ಲಿಂಗ ಅಸಮಾನತೆಗೆ ತಕ್ಷಣದ ಮತ್ತು ಸುಲಭ ಪರಿಹಾರವಿಲ್ಲ
2023ರಲ್ಲಿ ಅರ್ಥಶಾಸ್ತ್ರಗಳ ವಿಜ್ಞಾನದಲ್ಲಿ ನೊಬೆಲ್ ಪುರಸ್ಕೃತರಾದ ಕ್ಲಾಡಿಯಾ ಗೋಲ್ಡಿನ್ ತಮ್ಮ ಪುಸ್ತಕ ‘ಕೆರಿಯರ್ ಆ್ಯಂಡ್ ಫ್ಯಾಮಿಲಿ-ವುಮೆನ್ಸ್ ಸೆಂಚುರಿ ಲಾಂಗ್ ಜರ್ನಿ ಟುವರ್ಡ್ಸ್ ಈಕ್ವಾಲಿಟಿ’ಯಲ್ಲಿ ಮಹಿಳೆಯರು ಉದ್ಯೋಗ-ಕೌಟುಂಬಿಕ ಸಮಸ್ಯೆಯನ್ನು ಹೇಗೆ ಸರಿದೂಗಿಸಿದರು; 20ನೇ ಶತಮಾನದಲ್ಲಿ ಲಿಂಗ ಸಮಾನತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, ನೌಕರಿಯಲ್ಲಿರುವ ದಂಪತಿ ನಡುವೆ ಸಮಾನತೆ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ವಿಶ್ಲೇಷಿಸಿದ್ದಾರೆ.
ಸಂವಿಧಾನ ಲಿಂಗಾಧರಿತ ತಾರತಮ್ಯವನ್ನು ನಿಷೇಧಿಸಿದ್ದರೂ, ಲಿಂಗ ಅಸಮಾನತೆ ಮತ್ತು ವೇತನ ತಾರತಮ್ಯ ಮುಂದುವರಿದಿದೆ. 2010ರಲ್ಲಿ 25-34 ವರ್ಷ ವಯಸ್ಸಿನ ಮಹಿಳೆಯರು ತಮ್ಮದೇ ವಯಸ್ಸಿನ ಪುರುಷರಿಗೆ ಹೋಲಿಸಿದರೆ, ಶೇ.92ರಷ್ಟು ವೇತನ ಪಡೆಯುತ್ತಿದ್ದರು; 2022ರಲ್ಲಿ ಇದು ಶೇ.84ಕ್ಕೆ ಕುಸಿಯಿತು. ಸಂವಿಧಾನದ ವಿಧಿ 39(ಡಿ) ಮತ್ತು 42 ಮಹಿಳೆಯರಿಗೆ ಸಮಾನ ವೇತನವನ್ನು ಖಾತ್ರಿಗೊಳಿಸಿವೆ. ವಿಧಿ 15(1) ಮತ್ತು 15(2)ರ ಅನ್ವಯ ಲಿಂಗಾಧರಿತ ತಾರತಮ್ಯ ಕೂಡದು. 1948ರಲ್ಲಿ ಕನಿಷ್ಠ ವೇತನ ಕಾಯ್ದೆ ಜಾರಿಗೊಂಡಿತು. 1976ರ ಸಮಾನ ವೇತನ ಕಾಯ್ದೆ ಅನ್ವಯ, ಖಾಸಗಿ-ಸರಕಾರಿ ಸೇವೆಗಳಲ್ಲಿ ನಿಯಮಿತ/ಹಂಗಾಮಿ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. 2017ರಲ್ಲಿ ಮಹಿಳೆಯರಿಗೆ ಹೆರಿಗೆ ರಜೆಯನ್ನು 26 ವಾರಕ್ಕೆ ಹೆಚ್ಚಿಸಲಾಯಿತು. 2013ರಲ್ಲಿ ಜಾರಿಗೊಂಡ ಲೈಂಗಿಕ ಕಿರುಕುಳ ಕಾಯ್ದೆಯನ್ವಯ, ಲೈಂಗಿಕ ಕಿರುಕುಳ ದೂರುಗಳ ವಿಚಾರಣೆ ಮತ್ತು ಶಿಕ್ಷೆ ವಿಧಿಸಲು ವ್ಯವಸ್ಥೆಯೊಂದನ್ನು ರಚಿಸಬೇಕು. ಇಷ್ಟೆಲ್ಲ ಶಾಸನಾತ್ಮಕ ನಡೆಗಳ ಬಳಿಕವೂ ವೇತನ ತಾರತಮ್ಯವನ್ನು ಸರಿದೂಗಿಸಲು 70 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ವೇತನ ತಾರತಮ್ಯಕ್ಕೆ ಶಿಕ್ಷಣ, ಕೌಶಲ ಇಲ್ಲವೇ ಅನುಭವದ ಕೊರತೆ ಕಾರಣ ಆಗಬಹುದಾದರೂ, ಮುಖ್ಯ ಕಾರಣ ಲಿಂಗಾಧರಿತ ತಾರತಮ್ಯ. ಲಿಂಗಾಧರಿತ ತಾರತಮ್ಯವನ್ನು ಸಂವಿಧಾನ ನಿಷೇಧಿಸಿದ್ದರೂ, ಲಿಂಗ ವೇತನ ಕಂದರ ಮುಚ್ಚಿಲ್ಲ. ಇದಕ್ಕೆ ಹಲವು ಕಾರಣಗಳಿವೆ: *ಮಹಿಳೆಯರು ಕಡಿಮೆ ವೇತನದ ಪಾಲನೆ ಮತ್ತು ಆಡಳಿತಾತ್ಮಕ ಕೆಲಸ ಆಯ್ಕೆ ಮಾಡಿಕೊಂಡರೆ, ಪುರುಷರು ಹೆಚ್ಚು ವೇತನದ ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಹಣಕಾಸು ಉದ್ಯಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ; *ಮಹಿಳೆಯರ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಪುರುಷರಷ್ಟೇ ಇದ್ದರೂ, ನೇಮಕ, ಭಡ್ತಿ ಹಾಗೂ ವೇತನದಲ್ಲಿ ತಾರತಮ್ಯ ಎದುರಿಸುತ್ತಾರೆ; *ಉದ್ಯೋಗಾವಕಾಶ ಕಡಿಮೆ ಇರುವುದರಿಂದ, ಹೆಚ್ಚು ವೇತನ ಅಥವಾ ಭತ್ತೆಗೆ ಸಂಧಾನ ನಡೆಸುವುದಿಲ್ಲ; * ಪಿತೃಪ್ರಧಾನ ವ್ಯವಸ್ಥೆಯು ಶಿಕ್ಷಣ/ತರಬೇತಿಗೆ ಅವಕಾಶ ಕೊಡುವುದಿಲ್ಲ. ಇದರಿಂದ ಹೆಚ್ಚು ವೇತನದ ಹುದ್ದೆಗಳಿಗೆ ಅಗತ್ಯವಾದ ಕೌಶಲ ಇಲ್ಲವೇ ಪದವಿ ಪಡೆಯಲು ಆಗುವುದಿಲ್ಲ; * ಕುಟುಂಬದ ಹೊಣೆಗಾರಿಕೆ ಮತ್ತು ಸುರಕ್ಷತೆಯ ಕೊರತೆಯಿಂದ ರಾತ್ರಿ ಪಾಳಿಯಲ್ಲಿ ಇಲ್ಲವೇ ಹೆಚ್ಚುವರಿ ಕಾಲಾವಧಿ(ಓವರ್‌ಟೈಮ್) ಕೆಲಸ ಮಾಡಲು ಆಗುವುದಿಲ್ಲ; * ಕೆಲಸದ ಸ್ಥಳಕ್ಕೆ ಹೋಗಿಬರಲು ಸಾರಿಗೆ ಸೌಲಭ್ಯ ಇಲ್ಲದಿದ್ದಲ್ಲಿ, ಅಂಥ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ವಯಸ್ಸಾದಂತೆ ಲಿಂಗ ವೇತನ ಕಂದರ ಹೆಚ್ಚುತ್ತ ಹೋಗುತ್ತದೆ. ಹೀಗಾಗಿ, ಯುವತಿಯರಿಗಿಂತ ಹಿರಿಯ ವಯಸ್ಕರು ಅಧಿಕ ವೇತನ ತಾರತಮ್ಯ ಅನುಭವಿಸುತ್ತಾರೆ. ಪುರುಷರಿಗೆ ಹೋಲಿಸಿದರೆ, 18-30 ವರ್ಷ ವಯಸ್ಸಿನ ಮಹಿಳೆಯರು ಶೇ.23.7ರಷ್ಟು ಹಾಗೂ 41ಕ್ಕಿಂತ ಹೆಚ್ಚು ವಯಸ್ಸಿನವರು ಶೇ.30.24ರಷ್ಟು ಕಡಿಮೆ ವೇತನ ಪಡೆದಿದ್ದರು. ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಕಚೇರಿ(ಎನ್‌ಎಸ್‌ಒ) ವರದಿಯನ್ವಯ ಭಾರತದಲ್ಲಿ ವೇತನ ತಾರತಮ್ಯ ಶೇ.28ರಷ್ಟು ಇದೆ. ಇದು 1993-94ರಲ್ಲಿ ಶೇ.48 ಇತ್ತು(2018-19ರ ಮಾಹಿತಿ).
ಕೋವಿಡ್-19 ಆರ್ಥಿಕತೆ ಮೇಲೆ ತೀವ್ರ ಆಘಾತವುಂಟು ಮಾಡಿತು; ಮಹಿಳೆಯರು ಉದ್ಯೋಗ ಮತ್ತು ಆದಾಯ ನಷ್ಟದಿಂದ ಹೆಚ್ಚು ಸಮಸ್ಯೆ ಅನುಭವಿಸಿದರು. ಅವರ ಕಾರ್ಯಕ್ಷೇತ್ರಗಳ ಮೇಲೆ ಕೋವಿಡ್ ಪರಿಣಾಮ ಬೀರಿತು ಮತ್ತು ಕೌಟುಂಬಿಕ ಜವಾಬ್ದಾರಿ ಹೆಚ್ಚಿತು. ಹೆಚ್ಚು ಸಂಖ್ಯೆಯ ಮಹಿಳೆಯರು ಮಕ್ಕಳ ಪಾಲನೆಗೆ ಪೂರ್ಣಾವಧಿ ಮೀಸಲಿಡಬೇಕಾಯಿತು. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ‘ಜಾಗತಿಕ ವೇತನ ವರದಿ 2020-21’ರ ಪ್ರಕಾರ, ಈ ಅವಧಿಯಲ್ಲಿ ಮಹಿಳೆಯರ ಒಟ್ಟು ವೇತನ ಕುಸಿಯಿತು. ಆವರ್ತ ಕಾರ್ಮಿಕ ಬಲದ ಸಮೀಕ್ಷೆ(ಪಿಎಲ್‌ಎಫ್‌ಎಸ್) 2020-21ರ ಅನ್ವಯ, ಕೋವಿಡ್ ಕಾಲದಲ್ಲಿ ವೇತನ ಕಂದರ ಶೇ.7ರಷ್ಟು ಹೆಚ್ಚಿತು; ದಶಕಗಳ ಕಾಲದ ಪ್ರಗತಿಯನ್ನು ಕೋವಿಡ್ ಉಲ್ಟಾ ಮಾಡಿಬಿಟ್ಟಿತು.
ಲೋಕಸಭೆಯಲ್ಲಿ ಮಹಿಳಾ ಮೀಸಲು ಕಾಯ್ದೆ ಅಂಗೀಕರಿಸಲ್ಪಟ್ಟಿದೆ. ವ್ಯಂಗ್ಯವೆಂದರೆ, ಮಹಿಳಾ ಪರ ಕಾನೂನು ರೂಪಿಸಬೇಕಿರುವ ಶಾಸಕಾಂಗದಲ್ಲೂ ತೀವ್ರ ಲಿಂಗ ಅಸಮಾನತೆಯಿದೆ. 542 ಸಂಸದರಲ್ಲಿ 78 ಮತ್ತು ರಾಜ್ಯಸಭೆಯ 224 ಸದಸ್ಯರಲ್ಲಿ 24 ಮಹಿಳೆಯರಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಅತಿ ಕಡಿಮೆ ಶಾಸಕಿಯರಿದ್ದು, 224ರಲ್ಲಿ ಕೇವಲ 10 ಮಂದಿ ಮಾತ್ರ ಮಹಿಳೆಯರು(ಕಾಂಗ್ರೆಸ್ 4, ಬಿಜೆಪಿ 3, ಜೆಡಿಎಸ್ 2 ಮತ್ತು ಪಕ್ಷೇತರ ಒಬ್ಬರು).
ಸಮಾನತೆಗೆ ದೀರ್ಘ ಪಯಣ
ಶತಮಾನದ ಹಿಂದೆ ಪದವೀಧರೆಯೊಬ್ಬಳು ಉದ್ಯೋಗ ಇಲ್ಲವೇ ವೈವಾಹಿಕ ಜೀವನ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಎರಡನ್ನೂ ಆಯ್ದುಕೊಳ್ಳುವವರು ಹೆಚ್ಚಿದ್ದಾರೆ. ಆದರೆ, ಅವರು ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಎದುರಿಸುವ ಸವಾಲುಗಳು ಕಡಿಮೆಯಾಗಿಲ್ಲ. 2023ರಲ್ಲಿ ಅರ್ಥಶಾಸ್ತ್ರಗಳ ವಿಜ್ಞಾನದಲ್ಲಿ ನೊಬೆಲ್ ಪುರಸ್ಕೃತರಾದ ಕ್ಲಾಡಿಯಾ ಗೋಲ್ಡಿನ್ ತಮ್ಮ ಪುಸ್ತಕ ‘ಕೆರಿಯರ್ ಆ್ಯಂಡ್ ಫ್ಯಾಮಿಲಿ-ವುಮೆನ್ಸ್ ಸೆಂಚುರಿ ಲಾಂಗ್ ಜರ್ನಿ ಟುವರ್ಡ್ಸ್ ಈಕ್ವಾಲಿಟಿ’ಯಲ್ಲಿ ಮಹಿಳೆಯರು ಉದ್ಯೋಗ-ಕೌಟುಂಬಿಕ ಸಮಸ್ಯೆಯನ್ನು ಹೇಗೆ ಸರಿದೂಗಿಸಿದರು; 20ನೇ ಶತಮಾನದಲ್ಲಿ ಲಿಂಗ ಸಮಾನತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, ನೌಕರಿಯಲ್ಲಿರುವ ದಂಪತಿ ನಡುವೆ ಸಮಾನತೆ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ವಿಶ್ಲೇಷಿಸಿದ್ದಾರೆ. ಅವರ ಚಿಂತನೆಯ ಕೆಲವು ಎಳೆಗಳು ಇಂತಿವೆ;
ನಿಮ್ಮ ಪುಸ್ತಕ ಮಹಿಳೆಯರ ಉದ್ಯೋಗ-ಕುಟುಂಬ ಕುರಿತ ಆಶಯಗಳ ಬಗ್ಗೆ ಇದೆ. ಮಹಿಳೆಯರಿಗೆ ಸಮಾನತೆ ಎನ್ನುವುದು ಸಿಗುವುದೇ?
-ಒಂದೇ ವೃತ್ತಿಯಲ್ಲಿರುವ ಮಹಿಳೆ-ಪುರುಷರ ಗಳಿಕೆ ಸಮಾನವಾಗಿದ್ದರೆ, ಅದನ್ನು ಸಮಾನತೆ ಎನ್ನಬಹುದು. ಈಗಿನ ವೇಗವನ್ನು ಪರಿಗಣಿಸಿದರೆ, ಈ ಜೀವಿತಾವಧಿಯಲ್ಲಿ ಅಂಥ ಸಮಾನತೆ ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಇದು ಆಶಾದಾಯಕ ಉತ್ತರವಲ್ಲ. ಆದರೆ, ಇಂಥ ಅಸಮಾನತೆಗೆ ಕಾರಣವೇನು ಎನ್ನುವುದು ಗೊತ್ತಿದೆ. ಗಳಿಕೆಯಲ್ಲಿನ ಕಂದರವು ಗಳಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ.
ಅಸಮಾನತೆ ಎರಡು ವಿಭಾಗದಲ್ಲಿ ಇರುತ್ತದೆ; ವೃತ್ತಿ ಮತ್ತು ಕುಟುಂಬ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬದಲ್ಲಿ ಸಮಾನತೆ ಸಾಧ್ಯವಾದರೆ, ವೇತನ ಸಮಾನತೆ ತನ್ನಿಂತಾನೇ ಸಾಧ್ಯವಾಗುತ್ತದೆ. ಮಹಿಳೆಯರು ಮಕ್ಕಳಿಗೆ ಸಮಯ ನೀಡಬೇಕಾಗುತ್ತದೆ; ಕೆಲಸಕ್ಕೂ ಸಮಯ ಕೊಡಬೇಕಾಗುತ್ತದೆ. ಮನೆಗೆಲಸ-ಮಕ್ಕಳ ದೇಖರೇಖಿಗೆ ಹೆಚ್ಚು ಸಮಯ ನೀಡಿದರೆ, ಕೆಲಸಕ್ಕೆ ಸಮಯ ಕಡಿಮೆಯಾಗುತ್ತದೆ. ಇದರಿಂದ ಗಳಿಕೆ ಕಡಿಮೆಯಾಗುತ್ತದೆ. ಮಕ್ಕಳ ಪಾಲನೆಯಲ್ಲಿನ ಅಸಮಾನತೆಗೆ ಚಾರಿತ್ರಿಕ, ಸಾಮಾಜಿಕ, ಸಂಪ್ರದಾಯ/ಆಚರಣೆ ಮತ್ತು ವೈಯಕ್ತಿಕ ಕಾರಣಗಳಿರುತ್ತವೆ. ಪುರುಷರು ಮನೆಗೆಲಸ-ಮಕ್ಕಳ ಪಾಲನೆಯನ್ನು ಹಂಚಿಕೊಂಡರೆ, ಕಚೇರಿ ಕೆಲಸಕ್ಕೆ ಹೆಚ್ಚು ಸಮಯ ನೀಡಬಹುದು; ಇದರಿಂದ ವೇತನ ಸಮಾನತೆ ಸಾಧ್ಯವಾಗುತ್ತದೆ.
ಕೆಲಸದ ಸ್ಥಳದಲ್ಲಿನ ‘ದುರಾಸೆ ಕೆಲಸ’ ಎಂದರೇನು?
- ದಿನದ 24 ಗಂಟೆಯೂ ಕರೆದ ತಕ್ಷಣ ಕೆಲಸಕ್ಕೆ ಹಾಜರಾಗುವವರಿಗೆ, ಅಧಿಕ ಸಂಭಾವನೆ ದೊರೆಯುತ್ತದೆ. ಇದೇ ‘ದುರಾಸೆ ಕೆಲಸ’. ವ್ಯಕ್ತಿ(ಪುರುಷ ಅಥವಾ ಮಹಿಳೆ)ಗೆ ಮಕ್ಕಳು ಇಲ್ಲವೇ ಕೌಟುಂಬಿಕ ಜವಾಬ್ದಾರಿಗಳಿದ್ದರೆ, ಆತ/ಆಕೆ ತುರ್ತು ಪರಿಸ್ಥಿತಿಯಲ್ಲಿ ಮನೆಗೆ ಹೋಗಬೇಕಾಗುತ್ತದೆ. ಇಂಥವರು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮತ್ತು ಹೆಚ್ಚು ಒತ್ತಡವಿಲ್ಲದ ಕೆಲಸ ಆಯ್ಕೆ ಮಾಡಿಕೊಳ್ಳುತ್ತಾರೆ; ಕಡಿಮೆ ವೇತನಕ್ಕೆ ದುಡಿಯುತ್ತಾರೆ. ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾದರೆ, ಹೆಚ್ಚಿನ ಸಂದರ್ಭಗಳಲ್ಲಿ ಹೋಗುವವರು ಹೆಣ್ಣು ಮಕ್ಕಳು. ಪತಿ-ಪತ್ನಿ ಇಬ್ಬರೂ ಕೆಲಸದಲ್ಲಿದ್ದರೆ, ಮಗುವಿಗೆ ಅನಾರೋಗ್ಯವುಂಟಾದಲ್ಲಿ ತಾಯಿ ರಜೆ ಹಾಕುತ್ತಾಳೆ. ಇಂಥ ಅಸಮತೆಯನ್ನು ಕಡಿಮೆಗೊಳಿಸುವ ಮಾರ್ಗವೆಂದರೆ, ಕೆಲಸದ ಸ್ಥಳದಲ್ಲಿ ಹೊಂದಾಣಿಕೆಗೆ ಅವಕಾಶ ಕೊಡುವುದು ಮತ್ತು ಮಕ್ಕಳ ಪಾಲನೆ ವೆಚ್ಚವನ್ನು ಕಡಿತಗೊಳಿಸುವುದು. ಮೊದಲನೆಯದು ಕೋವಿಡ್ ಕಾಲದಲ್ಲಿ ನಡೆದಿದೆ ಮತ್ತು ಎರಡನೆಯದಕ್ಕೆ ಕ್ರಮೇಣ ರಾಜಕೀಯ ಬೆಂಬಲ ಸಿಗುತ್ತಿದೆ.
ಪುರುಷನ ಒಂದು ಡಾಲರ್ ಗಳಿಕೆಗೆ ಪ್ರತಿಯಾಗಿ ಮಹಿಳೆ 82 ಸೆಂಟ್ ಗಳಿಸುತ್ತಾಳೆ ಎಂಬ ಮಾತಿದೆ. ಲಿಂಗ ಗಳಿಕೆ ಅಂತರ ಎಂಬ ಪರಿಕಲ್ಪನೆಯ ವಿವರಣೆ ಏನು?
- ಮಹಿಳೆ ಹಾಗೂ ಪುರುಷನ ವಾರವೊಂದರ ಪೂರ್ಣಾವಧಿ ಗಳಿಕೆಯ ಅನುಪಾತವನ್ನು ಲಿಂಗ ಗಳಿಕೆ ಅಂತರ ಎನ್ನಲಾಗುತ್ತದೆ. ಈ ಅನುಪಾತವು ಪೂರ್ಣಾವಧಿಯ ಕೆಲಸಗಾರರ ವಾರವೊಂದರ ಗಳಿಕೆಯನ್ನು ಬಳಸುತ್ತದೆ. ಇದು ಎಲ್ಲ ಕ್ಷೇತ್ರಗಳಲ್ಲೂ ಕಾಲಕ್ರಮೇಣ ಕಡಿಮೆಯಾಗಿದ್ದು, ಪ್ರಸಕ್ತ 0.8 ಇದೆ. ಆದರೆ, ವಾಸ್ತವದಲ್ಲಿ ವ್ಯತ್ಯಾಸ ಹೆಚ್ಚು ಇದೆ. ನನ್ನ ಪುಸ್ತಕವು ಕುಟುಂಬ ಹಾಗೂ ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಬಗ್ಗೆ ಇದ್ದು, ಪದವೀಧರೆಯರನ್ನು ಗುರಿಯಾಗಿಸಿಕೊಂಡಿದೆ. ಯುವತಿಯರು ಕಾಲೇಜು ಇಲ್ಲವೇ ವೃತ್ತಿಪರ ಕೋರ್ಸ್ ಮುಗಿಸಿದ ಬಳಿಕ ಗಳಿಕೆಯಲ್ಲಿನ ಕಂದರ ಕಡಿಮೆ ಇರುತ್ತದೆ; ಮಗುವಿನ ಜನನದ ಬಳಿಕ ಹೆಚ್ಚುತ್ತದೆ. ಕೆಲವು ವೃತ್ತಿಗಳಲ್ಲಿ ಈ ಕಂದರ ಅತಿ ಹೆಚ್ಚು ಇರುತ್ತದೆ. ಅಂದಾಜಿನ ಪ್ರಕಾರ, ಮಹಿಳೆಯರು ಕಡಿಮೆ ಗಳಿಸುತ್ತಾರೆ.
ಕೆಲಸದ ಸ್ಥಳಗಳು ಪುರುಷರು-ಸ್ತ್ರೀಯರು, ಬಿಳಿಯರು, ಕಪ್ಪು ವರ್ಣೀಯರು ಸೇರಿದಂತೆ ಎಲ್ಲರಿಗೂ ತಟಸ್ಥ ಮತ್ತು ಸಮವಾಗಿರುತ್ತವೆ ಎನ್ನುವುದು ನಿಮ್ಮ ಮಾತಿನ ಅರ್ಥವೇ?
- ಅಲ್ಲ. ಆದರೆ, ಆರ್ಥಿಕ ಮಾರುಕಟ್ಟೆಯ ತಾಣಗಳು ತಾರತಮ್ಯದಿಂದ ಮುಕ್ತವಾಗಿರುತ್ತವೆ. ಕಾರ್ಮಿಕ ಮಾರುಕಟ್ಟೆಯಲ್ಲಿರುವ ಎಲ್ಲ ವಿಧದ ತಾರತಮ್ಯ ಹಾಗೂ ಸೂಕ್ತವಲ್ಲದ ಆಚರಣೆಗಳನ್ನು ತೊಡೆದು ಹಾಕಬೇಕು. ನಾವು ಹಾಗೆ ಮಾಡಿದ ಬಳಿಕವೂ ಪುರುಷ ಮತ್ತು ಮಹಿಳೆಯರ ಗಳಿಕೆಯಲ್ಲಿರುವ ವ್ಯತ್ಯಾಸ ಉಳಿದುಕೊಂಡಿರುತ್ತದೆ.
ಲಿಂಗ ಸಮಾನತೆಯ ನೂರು ವರ್ಷದ ಪ್ರಯಾಣದ ಬದಲು ವೃತ್ತಿ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಪ್ರಸಕ್ತ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಬಾರದೇಕೆ?
-ದಾರಿಯಲ್ಲಿ ಬಂದ ಅಡೆತಡೆಗಳನ್ನು ಹೇಗೆ ದಾಟಿದೆವು ಎನ್ನುವುದು ಗೊತ್ತಾದರೆ, ಈಗಿನ ಎಡರುತೊಡರುಗಳನ್ನು ದಾಟುವುದು ಹೇಗೆ ಎನ್ನುವುದು ಗೊತ್ತಾಗಲಿದೆ; ಸಕಾರಾತ್ಮಕ ಬದಲಾವಣೆಗಳು ಆಗಿವೆ ಮತ್ತು ಏಕೆ ಆಗಿವೆ ಎಂಬುದು ಗೊತ್ತಾಗುತ್ತದೆ. ಇಂಥ ಬದಲಾವಣೆಗಳಿಗೆ ಕಾರಣವಾದ ಅಂಶಗಳು ರಾಜಕೀಯ ಮತ್ತು ಸರಕಾರದ ದೆಸೆಯಿಂದ ಆದಂಥವಲ್ಲ; ಬದಲಾಗಿ, ತಾಂತ್ರಿಕವಾದಂಥವು. ಉದಾಹರಣೆಗೆ, ಮಾರುಕಟ್ಟೆಯಲ್ಲಿ ಬಾಹುಬಲಕ್ಕಿಂತ ಮಿದುಳಿನ ಶಕ್ತಿಗೆ ಹೆಚ್ಚು ಬೇಡಿಕೆ ಇದೆ. ತಾಂತ್ರಿಕ ಅಂಶಗಳಲ್ಲಿ ಕೆಲವು ಸರಕಾರದ ನಿಯಂತ್ರಣಕ್ಕೆ ಸಂಬಂಧಿಸಿವೆ. ಇಂಥ ಒಂದು ಮುಖ್ಯ ಬದಲಾವಣೆ ಎಂದರೆ, ಜನನ ನಿಯಂತ್ರಣ ಮಾತ್ರೆಗಳ ಶೋಧನೆ. ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಅನುಮತಿ ನೀಡಿದ 10 ವರ್ಷಗಳ ಬಳಿಕವೂ ಅಮೆರಿಕದ ಕೆಲವು ರಾಜ್ಯಗಳ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ಖರೀದಿಸಲು ಅವಕಾಶ ಇರಲಿಲ್ಲ. ಮಹಿಳೆಯರು ಉನ್ನತ ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಪಡೆಯಲು ಮತ್ತು ಆನಂತರ ಕುಟುಂಬವನ್ನು ಹೊಂದಲು ಈ ಮಾತ್ರೆಗಳು ನೆರವಾದವು. ಈ ಕಾರಣದಿಂದಾಗಿಯೇ ಪುಸ್ತಕವು ಲಿಂಗ ಸಮಾನತೆಯ ಶತಮಾನದ ಪ್ರಯಾಣವನ್ನು ದಾಖಲಿಸಿದೆ. ಪದವೀಧರ ಯುವತಿಯರು ವೃತ್ತಿ ಹಾಗೂ ಕೌಟುಂಬಿಕ ಜೀವನ ಎರಡನ್ನೂ ಹೊಂದಬೇಕೆಂದುಕೊಂಡಿರುತ್ತಾರೆ. 19ನೇ ಶತಮಾನದ ಅಂತ್ಯಭಾಗದಲ್ಲಿ ಜನಿಸಿದ ಪದವೀಧರೆಯರ 5 ಗುಂಪುಗಳನ್ನು ಅವಲೋಕಿಸಿದರೆ, ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಅರ್ಥ ಮಾಡಿಕೊಳ್ಳಬಹುದು. ಇವರ ಜೀವಿತಗಳು ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ವಿಕಾಸದ ಜಾಡನ್ನು ಹಿಡಿದು ಕೊಡಲಿವೆ.
ಕೋವಿಡ್ ಹೇಗೆ ಈ ಸಂಗತಿಗಳನ್ನು ಪ್ರಕಟಗೊಳಿಸಿತು?
2ನೇ ಮಹಾಯುದ್ಧದ ಕಾಲ ಹೊರತುಪಡಿಸಿದರೆ, ಆರ್ಥಿಕತೆಯಲ್ಲಿ ಹೆಣ್ಣುಮಕ್ಕಳ ಕೆಲಸ ಅತ್ಯಂತ ಮುಖ್ಯವಾಗಿರುವ ಕಾಲಘಟ್ಟವಿದು. ಮಹಿಳೆಯರು ವೃತ್ತಿ ಮತ್ತು ಕುಟುಂಬ ಎರಡನ್ನೂ ನಿರ್ವಹಿಸುವುದು ಯಾವಾಗಲೂ ಸವಾಲೇ ಸರಿ. ಆದರೆ, ಕೋವಿಡ್ ಸೋಂಕಿನ ಸಂದರ್ಭದಲ್ಲಿ ಅದು ಇನ್ನಷ್ಟು ಕಠಿಣವಾಯಿತು. ಶಾಲೆಗಳು ಹಾಗೂ ಶಿಶುವಿಹಾರಗಳು ಮುಚ್ಚಿದ್ದರಿಂದ, ಮಹಿಳೆಯರು ಮಕ್ಕಳ ಪಾಲನೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಸಮಯ ನೀಡಬೇಕಾಗಿ ಬಂದಿತು. ಆದರೆ, ಇದೇ ಹೊತ್ತಿನಲ್ಲಿ ಪುರುಷರು ಮಕ್ಕಳ ಪಾಲನೆಗೆ ಕೊಡುವ ಸಮಯ ಕೂಡ ಹೆಚ್ಚಿತು. ಕೋವಿಡ್-19 ಆರ್ಥಿಕತೆಗೆ ಮಕ್ಕಳ ಪಾಲನೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಟ್ಟಿತು. ಮಕ್ಕಳ ಪಾಲನೆ ವೆಚ್ಚದ ಕಡಿತಗೊಳಿಸುವಿಕೆಯು ಲಿಂಗ ಸಮಾನತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿತು. ಇಷ್ಟಲ್ಲದೆ, ಮನೆಯಿಂದ ಕೆಲಸ (ಡಬ್ಲ್ಯುಎಫ್‌ಎಚ್) ಪ್ರಕಾರವು ವೆಚ್ಚ ತಗ್ಗಿಸಲು ನೆರವಾಯಿತು. ಆದರೆ, ಅದು ಕೆಲಸದ ಸ್ಥಳದಲ್ಲಿ ಏನಾದರೂ ಬದಲಾವಣೆ ತಂದಿತೇ ಮತ್ತು ಕಚೇರಿಯ ವೆಚ್ಚವನ್ನು ಕಡಿತಗೊಳಿಸಿತೇ ಎಂಬುದು ಇನ್ನೂ ಗೊತ್ತಾಗಬೇಕಿದೆ.
ವೈಯಕ್ತಿಕ ಕಥನಗಳು, ಜನಪ್ರಿಯ ಸಂಸ್ಕೃತಿ ಮತ್ತು ಕಠಿಣ ಸತ್ಯಗಳನ್ನು ಚೈತನ್ಯಶೀಲ ಬರಹ ಆಗಿಸುವುದು ಹೇಗೆ?
-‘ಕೆರಿಯರ್ ಆ್ಯಂಡ್ ಫ್ಯಾಮಿಲಿ’ ಸಾಧಕರ ಕಥನವಲ್ಲ; ಬದಲಾಗಿ, ಸಕಾರಾತ್ಮಕ ಬದಲಾವಣೆ ಬಗ್ಗೆ ಇರುವಂಥದ್ದು. ಹೀಗಿದ್ದರೂ, ಲಿಂಗ ಅಸಮಾನತೆ ಈಗಲೂ ಇದೆ ಎಂಬುದನ್ನು ಮತ್ತು ಅದು ತೆರಿಗೆ ವಿಧಿಸುವಿಕೆ ಇಲ್ಲವೇ ಕಾರ್ಯಸೂಚಿಗಳ ಮೂಲಕ ಬದಲಿಸಬಹುದಾದ ಸರಳ ಸಮಸ್ಯೆಯಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಕಠಿಣ ಶ್ರಮಪಡುವ ಮತ್ತು ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಸದಸ್ಯರನ್ನು ರಕ್ಷಿಸಬಲ್ಲ ಆರ್ಥಿಕತೆಯನ್ನು ರೂಪಿಸುವಲ್ಲಿ ಸರಕಾರದ ಪಾತ್ರ ಗಮನಾರ್ಹವಾಗಿರಲಿದೆ. ಲಿಂಗ ಅಸಮಾನತೆಯೆಂಬ ದೀರ್ಘಕಾಲೀನ ಸಮಸ್ಯೆಗೆ ತಕ್ಷಣದ ಹಾಗೂ ಸುಲಭ ಪರಿಹಾರವಿಲ್ಲ. ಆದರೆ, ಅದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಸಮಾನತೆಯೆಂಬ ಪ್ರಯಾಣದ ಆರಂಭ ಬಿಂದು ಆಗಲಿದೆ.