇನನ್ನೋ ಕೊಟ್ಟಿದ್ದೇವೆ ಎಂಬ ‘ಉಬ್ಬಾಳುಚಿತ್ರ’ ಮೂಡಿಸುವುದು ಆರಂಭವಾಗಿದೆ.

ಮಹಿಳೆಯರು ಅವರ ಈವತ್ತಿನ ರಾಜಕೀಯ ಶಕ್ತಿಯನ್ನು ಅರಿತ ದಿನ, ಈ ಉಬ್ಬಾಳು ಬಲೂನುಗಳಿಗೆ ಸೂಜಿ ಚುಚ್ಚಿಕೊಳ್ಳಲಿವೆ. 1971ರ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳಾ ಮತದಾರರ ಸಂಖ್ಯೆ 2024ರ ಹೊತ್ತಿಗೆ ಶೇ. 235.72 ಹೆಚ್ಚಾಗಿದೆ ಅಂತೆ. ದೇಶದ 23 ಪ್ರಮುಖ ರಾಜ್ಯಗಳಲ್ಲಿ, 18ರಲ್ಲಿ ಜನಸಂಖ್ಯಾವಾರು ಈಗ ಮಹಿಳಾ ಮತದಾರರದೇ ಮೇಲುಗೈ. ತೀರಾ ಇತ್ತೀಚಿನ ಲೆಕ್ಕಾಚಾರ ಬೇಕೆಂದರೆ, 2024ರ ಸಾರ್ವತ್ರಿಕ ಚುನಾವಣೆಗಳ ವೇಳೆ, ಹೊಸ ಮತದಾರರ ನೋಂದಣಿ ನಡೆದಾಗ, ನೋಂದಾಯಿಸಿಕೊಂಡ 2.63 ಕೋಟಿ ಹೊಸ ಮತದಾರರ ಪೈಕಿ, 1.41 ಕೋಟಿ ಮಹಿಳಾ ಮತದಾರರು ಮತ್ತು 1.22 ಕೋಟಿ ಪುರುಷ ಮತದಾರರು. ಅಂದರೆ ಪುರುಷರಿಗಿಂತ ಮಹಿಳಾ ಮತದಾರರ ಪ್ರಮಾಣ ಶೇ. 15 ಹೆಚ್ಚಿತ್ತು ಎನ್ನುತ್ತದೆ ಚುನಾವಣಾ ಆಯೋಗದ ಅಂಕಿ-ಸಂಖ್ಯೆಗಳು.

ಶಿಕ್ಷಣ, ಆರ್ಥಿಕ ಸ್ವಾಯತ್ತೆ ಮತ್ತು ಮಾಹಿತಿ ಲಭ್ಯತೆ ಗಳು ಜಗತ್ತಿನೆಲ್ಲೆಡೆ ಮಹಿಳೆಯರು ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ, ರಾಜಕೀಯ ಚಟುವಟಿಕೆಗಳಿಗೆ ಪ್ರವೇಶ ಪಡೆಯಲು ಹಾದಿ ತೆರೆದಿವೆ ಎಂಬುದು ನಿಜವಾದರೂ, ಭಾರತದಲ್ಲಿ ದುಡಿಯುವ ಮಹಿಳೆಯರ ಪ್ರಮಾಣ ಕಡಿಮೆ ಆಗುತ್ತಿರುವಂತೆಯೇ ಅವರ ರಾಜಕೀಯ ಒಳಗೊಳ್ಳುವಿಕೆ ಹೆಚ್ಚುತ್ತಿದೆ ಎಂಬ ಸಂಕೀರ್ಣವಾದ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಮಹಿಳೆಯರಿಗೆ ‘ರಾಜಕೀಯ ಶಕ್ತಿ ನೀಡಲಾಗುತ್ತಿದೆ’ ಎಂಬ ನೆರೇಟಿವ್ ಮೂಲಕ, ಮಹಿಳೆಯರನ್ನು ‘ವೋಟ್‌ಬ್ಯಾಂಕ್’ ಮಟ್ಟಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂಬುದು ಅರ್ಥ ಆದಾಗ ಮಾತ್ರ ನಡೆಯುತ್ತಿರುವ ರಾಜಕೀಯ ಹುನ್ನಾರ ಏನೆಂಬುದು ಸ್ಪಷ್ಟಗೊಳ್ಳುತ್ತದೆ.

ಸದ್ಯಕ್ಕೆ ಹದಗೆಟ್ಟಿರುವ ಸಾಮಾಜಿಕ ಸನ್ನಿವೇಶವನ್ನು ಮತ್ತೆ ಸರಿಹಾದಿಗೆ ತರಲು ಮಹಿಳೆಯರದೇ ಒಂದು ರಾಜಕೀಯ ಶಕ್ತಿ ರೂಪುಗೊಳ್ಳುವುದು ಮತ್ತು ಅದು ಈ ಕದಡಿರುವ ವಾತಾವರಣಕ್ಕೆ ಹೊಸ ರಕ್ತ, ಹೊಸ ಹುರುಪನ್ನು ತರುವುದು ಸಾಧ್ಯವಾದರೆ ಅದಕ್ಕಿಂತ ಸಮಾಧಾನದ ಸಂಗತಿ ಬೇರೇನಿಲ್ಲ. ಕೊಟ್ಟದ್ದು ತಗೊಂಡು ತಣ್ಣಗಿರಿ ಎಂಬ ಹಳೆಯ ರಾಜಕೀಯ/ಸಾಮಾಜಿಕ ವರಸೆ ಇದು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವುದು ಮತ್ತು ಕಟ್ಟಿಕೊಡಲಾಗುತ್ತಿರುವ ನೆರೇಟಿವ್‌ಗಳನ್ನು ಮೀರಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಹಿಳೆ ಕೈಯೆತ್ತಿ ಕೊಟ್ಟ ಶೇ. 33ಕ್ಕೆ ಕಾಯಬೇಕಾಗಿಲ್ಲ, ತನ್ನ ಹಕ್ಕಿನಿಂದಲೇ ಶೇ. 50ನ್ನೂ ದಾಟಿ ನಿಲ್ಲುವುದು ಸಾಧ್ಯ ಇದೆ. ಆ ದಿನ ಬೇಗ ಬರಲಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ರಾಜಾರಾಂ ತಲ್ಲೂರು

contributor

Similar News