ನಮ್ಮ ಬಿಪಿ, ಶುಗರ್ ಉಸಾಬರಿ ತಮಗೇಕೆ ಸ್ವಾಮೀ?

ಈ ಮಹಾ ಅಪಾಯ, ‘ಡಿಜಿಟಲ್’ ಕನಸುಗಳಲ್ಲಿ ಮೈಮರೆತಿರುವ ಯಾರಿಗೂ ಇನ್ನೂ ಅರಿವಿಗೆ ಬಂದಂತಿಲ್ಲ. ವ್ಯಾಪಾರಿಗಳ ಪರ ಇರುವ ಸರಕಾರವೊಂದು, ಯಾವುದೇ ಕಾನೂನು ನಿಯಂತ್ರಣಗಳಿಲ್ಲದೆ ಈ ಪೋರ್ಟಲ್‌ನ ಸಂಸ್ಕರಿತ ಮೆಟಾಡೇಟಾಗಳನ್ನು ವ್ಯಾಪಾರದ ಹಿತಾಸಕ್ತಿಗಳಿಗೆ ಅನಧಿಕೃತವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿಗೆ ಕಡಿವಾಣ ಬೀಳದೆ, ಈ ರೀತಿಯ ಡೇಟಾ ಸಂಗ್ರಹ-ಅಪಾರದರ್ಶಕ ನಿರ್ವಹಣೆ ಕಾನೂನು ಬಾಹಿರ.

Update: 2024-09-21 06:50 GMT

ನಾವು ವೈದ್ಯರ ಕ್ಲಿನಿಕ್‌ಗೆ, ರಕ್ತ ಇತ್ಯಾದಿ ತಪಾಸಣಾ ಪ್ರಯೋಗಾಲಯಗಳಿಗೆ, ಆಸ್ಪತ್ರೆಗೆ ಹೋಗಿ ತಪಾಸಣೆಗಳನ್ನು ಮಾಡಿಸಿಕೊಂಡರೆ, ನಮ್ಮ ಕ್ಲಿನಿಕಲ್-ಪ್ರಯೋಗಾಲಯ ಸಂಬಂಧಿ ಆರೋಗ್ಯ ದಾಖಲೆಗಳು, ಔಷಧೋಪಚಾರ, ಆಸ್ಪತ್ರೆ ಖರ್ಚು ಇತ್ಯಾದಿಗಳ ಮಾಹಿತಿಯನ್ನು ಕಾಪಿಡುವ ಮತ್ತು ಸಂಬಂಧಪಟ್ಟವರಿಗೆ ಒದಗಿಸುವ ಜವಾಬ್ದಾರಿಯನ್ನು ಸರಕಾರಗಳು ವಹಿಸಿಕೊಳ್ಳಲು ತೀರ್ಮಾನಿಸಿರುವ ವಿಲಕ್ಷಣ ಬೆಳವಣಿಗೆಯೊಂದು ಸಂಭವಿಸುತ್ತಿದೆ. ಆತಂಕಕಾರಿ ಸಂಗತಿ ಎಂದರೆ, ಭಾರತ ಸರಕಾರದ ಈ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಯೋಜನೆಗೆ ಕರ್ನಾಟಕ ಸರಕಾರ ಕೂಡ ಕುರುಡಾಗಿ ಸಾತ್ ನೀಡುತ್ತಿರುವಂತಿದೆ.

ಆರೋಗ್ಯ ರಕ್ಷಣೆ ಕ್ಷೇತ್ರದ ಎಲ್ಲ ಹಿತಾಸಕ್ತಿದಾರರ ನಡುವೆ ಆರೋಗ್ಯ ಮಾಹಿತಿಗಳನ್ನು ತಡೆರಹಿತವಾಗಿ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಲ್ಲುದೆಂದು ಹೇಳಲಾಗುತ್ತಿರುವ ಈ ವ್ಯವಸ್ಥೆಯಲ್ಲಿ, ರೋಗಿ ದಾಖಲೆಗಳ ಸುಲಭ ಸಂಗ್ರಹ-ಒಪ್ಪಿಗೆ ಆಧರಿತ ಹಂಚಿಕೆ, ಮಾಹಿತಿ ವಿನಿಮಯ, ರೋಗಿಗಳ ರೋಗ ಹಿನ್ನೆಲೆ-ರೋಗನಿರ್ಣಯ-ಚಿಕಿತ್ಸೆಗಳ ಕುರಿತು ಸಂಘಟಿತ ಸಮಾಲೋಚನೆ, ಸಮಯ ದಕ್ಷತೆ, ಟೆಲಿ ಕನ್ಸಲ್ಟೇಷನ್.. ಹೀಗೆ ಹಲವು ಸವಲತ್ತುಗಳು ಲಭ್ಯವಾಗಲಿದ್ದು, ದೇಶದ ಆರೋಗ್ಯಕ್ಕೆ ಇದು ಡಿಜಿಟಲ್ ಬೆನ್ನೆಲುಬಾಗಿ ವರ್ತಿಸಲಿದೆ ಎಂದು ಕರ್ನಾಟಕ ಸರಕಾರದ ಸುತ್ತೋಲೆಯೊಂದು ವಿವರಿಸಿದೆ. ಇಷ್ಟು ಮಾತ್ರವಲ್ಲದೆ, ತಮ್ಮಲ್ಲಿಗೆ ಬರುವ ರೋಗಿಗಳ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ರಚಿಸಿ, ಅದನ್ನು ಪ್ಲಾಟ್‌ಫಾರ್ಮಿಗೆ ಲಿಂಕ್ ಮಾಡುವಂತೆ ಖಾಸಗಿ ಕ್ಲಿನಿಕ್‌ಗಳು, ಪ್ರಯೋಗಾಲಯಗಳಿಗೆ ಕರ್ನಾಟಕ ಸರಕಾರ ಸೂಚನೆ ನೀಡಿದೆ. ಮೂಲ ಡೇಟಾದಾರರಾಗಿರುವ ರೋಗಿಗಳ ಗಮನಕ್ಕೆ ತರದೆ ಅವರ ಆರೋಗ್ಯ ಮಾಹಿತಿಗಳನ್ನು ಪ್ರಭುತ್ವ ಸಂಗ್ರಹಿಸಿಡುವ ಈ ಬೆಳವಣಿಗೆಯು ‘ಡೇಟಾ ವಿಜ್ಞಾನದ’ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಅದು ಹೇಗೆಂದು ವಿವರಿಸುವೆ.

ಮೊದಲನೆಯದಾಗಿ, ಆರೋಗ್ಯವು ಸಾಂವಿಧಾನಿಕವಾಗಿ ರಾಜ್ಯಪಟ್ಟಿಯಲ್ಲಿ ಬರುವ, ರಾಜ್ಯ ಸರಕಾರಗಳು ಜವಾಬ್ದಾರಿ ಹೊರಬೇಕಾಗಿರುವ ಸಂಗತಿ. ಆದರೆ, ಕೋವಿಡ್ ಕಾಲದಲ್ಲಿ ಭಾರತ ಸರಕಾರವು ರಾಜ್ಯಗಳ ಈ ಜವಾಬ್ದಾರಿಯಲ್ಲಿ ‘ವಿಪತ್ತಿನ ಸನ್ನಿವೇಶದ’ ಹೆಸರಿನಲ್ಲಿ ಹಸ್ತಕ್ಷೇಪ ಮಾಡಿದ್ದು ಹಾಗೂ ಆದ ಲೋಪಗಳಿಗೆ ಜವಾಬ್ದಾರಿಗಳನ್ನು ಪ್ರಶ್ನೆಮಾಡಿದಾಗಲೆಲ್ಲ ಆ ಜವಾಬ್ದಾರಿ ರಾಜ್ಯಗಳದು ಎಂದು ನುಣುಚಿಕೊಂಡದ್ದು ಈಗ ಇತಿಹಾಸ. ಕೋವಿಡ್ ಅವಧಿಯಲ್ಲೇ ಲಸಿಕೆ-ರೋಗಿ ಡೇಟಾಬೇಸ್ ರುಚಿ ಹತ್ತಿರುವ ಭಾರತ ಸರಕಾರದ ನೀತಿ ನಿರೂಪಕರು, ಇದೇ ವ್ಯವಸ್ಥೆಯನ್ನು ರೀಪರ್ಪಸ್ ಮಾಡಿ, ಈ ಎಬಿಡಿಎಂಗೆ ಚಾಲನೆ ಕೊಟ್ಟದ್ದು 2021ರಲ್ಲಿ. ಭಾರತ ಸರಕಾರದ ಸುಪರ್ದಿಯಲ್ಲಿ ಇರಲಿರುವ ಈ ಎಬಿಡಿಎಂ ಡೇಟಾ ಪ್ಲಾಟ್‌ಫಾರ್ಮ್, ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಕೇಂದ್ರದ ಹಸ್ತಕ್ಷೇಪ ಅನ್ನಿಸಿಕೊಳ್ಳುವುದಿಲ್ಲವೆ? ಉತ್ತರದಾಯಿತ್ವ ಇಲ್ಲದ ಜವಾಬ್ದಾರಿ ಅಪಾಯಕಾರಿ ಅಲ್ಲವೆ?

ಎರಡನೆಯದಾಗಿ, ಇಂದು ಆರೋಗ್ಯ ಸೇವೆಗಳು ವಾಣಿಜ್ಯೀಕರಣಗೊಂಡ ಬಳಿಕ ಭಾರೀ ದೊಡ್ಡ ಮಾರುಕಟ್ಟೆ ಆಗಿ ಬೆಳೆದು ನಿಂತಿವೆ. ಡಿಜಿಟಲ್ ಆರೋಗ್ಯ ಮಾರುಕಟ್ಟೆ 2027ರ ಹೊತ್ತಿಗೆ 2.50ಲಕ್ಷ ಕೋಟಿಗಳ ಬೃಹತ್ ಮಾರುಕಟ್ಟೆ ಆಗಲಿದೆ ಎಂಬುದು ಮಾರುಕಟ್ಟೆ ಪರಿಣತರ ನಿರೀಕ್ಷೆ. ಈ ಹಂತದಲ್ಲಿ, ರಾಜ್ಯಗಳ ಕೈಯಿಂದ ಈ ಅಮೂಲ್ಯ ಮಾಹಿತಿಗಳನ್ನು ಭಾರತ ಸರಕಾರ ತನ್ನ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಗೆ ಕರ್ನಾಟಕ ಸರಕಾರ ಕೂಡ ತಾಳ ಹಾಕುತ್ತಿರುವುದು ವಿಲಕ್ಷಣವಾಗಿ ಕಾಣಿಸುತ್ತಿದೆ. ಕೇಂದ್ರ-ರಾಜ್ಯ ಸಂಬಂಧಗಳ ಬಗ್ಗೆ, ಜಿಎಸ್‌ಟಿ ಪಾಲಿನ ಬಗ್ಗೆ ಪ್ರಶ್ನಿಸುವುದರಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರಕಾರ ಈ ವಿಚಾರದಲ್ಲಿ ಮಾತ್ರ ಚೆಂಡನ್ನು ಭಾರತ ಸರಕಾರದ ಅಂಗಣಕ್ಕೆ ತಾನೇ ತಟ್ಟೆಯಲ್ಲಿಟ್ಟು ಒಯ್ಯುತ್ತಿರುವುದು ವಿಚಿತ್ರ.

ಮೂರನೆಯದಾಗಿ, ಭಾರತ ಸರಕಾರವು ಜಾರಿಗೆ ತಂದಿರುವ ಡಿಜಿಟಲ್ ಪರ್ಸನಲ್ ಡೇಟಾ ಸಂರಕ್ಷಣಾ ಕಾಯ್ದೆ-2023ರ ಅಡಿಯಲ್ಲಿ, ಅತಿದೊಡ್ಡ ಡೇಟಾ ಫಿಡೂಷರಿ ಆಗಿರುವ ಭಾರತ ಸರಕಾರವು ಸ್ವತಃ ತನ್ನನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ. ಇದು ಡೇಟಾ ಸಂಗ್ರಹ, ಸಂಸ್ಕರಣೆ ಮತ್ತು ದಾಸ್ತಾನುಗಳಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಅಪರಿಮಿತ ಅಧಿಕಾರಗಳನ್ನು ನೀಡಲಿದೆ. ನೇರವಾಗಿ ಪ್ರಜೆಯ ಖಾಸಗಿತನದ ಸಾವಿಧಾನಿಕ ಹಕ್ಕಿನ ಉಲ್ಲಂಘನೆಗೆ ಇದು ಕಾರಣ ಆಗಬಹುದು. ಈ ಮಹಾ ಅಪಾಯ, ‘ಡಿಜಿಟಲ್’ ಕನಸುಗಳಲ್ಲಿ ಮೈಮರೆತಿರುವ ಯಾರಿಗೂ ಇನ್ನೂ ಅರಿವಿಗೆ ಬಂದಂತಿಲ್ಲ. ವ್ಯಾಪಾರಿಗಳ ಪರ ಇರುವ ಸರಕಾರವೊಂದು, ಯಾವುದೇ ಕಾನೂನು ನಿಯಂತ್ರಣಗಳಿಲ್ಲದೆ ಈ ಪೋರ್ಟಲ್‌ನ ಸಂಸ್ಕರಿತ ಮೆಟಾಡೇಟಾಗಳನ್ನು ವ್ಯಾಪಾರದ ಹಿತಾಸಕ್ತಿಗಳಿಗೆ ಅನಧಿಕೃತವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿಗೆ ಕಡಿವಾಣ ಬೀಳದೆ, ಈ ರೀತಿಯ ಡೇಟಾ ಸಂಗ್ರಹ-ಅಪಾರದರ್ಶಕ ನಿರ್ವಹಣೆ ಕಾನೂನು ಬಾಹಿರ.

ನಾಲ್ಕನೆಯದಾಗಿ, ಒಂದು ಸರಕಾರಕ್ಕೆ ಅದರ ಪ್ರಜೆಗಳ ದೈನಂದಿನ ಬದುಕಿನ ಮೇಲೆ ನಿಯಂತ್ರಣ ಎಷ್ಟರ ಮಟ್ಟಿಗೆ ಇರಬೇಕು ಎಂಬ ವಿಚಾರ ಚರ್ಚೆಗೆ ಇದು ಸಕಾಲ. ಆಧಾರ್ ಮತ್ತು ಎಲ್ಲ ಖಾಸಗಿ ದಾಖಲೆಗಳಿಗೆ ಆಧಾರ್ ಲಿಂಕ್, ರಸ್ತೆಗಿಳಿದರೆ ಟೋಲ್ ಡೇಟಾ, ಆಸ್ಪತ್ರೆಗೆ ಹೋದರೆ ಎಬಿಡಿಎಂ ಡೇಟಾ, ಉದ್ಯೋಗಕ್ಕೆ ಹೋದರೆ ಅಲ್ಲಿ ಡೇಟಾ, ಗಳಿಸಿದ್ದು ಬ್ಯಾಂಕಿನಲ್ಲಿಟ್ಟರೆ ಅಲ್ಲಿ ಡೇಟಾ, ಕೃಷಿಗೆ ಇಳಿದರೆ ಅಲ್ಲೂ ಡೇಟಾ, ಚುನಾವಣೆ ಸಮೀಪಿಸಿದರೆ ಯಾವ ಪಕ್ಷದ ಪರ ಎಂಬ ಡೇಟಾ... ಹೀಗೆ ಉತ್ತರೋತ್ತರ ಡೇಟಾಗಳನ್ನು ಸಂಗ್ರಹಿಸಿಕೊಳ್ಳುವ ಸರಕಾರ, ಅದಕ್ಕೆಲ್ಲ ಉತ್ತರದಾಯಿ ಆಗುವುದಕ್ಕೆ ಸಿದ್ಧವಿಲ್ಲದಿರುವುದು ಅಪಾಯಕಾರಿ. ಇಂದು ಪ್ರತಿದಿನ ಎಂಬಂತೆ ಡಿಜಿಟಲ್ ವಂಚನೆಯ ಹೆಸರಿನಲ್ಲಿ ಅಮಾಯಕರು ಕೋಟ್ಯಂತರ ರೂಪಾಯಿಗಳ ವಂಚನೆಗೆ ಒಳಗಾಗುತ್ತಿದ್ದಾರೆ. ಆದರೆ ಸರಕಾರಕ್ಕೆ ಈ ವಂಚಕರು ಯಾರೆಂದು ಪತ್ತೆ ಹಚ್ಚುವುದಾಗಲೀ, ವಂಚನೆಯನ್ನು ನಿಲ್ಲಿಸುವುದಾಗಲೀ ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಡಿಜಿಟಲಿ ವಂಚನೆಯಾಗಿರುವ ಹಣವನ್ನು ಡಿಜಿಟಲಿ ಟ್ರ್ಯಾಕ್ ಮಾಡಿ ವಾಪಸ್ ತಂದು ಕೊಡುವುದೂ ಸಾಧ್ಯ ಆಗಿಲ್ಲ. ಇಂತಹ ‘ಡಿಜಿಟಲ್’ ಬಲಹೀನ ಸರಕಾರ ಮತ್ತದೇ ಡೇಟಾಗಳನ್ನು ಬೇರೆಬೇರೆ ರಂಗಗಳಲ್ಲಿ ‘ಡಿಜಿಟಲ್ ವ್ಯವಸ್ಥೆ ರೂಪಿಸುವ ಹೆಸರಲ್ಲಿ’ ಸಂಗ್ರಹಿಸುವುದು ಯಾವ ಪುರುಷಾರ್ಥಕ್ಕೆ?

ಈಗೇನಾಗಿದೆ?

ಎನ್‌ಎಚ್‌ಎ ಡ್ಯಾಷ್‌ಬೋರ್ಡ್ ಹೇಳುತ್ತಿರುವಂತೆ, ಈಗ ಭಾರತದಲ್ಲಿ 66.82ಕೋಟಿ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆದಾರರಿದ್ದಾರೆ (ಕರ್ನಾಟಕದಲ್ಲಿ: 2.96ಕೋಟಿ); 42.19 ಕೋಟಿ ಆರೋಗ್ಯ ದಾಖಲೆಗಳನ್ನು ಪ್ಲಾಟ್‌ಫಾರ್ಮಿಗೆ ಲಿಂಕ್ ಮಾಡಲಾಗಿದೆ (ಕರ್ನಾಟಕದಲ್ಲಿ: 1.29 ಕೋಟಿ); 3.34ಲಕ್ಷ ಆಸ್ಪತ್ರೆಗಳು ಈ ವ್ಯವಸ್ಥೆಗೆ ನೋಂದಾಯಿಸಿಕೊಂಡಿವೆ (ಕರ್ನಾಟಕದಲ್ಲಿ: 60,586); 4.71ಲಕ್ಷ ಆರೋಗ್ಯ ವೃತ್ತಿಪರರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ (ಕರ್ನಾಟಕದಲ್ಲಿ: 58,208). ಹೀಗೆ ನೋಂದಣಿ ಆಗಿರುವುದರಲ್ಲಿ ಪಿಎಂಜೆಎವೈ ಯೋಜನೆಯ ಮೂಲಕ ಆಗಿರುವುದರ ಪಾಲು 25.73 ಕೋಟಿಯಾದರೆ, CoWIN-MoHFW ಮೂಲಕ ಆಗಿರುವುದು 12.97 ಕೋಟಿ. ಕೆಲವು ರಾಜ್ಯಗಳು ಇಎಸ್‌ಐ, ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳು, ಕಡೆಗೆ ಡಿಜಿಲಾಕರ್ ಮೂಲಕ ಕೂಡ ಈ ABHAಗಳನ್ನು ರಚಿಸಲಾಗಿದೆ! ಅಂದರೆ, ಪಾರದರ್ಶಕವಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸುವ ಬದಲು, ಸರಕಾರದ ವ್ಯಾಪ್ತಿಗೆ ಬಂದ ಫಲಾನುಭವಿಗಳನ್ನೆಲ್ಲ ಅವರಿಂದ ಪರೋಕ್ಷವಾಗಿಯೋ ಅಥವಾ ಅವರಿಗೆ ಗೊತ್ತಿಲ್ಲದಂತೆಯೋ ಒಪ್ಪಿಗೆ ಪಡೆದು, ಈ ಖಾತೆಗಳನ್ನು ರಚಿಸಲಾಗಿರುವಂತೆ ಕಾಣಿಸುತ್ತಿದೆ. ಈಗಲೇ ಹೀಗಾಗಿರುವುದು, ಇನ್ನು ಡೇಟಾ ಸುರಕ್ಷೆಗೆ ಸಂಬಂಧಿಸಿದಂತೆ ಜನ ಹಿತ ಕಾಯುತ್ತದೆ ಎಂಬುದಕ್ಕೆ ಗ್ಯಾರಂಟಿಯಾದರೂ ಏನು?

ಕನಿಷ್ಠ ಕರ್ನಾಟಕ ಸರಕಾರ ಈ ನಿಟ್ಟಿನಲ್ಲಿ ಎಲ್ಲ ಹಿತಾಸಕ್ತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತನ್ನದೇ ಸ್ವತಂತ್ರ ವ್ಯವಸ್ಥೆಯನ್ನು ರೂಪಿಸಬೇಕು; ಅಪಾರದರ್ಶಕ-ಉತ್ತರದಾಯಿತ್ವ ಇಲ್ಲದ ವ್ಯವಸ್ಥೆಯ ಭಾಗ ಆಗಬಾರದು. ಹೆಚ್ಚಿನಂಶ ಈ ನಿಟ್ಟಿನಲ್ಲಿ ದಕ್ಷಿಣದ ರಾಜ್ಯಗಳು, ತಮ್ಮ ಆರ್ಥಿಕ ಪಾಲಿಗಾಗಿ ಧ್ವನಿ ಎತ್ತುತ್ತಿರುವ ಮಾದರಿಯಲ್ಲಿಯೇ ಧ್ವನಿ ಎತ್ತಬೇಕು. ಆರೋಗ್ಯ ವ್ಯವಸ್ಥೆ ಡಿಜಿಟಲ್ ಆಗಬಾರದೆಂಬ ವಾದ ಅಲ್ಲ; ಆದರೆ, ಅದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿರಬೇಕು; ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವಂತಿರಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News