ನಿಯತ್ತು ಸರಿ ಇದ್ದರೆ ತಾನೇ ನೀತಿ ಸರಿ ಇರುವುದು?

2012-2017ನೇ ಇಸವಿಯ ನಡುವೆ ಕರ್ನಾಟಕದ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 10,000 ಹೆಕ್ಟೇರುಗಳಷ್ಟು ಅರಣ್ಯ ನಾಶ ಸಂಭವಿಸಿದೆ ಎಂದು ಗ್ಲೋಬಲ್ ಫಾರೆಸ್ಟ್ ವಾಚ್ (ಜಿಎಫ್‌ಡಬ್ಲ್ಯು) ಡೇಟಾಗಳು ತೋರಿಸುತ್ತವೆ. 2001ರಿಂದ ಈಚೆಗೆ ದಕ್ಷಿಣ ಕನ್ನಡ-ಉಡುಪಿ ಎರಡೇ ಜಿಲ್ಲೆಗಳಲ್ಲಿ ಒಟ್ಟು ಮರಗಳ ಕವರೇಜ್‌ನಲ್ಲಿ ಶೇ. 70 ಕಡಿಮೆ ಆಗಿದೆ ಎಂದು ಈ ಜಿಎಫ್‌ಡಬ್ಲ್ಯು ಡೇಟಾ ಬೊಟ್ಟುಮಾಡುತ್ತದೆ.

Update: 2024-10-19 05:03 GMT

1986ರಲ್ಲಿ ಜಾರಿಗೆ ಬಂದ ಕಾನೂನೊಂದನ್ನು ಈಗ 38 ವರ್ಷಗಳ ಬಳಿಕವೂ ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲು ಸಾಧ್ಯ ಆಗದಂತಹ ನಿಯತ್ತಿಲ್ಲದ ಸರಕಾರಗಳ ನೀತಿ ಸರಿ ಇರುವುದಾದರೂ ಹೇಗೆ? ಅಥವಾ ಸರಕಾರಗಳೇ ಈ ರೀತಿ ಕಾನೂನು ಪಾಲಿಸದಿದ್ದರೆ ಅದಕ್ಕೇನು ಶಿಕ್ಷೆ? ಭಾರತ ಸರಕಾರ ಮಾತ್ರವಲ್ಲದೇ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳ ರಾಜ್ಯ ಸರಕಾರಗಳಲ್ಲಿ ಜನತೆ ವೋಟು ಕೊಟ್ಟು ಕುಳ್ಳಿರಿಸಿರುವ ‘ಯಾರ್ಯಾರದ್ದೋ ಪ್ರತಿನಿಧಿಗಳು’ ತಮ್ಮತಮ್ಮವರ ಹಿತಾಸಕ್ತಿಗಳ ರಕ್ಷಣೆಯ ಹೆಸರಿನಲ್ಲಿ ಆಡುತ್ತಿರುವ ದುಷ್ಟ ಆಟವೊಂದರ ಚಿತ್ರಣ ಇದು.

ರಾಜೀವ್ ಗಾಂಧಿ ಅವರು 1986ರಲ್ಲಿ ಜಾರಿಗೆ ತಂದ ಪರಿಸರ ಸಂರಕ್ಷಣಾ ಕಾಯ್ದೆ ಇಂದಿನ ತನಕವೂ ಜಾರಿಗೆ ಬಂದಿಲ್ಲ. ಜಗತ್ತಿನ ಅತ್ಯಂತ ಪರಿಸರಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ, ಯುನೆಸ್ಕೋದಿಂದ ಪಾರಂಪರಿಕ ತಾಣ ಎಂದು ಗುರುತಾಗಿರುವ ಪಶ್ಚಿಮಘಟ್ಟಗಳನ್ನು ಪರಿಸರ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಿಕೊಳ್ಳುವುದಕ್ಕಾಗಿ ಇಲ್ಲಿಯ ತನಕ ಬಂದಿರುವ ವರದಿಗಳ ಪಟ್ಟಿ ನೋಡಿದರೆ ಸಾಕು, ನಾನೇನು ಹೇಳುತ್ತಿದ್ದೇನೆಂಬುದು ಅರ್ಥ ಆಗುತ್ತದೆ. ಪರಿಸರ ಸಚಿವಾಲಯದ ವರದಿ (1990); ಯೋಜನಾ ಆಯೋಗದ ವರದಿ(1996); ಪ್ರಣವ್ ಸೇನ್ ವರದಿ (2000); ಎಚ್.ವೈ. ಮೋಹನ್‌ರಾಂ ಸಮಿತಿ ವರದಿ (2001); ಮಾಧವ ಗಾಡ್ಗೀಳ್ ವರದಿ (2011); ಕಸ್ತೂರಿ ರಂಗನ್ ವರದಿ (2013). ಹೀಗೆ ಪುಂಖಾನುಪುಂಖವಾಗಿ ವರದಿಗಳು ಬಂದಿವೆಯಾದರೂ, ಅವುಗಳನ್ನೆಲ್ಲ ಏನಾದರೊಂದು ಕಾರಣ ಹುಡುಕಿ ನನೆಗುದಿಗೆ ಹಾಕಲಾಗುತ್ತಿದೆ.

ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಈ ಕಾನೂನು ಪಾಲನೆ ಆಗದಿರುವುದರಿಂದ, ಕಳೆದ 38 ವರ್ಷಗಳಲ್ಲಿ ನಷ್ಟ ಆಗಿರುವ ಪಶ್ಚಿಮ ಘಟ್ಟ ಪರಿಸರದ ಪ್ರಮಾಣ ಎಷ್ಟು ಎಂದು ಅಂದಾಜಿಸಿಕೊಂಡರೆ, ಈ ದುಷ್ಟಕೂಟಗಳ ಆಟದ ಸ್ವರೂಪ ಅರ್ಥವಾಗುತ್ತದೆ. ಸಣ್ಣದೊಂದು ಉದಾಹರಣೆ ಬೇಕಿದ್ದರೆ: 2012-2017ನೇ ಇಸವಿಯ ನಡುವೆ (ಅಂದರೆ ಕಸ್ತೂರಿ ರಂಗನ್ ವರದಿ ಪ್ರಕ್ರಿಯೆ ಆರಂಭ ಆದ ಬಳಿಕ ಮೊದಲ ಐದು ವರ್ಷಗಳಲ್ಲಿ ಕೇವಲ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ (ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು) ಒಟ್ಟು 10,000 ಹೆಕ್ಟೇರುಗಳಷ್ಟು ಅರಣ್ಯ ನಾಶ ಸಂಭವಿಸಿದೆ ಎಂದು ಗ್ಲೋಬಲ್ ಫಾರೆಸ್ಟ್ ವಾಚ್ (ಜಿಎಫ್‌ಡಬ್ಲ್ಯು) ಡೇಟಾಗಳು ತೋರಿಸುತ್ತವೆ. 2001ರಿಂದ ಈಚೆಗೆ ದಕ್ಷಿಣ ಕನ್ನಡ-ಉಡುಪಿ ಎರಡೇ ಜಿಲ್ಲೆಗಳಲ್ಲಿ ಒಟ್ಟು ಮರಗಳ ಕವರೇಜ್‌ನಲ್ಲಿ ಶೇ. 70 ಕಡಿಮೆ ಆಗಿದೆ ಎಂದು ಈ ಜಿಎಫ್‌ಡಬ್ಲ್ಯು ಡೇಟಾ ಬೊಟ್ಟುಮಾಡುತ್ತದೆ.

ಈ ಲೆಕ್ಕಾಚಾರದ ಬಳಿಕ, ಈಗ ಮತ್ತೆ ಏಳು ವರ್ಷಗಳಾಗಿವೆ. ಈ ಅವಧಿಯಲ್ಲಿ ಮತ್ತೆಷ್ಟು ನಷ್ಟ ಸಂಭವಿಸಿದೆ ಎಂಬುದನ್ನು ಸರಕಾರಗಳಾಗಲೀ, ಬೇರೆ ಯಾವುದೇ ದಾಖಲೆಗಳಾಗಲೀ ಬಾಯಿ ಬಿಟ್ಟು ಹೇಳದೆ ಇದ್ದರೂ, ಇಲ್ಲಿ ಪೇಟೆಗಳ ಮನೆಮನೆಗೆ ಭೇಟಿ ನೀಡಲಾರಂಭಿಸಿರುವ ಆನೆಗಳು, ಚಿರತೆಗಳು, ಕಾಡುಕೋಣಗಳು ಮತ್ತಿತರ ಕಾಡು ಪ್ರಾಣಿಗಳು ಕೂಗಿ ಕೂಗಿ ಹೇಳಲಾರಂಭಿಸಿವೆ. ಇಷ್ಟಾದರೂ ನಮ್ಮ ಅಭಿವೃದ್ಧಿಯ ಹಪಾಹಪಿ ನಿಂತಿಲ್ಲ. ಕರ್ನಾಟಕವೊಂದರಲ್ಲೇ ಎತ್ತಿನ ಹೊಳೆ, ಹೆದ್ದಾರಿ ಅಗಲೀಕರಣ, ಗೋವಾ-ತಾಮ್ನಾರ್ ವಿದ್ಯುತ್ ಲೈನ್, ಹುಬ್ಬಳ್ಳಿ-ಅಂಕೋಲ ರೈಲ್ವೆ ಲೈನ್, ಶರಾವತಿ ಪಂಪ್ಡ್ ಸ್ಟೋರೇಜ್, ಜೋಗದಲ್ಲಿ 365 ದಿನ ಪ್ರವಾಸೋದ್ಯಮ, ಸಿಕ್ಕಸಿಕ್ಕಲ್ಲಿ ರೋಪ್‌ವೇ, ಮರೀನಾ... ಹೀಗೆ, ನಿರಂತರ ವಿಕಾಸ ನಡೆಯುತ್ತಿದೆ.

ಈ ಹಪಾಹಪಿಯ ವಿರುದ್ಧ ಧ್ವನಿಗಳು ಎದ್ದಾಗಲೆಲ್ಲ, ಪಶ್ಚಿಮಘಟ್ಟ ಪ್ರದೇಶದ ನಿವಾಸಿಗಳನ್ನು ತೋರಿಸಿ, ಪರಿಸರವಾದಿಗಳ ಗದ್ದಲದ ಕಾರಣಕ್ಕೆ ಅಲ್ಲಿನ ತಳ ನಿವಾಸಿಗಳ ಬದುಕು ಹದಗೆಡುತ್ತಿದೆ ಎಂಬ ಪ್ರತಿಕೂಗೆಬ್ಬಿಸುವ ತಂತ್ರ ಹೂಡಲಾಗುತ್ತಿದೆ. ವಾಸ್ತವದಲ್ಲಿ, ಪಶ್ಚಿಮಘಟ್ಟ ಪ್ರದೇಶದ ನಿವಾಸಿಗಳು ಅನಾದಿ ಕಾಲದಿಂದಲೂ ಅಲ್ಲಿ ಪರಿಸರದೊಂದಿಗೆ ಸಾಮರಸ್ಯದಿಂದಲೇ ಬದುಕುತ್ತಿದ್ದಾರೆ. ಅವರಿಗೆ ಪಶ್ಚಿಮಘಟ್ಟಗಳ ಸಂರಕ್ಷಣೆಯ ನೋಟಿಫಿಕೇಷನ್ ಯಾವ ರೀತಿಯಲ್ಲೂ ಹಾನಿ ಮಾಡದು. ಆದರೆ ಈಗ, ಪಶ್ಚಿಮಘಟ್ಟ ಪ್ರದೇಶದ ನಿವಾಸಿಗಳ ಹೆಗಲಮೇಲೆ ಬಂದೂಕು ಇರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರದೇ ವರಾತ. ಇವರೆಲ್ಲ ಅಲ್ಲಿ ಹೊಸ ಒಕ್ಕಲುಗಳು ಅಥವಾ ವಾಣಿಜ್ಯ ಉದ್ದೇಶಗಳೊಂದಿಗೆ ಅಲ್ಲಿಗೆ ಬಂದಿಳಿದವರು.

2011ರಲ್ಲಿ ಮಾಧವ ಗಾಡ್ಗೀಳ್ ಅವರು, ಇಡಿಯ ಪಶ್ಚಿಮಘಟ್ಟ ಪ್ರದೇಶವನ್ನೇ (1,29,037 ಚದರ ಕಿ.ಮೀ.) ಪರಿಸರ ಸೂಕ್ಷ್ಮ ಎಂದು ವ್ಯಾಖ್ಯಾನಿಸಿ, ಅಲ್ಲಿ ಮೂರು ವಿಭಾಗಗಳನ್ನು ಮಾಡಿ, ಯಾವಯಾವ ವಿಭಾಗಗಳಲ್ಲಿ ಏನೆಲ್ಲ ಚಟುವಟಿಕೆಗಳನ್ನು ಹೇಗೆ ನಡೆಸಬಹುದೆಂದು ವಿವರಿಸಿದ್ದರು. ಪಶ್ಚಿಮಘಟ್ಟಗಳನ್ನು ಕನಿಷ್ಠ 2010ರ ಸ್ಥಿತಿಯಲ್ಲಿದ್ದಂತೆಯೇ ಉಳಿಸಿಕೊಂಡು ಬರಬಹುದಾಗಿದ್ದ ಈ ಪರಿಪೂರ್ಣ ವರದಿಯನ್ನು ತಳತಪ್ಪಿಸಲೆಂದೇ ರಾಜಕೀಯಸ್ಥರು ಕಸ್ತೂರಿ ರಂಗನ್ ಸಮಿತಿ ರಚಿಸಿ, ವರದಿ ತರಿಸಿಕೊಂಡು, ಕೇವಲ 60,000 ಚದರ ಕಿ.ಮೀ. ವ್ಯಾಪ್ತಿಗೆ ಈ ಪರಿಸರ ಸೂಕ್ಷ್ಮ ಪ್ರದೇಶವನ್ನು ಸೀಮಿತಗೊಳಿಸಿಕೊಂಡರು. ಈ ಬೆಳವಣಿಗೆ ಯಿಂದಾಗಿ ಸಿಕ್ಕಿದ ಸಡಿಲಿನ ಕಾರಣಕ್ಕೆ, ಈಗ ಪರಿಸರ ಸೂಕ್ಷ್ಮ ಪ್ರದೇಶ ನೋಟಿಫಿಕೇಷನ್ ಆರು ಬಾರಿ ತಿದ್ದುಪಡಿಯಾಗಿದ್ದರೂ, ಇನ್ನೂ ‘ಅಂತಿಮ ನೋಟಿಫಿಕೇಷನ್’ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಮೊನ್ನೆ ಅಕ್ಟೋಬರ್ ಒಂದಕ್ಕೆ, ಆರನೇ ಕರಡು ನೋಟಿಫಿಕೇಷನ್‌ಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸುವ ಕೊನೆಯ ದಿನಾಂಕ ಮುಗಿದಿದ್ದು, ಎಂದಿನಂತೆ ಕರ್ನಾಟಕ ಸೇರಿದಂತೆ ಎಲ್ಲ ಸಂಬಂಧಿತ ರಾಜ್ಯಗಳೂ ಕರಡನ್ನು ವೀರಾವೇಶದಿಂದ ತಿರಸ್ಕರಿಸಿವೆ. ಇನ್ನು ನೂರು ಕರಡುಗಳು ಬಂದರೂ ಈ ನಿಲುವುಗಳೆಲ್ಲ ಬದಲಾಗಲಾರವು.

ಮುನ್ನೆಚ್ಚರಿಕೆಗಳಿಗೆ ನಿರ್ಲಕ್ಷ್ಯ

ಕಳೆದ ಎರಡು ದಶಕಗಳಿಂದ ಪರಿಸರ ಮನುಷ್ಯರಿಗೆ ಕೊಡಬೇಕಾದಷ್ಟು ಮುನ್ನೆಚ್ಚರಿಕೆಗಳನ್ನು ಕೊಡುತ್ತಲೇ ಬಂದಿದೆ. ಕಾಡು ಪ್ರಾಣಿಗಳ ಹಾವಳಿ, ಭೂಕುಸಿತ, ನೆರೆ, ಬರ, ತೂಫಾನುಗಳು, ಸಮುದ್ರ ಕೊರೆತ, ರೋಗ-ರುಜಿನಗಳು... ಹೀಗೆ.

ಈ ತಿಂಗಳ ಆದಿಯಲ್ಲಿ ಲಿವಿಂಗ್ ಪ್ಲಾನೆಟ್ ರಿಪೋರ್ಟ್-2024 ಪ್ರಕಟಗೊಂಡಿದೆ.(WWF Living Planet Report 2024-A System in Peril) ಅದರ ಪ್ರಕಾರ, 1970-2020ರ ನಡುವಿನ 50 ವರ್ಷಗಳಲ್ಲಿ, ಆ ಸಂಸ್ಥೆಯು ನಿಗಾ ಇರಿಸಿಕೊಂಡಿದ್ದ, ಅಪಾಯದ ಅಂಚಿನಲ್ಲಿರುವ 5,495 ಪ್ರಭೇದಗಳ ಸಸ್ತನಿಗಳು, ಮೀನುಗಳು, ಹಕ್ಕಿಗಳು, ಉಭಯಚರಿಗಳು, ಸರೀಸೃಪಗಳ ಪೈಕಿ ಶೇ. 73ರಷ್ಟು ವಿನಾಶದ ಅಂಚಿಗೆ ಸರಿದಿವೆ ಅಥವಾ ಚರಿತ್ರೆಗೆ ಸೇರಿಹೋಗಿವೆ. ಇದರಲ್ಲಿ ಏಶ್ಯ ಪೆಸಿಫಿಕ್ ವಲಯದ ಪಾಲು ಶೇ.60.

ಈ ಪರಿಸರ ಅಸಮತೋಲನವನ್ನು ನಿಭಾಯಿಸುವ ನಿಟ್ಟಿನಲ್ಲಿ ಜಗತ್ತು, 2030ರ ಹೊತ್ತಿಗೆ ತಲುಪಬೇಕಾಗಿರುವ ಸುಸ್ಥಿರ ಅಭಿವೃದ್ಧಿಯ ಗುರಿ (ಎಸ್‌ಜಿಡಿ) ಎಂದು ನಿಗದಿಪಡಿಸಿಕೊಂಡಿದ್ದ ಗುರಿಗಳಲ್ಲಿ ಶೇ. 30ರಷ್ಟು ಒಂದೋ ಇದ್ದಲ್ಲೇ ಅಟಕಾಯಿಸಿಕೊಂಡಿವೆ ಇಲ್ಲವೇ, 2015ರಲ್ಲಿ ಇದ್ದುದಕ್ಕಿಂತ ಕಳಪೆ ಸ್ಥಿತಿಗೆ ಹಿಮ್ಮುಖವಾಗಿ ಚಲಿಸಿವೆ ಎಂದು ಈ ವರದಿ ಹೇಳುತ್ತಿದೆ.

ಅಭಿವೃದ್ಧಿಗೆ ಸ್ಪರ್ಧೆಯ ಹೆಸರಿನಲ್ಲಿ ಜಗತ್ತಿನ ಆಹಾರ ಉತ್ಪಾದನೆಗಳು ಪ್ರತೀವರ್ಷ ದಾಖಲೆ ಮುರಿಯುತ್ತಿವೆ. ಆದರೆ ಅದೇ ವೇಳೆಗೆ, ಜಗತ್ತಿನಲ್ಲಿ ಇನ್ನೂ ಕೂಡ 73.5 ಕೋಟಿ ಮಂದಿ ಪ್ರತಿದಿನ ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗಬೇಕಿದೆ. ಜಗತ್ತಿನ ಮೂರನೇ ಒಂದಂಶ ಮಂದಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಹಾಗಂತ, ಶ್ರೀಮಂತ, ವಿಕಾಸ ವಿಜೇತ ರಾಷ್ಟ್ರಗಳಲ್ಲಿ ಬೊಜ್ಜಿನ ಪ್ರಮಾಣ ಏರುತ್ತಿದೆ; ಬೊಜ್ಜು ಕರಗಿಸಲು ಮದ್ದು ಸಂಶೋಧನೆ ಆಗಿರುವುದು ಸುದ್ದಿ ಆಗುತ್ತಿದೆ! ಎಐಗೆಂದು ವಿದ್ಯುತ್ ಉತ್ಪಾದನೆಗೆ ಇಡೀ ಜಗತ್ತು ಧಾವಂತದಲ್ಲಿರುವ ವೇಳೆಯಲ್ಲೇ, ಜಗತ್ತಿನ 77 ಕೋಟಿ ಮಂದಿಗೆ ಇನ್ನೂ ವಿದ್ಯುತ್ತೇ ತಲುಪಿಲ್ಲ. ಸುಮಾರು 300 ಕೋಟಿ ಮಂದಿ ಇವತ್ತಿಗೂ ತಮ್ಮ ಅಡುಗೆಗೆ ಸೀಮೆಎಣ್ಣೆ, ಕಟ್ಟಿಗೆ, ಕಲ್ಲಿದ್ದಲು ಬಳಸುತ್ತಿದ್ದಾರೆ. ಕೆಲವೇ ಕೆಲವು ಜನರು ಮಾಡುತ್ತಿರುವ ‘ಅತಿಬಳಕೆ’ಯ ಕಾರಣಕ್ಕೆ ಸಾಮಾಜಿಕ-ಆರ್ಥಿಕ-ರಾಜಕೀಯ ತಾರತಮ್ಯಗಳು ಕಾಣಿಸಿಕೊಂಡಿವೆ ಎಂದು ಲಿವಿಂಗ್ ಪ್ಲಾನೆಟ್ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಇಂತಹದೊಂದು ಅಸಮತೋಲನವನ್ನು ಸರಿಪಡಿಸಿಕೊಳ್ಳುವ ಆತುರ ತೋರದೇ ಇದ್ದರೆ, ಲಿವಿಂಗ್ ಪ್ಲಾನೆಟ್ ವರದಿ ಹೇಳಿರುವಂತೆ System is in Peril.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News