ಬಲವಂತದ ಪ್ರೀತ್ಸೆ: ನಿಲ್ಲದ ಕ್ರೂರ ಕೊಲೆಗಳು
ಪ್ರತಿಯೊಬ್ಬ ಮಹಿಳೆಯ ಅಮಾನುಷ ಹತ್ಯೆ ಸಮಾನ ನ್ಯಾಯ, ಅನುಕಂಪಕ್ಕೆ ಅರ್ಹವಾಗಿರುತ್ತದೆ. ನೇಹಾ ಹಿರೇಮಠ್ ಹತ್ಯೆಯ ನಂತರ ಸಿದ್ದರಾಮಯ್ಯನವರು ನಡೆಸಿಕೊಂಡ ಪರಿ ಘನತೆಯಿಂದ ಕೂಡಿತ್ತು. ಅದೇ ಬಗೆಯ ಪ್ರತಿಸ್ಪಂದನೆ: ಐನಾಝ್, ಹಸೀನಾ, ಅಫ್ನಾನ್, ಅಸೀಮ್, ರುಕ್ಸಾನಾ, ಮೀನಾ, ಅಂಜಲಿ ಅಂಬಿಗೇರ ಅವರ ಭೀಕರ ಹತ್ಯೆಯ ಸಂದರ್ಭದಲ್ಲಿ ಅಗತ್ಯವಾಗಿತ್ತು. ಬಲವಂತದ ಪ್ರೀತ್ಸೆ ಮತ್ತು ಹತ್ಯೆಗಳು ನಿಲ್ಲಬೇಕೆಂದರೆ ಸರಕಾರ ಈಗ ನಡೆದ ಎಲ್ಲಾ ಪ್ರಕರಣಗಳನ್ನು ಒಂದೇ ತನಿಖಾ ತಂಡಕ್ಕೆ ಒಪ್ಪಿಸಬೇಕು. ತ್ವರಿತ ನ್ಯಾಯಾಲಯದ ವ್ಯಾಪ್ತಿಗೆ ಈ ಎಲ್ಲಾ ಪ್ರಕರಣಗಳನ್ನು ನೀಡಬೇಕು. ಮೂರು ತಿಂಗಳಲ್ಲಿ ಆ ಎಲ್ಲಾ ಹಂತಕರಿಗೆ ಕಾನೂನಿನಲ್ಲಿ ಅವಕಾಶ ಇರುವ ಗರಿಷ್ಠ ಶಿಕ್ಷೆ ನೀಡುವಂತಾಗಬೇಕು. ಆಗ ಮಾತ್ರ ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವಿಕೃತ ಮನಸ್ಸಿನ ಯುವಕರಲ್ಲಿ ಭಯ ಮೂಡಬಹುದೇನೋ?
ಕರ್ನಾಟಕ ಶಾಂತಿ ಸಹ ಬಾಳ್ವೆಗೆ ಹೆಸರಾದ ನಾಡು. ಕಳೆದ ಆರು ತಿಂಗಳಲ್ಲಿ ನಡೆದ ಮಹಿಳೆಯರ ಬರ್ಬರ ಹತ್ಯೆಗಳು ಹೆಣ್ಣು ಹೆತ್ತ ತಂದೆ-ತಾಯಿಯರ ಆತಂಕ ಮತ್ತು ದುಗುಡವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೊಂದೆಡೆ ವಿಕೃತಕಾಮಿ ಸಂಸದ ಪ್ರಜ್ವಲ್ ರೇವಣ್ಣ ಐತಿಹಾಸಿಕ ಲೈಂಗಿಕ ಹಗರಣ ಕರ್ನಾಟಕದ ಮಾನ -ಮರ್ಯಾದೆಯನ್ನು ಮಣ್ಣು ಪಾಲು ಮಾಡಿದೆ. ಇಷ್ಟಾದರೂ ರಾಜ್ಯ ಸರಕಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಮಸ್ತ ಪೊಲೀಸ್ ಇಲಾಖೆ ಪ್ರಕರಣಗಳ ಗಂಭೀರತೆಯನ್ನು ಅರ್ಥ ಮಾಡಿಕೊಂಡಂತಿಲ್ಲ. ಈ ಬರ್ಬರ ಹತ್ಯೆಗಳನ್ನು ನೋಡಿ ಜನ ಆಕ್ರೋಶಗೊಂಡಿದ್ದಾರೆ. ಜಾತಿ, ಮತ, ಧರ್ಮದ ಹಂಗು ತೊರೆದು ‘‘ಕೊಲೆಗಡುಕರನ್ನು ಗುಂಡಿಕ್ಕಿ ಕೊಲ್ಲಬೇಕು, ಗಲ್ಲಿಗೇರಿಸಬೇಕು, ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು’’ ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಕೊಲೆಗಡುಕರನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕೆಂದು ಜನ ಬೇಡಿಕೊಳ್ಳುತ್ತಿದ್ದಾರೆ. ಕಾನೂನಿನಲ್ಲಿ ಇಂತಹ ಅತಿರೇಕದ ಕ್ರಮಗಳಿಗೆ ಅವಕಾಶವಿಲ್ಲವಾದ್ದರಿಂದ ಕೋರ್ಟ್, ಕಟಕಟೆ, ವಾದ-ವಿವಾದ ಮತ್ತು ತೀರ್ಪಿಗಾಗಿ ಕಾಯಲೇ ಬೇಕಾಗಿದೆ.
ಈಗ ಚುನಾವಣೆ ಮುಗಿದಿದೆ. ಹತ್ಯೆಗೀಡಾದವರ ಜಾತಿ, ಧರ್ಮ ನೋಡಿ ರಾಜಕಾರಣಿಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ಕೊಲೆಗಡುಕ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರೆ ಅದಕ್ಕೆ ‘ಲವ್ ಜಿಹಾದ್’ ಎಂದು ಕರೆಯಲಾಗುತ್ತಿತ್ತು. ಬರ್ಬರ ಹತ್ಯೆ ಪ್ರಕರಣಗಳಲ್ಲಿ ಮುಸ್ಲಿಮ್ ವ್ಯಕ್ತಿಯ ಪಾತ್ರ ಇಲ್ಲ ಎಂದಾದರೆ ಅದಕ್ಕೆ ಹೋರಾಟದ ಸ್ವರೂಪ ದಕ್ಕುವುದಿಲ್ಲ. ಹತ್ಯೆಗೊಳಗಾದ ಮಹಿಳೆ ಮೇಲ್ಜಾತಿಗೆ ಸೇರಿದ್ದರೆ, ಚುನಾವಣಾ ಸಂದರ್ಭವಾಗಿದ್ದರೆ ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಲು ರಾಷ್ಟ್ರೀಯ ನಾಯಕರು ಆಗಮಿಸುತ್ತಾರೆ. ಮಂತ್ರಿ, ಮುಖ್ಯಮಂತ್ರಿ, ಎಲ್ಲ ಪಕ್ಷದ ಮುಖಂಡರು ದೌಡಾಯಿಸುತ್ತಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರನ್ನು ಫಯಾಝ್ ಎಂಬಾತ ಹಾಡಹಗಲೇ ಕೆಎಲ್‌ಇ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬರ್ಬರವಾಗಿ ಹತ್ಯೆಗೈದ. ಚುನಾವಣೆಯ ಸಮಯವಾಗಿದ್ದರಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಖುದ್ದು ಬಂದು ಸಾಂತ್ವನ ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇಹಾ ಹಿರೇಮಠ್ ಅವರ ಕುಟುಂಬದವರನ್ನು ಭೇಟಿ ಮಾಡಿದ್ದರು. ಬೆಳಗಾವಿಯಲ್ಲಿ ಪ್ರವಾಹ ಬಂದು ಜನ-ಜಾನುವಾರುಗಳು ಸಂಕಷ್ಟದಲ್ಲಿದ್ದಾಗ ಯಾವ ನಾಯಕರೂ ಆಗಮಿಸಿರಲಿಲ್ಲ. ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ಶೀಘ್ರ ನ್ಯಾಯ ಕೊಡಿಸುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹುಬ್ಬಳ್ಳಿಗೆ ಬಂದು ಭರವಸೆ ನೀಡಿದ್ದರು.
ದುರಂತ ನೋಡಿ ಈ ವಾರ ಅದೇ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ ಹೆಸರಿನ ಸೈಕೋ ನೇಹಾ ಹಿರೇಮಠ್ ಮಾದರಿಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ. ಹುಬ್ಬಳ್ಳಿಯ ವೀರಾಪುರ ಬಡಾವಣೆಯ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ ಅವರನ್ನು ಬಲವಂತದ ಪ್ರೀತ್ಸೆ ಕಾರಣಕ್ಕಾಗಿ ಹತ್ಯೆ ಮಾಡಿ ದ್ದಾನೆ. ಪ್ರಕರಣ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಡ ಕುಟುಂಬದ ಅಂಜಲಿ ಅಂಬಿಗೇರ ಅವರನ್ನು ‘ಪ್ರೀತಿಸುತ್ತಿದ್ದೇನೆ, ಮದುವೆಯಾಗು’ ಎಂದು ಗಿರೀಶ್ ಸಾವಂತ್ ಪೀಡಿಸುತ್ತಿದ್ದ. ಅಷ್ಟು ಮಾತ್ರವಲ್ಲ; ಕೆಲವು ದಿನಗಳ ಹಿಂದೆಯಷ್ಟೇ ‘‘ನನ್ನನ್ನು ಮದುವೆಯಾಗದಿದ್ದರೆ ನೇಹಾ ಹಿರೇಮಠ್ ತರಹ ಕೊಲ್ಲುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾನೆ. ಅಂಜಲಿ ತಂದೆ ಮೋಹನ ಬೆಂಡಿಗೇರಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಮಗಳಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದಾದ ಕೆಳದಿನಗಳ ನಂತರ ಆ ವಿಕೃತ ಗಿರೀಶ್ ಸಾವಂತ್ ಅಂಜಲಿ ಅಂಬಿಗೇರ ಅವರ ಮನೆಗೇ ನುಗ್ಗಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಿಲ್ಯಾಕ್ಸ್ ಮಾಡಲು ಎಲ್ಲೋ ಹೋಗಿದ್ದಾರೆ.
‘‘ದೇಶಭಕ್ತರು ಎಲ್ಲಿ ಮಾಯವಾದರು?’’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದರಿಂದ ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ ಬೀದಿಗಿಳಿದು ಅಂಜಲಿ ಅಂಬೀಗೇರ ಹತ್ಯೆಯನ್ನು ಖಂಡಿಸಿದ್ದಾರೆ. ಅವರೊಂದಿಗೆ ನೇಹಾ ಹಿರೇಮಠ್ ತಂದೆ ನಿರಂಜನ್ ಹಿರೇಮಠ್ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಷ್ಟು ಮಾತ್ರವಲ್ಲ ಅಂಜಲಿ ಅಂಬಿಗೇರ ತಾಯಿಗೆ ಒಂದು ಲಕ್ಷ ರೂ. ನೀಡಿದ್ದಾರೆ. ಯಥಾ ಪ್ರಕಾರ ಅಂಜಲಿ ಅಂಬಿಗೇರ ಹತ್ಯೆಯ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿದೆಯಾದರೂ ಹೆಚ್ಚಿನ ಮಹತ್ವ ಪಡೆದುಕೊಂಡಿಲ್ಲ. ಹತ್ಯೆಗೀಡಾದ ಅಂಜಲಿ ಮತ್ತು ಕೊಲೆಗಡುಕ ಗಿರೀಶ್ ಸಾವಂತ್ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು. ಆದರೆ ಜನಸಾಮಾನ್ಯರು ಮಾತ್ರ ಜಾತಿ, ಧರ್ಮದ ಎಲ್ಲೆಕಟ್ಟುಗಳನ್ನು ಮೀರಿ ಕೊಲೆಗಡುಕನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ಮನೆಯ ಮಗಳನ್ನು ಕಳೆದುಕೊಂಡಷ್ಟೇ ದುಃಖಿತರಾಗಿದ್ದಾರೆ. ಜನಸಾಮಾನ್ಯರ ವಿವೇಕ ಮತ್ತು ಸಂವೇದನಾಶೀಲತೆ ಮಾನವೀಯ ಅಂತಃಕರಣದಿಂದ ಕೂಡಿರುತ್ತದೆ.
ಆದರೆ ತಾರತಮ್ಯ ಮಾಡುತ್ತಿರುವುದು ರಾಜಕಾರಣಿಗಳು. ನೇಹಾ ಹಿರೇಮಠ್ ಹತ್ಯೆ ನಡೆದಾಗ ಬಿಜೆಪಿಯವರು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಯತ್ನಿಸಿದರು. ಯಾಕೆಂದರೆ; ಕೊಲೆಗಡುಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವನಾಗಿದ್ದ. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಹ್ಲಾದ್ ಜೋಶಿಯವರಿಗೆ ನೇಹಾ ಹಿರೇಮಠ್ ಹತ್ಯೆ, ಆ ಕುಟುಂಬದವರ ನೋವಿಗಿಂತಲೂ ಪ್ರಕರಣವನ್ನು ಮತಗಳನ್ನಾಗಿ ಪರಿವರ್ತಿಸುವುದು ಮುಖ್ಯವಾಗಿತ್ತು. ರಾಜ್ಯ ಬಿಜೆಪಿಯವರಿಗೆ ನೇಹಾ ಹಿರೇಮಠ್ ಪ್ರಕರಣ ಎದುರಿಗಿಟ್ಟುಕೊಂಡು ಲಿಂಗಾಯತ ಮತ ಬ್ಯಾಂಕ್ ಗಟ್ಟಿಗೊಳಿಸುವುದು ಮೊದಲ ಆದ್ಯತೆಯಾಗಿತ್ತು. ಕಾಂಗ್ರೆಸ್‌ನವರಿಗೆ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಮುಖ್ಯವಾಗಿತ್ತು. ವಿಕೃತ ಹಂತಕರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದು ರಾಜಕಾರಣಿಗಳ ಪ್ರಧಾನ ಕಾಳಜಿಯಾಗಿರಲಿಲ್ಲ. ಹಾಗಾಗಿಯೇ ನೇಹಾ ಹಿರೇಮಠ್ ಮನೆಯಲ್ಲಿ ಸೂತಕದ ಛಾಯೆ ಇರಲಿಲ್ಲ. ಅದೊಂದು ರಾಜಕೀಯ ತಾಣವಾಗಿತ್ತು. ಚುನಾವಣೆ ಮುಗಿಯುತ್ತಲೇ ನೇಹಾ ಹಿರೇಮಠ್ ಮನೆಯ ಪ್ರಾಮುಖ್ಯತೆ ಕಡಿಮೆ ಆಯಿತು. ಚುನಾವಣಾ ಫಲಿತಾಂಶ ಬಂದ ಮೇಲಂತೂ ನಿರಂಜನ್ ಹಿರೇಮಠ್ ಅವರನ್ನು ಯಾರೂ ಮಾತನಾಡಿಸುವುದಿಲ್ಲ. ಅಂಜಲಿ ಅಂಬಿಗೇರ ತಂದೆ ಮೋಹನ್‌ರನ್ನು ಮಾತನಾಡಿಸುವವರು, ಸಾಂತ್ವನ ಹೇಳುವವರು ಯಾರೂ ಇಲ್ಲ. ಇನ್ನು ಮುಂದೆ ನಿರಂಜನ್ ಹಿರೇಮಠ್ ಮತ್ತು ಮೋಹನ್ ಸಮಾನ ದುಃಖಿ ಗಳು ಅವರಿಗಾದ ಅನ್ಯಾಯಕ್ಕೆ ಅವರೇ ಹೋರಾಡಬೇಕು.
ಕಳೆದ ಐದು ತಿಂಗಳುಗಳಿಂದ ಏಕಾಂಗಿ ಪಯಣವನ್ನು -ಹೋರಾಟವನ್ನು ಉಡುಪಿ ನೇಜಾರಿನ ನೂರ್ ಮುಹಮ್ಮದ್ ಅವರು ನಡೆಸುತ್ತಿದ್ದಾರೆ. ಪ್ರವೀಣ್ ಚೌಗುಲೆ ಎಂಬ ಸೈಕೋ ಬಲವಂತದ ಪ್ರೀತ್ಸೆಗಾಗಿ ಸಹೋದ್ಯೋಗಿ ಐನಾಝ್‌ಳನ್ನು ಪೀಡಿಸುತ್ತಿದ್ದ. ಏರ್ ಇಂಡಿಯಾದಲ್ಲಿ ನೌಕರನಾಗಿದ್ದ ಪ್ರವೀಣ್ ಚೌಗುಲೆ ಮದುವೆಯಾದವ. ಪ್ರೀತಿ ನಿರಾಕರಿಸಿದ್ದಕ್ಕೆ ಉಡುಪಿ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಐನಾಝ್‌ಳ ಮನೆಗೆ ಬಂದು ತಾಯಿ ಹಸೀನಾ, ತಂಗಿ ಅಫ್ನಾನ್, ತಮ್ಮ ಅಸೀಮ್ ಅವರನ್ನು ಪ್ರವೀಣ್ ಚೌಗುಲೆ ಬರ್ಬರವಾಗಿ ಕೊಂದು ಪರಾರಿಯಾಗಿದ್ದ.
ಐನಾಝ್‌ಳ ತಂದೆ ನೂರ್ ಮುಹಮ್ಮದ್ ನೌಕರಿಗಾಗಿ ಪರದೇಶದಲ್ಲಿ ಇದ್ದರು. ಈ ಪ್ರಕರಣದಲ್ಲಿ ಕೊಲೆಗಡುಕ ಹಿಂದೂ ಧರ್ಮಕ್ಕೆ ಸೇರಿದವನಾಗಿದ್ದ. ಹತ್ಯೆಗೀಡಾದವರು ಮುಸ್ಲಿಮ್ ಸಮುದಾಯದವರು. ಜನಸಾಮಾನ್ಯರು ಜಾತಿ-ಧರ್ಮದ ಆಚೆ ನಿಂತು ಹಿಂದೂ, ಮುಸ್ಲಿಮರೆಲ್ಲರೂ ಪ್ರವೀಣ್ ಚೌಗುಲೆಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ರಾಜಕಾರಣಿಗಳು ಆ ಬರ್ಬರ ಹತ್ಯೆಗೆ ಮಾನವೀಯ ನೆಲೆಯ ಆಕ್ರೋಶ ಹೊರಹಾಕಲಿಲ್ಲ. ಕರಾವಳಿ ಭಾಗದ ಹಿಂದೂ ಸಂಘಟನೆಗಳು ಪ್ರವೀಣ್ ಚೌಗುಲೆಗೆ ಶಿಕ್ಷೆ ಆಗಬೇಕು ಎಂದು ಹೇಳಿಕೆ ಕೊಡುವುದು ಒತ್ತಟ್ಟಿಗಿರಲಿ; ಆ ಪ್ರಕರಣದ ಬಗ್ಗೆ ಕನಿಷ್ಠ ಅನುಕಂಪ ತೋರದೆ ದಿವ್ಯ ಮೌನ ತಾಳಿದರು. ಜೆ.ಪಿ. ನಡ್ಡಾ, ಅಮಿತ್ ಶಾ ಬಿಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಔಪಚಾರಿಕವಾಗಿಯೂ ನೇಜಾರಿನ ಅಮಾನುಷ ಹತ್ಯೆಯನ್ನು ಖಂಡಿಸಲಿಲ್ಲ. ಕಾಂಗ್ರೆಸ್ ಸರಕಾರದ ಗೃಹ ಸಚಿವ ಪರಮೇಶ್ವರ ಅವರು ಸೇರಿ ಯಾರೊಬ್ಬರೂ ಐನಾಝ್‌ಳ ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂದು ಭಾವಿಸಲೇ ಇಲ್ಲ.
ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕಾರ್ಯಾಚರಣೆ ನಡೆಸಿ ಹಂತಕ ಪ್ರವೀಣ್ ಚೌಗುಲೆಯನ್ನು ಬಂಧಿಸಿದ್ದು ಮೆಚ್ಚುವ ಸಂಗತಿ. ನೇಜಾರಿನ ನಾಲ್ವರ ಬರ್ಬರ ಹತ್ಯೆಯಿಂದ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತ್ವರಿತ ನ್ಯಾಯಾಲಯ ಸ್ಥಾಪನೆಗೆ ಆಗಲೇ ಮುಂದಾಗ ಬೇಕಿತ್ತು. ನೇಹಾ ಹಿರೇಮಠ್ ಹತ್ಯೆ ನಡೆಯುವವರೆಗೂ ಕಾಯಬೇಕಾಗಿರಲಿಲ್ಲ. ಅಮಾನುಷ ಕೊಲೆಗಳನ್ನು ಒಂದೇ ರೀತಿ ಪರಿಭಾವಿಸಬೇಕು. ನೇಜಾರಿನಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಹುಡುಗ ಹತ್ಯೆಗೀಡಾದಾಗ ಸರಕಾರ ಮತ್ತು ಪ್ರತಿಪಕ್ಷಗಳು ಸ್ಪಂದಿಸಿದ ರೀತಿಗೂ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆಯ ನಂತರದ ಸ್ಪಂದನೆಗೂ ಅಜಗಜಾಂತರ ವ್ಯತ್ಯಾಸವಿದೆ. ಅದೇ ಸರಕಾರ, ಅದೇ ರಾಜಕಾರಣಿಗಳು ಅಷ್ಟೇ ಪ್ರಕಾರದ ಭೀಕರ ಹತ್ಯೆಗಳು ನಡೆದಿದ್ದರೂ ಪ್ರತಿಸ್ಪಂದನೆಯಲ್ಲಿ ತಾರತಮ್ಯ ತೋರುವುದು ಅಪರಾಧವೇ ಸರಿ. ಚುನಾವಣೆ ಬಂದಾಗ ಒಂದು ಬಗೆ, ಚುನಾವಣೆ ಇಲ್ಲದಿದ್ದಾಗ ಇನ್ನೊಂದು ರೀತಿ. ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದಲ್ಲಿ ಮತ್ತೊಂದು ರೀತಿ. ಕಾನೂನಿನ ಎದುರು ಎಲ್ಲರೂ ಸಮಾನರು. ಲಿಂಗಾಯತ, ಒಕ್ಕಲಿಗ, ಅಂಬಿಗೇರ, ಹಿಂದೂ-ಮುಸ್ಲಿಮರನ್ನು ಸರಕಾರ ಸಮಾನವಾಗಿ ಕಾಣಬೇಕು. ಎಲ್ಲಾ ಸಮುದಾಯದ ಅಪರಾಧಿಗಳಿಗೂ ಒಂದೇ ಬಗೆಯ ಕಠಿಣ ಶಿಕ್ಷೆಯಾಗಬೇಕು. ಎಲ್ಲಾ ಸಮುದಾಯದ ಸಂತ್ರಸ್ತರಿಗೂ ಸಮಾನ ನ್ಯಾಯ, ಗೌರವ, ಅನುಕಂಪ, ಸ್ಪಂದನೆ ತೋರುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು.
ತುಮಕೂರಿನ ರುಕ್ಸಾನ ಎಂಬ ಮಹಿಳೆಯನ್ನು ಬಲವಂತದ ಪ್ರೀತ್ಸೆ ಗಿರಾಕಿ ಪ್ರದೀಪ್ ಎಂಬಾತ ಪ್ರೀತಿ ನಿರಾಕರಿಸಿದ್ದಕ್ಕೆ ಭೀಕರವಾಗಿ ಕೊಂದು ಸುಟ್ಟು ಹಾಕಿರುವುದು ಪೊಲೀಸ್ ತನಿಖೆಯಿಂದಲೇ ಪತ್ತೆಯಾಗಿದೆ. ವಿಕೃತ ಪ್ರದೀಪನ ವಿರುದ್ಧವೂ ಸಾರ್ವಜನಿಕರ ಆಕ್ರೋಶ ಪ್ರಕಟವಾಯಿತು. ಆದರೆ ರಾಜಕಾರಣಿಗಳು ಅಳೆದು ತೂಗಿ ಅದಕ್ಕೆ ಯಾವ ಮೌಲ್ಯವೂ ಇಲ್ಲವೆಂದು ಭಾವಿಸಿ ಕನಿಷ್ಠ ಪ್ರತಿಕ್ರಿಯೆ ಕೂಡ ವ್ಯಕ್ತಪಡಿಸಲಿಲ್ಲ. ಇನ್ನು ಕೊಲೆಗಡುಕ ಪ್ರದೀಪನಿಗೆ ಗಲ್ಲು ಶಿಕ್ಷೆ ಆಗುವುದು ಕನಸಿನ ಮಾತು. ಹೈ ಪ್ರೊಫೈಲ್ ಪ್ರಕರಣಗಳನ್ನು ಮಾತ್ರ ಸರಕಾರ, ಪ್ರತಿಪಕ್ಷಗಳು ಮತ್ತು ಮಾಧ್ಯಮದವರು ಗಂಭೀರವಾಗಿ ಪರಿಗಣಿಸುತ್ತವೆ. ಮುಸ್ಲಿಮ್ ವಿರೋಧಿ ಅಂಶಗಳಿದ್ದರೆ ಆ ಪ್ರಕರಣವನ್ನು ಬಿಜೆಪಿಯವರು ಗಂಭೀರವಾಗಿ ಪರಿಗಣಿಸುತ್ತಾರೆ. ನೆಲ ಮುಗಿಲು ಒಂದು ಮಾಡಿ ಕಿರುಚಾಡುತ್ತಾರೆ. ರಾಜಕಾರಣ ಮಾಡಲು ಅವಕಾಶವಿರುವ ಪ್ರಕರಣಗಳನ್ನು ಕಾಂಗ್ರೆಸ್‌ನವರು ಮತ್ತು ಸರಕಾರದಲ್ಲಿ ಇದ್ದವರು ಗಂಭೀರವಾಗಿ ಪರಿಗಣಿಸುತ್ತಾರೆ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಹಂಗಾಮ ಸೃಷ್ಟಿಸಿದಾಗ ಕಾಂಗ್ರೆಸ್‌ನವರು ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹಾಗೆ ನೋಡಿದರೆ ನೇಜಾರ್, ತುಮಕೂರಿನ ರುಕ್ಸಾನಾ, ಹುಬ್ಬಳ್ಳಿಯ ನೇಹಾ ಹಿರೇಮಠ್, ಅಂಜಲಿ ಅಂಬಿಗೇರ ಪ್ರಕರಣಕ್ಕಿಂತಲೂ ಅತ್ಯಂತ ಭೀಕರವಾದುದು ಮಡಿಕೇರಿಯ ಅಪ್ರಾಪ್ತ ವಯಸ್ಸಿನ ಮೀನಾ ರುಂಡ ಕತ್ತರಿಸಿದ ಹೇಯ ಕೃತ್ಯ. ಎಸೆಸೆಲ್ಸಿ ಪರೀಕ್ಷೆ ಬರೆದು ಕನಸು ಕಾಣುತ್ತಿದ್ದ ಬಾಲಕಿ ಮೀನಾಳನ್ನು ಪ್ರೀತಿಸುವುದಾಗಿ, ಮದುವೆಯಾಗುವುದಾಗಿ ಪೀಡಿಸುತ್ತಿದ್ದ ಕಿರಾತಕ ಪ್ರಕಾಶ್ ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೀನಾಳ ರುಂಡವನ್ನೇ ಕತ್ತರಿಸಿದ್ದಾನೆ. ಪ್ರಕಾಶ್ ಅಪಾಯಕಾರಿ ಸೈಕೋ ಎನ್ನುವುದು ಕೊಲೆಯ ಭೀಕರತೆಯಲ್ಲೇ ಮನವರಿಕೆಯಾಗುತ್ತದೆ. ರುಂಡ ಕತ್ತರಿಸಿದ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ರುಂಡ ಕತ್ತರಿಸಿದ ಯುವಕ ಪ್ರಕಾಶ್ ಹಿಂದೂವಾಗಿರದೆ ಮುಸ್ಲಿಮ್ ಸಮುದಾಯಕ್ಕೆ ಸೇರಿದವನಾಗಿದ್ದರೆ ಬಿಜೆಪಿಯವರು ಅದನ್ನು ಅಂತರ್‌ರಾಷ್ಟ್ರೀಯ ಸುದ್ದಿಯನ್ನಾಗಿಸುತ್ತಿದ್ದರು. ಹತ್ಯೆಯ ಭೀಕರತೆಯನ್ನು ಜಾತಿ-ಧರ್ಮಧಾರಿತವಾಗಿ ನಿರ್ಧರಿಸುವುದೇ ವಿಕೃತಿ ಎನಿಸಿಕೊಳ್ಳುತ್ತದೆ. ಪ್ರವೀಣ್ ಚೌಗುಲೆ, ಪ್ರದೀಪ್, ಫಯಾಝ್, ಪ್ರಕಾಶ್, ಗಿರೀಶ್ ಸಾವಂತ್ ಯಾವುದೇ ಜಾತಿ-ಧರ್ಮಕ್ಕೆ ಸೇರಿದವರಾಗಿರಲಿ ಅವರು ವಿಕೃತ ಮನಸ್ಸಿನ ಕೊಲೆಗಡುಕರು ಎಂಬುದು ಮುಖ್ಯ.
ಪ್ರೀತಿಯ ಹೆಸರಲ್ಲಿ ಮಹಿಳೆಯರ ಬದುಕುವ ಹಕ್ಕನ್ನು ಕಿತ್ತುಕೊಂಡ ಕಿರಾತಕರು. ಆ ಎಲ್ಲಾ ನೀಚರಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕು ಇಲ್ಲ. ಸ್ನೇಹ-ಸಲುಗೆಯನ್ನು ಪ್ರೀತಿ ಎಂದು ಭಾವಿಸುವ, ಪ್ರೀತಿ ಮಾಡಿದ ಮಾತ್ರಕ್ಕೆ ಕೊಲ್ಲುವ ಹಕ್ಕು ಪ್ರಾಪ್ತವಾಗುತ್ತದೆ ಎಂದು ಭ್ರಮಿಸುವ ಈ ವಿಕೃತ ಜೀವಿಗಳಿಗೆ ಪ್ರೀತಿಯ ಸಹಜ ಅರ್ಥವೇ ತಿಳಿದಿಲ್ಲ. ಪ್ರೀತಿ ತನ್ನಂತೆ ಪರರ ಜೀವ ಎಂದು ಭಾವಿಸುತ್ತದೆ. ನಿಜವಾದ ಪ್ರೀತಿ ಬದುಕುವ ಹಕ್ಕನ್ನು, ಆತ್ಮ ಗೌರವವನ್ನು ಕಿತ್ತುಕೊಳ್ಳುವುದಿಲ್ಲ. ಬದುಕು, ಬದುಕಲು ಬಿಡು ತತ್ವದಲ್ಲಿ ನಂಬಿಕೆ ಹೊಂದಿದವರು ನಿಜವಾದ ಪ್ರೇಮಿಗಳು. ಪ್ರೀತ್ಸೆ ಹೆಸರಲ್ಲಿ ಮಹಿಳೆಯರ ಜೀವ ತೆಗೆದ ಆ ಎಲ್ಲಾ ನೀಚರು ಪ್ರೀತಿ ಎಂಬ ಭಾವಕ್ಕೆ ಕಳಂಕ ಅಂಟಿಸುತ್ತಿದ್ದಾರೆ. ಪ್ರೀತ್ಸೆ ಹೆಸರಿನಲ್ಲಿನ ಬರ್ಬರ ಹತ್ಯೆಗಳಿಗೆ ಕಡಿವಾಣ ಹಾಕಬೇಕೆಂದರೆ ಕರ್ನಾಟಕ ಸರಕಾರ ಕಠಿಣ ಕಾನೂನು ರೂಪಿಸಿ ಹಂತಕರಿಗೆ ಅತ್ಯಂತ ಘೋರ ಶಿಕ್ಷೆ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಷ್ಟೆಲ್ಲಾ ಆದಮೇಲೂ ಉದಾಸೀನತೆ ತೋರಿದರೆ ಸರಕಾರಕ್ಕೇ ಕೆಟ್ಟ ಹೆಸರು ಬರುತ್ತದೆ. ಈಗ ಸಂಭವಿಸುವ ಭೀಕರ ಹತ್ಯೆಗಳಿಗೆ ಹಿಂದಿನ ಸರಕಾರದ ಅಂಕಿ ಅಂಶ ನೀಡುವುದು ಜವಾಬ್ದಾರಿ ನಡೆ ಅನಿಸುವುದಿಲ್ಲ. ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದರಿಂದಲೇ ಸರಕಾರ ಕಳೆದುಕೊಂಡಿದ್ದು. ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದು ಎಲ್ಲರ ಧ್ವನಿಯಾಗುವಲ್ಲಿ ವಿಫಲರಾಗಿದ್ದಾರೆ. ಫಯಾಝ್ ವಿರುದ್ಧ ತೋರಿದ ಆಕ್ರೋಶವನ್ನು ಪ್ರವೀಣ್ ಚೌಗುಲೆ, ಪ್ರದೀಪ್, ಪ್ರಕಾಶ್, ಗಿರೀಶ್ ಸಾವಂತ್‌ರಂತಹ ವಿಕೃತ ಕೊಲೆಗಡುಕರ ವಿಷಯದಲ್ಲೂ ವ್ಯಕ್ತಪಡಿಸಿದ್ದರೆ ನಾಗರಿಕ ಸಮಾಜದ ಘನತೆ ಗೌರವ ಎತ್ತಿ ಹಿಡಿದಂತಾಗುತ್ತಿತ್ತು. ಬಿಜೆಪಿಯವರು ಮಾಡಿದ ತಪ್ಪನ್ನೇ ಕಾಂಗ್ರೆಸ್ ಸರಕಾರ ಮಾಡಬಾರದು.
ಪ್ರತಿಯೊಬ್ಬ ಮಹಿಳೆಯ ಅಮಾನುಷ ಹತ್ಯೆ ಸಮಾನ ನ್ಯಾಯ, ಅನುಕಂಪಕ್ಕೆ ಅರ್ಹವಾಗಿರುತ್ತದೆ. ನೇಹಾ ಹಿರೇಮಠ್ ಹತ್ಯೆಯ ನಂತರ ಸಿದ್ದರಾಮಯ್ಯನವರು ನಡೆಸಿಕೊಂಡ ಪರಿ ಘನತೆಯಿಂದ ಕೂಡಿತ್ತು. ಅದೇ ಬಗೆಯ ಪ್ರತಿಸ್ಪಂದನೆ: ಐನಾಝ್, ಹಸೀನಾ, ಅಫ್ನಾನ್, ಅಸೀಮ್, ರುಕ್ಸಾನಾ, ಮೀನಾ, ಅಂಜಲಿ ಅಂಬಿಗೇರ ಅವರ ಭೀಕರ ಹತ್ಯೆಯ ಸಂದರ್ಭದಲ್ಲಿ ಅಗತ್ಯವಾಗಿತ್ತು. ಬಲವಂತದ ಪ್ರೀತ್ಸೆ ಮತ್ತು ಹತ್ಯೆಗಳು ನಿಲ್ಲಬೇಕೆಂದರೆ ಸರಕಾರ ಈಗ ನಡೆದ ಎಲ್ಲಾ ಪ್ರಕರಣಗಳನ್ನು ಒಂದೇ ತನಿಖಾ ತಂಡಕ್ಕೆ ಒಪ್ಪಿಸಬೇಕು. ತ್ವರಿತ ನ್ಯಾಯಾಲಯದ ವ್ಯಾಪ್ತಿಗೆ ಈ ಎಲ್ಲಾ ಪ್ರಕರಣಗಳನ್ನು ನೀಡಬೇಕು. ಮೂರು ತಿಂಗಳಲ್ಲಿ ಆ ಎಲ್ಲಾ ಹಂತಕರಿಗೆ ಕಾನೂನಿನಲ್ಲಿ ಅವಕಾಶ ಇರುವ ಗರಿಷ್ಠ ಶಿಕ್ಷೆ ನೀಡುವಂತಾಗಬೇಕು. ಆಗ ಮಾತ್ರ ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವಿಕೃತ ಮನಸ್ಸಿನ ಯುವಕರಲ್ಲಿ ಭಯ ಮೂಡಬಹುದೇನೋ?