ಕ್ರಿಪ್ಟೊ ಎಷ್ಟು ಸ್ಪೀಡೋ, ಸರಕಾರ ಅಷ್ಟೇ ನಿಧಾನ

ಕ್ರಿಪ್ಟೊ ಕಾನೂನುಬದ್ಧಗೊಳಿಸುವಲ್ಲಿ ವಿಳಂಬ ಮಾಡಿದರೆ ನಷ್ಟಕ್ಕಿಂತ ಲಾಭವೇ ಹೆಚ್ಚು ಎಂದು ಸರಕಾರ ನಂಬಿದಂತಿದೆ. ತಂತ್ರಜ್ಞಾನರಂಗದ ಪೂರ್ಣ ಬೆಂಬಲ ಪಡೆದಿರುವ ಸರಕಾರವೊಂದು ಅದನ್ನು ನಿಯಂತ್ರಿಸಬೇಕಾದ ಸಮಯದಲ್ಲಿ ಮತ್ತು ಜಾಗದಲ್ಲಿ ಅದನ್ನು ನಿಯಂತ್ರಿಸುತ್ತಿಲ್ಲ ಅಥವಾ ಸಕಾರಣವಿಲ್ಲದೇ ವಿಳಂಬ ಸೂತ್ರ ಅನುಸರಿಸುತ್ತಿದೆ ಎಂಬುದನ್ನು ದೇಶ ಹೇಗೆ ಗ್ರಹಿಸಬೇಕು?

Update: 2024-11-30 05:03 GMT

ಒಂದು ಕ್ರಿಪ್ಟೊ ಕರೆನ್ಸಿ ಇದ್ದರೆ ಅದೀಗ ಹದಿನೈದು ದಿನಗಳಿಂದೀಚೆಗೆ 90,000 ಡಾಲರ್ ಬೆಲೆ ಬಾಳುತ್ತದೆ. (ರೂಪಾಯಿಗಳಲ್ಲಿ ಅಂದಾಜು 76 ಲಕ್ಷ ರೂ.ಗಳು) ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ದಿಗ್ವಿಜಯದ ಫಲವಾಗಿ ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಯಲ್ಲಿ ಏಕಾಏಕಿ ಏರತೊಡಗಿದೆ ಮತ್ತು ಭಾರತದಲ್ಲೂ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿನಲ್ಲಿ ಶೇ. 100-250ರ ತನಕದ ಏರಿಕೆ ಕಾಣಿಸಿಕೊಂಡಿದೆಯಂತೆ. 140 ಕೋಟಿ ಭಾರತೀಯರಲ್ಲಿ ಸುಮಾರು 1.9 ಕೋಟಿ ಮಂದಿ ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದು, ಅವರಲ್ಲಿ ಬಹುತೇಕರು 18-35 (ಅಂದರೆ ‘ಮಿಲೆನ್ನಿಯಲ್’ ಮತ್ತು ‘ಜೆನ್ ಝಡ್’) ಪ್ರಾಯವರ್ಗದವರು.

ಯಾವುದೇ ಒಂದು ದೇಶದ ಸುವ್ಯವಸ್ಥೆಯ ತಳಪಾಯಗಳೆಂದರೆ, ಆ ದೇಶದ ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ. ಅವಕ್ಕೆ ಪರ್ಯಾಯವಾಗಿ ಸಮಾನಾಂತರ ವ್ಯವಸ್ಥೆಗಳು ಹುಟ್ಟಿಕೊಳ್ಳತೊಡಗಿದರೆ, ಈ ಸುವ್ಯವಸ್ಥೆ ಎಲ್ಲೋ ಹದತಪ್ಪಿದೆ ಎಂದೇ ಅರ್ಥ. ಭಾರತದಲ್ಲಿ ಸಾಂವಿಧಾನಿಕ ವ್ಯವಸ್ಥೆಯ ಒಳಗೆ ರಿಸರ್ವ್ ಬ್ಯಾಂಕಿನ ನಿಯಂತ್ರಣದಲ್ಲಿ ದೇಶದ ಕರೆನ್ಸಿ ‘ರೂಪಾಯಿ’ ಕಾರ್ಯಾಚರಿಸುತ್ತದೆ. ಅದಕ್ಕೆ ಹೊರತಾದ ಯಾವುದೇ ವ್ಯವಸ್ಥೆ ಸಾಂವಿಧಾನಿಕ ಅಲ್ಲ ಎಂಬುದು ಸಾಂಪ್ರದಾಯಿಕ ನಂಬಿಕೆ. ಕ್ರಿಪ್ಟೊ ಕರೆನ್ಸಿ ರಂಗದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆ ಕುರಿತು ದೇಶದೊಳಗಿನ ಕೆಲವು ಮೌನಗಳು ಮತ್ತೆ ಕೆಲವು ಮಾತುಗಳನ್ನು ಎತ್ತಿ ತೋರಿಸುವ ಪ್ರಯತ್ನ ಇದು.

2021ರಲ್ಲಿ ಕ್ರಿಪ್ಟೊ ಕರೆನ್ಸಿ ಎಂಬುದು scam against Dollar ಎಂದು ಕಿಡಿಕಾರಿದ್ದ ಅಮೆರಿಕದ ಭಾವೀ ಅಧ್ಯಕ್ಷರು ಈಗ ಬದಲಾದ ಸನ್ನಿವೇಶದಲ್ಲಿ, ಅಮೆರಿಕವನ್ನು ‘Crypto capital of the world’ ಮಾಡುವ ಘೋಷಣೆ ನೀಡಿದ್ದಾರೆ. ಟ್ರಂಪ್ ಅವರ ಹೊಸ ಜಿಗರಿ ದೋಸ್ತ್ ಎಲಾನ್ ಮಸ್ಕ್, 2013ರಲ್ಲಿ ಕ್ರಿಪ್ಟೊ ಕರೆನ್ಸಿಗಳನ್ನು ಗೇಲಿ ಮಾಡಿ ಮೀಮ್ ರೂಪದಲ್ಲಿ ತೇಲಿಬಿಟ್ಟಿದ್ದ DOGECoin ಕ್ರಿಪ್ಟೊ ಕರೆನ್ಸಿ ಈಗ ಎಷ್ಟು ಸೀರಿಯಸ್ ರೂಪ ತಳೆದುಬಿಟ್ಟಿದೆ ಎಂದರೆ, ಅದಕ್ಕೂ ಇಂದು ಮಾರುಕಟ್ಟೆಯಲ್ಲಿ ಬೆಲೆ ಇದೆ, ಕೊಳ್ಳುಗರಿದ್ದಾರೆ; ಅಷ್ಟೇ ಏಕೆ, ಸ್ವತಃ ಟ್ರಂಪ್ ತಮ್ಮ ಭಾವೀ ಸರಕಾರಕ್ಕೆ The Department of Government Efficiency (DOGE) ಸ್ಥಾಪನೆ ಮಾಡಿ, ಅದಕ್ಕೆ ಸ್ವತಃ ಗೆಳೆಯ ಎಲಾನ್ ಮಸ್ಕ್ ಮತ್ತು ತಮ್ಮದೇ ಪಕ್ಷದ ಉದ್ಯಮಪತಿ ವಿವೇಕ್ ರಾಮಸ್ವಾಮಿ ಅವರನ್ನು ನೇಮಿಸಿಬಿಟ್ಟಿದ್ದಾರೆ!

ಕೋವಿಡ್ ಕಾಲದಲ್ಲಿ ಮಕಾಡೆ ಮಲಗಿದ್ದ ಕ್ರಿಪ್ಟೊ ಕರೆನ್ಸಿಗಳು, ಅಮೆರಿಕದ ಚುನಾವಣೆಗಳಲ್ಲಿ ಟ್ರಂಪ್ ಗೆಲುವಿನ ಸಾಧ್ಯತೆಗಳು ನಿಚ್ಚಳಗೊಂಡಂತೆಲ್ಲ ಚೇತರಿಸಿಕೊಳ್ಳತೊಡಗಿದವು, ಅಕ್ಟೋಬರ್ ಮಧ್ಯಭಾಗದಿಂದೀಚೆಗೆ ಪ್ರಮುಖ ಕ್ರಿಪ್ಟೊ ಕರೆನ್ಸಿ ಬಿಟ್ ಕಾಯಿನ್ ಮೌಲ್ಯದಲ್ಲಿ ಶೇ. 45 ಏರಿಕೆ ಆಗಿದೆ. ಸುಮಾರು 20 ಮುಖ್ಯ ಕ್ರಿಪ್ಟೊಗಳೆಲ್ಲವೂ ಸಿಕ್ಕಾಪಟ್ಟೆ ಏರಿಕೆ ಕಂಡಿವೆ. ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಕ್ರಿಪ್ಟೊ ಪರ ಇರುವ ವ್ಯವಹಾರಸ್ಥರು ಸುಮಾರು 16 ಕೋಟಿ ಅಮೆರಿಕನ್ ಡಾಲರುಗಳನ್ನು ವ್ಯಯಿಸಿದ್ದಾರೆ ಎಂಬುದು ಅಲ್ಲೀಗ ಬಹಿರಂಗ ಸತ್ಯ. ಸಹಜವಾಗಿಯೇ, ತಾನು ಗೆದ್ದ ತಕ್ಷಣ, ಇಲ್ಲಿಯ ತನಕ ಅಮೆರಿಕದಲ್ಲಿ ಕ್ರಿಪ್ಟೊ ಕರೆನ್ಸಿಗಳ ಕುರಿತು ಸಂಶಯ ಹೊಂದಿದ್ದು, ಬಿಗಿ ನಿಯಮಗಳನ್ನು ವಿಧಿಸಿದ್ದ ಅಲ್ಲಿನ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅಧ್ಯಕ್ಷ ಗ್ಯಾರಿ ಗೆನ್‌ಸ್ಲರ್ ಅವರನ್ನು ಕಿತ್ತೊಗೆಯುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

ಅಮೆರಿಕದಲ್ಲಿ ಇಷ್ಟೆಲ್ಲ ಕ್ಷಿಪ್ರ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲೂ ಕ್ರಿಪ್ಟೊ ಮಾರುಕಟ್ಟೆಯಲ್ಲಿ ಆಕಾಂಕ್ಷೆಗಳು ಗರಿಗೆದರತೊಡಗಿವೆ. ಆದರೆ, ಭಾರತದ ಕಾನೂನು, ರೂಪಾಯಿಗೆ ಪರ್ಯಾಯವಾಗಿ ನಿಂತಿರುವ ಈ ಹೊಸ ಮತ್ತು ಕೆಲವರಿಗೆ ಮಾತ್ರ ದಕ್ಕುವ ಸ್ಥಿತಿಯಲ್ಲಿರುವ ಕರೆನ್ಸಿಯ ಬಗ್ಗೆ ಏನು ಹೇಳುತ್ತದೆ?

ಹಾಲಿ ಭಾರತ ಸರಕಾರದಲ್ಲಿ ಕ್ರಿಪ್ಟೊ ಕರೆನ್ಸಿಗಳ ಕುರಿತು ಕಾಣಿಸುತ್ತಿರುವ ನಿಗೂಢ ಮೌನ ಮತ್ತು ಗೊಂದಲಗಳು ಗಮನಾರ್ಹ. ಸದ್ಯಕ್ಕೆ ಇಲ್ಲಿ ಕ್ರಿಪ್ಟೊ ಕರೆನ್ಸಿಗಳನ್ನು ಹೊಂದಿರುವುದು ಅಪರಾಧ ಅಲ್ಲ, ಆದರೆ ಅವು ನಮ್ಮ ರೂಪಾಯಿಯಂತೆ ‘ಲೀಗಲ್ ಟೆಂಡರ್’ ಅಲ್ಲ!

ಭಾರತದಲ್ಲಿ ಕ್ರಿಪ್ಟೊ ಕರೆನ್ಸಿಗೆ ಅವಕಾಶ ಬೇಕೇ ಬೇಡವೇ ಎಂಬ ಗೊಂದಲ ಸ್ವಲ್ಪ ಹಳೆಯದು. 2018ರಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಕ್ರಿಪ್ಟೊ ಕರೆನ್ಸಿಗಳಿಗೆ ಬ್ಯಾಂಕಿಂಗ್ ಬೆಂಬಲವನ್ನು ನಿಷೇಧಿಸಿತ್ತು. ಆದರೆ ಅದನ್ನು 2020ರಲ್ಲಿ ಭಾರತದ ಸುಪ್ರೀಂ ಕೋರ್ಟು ತಳ್ಳಿ ಹಾಕಿತು. ಮುಂದೆ 2022ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಕ್ರಿಪ್ಟೊ ಕರೆನ್ಸಿಯನ್ನು ವರ್ಚುವಲ್ ಡಿಜಿಟಲ್ ಆಸ್ತಿ (ವಿಡಿಎ) ಎಂದು ಆದಾಯ ತೆರಿಗೆ ಕಾಯ್ದೆಯ 2(47ಎ)ಅಡಿಯಲ್ಲಿ ಪ್ರಕಟಿಸಿ, ಕ್ರಿಪ್ಟೊ ಹೊಂದಿರುವವರಿಗೆ ಆ ಮೊತ್ತದ ಮೇಲೆ ನೇರ ಶೇ. 30 ಆದಾಯ ತೆರಿಗೆ ಮತ್ತು ವರ್ಷಕ್ಕೆ ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಟ್ರೇಡಿಂಗ್ ಮೇಲೆ ಶೇ. 1 ಟಿಡಿಎಸ್ ವಿಧಿಸಿದರು. ಹಣಕಾಸು ಸಚಿವಾಲಯದ ಅಡಿಯಲ್ಲಿ ಕ್ರಿಪ್ಟೊಗಳ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಆರ್‌ಬಿಐ ಮತ್ತು ಸೆಬಿಗೆ ನೀಡಲಾಗಿತ್ತು.

2023ರ ಮಾರ್ಚ್ ತಿಂಗಳಲ್ಲಿ ಕ್ರಿಪ್ಟೊವನ್ನು ಮನಿ ಲಾಂಡರಿಂಗ್ ಪ್ರತಿಬಂಧ ಕಾಯ್ದೆಯ ಅಡಿ (ಪಿಎಂಎಲ್‌ಎ) ತರಲಾಯಿತಲ್ಲದೇ ಅದಕ್ಕೆ ಕೆವೈಸಿ ಮತ್ತಿತರ ಸ್ಟ್ಯಾಂಡರ್ಡ್ ಗಳನ್ನು ಅಳವಡಿಸಲಾಯಿತು.

2020ರ ಹೊತ್ತಿಗೆ ಕ್ರಿಪ್ಟೊ ಕರೆನ್ಸಿ ನಿಯಂತ್ರಣ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ -2021 ಸಿದ್ಧಗೊಂಡಿದೆಯಾದರೂ, ಅದು ಇನ್ನೂ ಸಂಸತ್ತಿನ ಮುಂದೆ ಬರಲು ಮುಹೂರ್ತ ಕೂಡಿ ಬಂದಿಲ್ಲ. ಖಾಸಗಿ ಕ್ರಿಪ್ಟೊಗಳನ್ನು ನಿಷೇಧಿಸಿ ಆರ್‌ಬಿಐ ಕಡೆಯಿಂದಲೇ ಅಧಿಕೃತವಾಗಿ ಕ್ರಿಪ್ಟೊ ಕರೆನ್ಸಿ ಹೊರಡಿಸುವ ಉದ್ದೇಶ ಸರಕಾರಕ್ಕೆ ಇತ್ತು. ಅದಕ್ಕಾಗಿ ಡಿಜಿಟಲ್ ಕರೆನ್ಸಿ ಬೋರ್ಡ್ ಆಫ್ ಇಂಡಿಯಾ (ಡಿಸಿಬಿಐ) ಸ್ಥಾಪನೆಯ ಉದ್ದೇಶವೂ ಇತ್ತು.

ಸದ್ಯಕ್ಕೆ ಆರ್‌ಬಿಐ 2022ರ ಡಿಸೆಂಬರ್ 1ರಂದು e-Rupee ಎಂಬ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಮುಂಬೈ, ದಿಲ್ಲಿ, ಬೆಂಗಳೂರು, ಭುವನೇಶ್ವರ, ಚಂಡಿಗಡ ಈ ಐದು ನಗರಗಳಲ್ಲಿ ಜಾರಿಗೊಳಿಸಿದೆ.

ಕ್ರಿಪ್ಟೊ ಸಂಬಂಧದ ಹಲವಾರು ಅಪರಾಧಗಳು ಭಾರತದಲ್ಲಿ ಸಂಭವಿಸಿವೆ. 2020ರಲ್ಲಿ ಡಾರ್ಕ್ ನೆಟ್‌ನಲ್ಲಿ ಮಾದಕ ದ್ರವ್ಯ ಪ್ರಕರಣವೊಂದರ ವಿಚಾರಣೆಗೆ ತೆರಳಿದ ಪೊಲೀಸರಿಗೆ ಸಿಕ್ಕಿಬಿದ್ದ ಶ್ರೀಕೃಷ್ಣ ರಮೇಶ್ (ಶ್ರೀಕಿ) ಎಂಬ ಹ್ಯಾಕರ್‌ಗೆ ಹಲವು ರಾಜಕಾರಣಿಗಳ ಜೊತೆ ಸಂಬಂಧ ಇದೆ ಎಂಬುದು ಈಗ ಹಳೇ ಸುದ್ದಿ. ಇದಲ್ಲದೆಯೂ ಹಲವು ಕ್ರಿಪ್ಟೊ ಸಂಬಂಧಿ ಅಪರಾಧಗಳು ವರದಿಯಾದದ್ದು, ಅದು ಮಕಾಡೆ ಮಲಗಿದಾಗ ನಷ್ಟ ಸಂಭವಿಸಿದ್ದು, ಎಲ್ಲವೂ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿವೆ.

ವಿಷಯ ಏನಪ್ಪಾ ಅಂದ್ರೆ...

ಕ್ರಿಪ್ಟೊ ಕರೆನ್ಸಿಯ ಹಿಂದಿರುವ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಸರಕಾರವು ಆರೋಗ್ಯ, ಕೃಷಿ, ಹಣಕಾಸು, ಶಿಕ್ಷಣ, ಚುನಾವಣೆ, ಇ-ಗವರ್ನೆನ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ಬಳಸುವುದಕ್ಕಾಗಿ ಸಿದ್ಧತೆ ನಡೆಸಿರುವುದು ಸ್ವಾಗತಾರ್ಹವೇ. ಆದರೆ, ಕ್ರಿಪ್ಟೊ ಕರೆನ್ಸಿಯನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವಲ್ಲಿ ಸರಕಾರದ ವಿಳಂಬಗಳು ಹಲವು ಪ್ರಶ್ನೆಗಳನ್ನು ಎತ್ತುತ್ತಿವೆ.

ಇತ್ತೀಚೆಗೆ ಮುಗಿದ ಸಾರ್ವತ್ರಿಕ ಚುನಾವಣೆಗಳಿಗೆ ಅನಧಿಕೃತವಾಗಿ ಸಾವಿರಾರು ಕೋಟಿ ರೂಪಾಯಿಗಳ ಬಳಕೆ ಆಗಿದೆ. ರಾಜಕೀಯ ಪಕ್ಷಗಳು ತಮ್ಮ ಅಕ್ರಮ ಹಣ ಚಲಾವಣೆಗೆ ಕ್ರಿಪ್ಟೊ ಕರೆನ್ಸಿಯನ್ನು ಯಾವ ಪ್ರಮಾಣದಲ್ಲಿ ಬಳಸಿವೆ ಎಂಬುದು ಯಾವತ್ತಿಗೂ ಸಾರ್ವಜನಿಕರಿಗೆ ತಿಳಿಯದು. ಏಕೆಂದರೆ, ದೇಶದಲ್ಲಿ ಯಾರ ಬಳಿ ಎಷ್ಟು ಪ್ರಮಾಣದಲ್ಲಿ ಕ್ರಿಪ್ಟೊ ಕರೆನ್ಸಿ ಇದೆ ಎಂಬುದನ್ನು ತಿಳಿಯುವುದಕ್ಕೆ ಯಾವುದೇ ಕಾನೂನಿನ ‘ಟೂಲ್’ ಸರಕಾರದ ಬಳಿ ಇಲ್ಲ. ಮೊನ್ನೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಕ್ರಿಪ್ಟೊ ಬಳಕೆ ಬಗ್ಗೆ ವಿವಾದ ಎದ್ದಿತ್ತು.

ಕ್ರಿಪ್ಟೊ ಕಾನೂನುಬದ್ಧಗೊಳಿಸುವಲ್ಲಿ ವಿಳಂಬ ಮಾಡಿದರೆ ನಷ್ಟಕ್ಕಿಂತ ಲಾಭವೇ ಹೆಚ್ಚು ಎಂದು ಸರಕಾರ ನಂಬಿದಂತಿದೆ. ತಂತ್ರಜ್ಞಾನರಂಗದ ಪೂರ್ಣ ಬೆಂಬಲ ಪಡೆದಿರುವ ಸರಕಾರವೊಂದು ಅದನ್ನು ನಿಯಂತ್ರಿಸಬೇಕಾದ ಸಮಯದಲ್ಲಿ ಮತ್ತು ಜಾಗದಲ್ಲಿ ಅದನ್ನು ನಿಯಂತ್ರಿಸುತ್ತಿಲ್ಲ ಅಥವಾ ಸಕಾರಣವಿಲ್ಲದೇ ವಿಳಂಬ ಸೂತ್ರ ಅನುಸರಿಸುತ್ತಿದೆ ಎಂಬುದನ್ನು ದೇಶ ಹೇಗೆ ಗ್ರಹಿಸಬೇಕು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News