ಸರಕಾರಗಳ ಬೇಜವಾಬ್ದಾರಿಗೆ ಈಗ ‘ಗಿಗ್ ಇಕಾನಮಿ’ ಎಂಬ ಮಾನವ ಅಸ್ತ್ರ

ಈವತ್ತು ದೇಶದ ಉತ್ಪಾದಕತೆಗೆ ಡಿವಿಡೆಂಡ್ ಎಂದುಕೊಂಡಿದ್ದ ಎಳೆಯರಿಗೆ ಉದ್ಯೋಗಾವಕಾಶಗಳೇ ಸಿಗುತ್ತಿಲ್ಲ. ಅವರು ತಮ್ಮ ಉಳಿವಿಗಾಗಿ ತಾತ್ಕಾಲಿಕವಾದ ಗಿಗ್ ವರ್ಕ್‌ಗಳನ್ನೇ ಶಾಶ್ವತವಾಗಿ ಅವಲಂಬಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ತಮಾಷೆ ಎಂದರೆ, ಸರಕಾರಗಳು ತಮ್ಮ ಮುಂಗಾಣ್ಕೆಯ ಈ ಬೃಹತ್ ವೈಫಲ್ಯವನ್ನೇ ಗಿಗ್ ಇಕಾನಮಿ ಎಂಬ ಬ್ಯಾಡ್ಜ್ ಧರಿಸಿ ಸಂಭ್ರಮಿಸುತ್ತಿವೆ! ದೇಶದಲ್ಲಿಂದು 10 ಕೋಟಿಗೂ ಮಿಕ್ಕಿ ನಿರುದ್ಯೋಗಿ ಯುವಕರಿದ್ದಾರೆ. ಕೋವಿಡ್ ಬಳಿಕ ಗಿಗ್ ಕೆಲಸಗಾರರ ಸಂಖ್ಯೆ 13 ಪಟ್ಟು ಏರಿಕೆ ಕಂಡಿದೆಯಂತೆ! ಇಷ್ಟಿದ್ದರೂ, ಇನ್ನೂ ನಿರುದ್ಯೋಗಿಗಳ ಪ್ರಮಾಣ ದೊಡ್ಡದಿದೆ.

Update: 2023-12-16 06:23 GMT

Photo: istock

ಕರ್ನಾಟಕ ಸರಕಾರವು ಗಿಗ್ ಕೆಲಸಗಾರರ ಹಿತರಕ್ಷಣೆಗಾಗಿ, ‘ಗಿಗ್ ಮತ್ತು ಪ್ಲಾಟ್‌ಫಾರಂ ಕೆಲಸಗಾರರ ಮಸೂದೆ’ಯ ತಯಾರಿಯಲ್ಲಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಮಂಡಿಸಲಿದೆಯಂತೆ. ಈಗಾಗಲೇ ರಾಜಸ್ಥಾನವು ಈ ಬಗ್ಗೆ ಕಾಯ್ದೆಯೊಂದನ್ನು ಜಾರಿಗೆ ತಂದಾಗಿದೆ. ಭಾರತ ಸರಕಾರ ಮತ್ತದರ ಚಿಂತನ ಚಾವಡಿಯಾದ ನೀತಿ ಆಯೋಗ ಈ ನಿಟ್ಟಿನಲ್ಲಿ ಈಗಾಗಲೇ ತಲೆ ಕೆಡಿಸಿಕೊಂಡಿವೆ.

ಇತ್ತೀಚೆಗಿನ ದಿನಗಳಲ್ಲಿ ಆಗಾಗ ಕೇಳಿಬರುವ ಸುದ್ದಿ ‘ಗಿಗ್’ ಕೆಲಸಗಾರರದು. ಅವರು ಯಾರು? ಮಧ್ಯ ವಯಸ್ಕರು ತಮ್ಮ ಸಣ್ಣ ಉದ್ಯೋಗದ ಜೊತೆಗೆ ಮೇಲು ಸಂಪಾದನೆಗಾಗಿ, ಯುವಕರು ಸಮರ್ಪಕವಾದ ಒಂದು ಉದ್ಯೋಗ ಕಂಡುಕೊಳ್ಳುವ ಅವಧಿಯಲ್ಲಿ ಇತರರಿಗೆ ಹೊರೆ ಆಗದಂತೆ ತಮ್ಮ ಖರ್ಚು ಹುಟ್ಟುವ ಹಾದಿ ಹುಡುಕಿಕೊಳ್ಳಲು, ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ತಾವೇ ಆರ್ಥಿಕ ಬೆಂಬಲ ರೂಢಿಸಿಕೊಳ್ಳಲು ಅಥವಾ ನಿವೃತ್ತರು ತಮ್ಮ ಬದುಕಿನ ಹೊರೆಯನ್ನು ತಾವೇ ಹೊತ್ತುಕೊಳ್ಳಲು, ‘ತಾತ್ಕಾಲಿಕ ನೆಲೆಯಲ್ಲಿ’ ಸಣ್ಣ ಪುಟ್ಟ ಕೆಲಸ ಮಾಡಿ, ಅದಕ್ಕೆ ಪ್ರತಿಫಲ ಪಡೆದುಕೊಳ್ಳುವುದನ್ನು ‘ಗಿಗ್ ಕೆಲಸ’ ಎಂದು ಇತ್ತೀಚೆಗಿನವರೆಗೂ ಕರೆಯಲಾಗುತ್ತಿತ್ತು. ಆದರೆ ಈಗ ಆನ್‌ಲೈನ್ ವಹಿವಾಟುಗಳು ಹೆಚ್ಚತೊಡಗಿರುವಂತೆಯೇ, ಗಿಗ್ ಕೆಲಸಗಳು ಯಾವ ಪರಿ ಬೇಡಿಕೆ ಗಳಿಸಿಕೊಳ್ಳುತ್ತಿವೆ ಎಂದರೆ, ಸರಕಾರ ಈಗ ‘ಗಿಗ್ ಇಕಾನಮಿ’ಯ ಮಾತನಾಡುತ್ತಿದೆ. ದೇಶದ ಜಿಡಿಪಿಯಲ್ಲಿ ಅವರ ಪಾಲೆಷ್ಟು ಎಂದು ಲೆಕ್ಕ ಹಾಕುತ್ತಿದೆ!

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚಿನ ಯೂತ್ ಡೆಮೊಗ್ರಾಫಿಕ್ ಡಿವಿಡೆಂಡ್ ಹೊಂದಿರುವ ದೇಶವೆಂದು ಕರೆಸಿಕೊಳ್ಳುತ್ತಿದೆ. ದೇಶದ ಶೇ. 50 ಜನ ಸಮುದಾಯ 25 ವರ್ಷ ಪ್ರಾಯಕ್ಕಿಂತ ಕೆಳಗಿನವರು; ಮತ್ತು ಶೇ. 65 ಜನಸಮುದಾಯ 35 ವರ್ಷ ಪ್ರಾಯಕ್ಕಿಂತ ಕೆಳಗಿನವರು - ಇದು 2022ರ ಜಾಗತಿಕ ಜನಸಂಖ್ಯೆ ಪಕ್ಷಿನೋಟದ ಕಾಣ್ಕೆ. ಭಾರತಕ್ಕೆ ಇದೇನೂ ರಾತ್ರೋರಾತ್ರಿ ದೊರೆತ ವರವಲ್ಲ. ನಮ್ಮ ರಾಜಕೀಯಸ್ಥರು ಕಳೆದ 20 ವರ್ಷಗಳಿಂದಲೂ ಈ ಡಿವಿಡೆಂಡ್ ಒದಗಿಬರುವ, ಅದರ ಸದ್ಬಳಕೆಯ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ. ಆದರೆ ಈ ಚಿಂತನೆಗಳು ಮಾತಿನಿಂದ ಕೃತಿಗಿಳಿಯದ ಕಾರಣಕ್ಕಾಗಿ, ಈವತ್ತು ದೇಶದ ಉತ್ಪಾದಕತೆಗೆ ಡಿವಿಡೆಂಡ್ ಎಂದುಕೊಂಡಿದ್ದ ಎಳೆಯರಿಗೆ ಉದ್ಯೋಗಾವಕಾಶ ಗಳೇ ಸಿಗುತ್ತಿಲ್ಲ. ಅವರು ತಮ್ಮ ಉಳಿವಿಗಾಗಿ ತಾತ್ಕಾಲಿಕವಾದ ಗಿಗ್ ವರ್ಕ್‌ಗಳನ್ನೇ ಶಾಶ್ವತವಾಗಿ ಅವಲಂಬಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ತಮಾಷೆ ಎಂದರೆ, ಸರಕಾರಗಳು ತಮ್ಮ ಮುಂಗಾಣ್ಕೆಯ ಈ ಬೃಹತ್ ವೈಫಲ್ಯವನ್ನೇ ಗಿಗ್ ಇಕಾನಮಿ ಎಂಬ ಬ್ಯಾಡ್ಜ್ ಧರಿಸಿ ಸಂಭ್ರಮಿಸುತ್ತಿವೆ! ದೇಶದಲ್ಲಿಂದು 10 ಕೋಟಿಗೂ ಮಿಕ್ಕಿ ನಿರುದ್ಯೋಗಿ ಯುವಕರಿದ್ದಾರೆ. ಕೋವಿಡ್ ಬಳಿಕ ಗಿಗ್ ಕೆಲಸಗಾರರ ಸಂಖ್ಯೆ 13 ಪಟ್ಟು ಏರಿಕೆ ಕಂಡಿದೆಯಂತೆ! ಇಷ್ಟಿದ್ದರೂ, ಇನ್ನೂ ನಿರುದ್ಯೋಗಿಗಳ ಪ್ರಮಾಣ ದೊಡ್ಡದಿದೆ.

ನೀತಿ ಆಯೋಗವು 2022ರ ಜೂನ್‌ನಲ್ಲಿ ತಯಾರಿಸಿರುವ ಗಿಗ್ ಮತ್ತು ಪ್ಲಾಟ್‌ಫಾರಂ ಇಕಾನಮಿಯ ನೀತಿ ಪತ್ರದಲ್ಲಿ, 20-21ರ ಹೊತ್ತಿಗೆ ದೇಶದಲ್ಲಿ 77ಲಕ್ಷ ಗಿಗ್ ಕೆಲಸಗಾರರಿದ್ದು, 29-30ರ ಹೊತ್ತಿಗೆ ಅವರ ಸಂಖ್ಯೆ 2.35 ಕೋಟಿ ಆಗಲಿದೆ ಎಂದಿದೆ. ಅಂದರೆ, ದೇಶದ ಒಟ್ಟು ಕೆಲಸಗಾರರಲ್ಲಿ ಶೇ.9ರಷ್ಟು ಮಂದಿ ಗಿಗ್ ಕೆಲಸಗಾರರು! ಜೊಮ್ಯಾಟೊ, ಸ್ವಿಗ್ಗಿ, ಅಮೆಝಾನ್, ಫ್ಲಿಪ್‌ಕಾರ್ಟ್ ಸರಕುಗಳನ್ನು ಮನೆಗೆ ತಲುಪಿಸುವ, ಓಲಾ -ಉಬರ್‌ಗಳಲ್ಲಿ ಚಾಲಕರಾಗಿ ದುಡಿಯುವ ಎಳೆಯರು ಇಲ್ಲಿ ನಾವು ಚರ್ಚಿಸುತ್ತಿರುವ ಗಿಗ್ ಕೆಲಸಗಾರರು. ಬಹುತೇಕ ಪದವೀಧರರಾಗಿರುವ ಈ ಎಳೆಯರು, ತಮ್ಮ ವಯಸ್ಸಿನ ಉತ್ತುಂಗದ ಅವಧಿಯಲ್ಲಿರುವವರು, ಅಗತ್ಯ ಕೌಶಲಗಳನ್ನು ಕಲಿತು ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಅವರು ತಯಾರಾಗಬೇಕಾದ ಅವಧಿ ಇದು. ಆದರೆ ಅವರಿಗೆ ಉದ್ಯೋಗಗಳೇ ಬರಗೆಟ್ಟಿವೆ. ಹಾಗಾಗಿ, ಅವರು ಅನಿವಾರ್ಯವಾಗಿ ಗಿಗ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೆಸ್ಟೋರೆಂಟ್‌ಗಳ ಎದುರು ಬೈಕ್‌ಗಳ ಮೇಲೆ ತಮ್ಮ ಸರದಿಗಾಗಿ ಕಾಯುತ್ತಾ, ಮೊಬೈಲ್ ಗೇಂ-ರೀಲ್‌ಗಳಲ್ಲಿ ಮುಳುಗಿ ಹೋಗಿರುವ ಈ ಎಳೆಯರನ್ನು ಕಂಡಾಗ ದುಗುಡ ಆವರಿಸುತ್ತದೆ. ಅವರಿಗೆ ಇದು ದೀರ್ಘಕಾಲಿಕ ಅವಕಾಶಗಳಿರುವ ಉದ್ಯೋಗವೂ ಅಲ್ಲ. ಇನ್ನೈದು ವರ್ಷಗಳಲ್ಲಿ ಡ್ರೋನ್ ತಂತ್ರಜ್ಞಾನ ಇನ್ನಷ್ಟು ಸುಧಾರಿಸಿದರೆ, ಅವರ ಈ ಗಿಗ್ ಕೆಲಸಕ್ಕೂ ಕಲ್ಲು ಬೀಳಲಿದೆ.

ಈ ಉತ್ಪಾದಕ ಪ್ರಾಯವರ್ಗವನ್ನು ದೇಶಕಟ್ಟುವಲ್ಲಿ ಸದ್ಬಳಕೆ ಮಾಡಿಕೊಳ್ಳುವ ಬದಲು, ಅಮೂಲ್ಯವಾದ ಸಮಯ ವ್ಯರ್ಥ ಮಾಡಲು ಬಿಡಲಾಗುತ್ತಿದೆ. ಜೊತೆಗೆ, ಈಗ ಗಿಗ್ ಇಕಾನಮಿ ಎಂಬ ಹೆಸರಲ್ಲಿ ಅವರ ಈ ಉದ್ಯೋಗಕ್ಕೆ ಅಧಿಕೃತ ಮಾನ್ಯತೆ ಕೊಡಲು ಹೊರಟಿರುವುದು ದೂರದೃಷ್ಟಿ ಇಲ್ಲದ ಅಪಾಯಕಾರಿ ನಡೆ. ಸದ್ಯಕ್ಕೆ ಇರುವ ಗಿಗ್ ಕೆಲಸಗಾರರಲ್ಲಿ ಶೇ.31 ಮಂದಿ ಕೌಶಲರಹಿತರು, ಶೇ.47 ಮಂದಿ ಅರೆಕುಶಲರು ಮತ್ತು ಶೇ. 22 ಮಂದಿ ಕುಶಲರು ಎಂದು ನೀತಿ ಆಯೋಗ ಅಂದಾಜಿಸಿದೆ. ಇವರ ಕೌಶಲ ವೃದ್ಧಿಯ ಬಗ್ಗೆ ಸರಕಾರಗಳು ಮಾತನಾಡುತ್ತಿವೆಯಾದರೂ, ಅದು ಯೋಜಿತ ಮಾತು ಅನ್ನಿಸುತ್ತಿಲ್ಲ. ಕಳೆದ 10 ವರ್ಷಗಳಲ್ಲಿ, ಸರಕಾರದ ಕಡೆಯಿಂದ ಕೌಶಲಾಭಿವೃದ್ಧಿ ಪ್ರಯತ್ನಗಳ ಹೊರತಾಗಿಯೂ ದೇಶದ ಯುವ ಸಮೂಹದ ‘ಎಂಪ್ಲಾಯೆಬಿಲಿಟಿ’ ಹೆಚ್ಚಿಲ್ಲ ಎಂದು ಉದ್ಯಮ ವಲಯಗಳು ಆಗಾಗ ಹೇಳುತ್ತಲೇ ಬರುತ್ತಿವೆ.

ಸರಕಾರ ಸದ್ಯಕ್ಕೀಗ ಗಿಗ್ ಕೆಲಸಗಾರರಿಗೆ ಆರೋಗ್ಯ-ಅಪಘಾತಗಳಿಗೆ ವಿಮೆ ರಕ್ಷಣೆ, ಅನಾರೋಗ್ಯ ರಜೆ ಸೌಲಭ್ಯಗಳನ್ನೆಲ್ಲ ಕೊಡಲು ಯೋಜಿಸುತ್ತಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ಅವರಿಗಾಗಿಯೇ ನಿವೃತ್ತಿ-ಪೆನ್ಶನ್ ಪ್ಲಾನ್‌ಗಳು, ಗಿಗ್ ಕೆಲಸ ಸಿಗದಿದ್ದಾಗ ಬೆಂಬಲಕ್ಕೆ ಯೋಜನೆಗಳನ್ನು ರೂಪಿಸಲು ಹೊರಡುವುದು ಸರಕಾರಗಳ ಅಸಹಾಯಕತೆಯನ್ನಷ್ಟೇ ಬಿಂಬಿಸುತ್ತದೆ.

2020ರಲ್ಲಿ ಕೇಂದ್ರ ಸರಕಾರ ಹಲವು ಕಾರ್ಮಿಕ ಕಾನೂನುಗಳನ್ನು ಒಟ್ಟು ಸೇರಿಸಿ ತಂದಿರುವ ಸಾಮಾಜಿಕ ಭದ್ರತಾ ಸಂಹಿತೆ 2020ರ ಅಡಿಯಲ್ಲಿ, ಕರ್ನಾಟಕ ಸೇರಿದಂತೆ 29 ರಾಜ್ಯಗಳು ಈಗಾಗಲೇ ಗಿಗ್ ಮತ್ತು ಪ್ಲಾಟ್‌ಫಾರಂ ಕೆಲಸಗಾರರಿಗೆ ಕರಡು ನಿಯಮಗಳನ್ನು ಪ್ರಕಟಿಸಿವೆ. ಕರ್ನಾಟಕ ಸರಕಾರ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಕಾಯ್ದೆಯನ್ನೇ ತರುವ ಉದ್ದೇಶ ಹೊಂದಿದೆ.

ಒಂದು ಕಡೆಯಲ್ಲಿ ಕೃಷಿ ಪ್ರಧಾನವಾದ ನಮ್ಮ ದೇಶದ ಸಣ್ಣ ಕೃಷಿಕರನ್ನು ಮತ್ತು ಕೃಷಿ ಕಾರ್ಮಿಕರನ್ನು ಕೃಷಿಯಿಂದ ಹೊರಕಳಿಸಿ, ಅವರಿಗೆ ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಹೇಳುತ್ತಲೇ, ಇನ್ನೊಂದೆಡೆ ಅವರನ್ನು ಗಿಗ್‌ನಂತಹ ತಾತ್ಕಾಲಿಕ ವ್ಯವಸ್ಥೆಗೆ ದೂಡಿ, ಅವರ ಬದುಕನ್ನು ಇನ್ನಷ್ಟು ಅತಂತ್ರಗೊಳಿಸುವುದು ಸ್ವೀಕಾರಾರ್ಹ ಅಲ್ಲ. ಈ ನಿಟ್ಟಿನಲ್ಲಿ ಸರಕಾರಗಳು ಸಮಗ್ರವಾದ, ದೂರಗಾಮಿ ಚಿಂತನೆಗಳಿರುವ ನೀತಿಯನ್ನು ರೂಪಿಸಿಕೊಳ್ಳುವುದು ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News