ಒಂದು ಕಾಫ್ಕಾಯಿಸ್ಕ್ ಕಾಯ್ದೆಗೆ ತಾತ್ಕಾಲಿಕ ನಿಲುಗಡೆ

ಈ ಮಸೂದೆಯಿಂದ ಟೆಲಿವಿಷನ್ ಚರಿತ್ರೆಯಲ್ಲಿ ಮೊದಲ ಬಾರಿಗೆ ಸಾಕ್ಷ್ಯಚಿತ್ರ ಮತ್ತು ಮನರಂಜನೆ ಕಾರ್ಯಕ್ರಮಗಳು ಪ್ರಸರಣಕ್ಕೆ ಮುನ್ನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷ್ಯಚಿತ್ರ ಎದುರಿಸಿದ ಪರಿಸ್ಥಿತಿ ಎದುರಾಗಬಹುದು. ಇದು ಮೋದಿ 3.0ರ ಡಿಜಿಟಲ್ ನಿರಂಕುಶಶಾಹಿ ಯೋಜನೆಯಾಗಿದ್ದು, ಸಾರ್ವಜನಿಕ-ಖಾಸಗಿ ಚಕ್ರವ್ಯೆಹದ ಮೂಲಕ ಸೆನ್ಸಾರ್‌ಶಿಪ್ ಹೇರುವ ಪ್ರಯತ್ನವಾಗಿದೆ.

Update: 2024-08-16 05:36 GMT
Editor : Thouheed | Byline : ಋತ

‘ಪ್ರಸಾರ ಸೇವೆಗಳು(ನಿಯಂತ್ರಣ)ಮಸೂದೆ’ಯ ಪರಿಷ್ಕೃತ ಕರಡನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ವ್ಯಾಪಕ ಸಮಾಲೋಚನೆಗಳ ನಂತರವಷ್ಟೇ ಹೊಸ ಕರಡು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ಈ ಕಾಫ್ಕಾಯಿಸ್ಕ್ ಮಸೂದೆಗೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಫ್ರಾಂಜ್ ಕಾಫ್ಕಾ ತಮ್ಮ ಪುಸ್ತಕ ‘ದ ಮೆಟಮಾರ್ಫಸಿಸ್’ (1915)ನಲ್ಲಿ ಬದುಕಿನ ಏಕಾಂಗಿತನ, ಅಸ್ಮಿತೆ ಮತ್ತು ಅಸಂಗತತೆ ಕುರಿತ ಮಾನಸಿಕ ಮತ್ತು ಅಸ್ತಿತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ. ರಾತ್ರಿ ಮಲಗಿದ ಗ್ರೆಗರ್ ಸಾಮ್ಕಾ ಎಂಬ ವ್ಯಕ್ತಿ, ಬೆಳಗ್ಗೆ ಎದ್ದಾಗ ದೊಡ್ಡ ಕೀಟವಾಗಿ ಬದಲಾಗಿರುತ್ತಾನೆ. ಇಂಥ ಸ್ಥಿತಿಯನ್ನು ‘ಕಾಫ್ಕಾಯಿಸ್ಕ್’ ಎನ್ನಲಾಗುತ್ತದೆ. ನ್ಯಾಯಮೂರ್ತಿ ಜಗದೀಶ್ ಭಗವತಿ ಅವರು ಆತ್ಯಂತಿಕ ಅಧಿಕಾರಶಾಹಿ ಹಾಗೂ ರಾಜಕೀಕರಣಗೊಂಡ ವ್ಯವಸ್ಥೆಯನ್ನು ‘ನಿಯಂತ್ರಣಗಳ ಕಾಫ್ಕಾಯಿಸ್ಕ್ ತೊಳಸುಬಳಸು’ ಎಂದು ಕರೆಯುತ್ತಾರೆ. ಇಂಥದ್ದೊಂದು ತೊಳಸುಬಳಸಿನ ಸೃಷ್ಟಿಗೆ ಕೇಂದ್ರ ಮುಂದಾಗಿದೆ. ಇಂಥ ಆತ್ಮಹತ್ಯಾತ್ಮಕ ಹಾದಿಯನ್ನು ಏಕೆ ಆಯ್ದುಕೊಂಡಿತು? ಬಿಜೆಪಿಯಲ್ಲಿನ ಚಿಂತನಶೀಲ ನಾಯಕರ ಕೊರತೆಯು ಆಡಳಿತಾತ್ಮಕ ಲೋಪಗಳಿಗೆ ಕಾರಣವಾಗುತ್ತಿದೆ. ಈ ಕೊರತೆಯನ್ನು ತುಂಬಲು ಇಂಥ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲು ಮುಂದಾಗಲಾಗುತ್ತಿದೆ.

2024ರ ಚುನಾವಣೆಯಲ್ಲಿ 64.03 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ ಮತ್ತು ದೇಶದಲ್ಲಿ 92.4 ಕೋಟಿ ಬ್ರಾಂಡ್‌ಬ್ಯಾಂಡ್ ಸಂಪರ್ಕಗಳಿವೆ. ಸಿಎಸ್‌ಡಿಎಸ್-ಲೋಕನೀತಿ ನಡೆಸಿದ ಸಮೀಕ್ಷೆ ಪ್ರಕಾರ, ಮೆಟ್ರೊಗಳಾಚೆಯೂ ಡಿಜಿಟಲ್ ಮಾಧ್ಯಮದ ಪ್ರಾಮುಖ್ಯತೆ ಹೆಚ್ಚಳಗೊಂಡಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ.29ರಷ್ಟು ಮಂದಿ ತಾವು ಸುದ್ದಿಗಾಗಿ ಪ್ರತಿದಿನ ಸಾಮಾಜಿಕ ಮಾಧ್ಯಮಗಳನ್ನು ಆಧರಿಸಿದ್ದೇವೆ ಎಂದಿದ್ದರೆ, ಶೇ.18ರಷ್ಟು ಮಂದಿ ಆಗಾಗ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತೇವೆ ಎಂದು ಹೇಳಿದ್ದರು. ಇದು ಟಿವಿ(ಶೇ.42)ಗಿಂತ ಕಡಿಮೆ; ಆದರೆ, ವೃತ್ತಪತ್ರಿಕೆ ಶೇ.16.7, ರೇಡಿಯೊ ಶೇ.6.9)ಗಿಂತ ಅಧಿಕ. ವಾಟ್ಸ್‌ಆ್ಯಪ್ ಶೇ.31.5, ಯೂಟ್ಯೂಬ್ ಶೇ.32.3, ಫೇಸ್‌ಬುಕ್ ಶೇ.24.7, ಇನ್‌ಸ್ಟಾಗ್ರಾಂ ಶೇ.18.4 ಮತ್ತು ಟ್ವಿಟರ್ ಶೇ.6.5ರಷ್ಟು ಮಂದಿ ದಿನದಲ್ಲಿ ಹಲವು ಬಾರಿ ಬಳಸಿದ್ದೇವೆ ಎಂದು ಹೇಳಿದ್ದರು. ಸಾಮಾಜಿಕ ಮಾಧ್ಯಮದ ಪ್ರಭಾವ ಇದರಿಂದ ಸ್ಪಷ್ಟವಾಗಲಿದೆ.

ಚುನಾವಣೆ ಬಳಿಕ ರಾಷ್ಟ್ರಪತಿ ಅವರು ಪ್ರಧಾನಿ ಹಾಗೂ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸುವುದಕ್ಕೆ ಮುನ್ನವೇ ಮಾಧ್ಯಮಗಳು ‘ಮೋದಿ 3.0’ ಸರಕಾರ ಎಂದು ಕರೆಯಲಾರಂಭಿಸಿದ್ದವು; ಸಾಫ್ಟ್ ವೇರ್‌ನ ನೂತನ ಆವೃತ್ತಿ ಎಂಬಂತೆ. ಒಂದು ಹೆಸರು, ಒಂದು ಬಿಂಬ ಹಾಗೂ ಒಂದು ಧ್ವನಿಯಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿದ್ದ ಕೇಂದ್ರ ಸಂಪುಟದಲ್ಲಿ ಹೆಚ್ಚೇನೂ ಬದಲಾವಣೆ ಇರಲಿಲ್ಲ. ಅಶ್ವಿನಿ ವೈಷ್ಣವ್ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(ಎಂಇಐಟಿವೈ) ಜೊತೆಗೆ ಮಾಹಿತಿ ಮತ್ತು ಪ್ರಚಾರ(ಎಂಐಬಿ) ಖಾತೆಯನ್ನೂ ನೀಡಲಾಯಿತು. ಈ ಎರಡೂ ಇಲಾಖೆಗಳ ಸಂಯೋಜನೆ ಮೂಲಕ ಡಿಜಿಟಲ್ ಮಾಹಿತಿ/ವಸ್ತು/ವಿಷಯವನ್ನು ನಿಯಂತ್ರಿಸುವ ಉದ್ದೇಶ ಇದ್ದಿತ್ತು. 2021ರ ಐಟಿ ಕಾಯ್ದೆ ಇದಕ್ಕೆ ಅಡಿಪಾಯ ಹಾಕಿಕೊಟ್ಟಿತ್ತು.

ಫೆ.25, 2021ರಂದು ಜಾರಿಗೊಂಡ ಐಟಿ ಕಾಯ್ದೆ 2021 ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(ಎಂಇಐಟಿವೈ) ಹಾಗೂ ಮಾಹಿತಿ ಮತ್ತು ಪ್ರಚಾರ(ಎಂಐಬಿ) ಇಲಾಖೆಗಳ ಸಹಭಾಗಿತ್ವಕ್ಕೆ ಶಾಸನಾತ್ಮಕ ಅಡಿಪಾಯ ಹಾಕಿಕೊಟ್ಟಿತ್ತು. ಈ ಕಾಯ್ದೆ ಈ ಇಲಾಖೆಗಳ ವ್ಯಾಪ್ತಿಯನ್ನು ವಿಸ್ತರಿಸಿತು. ಸಿಗ್ನಲ್ ಸೇರಿದಂತೆ ಸಂದೇಶ ರವಾನೆ ಸೇವೆ(ಎಸ್‌ಎಂಎಸ್)ಗಳ ಅಂತ್ಯದವರೆಗಿನ ಎನ್‌ಕ್ರಿಪ್ಷನ್‌ನ್ನು ಉಲ್ಲಂಘಿಸುವ ಜಾಡು ಹಿಡಿಯುವಿಕೆಗೆ ಅವಕಾಶ ಮಾಡಿಕೊಟ್ಟಿತು. ಜೊತೆಗೆ, ಎಂಐಬಿ ಇಲಾಖೆಗೆ ಡಿಜಿಟಲ್ ಸುದ್ದಿ ಮಾಧ್ಯಮ ಹಾಗೂ ಆನ್‌ಲೈನ್ ಸ್ಟ್ರೀಮಿಂಗ್ ಆ್ಯಪ್‌ಗಳ ನೋಂದಣಿ ಹಾಗೂ ತಡೆಯ ಹೊಸ ಅಧಿಕಾರ ನೀಡಿತು.

ಐಟಿ ಕಾಯ್ದೆ 2021ರಿಂದ ಕೂಡ ಡಿಜಿಟಲ್ ಸುದ್ದಿ-ವಿಷಯದ ಸಂಪೂರ್ಣ ನಿಯಂತ್ರಣ ಸಾಧ್ಯವಾಗಲಿಲ್ಲ. ಹೀಗಾಗಿ, ಸರಕಾರ ಜನವರಿ 23, 2023ರಲ್ಲಿ ‘ಕುಂದುಕೊರತೆ ಮೇಲ್ಮನವಿ ಸಮಿತಿ’(ಜಿಇಸಿ)ಯನ್ನು ಸೃಷ್ಟಿಸಿತು. ಎಂಐಬಿ, ಎಂಇಐಟಿವೈ ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳ ನೇತೃತ್ವದ ಈ ಸಮಿತಿಯು 1,216 ಅರ್ಜಿಗಳನ್ನು ಸ್ವೀಕರಿಸಿ, 1,089 ಆನ್‌ಲೈನ್ ವೇದಿಕೆಗಳ ನಿಲುಗಡೆ ಅಥವಾ ವಸ್ತು-ವಿಷಯ ತೆಗೆದುಹಾಕಬೇಕೆಂದು ಆದೇಶ ನೀಡಿತು. ಎಪ್ರಿಲ್ 6, 2023ರಲ್ಲಿ ಐಟಿ ಕಾಯ್ದೆ 2021ಕ್ಕೆ ತಿದ್ದುಪಡಿ ತಂದು, ‘ನಕಲಿ, ಸುಳ್ಳು ಹಾಗೂ ಹಾದಿ ತಪ್ಪಿಸುವ’ ಸುದ್ದಿಗಳನ್ನು ತೆಗೆದುಹಾಕುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಇದನ್ನು ‘ವಾಸ್ತವಾಂಶ ಪರಿಶೀಲಿಸುವ ತಿದ್ದುಪಡಿ’ ಎಂದು ಹೇಳಿಕೊಂಡಿತು. ಆದರೆ, ಮಾರ್ಚ್ 21,20224ರಲ್ಲಿ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿತು.

ಐಟಿ ನಿಯಮಗಳು ಡಿಜಿಟಲ್ ಮಾಧ್ಯಮದ ನಿಯಂತ್ರಣದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನವೆಂಬರ್ 3, 2023ರಲ್ಲಿ ಪ್ರಸಾರ ಸೇವೆಗಳು(ನಿಯಂತ್ರಣ)ಮಸೂದೆ 2023ರ ಮೊದಲ ಕರಡನ್ನು ಪರಿಚಯಿಸಲಾಯಿತು. ಇದು ಕಾನೂನಾದರೆ, ಯೂಟ್ಯೂಬ್ ಇಲ್ಲವೇ ಇನ್‌ಸ್ಟಾಗ್ರಾಂ ಸುದ್ದಿಕರ್ತರು ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಇಲಾಖೆಯ ಆಣತಿಯಂತೆ ನಡೆಯಬೇಕಾಗುತ್ತದೆ. ಸಾರ್ವಜನಿಕ ಚುನಾವಣೆ ವೇಳೆಯಲ್ಲಿ ಆನ್‌ಲೈನ್ ಸುದ್ದಿಕರ್ತರು ಬಿಜೆಪಿಯ ಪ್ರಚಾರ ಹಾಗೂ 10 ವರ್ಷಗಳ ಆಡಳಿತ ಕುರಿತು ವಿಚಾರಣೆ ಆರಂಭಿಸಿದರು. ಡಿಜಿಟಲ್ ವೇದಿಕೆಗಳ ಚಟುವಟಿಕೆ ಹಾಗೂ ತಲುಪುವಿಕೆ ತೀವ್ರ ಹೆಚ್ಚಳಗೊಂಡಿತು. ಜೂನ್ 4, 2024ರಂದು ಪ್ರಧಾನಿ ತಮ್ಮ ಭಾಷಣದಲ್ಲಿ ‘‘ದೇಶವಾಸಿಗಳೇ, ಇನ್‌ಫ್ಲುಯನ್ಸರ್‌ಗಳೇ ಹಾಗೂ ಅಭಿಪ್ರಾಯ ರೂಪಿಸುವವರೇ’’ ಎಂದರು. ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿದ ಎಂಐಬಿ, ಜುಲೈ 9ರಂದು ಭಾಗೀದಾರರ ಸಭೆ ಕರೆಯಿತು. ಜುಲೈ 26ರಂದು ಪ್ರಸಾರ ಸೇವೆಗಳು(ನಿಯಂತ್ರಣ) ಮಸೂದೆ 2024ರ ಹೊಸ ಕರಡನ್ನು ಆಯ್ದ ಭಾಗಿದಾರರಿಗೆ ‘ದಾಖಲೆ ಬಗ್ಗೆ ಬಹಿರಂಗ ಚರ್ಚೆ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಂಡು ನೀಡಿತು. ಆದರೆ, ಕರಡು ಸೋರಿಕೆಯಾಗಿ ಪ್ರತಿಪಕ್ಷಗಳು-ಸ್ವತಂತ್ರ ಮಾಧ್ಯಮಗಳು ಧ್ವನಿಯೆತ್ತಿದವು. ಇದರಿಂದ ಆಗಸ್ಟ್ 12ರಂದು ಕರಡು ವಾಪಸಾಗಿದೆ. ಇಲ್ಲಿಗೆ ಸಮಸ್ಯೆ ಮುಗಿಯುವುದಿಲ್ಲ. ಆದರೆ, ಬಿಜೆಪಿ ಸಂಖ್ಯಾಬಲ ಕುಸಿದಿರುವುದರಿಂದ, ಎನ್‌ಡಿಎ 2.0ಯಲ್ಲಿ ಆದಂತೆ ಪ್ರತಿಪಕ್ಷಗಳನ್ನು ಬದಿಗೆ ಸರಿಸಿ, ಕಾನೂನುಗಳನ್ನು ತರಲು ಸಾಧ್ಯವಾಗುವುದಿಲ್ಲ ಎಂಬ ಆಶಾಭಾವ ಇದೆ.

ಆತಂಕದ ಫಲ:

ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಬಿಜೆಪಿಯ ಆತಂಕದ ಫಲ ಈ ಮಸೂದೆ. ರವೀಶ್ ಕುಮಾರ್, ಧ್ರುವ್ ರಾಠಿ, ಬರ್ಖಾದತ್, ಫಾಯೆ ಡಿಸೋಜಾ, ಧನ್ಯಾ ರಾಜೇಂದ್ರನ್ ಮತ್ತಿತರರು ಅಸಾಂಪ್ರದಾಯಿಕ ಮಾಧ್ಯಮದ ಮೂಲಕ ಸುದ್ದಿಗಳನ್ನು ಜಾಲಾಡಿ, ಸುಳ್ಳುಗಳಿಂದ ಸತ್ಯವನ್ನು ಪ್ರತ್ಯೇಕಿಸಿ, ಬಹಿರಂಗಗೊಳಿಸಿದರು. ಯುವ ಪೀಳಿಗೆ ಸುದ್ದಿಗಾಗಿ ಸಾಮಾಜಿಕ ಮಾಧ್ಯಮವನ್ನು ಆಧರಿಸಿದೆ. ಸಾಮಾಜಿಕ ಮಾಧ್ಯಮವನ್ನು ಗುರಿಯಾಗಿಸಿಕೊಳ್ಳುವ ಮೂಲಕ ಅದರ ಪ್ರಭಾವವನ್ನು ಹತ್ತಿಕ್ಕಲು ಸರಕಾರ ಮುಂದಾಯಿತು. ಕೇಬಲ್ ಟಿವಿ ನಿಯಮಗಳ ಬದಲಿಗೆ ಹೊಸ ಮಸೂದೆಯನ್ನು ಮುಂದೊತ್ತಿತು.

ಡಿಜಿಟಲ್ ಪರವಾನಿಗೆ ರಾಜ್ಯದ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಈ ಕಾಯ್ದೆಯಲ್ಲಿ ಏನಿತ್ತು? ಆನ್‌ಲೈನ್ ವೇದಿಕೆಗಳಿಗೆ ವಸ್ತು-ವಿಷಯ ಪೂರೈಸುವ ವೀಡಿಯೊ ತಯಾರಕರು, ಸಾಮಾಜಿಕ ಜಾಲತಾಣಗಳ ಖಾತೆದಾರರು ಹಾಗೂ ಆನ್‌ಲೈನ್ ಸ್ಟ್ರೀಮಿಂಗ್ ಸೇವೆ ಒದಗಿಸುವ ವೇದಿಕೆಗಳು ಈ ಮಸೂದೆಯಡಿ ಬರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ವಿಷಯ ಕುರಿತ ಕಾರ್ಯಕ್ರಮಗಳನ್ನು ಅಪ್ಲೋಡ್ ಮಾಡುವ ಎಲ್ಲರನ್ನೂ(ಅದರಿಂದ ಅವರು ಆರ್ಥಿಕ ಲಾಭ ಗಳಿಸುತ್ತಿದ್ದರೆ) ಡಿಜಿಟಲ್ ಸುದ್ದಿ ಪ್ರಸಾರಕರು ಎನ್ನಲಾಗುತ್ತದೆ. ಯೂಟ್ಯೂಬ್, ಇನ್‌ಸ್ಟಾ ಗ್ರಾಂ ಇನ್‌ಫ್ಲುಯನ್ಸರ್‌ಗಳು ಮತ್ತು ಸುದ್ದಿ ಮಾಧ್ಯಮಗಳು ನಿಯಂತ್ರಣ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ತಮ್ಮದೇ ವೆಚ್ಚದಲ್ಲಿ ಕಣ್ಗಾವಲು ಸಮಿತಿಯೊಂದನ್ನು ನೇಮಿಸಿಕೊಂಡು, ಪ್ರಸಾರಗೊಳ್ಳಲಿರುವ ವೀಡಿಯೊ/ಡಿಜಿಟಲ್ ವಸ್ತು-ವಿಷಯವನ್ನು ಪರಿಶೀಲಿಸಬೇಕು. ಸಾಮಾಜಿಕ ಜಾಲತಾಣ ಕಂಪೆನಿಗಳು ಇಲಾಖೆಗೆ ತಮ್ಮ ಬಳಕೆದಾರರ ಬಗ್ಗೆ ಮಾಹಿತಿ ಒದಗಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಹೊಣೆಗಾರಿಕೆ ಹೊರಬೇಕಾಗುತ್ತದೆ. ಸರಕಾರ ಕೇಳಿದಾಗಲೆಲ್ಲ ಬಳಕೆದಾರರ ಮಾಹಿತಿ ನೀಡಬೇಕಾಗುತ್ತದೆ; ಇಲ್ಲವಾದಲ್ಲಿ ಭಾರೀ ದಂಡ ನೀಡಬೇಕಾಗುತ್ತದೆ. ‘ನಿರ್ದಿಷ್ಟ ಪರಿಹರಿಸಬಹುದಾದ ರೀತಿಯಲ್ಲಿ’ ಎಂಬ ಪದ ಮಸೂದೆಯಲ್ಲಿ 42 ಕಡೆ ಬಳಕೆಯಾಗಿದೆ. ಇದರಿಂದ ಅಂಕುಶ ಸರಕಾರದ ಬಳಿ ಇರುತ್ತದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಅಧಿಕಾರ ಶಕ್ತಿ ಕೇಂದ್ರಗಳನ್ನು ಪ್ರಶ್ನಿಸುವ ಪತ್ರಕರ್ತರು ಹಾಗೂ ವಸ್ತು-ವಿಷಯ ಸೃಷ್ಟಿಸುವವರನ್ನು ನಿರ್ಬಂಧಿಸುವ ಪ್ರಯತ್ನ ಇದಾಗಿತ್ತು. ಯೂಟ್ಯೂಬ್, ಪಾಡ್‌ಕಾಸ್ಟ್‌ಗಳು/ಇನ್‌ಸ್ಟಾಗ್ರಾಂ, ವ್ಲಾಗರ್‌ಗಳು, ಸುದ್ದಿ ಮತ್ತು ಪ್ರಚಲಿತ ವಿಷಯಗಳನ್ನು ಹಂಚಿಕೊಳ್ಳುವವರನ್ನು ‘ಡಿಜಿಟಲ್ ಸುದ್ದಿ ಪ್ರಸಾರಕರು’ ಎಂದು ವರ್ಗೀಕರಿಸಲಾಗಿದೆ. ಜಾಹೀರಾತು, ಚಂದಾ ಇಲ್ಲವೇ ಅಂಗಸಂಸ್ಥೆ ಮೂಲಕ ಹಣ ಮಾಡುವ ಖಾತೆಗಳಿಗೂ ಇದು ಅನ್ವಯಿಸುತ್ತದೆ. ಒಟಿಟಿ ಸುದ್ದಿಯೇತರ ಇನ್‌ಫ್ಲುಯನ್ಸರ್(ನಿರ್ದಿಷ್ಟ ಸಂಖ್ಯೆಯ ಹಿಂಬಾಲಕರು ಇರುವಂಥವರು)ಗಳನ್ನು ಕೂಡ ಪ್ರಸಾರಕರು ಎಂದು ಪರಿಗಣಿಸಲಾಗುತ್ತದೆ. ಇವರು ತಮ್ಮ ವಸ್ತು-ವಿಷಯವನ್ನು ಪರಿಶೀಲಿಸಲು-ಮೌಲ್ಯಮಾಪನ ಮಾಡಲು ನೇಮಿಸಿ ಕೊಳ್ಳುವ ಸಮಿತಿಗಳಲ್ಲಿ ಯಾರು ಇದ್ದಾರೆ, ಅವರ ಅರ್ಹತೆಗಳೇನು ಎಂಬ ಮಾಹಿತಿಯನ್ನು ಸರಕಾರಕ್ಕೆ ನೀಡಬೇಕು. ಇದನ್ನು ಪಾಲಿಸದ ಒಟಿಟಿ ಮತ್ತು ಡಿಜಿಟಲ್ ಸುದ್ದಿ ಪ್ರಸಾರಕರ ಕ್ರಿಮಿನಲ್ ಹೊಣೆಗಾರಿಕೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊರಬೇಕಾಗುತ್ತದೆ.

ಸಾಮಾಜಿಕ ಮಾಧ್ಯಮಗಳ ಬೇಕಾಬಿಟ್ಟಿ ವರ್ತನೆಯ ನಿಯಂತ್ರಣ ಅಗತ್ಯ ಎನ್ನುವುದನ್ನು ಒಪ್ಪಿಕೊಳ್ಳೋಣ. ಉದಾಹರಣೆಗೆ, ಮಕ್ಕಳ ಇನ್‌ಫ್ಲುಯನ್ಸರ್‌ಗಳು ಪಾರ್ಥೇನಿಯಂ ತರ ಹಬ್ಬಿಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಿಗೆ ವಿಷಯ-ವಸ್ತು ಸೃಷ್ಟಿಸುವವರಲ್ಲಿ ಹೆಚ್ಚಿನವರು ಸ್ವಂತ ಇಲ್ಲವೇ ಸಣ್ಣ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ತಮ್ಮದೇ ಆದ ವಸ್ತು-ವಿಷಯ ಮೌಲ್ಯಮಾಪನ ಸಮಿತಿಯನ್ನು ರಚಿಸಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಇದರ ಬದಲು ಸಾಮಾಜಿಕ ಮಾಧ್ಯಮ ವೇದಿಕೆ/ಏಜೆನ್ಸಿಗಳು ಇವರೊಟ್ಟಿಗೆ ಸೇರಿಕೊಂಡು, ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ಉತ್ತಮ ಮಾರ್ಗವಾಗಲಿದೆ. ‘ಎಕ್ಸ್’ ಇತ್ತೀಚೆಗೆ ಸುಳ್ಳು ಸುದ್ದಿಯನ್ನು ಪರಿಣಾಮಕಾರಿಯಾಗಿ ತಡೆಯುತ್ತಿದೆ. ಇನ್‌ಸ್ಟಾಗ್ರಾಂ ದಿನಪತ್ರಿಕೆ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಹರೆಯದವರನ್ನು ಆನ್‌ಲೈನಿನಲ್ಲಿ ಸುರಕ್ಷಿತವಾಗಿಡಲು ನೆರವಾಗುತ್ತಿದೆ. ಇಂಥ ವೇದಿಕೆಗಳು ತಮ್ಮ ವಾಸ್ತವಾಂಶ ಪರಿಶೀಲನೆ ತಂಡ-ಅಲ್ಗರಿದಂಗಳನ್ನು ಬಲಪಡಿಸುವಂತೆ ಹೇಳಬಹುದಿತ್ತು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್ಸ್.. ಇವೆಲ್ಲವೂ ಭಾರೀ ಆರ್ಥಿಕ ಸಾಮರ್ಥ್ಯ ಹೊಂದಿವೆ.

ನಿಯಂತ್ರಣಕ್ಕೆ ಸುಲಭ ಮಾರ್ಗ ಹುಡುಕಿದ ಸರಕಾರ:

ಮಸೂದೆ ಡಿಜಿಟಲ್ ಮಾಧ್ಯಮದ ಮೇಲಿನ ಕೇಂದ್ರ ಸರಕಾರದ ಹಿಡಿತವನ್ನು ಬಿಗಿಗೊಳಿಸಲು ರೂಪುಗೊಂಡಿತ್ತು ಎನ್ನುವುದು ಸ್ಪಷ್ಟ. ಅದು ಮಾಧ್ಯಮ-ಸುದ್ದಿಕರ್ತರ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಗೆ ಧಕ್ಕೆ ತರುತ್ತಿತ್ತು. ಮಸೂದೆಯು,

* ವೈಯಕ್ತಿಕ ವ್ಯಾಖ್ಯಾನಕಾರರನ್ನು ‘ಡಿಜಿಟಲ್ ಪ್ರಸಾರಕರು’ ಮತ್ತು ವಸ್ತು-ವಿಷಯ ಸೃಷ್ಟಿಸುವವರನ್ನು ‘ಒಟಿಟಿ ಪ್ರಸಾರಕರು’ ಎಂದು ವರ್ಗೀಕರಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯು ಬಳಕೆದಾರರು ಇಲ್ಲವೇ ಚಂದಾದಾರರ ಪ್ರವೇಶ ನಿಯಮಗಳನ್ನು ನಿರ್ಧರಿಸುತ್ತದೆ ಹಾಗೂ ಬದಲಿಸುತ್ತದೆ. ಈ ಶರತ್ತು ಪೂರೈಸಿದ ಬಳಿಕ, ಅವರು ನೋಂದಣಿ ಎನ್ನುವ ಇಕ್ಕಳಕ್ಕೆ ಸಿಲುಕಬೇಕಾಗುತ್ತದೆ.

* ಆನ್‌ಲೈನ್ ವೇದಿಕೆಗಳಿಗೆ ಹೆಚ್ಚುವರಿ ನಿಯಮಪಾಲನೆಯನ್ನು ವಿಧಿಸುತ್ತದೆ. ಐಟಿ ನಿಯಮ 2021 ವಿಧಿಸುವ ನಿಯಮಗಳಲ್ಲದೆ, ನೋಂದಣಿ/ಸೆನ್ಸಾರ್‌ಶಿಪ್ ಹೇರಿಕೆ ಇರಲಿದೆ. ಸುದ್ದಿ ಚಾನೆಲ್‌ಗಳು ಮಾತ್ರವಲ್ಲದೆ ವೈಯಕ್ತಿಕ ಸುದ್ದಿಕರ್ತರು ಇದನ್ನು ಪಾಲಿಸಬೇಕಾಗುತ್ತದೆ. ಯುಟ್ಯೂಬ್‌ನಂಥ ವೇದಿಕೆಗಳು ಕೂಡ ವಿಶೇಷ ಅನುಸರಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಖಾಸಗಿಯವರ ಮೇಲೆ ಪ್ರತಿನಿತ್ಯ ಹೇರಿಕೆ ಮತ್ತು ಸಂಪೂರ್ಣ ನಿಯಂತ್ರಣ ಇರಲಿದೆ.

* ಸೆನ್ಸಾರ್‌ಶಿಪ್ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ನೋಂದಣಿಗಳು ಮತ್ತು ಖಾಸಗಿ ಸ್ವಯಂನಿಯಂತ್ರಣದ ಹಲವು ಅನುಸರಣೆಗಳನ್ನು ಆಧರಿಸಿರುತ್ತದೆ. ಒಂದುವೇಳೆ ಸುದ್ದಿಕರ್ತರು ವಿಫಲವಾದರೆ ಇಲ್ಲವೇ ಇಲಾಖೆ ಹುಚ್ಚಾಟಿಕೆಯಿಂದ ಸೆನ್ಸಾರ್‌ಶಿಪ್ ಇಲ್ಲವೇ ದಂಡ ವಿಧಿಸಬಹುದು. ಇಷ್ಟು ಮಾತ್ರವಲ್ಲದೆ, ಮಸೂದೆಯ ಹಲವು ನಿಯಮಗಳು ಅಸ್ಪಷ್ಟವಾಗಿದ್ದು, ಬೇಕಾಬಿಟ್ಟಿ ಅನುಷ್ಠಾನಕ್ಕೆ ದಾರಿ ಮಾಡಿಕೊಡಬಹುದು.

ಇದೊಂದು ‘ಕಾಫ್ಕಾಯಿಸ್ಕ್’ ಕಾಯ್ದೆ. ಸರಕಾರ ವಸ್ತು-ವಿಷಯದ ಸೆನ್ಸಾರ್ ಮಾಡುವ ಮುನ್ನ ನೋಟಿಸ್ ನೀಡಿಕೆ ಮತ್ತು ಇನ್ನಿತರ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಈ ಮಸೂದೆಯಡಿ ವಸ್ತು-ವಿಷಯ ಪ್ರಕಟಣೆಗೆ ಯೋಗ್ಯವೇ ಎಂದು ಸುದ್ದಿಕರ್ತನೇ ಪರಿಶೀಲಿಸಬೇಕಾಗುತ್ತದೆ. ಇದರಿಂದ ಸರಕಾರ ಪ್ರತಿಯೊಂದು ಆನ್‌ಲೈನ್ ವಸ್ತು-ವಿಷಯ-ವೀಡಿಯೊದ ವೀಕ್ಷಣೆ-ಸೆನ್ಸಾರ್ ಮಾಡಬೇಕಾಗಿ ಬರುವುದಿಲ್ಲ. ಆ ಜವಾಬ್ದಾರಿ ಸುದ್ದಿಕರ್ತನ ಮೇಲೆ ಬೀಳುತ್ತದೆ ಮತ್ತು ಸರಕಾರದ ಮೇಲಿನ ಆಡಳಿತಾತ್ಮಕ ಮತ್ತು ಆರ್ಥಿಕ ಹೊರೆ ಕಡಿಮೆಯಾಗಲಿದೆ. ಈ ಮಸೂದೆಯಿಂದ ಟೆಲಿವಿಷನ್ ಚರಿತ್ರೆಯಲ್ಲಿ ಮೊದಲ ಬಾರಿಗೆ ಸಾಕ್ಷ್ಯಚಿತ್ರ ಮತ್ತು ಮನರಂಜನೆ ಕಾರ್ಯಕ್ರಮಗಳು ಪ್ರಸರಣಕ್ಕೆ ಮುನ್ನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷ್ಯಚಿತ್ರ ಎದುರಿಸಿದ ಪರಿಸ್ಥಿತಿ ಎದುರಾಗಬಹುದು. ಇದು ಮೋದಿ 3.0ರ ಡಿಜಿಟಲ್ ನಿರಂಕುಶಶಾಹಿ ಯೋಜನೆಯಾಗಿದ್ದು, ಸಾರ್ವಜನಿಕ-ಖಾಸಗಿ ಚಕ್ರವ್ಯೆಹದ ಮೂಲಕ ಸೆನ್ಸಾರ್‌ಶಿಪ್ ಹೇರುವ ಪ್ರಯತ್ನವಾಗಿದೆ.

ಪತ್ರಿಕಾ ಸ್ವಾತಂತ್ರ್ಯದ ಕಾಳಜಿ ಇಲ್ಲ:

‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಪ್ರಕಟಿಸುವ ಪ್ರೆಸ್ ಫ್ರೀಡಂ ಇಂಡೆಕ್ಸ್ ಪ್ರಕಾರ, ಭಾರತದ ಸ್ಥಾನ 180 ದೇಶಗಳಲ್ಲಿ 161. ಶ್ರೀಲಂಕಾ 135 ಹಾಗೂ ಪಾಕಿಸ್ತಾನ 150. ಆದರೆ, ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಪತ್ರಕರ್ತರಿಗೇ ಬೇಕಿಲ್ಲದೆ ಇರುವಾಗ, ಸರಕಾರ ಏಕೆ ತಲೆ ಕೆಡಿಸಿಕೊಳ್ಳುತ್ತದೆ?

ಈ ಕಾಯ್ದೆಯು ಆರೋಪಿಗಳನ್ನು ವಾರಂಟ್ ಇಲ್ಲದೇ ಬಂಧಿಸಲು ಅವಕಾಶ ನೀಡುವ ಬಾಂಗ್ಲಾದೇಶದ ಡಿಜಿಟಲ್ ಸೆಕ್ಯುರಿಟಿ ಕಾಯ್ದೆಗೆ ಸರಿಸಮಾನವಾಗಿದೆ. ಇದನ್ನು ಜಾರಿಗೊಳಿಸಿದ ಶೇಕ್ ಹಸೀನಾ, ಈಗ ದೇಶಭ್ರಷ್ಟರಾಗಿದ್ದಾರೆ ಮತ್ತು ಅವರ ಮೇಲೆ ಕೊಲೆ ಪ್ರಕರಣ ದಾಖಲಾಗಿರುವುದರಿಂದ, ದೇಶಕ್ಕೆ ವಾಪಸಾದರೆ ವಿಚಾರಣೆ ಎದುರಿಸಬೇಕಾಗುತ್ತದೆ. ಒಂದುವೇಳೆ ಪ್ರಸಾರ ಸೇವೆಗಳು(ನಿಯಂತ್ರಣ)ಮಸೂದೆಯು ಸಂಸತ್ತಿನಲ್ಲಿ ಅಂಗೀಕೃತವಾದರೂ, ಅದು ನ್ಯಾಯಾಲಯದ ನಿಕಷದಿಂದ ತೇರ್ಗಡೆಯಾಗುವ ಸಾಧ್ಯತೆ ಕಡಿಮೆ. ಮಸೂದೆಯು ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಸಕಾರಾತ್ಮಕ ತೀರ್ಪು ಬರುವ ಸಾಧ್ಯತೆ ಕಡಿಮೆ. ಏಕೆಂದರೆ, ಕಮಲೇಶ್ ವಾಸ್ವಾನಿ v/s ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೋರ್ನೋಗ್ರಫಿಯನ್ನು ನಿಷೇಧಿಸಲು ನಿರಾಕರಿಸಿತು. ‘ವ್ಯಕ್ತಿಯ ಮಲಗುವ ಕೋಣೆಯಲ್ಲಿ ಏನು ನಡೆಯುತ್ತದೆ ಎಂಬುದರ ನೈತಿಕ ಪೊಲೀಸಿಂಗ್ ಕೂಡದು; ಇದರಿಂದ ಮೂಲಭೂತ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತದೆ’ ಎಂದು ಹೇಳಿತ್ತು. ಇಂಥದ್ದೇ ಇನ್ನೊಂದು ಪ್ರಕರಣವಾದ 1995ರ ಭಾರತ ಸರಕಾರ v/s ಬೆಂಗಾಳ್ ಕ್ರಿಕೆಟ್ ಅಸೋಷಿಯೇಷನ್ ಪ್ರಕರಣದಲ್ಲಿ ‘ಮುಕ್ತ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಮಾಹಿತಿಯನ್ನು ಪೂರೈಸುವ ಮತ್ತು ಸ್ವೀಕರಿಸುವ ಹಕ್ಕುಗಳನ್ನು ಒಳಗೊಂಡಿದೆ. ಪ್ರಜಾಪ್ರಭುತ್ವ ಚೈತನ್ಯಶಾಲಿ ಆಗಿರಬೇಕು ಎಂದಿದ್ದಲ್ಲಿ, ದೃಷ್ಟಿಕೋನ ಹಾಗೂ ಅಭಿಪ್ರಾಯಗಳ ಬಹುತ್ವಕ್ಕೆ ಪ್ರವೇಶ ಇರಬೇಕು’’ ಎಂದು ಹೇಳಿತ್ತು. ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಜನ ತಮಗೆ ಸಮಯ ಇರುವಾಗ, ಇಷ್ಟವಿರುವ ಕಾರ್ಯಕ್ರಮಗಳನ್ನು ಖಾಸಗಿಯಾಗಿ ವೀಕ್ಷಿಸಲು ಬಳಸುತ್ತಾರೆ. ಅದಕ್ಕೆ ನಿರ್ಬಂಧ ಹೇರುವುದು ಅಭಿವ್ಯಕ್ತಿಗೆ ಧಕ್ಕೆ ತರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News