ಹಿಂಬಾಗಿಲ ಪ್ರವೇಶವೂ ಐಎಎಸ್ ವ್ಯವಸ್ಥೆಯೂ

ಹಿಂಬಾಗಿಲ ಪ್ರವೇಶದ ಕುರಿತ ಜಾಹೀರಾತು ಹಿಂಪಡೆಯುವಿಕೆಯು ಎನ್ಡಿಎ 3.0 ಸರಕಾರವು ಮೊದಲಿನಂತೆ ಭಿನ್ನ ಅಭಿಪ್ರಾಯಗಳನ್ನು ಪುಡಿಗಟ್ಟಲು ಸಾಧ್ಯವಿಲ್ಲ ಎಂಬುದರ ಪ್ರತೀಕ. ಬಿಜೆಪಿಗೆ ಬಹುಮತವಿಲ್ಲದ ಕಾರಣ ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳ ಮಾತು ಕೇಳಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ. ಇಲ್ಲಿ ಕೇಳಲೇಬೇಕಿರುವ ಮುಖ್ಯ ಪ್ರಶ್ನೆ- ಐಎಎಸ್ ವ್ಯವಸ್ಥೆಯ ಸುಧಾರಣೆ ಯಾವಾಗ ಆರಂಭವಾಗುತ್ತದೆ? ಈ ವ್ಯವಸ್ಥೆಗೆ ಜನರಿಗೆ ಸ್ಪಂದಿಸುವ ವಂಶವಾಹಿಯನ್ನು ಸೇರಿಸುವುದು ಹೇಗೆ? ಒಂದುವೇಳೆ ಹಿಂಬಾಗಿಲ ಪ್ರವೇಶ ಅನಿವಾರ್ಯ ಎಂದಾದಲ್ಲಿ, ನೇಮಕಗಳು ಮೀಸಲು ಚೌಕಟ್ಟನ್ನು ಉಲ್ಲಂಘಿಸದಂತೆ ಮಾಡುವುದು ಹೇಗೆ?

Update: 2024-08-30 06:04 GMT
Editor : Naufal | By : ಋತ

ಕ್ರೋನಾಲಜಿ ಇಂತಿದೆ: ಆಗಸ್ಟ್ 17ರಂದು ಕೇಂದ್ರ ನಾಗರಿಕ ಸೇವೆಗಳ ಆಯೋಗ(ಯುಪಿಎಸ್ಸಿ) ವಿವಿಧ ಮಂತ್ರಾಲಯಗಳ 45 ಜಂಟಿ ಕಾರ್ಯದರ್ಶಿ, ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘‘ಇದು ರಾಷ್ಟ್ರವಿರೋಧಿ ಹೆಜ್ಜೆಯಾಗಿದ್ದು, ಸರಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ-ವರ್ಗ ಹಾಗೂ ಒಬಿಸಿಗಳ ಮೀಸಲು ಕಿತ್ತುಕೊಳ್ಳುವ ಪ್ರಯತ್ನ’’ ಎಂದು ಟೀಕಿಸಿದರು. ಎನ್ಡಿಎ 3.0ರ ಮೈತ್ರಿ ಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಜೆಡಿಯು ಕೂಡ ಪ್ರಸ್ತಾವವನ್ನು ವಿರೋಧಿಸಿತು. ಸರಕಾರ ಮೊದಲು ಕ್ರಮವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿತು. ಆದರೆ, ಪ್ರತಿರೋಧ ಹೆಚ್ಚುತ್ತಿದ್ದಂತೆ ಆಗಸ್ಟ್ 20ರಂದು ಕೇಂದ್ರ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್, ಯುಪಿಎಸ್ಸಿ ಅಧ್ಯಕ್ಷೆಗೆ ಜಾಹೀರಾತು ಹಿಂಪಡೆಯಬೇಕೆಂದು ಆದೇಶಿಸಿದರು; ಕೆಲವೇ ಗಂಟೆಗಳ ಬಳಿಕ ಜಾಹೀರಾತು ಕಾಣೆಯಾಯಿತು.

‘‘ಸರಕಾರ ಸಾಮಾಜಿಕ ನ್ಯಾಯಕ್ಕಾಗಿ ಸಾಂವಿಧಾನಿಕ ಬದ್ಧತೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ’’ ಎಂದು ಸಚಿವರು ಹೇಳಿದರು. ‘‘ಲ್ಯಾಟರಲ್ ಎಂಟ್ರಿ ಪ್ರವೇಶ ಪ್ರಕ್ರಿಯೆಯು ಸಮಾನತೆಯ ಸಿದ್ಧಾಂತಕ್ಕೆ ಅನುಗುಣವಾಗಿರಬೇಕು ಎಂದಿದ್ದಾರೆ. ಹೀಗಾಗಿ ಜಾಹೀರಾತು ಪ್ರಕಟಗೊಂಡ 3 ದಿನಗಳ ಬಳಿಕ ಅದನ್ನು ಹಿಂಪಡೆಯಲಾಯಿತು’’ ಎಂದರು. ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮೀಸಲು ವಿಷಯ ನೀಡಿದ ಹೊಡೆತ ನೆನಪಿಗೆ ಬಂದಿರಬೇಕು.

ಮೆಕಾಲೆ ಸಮಿತಿಯು 1854ರಲ್ಲಿ ನಾಗರಿಕ ಸೇವೆಗಳ ಸೃಷ್ಟಿಯನ್ನು ಪ್ರಸ್ತಾಪಿಸಿತು. ಸಮಿತಿಯು ಸ್ವಜನಪಕ್ಷಪಾತದ ಬದಲು ಪ್ರತಿಭೆಯನ್ನು ಆಧರಿಸಿದ ಆಯ್ಕೆಯ ಅಗತ್ಯವನ್ನು ಎತ್ತಿಹಿಡಿಯಿತು. 1858ರಲ್ಲಿ ಭಾರತೀಯ ನಾಗರಿಕ ಸೇವೆ (ಐಸಿಎಸ್) ಆರಂಭಗೊಂಡಿತು. ಸ್ವಾತಂತ್ರ್ಯಾನಂತರ ಇದು ಐಎಎಸ್ ಆಗಿ ಬದಲಾಯಿತು. ಐಎಎಸ್ ಶ್ರೇಣಿಗೆ ದೃಢೀಕರಣ ಕ್ರಿಯೆ ಸಿದ್ಧಾಂತವನ್ನು ಆಧರಿಸಿದ ಮೀಸಲನ್ನು ಪರಿಚಯಿಸುವ ಮೂಲಕ ಬಹು ದೊಡ್ಡ ಬದಲಾವಣೆ ಆಯಿತು. ಎಸ್ಸಿ-ಎಸ್ಟಿಗೆ ಸೀಮಿತವಾಗಿದ್ದ ಮೀಸಲನ್ನು 1991ರಲ್ಲಿ ಇತರ ಹಿಂದುಳಿದ ವರ್ಗಗಳಿಗೆ, ಆನಂತರ ಆರ್ಥಿಕವಾಗಿ ಹಿಂದುಳಿದವರು(ಇಡಬ್ಲ್ಯುಎಸ್) ಹಾಗೂ ವಿಶೇಷಚೇತನ(ಪಿಡಬ್ಲ್ಯುಡಿ)ರಿಗೂ ನೀಡಲಾಯಿತು.

ದೀರ್ಘ ಇತಿಹಾಸ:

ಹಿಂಬಾಗಿಲ ಪ್ರವೇಶಕ್ಕೆ ದೀರ್ಘ ಹಿನ್ನೆಲೆಯಿದೆ. ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್ಇಎಲ್) ಮತ್ತಿತರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ದೆಸೆ ಬದಲಿಸಿದ ವಿ.ಕೃಷ್ಣಮೂರ್ತಿ ಅವರನ್ನು 1977ರಲ್ಲಿ ಕೈಗಾರಿಕಾ ಮಂತ್ರಾಲಯದ ಕಾರ್ಯದರ್ಶಿಯಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಆನಂತರ, ಮನಮೋಹನ್ ಸಿಂಗ್, ವಿಜಯ್ ಕೇಳ್ಕರ್, ಬಿಮಲ್ ಜಲಾನ್ ಆರ್ಥಿಕ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದರು. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನೇಮಿಸಿದ್ದ 2ನೇ ಆಡಳಿತ ಸುಧಾರಣೆ ಆಯೋಗವು ಸರಕಾರದ ಸೇವೆಗಳಿಗೆ ಹಿಂಬಾಗಿಲ ಪ್ರವೇಶದ ಶಿಫಾರಸು ಮಾಡಿತ್ತು. 2017ರ ನೀತಿ ಆಯೋಗದ ವರದಿ ‘ಇಂಡಿಯಾ-3 ಇಯರ್ಸ್ ಆಕ್ಷನ್ ಅಜೆಂಡಾ, 2017-18 ಟು 2019-20’, ನಾಗರಿಕ ಸೇವೆಗಳ ಸುಧಾರಣೆಗೆ ಹಿಂಬಾಗಿಲ ಪ್ರವೇಶದ ಸಲಹೆ ನೀಡಿತು. ‘ಆರ್ಥಿಕತೆಯ ಸಂಕೀರ್ಣತೆ ಹೆಚ್ಚಳದಿಂದ ಕಾರ್ಯನೀತಿ ರೂಪಿಸುವಿಕೆಯು ವಿಶೇಷ ಚಟುವಟಿಕೆಯಾಗಿ ಪರಿಣಮಿಸಿದೆ. ಇದರಿಂದ ವ್ಯವಸ್ಥೆಗೆ ಲ್ಯಾಟರಲ್ ಎಂಟ್ರಿ ಮೂಲಕ ತಜ್ಞರ ನೇಮಕ ಅಗತ್ಯವಿದೆ. ಇಂಥ ನೇಮಕಗಳು ಸ್ಪರ್ಧಾತ್ಮಕತೆಯನ್ನು ತರುತ್ತವೆ’ ಎಂದು ಹೇಳಿತು. ಇದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಮಧ್ಯಮ ಆಡಳಿತ ಹಂತದಲ್ಲಿ ಹೊಸ ಪ್ರತಿಭೆಗಳ ನೇಮಕ ಮತ್ತು ಮಾನವ ಸಂಪನ್ಮೂಲದ ಲಭ್ಯತೆ ಹೆಚ್ಚಿಸಲು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ವಿಶೇಷ ಜ್ಞಾನ ಹಾಗೂ ಪರಿಣತಿ ಇರುವವರ ನೇಮಕಕ್ಕೆ ಆಯ್ದುಕೊಂಡ ಮಾರ್ಗ.

ನಿಶ್ಚಲ ಅಧಿಕಾರಶಾಹಿಗೆ ತಜ್ಞರ ಸೇರ್ಪಡೆ ಪ್ರಯತ್ನ ಬಹಳ ಹಿಂದೆಯೇ ನಡೆದಿತ್ತು. ಎಂ. ಎಸ್. ಸ್ವಾಮಿನಾಥನ್, ವರ್ಗೀಸ್ ಕುರಿಯನ್, ಹೋಮಿ ಭಾಭಾ, ಎ.ಪಿ.ಜೆ. ಅಬ್ದುಲ್ ಕಲಾಂ, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಮನಮೋಹನ್ ಸಿಂಗ್ ಮತ್ತಿತರರು ಕಣ್ಣು ಕುಕ್ಕುವ ಸಾಧನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 1971ರಲ್ಲಿ ವಾಣಿಜ್ಯ ಮಂತ್ರಾಲಯಕ್ಕೆ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಯಿತು. ಅವರು 1972-76ರವರೆಗೆ ಮುಖ್ಯ ಆರ್ಥಿಕ ಸಲಹೆಗಾರ, ಆನಂತರ ಆರ್ಬಿಐ ಗವರ್ನರ್, ಹಣಕಾಸು ಸಚಿವ ಹಾಗೂ ಕೊನೆಗೆ, ದೇಶದ ಪ್ರಧಾನಿ ಆದರು.

ಹಿಂಬಾಗಿಲ ಪ್ರವೇಶ ಪರ ವಾದವೆಂದರೆ, ಈ ಮೂಲಕ ಆಡಳಿತಕ್ಕೆ ಪ್ರತಿಭೆ, ಕಲ್ಪನೆ ಹಾಗೂ ಪರಿಪ್ರೇಕ್ಷವನ್ನು ತುಂಬಬಹುದು ಮತ್ತು ಕೇಂದ್ರ ಸರಕಾರದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯನ್ನು ಭರ್ತಿ ಮಾಡಬಹುದು. ಇದು ನಾಗರಿಕ ಸೇವೆಗಳ ಆಧುನೀಕರಣದ ಮೊದಲ ಹೆಜ್ಜೆಯಾಗಿದ್ದು, ಸಾಂಪ್ರದಾಯಿಕ ಅಧಿಕಾರಶಾಹಿ ಚೌಕಟ್ಟಿನ ಹೊರಗಿನ ವಿವಿಧ ಕ್ಷೇತ್ರಗಳ ವೃತ್ತಿಪರ ತಜ್ಞರನ್ನು ಒಳಗೊಳ್ಳುವ ಮೂಲಕ ಸಮಕಾಲೀನ ಸವಾಲುಗಳಿಗೆ ಪ್ರತಿಕ್ರಿಯಿಸಲು ನೆರವಾಗುತ್ತದೆ. ಹೊಮ್ಮುತ್ತಿರುವ ತಂತ್ರಜ್ಞಾನಗಳು, ಸೆಮಿ ಕಂಡಕ್ಟರ್ಗಳು ಮತ್ತು ಡಿಜಿಟಲ್ ಆರ್ಥಿಕತೆ, ಪರಿಸರ ಕಾರ್ಯನೀತಿ ಮತ್ತು ಕಾನೂನು, ಪುನರ್ ಬಳಕೆ ಇಂಧನ ಮತ್ತು ಅವಘಡ ನಿರ್ವಹಣೆ ಇಂಥ ಕ್ಷೇತ್ರಗಳಿಗೆ ತಾಂತ್ರಿಕ-ವೃತ್ತಿಪರ ಜ್ಞಾನ ಅಗತ್ಯವಿದೆ.

ಆದರೆ, ಖಾಸಗಿ ಕ್ಷೇತ್ರದಿಂದ ಬರುವವರು ತಮ್ಮದೇ ಇಸಂ/ಬ್ಯಾಗೇಜ್ಗಳ ಜೊತೆಗೆ ಬರುತ್ತಾರೆ. ರಾಜಕೀಯ ಹಿನ್ನೆಲೆ ಇದ್ದವರು ಆಡಳಿತ ನಿರ್ವಹಣೆಯ ಬೇರೆ ಕ್ಷೇತ್ರಗಳಲ್ಲಿನ ನಿರ್ಧಾರಗಳನ್ನು ಪ್ರಭಾವಿಸುವ ಸಾಧ್ಯತೆಯೂ ಇರುತ್ತದೆ. ಜೊತೆಗೆ, ಈ ಆಯ್ಕೆ ವ್ಯವಸ್ಥೆ ಅಪಾರದರ್ಶಕವಾಗಿದ್ದು, ಉತ್ತರದಾಯಿತ್ವ ಇಲ್ಲ; ಸರಕಾರಕ್ಕೆ ನಿಷ್ಠರಾದವರು ಮತ್ತು ಒಂದು ಸಿದ್ಧಾಂತಕ್ಕೆ ಬದ್ಧರಾದವರ ನೇಮಕದ ಮೂಲಕ ಲೂಟಿ ವ್ಯವಸ್ಥೆ(ಸ್ಪಾಯಿಲ್ಸ್ ಸಿಸ್ಟಮ್)ಗೆ ದಾರಿ ಮಾಡಿಕೊಡಬಹುದು. ಆಡಳಿತದಲ್ಲಿ ಯಾವುದೇ ಅನುಭವ ಇಲ್ಲದವರು ನೇಮಕಗೊಳ್ಳುವ ಸಾಧ್ಯತೆಯೂ ಇದೆ. ಇವರು ಚಾಲ್ತಿ ರಾಜಕೀಯ-ಅಧಿಕಾರಶಾಹಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಹಾಗೂ ಸಾಮಾಜಿಕ ನ್ಯಾಯ ಅಥವಾ ಮೀಸಲು ಇಲ್ಲದೆ ಇರುವುದು ಇದರ ದೊಡ್ಡ ಲೋಪಗಳಲ್ಲೊಂದು.

2019ರಿಂದ 63 ಹುದ್ದೆಗಳನ್ನು ಹಿಂಬಾಗಿಲ ಪ್ರವೇಶದ ಮೂಲಕ ನೇಮಿಸಲಾಗಿದೆ. ಇದರಲ್ಲಿ 7 ಮಂದಿ ಕೆಲಸ ತೊರೆದಿದ್ದಾರೆ. ಈ ಹುದ್ದೆಗಳಿಗೆ ಖಾಸಗಿ ಕ್ಷೇತ್ರ, ರಾಜ್ಯ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರ, ಸ್ವಾಯತ್ತ ಸಂಸ್ಥೆಗಳು, ಶಾಸನಾತ್ಮಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಮಾನ್ಯತೆ ಪಡೆದಿರುವ ಸಂಶೋಧನಾ ಸಂಸ್ಥೆಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅವಧಿ 3ರಿಂದ 5 ವರ್ಷ. 2021ರಲ್ಲಿ ಯುಪಿಎಸ್ಸಿ ಅರ್ಜಿ ಆಹ್ವಾನಿಸಿದಾಗ, ಮೂವರು ಜಂಟಿ ಕಾರ್ಯದರ್ಶಿ ಹುದ್ದೆಗೆ 295 ಮತ್ತು 27 ನಿರ್ದೇಶಕರ ಹುದ್ದೆಗೆ 1,247 ಹಾಗೂ 13 ಉಪ ಕಾರ್ಯದರ್ಶಿ ಹುದ್ದೆಗಳಿಗೆ 489 ಅರ್ಜಿಗಳು ಬಂದಿದ್ದವು. ಯುಪಿಎಸ್ಸಿ 31 ಹುದ್ದೆಗಳಿಗೆ ಶಿಫಾರಸು ಮಾಡಿತು. ಉಳಿದ 12 ಹುದ್ದೆಗಳು ಹಾಗೆಯೇ ಉಳಿದುಕೊಂಡವು(ಯುಪಿಎಸ್ಸಿ ವರದಿ, 2021-22).

ಐಎಎಸ್ ಅಧಿಕಾರಿಗಳ ಕೊರತೆ:

ಕೇಂದ್ರ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಗಂಭೀರ ಸಮಸ್ಯೆಯಾಗಿದೆ. 2020ರಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ರಾಜ್ಯಗಳಿಗೆ ಪತ್ರ ಬರೆದು, ಕೇಂದ್ರದ ಹಲವು ಸಚಿವಾಲಯಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗುತ್ತಿಲ್ಲ ಎಂದು ಹೇಳಿತ್ತು. ಡಿಸೆಂಬರ್ 2021ರಲ್ಲಿ ಡಿಒಪಿಟಿ, ಐಎಎಸ್ (ಕೇಡರ್) ನಿಯಮಗಳು 1954ಕ್ಕೆ ತಿದ್ದುಪಡಿ ಪ್ರಸ್ತಾವವನ್ನು ಮುಂದೊಡ್ಡಿತು. ಐಎಎಸ್, ಐಪಿಎಸ್ ಹಾಗೂ ಅರಣ್ಯ ಸೇವೆ ಅಧಿಕಾರಿಗಳನ್ನು ರಾಜ್ಯ ಸರಕಾರದ ಅನುಮತಿ ಪಡೆಯದೆ ಕೇಂದ್ರಕ್ಕೆ ನೇಮಿಸಿಕೊಳ್ಳುವುದು ಈ ಪ್ರಸ್ತಾವದ ಉದ್ದೇಶ. 2023-24ರಲ್ಲಿ ಡಿಒಪಿಟಿಯ ಸಂಸದೀಯ ಪ್ಯಾನೆಲ್ ವರದಿ ಪ್ರಕಾರ, ಕೇಂದ್ರದಲ್ಲಿ 442 ಐಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವುದು 1,469 ಮಂದಿ. ಹಾಲಿ ನಿಯಮಗಳ ಪ್ರಕಾರ, ರಾಜ್ಯಗಳು ಕೇಂದ್ರ ಸರಕಾರದ ಕಚೇರಿಗಳಿಗೆ ಐಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ಆದರೆ, ಅದು ಒಟ್ಟು ಕೇಡರ್ನ ಶೇ.40 ಮೀರಬಾರದು. ರಾಜ್ಯಗಳಲ್ಲೇ ಐಎಎಸ್ ಅಧಿಕಾರಿಗಳ ಕೊರತೆ ಇರುವುದರಿಂದ, ಅವು ಕೇಂದ್ರದ ಸೇವೆಗೆ ನಿಯೋಜಿಸಲು ಮುಂದಾಗುತ್ತಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್) ಪ್ರಕಾರ, ಕರ್ನಾಟಕ ಕೇಡರ್ನ 270 ಐಎಎಸ್ ಅಧಿಕಾರಿಗಳಿದ್ದು, ಇವರಲ್ಲಿ 22 ಮಂದಿ ಕೇಂದ್ರದ ಸೇವೆಗೆ ನಿಯೋಜನೆಗೊಂಡಿದ್ದಾರೆ. ರಾಜ್ಯಕ್ಕೆ 314 ಐಎಎಸ್ಗಳ ಅವಶ್ಯಕತೆಯಿದೆ.

ಈ ಗದ್ದಲದಲ್ಲಿ ಅತ್ಯಂತ ಮುಖ್ಯ ಪ್ರಶ್ನೆಯೊಂದು ಚರ್ಚೆಗೆ ಬಾರದೆ ಉಳಿದುಕೊಂಡಿದೆ: ಅದು ಐಎಎಸ್ ಸುಧಾರಣೆ. ನಾಗರಿಕ ಸೇವೆಗಳ ಉದ್ದೇಶವೇನು? ಕಾನೂನು ಸುವ್ಯವಸ್ಥೆ ನಿರ್ವಹಣೆ, ಜಿಲ್ಲಾಡಳಿತ, ತೆರಿಗೆ ಸಂಗ್ರಹ, ಅಭಿವೃದ್ಧಿ ಮತ್ತು ಕಲ್ಯಾಣ, ಕಾರ್ಯನೀತಿ ರಚನೆಯಲ್ಲಿ ರಾಜಕಾರಣಿಗಳಿಗೆ ಸಲಹೆ, ಸಂಸತ್ತು-ವಿಧಾನಸಭೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿಷಯದಲ್ಲಿ ನೆರವು ನೀಡುವಿಕೆ ಮೊದಲಿನಂತೆಯೇ ಇದೆಯೇ? ಅಧಿಕಾರಶಾಹಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ರಾಜಕಾರಣಿಗಳಿಗೆ ಕಾರ್ಯನೀತಿ ರೂಪಿಸುವಲ್ಲಿ ನಿಷ್ಪಕ್ಷ ಸಲಹೆ ನೀಡುತ್ತಿದೆಯೇ ಮತ್ತು ಜನರಿಗೆ ಸಾರ್ವಜನಿಕ ಸೇವೆಗಳನ್ನು ನಿಗದಿತ ಸಮಯದೊಳಗೆ ಪೂರೈಸುತ್ತಿದೆಯೇ? ನಾಗರಿಕ ಸೇವೆಗಳ ಒಟ್ಟಾರೆ ಕಾರ್ಯಕ್ಷಮತೆ ಹೇಗಿದೆ? ವೈದ್ಯರು-ಇಂಜಿನಿಯರ್ಗಳ ತರಬೇತಿಗೆ ಸರಕಾರ ಅಪಾರ ಹಣ ವೆಚ್ಚಮಾಡುತ್ತದೆ. ಹೀಗಿರುವಾಗ ಅವರು ನಾಗರಿಕ ಸೇವೆಗೆ ಸೇರಬೇಕೇ? ಪರಿಣತರ ಅಗತ್ಯವಿದೆ ಎಂದರೆ ವಿಶೇಷ ವ್ಯವಸ್ಥೆ ಮೂಲಕ ಅಂಥವರನ್ನು ನೇಮಕ ಮಾಡಿಕೊಳ್ಳಬಹುದಲ್ಲವೇ? ಅವರನ್ನು ಸಾಮಾನ್ಯ ನೇಮಕದೊಟ್ಟಿಗೆ ಏಕೆ ಆಯ್ಕೆ ಮಾಡಬೇಕು? ಐಎಎಸ್ ಅಧಿಕಾರಿಗಳು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾನಿಲಯ/ದೇಶಗಳಿಗೆ ಹೋಗಿ, ವ್ಯವಸ್ಥೆಯ ಸುಧಾರಣೆ-ಆಧುನಿಕೀಕರಣ ಕುರಿತು ಕಲಿಯುತ್ತಾರೆ. ಆದರೆ, ವಾಪಸಾದ ಬಳಿಕ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತದೆ. ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಜನತಾ ದರ್ಶನ ನಡೆಸಿದಾಗ, ದೂರದ ಗುಲ್ಬರ್ಗವೂ ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಸಾವಿರಾರು ಜನ ಅರ್ಜಿಗಳನ್ನು ಹಿಡಿದುಕೊಂಡು ನೆರೆಯುವುದು ಸ್ಥಳೀಯ ಮಟ್ಟದಲ್ಲಿ ಆಡಳಿತ ಜಡವಾಗಿರುವ ಸೂಚನೆಯಲ್ಲವೇ? ಇದರ ದುರಸ್ತಿ ಹೇಗೆ ಮತ್ತು ಯಾವಾಗ?

ದೇಶದ ಮೊದಲ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಷ್ಪಕ್ಷ, ರಾಜಕೀಯೇತರ ನಾಗರಿಕ ಸೇವೆಯನ್ನು ಬಯಸಿದ್ದರು. ‘ನಾಗರಿಕ ಸೇವೆಗಳು ಪಕ್ಷ ರಾಜಕೀಯವನ್ನು ಮೀರಿರಬೇಕು. ನೇಮಕ ಮತ್ತು ನಿಯಂತ್ರಣದಲ್ಲಿ ರಾಜಕೀಯ ಹಸ್ತಕ್ಷೇಪ ಕನಿಷ್ಠ ಇರಬೇಕು’ ಎಂದಿದ್ದರು. ಆದರೆ, ಈಗ ನೇಮಕ ಪಕ್ಷಾತೀತವಾಗಿ ನಡೆಯುತ್ತಿದ್ದರೂ, ಆನಂತರ ರಾಜಕೀಯ ತುಂಬಿ ತುಳುಕುತ್ತಿದೆ. ಈ ಹಿಂದೆ ಜನಸೇವೆಗೆ ಮೀಸಲಾಗಿದ್ದ ಐಎಎಸ್-ಐಪಿಎಸ್ ಈಗ ಪ್ರತಿಷ್ಠೆ, ಅಧಿಕಾರ ಮತ್ತು ಹಣದೊಂದಿಗೆ ಗುರುತಿಸಿಕೊಂಡಿವೆ. ಮಹಾರಾಷ್ಟ್ರದ ಪೂಜಾ ಖೇಡ್ಕರ್ ನಕಲಿ ಪ್ರಮಾಣಪತ್ರ ನೀಡಿ ಐಎಎಸ್ ಸೇರಿದ್ದಲ್ಲದೆ, ತರಬೇತಿ ಅವಧಿಯಲ್ಲೇ ಸಕಲ ಸೌಲಭ್ಯ ನೀಡಬೇಕೆಂದು ಹಠಕ್ಕೆ ಬಿದ್ದಿದ್ದರು! ನಕಲಿ ಜಾತಿ ಪತ್ರ ನೀಡಿ ಸರಕಾರಿ ಹುದ್ದೆ ಗಿಟ್ಟಿಸಿದವರು ಸಾಕಷ್ಟು ಮಂದಿ ಇದ್ದಾರೆ. ಫೆಬ್ರವರಿ 2021ರಲ್ಲಿ ಪ್ರಧಾನಿ ಐಎಎಸ್ ಅಧಿಕಾರಿಗಳ ಕೆಲಸದ ಸಂಸ್ಕೃತಿಯನ್ನು ಟೀಕಿಸಿ, ‘‘ದೇಶವನ್ನು ಬಾಬುಗಳಿಗೆ ಒಪ್ಪಿಸುವ ಮೂಲಕ ಏನು ಸಾಧಿಸಬಹುದು?’’ ಎಂದು ಪ್ರಶ್ನಿಸಿದ್ದರು. ಇಂಥ ಕ್ಷೀಷೆಯ ಮಾತುಗಳನ್ನು ನೀವು ಬೇರೆ ರಾಜಕಾರಣಿಗಳ ಬಾಯಿಂದಲೂ ಕೇಳಿರುತ್ತೀರಿ. ಇದರಿಂದ ಅಧಿಕಾರಶಾಹಿ ಏನಾದರೂ ಬದಲಾಯಿತೇ?

ಬೇರೆಯದೇ ವ್ಯವಸ್ಥೆ:

ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಬೇರೆ ರೀತಿಯ ವ್ಯವಸ್ಥೆಯಿದೆ. ಇಂಗ್ಲೆಂಡಿನಲ್ಲಿ ಅಧಿಕಾರಿಗಳನ್ನು ರಾಜಕೀಯ ಮತ್ತು ವೈಯಕ್ತಿಕ ಪ್ರಭಾವದಿಂದ ರಕ್ಷಿಸುವ ತತ್ವವನ್ನು ಆಧರಿಸಿದ ಶಾಶ್ವತ ವ್ಯವಸ್ಥೆಯಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಮಾದರಿ ವ್ಯವಸ್ಥೆ ಇದ್ದು, ಅಧ್ಯಕ್ಷರೊಂದಿಗೆ ಅಧಿಕಾರಿಗಳೂ ಬದಲಾಗುತ್ತಾರೆ. ಕಾರ್ಯದರ್ಶಿಗಳು ಪ್ರತ್ಯೇಕ ಇಲಾಖೆಗಳಂತೆ ಕಾರ್ಯ ನಿರ್ವಹಿಸಲಿದ್ದು, ಅವರಿಗೆ ಉಪ/ಸಹ ಕಾರ್ಯದರ್ಶಿಗಳು ಇರುತ್ತಾರೆ. ನಾವು ಇಂಗ್ಲೆಂಡಿನ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅಧಿಕಾರಿಗಳಿಗೆ ವಿಧಿ 311 ಮತ್ತು 312ರಡಿ ಸೇವಾವಧಿಯ ಖಾತ್ರಿ ನೀಡಲಾಗಿದೆ. ಅಮೆರಿಕದಂಥ ವ್ಯವಸ್ಥೆ ಸೂಕ್ತ ಎಂದು ಕೆಲವರು ವಾದಿಸುತ್ತಾರೆ. ಆದರೆ, ಈ ವ್ಯವಸ್ಥೆಯಿಂದ ಮೈತ್ರಿ ಸರಕಾರಗಳ ಯುಗದಲ್ಲಿ ಆಡಳಿತದಲ್ಲಿ ನಿರಂತರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಇದೆ. ಇಂಗ್ಲೆಂಡ್, ಅಮೆರಿಕ, ಬೆಲ್ಜಿಯಂ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ ಮತ್ತು ಇಂಗ್ಲೆಂಡ್ನಲ್ಲಿ ಹಿಂಬಾಗಿಲ ಪ್ರವೇಶ ಇದೆ. ನಿರ್ದಿಷ್ಟ ಹುದ್ದೆಯ ಅಗತ್ಯಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ, ಬೇರೆ ಬೇರೆ ಆಯ್ಕೆ ವಿಧಾನಗಳಿವೆ.

ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸರಕಾರದ ಸೇವೆಯಲ್ಲಿರುವವರು ಪಾಲ್ಗೊಳ್ಳಬಹುದು ಎಂಬ ಆದೇಶ ಹೊರಬಿದ್ದ ಬಳಿಕ ಹಿಂಬಾಗಿಲ ಪ್ರವೇಶದ ಜಾಹೀರಾತು ಪ್ರಕಟಗೊಂಡಿದ್ದು ಕಾಕತಾಳೀಯವೇ? ಆರೆಸ್ಸೆಸ್ ಮೊದಲಿನಂತೆ ಈಗ ಸೂಕ್ಷ್ಮತೆ ಪ್ರದರ್ಶಿಸುವ ಗೋಜಿಗೆ ಹೋಗುವುದಿಲ್ಲ; ಎಲ್ಲವೂ ನೇರಾನೇರ. ಆಡಳಿತ ನಿರ್ವಹಣೆಯಲ್ಲಿನ ರಾಚನಿಕ ದೋಷವನ್ನು ಹಿಂಬಾಗಿಲ ಪ್ರವೇಶದ ಮೂಲಕ ಸರಿಪಡಿಸಲು ಆಗುವುದಿಲ್ಲ ಮತ್ತು ಪ್ರತಿಭೆ-ಸಾಮಾಜಿಕ ನ್ಯಾಯಗಳು ಪ್ರತ್ಯೇಕ ವಿಷಯಗಳಲ್ಲ. ಯುಪಿಎಸ್ಸಿ ಈ ಮೊದಲು ಸ್ಥಾಪಿತ ಕಾರ್ಯನೀತಿಯೊಳಗಿನ ಚೌಕಟ್ಟಿನಲ್ಲೇ ತಜ್ಞರನ್ನು ನೇಮಿಸಿಕೊಂಡಿದೆ. ಹಾಲಿ ಎನ್ಡಿಎ ಸರಕಾರವು ಮನಮೋಹನ್ ಸಿಂಗ್, ಸ್ಯಾಮ್ ಪಿತ್ರೋಡಾ ಇಲ್ಲವೇ ನಂದನ್ ನಿಲೇಕಣಿಯಂಥ ಆಯ್ಕೆಗಳನ್ನು ಮಾಡುತ್ತಿತ್ತು ಎಂದು ನಂಬಲು ಸಾಧ್ಯವಿಲ್ಲ. ಸರಕಾರದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿರುವುದರಿಂದ, ಅದರ ಎಲ್ಲ ನಿರ್ಧಾರಗಳು ಚರ್ಚೆಗೆ ಕಾರಣವಾಗುತ್ತಿವೆ; ನಿಕಷಕ್ಕೆ ಒಡ್ಡಲ್ಪಡುತ್ತಿವೆ. ಮನುಷ್ಯರ ಬದುಕಿನಲ್ಲಿ ತಂತ್ರಜ್ಞಾನ ಗಮನಾರ್ಹ ಪಾತ್ರ ವಹಿಸುತ್ತಿರುವ ಜಗತ್ತಿನಲ್ಲಿ ತಾಂತ್ರಿಕ ಪರಿಣತಿ ಇರುವ ತಜ್ಞರ ಅಗತ್ಯವಿದೆ. ಆದರೆ, ಇಂಥ ಆಯ್ಕೆಗಳು ಉದ್ದೇಶವನ್ನು ಪೂರೈಸುವಂತಿರಬೇಕು ಮತ್ತು ಅಗತ್ಯಕ್ಕೆ ಅನುಗುಣವಾಗಿರಬೇಕು. ಹಲವು ಕೇಂದ್ರೀಯ ಮಂತ್ರಾಲಯಗಳಲ್ಲಿ ಈಗಲೂ ತಾಂತ್ರಿಕ ಪರಿಣತರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿರ್ದಿಷ್ಟ ಕಾರ್ಯಕ್ಕೆ ಸೀಮಿತರಾಗಬೇಕೇ ಹೊರತು, ಸಾಮಾನ್ಯ ಐಎಎಸ್ ಅಧಿಕಾರಿಗಳ ಕೆಲಸಗಳನ್ನು ಮಾಡಬೇಕೆಂದಿಲ್ಲ. ಯುಪಿಎಸ್ಸಿ ಇದೇ ಮೊದಲ ಬಾರಿಗೆ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರು/ಉಪ ಕಾರ್ಯದರ್ಶಿಗಳ ಹುದ್ದೆಗೆ ವಿದ್ಯಾರ್ಹತೆ ನಿಗದಿಪಡಿಸಿ, ಕೆಲಸದ ವಿವರ ನೀಡಿ ಅರ್ಜಿ ಕರೆದಿತ್ತು. ಇದು ಮೀಸಲು ಉಲ್ಲಂಘಿಸುತ್ತಿದ್ದುದರಿಂದ, ಆತಂಕ ಸೃಷ್ಟಿಸಿತು.

ಹಿಂಬಾಗಿಲ ಪ್ರವೇಶದ ಕುರಿತ ಜಾಹೀರಾತು ಹಿಂಪಡೆಯುವಿಕೆಯು ಎನ್ಡಿಎ 3.0 ಸರಕಾರವು ಮೊದಲಿನಂತೆ ಭಿನ್ನ ಅಭಿಪ್ರಾಯಗಳನ್ನು ಪುಡಿಗಟ್ಟಲು ಸಾಧ್ಯವಿಲ್ಲ ಎಂಬುದರ ಪ್ರತೀಕ. ಬಿಜೆಪಿಗೆ ಬಹುಮತವಿಲ್ಲದ ಕಾರಣ ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳ ಮಾತು ಕೇಳಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ. ಇಲ್ಲಿ ಕೇಳಲೇಬೇಕಿರುವ ಮುಖ್ಯ ಪ್ರಶ್ನೆ- ಐಎಎಸ್ ವ್ಯವಸ್ಥೆಯ ಸುಧಾರಣೆ ಯಾವಾಗ ಆರಂಭವಾಗುತ್ತದೆ? ಈ ವ್ಯವಸ್ಥೆಗೆ ಜನರಿಗೆ ಸ್ಪಂದಿಸುವ ವಂಶವಾಹಿಯನ್ನು ಸೇರಿಸುವುದು ಹೇಗೆ? ಒಂದುವೇಳೆ ಹಿಂಬಾಗಿಲ ಪ್ರವೇಶ ಅನಿವಾರ್ಯ ಎಂದಾದಲ್ಲಿ, ನೇಮಕಗಳು ಮೀಸಲು ಚೌಕಟ್ಟನ್ನು ಉಲ್ಲಂಘಿಸದಂತೆ ಮಾಡುವುದು ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಋತ

contributor

Similar News