‘ಹಸಿರು ಭಾರತ’ದ ಮೇಲೆ ಗದಾಪ್ರಹಾರ

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಣಿಪುರ ಪ್ರತಿಧ್ವನಿಸುತ್ತಿದೆ. ಈ ಕೋಲಾಹಲದಲ್ಲಿ ಎಫ್ ಸಿಎ ತಿದ್ದುಪಡಿ ಹಾಗೂ ಜನ್ ವಿಶ್ವಾಸ್ ಮಸೂದೆ ಎರಡಕ್ಕೂ ಸರಕಾರ ಹಿಂಬಾಗಿಲಿನಿಂದಾದರೂ ಒಪ್ಪಿಗೆ ಪಡೆದುಕೊಳ್ಳಲಿದೆ. ಅದೇ ಹೊತ್ತಿನಲ್ಲಿ ಮಳೆಯಾಗುತ್ತಿದೆ. ಅಣೆಕಟ್ಟುಗಳು ಭರ್ತಿಯಾಗುತ್ತಿವೆ. ಜತೆಜತೆಯಲ್ಲೇ ನಗರಗಳ ರಸ್ತೆಗಳೂ ಕೊಳಗಳಾಗುತ್ತಿವೆ. ಬೆಟ್ಟಗಳು ಜರಿಯುತ್ತಿವೆ. ಪ್ರವಾಹ ಒಳಿತು-ಕೆಡುಕು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಇವೆಲ್ಲದರೊಡನೆ ಅವಿನಾಭಾವ ಸಂಬಂಧ ಹೊಂದಿರುವ ಅರಣ್ಯ-ಅರಣ್ಯವಾಸಿಗಳು ಅತಂತ್ರರಾಗುತ್ತಿದ್ದಾರೆ

Update: 2023-07-28 05:08 GMT

ಅರಣ್ಯ ಸಂರಕ್ಷಣೆ ಕಾಯ್ದೆ (ಎಫ್ ಸಿ ಎ) ತಿದ್ದುಪಡಿಗೆ ಜಂಟಿ ಸದನ ಸಮಿತಿಯಿಂದ ಅನುಮೋದನೆ ಪಡೆದಿದ್ದು, ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಮಂಡನೆ ಆಗಬೇಕಿದೆ. ಒಕ್ಕೂಟ ಸರಕಾರದ ಬಂಡವಾಳಶಾಹಿ ಪರ ಮನಸ್ಥಿತಿ ಮತ್ತು ಲೋಕಸಭೆಯಲ್ಲಿ ಆಡಳಿತ ಪಕ್ಷಕ್ಕಿರುವ ಒರಟು ಬಹುಮತದಿಂದ ಅರಣ್ಯ-ಅರಣ್ಯವಾಸಿಗಳ ಸಂರಕ್ಷಣೆಗೆ ಚರಮಗೀತೆಯ ಇನ್ನೊಂದು ಚರಣ ಮುಗಿದಿದೆ.

ಜಂಟಿ ಸದನ ಸಮಿತಿಯಲ್ಲಿದ್ದ 31 ಸದಸ್ಯರಲ್ಲಿ 18 ಮಂದಿ ಬಿಜೆಪಿಯವರು; ಆರು ಸದಸ್ಯರು ಭಿನ್ನ ಅಭಿಪ್ರಾಯ ದಾಖಲಿಸಿದ್ದಾರೆ. ಸ್ಥಾಯಿ ಸಮಿತಿ ಅಥವಾ ಸಂಸತ್ತಿನ ಆಯ್ಕೆ ಸಮಿತಿಗಳಿಗೆ ಕಳಿಸಲಾದ ಮಸೂದೆಗಳು ತೀವ್ರ ಪರಿಶೀಲನೆಗೆ ಒಳಗಾಗುತ್ತವೆ. ಹೀಗಿದ್ದರೂ, ಆಡಳಿತ ಪಕ್ಷದ ಸದಸ್ಯರಿಂದ ಕಿಕ್ಕಿರಿದಿರುವ ಇಂಥ ಸಮಿತಿಗಳು ಸರಕಾರಗಳ ವಿರುದ್ಧ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ತಿದ್ದುಪಡಿ ಕರಡು ಜೂನ್ 2022ರಿಂದ ಸಾರ್ವಜನಿಕರ ಅವಗಾಹನೆಯಲ್ಲಿದ್ದು, ಸಾವಿರಾರು ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಹೀಗಿದ್ದರೂ, ಸಮಿತಿ ತಿದ್ದುಪಡಿಗೆ ಯಾವುದೇ ಬದಲಾವಣೆಗಳನ್ನು ಸೂಚಿಸಿಲ್ಲ.

ಕಠಿಣ ಕಾಯ್ದೆ

ಅರಣ್ಯ ಸಂರಕ್ಷಣೆ ಕಾಯ್ದೆ 1980(ಎಫ್ಸಿಎ) ಒಂದು ಕಠಿಣ ಕಾನೂನು. ಅರಣ್ಯ ಸಂಪನ್ಮೂಲಗಳಾದ ಮರಮಟ್ಟು, ಬಿದಿರು, ಕಲ್ಲಿದ್ದಲು, ಖನಿಜಗಳು ಇತ್ಯಾದಿಯನ್ನು ಉದ್ಯಮ/ಸಾರ್ವಜನಿಕರು ಬರಿದು ಮಾಡಲು ತಡೆಯೊಡ್ಡಿದ್ದ ಶಾಸನ. ಅದರಿಂದಾಗಿ ಅರಣ್ಯ ನಾಶ ನಿಯಂತ್ರಣದಲ್ಲಿತ್ತು. 1951-1975ರ ಅವಧಿಯಲ್ಲಿ ಅರಣ್ಯೇತರ ಉದ್ದೇಶಕ್ಕೆ 4 ದಶಲಕ್ಷ ಹೆಕ್ಟೇರ್ ಅರಣ್ಯ ಬಳಕೆಯಾಗಿತ್ತು. ಎಫ್ಸಿಎ ಜಾರಿ ಬಳಿಕ ಆ ಪ್ರಮಾಣ 1 ದಶಲಕ್ಷ ಹೆಕ್ಟೇರ್. ಕಾಯ್ದೆಯ ರಕ್ಷಣೆ ಕೇಂದ್ರ/ರಾಜ್ಯ ಸರಕಾರಗಳು ‘ಅರಣ್ಯ’ ಎಂದು ಗುರುತಿಸಲ್ಪಟ್ಟ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತಿತ್ತು. 1996ರ ಗೋದವರ್ಮನ್ ತಿರುಮಲಪಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿತು. ‘ಅರಣ್ಯ’ ಎಂದು ಔಪಚಾರಿಕವಾಗಿ ಗುರುತಿಸದಿದ್ದರೂ, ಅರಣ್ಯದ ಶಬ್ದಕೋಶದ ಅರ್ಥವನ್ನು ಅನ್ವಯಿಸಬಹುದಾದ ಪ್ರದೇಶಗಳನ್ನು ಸಂರಕ್ಷಣೆಗೆ ಒಳಪಡಿಸಿತು. ‘ಅರಣ್ಯ’ ಎಂಬ ಪದದ ಎಲ್ಲವನ್ನೂ ಒಳಗೊಳ್ಳಬಹುದಾದ ವ್ಯಾಖ್ಯಾನ ಇಲ್ಲವಾದ್ದರಿಂದ, ರಾಜ್ಯ ಸರಕಾರಗಳು ತಮ್ಮದೇ ಮಾನದಂಡಗಳನ್ನು ಬಳಸಿಕೊಂಡು ಅರಣ್ಯಗಳನ್ನು ಗುರುತಿಸಲು ಹೇಳಿತು. ಎಲ್ಲ ರಾಜ್ಯಗಳು ಇದನ್ನು ಅನುಸರಿಸದಿದ್ದರೂ, ಅರಣ್ಯ ರಕ್ಷಣೆಗೆ ಆದ್ಯತೆ ಸಿಕ್ಕಿತು.

ತಿದ್ದುಪಡಿ ಏನು?

* ಪ್ರಸ್ತಾವನೆ ಅಳವಡಿಕೆ: ತನ್ನ ಅರಣ್ಯ, ಜೀವವೈವಿಧ್ಯದ ಸಂರಕ್ಷಣೆ

ಮತ್ತು ಹವಾಮಾನ ಬದಲಾವಣೆ ಸವಾಲನ್ನು ಎದುರಿಸಲು ದೇಶದ ಬದ್ಧತೆ

ಬಗ್ಗೆ ಹೇಳಿಕೆ ಮತ್ತು ಕಾಯ್ದೆಯನ್ನು ‘ಅರಣ್ಯ(ಸಂರಕ್ಷಣೆ ಮತ್ತು ಸಮೃದ್ಧಿ)

ಅಧಿನಿಯಮ’ ಎಂದು ಬದಲಾವಣೆ.

* ತಿದ್ದುಪಡಿ ಅನ್ವಯಿಸುವುದು 1980 ಅಥವಾ ಆನಂತರ ಸರಕಾರದ

ದಾಖಲೆಗಳಲ್ಲಿರುವ ಅರಣ್ಯ ಪ್ರದೇಶಕ್ಕೆ ಮಾತ್ರ. ಒಂದುವೇಳೆ 1980-96ರ

ನಡುವೆ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಶಾಸನಬದ್ಧವಾಗಿ ನೀಡಿದ್ದರೂ,

ಅದಕ್ಕೆ ಕಾಯ್ದೆ ಅನ್ವಯಿಸುವುದಿಲ್ಲ.

* ಅಂತರ್ ರಾಷ್ಟ್ರೀಯ ಗಡಿಗಳಿಂದ 100 ಕಿ.ಮೀ. ದೂರದ ಮತ್ತು

‘ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ’ಗಳಿಗೆ ಬಳಸಲ್ಪಡುವ ಅಥವಾ

ಸುರಕ್ಷತೆ/ರಕ್ಷಣಾ ಯೋಜನೆಗೆ ಬಳಸುವ 5-10 ಹೆಕ್ಟೇರ್ ಅರಣ್ಯ ಭೂಮಿಗೆ

ಕಾಯ್ದೆ ಅನ್ವಯಿಸುವುದಿಲ್ಲ.

* ಅರಣ್ಯ ಬೆಳೆಸಬೇಕೆಂಬ ಉದ್ದೇಶ ಇರುವ ಖಾಸಗಿ ವ್ಯಕ್ತಿಗಳಿಗೆಉತ್ತೇಜನ. ಖಾಸಗಿ ನೆಡುತೋಟ ಅಥವಾ ಮರುಅರಣ್ಯೀಕರಣಗೊಂಡಪ್ರದೇಶವನ್ನು ಅಧಿಕೃತ ಅರಣ್ಯ ಎಂದು ಘೋಷಿಸಬಹುದು. ಇದರಿಂದ ಪ್ಯಾರಿಸ್ ಒಪ್ಪಂದದಡಿ 2030ರೊಳಗೆ 3 ಶತಕೋಟಿ ಟನ್ ಇಂಗಾಲ ಹೀರಿಕೊಳ್ಳುವ ‘ತೊಟ್ಟಿ’ಗಳನ್ನು ಅಭಿವೃದ್ಧಿಪಡಿಸುತ್ತೇವೆಂಬ ದೇಶದ ವಾಗ್ದಾನ ಪೂರೈಸಬಹುದು.

ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿ, ದೇಶ/ವಿದೇಶಗಳ ಖ್ಯಾತ ಸಂಶೋಧನಾ ಸಂಸ್ಥೆಗಳ 420 ಪ್ರತಿನಿಧಿಗಳು ಸರಕಾರಕ್ಕೆ ಪತ್ರ ಬರೆದಿದ್ದರು; ‘‘ದೇಶದಲ್ಲಿ ಶೇ.12.37 ವಿಸ್ತೀರ್ಣದಲ್ಲಿ ಮಾತ್ರ ಅಖಂಡ, ಸ್ವಾಭಾವಿಕ ಕಾಡು ಇದೆ. 2021ರ ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್ಐ) ಕಳೆದ 2 ವರ್ಷದಲ್ಲಿ 2,261 ಹೆಕ್ಟೇರ್ ಅರಣ್ಯ ಪ್ರದೇಶ ಹೆಚ್ಚಿದೆ ಎಂದಿದ್ದರೂ, ದೇಶದ ಕೆಲವೆಡೆ ನಡೆಯುತ್ತಿರುವ ಅರಣ್ಯ ನಾಶವನ್ನು ಅದು ಮುಚ್ಚಿಟ್ಟಿದೆ. ಅಪಾರ ಜೈವಿಕ ವೈವಿಧ್ಯವುಳ್ಳ ಈಶಾನ್ಯ ಭಾರತದಲ್ಲಿ 2009-19ರ ಅವಧಿಯಲ್ಲಿ 3,199.8 ಚದರ ಕಿ.ಮೀ. ಕಾಡು ನಾಶವಾಗಿದೆ. ವಾಣಿಜ್ಯ ನೆಡುತೋಪು, ನಗರ ಪ್ರದೇಶದ ಉದ್ಯಾನಗಳನ್ನು ಲೆಕ್ಕಕ್ಕೆ ಸೇರಿಸಿರುವುದರಿಂದ, ಕಾಡಿನ ಪ್ರಮಾಣ ಹೆಚ್ಚಿರಬಹುದಷ್ಟೆ. ಆದರೆ, ಇವು ಎಂದಿಗೂ ಸ್ವಾಭಾವಿಕ ಅರಣ್ಯ ಆಗಲಾರವು. ಎಫ್ಎಸ್ಐ ಪ್ರಕಾರ, ದೇಶದಲ್ಲಿರುವ 7,13,789 ಚದರ ಕಿ.ಮೀ. ಅರಣ್ಯದಲ್ಲಿ 1,97,159 ಚದರ ಕಿ.ಮೀ. ದಾಖಲಾಗದ ಪ್ರದೇಶದಲ್ಲಿದೆ(ಶೇ.27.62). ತಿದ್ದುಪಡಿಯಿಂದ ಈ ಅರಣ್ಯಗಳು ಶಾಸನಾತ್ಮಕ ರಕ್ಷಣೆಯನ್ನು ಕಳೆದುಕೊಳ್ಳುತ್ತವೆ. ‘ಅಂತರ್ರಾಷ್ಟ್ರೀಯ ಗಡಿಯಿಂದ 100 ಕಿ.ಮೀ. ದೂರದವರೆಗೆ’ ಎಂಬ ನಿಯಮದಿಂದ ಹಿಮಾಲಯ, ಹಿಮಾಲಯದಾಚೆ ಮತ್ತು ಈಶಾನ್ಯ ಪ್ರಾಂತದಲ್ಲಿರುವ ಅರಣ್ಯಗಳು, ಲಡಾಖ್ ಮತ್ತು ಸ್ಪಿತಿಯ ಒಣ ಪ್ರದೇಶಗಳು, ಉತ್ತರಾಖಂಡ-ಹಿಮಾಚಲ ಪ್ರದೇಶದ ಆಲ್ಪೈನ್ ಕಾಡುಗಳು ಹಾಗೂ ಪಶ್ಚಿಮ ಭಾರತದ ತೆರೆದ ಪೊದೆ/ಮರುಭೂಮಿ ಪರಿಸರ ವ್ಯವಸ್ಥೆಗಳು ಧಕ್ಕೆಗೀಡಾಗುತ್ತವೆ. ಗಡಿ ಪ್ರದೇಶ/ದೇಶದ ಸುರಕ್ಷತೆಗೆ ರೂಪಿಸಿದ ಯೋಜನೆಗಳು, ಮೃಗಾಲಯಗಳು, ಸಫಾರಿ ಉದ್ಯಾನಗಳು ಹಾಗೂ ಪರಿಸರ ಪ್ರವಾಸ ಚಟುವಟಿಕೆಗಳಿಗೆ ವಿನಾಯಿತಿ ಸರಿಯಲ್ಲ. ಮೃಗಾಲಯ/ಸಫಾರಿ ಉದ್ಯಾನಗಳು ಅರಣ್ಯವಲ್ಲ. ಅದೇ ರೀತಿ ಪರಿಸರ ಪ್ರವಾಸ ಚಟುವಟಿಕೆಗಳು ಉದ್ಯೋಗ-ಆದಾಯ ಸೃಷ್ಟಿಸುತ್ತವಾದರೂ, ಜನರ ಪದಾಘಾತದಿಂದ ಅರಣ್ಯ ನಶಿಸುತ್ತದೆ. ಇಂಥ ಅಪಾರ ಸಂಖ್ಯೆಯ ಯೋಜನೆಗಳಿಗೆ ಅನುಮೋದನೆ ನೀಡುವುದರಿಂದ, ಅರಣ್ಯ ಹಕ್ಕು ಕಾಯ್ದೆ(ಎಫ್ಆರ್ಎ) ಮೂಲಕ ದತ್ತವಾದ ಅರಣ್ಯವಾಸಿಗಳ ಹಕ್ಕುಗಳು ಉಲ್ಲಂಘನೆಯಾಗುತ್ತವೆ. ಜೊತೆಗೆ, ಇವರ ನೆಲೆಗಳು ಅರಣ್ಯ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಬರುವುದರಿಂದ, ಯೋಜನೆಗಳ ಅನುಷ್ಠಾನಕ್ಕೆ ಗ್ರಾಮಸಭೆಯ ಅನುಮತಿ ಪಡೆಯಬೇಕಾಗಿ ಬರುವುದಿಲ್ಲ. ಅಕ್ಟೋಬರ್ 25, 1980 ಮತ್ತು ಆನಂತರ ದಾಖಲಾದ ಅರಣ್ಯಗಳನ್ನು ಮಾತ್ರ ಪರಿಗಣಿಸುವುದರಿಂದ, ಗಮನಾರ್ಹ ಪ್ರಮಾಣದ ಅರಣ್ಯ, ಜೈವಿಕ ವೈವಿಧ್ಯ ಹಾಟ್ಸ್ಪಾಟ್ಗಳು ನಾಶವಾಗುವ ಸಾಧ್ಯತೆಯಿದೆ. ತಿದ್ದುಪಡಿಯು ಗೋದವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ದುರ್ಬಲಗೊಳಿಸುತ್ತದೆ; ಅರಣ್ಯ ವಿಷಯ ರಾಜ್ಯ/ಕೇಂದ್ರ ಎರಡಕ್ಕೂ ಸಂಬಂಧಿಸಿದ್ದು ಸಮವರ್ತಿ ಪಟ್ಟಿಯಲ್ಲಿದೆ. ತಿದ್ದುಪಡಿಗಳು ಕೇಂದ್ರದ ಪರವಾಗಿದ್ದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿವೆ’’ ಎಂದು ದೂರಿದ್ದರು. ಇದು ಅರಣ್ಯರೋದನವಾಯಿತು.

ಅರಣ್ಯಗಳ ರಕ್ಷಣೆಗೆ ನಿರ್ಬಂಧ

ಅವರ್ಗೀಕೃತ ಅರಣ್ಯಗಳನ್ನು ಸಂರಕ್ಷಣೆಯ ಹಿಡಿತದಿಂದ ಮುಕ್ತಗೊಳಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶ. ದೇಶದಾದ್ಯಂತ ಇಂಥ ಅರಣ್ಯಗಳ ಅಂದಾಜು ಪ್ರಮಾಣ 2.98 ಕೋಟಿ ಎಕರೆ. ಎಫ್ಸಿಎ ಕಠಿಣ ಕಾಯ್ದೆಯಾಗಿದ್ದರೂ, ಕಳೆದ 5 ವರ್ಷದಲ್ಲಿ 2.19 ಲಕ್ಷ ಹೆಕ್ಟೇರ್ ಕಾಡು ಅರಣ್ಯೇತರ ಉದ್ದೇಶಗಳಿಗೆ ಬಳಕೆಯಾಗಿದೆ. ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ಇದರಲ್ಲಿ 46,572 ಎಕರೆ(ಶೇ.21) ಗಣಿಗಾರಿಕೆಗೆ ಬಳಕೆಯಾಗಿದೆ. ಭಾರತದ ಅರಣ್ಯ ನೀತಿ 1988ರ ಪ್ರಕಾರ, ಒಟ್ಟು ಭೂಪ್ರದೇಶದ 1/3ರಷ್ಟು ಅರಣ್ಯ ಇರಬೇಕು. ಆದರೆ, ಇರುವುದು ಶೇ.21.71 ಮಾತ್ರ. ಇದರಲ್ಲಿ ಅತಿ ದಟ್ಟ ಕಾಡಿನ ಪ್ರಮಾಣ ಶೇ.3.04. ಇನ್ನು 1990-2020ರ ಅವಧಿಯಲ್ಲಿ ದೇಶ ಜಾಗತಿಕವಾಗಿ ಅರಣ್ಯ ನಾಶದ ಅತ್ಯಧಿಕ ದರ ಹೊಂದಿದೆ. 1950ರಿಂದ ಅರಣ್ಯೇತರ ಉದ್ದೇಶಕ್ಕೆ ಪರಭಾರೆಯಾದ ಅರಣ್ಯದ ಪ್ರಮಾಣ 5.7 ದಶಲಕ್ಷ ಹೆಕ್ಟೇರ್; 2015-2020ರಲ್ಲಿ 6.68 ಲಕ್ಷ ಹೆಕ್ಟೇರ್ ಅರಣ್ಯವನ್ನು ಕಳೆದುಕೊಂಡಿದೆ.

ತಿದ್ದುಪಡಿಯಿಂದ ರಾಜ್ಯದಲ್ಲಿ 10 ಲಕ್ಷ ಎಕರೆ ಡೀಮ್ಡ್ ಅರಣ್ಯ ಬಕಾಸುರರ ಪಾಲಾಗುತ್ತದೆ. ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಕಾಂಡ್ಲಾ ಕಾಡುಗಳು ಈವರೆಗೆ ಇಸ್ತಿಹಾರು ಆಗಿಲ್ಲ. ಚಂಡಮಾರುತ ಹಾಗೂ ಸಮುದ್ರ ಕೊರೆತವನ್ನು ತಡೆಯಬಲ್ಲ ಮತ್ತು ಮೀನುಗಳ ನೆಲೆಯಾದ ಕಾಂಡ್ಲಾಗಳು ಇಲ್ಲವಾದರೆ, ಮೀನುಗಾರರು ಮತ್ತು ಸ್ಥಳೀಯರ ಕತೆ ಏನು? ತಂತ್ರಜ್ಞಾನದಿಂದ ಮಳೆ-ಚಂಡಮಾರುತದ ಮುನ್ಸೂಚನೆ ಪಡೆಯಬಹುದು ಎಂದು ವಾದಿಸಬಹುದು. ಆದರೆ, ತಂತ್ರಜ್ಞಾನ ಎಷ್ಟು ಜನರನ್ನು ತಲುಪುತ್ತದೆ?

ತಿದ್ದುಪಡಿಯು ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನೀಡಲಾದ ಹಕ್ಕುಗಳನ್ನು ಉಲ್ಲಂಘಿಸಿ, ಕಾಡುಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಅಧಿಕಾರವನ್ನು ಕೇಂದ್ರಕ್ಕೆ ನೀಡುತ್ತದೆ. ಕೋಟ್ಯಂತರ ಎಕರೆ ಕಾಡನ್ನು ಮುಕ್ತಗೊಳಿಸುವ ಮೂಲಕ ಗ್ರಾಮಸಭೆಗಳ ಸಮ್ಮತಿಯನ್ನು ಅನಗತ್ಯಗೊಳಿಸುತ್ತದೆ.

ಪರಿಸರ ಪರಿಣಾಮ ಮೌಲ್ಯಮಾಪನ(ಇಐಎ)

ಇಐಎ ಸಂಪನ್ಮೂಲದ ಸುಸ್ಥಿರ ಹಾಗೂ ಸಮಪಾಲು ಹಂಚುವಿಕೆಯನ್ನು ಖಾತ್ರಿಗೊಳಿಸಲು ರೂಪಿಸಿದ ಪ್ರಕ್ರಿಯೆ. ಭಾರೀ ಯೋಜನೆಗಳಿಗೆ ಸಾರ್ವಜನಿಕ ಆಲಿಸುವಿಕೆ (ಪಬ್ಲಿಕ್ ಹಿಯರಿಂಗ್) ಮತ್ತು ಇಐಎ ಕಡ್ಡಾಯ. ಆದರೆ, ಇದನ್ನು ತಪ್ಪಿಸಿಕೊಳ್ಳಲು ದೊಡ್ಡ ಯೋಜನೆಗಳನ್ನು ತುಂಡು ಗುತ್ತಿಗೆ ನೀಡುವುದು ಸರಕಾರ/ಅಧಿಕಾರಿಗಳು/ಗುತ್ತಿಗೆದಾರರು ಬಳಸುವ ಸಾಮಾನ್ಯ ತಂತ್ರ. ಭಾರೀ ಯೋಜನೆಗಳನ್ನು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಿಯಮಗಳಿಂದ ತಪ್ಪಿಸಿಕೊಳ್ಳಲಾಗುತ್ತದೆ. ಉದ್ಯಮ/ಕಾರ್ಪೊರೇಟ್ ಕಂಪೆನಿಗಳು ಯೋಜನಾ ವೆಚ್ಚದ ಶೇ.1ರಷ್ಟನ್ನು ಪಾವತಿಸುವ ಮೂಲಕ ಉಲ್ಲಂಘನೆಗಳನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ವಹಿವಾಟು ನಡೆಸುವಿಕೆಯನ್ನು ಸುರಳೀತಗೊಳಿಸಲು ಇಐಎಗೆ 58ಕ್ಕೂ ಹೆಚ್ಚು ಬದಲಾವಣೆಗಳನ್ನು ತರಲಾಗಿದೆ. ಆದರೆ, ಇಂಥ ಬದಲಾವಣೆಗಳನ್ನು ಸಂಸತ್ತಿನ ಅಂಗೀಕಾರ ಪಡೆದು ಮಾಡುವ ಬದಲು ಅಡ್ಡ ದಾರಿಗಳಾದ ಕಚೇರಿ ಜ್ಞಾಪಕಪತ್ರ ಇಲ್ಲವೇ ಪತ್ರಗಳ ಮೂಲಕ ಬದಲಿಸಲಾಗಿದೆ. ಕಾಯ್ದೆಯ ಆಶಯಕ್ಕೆ ತದ್ವಿರುದ್ಧವಾಗಿವೆ. ಇದರಿಂದಾಗಿ ದೊಡ್ಡ ಉದ್ಯಮಗಳ ಭಾರೀ ಉಲ್ಲಂಘನೆಗಳಿಗೆ ವಿನಾಯಿತಿ ಸಿಗುತ್ತಿದೆ. ಇದಕ್ಕೊಂದು ಉದಾಹರಣೆ- ಮಾರ್ಚ್ 2023ರಲ್ಲಿ ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಸಂಸ್ಥೆ(ಎಸ್ಸಿಐಎಎ), ವಿಸ್ಟ್ರಾನ್ ಕಂಪೆನಿಗೆ 1.63 ಕೋಟಿ ರೂ. ದಂಡ ವಿಧಿಸಿತು. ಆದರೆ, ಜುಲೈ 2021ರಲ್ಲಿ ಕೇಂದ್ರ ಪರಿಸರ ಮಂತ್ರಾಲಯ ಹೊರಡಿಸಿದ ವಿನಾಯಿತಿಯನ್ನು ಬಳಸಿಕೊಂಡ ಕಂಪೆನಿ, ಸಣ್ಣ ಮೊತ್ತದ ದಂಡ ಪಾವತಿಸಿ, ಕುಣಿಕೆಯಿಂದ ತಪ್ಪಿಸಿಕೊಂಡಿತು.

ಜನ್ ವಿಶ್ವಾಸ್ ಮಸೂದೆ

ಸಂಸತ್ತಿನಲ್ಲಿ ಮಂಡನೆಯಾಗಬೇಕಿರುವ ‘ಜನ್ ವಿಶ್ವಾಸ್ ಮಸೂದೆ 2023’ ಕೂಡ ಉದ್ಯಮಿಗಳ ಬಗ್ಗೆ ಮೃದುವಾಗಿದೆ. ವಾಯು(ಮಾಲಿನ್ಯ ನಿಯಂತ್ರಣ ಮತ್ತು ತಡೆ)ಕಾಯ್ದೆ 1981 ಮತ್ತು ಜಲ (ಮಾಲಿನ್ಯ ನಿಯಂತ್ರಣ ಮತ್ತು ತಡೆ) ಕಾಯ್ದೆ 1974ಕ್ಕೆ ತಿದ್ದುಪಡಿ ತರುವ ಮೂಲಕ ಸಣ್ಣ ಉಲ್ಲಂಘನೆಗಳನ್ನು ಮನ್ನಿಸಲು ಹೊರಟಿದೆ. ಅರಣ್ಯ ಮತ್ತು ಪರಿಸರ ಮಂತ್ರಾಲಯವು ಪರಿಸರ ಸಂರಕ್ಷಣೆ ಕಾಯ್ದೆಯ ವಿಭಾಗ 7 ಅಥವಾ 8ರ ಉಲ್ಲಂಘನೆಗೆ ದಂಡವನ್ನು 5 ಲಕ್ಷದಿಂದ 5 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಹೇಳಿದ್ದರೆ ಮಸೂದೆ ಅದನ್ನು 1-15 ಲಕ್ಷ ರೂ.ಗೆ ಇಳಿಸಬೇಕೆಂದು ಹಾಗೂ ವಾಯು ಶಾಸನದ ವಿಭಾಗ 37ನ್ನು ಉಲ್ಲಂಘಿಸಿದವರಿಗೆ ವಿಧಿಸುವ ಕನಿಷ್ಠ ದಂಡವನ್ನು ರೂ. 10 ಲಕ್ಷದಿಂದ 1 ಲಕ್ಷಕ್ಕೆ ಹಾಗೂ ಗರಿಷ್ಠ ದಂಡವನ್ನು ರೂ.1 ಕೋಟಿಯಿಂದ 15 ಲಕ್ಷಕ್ಕೆ ಇಳಿಸಬೇಕೆಂದು ಹೇಳಿದೆ.

ಉದ್ಯಮಿಗಳಿಗೆ ಕಾಮಧೇನು ಆಗುವ ಸರಕಾರ ಬಡವರ ವಿಷಯದಲ್ಲಿ ನಿಷ್ಕರುಣಿ ಆಗುತ್ತದೆ. ಹಸಿರು ಕಾಯ್ದೆಗಳನ್ನು ಉಲ್ಲಂಘಿಸುವ ಜನಸಾಮಾನ್ಯರ ಮೇಲೆ ದಂಡ/ಶಿಕ್ಷೆ ಹೆಚ್ಚುತ್ತಿದೆ. ಡಿಸೆಂಬರ್ 2022ರಂದು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಪಿಎ)ಯು ಉಲ್ಲಂಘನೆಗೆ ದಂಡವನ್ನು 25,000 ರೂ.ಗಳಿಂದ 1 ಲಕ್ಷ ರೂ.ಗೆ ಹೆಚ್ಚಿಸಿತು. ಕ್ರಿಮಿನಲ್ ಜಸ್ಟೀಸ್ ಆ್ಯಂಡ್ ಪೊಲೀಸ್ ಅಕೌಂಟಬಿಲಿಟಿ ಪ್ರಾಜೆಕ್ಟ್(ಸಿಜೆಪಿಎ) ಅಧ್ಯಯನದ ಪ್ರಕಾರ, ಮಧ್ಯಪ್ರದೇಶದಲ್ಲಿ 2011-2020ರ ಅವಧಿಯಲ್ಲಿ ಅರಣ್ಯ ಇಲಾಖೆ ದಾಖಲಿಸಿದ ಅಪರಾಧ ಪ್ರಕರಣಗಳಲ್ಲಿ ಶೇ.78ರಷ್ಟು ಎಸ್ಸಿ/ಎಸ್ಟಿ ಮತ್ತು ಇತರ ಸಮುದಾಯಗಳ ಮೇಲೆ ಇತ್ತು(1,414 ಪ್ರಕರಣಗಳಲ್ಲಿ 2,790 ಮಂದಿ). ಇವರನ್ನು ರಕ್ಷಿಸಬೇಕಿದ್ದ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಪರಿಣಾಮಕಾರಿಯಾಗಿ ಆಗದ್ದರಿಂದ, ಆದಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು ಮತ್ತು ಕಾಯ್ದೆಯ ದುರ್ಬಳಕೆಯಿಂದ ದೇಶದೆಲ್ಲೆಡೆ ಅಪಾರ ಅರಣ್ಯ ಒತ್ತುವರಿಯಾಯಿತು.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾಯ್ದೆಯಡಿ 2010ರಲ್ಲಿ ರಚನೆಯಾದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್ ಜಿಟಿ)ದ ಉದ್ದೇಶ-ಪರಿಸರ, ಅರಣ್ಯಗಳು ಹಾಗೂ ಇನ್ನಿತರ ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಶೀಘ್ರವಾಗಿ ಶಾಸನಾತ್ಮಕ ಹಕ್ಕುಗಳನ್ನು ಜಾರಿಗೊಳಿಸುವುದು. ಎನ್ಜಿಟಿ ಪ್ರಕರಣಗಳ ಭಾರದಿಂದ ನಲುಗುತ್ತಿದೆ. ಜನವರಿ 1-ಜೂನ್ 1, 2023ರವರೆಗೆ 192 ಪರಿಸರ-ಅಭಿವೃದ್ಧಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ; ಸುಪ್ರೀಂ ಕೋರ್ಟ್ನಲ್ಲಿ 52 ಮತ್ತು ಹೈಕೋರ್ಟ್ಗಳಲ್ಲಿ 42 ಪ್ರಕರಣಗಳು ಇವೆ. ಪರಿಸರ-ವನ್ಯಜೀವಿ ಹಾಗೂ ಅರಣ್ಯವಾಸಿಗಳ ರಕ್ಷಣೆಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ದೇಶ ವಜಾಗೊಂಡ ಕೇರಳದ ‘ಮೌನ ಕಣಿವೆ’ ಯೋಜನೆಯಿಂದ ಬಹುದೂರ ಸಾಗಿಬಿಟ್ಟಿದೆ. ಏತನ್ಮಧ್ಯೆ ಪುಣೆ-ಬೆಂಗಳೂರು ನಡುವೆ ಎಕ್ಸ್ಪ್ರೆಸ್ವೇ ನಿರ್ಮಾಣ ಪ್ರಸ್ತಾವವನ್ನು ಎನ್ ಎಚ್ ಎಐ ಮುಂದೊತ್ತಿದೆ. 20,000 ಎಕರೆ ಭೂಮಿ, 25,000 ಮರಗಳ ಹನನಕ್ಕೆ ಕಾರಣವಾಗುವ 719 ಕಿ.ಮೀ. ಉದ್ದದ ಈ ಮಾರ್ಗದ ನಿರ್ಮಾಣ ವೆಚ್ಚ 55,000 ಕೋಟಿ ರೂ.! ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಯ ಅನಾಹುತಕಾರಿ ಉದಾಹರಣೆ ನಮ್ಮ ಮುಂದೆ ಇದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಣಿಪುರ ಪ್ರತಿಧ್ವನಿಸುತ್ತಿದೆ. ಈ ಕೋಲಾಹಲದಲ್ಲಿ ಎಫ್ಸಿಎ ತಿದ್ದುಪಡಿ ಹಾಗೂ ಜನ್ ವಿಶ್ವಾಸ್ ಮಸೂದೆ ಎರಡಕ್ಕೂ ಸರಕಾರ ಹಿಂಬಾಗಿಲಿನಿಂದಾದರೂ ಒಪ್ಪಿಗೆ ಪಡೆದುಕೊಳ್ಳಲಿದೆ. ಅದೇ ಹೊತ್ತಿನಲ್ಲಿ ಮಳೆಯಾಗುತ್ತಿದೆ. ಅಣೆಕಟ್ಟುಗಳು ಭರ್ತಿಯಾಗುತ್ತಿವೆ. ಜತೆಜತೆಯಲ್ಲೇ ನಗರಗಳ ರಸ್ತೆಗಳೂ ಕೊಳಗಳಾಗುತ್ತಿವೆ. ಬೆಟ್ಟಗಳು ಜರಿಯುತ್ತಿವೆ. ಪ್ರವಾಹ ಒಳಿತು-ಕೆಡುಕು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಇವೆಲ್ಲದರೊಡನೆ ಅವಿನಾಭಾವ ಸಂಬಂಧ ಹೊಂದಿರುವ ಅರಣ್ಯ-ಅರಣ್ಯವಾಸಿಗಳು ಅತಂತ್ರರಾಗುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಮಾಧವ ಐತಾಳ್

contributor

Similar News