ಯುರೋಪಿನಲ್ಲಿ ಬಲಪಂಥೀಯರ ಪ್ರಾಬಲ್ಯ ಹೆಚ್ಚಳ

ಜನಮತಗಣನೆ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವುದಾಗಿ ಮರೀನ್ ಹೇಳಿದ್ದಾರೆ. ಅದು ಅಷ್ಟು ಸುಲಭವಲ್ಲ. ಆದರೆ, ಬದಲಾವಣೆ ಹೊರತುಪಡಿಸಿ ಬೇರೇನೂ ಶಾಶ್ವತವಲ್ಲದ ಜಗತ್ತಿನಲ್ಲಿ ಕಾಲಕ್ರಮೇಣ ಬಲಪಂಥೀಯರ ಉಬ್ಬರ ಕಡಿಮೆಯಾಗಬಹುದು. ಫ್ರಾನ್ಸ್ ಚಂಡಮಾರುತದ ಪರಿಣಾಮಗಳು ದೀರ್ಘ ಕಾಲ ಉಳಿಯಲಿವೆ.

Update: 2024-07-12 05:20 GMT
Editor : Thouheed | Byline : ಋತ

ಯುರೋ 2024 ಫುಟ್ಬಾಲ್ ಟೂರ್ನಿ ಆರಂಭಕ್ಕೆ ಮುನ್ನ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಾಪೆ ಪತ್ರಿಕಾಗೋಷ್ಠಿಯಲ್ಲಿ, ‘‘ತೀವ್ರವಾದಿಗಳು ಅಧಿಕಾರದ ಹೊಸ್ತಿಲಲ್ಲಿ ಇದ್ದಾರೆ. ನನ್ನ ಮೌಲ್ಯ ಅಥವಾ ನಮ್ಮ ಮೌಲ್ಯ ಗಳಿಗೆ ಹೊಂದಿಕೆಯಾಗದ ದೇಶವನ್ನು ಪ್ರತಿನಿಧಿಸಲು ನಾನು ಇಚ್ಛಿಸುವುದಿಲ್ಲ’’ ಎಂದು ಹೇಳಿದ್ದರು. ಇನ್ನೊಂದು ಹೆಜ್ಜೆ ಮುಂದೆ ಹೋದ ಜೊತೆ ಆಟಗಾರ ಮಾರ್ಕಸ್ ತುರಂ, ‘‘ಫ್ರೆಂಚರು ಲಿ ಪೆನ್ ಅವರ ನ್ಯಾಷನಲ್ ರ್ಯಾಲಿ(ಎನ್‌ಆರ್)ಪಕ್ಷ ಬಲಗೊಳ್ಳದಂತೆ ನೋಡಿಕೊಳ್ಳಬೇಕು’’ ಎಂದು ಒತ್ತಾಯಿಸಿದ್ದರು. ನಮ್ಮಲ್ಲಿ ಒಬ್ಬನೇ ಒಬ್ಬ ಕ್ರೀಡಾಪಟು ಇಂಥ ಹೇಳಿಕೆ ನೀಡಿದ್ದನ್ನು, ಸರ್ವಾಧಿಕಾರಿ ಪ್ರವೃತ್ತಿ ಬಗ್ಗೆ ಧ್ವನಿಯೆತ್ತಿದ್ದನ್ನು ನೀವು ಕಂಡು, ಕೇಳಿದ್ದು ಇದೆಯೇ?

ಆದರೆ, ಫ್ರಾನ್ಸ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ತೀವ್ರ ಬಲಪಂಥೀಯರು 2ನೇ ಹಂತದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಎಡ ಪಂಥೀಯರು ಹೆಚ್ಚು ಸ್ಥಾನ ಗಳಿಸಿದ್ದರೂ, ಅವರಿಗೆ ಬಹುಮತದ ಕೊರತೆಯಿದೆ. ತೀವ್ರ ಬಲ ಪಂಥೀಯರಿಂದ ಆಗಬಹುದಾದ ಅಪಾಯದಿಂದ ಎಚ್ಚೆತ್ತ ಮತದಾರರು, ಸಾಲುಗಟ್ಟಿ ಮತ ಚಲಾಯಿಸಿದ್ದಾರೆ. 1981ರ ಬಳಿಕ ಇದೇ ಮೊದಲ ಬಾರಿ ಮತಪ್ರಮಾಣ ಹೆಚ್ಚಿದ್ದು, ಶೇ.59.7 ಮತದಾನ ಆಗಿದೆ. ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರ ಸೆಂಟ್ರಿಸ್ಟ್ ಪಕ್ಷ 2ನೇ ಸ್ಥಾನದಲ್ಲಿದೆ. 577 ಸ್ಥಾನಗಳ ನ್ಯಾಷನಲ್ ಅಸೆಂಬ್ಲಿಯಲ್ಲಿ ಬಹುಮತಕ್ಕೆ ಅಗತ್ಯವಿದ್ದ 289 ಸ್ಥಾನ ಯಾರಿಗೂ ಸಿಕ್ಕಿಲ್ಲ. ಜೀನ್ ಲಕ್ ಮೆಲೆಂಚನ್ ನೇತೃತ್ವದ ಎಡ ಪಕ್ಷಗಳ ಮೈತ್ರಿಕೂಟವಾದ ಎನ್‌ಪಿಎಫ್(ಫ್ರಾನ್ಸ್ ಅನ್‌ಬೋವ್ಡ್ ಪಾರ್ಟಿ, ಗ್ರೀನ್ ಪಾರ್ಟಿ ಮತ್ತು ಸೋಷಿಯಲಿಸ್ಟ್‌ಗಳ ಮೈತ್ರಿಕೂಟ) ಹೆಚ್ಚು ಸ್ಥಾನ ಗಳಿಸಿದ್ದರೂ(182), ಸರಕಾರ ರಚಿಸುವಷ್ಟು ಬಲ ಹೊಂದಿಲ್ಲ. ಇನ್ನಿತರ ಎಡಪಂಥೀಯರಿಗೆ 13, ಅಧ್ಯಕ್ಷ ಮ್ಯಾಕ್ರೋನ್ ಅವರ ಮೈತ್ರಿಕೂಟಕ್ಕೆ 168, ನ್ಯಾಷನಲ್ ರ್ಯಾಲಿಗೆ 143, ರಿಪಬ್ಲಿಕನ್‌ಗಳಿಗೆ 46 ಹಾಗೂ ಇತರರಿಗೆ 25 ಸ್ಥಾನಗಳು ಲಭ್ಯವಾಗಿವೆ. ಮ್ಯಾಕ್ರೋನ್ ಅವರ ಸಹವರ್ತಿ, ಪ್ರಧಾನಿ ಗೇಬ್ರಿಯಲ್ ಅಟ್ಟಲ್ ನೀಡಿದ ರಾಜೀನಾಮೆಯನ್ನು ಮ್ಯಾಕ್ರೋನ್ ಸ್ವೀಕರಿಸಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಇನ್ನಷ್ಟೇ ಆರಂಭವಾಗಬೇಕಿದ್ದು, ಇಂಥ ಸನ್ನಿವೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮ್ಯಾಕ್ರೋನ್ ಹೇಳಿದ್ದಾರೆ. ಅನಿಶ್ಚಿತ ಪರಿಸ್ಥಿತಿಯಲ್ಲಿ ಅಧ್ಯಕ್ಷ ಮ್ಯಾಕ್ರೋನ್ ತಮ್ಮ ಕಾರ್ಯನೀತಿಗೆ ವಿರುದ್ಧ ಇರುವ ಪ್ರಧಾನಿಯೊಂದಿಗೆ ದೇಶವನ್ನು ಮುನ್ನಡೆಸಬೇಕಾಗಿ ಬರಬಹುದು. ಪ್ರಧಾನಿ ಮತ್ತು ನ್ಯಾಷನಲ್ ಅಸೆಂಬ್ಲಿಯ ನಾಯಕ ಯಾರು ಎಂಬ ಗೊಂದಲದಲ್ಲಿರುವ ಯುರೋಪಿಯನ್ ಯೂನಿಯನ್ 2ನೇ ಅತಿ ದೊಡ್ಡ ಆರ್ಥಿಕತೆ ಗೊಂದಲಕ್ಕೆ ಸಿಲುಕಿದೆ.

ಇದೆಲ್ಲ ಆರಂಭಗೊಂಡಿದ್ದು ಹೇಗೆ?:

ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಮೊದಲ ಬಾರಿಗೆ ಪ್ರಕಟಗೊಂಡ 175 ವರ್ಷಗಳ ಬಳಿಕ ಯುರೋಪಿನಲ್ಲಿ ನವಫ್ಯಾಶಿಸ್ಟರು ಹಾಗೂ ತೀವ್ರ ಬಲಪಂಥೀಯರ ಯುಗ ಆರಂಭಗೊಂಡಂತೆ ಕಾಣುತ್ತಿದೆ. ಯುರೋಪಿಯನ್ ಯೂನಿಯನ್ ಚುನಾವಣೆ ಬಳಿಕ ತೀವ್ರ ಬಲಪಂಥೀಯರು ಹಿಡಿತ ಗಳಿಸಲಾರಂಭಿಸಿದರು. ಫ್ರಾನ್ಸ್ ಇದರ ಕೇಂದ್ರವಾಗಿತ್ತು. ಜೂನ್ 30ರಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮರೀನ್ ಲಿ ಪೆನ್ ನೇತೃತ್ವದ ನ್ಯಾಷನಲ್ ರ್ಯಾಲಿ ತನ್ನ ಮತಪ್ರಮಾಣವನ್ನು ಶೇ.32ಕ್ಕೆ ಹೆಚ್ಚಿಸಿಕೊಂಡಿತು. ಎಡ ಹಾಗೂ ಪ್ರಗತಿಪರ ಪಕ್ಷಗಳ ಒಕ್ಕೂಟವಾದ ನ್ಯೂ ಪಾಪ್ಯುಲರ್ ಫ್ರಂಟ್(ಎನ್‌ಪಿಎಫ್) ಶೇ.28 ಮತ ಗಳಿಸಿ 2ನೇ ಸ್ಥಾನ ಹಾಗೂ ಮ್ಯಾಕ್ರೋನ್ ಅವರ ಸೆಂಟ್ರಿಸ್ಟ್ ಮೈತ್ರಿಕೂಟ ಶೇ.21ರಷ್ಟು ಮತ ಗಳಿಸಿತು. 2ನೇ ಮಹಾಯುದ್ಧದ ಬಳಿಕ ತೀವ್ರ ಬಲಪಂಥೀಯ ಸರಕಾರ ಬರಬಹುದು ಎಂಬ ಆತಂಕ ಸೃಷ್ಟಿಯಾಯಿತು. ಒಂದು ವೇಳೆ ಎನ್‌ಆರ್ ಇಲ್ಲವೇ ಎಡ ಪಕ್ಷಗಳ ಮೈತ್ರಿ ಅಧಿಕಾರಕ್ಕೆ ಬಂದರೆ, ಮ್ಯಾಕ್ರೋನ್ ಅದೇ ಪಕ್ಷದ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. 2022ರಲ್ಲಿ ಮ್ಯಾಕ್ರೋನ್ ಮರು ಆಯ್ಕೆಯಾದಾಗ, ಅವರ ಮತಗಳಿಕೆ ಪ್ರಮಾಣ ಹೆಚ್ಚಲಿಲ್ಲ. ಬದಲಾಗಿ, ತೀವ್ರ ಬಲಪಂಥೀಯ ನ್ಯಾಷನಲ್ ರ್ಯಾಲಿಯ ಮತಗಳಿಕೆ ಹೆಚ್ಚಿತು.

ಕಳೆದ ತಿಂಗಳು(ಜೂನ್ 6-9) ನಡೆದ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಲ ಪಂಥೀಯರು ಹಾಗೂ ತೀವ್ರ ಬಲ ಪಂಥೀಯರು ಉತ್ತಮ ಸಾಧನೆ ಮಾಡಿದರು. ಯುರೋಪಿಯನ್ ಕನ್ಸರ್ವೇಟಿವ್ಸ್ ಮತ್ತು ರಿಫಾರ್ಮ್ ಗುಂಪು ಹಾಗೂ ಐಡೆಂಟಿಟಿ ಆ್ಯಂಡ್ ಡೆಮಾಕ್ರಸಿ ಗುಂಪು ತಮ್ಮ ಸ್ಥಾನ ಗಳಿಕೆಯನ್ನು 118ರಿಂದ 131ಕ್ಕೆ ಹೆಚ್ಚಿಸಿಕೊಂಡವು. ಎಡ ಪಂಥೀಯ- ಗ್ರೀನ್ ಗುಂಪಿನ ಬಲ 71ರಿಂದ 53ಕ್ಕೆ ಇಳಿಯಿತು.

ಆತಂಕಗೊಂಡ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರೋನ್, ತಕ್ಷಣ ಚುನಾವಣೆ ಘೋಷಿಸಿದರು. ಮ್ಯಾಕ್ರೋನ್ ಇಂಥ ಜೂಜಿಗೇಕೆ ಇಳಿದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತು. ಅವರು ಹೇಳಿದ್ದು-‘‘ಇದೊಂದು ಜವಾಬ್ದಾರಿಯುತ ಪರಿಹಾರ’’. ಉದಾರವಾದಿಗಳು-ಪ್ರಗತಿಪರರು ತಮಗೆ 2ನೇ ಸುತ್ತಿನಲ್ಲಿ ಮತ ನೀಡಬಹುದು ಎಂಬ ಭರವಸೆ ಅವರಿಗೆ ಇದ್ದಿತ್ತು. ಜನ ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ಆದರೆ, ಅವರ ಮೈತ್ರಿಕೂಟದ ಬದಲು ಎಡ ಪಂಥೀಯರು ಮೇಲುಗೈ ಸಾಧಿಸಿದರು.

ಯುರೋಪಿಯನ್ ಒಕ್ಕೂಟದ ಚುನಾವಣೆಯಲ್ಲಿ ಸೃಷ್ಟಿಯಾದ ಸಂಚಲನೆಯನ್ನು ತೀವ್ರ ಬಲಪಂಥೀಯರು ಬಳಸಿಕೊಳ್ಳಲು ಮ್ಯಾಕ್ರೋನ್ ಅವಕಾಶ ಮಾಡಿಕೊಟ್ಟರೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಹಲವು ವರ್ಷಗಳಿಂದ ಫ್ರಾನ್ಸ್ ಹಾಗೂ ಯುರೋಪನ್ನು ಬಾಧಿಸುತ್ತಿರುವ ರಾಜಕೀಯ ವಿಪ್ಲವ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಭಾವಿಸಿ, ಮ್ಯಾಕ್ರೋನ್ ಅನಗತ್ಯ ಮತ್ತು ಅಪಾಯಕಾರಿ ಜೂಜಿಗೆ ಮುಂದಾದರೇ? ಫ್ರಾನ್ಸಿನಲ್ಲಿ ತೀವ್ರ ಬಲಪಂಥೀಯ ಗುಂಪುಗಳು ಮುಖ್ಯವಾಹಿನಿಗೆ ಬಂದಿರುವುದು ಮಾತ್ರವಲ್ಲದೆ, ಪ್ರಬಲ ರಾಜಕೀಯ ಶಕ್ತಿಯಾಗುತ್ತಿವೆ.

ಬಲ ಪಂಥದೆಡೆಗೆ ಚಲನೆ:

ಹಿಂದೊಮ್ಮೆ ‘ಎನಿಥಿಂಗ್ ಬಟ್ ಲಿ ಪೆನ್’ ಎನ್ನುತ್ತಿದ್ದ ಫ್ರಾನ್ಸಿನಲ್ಲಿ ಇಂಥ ತಿರುವು ಬಂದಿದ್ದಾದರೂ ಹೇಗೆ? ಆರ್‌ಎನ್ ಇತಿಹಾಸ 1960ರಿಂದ ಆರಂಭವಾಗುತ್ತದೆ. ಆಲ್ಜೀರಿಯನ್ ಯುದ್ಧದ ಬಳಿಕ ಉತ್ತರ ಆಫ್ರಿಕಾದ ದೇಶಗಳು ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದುಕೊಂಡವು. 5ನೇ ರಿಪಬ್ಲಿಕ್(ಫ್ರಾನ್ಸಿನ ಈಗಿನ ಆಡಳಿತ ವ್ಯವಸ್ಥೆ) ರಚನೆಯಾಯಿತು. ಮೇ 1968ರಲ್ಲಿ ನಡೆದ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯು ನವ ನಾಝಿಗಳು ಹಾಗೂ ತೀವ್ರ ಬಲ ಪಂಥೀಯ ಗುಂಪುಗಳನ್ನುಒಟ್ಟಿಗೆ ತಂದಿತು. ಇವು 1969ರಲ್ಲಿ ನ್ಯೂಆರ್ಡರ್(ಎನ್‌ಒ) ಎಂಬ ಬ್ಯಾನರ್ ಅಡಿ ಒಗ್ಗೂಡಿದವು. ಈ ಗುಂಪು ರಾಜಕೀಯ ಪಕ್ಷಗಳ ನಿಷೇಧ ಮತ್ತು ಫ್ಯಾಶಿಸ್ಟ್ ರಾಜ್ಯದ ಸ್ಥಾಪನೆಯ ಉದ್ದೇಶ ಹೊಂದಿತ್ತು. ವಲಸೆ ವಿರೋಧ ಮತ್ತು ಶ್ವೇತ ವರ್ಣೀಯರನ್ನು ಸಂರಕ್ಷಿಸಬೇಕೆಂದು ಹೇಳುತ್ತಿತ್ತು. ಆದರೆ, ರಾಜಕೀಯ ಸಂವಾದದಲ್ಲಿ ಹಿಂದುಳಿಯಬಾರದು ಎಂದು ಚುನಾವಣೆ ರಾಜಕೀಯವನ್ನು ಪ್ರವೇಶಿಸಿತು. ಅಲ್ಜೀರಿಯದ ಯುದ್ಧದಲ್ಲಿ ಪಾಲ್ಗೊಂಡಿದ್ದ ಜೀನ್ ಮೇರಿ ಲಿ ಪೆನ್(44) ಅವರನ್ನು ಎನ್‌ಒದ ರಾಜಕೀಯ ಅಂಗವಾದ ನ್ಯಾಷನಲ್ ಫ್ರಂಟ್(ಎನ್‌ಎಫ್)ನ ನಾಯಕನೆಂದು ಆಯ್ಕೆ ಮಾಡಲಾಯಿತು. ಎನ್‌ಒ ಮತ್ತು ಎನ್‌ಎಫ್ ಸಂಬಂಧ ಹೆಚ್ಚು ಕಾಲ ತಾಳಿಕೆ ಬರಲಿಲ್ಲ. ಲಿ ಪೆನ್ ಪಕ್ಷವನ್ನು ಕೈಗೆ ತೆಗೆದುಕೊಂಡರು. ಎಫ್‌ಎನ್ 1973ರ ಚುನಾವಣೆಯಲ್ಲಿ ಶಿಕ್ಷಣವನ್ನು ರಾಜಕೀಯರಹಿತಗೊಳಿಸುವುದು, ಸಣ್ಣ ವ್ಯಾಪಾರಗಳ ರಕ್ಷಣೆ, ತಾಯಂದಿರು ಮನೆಯಲ್ಲೇ ಇರಬೇಕು ಇತ್ಯಾದಿ ಘೋಷಣೆ ಆಧಾರದಲ್ಲಿ ಪ್ರಚಾರ ನಡೆಸಿತು. 2011ರವರೆಗೆ ಪಕ್ಷಕ್ಕೆ ಹೆಚ್ಚಿನ ರಾಜಕೀಯ ಯಶಸ್ಸು ಸಿಗಲಿಲ್ಲ. ಲಿ ಪೆನ್ ಐದು ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಫಲ ಸ್ಪರ್ಧೆ ನಡೆಸಿದರು. ಮಾಧ್ಯಮಗಳು ಆತನನ್ನು ‘ಫ್ರೆಂಚ್ ಪ್ರಜಾಪ್ರಭುತ್ವಕ್ಕೆ ಕುತ್ತು’, ‘ಜನತಂತ್ರದ ದೆವ್ವ’ ಎಂದು ಹಳಿದವು. 2011ರಲ್ಲಿ ಅವರ ಮಗಳು ಮರೀನ್ ಲಿ ಪೆನ್, ಎಫ್‌ಎನ್ ಅಧ್ಯಕ್ಷರಾದರು. 2015ರಲ್ಲಿ ಲಿ ಪೆನ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ತಂದೆಯ ಸಂಪರ್ಕ ಸಂಪೂರ್ಣ ಕಡಿದುಕೊಂಡ ಮರೀನ್, ಪಕ್ಷದ ಹೆಸರನ್ನು ನ್ಯಾಷನಲ್ ರ್ಯಾಲಿ(ಎನ್‌ಆರ್) ಎಂದು ಬದಲಿಸಿದರು.

ಆದರೆ, ಸ್ಥಿತ್ಯಂತರ ಸುಲಭವಾಗಿರಲಿಲ್ಲ. ಆಕೆ ತಾನು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಹಿಂಪಡೆಯಬೇಕಾಯಿತು. ಆರ್‌ಎನ್‌ನ ಮುಖ್ಯ ಕಾರ್ಯನೀತಿ-ವಲಸೆ ತಡೆ ಮತ್ತು ಫ್ರೆಂಚರಿಗೆ ಆದ್ಯತೆ. ವಲಸೆಗೆ ಕಟ್ಟಾ ವಿರೋಧ; ಎಲ್ಲ ವಲಸಿಗರನ್ನು ಹೊರಹಾಕಬೇಕು, ಕಠಿಣ ಗಡಿ ನಿಯಂತ್ರಣ ಕ್ರಮಗಳು, ಹುಟ್ಟಿನಿಂದ ರಾಷ್ಟ್ರೀಯತೆಯ ಹಕ್ಕು ತೆಗೆದು ಹಾಕಬೇಕು ಇತ್ಯಾದಿ. ಕೋವಿಡ್-19, ರಶ್ಯ-ಉಕ್ರೇನ್ ಯುದ್ಧದಿಂದ ಇಂಧನ ಕೊರತೆ ಮತ್ತು ಜೀವನವೆಚ್ಚ ಹೆಚ್ಚಳದಿಂದ ಜನ ಬಲಪಂಥದೆಡೆಗೆ ಸರಿಯಲಾರಂಭಿಸಿದರು. ಇದರೊಟ್ಟಿಗೆ, ಉಗ್ರರ ಆಕ್ರಮಣ, 2020ರಲ್ಲಿ ಶಿಕ್ಷಕಿಯೊಬ್ಬರ ಹತ್ಯೆ, ಇತ್ತೀಚೆಗೆ ಪೊಲೀಸರಿಂದ 17 ವರ್ಷದ ಬಾಲಕನೊಬ್ಬನ ಹತ್ಯೆಯಿಂದ ದೇಶದ ಸುರಕ್ಷತೆ ಮತ್ತು ಸಾಂಸ್ಕೃತಿಕ ಬಂಧಕ್ಕೆ ಧಕ್ಕೆ ಬಂದಿದೆ ಎಂಬ ಭಾವನೆ ಜನರಲ್ಲಿದೆ. ಆರ್‌ಎನ್ ವಕ್ತಾರರು ‘ಮುಸ್ಲಿಮರು ಫ್ರೆಂಚ್ ಸಂಸ್ಕೃತಿಯೊಂದಿಗೆ ಏಕತ್ರಗೊಳ್ಳುತ್ತಿಲ್ಲ; ರಾಜಕೀಯ ಹಾಗೂ ಧರ್ಮ ಪ್ರತ್ಯೇಕವಾಗಿರಬೇಕು ಎಂಬ ಫ್ರೆಂಚರ ಪರಿಕಲ್ಪನೆಯನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಸದಾ ಕಾಲ ಟೀಕಿಸುತ್ತಿರುತ್ತಾರೆ. ಉದ್ಯೋಗ, ವಸತಿ ಮತ್ತು ಸಾಮಾಜಿಕ ಯೋಜನೆಗಳಲ್ಲಿ ಫ್ರೆಂಚರಿಗೆ ಆದ್ಯತೆ ಎಂದು ಪಕ್ಷ ಹೇಳುತ್ತದೆ. ಇದರಿಂದ ಆರ್‌ಎನ್ ಜನಪ್ರಿಯತೆ ಹೆಚ್ಚಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಶೇ.34ರಷ್ಟಿದ್ದ ಮತಗಳಿಕೆ 2022ರಲ್ಲಿ ಶೇ.41ಕ್ಕೆ ಹೆಚ್ಚಳಗೊಂಡಿದೆ. ಲಿಮಾಂಡೆ ನಡೆಸಿದ ಸಮೀಕ್ಷೆಯಲ್ಲಿ ಶೇ.45 ಮಂದಿ ಆರ್‌ಎನ್ ಪ್ರಜಾಪ್ರಭುತ್ವಕ್ಕೆ ಮಾರಕವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆರ್‌ಎನ್ ರಕ್ಷಣಾತ್ಮಕ ಆರ್ಥಿಕ ಕಾರ್ಯನೀತಿಯೊಡನೆ ಸಾರ್ವಜನಿಕ ವೆಚ್ಚ ಹೆಚ್ಚಳ, ನಿವೃತ್ತಿ ವಯಸ್ಸು ಹೆಚ್ಚಳವನ್ನು ಕಾಲಕ್ರಮೇಣ ವಜಾಗೊಳಿಸುವುದು, ಇಂಧನ, ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಮೇಲಿನ ವ್ಯಾಟ್ ಕಡಿಮೆಗೊಳಿಸುವುದಾಗಿ ಹೇಳಿದೆ. ದಕ್ಷಿಣ ಫ್ರಾನ್ಸಿನ ಗ್ರಾಮೀಣ ನಗರಗಳು ಹಾಗೂ ಉತ್ತರದ ಕೈಗಾರಿಕಾ ಪ್ರಾಂತದಲ್ಲಿ ಪಕ್ಷ ಹಿಡಿತ ಸಾಧಿಸಿದೆ. ಮರೀನ್ ಉತ್ತರಾಧಿಕಾರಿಯಾಗಿ ಜೋರ್ಡಾನ್ ಬಾರ್ಡೆಲ್ಲ(28) ನೇಮಕಗೊಂಡ ಬಳಿಕ ಬಿಳಿ ಕಾಲರ್ ಕಾರ್ಮಿಕರು ಪಕ್ಷದೆಡೆಗೆ ಸರಿದಿದ್ದಾರೆ.

ವಲಸೆಗೆ ವಿರೋಧ ಸಾಮಾನ್ಯ ಅಂಶ:

ಆಫ್ರಿಕಾ ಮತ್ತು ಏಶ್ಯದ ವಲಸೆಗಾರರ ಸಂಖ್ಯೆ ಯುರೋಪಿನೆಲ್ಲೆಡೆ ಹೆಚ್ಚುತ್ತಿದ್ದು, ಅವರ ವಿರುದ್ಧ ಪ್ರತಿಭಟಿಸುವ ತೀವ್ರ ಬಲಪಂಥೀಯರು ಪ್ರಭಾವಶಾಲಿಗಳಾಗುತ್ತಿದ್ದಾರೆ. ಇದು ವಸಾಹತುಶಾಹಿಯ ನಂತರದ ಪರಿಣಾಮ. ದಶಕಗಳಿಂದ ನಡೆಯುತ್ತಿದ್ದ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ವೇಗ ಗಳಿಸಿಕೊಂಡಿದೆ.

ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಹಂಗರಿ, ನೆದರ್‌ಲ್ಯಾಂಡ್, ಪೋಲ್ಯಾಂಡ್, ಸ್ವೀಡನ್, ಇಂಗ್ಲೆಂಡಿನಲ್ಲಿ ಬಲಪಂಥೀಯರ ಮತಗಳಿಕೆ ಪ್ರಮಾಣ ಹೆಚ್ಚಳಗೊಂಡಿದೆ. ಬೆಲ್ಜಿಯಂ(ಫ್ಲೆಮಿಶ್ ಬ್ಲಾಕ್), ಫ್ರಾನ್ಸ್ (ನ್ಯಾಷನಲ್ ರ್ಯಾಲಿ), ಜರ್ಮನಿ(ಆಲ್ಟರ್ನೇಟಿವ್ ಜರ್ಮನಿ), ಹಂಗರಿ(ಫಿ ಡೆಜ್), ಇಟಲಿ(ಬ್ರದರ್ಸ್ ಆಫ್ ಇಟಲಿ ಮತ್ತು ಗೋ ಇಟಲಿ), ನೆದರ್‌ಲ್ಯಾಂಡ್ಸ್(ಫೋರಂ ಫಾರ್ ಡೆಮಾಕ್ರಸಿ ಮತ್ತು ಪಾರ್ಟಿ ಫಾರ್ ಫ್ರೀಡಂ), ಸ್ವೀಡನ್(ಸ್ವೀಡನ್ ಡೆಮಾಕ್ರಾಟ್ಸ್) ಮತ್ತು ಇಂಗ್ಲೆಂಡ್(ಯುಕೆ ಐಪಿ)ಯಂಥ ಬಲಪಂಥೀಯ ಪಕ್ಷಗಳು ಹೆಚ್ಚು ಮತ ಗಳಿಸಿವೆ(ಮಾಹಿತಿ-ಪ್ಯೂ ರಿಸರ್ಚ್ ಸೆಂಟರ್ ಮತ್ತು Pಚಿಡಿಟಉov).

ಇಂಗ್ಲೆಂಡಿನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಲಸೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ರಿಷಿ ಸುನಕ್ ಮತ್ತು ಟೋರಿಗಳ ಗುಂಪು ಅಧಿಕಾರ ಕಳೆದುಕೊಂಡಿವೆ. ಆದರೆ, ಲೇಬರ್ ಪಕ್ಷವು ವಲಸೆಯನ್ನು ಬೆಂಬಲಿಸುವುದಿಲ್ಲ. 90ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಹೋರಾಟದಿಂದ ಆರಂಭಿಸಿ, ಇಸ್ರೇಲ್ ನರಮೇಧದ ವಿರುದ್ಧ ಹೋರಾಡುತ್ತಿರುವ ಜೆರೆಮಿ ಕಾರ್ಬಿನ್, ಸಮಾಜವಾದದ ಪರ ನಿಲುವಿ ನಿಂದಲೇ ಟೀಕೆಗೊಳಗಾದವರು. ಅವರು ಫೆಲೆಸ್ತೀನ್ ಬೆಂಬಲಿಗರು. ಚುನಾವಣೆಯಲ್ಲಿ ಕಾರ್ಬಿನ್ ಮತ್ತು ಫೆಲೆಸ್ತೀನ್ ಬೆಂಬಲಿಸುವ ನಾಲ್ವರು ಆಯ್ಕೆಯಾಗಿದ್ದಾರೆ. ಕಾರ್ಬಿನ್ ಅವರನ್ನು ಹಾಲಿ ಪ್ರಧಾನಿ ಕಿಯರ್ ಸ್ಟಾರ್ಮರ್ ಪಕ್ಷದಿಂದ ಹೊರಹಾಕಿದ್ದರು.

ಇಟಲಿಯಲ್ಲಿ ಅಕ್ಟೋಬರ್ 2022ರಲ್ಲಿ ತೀವ್ರ ಬಲಪಂಥೀಯ ನಾಯಕಿ ಜಾರ್ಜಿಯಾ ಮೆಲೋನಿ(ಇತ್ತೀಚೆಗೆ ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ ಅವರೊಟ್ಟಿಗೆ ವೀಡಿಯೊ ಮಾಡಿದವರು) ಅಧಿಕಾರಕ್ಕೆ ಬಂದರು. ಬೆನಿಟೋ ಮುಸ್ಸೋಲಿನಿ ಬಳಿಕ 100 ವರ್ಷಗಳ ನಂತರ ಅಧಿಕಾರಕ್ಕೆ ಬಂದ ತೀವ್ರವಾದಿ ಮೆಲೋನಿ. ಸ್ವೀಡನ್‌ನಿಂದ ಪೋರ್ಚುಗಲ್, ಜರ್ಮನಿಯಿಂದ ಸ್ಪೇನ್, ನೆದರ್‌ಲ್ಯಾಂಡ್ಸ್‌ನಿಂದ ಆಸ್ಟ್ರಿಯಾದವರೆಗೆ ತೀವ್ರ ಬಲಪಂಥೀಯರು ಬೇರುಗಳನ್ನು ಬಿಡುತ್ತಿದ್ದಾರೆ. ವಲಸೆ ಮತ್ತು ಯುರೋ-ಯುರೋಪಿಯನ್ ಯೂನಿಯನ್ ಬಗ್ಗೆ ಸಂಶಯ(ಯುರೋಸೆಪ್ಟಿಸಿಸಂ)ದ ನಿರ್ದಿಷ್ಟ ಅಂಶಗಳನ್ನು ಇವರೆಲ್ಲರೂ ಹಂಚಿಕೊಂಡಿದ್ದಾರೆ. ಪ್ಯೂ ಸಮೀಕ್ಷೆ ಪ್ರಕಾರ, ಕೆಲವು ದೇಶಗಳಲ್ಲಿ ನೇಟೊ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮತ್ತು ಉಕ್ರೇನ್ ಪ್ರಧಾನಿ ವೊಲೊಡಿಮಿರ್ ಝೆಲೆನ್ಸ್‌ಕಿ ಬಗ್ಗೆ ಸದಭಿಪ್ರಾಯ ಕಡಿಮೆ ಆಗುತ್ತಿದೆ. ರಶ್ಯದ ಅಧ್ಯಕ್ಷ ಪುಟಿನ್ ಬಗ್ಗೆ ನಂಬಿಕೆ ಹೆಚ್ಚುತ್ತಿದೆ. ಇದ್ಯಾವುದೂ ಜನತಂತ್ರದ ಪರವಾದ ಬೆಳವಣಿಗೆಗಳಲ್ಲ.

ಫ್ರಾನ್ಸಿನ ಫುಟ್ಬಾಲ್ ತಂಡದಲ್ಲಿ ಎಂಬಾಪೆ, ತಿಯರಿ ಹೆನ್ರಿ ಮತ್ತು ಝೈದಾನ್ ಮತ್ತಿತರ ಆಫ್ರಿಕಾ, ಅರಬ್ ಮತ್ತಿತರ ಬೇರೆ ಬೇರೆ ರಾಷ್ಟ್ರಗಳ ಆಟಗಾರರು ಇದ್ದಾರೆ. ಆರ್‌ಎನ್ ಕಾರ್ಯನೀತಿಯನ್ನು ಒಪ್ಪುವ ಜನ ಹೆಚ್ಚುತ್ತಿರುವುದು ಒಳ್ಳೆಯ ಸೂಚನೆ ಅಲ್ಲ. ಅದು ಪ್ರತಿಪಾದಿಸುವ ‘ಫ್ರೆಂಚರು ಮೊದಲು’ ನೀತಿಯನ್ನು ಸಂವಿಧಾನ ಒಪ್ಪುವುದಿಲ್ಲ. ಜನಮತಗಣನೆ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವುದಾಗಿ ಮರೀನ್ ಹೇಳಿದ್ದಾರೆ. ಅದು ಅಷ್ಟು ಸುಲಭವಲ್ಲ. ಆದರೆ, ಬದಲಾವಣೆ ಹೊರತುಪಡಿಸಿ ಬೇರೇನೂ ಶಾಶ್ವತವಲ್ಲದ ಜಗತ್ತಿನಲ್ಲಿ ಕಾಲಕ್ರಮೇಣ ಬಲಪಂಥೀಯರ ಉಬ್ಬರ ಕಡಿಮೆಯಾಗಬಹುದು. ಫ್ರಾನ್ಸ್ ಚಂಡಮಾರುತದ ಪರಿಣಾಮಗಳು ದೀರ್ಘ ಕಾಲ ಉಳಿಯಲಿವೆ. ಮ್ಯಾಕ್ರೋನ್ ಅವರ ಕೇಂದ್ರೀಕೃತ ರಾಜಕೀಯ ತೀವ್ರ ಬಲಪಂಥೀಯ ಅಲೆಯನ್ನು ಕೆಲ ಕಾಲ ಮಾತ್ರ ತಡೆಯಬಹುದು. ಆನಂತರ, ಏನು?

ಕರೀಮ್ ಬೆಂಝಮಾ ಹೇಳುತ್ತಾರೆ, ‘‘ನಾನು ಗೋಲು ಹೊಡೆದರೆ ಫ್ರೆಂಚ್; ಇಲ್ಲವಾದರೆ, ಅರಬ್’’. ಇಂಥ ಮನಸ್ಥಿತಿಯನ್ನು ಬದಲಿಸುವುದು ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News