ಪೇಟೆಂಟ್: ದಕ್ಷಿಣ ಆಫ್ರಿಕಾ ತೋರಿಸಿದ ಮಾರ್ಗ

ದಕ್ಷಿಣ ಆಫ್ರಿಕಾದಲ್ಲಿ 2021ರಲ್ಲಿ 3.04 ಲಕ್ಷ ಕ್ಷಯ ರೋಗಿಗಳಿದ್ದರು ಮತ್ತು ಸಾವಿನ ಸಂಖ್ಯೆ 55,000 ಇತ್ತು. ಆದರೆ, ಭಾರತದಲ್ಲಿ ಈಗ ಸಾವಿನ ಸಂಖ್ಯೆಯೇ 3.2 ಲಕ್ಷ ಇದೆ. ದಕ್ಷಿಣ ಆಫ್ರಿಕಾ ಸರಕಾರಕ್ಕೆ ತನ್ನ ಪ್ರಜೆಗಳಿಗೆ ಏನು ಬೇಕಿದೆ ಎನ್ನುವುದು ಗೊತ್ತಿದೆ. ಭಾರತದಲ್ಲೂ ಸ್ಪರ್ಧಾತ್ಮಕತೆ ಆಯೋಗ ಇದೆ. ಅದರ ಬಗ್ಗೆ ಕಡಿಮೆ ಹೇಳಿದರೆ ಒಳಿತು. ಅದು ಔಷಧ ಉದ್ಯಮವನ್ನು ಪವಿತ್ರ ಗೋವು ಎಂದು ಭಾವಿಸಿದೆ. ಮುಟ್ಟಲೇ ಅಂಜುತ್ತದೆ!

Update: 2024-09-06 05:16 GMT
Editor : Thouheed | Byline : ಋತ

ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ಔಷಧ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್(ಜೆ ಯಂಡ್ ಜೆ) ಮತ್ತು ಅದರ ಅಂಗಸಂಸ್ಥೆ ಜಾನ್ಸನ್ ಫಾರ್ಮಾಸ್ಯೂಟಿಕಾದ ಉತ್ಪನ್ನವಾದ ಔಷಧ ಪ್ರತಿರೋಧವಿರುವ ಕ್ಷಯಕ್ಕೆ ಬಳಸುವ ಮುಖ್ಯ ಔಷಧ ಬೆಡಾಕ್ವಿಲಿನ್‌ನ ಎವರ್‌ಗ್ರೀನಿಂಗ್(ಅಂದರೆ, ಔಷಧದ ಸ್ವಲ್ಪ ಮಟ್ಟಿನ, ನಾವೀನ್ಯತೆ ಅಗತ್ಯವಿಲ್ಲದ ಬದಲಾವಣೆ ಮೂಲಕ ಪೇಟೆಂಟ್ ಅವಧಿ ವಿಸ್ತರಿಸುವಿಕೆ) ವಿರುದ್ಧದ ಚರಿತ್ರಾರ್ಹ ಗೆಲುವನ್ನು ಸಂಭ್ರಮಿಸಲಾಯಿತು. ರೋಗಿಗಳ ಕಾರ್ಯಜಾಲಗಳು ದಾಖಲಿಸಿದ ದೂರು ಆಧರಿಸಿ, ಬೆಡಾಕ್ವಿಲಿನ್‌ನ ಮಕ್ಕಳಿಗೆ ನೀಡುವ ಸೂತ್ರಕ್ಕೆ ಪೇಟೆಂಟ್ ನಿರಾಕರಿಸಲಾಯಿತು. ಒಂದುವೇಳೆ ಪೇಟೆಂಟ್ ಲಭ್ಯವಾಗಿದ್ದಲ್ಲಿ, ಕಂಪೆನಿಗೆ ಬೆಡಾಕ್ವಿಲಿನ್‌ನ ಇಂಥ ರೂಪಗಳ ಮೇಲಿನ ಪೇಟೆಂಟ್ 2036, 2038 ರವರೆಗೆ ಚಾಲ್ತಿಯಲ್ಲಿ ಇರುತ್ತಿತ್ತು.

ದಿಲ್ಲಿ ನೆಟ್‌ವರ್ಕ್ ಆಫ್ ಪಾಸಿಟಿವ್ ಪೀಪಲ್ ಮತ್ತು ಕ್ಷಯದಿಂದ ಗುಣ ಹೊಂದಿದ ಮುಂಬೈ ನಿವಾಸಿ ಗಣೇಶ್ ಆಚಾರ್ಯ ಅವರ ಅರ್ಜಿಯ ತೀರ್ಪು, ಮುಂಬೈಯ ನಂದಿತಾ ವೆಂಕಟೇಶನ್ ಮತ್ತು ದಕ್ಷಿಣ ಆಫ್ರಿಕಾದ ಫುಮೆಜಾ ಟಿಸೈಲ್ ಅವರ ಪ್ರಿ ಗ್ರಾಂಟ್ ಅಪೊಸಿಷನ್(ಔಷಧಕ್ಕೆ ಅನುಮತಿ ನೀಡುವ ಮೊದಲೇ ವಿರೋಧ ದಾಖಲಿಸುವಿಕೆ) ಅರ್ಜಿಯನ್ನು ಪೇಟೆಂಟ್ ಕಚೇರಿ ಎತ್ತಿಹಿಡಿದ ಒಂದು ವರ್ಷದ ಬಳಿಕ ಬಂದಿದೆ. 2023ರ ಆದೇಶದಲ್ಲಿ ಪೇಟೆಂಟ್ ಕಚೇರಿಯು ಬೆಡಾಕ್ವಿಲಿನ್ ಫ್ಯುಮರೇಟ್ ಲವಣದ ಮಾರ್ಪಡಿಸಿದ ಆವೃತ್ತಿಗಳಿಗೆ ಅನುಮತಿ ನಿರಾಕರಿಸಿತು. ಪ್ರಿ ಗ್ರಾಂಟ್ ಅರ್ಜಿಗಳನ್ನು ಪ್ರಮುಖ ಔಷಧಗಳ ದುಬಾರಿಯಲ್ಲದ ಜನರಿಕ್ ಆವೃತ್ತಿಗಳ ಉತ್ಪಾದನೆಗೆ ಅನುಮತಿ ಪಡೆಯಲು ಹಾಕಲಾಗುತ್ತದೆ. ಇಂಥ ಅರ್ಜಿಗಳನ್ನು ಒಬ್ಬ ವ್ಯಕ್ತಿ ಹಾಕಲು ಸಾಧ್ಯವಿಲ್ಲ. ಇವು ಸಂಕೀರ್ಣ ಅರ್ಜಿಗಳಾಗಿದ್ದು, ಔಷಧಶಾಸ್ತ್ರ ಮತ್ತು ದೇಶದ ಪೇಟೆಂಟ್ ಕಾಯ್ದೆಯ ಜ್ಞಾನ ಇರಬೇಕಾಗು ತ್ತದೆ. ಪೇಟೆಂಟ್ ಕಚೇರಿಯು ಅರ್ಜಿ ದಾಖಲಿಸಿದ 4-5 ವರ್ಷಗಳ ಬಳಿಕ ವಿಚಾರಣೆ ಆರಂಭಿಸಿತ್ತು. ಗ್ರಾಹಕರಿಗೆ ಔಷಧಗಳು ಕೈಗೆಟಕುವ ದರದಲ್ಲಿ ಸಿಗಬೇಕು ಎಂದು ಹೋರಾಡುತ್ತಿರುವ ‘ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್’ (ಎಂಎಸ್‌ಎಫ್) ನೆರವಿನಿಂದಾಗಿ, ಈ ಎರಡು ಅರ್ಜಿಗಳ ದಾಖಲಿಸುವಿಕೆ ಮತ್ತು ಹೋರಾಟ ಸಾಧ್ಯವಾಯಿತು.

ಟಿಬಿ ಸಂತ್ರಸ್ತರು ಮತ್ತು ರೋಗಿಗಳ ಗುಂಪಿನ ವಾದ ಸ್ಪಷ್ಟವಾಗಿತ್ತು. ಜೆ ಆ್ಯಂಡ್ ಜೆ ಶೋಧನೆಯಲ್ಲಿ ನಾವೀನ್ಯತೆ ಇಲ್ಲ ಮತ್ತು ಕಂಪೆನಿಯು ಪೇಟೆಂಟ್ ಅರ್ಜಿ ಸಲ್ಲಿಸುವ ಮುನ್ನವೇ ಬೆಡಾಕ್ವಿಲಿನ್‌ನ ಮಕ್ಕಳಿಗೆ ನೀಡುವ 7 ಔಷಧಗಳು ಇದ್ದವು. ಮಾತ್ರೆಯಲ್ಲಿನ ಕ್ರಿಯಾಶೀಲ ಘಟಕಗಳು ಸೇರಿದಂತೆ, ತಯಾರಿಕೆ ವಿಧಾನ, ಬ್ಯಾಕ್ಟೀರಿಯ ವಿರೋಧಿ ಗುಣ, ಮಾತ್ರೆಗಳ ಸೂತ್ರ(ಫಾರ್ಮುಲಾ) ಮತ್ತು ವ್ಯಾಪ್ತಿ ಬಗ್ಗೆ ಮಾಹಿತಿ ಇದ್ದಿತ್ತು. ಪೇಟೆಂಟ್ ಕಚೇರಿ ತನ್ನ ಆದೇಶದಲ್ಲಿ, ‘ಕಂಪೆನಿ ಹೇಳಿಕೊಳ್ಳುತ್ತಿರುವ ಆವಿಷ್ಕಾರವು ಈ ಕ್ಷೇತ್ರದಲ್ಲಿರುವ ಪರಿಣತನಿಗೆ ಗೊತ್ತಿರುವಂಥದ್ದೇ’ ಎಂದು ಹೇಳಿತು. ಭಾರತೀಯ ಪೇಟೆಂಟ್ ಕಾಯ್ದೆಯು ಯಾವುದಕ್ಕೆ ಪೇಟೆಂಟ್ ಕೊಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಔಷಧದ ಸಣ್ಣ ಪ್ರಮಾಣದ ಬದಲಾವಣೆ ಇಲ್ಲವೇ ಭಡ್ತಿ(ಎವರ್‌ಗ್ರೀನಿಂಗ್)ಗೆ ಅನುಮತಿ ನೀಡುವುದಿಲ್ಲ.

ರೋಗಿಗಳು ಇಂಥ ಅರ್ಜಿ ದಾಖಲಿಸಲು ಕಾರಣಗಳಿವೆ. ಭಾರತದಲ್ಲಿನ ಪೇಟೆಂಟ್‌ಗಳಲ್ಲಿ ಹೆಚ್ಚಿನವು ಈಗಾಗಲೇ ಇರುವ ಔಷಧಗಳ ಅನುಷಂಗಿಕ ರೂಪಗಳು. 2018ರ ‘ಫಾರ್ಮಾಸ್ಯೂಟಿಕಲ್ ಪೇಟೆಂಟ್ ಗ್ರಾಂಟ್ಸ್ ಇನ್ ಇಂಡಿಯಾ: ಹೌ ಅವರ್ ಸೇಫ್ ಎಗೇನ್ಸ್ಟ್ ಎವರ್‌ಗ್ರೀನಿಂಗ್ ಫೇಲ್ಡ್ ವೈ ದ ಸಿಸ್ಟಮ್ ಮಸ್ಟ್ ಬಿ ರಿಫಾರ್ಮ್ಡ್’ (ಡಾ. ಫಿರೋಝ್ ಅಲಿ, ಡಾ. ಸುದರ್ಶನ್ ರಾಜಗೋಪಾಲ್, ಡಾ. ವೆಂಕಟ ಎಸ್. ರಾಮನ್ ಮತ್ತು ರೋಷನ್ ಜಾನ್ ಅವರ ಅಧ್ಯಯನದ ಪ್ರಕಟಣೆ-ಅಜೀಂ ಪ್ರೇಮ್‌ಜಿ ಫೌಂಡೇಷನ್)ಅಧ್ಯಯನದ ಪ್ರಕಾರ, ‘2009-16ರ ಅವಧಿಯಲ್ಲಿ ನೀಡಲಾದ ಶೇ.70ರಷ್ಟು ಪೇಟೆಂಟ್‌ಗಳು ಈಗಾಗಲೇ ಇರುವ ಔಷಧವೊಂದರ ಸ್ಪಲ್ಪಮಟ್ಟಿನ ಸುಧಾರಣೆ ನೆಪದಲ್ಲಿ ಎವರ್‌ಗ್ರೀನಿಂಗ್ ಕಾನೂನು ಉಲ್ಲಂಘಿಸಿವೆ’. ಇಂಥ ಹಲವು ಅಧ್ಯಯನಗಳು ಈ ಸಂಬಂಧ ಎಚ್ಚರಿಕೆ ನೀಡಿದ್ದರೂ, ಸರಕಾರ ಅಕ್ಷರಶಃ ಕೈಕಟ್ಟಿ ಕೂತಿದೆ. ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಕೈಗಾರಿಕೆ ಕಾರ್ಯನೀತಿ ಮತ್ತು ಉತ್ತೇಜನ(ಡಿಐಪಿಪಿ)ಅಡಿ ಬರುವ ಪೇಟೆಂಟ್ ಕಚೇರಿಗೆ ಉದ್ಯಮದ ಹಿತಾಸಕ್ತಿ ಕಾಯುವುದು ಆದ್ಯತೆಯೇ ಹೊರತು ರೋಗಿಗಳ ರಕ್ಷಣೆಯಲ್ಲ. ಪೇಟೆಂಟ್ ಮಹಾ ನಿಯಂತ್ರಕರ ಬಹಳಷ್ಟು ನಿರ್ಧಾರಗಳು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟು, ವಜಾಗೊಳ್ಳುವುದೇಕೆ ಎಂಬ ಕುರಿತು ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ. ಪೇಟೆಂಟ್ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಗುಣಮಟ್ಟದ ಕೊರತೆ ಕಾರಣ. ಔಷಧವೊಂದು ಪೇಟೆಂಟ್ ಪಡೆಯಲು ಅರ್ಹವೇ ಎಂಬುದನ್ನು ವಿವರವಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ವ್ಯಾಪಕ ಓದು, ಕಾನೂನಿನ ತಿಳಿವಳಿಕೆ ಮತ್ತು ಔಷಧಶಾಸ್ತ್ರದ ಜ್ಞಾನ ಇರಬೇಕಾಗುತ್ತದೆ.

ವಿಚಾರಣೆ ವೇಳೆ ಫಾರ್ಮಾ ಕಂಪೆನಿಗಳು ತಮ್ಮ ಪರವಾಗಿ ಪ್ರತಿಷ್ಠಿತ ಕಾನೂನು ಕಂಪೆನಿಗಳನ್ನು ನೇಮಿಸಿಕೊಳ್ಳುತ್ತವೆ. ಇವರ ವಿರುದ್ಧ ವಾದ ಮಾಡಿ ಗೆಲ್ಲುವುದು ಸುಲಭವಲ್ಲ. ಸಹಜವಾಗಿಯೇ ಪೇಟೆಂಟ್ ಕಚೇರಿ ತನ್ನ ನಿಲುವು ಸಮರ್ಥಿಸಿಕೊಳ್ಳಲು ವಿಫಲವಾಗುತ್ತದೆ.

ರೋಗಿಗಳ ಗುಂಪುಗಳು ಅಥವಾ ವ್ಯಕ್ತಿಯೊಬ್ಬ ಔಷಧ ಲಾಬಿಯೊಂದಿಗೆ ಹೊಡೆದಾಡಲು ಸಾಧ್ಯವಿಲ್ಲ. ಆರ್ಥಿಕ ಕೊರತೆ ಮುಖ್ಯ ಕಾರಣಗಳಲ್ಲಿ ಒಂದು. ವಾರ್ಷಿಕ ಬಿಲಿಯನ್‌ಗಳಲ್ಲಿ ವಹಿವಾಟು ನಡೆಸುವ ಫಾರ್ಮಾ ಕಂಪೆನಿಗಳ ವಿರುದ್ಧ ಸೆಣೆಸಲು ಜೇಬು ಗಟ್ಟಿ ಇರಬೇಕು. ಇನ್ನೊಂದು ಕಾರಣ-2014ರ ಬಳಿಕ ಪೇಟೆಂಟ್ ಕಾಯ್ದೆಯಲ್ಲಿನ ಹಲವು ಅಡೆತಡೆಗಳನ್ನು ವ್ಯವಸ್ಥಿತವಾಗಿ ಕಳಚಲಾಗಿದೆ. ಈ ಮೊದಲು ಅನುಮತಿಗೆ ಮುನ್ನ ವಿರೋಧ ವ್ಯಕ್ತಪಡಿಸುವಿಕೆ(ಪ್ರಿ ಗ್ರಾಂಟ್ ಅಪೊಸಿಷನ್) ಅರ್ಜಿಯನ್ನು ಯಾರು ಬೇಕಾದರೂ ಸಲ್ಲಿಸಬಹುದು ಎಂಬ ನಿಯಮವಿತ್ತು. ಎಪ್ರಿಲ್ 2024ರಲ್ಲಿ ಪೇಟೆಂಟ್ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಈ ಹಕ್ಕನ್ನು ಸಡಿಲಗೊಳಿಸಲಾಗಿದೆ. ಪೇಟೆಂಟ್ ವಿರೋಧ ಅರ್ಜಿಯನ್ನು ದಾಖಲಿಸಲು ವ್ಯಕ್ತಿ-ಸಂಘ ಸಂಸ್ಥೆಗಳು ದುಬಾರಿ ಶುಲ್ಕ ತೆರಬೇಕಾಗುತ್ತದೆ.

ಭಾರೀ ಫಾರ್ಮಾ ಕಂಪೆನಿಗಳ ವಿರುದ್ಧ ಜನರೇಕೆ ಹೋರಾಡಬೇಕು? ಜನಹಿತ ಕಾಯುವುದು ಸರಕಾರದ ಕೆಲಸವಲ್ಲವೇ? ಹೌದು. ಆದರೆ, ಭಾರತ ಸರಕಾರ ಇದರಲ್ಲಿ ವಿಫಲವಾಗಿದೆ. ಸರಕಾರವೊಂದು ಜನರಿಗೋಸ್ಕರ ಏನು ಮಾಡಬಹುದು ಎಂಬುದನ್ನು ದಕ್ಷಿಣ ಆಫ್ರಿಕಾ ಮಾಡಿ ತೋರಿಸಿದೆ. ಜೆ ಆ್ಯಂಡ್ ಜೆ ಸೆಪ್ಟಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬೆಡಾಕ್ವಿಲಿನ್‌ನ 2ನೇ ಪೇಟೆಂಟ್ ಅರ್ಜಿ ಸಲ್ಲಿಸಿತು. ತಕ್ಷಣ ರಂಗಕ್ಕಿಳಿದ ಸ್ಪರ್ಧಾತ್ಮಕತೆ ಆಯೋಗ, ಕಂಪೆನಿ ಪ್ರತಿಸ್ಪರ್ಧಿಗಳ ಉಸಿರುಗಟ್ಟಿಸುತ್ತಿದೆ ಎಂದು ದೂರು ದಾಖಲಿಸಿತು; ಕಂಪೆನಿಯ ಸ್ಪರ್ಧಾತ್ಮಕ ದರ ನೀತಿ ಕುರಿತು ತನಿಖೆ ನಡೆಸುವುದಾಗಿ ಹೇಳಿತು. ಜೆ ಆ್ಯಂಡ್ ಜೆ ಮಂಡಿಯೂರಿತು. ಜುಲೈ ಮಧ್ಯದಲ್ಲಿ ಜೆ ಆ್ಯಂಡ್ ಜೆ ಮತ್ತು ಜಾನ್ಸನ್ ಫಾರ್ಮಾಸ್ಯೂಟಿಕಾ, ಬೆಡಾಕ್ವಿಲಿನ್‌ನ 2ನೇ ಪೇಟೆಂಟ್ ಅರ್ಜಿಯನ್ನು ವಾಪಸ್ ಪಡೆದವಲ್ಲದೆ, ರಾಷ್ಟ್ರೀಯ ಆರೋಗ್ಯ ಇಲಾಖೆಗೆ ಪೂರೈಸುವ ಔಷಧದ ಬೆಲೆಯನ್ನು ಶೇ.40ರಷ್ಟು ಇಳಿಸಿದವು. ಜೊತೆಗೆ, ಒಪ್ಪಂದದಿಂದ ಬೆಡಾಕ್ವಿಲಿನ್‌ನ ಕಡಿಮೆ ವೆಚ್ಚದ ಜನರಿಕ್ ಆವೃತ್ತಿಗಳನ್ನು ಉತ್ಪಾದನೆ/ಪೂರೈಸಬಹುದು. ಪ್ರತಿಯಾಗಿ, ಕಂಪೆನಿ ಮೇಲಿನ ತನಿಖೆಯನ್ನು ಸರಕಾರ ನಿಲ್ಲಿಸಿತು.

ದಕ್ಷಿಣ ಆಫ್ರಿಕಾದಲ್ಲಿ 2021ರಲ್ಲಿ 3.04 ಲಕ್ಷ ಕ್ಷಯ ರೋಗಿಗಳಿದ್ದರು ಮತ್ತು ಸಾವಿನ ಸಂಖ್ಯೆ 55,000 ಇತ್ತು. ಆದರೆ, ಭಾರತದಲ್ಲಿ ಈಗ ಸಾವಿನ ಸಂಖ್ಯೆಯೇ 3.2 ಲಕ್ಷ ಇದೆ. ದಕ್ಷಿಣ ಆಫ್ರಿಕಾ ಸರಕಾರಕ್ಕೆ ತನ್ನ ಪ್ರಜೆಗಳಿಗೆ ಏನು ಬೇಕಿದೆ ಎನ್ನುವುದು ಗೊತ್ತಿದೆ. ಭಾರತದಲ್ಲೂ ಸ್ಪರ್ಧಾತ್ಮಕತೆ ಆಯೋಗ ಇದೆ. ಅದರ ಬಗ್ಗೆ ಕಡಿಮೆ ಹೇಳಿದರೆ ಒಳಿತು. ಅದು ಔಷಧ ಉದ್ಯಮವನ್ನು ಪವಿತ್ರ ಗೋವು ಎಂದು ಭಾವಿಸಿದೆ. ಮುಟ್ಟಲೇ ಅಂಜುತ್ತದೆ!

ದಕ್ಷಿಣ ಆಫ್ರಿಕಾದ ಸ್ಥೈರ್ಯ ಇಷ್ಟಕ್ಕೆ ನಿಲ್ಲಲಿಲ್ಲ. ಗಾಝಾದ ಮೇಲಿನ ಇಸ್ರೇಲ್ ದಾಳಿ-ಹತ್ಯಾಕಾಂಡವನ್ನು ನಿಲ್ಲಿಸಬೇಕೆಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಕ್ಕೆ ದೂರು ನೀಡಿದೆ!

ಸೋಂಕು ರೋಗ ಒಪ್ಪಂದಕ್ಕೆ ಅಡ್ಡಿ:

ಇಲ್ಲಿ ಕೂಡ ದಕ್ಷಿಣ ಆಫ್ರಿಕಾದ ಹೆಸರಿನ ಪ್ರಸ್ತಾವವಿದೆ. ಗಾಝಾದ ಹತ್ಯಾಕಾಂಡಕ್ಕೆ ಕಾರಣವಾದ ಇಸ್ರೇಲಿನ ಕರಿ ನೆರಳು ಜಗತ್ತಿಗೆ ಅತ್ಯಂತ ಮುಖ್ಯವಾಗಿದ್ದ ಒಪ್ಪಂದವೊಂದಕ್ಕೆ ಅಡ್ಡಿಪಡಿಸಿದ ಪ್ರಸಂಗವಿದು.

ಕೋವಿಡ್ ಜಗತ್ತನ್ನು ತಲ್ಲಣಗೊಳಿಸಿ, ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು ಈಗ ಇತಿಹಾಸ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯಲ್ಲಿ ಕಳೆದ ಮೇ ತಿಂಗಳಿನಲ್ಲಿ ಭವಿಷ್ಯದಲ್ಲಿ ಇಂಥ ಸೋಂಕುರೋಗ ವ್ಯಾಪಕವಾಗಿ ಹರಡದಂತೆ ಮಾಡಬಲ್ಲ ಸೋಂಕು ರೋಗ ಒಪ್ಪಂದವೊಂದಕ್ಕೆ ಶ್ರೀಮಂತ ದೇಶಗಳು ಕಲ್ಲು ಹಾಕಿದವು. 194 ಸದಸ್ಯರಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ(ವಿಶ್ವ ಆರೋಗ್ಯ ಏಜೆನ್ಸಿ, ಡಬ್ಲ್ಯುಎಚ್‌ಎ)ಯು ಸೋಂಕು ರೋಗಗಳ ವಿರುದ್ಧದ ಜಾಗತಿಕ ಕಾರ್ಯತಂತ್ರ ಕುರಿತ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದೆ. ಈ ಒಪ್ಪಂದಕ್ಕೆ ಮೇ 2024ರೊಳಗೆ ಸಹಿ ಆಗಬೇಕಿತ್ತು. ರೋಗಜನಕಗಳು ಮತ್ತು ಲಸಿಕೆ ಹಂಚಿಕೆಯಂಥ ಪ್ರಮುಖ ಕ್ರಮ 2 ವರ್ಷ ಕಾಲ ಸಂಧಾನದ ಮೇಜಿನಲ್ಲಿತ್ತು. ಏಜೆನ್ಸಿಯ 77ನೇ ಸಭೆ ಹಳಿ ತಪ್ಪಿದ್ದು-32 ದೇಶಗಳು ಗೊತ್ತುವಳಿ(ಭಾರತ ಇದಕ್ಕೆ ಸಹಿ ಹಾಕಿರಲಿಲ್ಲ)ಯೊಂದನ್ನು ಮಂಡಿಸಿದಾಗ. ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಇಸ್ರೇಲ್, ಹಮಾಸ್‌ಗಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂಬ ಅನಿರೀಕ್ಷಿತ ತಿದ್ದುಪಡಿಯನ್ನು ಗೊತ್ತುವಳಿಗೆ ಸೇರಿಸಿತು. ಗೊತ್ತುವಳಿ ಮಂಡಿಸಿದ್ದ ದೇಶಗಳು ಇದಕ್ಕೆ ಪ್ರತಿಯಾಗಿ ಮೂರು ತಿದ್ದುಪಡಿಗಳನ್ನು ಸೂಚಿಸಿದವು. ಅದರಲ್ಲಿ ಒಂದು-ಆಸ್ಪತ್ರೆ/ಸಾರ್ವಜನಿಕರ ಮೇಲಿನ ಗೊತ್ತುಗುರಿಯಿಲ್ಲದ ದಾಳಿಯ ಖಂಡನೆ. ಡಬ್ಲ್ಯುಎಚ್‌ಒ ಕಳೆದ ಒಂದು ವರ್ಷದಿಂದ ಗಾಝಾ ಪಟ್ಟಿ, ನಿರ್ದಿಷ್ಟವಾಗಿ, ಫೆಲೆಸ್ತೀನ್ ಗಡಿಯೊಳಗೆ ಪರಿಹಾರ ವಸ್ತುಗಳ ಪೂರೈಕೆಗೆ ಯಾವುದೇ ತಡೆ ಒಡ್ಡಬಾರದು ಎಂದು ಹೇಳುತ್ತಲೇ ಇದೆ; ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ, ಆರೋಗ್ಯ ಸಿಬ್ಬಂದಿ ಹಾಗೂ ಸಾವಿರಾರು ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಸಾವಿಗೆ ಆತಂಕ ವ್ಯಕ್ತಪಡಿಸಿದೆ. ಆದರೆ, ಇಸ್ರೇಲ್ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಗೇಬ್ರಿಯೇಸಸ್ ಅವರು ಸಿದ್ಧಪಡಿಸಿದ ವರದಿಯ ಶಿಫಾರಸುಗಳನ್ನು ಅಂಗೀಕರಿಸಲಾಯಿತು. ಶಿಫಾರಸುಗಳಲ್ಲಿ ಒಂದು-ಅಂತರ್‌ರಾಷ್ಟ್ರೀಯ ಸಮುದಾಯವು ಡಬ್ಲ್ಯುಎಚ್‌ಒ ಮತ್ತು ವಿಶ್ವ ಸಂಸ್ಥೆಯ ಸಂಬಂಧಿಸಿದ ಏಜೆನ್ಸಿಯ ಸಹಕಾರದೊಂದಿಗೆ ಫೆಲೆಸ್ತೀನ್‌ನ ಆರೋಗ್ಯ ವ್ಯವಸ್ಥೆಯ ಪುನರ್‌ನಿರ್ಮಾಣಕ್ಕೆ ಅಗತ್ಯವಿರುವಷ್ಟು ನಿಧಿ ಕ್ರೋಡೀಕರಣ ಮಾಡಬೇಕು.

ಈ ರಾಜಕೀಯ ಮೇಲಾಟದಲ್ಲಿ ಸೋಂಕು ರೋಗಗಳಿಗೆ ಸಂಬಂಧಿಸಿದ ಒಪ್ಪಂದ ಹಳ್ಳ ಹಿಡಿಯಿತು. ಡಬ್ಲ್ಯುಎಚ್‌ಒದ 2005ರ ಅಂತರ್ ರಾಷ್ಟ್ರೀಯ ಆರೋಗ್ಯ ನಿಯಂತ್ರಣ(ಐಎಚ್‌ಆರ್) ಪ್ಯಾಕೇಜಿಗೆ ತಿದ್ದುಪಡಿಗೆ ಸಮ್ಮತಿ ಮತ್ತು ಜಾಗತಿಕ ಸೋಂಕು ಒಪ್ಪಂದ ಕುರಿತ ಮಾತುಕತೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂಬ ನಿರ್ಧಾರ ಹಾಗೂ ಸೋಂಕಿನ ತುರ್ತು ಪರಿಸ್ಥಿತಿ ಎಂದರೇನು ಎಂಬುದರ ವಿವರಣೆ ಮತ್ತು ಅಂಥ ಸಂದರ್ಭದಲ್ಲಿ ವೈದ್ಯಕೀಯ ಉತ್ಪನ್ನಗಳು ಹಾಗೂ ಹಣಕಾಸು ಪೂರೈಕೆಯನ್ನು ಬಲಗೊಳಿಸುವಿಕೆ ಘೋಷಣೆ ಹೊರಬಿದ್ದಿತು. ಆದರೆ, ಅತ್ಯಂತ ಮುಖ್ಯವಾಗಿದ್ದ ರೋಗಜನಕಗಳಿಗೆ ಪ್ರವೇಶಾವಕಾಶ ಮತ್ತು ಲಾಭಾಂಶ ಹಂಚಿಕೆ (ಪೆಥೋಜನ್ ಅಕ್ಸೆಸ್ ಆ್ಯಂಡ್ ಬೆನಿಫಿಟ್ ಶೇರಿಂಗ್, ಪಿಎಬಿಎಸ್) ಉಲ್ಲೇಖವೇ ಇರಲಿಲ್ಲ. ಇದು ಸೋಂಕು ಒಪ್ಪಂದದ ಪ್ರಮುಖ ಅಂಶವಾಗಿದ್ದು, ಸದಸ್ಯ ರಾಷ್ಟ್ರಗಳು ವಂಶವಾಹಿ ಶ್ರೇಣಿಗಳು ಮತ್ತು ಹೊಮ್ಮುತ್ತಿರುವ ರೋಗಜನಕಗಳನ್ನು ಶೀಘ್ರವಾಗಿ ಹಂಚಿಕೊಳ್ಳುವಿಕೆಯನ್ನು ಒಳಗೊಂಡಿತ್ತು. ಕೊರೋನದಂತಹ ಇನ್ನೊಂದು ಹೊಸ ರೋಗಜನಕ ಕಾಡಿದರೆ, ಅದನ್ನು ಎದುರಿಸಲು ರೋಗಪತ್ತೆ ಕಿಟ್, ಔಷಧೋಪಚಾರ ಮತ್ತು ಲಸಿಕೆ ಕಂಡುಹಿಡಿಯಲು ಇದು ಬಹಳ ಮುಖ್ಯ. ಆದರೆ, ಶ್ರೀಮಂತ ರಾಷ್ಟ್ರಗಳು ಈ ದತ್ತಾಂಶ ಹಂಚಿಕೆಗೆ ಹಿಂಜರಿದವು. ಬಡ ರಾಷ್ಟ್ರಗಳು ಕಡಿಮೆ ವೆಚ್ಚದಲ್ಲಿ ಲಸಿಕೆ ತಯಾರಿಸಿ, ಬಳಸಲಾರಂಭಿಸಿದರೆ, ಶ್ರೀಮಂತ ದೇಶಗಳ ಫಾರ್ಮಾ ಕಂಪೆನಿಗಳಿಗೆ ಆದಾಯ ತಪ್ಪಿಹೋಗುತ್ತದೆ ಎಂಬುದು ಇದಕ್ಕೆ ಕಾರಣ.

ಆದರೆ, ಆಫ್ರಿಕಾದ ಸದಸ್ಯರು ಉತ್ತರದಾಯಿತ್ವ ಹಾಗೂ ನಿರ್ವಹಣೆಗೆ ಸ್ಪಷ್ಟ ನಿಯಮಗಳಿರುವ ಬಹುದೇಶೀಯ ಪಿಎಬಿಎಸ್ ಒಪ್ಪಂದಕ್ಕೆ ದೃಢ ನಿರ್ಧಾರ ಮಾಡಿದ್ದವು. ಹೊಸದೊಂದು ಸೋಂಕು ವ್ಯಾಪಿಸಿದಾಗ, ಉತ್ಪಾದಕರು ವಿಶ್ವ ಆರೋಗ್ಯ ಸಂಸ್ಥೆಗೆ ಶೇ.10ರಷ್ಟು ಲಸಿಕೆಯನ್ನು ವಂತಿಗೆೆಯಾಗಿ ಹಾಗೂ ಶೇ.10 ರಷ್ಟನ್ನು ಡಬ್ಲ್ಯುಎಚ್‌ಒ ನಿರ್ಧರಿಸಿದ ಬೆಲೆಗೆ ಬಡ ರಾಷ್ಟ್ರಗಳಿಗೆ ಹಂಚಲು ಕೊಡಬೇಕು ಎಂಬ ಪ್ರಸ್ತಾವವನ್ನು ಈ ಮೊದಲೇ ಶ್ರೀಮಂತ ರಾಷ್ಟ್ರಗಳು ತಿರಸ್ಕರಿಸಿದ್ದವು.

ಸಾರ್ಸ್ ಕೋವಿಡ್-19 ಸೋಂಕು ಅಪನಂಬಿಕೆಯನ್ನು ಗಾಢವಾಗಿಸಿದೆ. ಕೋವಿಡ್ ಲಸಿಕೆಯ ಅಡ್ಡ ಪರಿಣಾಮ ಕುರಿತ ಅಭಿಪ್ರಾಯಗಳು ಏನೇ ಇರಲಿ, ಲಸಿಕೆ ಲಭ್ಯತೆ ಅಸಮವಾಗಿದೆ. 2021ರ ಅಂತ್ಯದೊಳಗೆ ಶ್ರೀಮಂತರ ದೇಶಗಳ ಶೇ.90ಕ್ಕೂ ಹೆಚ್ಚು ನಾಗರಿಕರು 2 ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರೆ, ಬಡ ದೇಶಗಳಲ್ಲಿ ಈ ಪ್ರಮಾಣ ಶೇ.2ನ್ನು ದಾಟಿಲ್ಲ. ಇದು ದ್ವಂದ್ವಗಳ ಜಗತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News