ಹಳೆಯ ವಾಹನ ಗುಜರಿ ನೀತಿ: ಸರಕಾರದ ತಲೆ-ಜೇಡರ ಬಲೆ

ವಾಹನ ಗುಜರಿಗೆ ಒಪ್ಪಿಸಿದ ಬಳಿಕ, ನಿಗದಿತ ಕಾಲಾವಧಿಯ ಒಳಗೆ ಆ ಕುರಿತು ಸರ್ಟಿಫಿಕೇಟ್‌ತೋರಿಸಿದರೆ, ಹೊಸ ವಾಹನ ಖರೀದಿಯ ವೇಳೆ, ಅವರಿಗೆ ಹಳೆಯ ವಾಹನದ ಶೇ. 4-6 ಮೌಲ್ಯ ಸಿಗಬೇಕು, ಹೊಸ ವಾಹನಕ್ಕೆ ನೋಂದಣಿ ಶುಲ್ಕ ವಿನಾಯಿತಿ ಆಗಬೇಕು, ರಸ್ತೆ ತೆರಿಗೆಯ ಮೇಲೆ ಶೇ. 25 ರಿಬೇಟು ಸಿಗಬೇಕು ಎಂಬೆಲ್ಲ ಉದ್ದೇಶಗಳು ಆರಂಭದಲ್ಲಿ ಸರಕಾರಕ್ಕಿದ್ದವು. ಆದರೆ, ಸರಕಾರ ಈಗ ನಡುನೀರಿನಲ್ಲಿ, ಖಾಸಗಿಯವರ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿದೆ.

Update: 2024-09-14 04:40 GMT

ಸೋಮವಾರ (09 ಸೆಪ್ಟಂಬರ್) ಆಟೊಮೋಟಿವ್ ಕಂಪೋನೆಂಟ್‌ಉತ್ಪಾದಕರ ಸಂಘದ (ಎಸಿಎಂಎ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಭಾರತ ಸರಕಾರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಜನ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ನೀಡಿ ಹೊಸ ವಾಹನಗಳನ್ನು ಉತ್ಸಾಹದಿಂದ ಖರೀದಿಸುವಂತಾಗಲು, ವಾಹನಗಳ ಉತ್ಪಾದಕರು ತಮ್ಮ ‘ಬೆಲೆ ರಿಯಾಯಿತಿ’ಗಳನ್ನು ಸ್ಪರ್ಧಾತ್ಮಕವಾಗಿ ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದರು. ದೇಶದ ವಾಹನಗಳಲ್ಲಿ ಇಂದು ಕೇವಲ ಶೇ. 6 ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಿ ಬದಲಾಗಿವೆ. ಗಡ್ಕರಿಯವರ ಈ ಕೊಂಕಣ ಸುತ್ತಿ ಮೈಲಾರ ತಲುಪುವ ಚಿಂತನೆ ಎಷ್ಟು ಜಿಡುಕಿನದು ಎಂಬುದನ್ನು ಹಳೆಯ ವಾಹನಗಳ ಗುಜರಿ ನೀತಿಯ ಹಿನ್ನೆಲೆಯಲ್ಲಿ ವಿವರಿಸಲು ಪ್ರಯತ್ನಿಸುವೆ. ಮೊದಲಿಗೆ ಒಂದಿಷ್ಟು ಹಿನ್ನೆಲೆಯ ಸಂಗತಿಗಳು:

2070ರ ಹೊತ್ತಿಗೆ ದೇಶದಲ್ಲಿ ಕಾರ್ಬನ್ ಹೊರಸೂಸುವಿಕೆ ಶೂನ್ಯಕ್ಕಿಳಿಯಬೇಕು ಎಂಬ ತೀರ್ಮಾನಕ್ಕೆ ದೇಶದ ಒಟ್ಟು ಸನ್ನಿವೇಶವನ್ನು ತುರುಕಿಸಿ ಹೊಂದಿಸುವ ಮಹಾಪ್ರಯತ್ನದ ಭಾಗಗಳೇ ಈ ಎಲ್ಲ ಬೆಳವಣಿಗೆಗಳು. ಈ ಹಾದಿಯ ಮೊದಲ ಹಂತವಾಗಿ 2030ರ ಹೊತ್ತಿಗೆ, ದೇಶದಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ಈಗಿರುವುದರ ಶೇ. 50ಕ್ಕೆ ಇಳಿಸಿಕೊಳ್ಳಬೇಕು ಎಂಬ ಗುರಿ ತಲುಪುವುದಕ್ಕೆ, ಸರಕಾರಕ್ಕೆ 85.6 ಲಕ್ಷ ಕೋಟಿ ರೂ.ಗಳ ಬೃಹತ್ ಖರ್ಚು ಇದೆ ಎಂದು ರಿಸರ್ವ್ ಬ್ಯಾಂಕಿನ ಇತ್ತೀಚೆಗಿನ ವರದಿಯೊಂದು ಹೇಳಿದ್ದಿದೆ. ಇಷ್ಟು ಖರ್ಚು ಮಾಡಿದರೂ, ಗುರಿ ತಲುಪಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಏಕೆಂದರೆ, ವಾಹನಗಳಿಗೆ ಸಂಬಂಧಿಸಿದಂತೆ ಸರಕಾರ ಮಹಾ ಜಿಡುಕೊಂದರಲ್ಲಿ ಸಿಲುಕಿಹಾಕಿಕೊಂಡಂತಿದೆ.

ಮೂಲತಃ ಸರಕಾರಕ್ಕೆ ಇನ್ನೂ ಪೆಟ್ರೋಲ್-ಡೀಸೆಲ್‌ಗಳಿಗೆ ಪರ್ಯಾಯ ಇಂಧನ ಮೂಲ ಯಾವುದೆಂಬ ಬಗ್ಗೆ ಖಚಿತ ನಿಲುವು ತಳೆಯುವುದು ಸಾಧ್ಯ ಆಗಿಲ್ಲ. ವಿದ್ಯುತ್ ಚಾಲಿತ ವಾಹನಗಳನ್ನು ಅವಲಂಬಿಸೋಣವೆಂದರೆ, ಭಾರತದಲ್ಲಿ ಈಗ ಉತ್ಪಾದನೆ ಆಗುತ್ತಿರುವ ವಿದ್ಯುತ್ತಿನ ಮುಕ್ಕಾಲು ಭಾಗ ಕಲ್ಲಿದ್ದಲು ಆಧರಿಸಿದ್ದು. ಆ ವಿದ್ಯುತ್ ಬಳಸಿದರೆ ಕಾರ್ಬನ್ ಹೊರಸೂಸುವಿಕೆಯ ನಿಯಂತ್ರಣದ ಗುರಿ ತಲುಪುವುದು ಸಾಧ್ಯವಿಲ್ಲ. ಎಥನಾಲ್ ಅಥವಾ ಹೈಡ್ರೋಜನ್ ಅನ್ನು ವಾಹನಗಳಿಗೆ ಇಂಧನವಾಗಿ ಬಳಸಲು ಮೂಲ ಸೌಕರ್ಯಗಳು ಇನ್ನೂ ಸಿದ್ಧಗೊಂಡಿಲ್ಲ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ - ಅವುಗಳ ಬ್ಯಾಟರಿ ನೀತಿ ನಿರೂಪಣೆ - ದೇಶದಾದ್ಯಂತ ಚಾರ್ಜಿಂಗ್ ಜಾಲ ಸ್ಥಾಪನೆಗಳಿಗೆ ಸಾಗಬೇಕಾದ ದೂರ ಬಹಳವಿದೆ. ವಿದ್ಯುತ್ ಚಾಲಿತ ವಾಹನಗಳು ಹಠಾತ್ ಹೊತ್ತಿ ಉರಿಯುತ್ತಿರುವ ಅಸಂಖ್ಯ ಪ್ರಕರಣಗಳನ್ನು ಜಗತ್ತಿನಾದ್ಯಂತ ಕೇಳಿ ತಿಳಿದ ಬಳಿಕ, ಅದರ ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಆತಂಕಗಳಿವೆ. ಈ ಎಲ್ಲ ಗೊಂದಲಗಳು ಅರಿವಿರುವ ಕಾರಣಕ್ಕೇ, ದೇಶದ ವಾಹನ ಗ್ರಾಹಕರು ಇನ್ನೂ ವಿದ್ಯುತ್ ಚಾಲಿತ ವಾಹನಗಳತ್ತ ಪೂರ್ಣ ಮನಸ್ಸು ಮಾಡುತ್ತಿಲ್ಲ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಸರಕಾರದ ಕಿಸೆಯಿಂದ ಸಬ್ಸಿಡಿ ಹೋಗುತ್ತಿದೆ- ಆದರೆ ಉತ್ಪಾದನೆ ಆಗಿರುವುದಕ್ಕೆ ಊಹಿಸಿದ ಮಾರುಕಟ್ಟೆ ಇಲ್ಲ.

ಗುಜರಿ ನೀತಿಯ ಗೊಂದಲ

ಈ ಬರಹವನ್ನು ಕೇವಲ ಗುಜರಿ ನೀತಿಗೆ ಸೀಮಿತಗೊಳಿಸಿಕೊಂಡು ವಿವರವಾಗಿ ನೋಡೋಣ.

ಈ ವಾಹನ ಗುಜರಿ ನೀತಿಗೆ ಮೂಲ ಅಮೆರಿಕ. 2009ರಲ್ಲಿ ಲೆಹ್‌ಮನ್ ಬ್ರದರ್ಸ್ ಮುಳುಗಿ, ಅಮೆರಿಕ ಅರ್ಥಿಕ ಸಂಕಷ್ಟಕ್ಕೀಡಾದಾಗ, ಅಲ್ಲಿ ಆರ್ಥಿಕತೆಯನ್ನು ಮತ್ತೆ ಪುಟಿದೇಳಿಸಲು ‘cash for clunker scheme’ ಜಾರಿಗೆ ಬಂದಿತ್ತು. ಅದೇ ಮಾದರಿಯಲ್ಲಿ, ಭಾರತ ಸರಕಾರ 2021ರಲ್ಲಿ ತನ್ನ ಹಳೆಯ ವಾಹನಗಳ ಗುಜರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿಯ ಅನ್ವಯ, ಖಾಸಗಿ ವಾಹನಗಳ (ಪಿವಿ) ನೋಂದಣಿ ಇನ್ನು 15 ವರ್ಷಗಳಿಗೆ ಸೀಮಿತವಾಗಿದ್ದು, ಆ ಬಳಿಕ ಪ್ರತೀ ಐದು ವರ್ಷಕ್ಕೊಮ್ಮೆ ಅದನ್ನು ನವೀಕರಿಸಿಕೊಳ್ಳಬೇಕು. ವಾಣಿಜ್ಯ ವಾಹನಗಳಿಗೆ (ಸಿವಿ) ಮೊದಲ ಎಂಟು ವರ್ಷ ದ್ವೈವಾರ್ಷಿಕ ಫಿಟ್‌ನೆಸ್ ಸರ್ಟಿಫಿಕೇಟ್ ಮತ್ತು ಆ ಬಳಿಕ, ಪ್ರತೀ ವರ್ಷ ಫಿಟ್‌ನೆಸ್ ಸರ್ಟಿಫಿಕೇಟ್ ಬೇಕು. ಸರಕಾರಿ ನೀತಿಯನ್ವಯ, ಫಿಟ್‌ನೆಸ್ ಸರ್ಟಿಫಿಕೇಟ್ ಸಿಗದ ಹಳೆಯ ವಾಹನಗಳನ್ನು ಜನರು ಸರಕಾರವೇ ನೇಮಿಸಿರುವ ಸಂಗ್ರಹ ಸಂಸ್ಥೆಗಳಿಗೆ ನೀಡಬೇಕಾಗುತ್ತದೆ. (ಕರ್ನಾಟಕದಲ್ಲಿ, ದೇವನಹಳ್ಳಿ ಬಳಿ 2023ರ ಸೆಪ್ಟಂಬರ್ ತಿಂಗಳಿನಲ್ಲಿ ಮಹೀಂದ್ರಾ ಎಂಎಸ್‌ಟಿಜಿ ರೀಸೈಕ್ಲಿಂಗ್ ಪ್ರೈ.ಲಿ. ಎಂಬ ಸಂಸ್ಥೆ ತೆರೆದಿದ್ದು, ಇದೀಗ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಸಂಸ್ಥೆ.)

ವಾಹನ ಗುಜರಿಗೆ ಒಪ್ಪಿಸಿದ ಬಳಿಕ, ನಿಗದಿತ ಕಾಲಾವಧಿಯ ಒಳಗೆ ಆ ಕುರಿತು ಸರ್ಟಿಫಿಕೇಟ್‌ತೋರಿಸಿದರೆ, ಹೊಸ ವಾಹನ ಖರೀದಿಯ ವೇಳೆ, ಅವರಿಗೆ ಹಳೆಯ ವಾಹನದ ಶೇ. 4-6 ಮೌಲ್ಯ ಸಿಗಬೇಕು, ಹೊಸ ವಾಹನಕ್ಕೆ ನೋಂದಣಿ ಶುಲ್ಕ ವಿನಾಯಿತಿ ಆಗಬೇಕು, ರಸ್ತೆ ತೆರಿಗೆಯ ಮೇಲೆ ಶೇ. 25 ರಿಬೇಟು ಸಿಗಬೇಕು ಎಂಬೆಲ್ಲ ಉದ್ದೇಶಗಳು ಆರಂಭದಲ್ಲಿ ಸರಕಾರಕ್ಕಿದ್ದವು. ಆದರೆ, ಸರಕಾರ ಈಗ ನಡುನೀರಿನಲ್ಲಿ, ಖಾಸಗಿಯವರ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿದೆ. ಅವರು ಭಾರೀ ಚೌಕಾಸಿಯ ಬಳಿಕ ಹೊಸವಾಹನಗಳಿಗೆ ಬೆಲೆಯಲ್ಲಿ ಶೇ. 2.75 (ಪಿವಿ); ಶೇ. 1.25 (ಸಿವಿ) ರಿಯಾಯಿತಿ ಕೊಡಲು ಒಪ್ಪಿದ್ದಾರೆ(PIB release ID: 2049367). ಇದನ್ನೇ ಕಳೆದ ಸೋಮವಾರ ಸಚಿವ ನಿತಿನ್ ಗಡ್ಕರಿ ಅವರು ಎಸಿಎಂಎ ಸಮಾವೇಶದಲ್ಲಿ ಪ್ರಸ್ತಾವಿಸಿ, ಇನ್ನಷ್ಟು ರಿಯಾಯಿತಿ ನೀಡ ಬೇಕೆಂದು ಗೋಗರೆದದ್ದು.

ಭಾರತ ಸರಕಾರ, ಈ ಯೋಜನೆಗಾಗಿ 23-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಗಳಿಗೆ 3,000 ಕೋಟಿ ರೂ.ಗಳ ವಿಶೇಷ ಸಹಾಯವನ್ನು ಒದಗಿಸಿದ್ದು, ಅದನ್ನು ಹಳೆಯ ಸರಕಾರಿ ವಾಹನಗಳನ್ನು ಗುಜರಿಗೆ ಹಾಕಿದಾಗ ಸರಕಾರಕ್ಕಾಗುವ ನಷ್ಟ ಭರ್ತಿಗೆ, ನಾಗರಿಕರಿಗೆ ಪ್ರೋತ್ಸಾಹಧನದ ರೂಪದಲ್ಲಿ ನೀಡಲು ಹಾಗೂ ವಾಹನ ಫಿಟ್‌ನೆಸ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಬಳಸಲು ಸೂಚಿಸಿದೆ. ಇಲ್ಲಿಯ ತನಕ 17 ರಾಜ್ಯಗಳಲ್ಲಿ 86 ಗುಜರಿ ವಾಹನ ಸಂಗ್ರಹ ಕೇಂದ್ರಗಳು (ಆರ್‌ವಿಎಸ್‌ಎಫ್) ಸ್ಥಾಪನೆ ಆಗಿದ್ದು, ಅವುಗಳಲ್ಲಿ 43 ಕಾರ್ಯಾಚರಿಸುತ್ತಿವೆ. 2024 ಜನವರಿ ಅಂತ್ಯಕ್ಕೆ ದೇಶದಾದ್ಯಂತ ಈ ಆರ್‌ವಿಎಸ್‌ಎಫ್‌ಕೇಂದ್ರಗಳಲ್ಲಿ ಒಟ್ಟು 44,900 ಗುಜರಿ ವಾಹನಗಳು ಠೇವಣಿ ಆಗಿದ್ದು, ಅವುಗಳಲ್ಲಿ 28,100 ವಾಹನಗಳು 15 ವರ್ಷ ಪೂರೈಸಿದ ಸರಕಾರಿ ವಾಹನಗಳೇ ಆಗಿವೆ. ಖಾಸಗಿಯವರು ಇನ್ನೂ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಮನಸ್ಸು ಮಾಡಿಲ್ಲ. ಸರಕಾರದ ಲೆಕ್ಕಾಚಾರಗಳ ಪ್ರಕಾರ, ದೇಶದಲ್ಲಿ 1.2 ಕೋಟಿ ವಾಹನಗಳಿಗೆ ಸೂಕ್ತವಾದ ಫಿಟ್‌ನೆಸ್ ಸಹಿತ ಆರ್‌ಸಿ ಇಲ್ಲ. ಈಗಾಗಲೇ 14.3 ಲಕ್ಷ ವಾಹನಗಳು ಗುಜರಿಗೆ ಕಳುಹಿಸಲು ‘ಫಿಟ್’ ಆಗಿವೆ. ಕರ್ನಾಟಕವೊಂದರಲ್ಲೇ ಮುಂದಿನ 4-5 ವರ್ಷಗಳಲ್ಲಿ 66 ಲಕ್ಷ ವಾಹನಗಳು ಫಿಟ್‌ನೆಸ್ ಕಳೆದುಕೊಂಡು ಗುಜರಿ ಆಗಲಿವೆಯಂತೆ!

ಜನಸಾಮಾನ್ಯರಿಗೆ ಡೀಸೆಲ್-ಪೆಟ್ರೋಲ್ ವಾಹನಗಳಿಗೆ ಪರ್ಯಾಯ ಏನೆಂಬುದನ್ನು ಖಚಿತವಾಗಿ ಹೇಳದೆ, ಹಳೆಯದನ್ನು ಗುಜರಿಗೆ ಹಾಕಿ ಎಂದರೆ, ಅವರು ಹೇಗೆ ತಾನೇ ಅದಕ್ಕೆ ಮನಸ್ಸು ಮಾಡಿಯಾರು? ಅದೇ ವೇಳೆ ಸರಕಾರ ಸಾವಿರಾರು ಕೋಟಿ ರೂ.ಗಳನ್ನು ವಿದ್ಯುತ್ ಚಾಲಿತ ವಾಹನಗಳ, ಅದಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಉತ್ಪಾದನೆಗೆಂದು ಖಾಸಗಿಯವರ ಮಡಿಲಿಗೆ ಹಾಕಿ ನಡುನೀರಿನಲ್ಲಿ ಬಂದು ನಿಂತಿದೆ. ಸರಕಾರ ನಡುನೀರಿನಲ್ಲಿ ನಿಂತದ್ದು ಖಚಿತವಾದ ಬಳಿಕ, ಖಾಸಗಿಯವರು ತಮ್ಮ ವರಾತ ತೆಗೆಯತೊಡಗಿದ್ದಾರೆ. ಹಾಗಾಗಿ, ವಿದ್ಯುತ್ ಖಾಸಗೀಕರಣ, ಪರ್ಯಾಯ ಇಂಧನ, ಕಾರ್ಬನ್ ಝೀರೋ ಸಾಧನೆ, ಹಳೆಯ ವಾಹನಗಳ ಬದಲಾವಣೆ...ಹೀಗೆ ಪ್ರತಿಯೊಂದು ರಂಗದಲ್ಲೂ ಸರಕಾರದ ತಲೆಯೀಗ ಜಿಡುಕಾದ ಜೇಡರ ಬಲೆ. ಯಾವ ಹಾದಿಯೂ ಸ್ಪಷ್ಟ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News