‘ಆತ್ಮನಿರ್ಭರ’ವೀಗ ಬಹುತೇಕ ಮೇಡ್ ಇನ್ ಚೀನಾ
‘ವಾಶಿಂಗ್ಟನ್ ಪೋಸ್ಟ್’ ವರದಿಯ ಪ್ರಕಾರ, ಭಾರತದಲ್ಲಿನ ‘ಆತ್ಮನಿರ್ಭರ’ ಬೆಳವಣಿಗೆಗಳನ್ನು ಅಮೆರಿಕ ಬಿಚ್ಚುಗಣ್ಣಿನಿಂದ ಗಮನಿಸುತ್ತಿದೆ. ಏಕೆಂದರೆ, ಅಮೆರಿಕ ಯಾವುದು ಬೇಡವೆಂಬ ಕಾರಣಕ್ಕೆ ಭಾರತವನ್ನು ಅವಲಂಬಿಸಹೊರಟಿತ್ತೋ, ಅದನ್ನೇ ಭಾರತ ಸ್ವತಃ ಅವಲಂಬಿಸುತ್ತಿದೆ. ಇಂತಹದೊಂದು ವೈರುಧ್ಯದ ಸ್ಥಿತಿಯ ದೀರ್ಘಕಾಲಿಕ ಪರಿಣಾಮಗಳ ಕುರಿತು ಅಮೆರಿಕದಲ್ಲೀಗ ಚರ್ಚೆ ಆರಂಭಗೊಂಡಿದೆ.
2047ರ ಹೊತ್ತಿಗೆ 34.7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮತ್ತು 10 ಟ್ರಿಲಿಯನ್ ಡಾಲರ್ ರಫ್ತು ಸಾಮರ್ಥ್ಯ ಸಾಧಿಸುವ ‘ವಿಕಸಿತ ಭಾರತ’ದ ಕನಸು ಹೊತ್ತಿರುವ ಭಾರತ ಸರಕಾರವು, ಆ ನಿಟ್ಟಿನಲ್ಲಿ ಜಾಗತಿಕ ಸರಬರಾಜು ಹಬ್‌ನ ಮುಂಚೂಣಿಯ ದೇಶವಾಗಲು ಶತಾಯಗತಾಯ ಪ್ರಯತ್ನಿಸುತ್ತಿರುವುದು ಗೊತ್ತಿದೆಯಷ್ಟೇ? ಈ ಪ್ರಯತ್ನವನ್ನು ಭಾರತದ ಒಳಗಿನಿಂದ ಕಂಡಾಗ ಹೇಗನ್ನಿಸುತ್ತಿದೆ? ಸರಕಾರವು ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಹಾಗೂ ಈಗ ಹೊಸದಾಗಿ ಉದ್ಯೋಗ ನೀಡಿಕೆ ಆಧರಿತ ಪ್ರೋತ್ಸಾಹಧನ (ಎಎಲ್‌ಐ)ಗಳನ್ನು ಕಿಸೆಯಿಂದ ಖರ್ಚು ಮಾಡಿಕೊಂಡು, ಹೂಡಿಕೆದಾರರಿಗೆ ರತ್ನಗಂಬಳಿ ಹಾಸುತ್ತಿದೆ ಎಂಬುದೀಗ ಅರಿವಿಗೆ ಬರುತ್ತಿದೆ. ಇದೇ ವೇಳೆಗೆ, ಭಾರತದ ಈ ಪ್ರಯತ್ನಗಳನ್ನು ಹೊರಗಿನಿಂದ ಕಂಡವರಿಗೆ ಏನನ್ನಿಸುತ್ತಿದೆ? ಈ ನಿಟ್ಟಿನಲ್ಲಿ ಕುತೂಹಲಕರ ವರದಿಯೊಂದು ಈ ವಾರದ ಆದಿಯಲ್ಲಿ ಅಮೆರಿಕದ ಪ್ರಮುಖ ಪತ್ರಿಕೆ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಪ್ರಕಟಗೊಂಡಿದೆ.
ಆ ವರದಿಯ ಪ್ರಕಾರ, ಭಾರತದಲ್ಲಿನ ‘ಆತ್ಮನಿರ್ಭರ’ ಬೆಳವಣಿಗೆಗಳನ್ನು ಅಮೆರಿಕ ಬಿಚ್ಚುಗಣ್ಣಿನಿಂದ ಗಮನಿಸುತ್ತಿದೆ. ಏಕೆಂದರೆ, ಅಮೆರಿಕ ಯಾವುದು ಬೇಡವೆಂಬ ಕಾರಣಕ್ಕೆ ಭಾರತವನ್ನು ಅವಲಂಬಿಸಹೊರಟಿತ್ತೋ, ಅದನ್ನೇ ಭಾರತ ಸ್ವತಃ ಅವಲಂಬಿಸುತ್ತಿದೆ. ಇಂತಹದೊಂದು ವೈರುಧ್ಯದ ಸ್ಥಿತಿಯ ದೀರ್ಘಕಾಲಿಕ ಪರಿಣಾಮಗಳ ಕುರಿತು ಅಮೆರಿಕದಲ್ಲೀಗ ಚರ್ಚೆ ಆರಂಭಗೊಂಡಿದೆ. ಆಗಿರುವುದು ಇಷ್ಟು: ಚೀನಾದ ಜೊತೆ ವಾಣಿಜ್ಯ ಸಂಬಂಧಗಳನ್ನು ತಗ್ಗಿಸಿಕೊಳ್ಳುವ (de-risking) ನಿಟ್ಟಿನಲ್ಲಿ, ತನ್ನ ಸರಬರಾಜು ಸಂಪರ್ಕಗಳನ್ನು ಚೀನಾದಿಂದ ದೂರದಲ್ಲಿ ಯೋಜಿಸಿ ಕೊಳ್ಳುತ್ತಿರುವ ಅಮೆರಿಕದ ನೀತಿ ನಿರೂಪಕರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರು ಭಾರತವು ಚೀನಾಕ್ಕೆ ಪರ್ಯಾಯ ಆಗಬಲ್ಲುದು ಎಂದುಕೊಂಡಿದ್ದರು. ಆದರೆ, ಭಾರತವು ಚೀನಾದಿಂದಲೇ ಮೂಲವಸ್ತುಗಳನ್ನೆಲ್ಲ ಆಮದು ಮಾಡಿಕೊಂಡು, ಕೇವಲ ಅದನ್ನು ಅಸೆಂಬಲ್ ಮಾಡಿಕೊಡುವ ಕೇಂದ್ರವಾದರೆ ಪ್ರಯೋಜನವಿಲ್ಲ; ಅಮೆರಿಕವು ತನಗಿರುವ ವಾಣಿಜ್ಯ ಅಪಾಯಗಳನ್ನು ನಿಜಕ್ಕೂ ತಗ್ಗಿಸಿಕೊಳ್ಳಬೇಕಿದ್ದರೆ, ಭಾರತವು ಕಚ್ಛಾವಸ್ತುಗಳಿಗಾಗಿ ಚೀನಾದತ್ತ ನೋಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂಬುದು ಈ ಚರ್ಚೆಯ ಹೂರಣ.
ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಸನ್ನಿವೇಶ ಹೇಗಿದೆ ಎಂಬುದನ್ನು ಗಮನಿಸೋಣ.
ಭಾರತದಲ್ಲಿ ಈಗ, ಮಳೆ ಬರುತ್ತಿರುವಾಗಲೇ ನಾಲ್ಕು ಹನಿ ಸಂಗ್ರಹಿಸಿಡುವ ತುರ್ತು ಯಾವ ಹಂತಕ್ಕೆ ತಲುಪಿದೆ ಎಂದರೆ, ಚೀನಾದಿಂದ ಭಾರತಕ್ಕೆ ಆಮದಿನಲ್ಲಿ ಎರಡು ಪಟ್ಟು ಹೆಚ್ಚಳ ಆಗಿದ್ದು, ಇಲೆಕ್ಟ್ರಾನಿಕ್ಸ್, ನವೀಕರಿಸಬಲ್ಲ ಇಂಧನಗಳು, ಔಷಧಿ ರಾಸಾಯನಿಕಗಳ ಆಮದಿನಲ್ಲಿ ಮೂರನೇ ಒಂದು ಪಾಲು ಚೀನಾದಿಂದಲೇ ಭಾರತಕ್ಕೆ ತಲುಪುತ್ತಿದೆ. ಜವುಳಿ-ವಸ್ತ್ರಗಳು, ವಾಹನ ಬಿಡಿಭಾಗಗಳು ಕೂಡ ದೊಡ್ಡ ಪ್ರಮಾಣದಲ್ಲಿ ಚೀನಾದಿಂದ ಭಾರತಕ್ಕೆ ಆಮದಾಗುತ್ತಿವೆ. ಅಮೆರಿಕಕ್ಕೆ ಔಷಧಿ ರಾಸಾಯನಿಕಗಳ ದೊಡ್ಡ ರಫ್ತುದಾರ ದೇಶವಾಗಿರುವ ಭಾರತದ ಔಷಧಿ ಕಚ್ಛಾಮಾಲು ಆಮದಿನಲ್ಲಿ ಚೀನಾದ ಪಾಲು 2007ರಿಂದ 2022ರ ನಡುವೆ ಶೇ. 50ರಷ್ಟು ಹೆಚ್ಚಿದೆ: ಅದು ಅರ್ಧಕ್ಕರ್ಧ ಹೆಚ್ಚಾಗಿರುವುದು ಕೇವಲ ಕಳೆದ ಐದು ವರ್ಷಗಳಲ್ಲಿ. (ಆಧಾರ GTRI ವರದಿ) ಈ ಬೆಳವಣಿಗೆಗಳ ನಿಜಸ್ವರೂಪ ಏನೆಂಬುದು ಅರ್ಥ ಆಗಬೇಕಿದ್ದರೆ, ಈ ಉದಾಹರಣೆಯನ್ನು ಗಮನಿಸಿ: ಅಮೆರಿಕವು ಹಿಂದೆ ಸೋಲಾರ್ ಪ್ಯಾನಲ್‌ಗಳಿಗೆ ಚೀನಾವನ್ನು ಅವಲಂಬಿಸಿತ್ತು. 2022ರಲ್ಲಿ ಅಂತರ್‌ರಾಷ್ಟ್ರೀಯ ಕಾರ್ಮಿಕ ಕಾನೂನುಗಳ ಉಲ್ಲಂಘನೆ, ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣ ನೀಡಿ, ಅಮೆರಿಕವು ಚೀನಾದಿಂದ ಈ ಮಾಲುಗಳನ್ನು ತರಿಸಿಕೊಳ್ಳುವುದನ್ನು ನಿಲ್ಲಿಸಿತ್ತು. ಇದಾದ ಬಳಿಕ, ಭಾರತದಿಂದ ಅಮೆರಿಕಕ್ಕೆ ಸೋಲಾರ್ ಪ್ಯಾನಲ್‌ಗಳ ರಫ್ತಿನಲ್ಲಿ ಶೇ. 150 ಹೆಚ್ಚಳ ಆಗಿತ್ತು. ಭಾರತ ಸೋಲಾರ್ ಪ್ಯಾನಲ್‌ಗಳ ಉತ್ಪಾದನೆಯಲ್ಲಿ ಒಂದು ಹಂತಕ್ಕೆ ಸಶಕ್ತ. ಆದರೆ, ಅಮೆರಿಕಕ್ಕೆ ಸರಬರಾಜು ಮಾಡಬೇಕಾಗಿರುವ ಸೋಲಾರ್ ಪ್ಯಾನಲ್‌ಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ, ಭಾರತದ ಉತ್ಪಾದನಾ ಸಾಮರ್ಥ್ಯ ಸಾಕಾಗದೆ, ಅಲ್ಲೂ ಈಗ ಮೊಡ್ಯೂಲ್‌ಗಳು, ಸೆಲ್‌ಗಳು, ವೇಫರ್, ಸೋಲಾರ್ ಗ್ಲಾಸ್-ಎಲ್ಲವೂ ಚೀನಾದಿಂದ ಭಾರತಕ್ಕೆ ಆಮದಾಗುತ್ತಿವೆ; ಭಾರತ ಅವನ್ನು ಅಸೆಂಬಲ್ ಮಾಡಿ ಅಮೆರಿಕಕ್ಕೆ ರವಾನಿಸುತ್ತಿದೆ.
ಕೈಗಾರಿಕಾ ರಂಗದಲ್ಲಿ ಈ ರೀತಿಯ ಬೆಳವಣಿಗೆಗಳ ಕಾರಣದಿಂದಾಗಿ ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಆತಂಕಕ್ಕೀಡಾ ಗಿದ್ದು, ಚೀನಿ ಮಾಲುಗಳ ಅಬ್ಬರದಲ್ಲಿ ಎಂಎಸ್‌ಎಂಇಗಳಿಗೆ ದಮ್ಮು ಕಟ್ಟತೊಡಗಿದೆ. ಸರಕಾರದ ಬಳಿ ಕೇಳಿದರೆ, ಅದು ಸೌಂದರ್ಯವರ್ಧಕಗಳು, ಆಟದ ಸಾಮಗ್ರಿಗಳು, ಚರ್ಮ, ಸೆರಾಮಿಕ್ಸ್, ಸಂಗೀತ ಉಪಕರಣಗಳು ಚೀನಾದಿಂದ ಆಮದಾಗುತ್ತಿರುವ ಪ್ರಮಾಣ ತಗ್ಗಿದೆ ಎಂದು ಸಮಜಾಯಿಷಿ ನೀಡುತ್ತಿದೆ. ಎಲ್ಲಿ ಸಮಸ್ಯೆಯ ಮೂಲ ಇದೆಯೋ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ವಾಸ್ತವ ಏನೆಂದರೆ, 2023-24ನೇ ಸಾಲಿಗೆ, ಚೀನಾದಿಂದ ಭಾರತಕ್ಕೆ ಕೈಗಾರಿಕಾ ಉತ್ಪನ್ನಗಳ ಆಮದು 118 ಬಿಲಿಯನ್ ಡಾಲರುಗಳಷ್ಟಾಗಿದ್ದು, ಇದು ದೇಶದ ಒಟ್ಟು ಆಮದಿನ ಶೇ. 30 ಗಾತ್ರದಷ್ಟಾಗಿದೆ.
ಗೊಂದಲದ ಮತ್ತೊಂದು ಮುಖ
ಚೀನಾ ಕೂಡ ಈ ಗೊಂದಲದಿಂದ ಹೊರತಾಗಿಲ್ಲ. ತನ್ನ ಅತಿಯಾದ ಉತ್ಪಾದನಾ ಸಾಮರ್ಥ್ಯದ ಹೊಟ್ಟೆ ತುಂಬಿಸುವುದಕ್ಕೆ ಚೀನಾಕ್ಕೆ ಇರುವ ಸುಲಭ ಹಾದಿ ಎಂದರೆ, ಜಾಗತಿಕ ಮಾರುಕಟ್ಟೆಗಳ ಬಾಗಿಲು ತಟ್ಟುವುದು. ಈ ಕಾರಣಕ್ಕಾಗಿಯೇ, 2013ರಲ್ಲಿ ಚೀನಾವು ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಎಂಬ ಮಹಾ ಯೋಜನೆಯನ್ನು ಆರಂಭಿಸಿತು, 150 ದೇಶಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ರೂಪಿಸಿಕೊಳ್ಳುವ ಬೃಹತ್ ಯೋಜನೆ ಇದು. ಭಾರತವು ಈ ಜಾಗತಿಕ ಮಾರುಕಟ್ಟೆಗಳಲ್ಲೇ ಅತ್ಯಂತ ಸಮೃದ್ಧವಾದುದು ಎಂಬ ಅರಿವು ಚೀನಾಕ್ಕೆ ಇತ್ತು. ಚೀನಾ ಕಡೆಯಿಂದ ಭಾರತಕ್ಕೆ ಭರ್ಜರಿ ಹೂಡಿಕೆ ಹರಿದುಬಂತು; 2019ರಲ್ಲಿ ಚೀನಾ ಅಧ್ಯಕ್ಷರು ಭಾರತದಲ್ಲಿ ಪ್ರಧಾನಮಂತ್ರಿಯವರನ್ನು ಭೇಟಿ ಆಗಿ ಶೃಂಗಸಭೆ ನಡೆಯಿತು. ಎಲ್ಲವೂ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ ಅನ್ನಿಸುವ ಹೊತ್ತಿಗೆ, 2020ರ ಜೂನ್ ತಿಂಗಳಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಜೊತೆ ಗಡಿ ಜಟಾಪಟಿ, ಆ ಬಳಿಕ ಚೀನಾದ ಮೇಲಡಿಸುವಿಕೆಗಳನ್ನು ನಿಯಂತ್ರಿಸಲು ಭಾರತ ತೆಗೆದುಕೊಂಡ ಕೆಲವು ಕ್ರಮಗಳು (ಬ್ಯಾಂಕಿಂಗ್, ರೈಲ್ವೆ, ವಿದ್ಯುತ್, ಸಾರಿಗೆ, ಟೆಲಿಕಾಂ ಕ್ಷೇತ್ರಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ) ಹಾಗೂ ಆ ಬಳಿಕದ ನೀತ್ಯಾತ್ಮಕ ಸಂಘರ್ಷಗಳು ಭಾರತ-ಚೀನಾ ನಡುವಿನ ಸಂಬಂಧವನ್ನು ಬಿಗಡಾಯಿಸಿದ್ದವು.
ಈ ರೀತಿ ತನ್ನನ್ನೇ ಗುರಿಯಾಗಿಸಿ ಭಾರತ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ಚೀನಾದಿಂದ ಹೂಡಿಕೆಗಳು ಏಕಾಏಕಿ ಇಳಿಯ ತೊಡಗಿದವು. 2019ರಲ್ಲಿ ಭಾರತದಲ್ಲಿ ಚೀನಿ ಹೂಡಿಕೆ ಇದ್ದ 1,000ದಷ್ಟು ಕಂಪೆನಿಗಳಿದ್ದರೆ, ಅವುಗಳ ಪ್ರಮಾಣ 2024ರ ಹೊತ್ತಿಗೆ 300ಕ್ಕೆ ಇಳಿದಿವೆ. ಇಷ್ಟಾದರೂ, ಭಾರತದ ಮಾರುಕಟ್ಟೆಯ ಅರಿವಿರುವ ಚೀನಾ, ಭಾರತಕ್ಕೆ ಎದುರಾಡುತ್ತಿಲ್ಲ. ಕೈಗಾರಿಕಾ ಉತ್ಪಾದನೆಯಲ್ಲಿ ಭಾರತದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರಿತಿರುವುದರಿಂದ, ಅದು ತನ್ನ ತಂತ್ರಗಾರಿಕೆಯನ್ನು ಅದಕ್ಕನುಗುಣವಾಗಿಯೇ ರೂಪಿಸಿಕೊಳ್ಳುತ್ತಿದೆ. ಜಾಗತಿಕ ಸರಬರಾಜು ಸರಪಣಿಯಲ್ಲಿ ತನ್ನ ಸ್ಥಾನಕ್ಕೆ ಮತ್ತು ಹಿತಾಸಕ್ತಿಗಳಿಗೆ ಧಕ್ಕೆ ತರುವ ಕ್ರಮಗಳಿಗೆ ಮುಂದಾಗುತ್ತಿಲ್ಲ. ಇದಕ್ಕೆ ಪೂರಕವಾಗಿ ಈಗ ಭಾರತ ಕೂಡ, ತನ್ನಲ್ಲಿ ಚೀನಾದ ನೇರ ಹೂಡಿಕೆಗೆ ಅವಕಾಶ ಮಾಡಿಕೊಡುವ ಮಾತನಾಡುತ್ತಿದೆ. ಈ ಬಗ್ಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಹೇಳಿಕೆ ಜಾಗತಿಕವಾಗಿ ಗಮನ ಸೆಳೆದಿದೆ.
ಒಟ್ಟಿನಲ್ಲಿ, ಮಾರುಕಟ್ಟೆಯನ್ನು ಗೆಲ್ಲುವುದಕ್ಕಾಗಿ ‘ಆತ್ಮನಿರ್ಭರ’ ಆಗಲು ಹೊರಟ ಭಾರತವು ಚೀನಾದ ಕಚ್ಚಾಮಾಲುಗಳ ಮೇಲೆ ಅವಲಂಬಿತವಾಗಿದೆ; ಚೀನಾವನ್ನು ಹೊರಗಿಟ್ಟು, ಭಾರತದಂತಹ ಪರ್ಯಾಯ ಹಾದಿಗಳ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಮುನ್ನಡೆಸುವ ತನ್ನ ಪ್ರಯತ್ನಗಳು ಕಾರ್ಯಸಾಧು ಅಲ್ಲ ಎಂಬುದು ಅಮೆರಿಕದ ಗಮನಕ್ಕೆ ಬರತೊಡಗಿದೆ; ಸ್ವತಃ ಚೀನಾಕ್ಕೆ, ತಾನು ಮಾರುಕಟ್ಟೆಯಲ್ಲಿ ಉಳಿಯಲು ತನಗೆ ಅಮೆರಿಕವೂ ಬೇಕು-ಭಾರತವೂ ಬೇಕು ಅನ್ನಿಸತೊಡಗಿದೆ. ಹೀಗೆ, ಮಾರುಕಟ್ಟೆ ಪ್ರೇರಿತ ತೀರ್ಮಾನಗಳು ಜಾಗತಿಕವಾಗಿ ಇಂದು ಎಷ್ಟು ಬಲವಾಗಿಬಿಟ್ಟಿವೆ ಮತ್ತು ಜಿಯೊಪೊಲಿಟಿಕಲ್ ತೀರ್ಮಾನಗಳು ಮಾರುಕಟ್ಟೆಯ ತೀರ್ಮಾನಗಳ ಎದುರು ಎಷ್ಟು ಅಪ್ರಸ್ತುತಗೊಳ್ಳುತ್ತಿವೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಈ ಬೆಳವಣಿಗೆಗಳು.