ಪಶ್ಚಿಮ ಘಟ್ಟ ದುರಂತಗಳಿಗೆ ಕಾರಣರು ಯಾರು?

Update: 2024-08-09 04:11 GMT

ಗಾಡ್ಗೀಳ್ ವರದಿ ಪ್ರಕಾರ, ಈಗ ಸಂಪೂರ್ಣವಾಗಿ ಕೊಚ್ಚಿ ಹೋಗಿರುವ ಮೆಪ್ಪಾಡಿ ಗ್ರಾಮವು ಕೇರಳದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಪ್ರಾಂತದ ಆರ್ಥಿಕ ಬೆಳವಣಿಗೆ ಹಾಗೂ ಜೀವನಾಧಾರದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಗಾಡ್ಗೀಳ್ ವರದಿಯನ್ನು ಎಲ್ಲ ಸರಕಾರಗಳೂ ತಿರಸ್ಕರಿಸಿದವು. ಆನಂತರ ನೇಮಕಗೊಂಡ ಡಾ. ಕಸ್ತೂರಿರಂಗನ್ ಅವರ ಸಮಿತಿ ಸಂರಕ್ಷಿಸ ಬೇಕಾದ ಪ್ರದೇಶವನ್ನು ಶೇ.37ಕ್ಕೆ ಇಳಿಸಿತು. ಈ ವರದಿಯಲ್ಲಿ ಕೂಡ ವಯನಾಡ್‌ಸಂಪೂರ್ಣವಾಗಿ ಸಂರಕ್ಷಿಸಬೇಕಿದ್ದ ಪ್ರದೇಶವಾಗಿತ್ತು. ಈ ವರದಿ ಕೂಡ ಮೂಲೆಗುಂಪಾಯಿತು.

ವಯನಾಡಿನ ಮನುಷ್ಯ ನಿರ್ಮಿತ ಭೂಕುಸಿತದಲ್ಲಿ 440 ಮಂದಿ ಮೃತಪಟ್ಟಿದ್ದು, 152 ಮಂದಿ ನಾಪತ್ತೆಯಾಗಿದ್ದಾರೆ(ಆಗಸ್ಟ್ 7ರ ಮಾಹಿತಿ). ಈ ಭೀಕರ ದುರಂತದ ಬಳಿಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿ ಈ ರಾಜ್ಯಗಳ ಜೀವದಾಯಿಯಾಗಿದ್ದರೂ, ತೀವ್ರ ಶೋಷಣೆಗೆ ಒಳಗಾಗಿದ್ದು, ಕೆಲವು ವರ್ಷಗಳಿಂದ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರೊ. ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಿದ್ದ ಅತ್ಯಂತ ನಿಖರ ಹಾಗೂ ವೈಜ್ಞಾನಿಕವಾಗಿ ಪರಿಪೂರ್ಣವಾಗಿದ್ದ ವರದಿಯನ್ನು ಜನರ ಪ್ರತಿರೋಧದಿಂದ ಮತ್ತು/ಅಥವಾ ಆ ನೆಪದಿಂದ ಎಲ್ಲ ರಾಜ್ಯಗಳೂ ತಿರಸ್ಕರಿಸಿದ್ದವು. ಅದರ ಫಲವನ್ನು ಈಗ ಉಣ್ಣುವಂತೆ ಆಗಿದೆ.

ತೀರ ಇತ್ತೀಚೆಗೆ ಜುಲೈ 16ರಂದು ಉತ್ತರ ಕನ್ನಡದ ಶಿರೂರು ಬಳಿ ಭಾರೀ ಭೂಕುಸಿತ ಸಂಭವಿಸಿತು. ಗಂಗಾವಳಿ ನದಿಯಲ್ಲಿ ಮೂರು ಟ್ರಕ್‌ಗಳು ಮುಳುಗಿದವು ಮತ್ತು 11 ಮಂದಿ ಕೊಚ್ಚಿಕೊಂಡು ಹೋದರು. ಹತ್ತಿರದ ಉಳುವೆರೆ ಗ್ರಾಮದ 100ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಬೇಕಾಗಿ ಬಂದಿತು. ಇಂಥದ್ದೇ ಘಟನೆ ಇದೇ ಜಿಲ್ಲೆಯ ಯಲ್ಲಾಪುರದ ಕಳಶೆಯಲ್ಲಿ 2021ರಲ್ಲಿ ಸಂಭವಿಸಿತ್ತು. ಕಮಲಾಕರ ಗಾವ್ಕಂರ್ ಎಂಬವರ ಸುತ್ತ ಬೆಟ್ಟಗಳಿದ್ದ ಮನೆಗೆ ಮಳೆ ನೀರು ನುಗ್ಗಿ, ಕುಟುಂಬದ 8 ಮಂದಿ ಸದಸ್ಯರು ಪವಾಡಸದೃಶವಾಗಿ ಬದುಕುಳಿದರು. ಜುಲೈ 20ರ ಮಧ್ಯಾಹ್ನ ಆರಂಭವಾದ ಮಳೆ ನಿಂತಿದ್ದು 23ರಂದು. 21ರಂದು ರಾತ್ರಿ 9.30ರ ಸುಮಾರಿಗೆ ಗುಡ್ಡ ಜರಿದು, ಮನೆಗಳನ್ನು ಮುಚ್ಚಿತು. ಸುತ್ತಲಿನ 200ಕ್ಕೂ ಅಧಿಕ ಮಂದಿಗೆ ವೃತ್ತಿಪರ ನೆರವು ಸಿಕ್ಕಿದ್ದು 78 ಗಂಟೆಗಳ ಬಳಿಕ. 26 ಕಿ.ಮೀ. ದೂರದ ಯಲ್ಲಾಪುರವನ್ನು ಸಂಪರ್ಕಿಸುವ ರಸ್ತೆ ಮೇಲೆ ಮರಗಳು/ರೆಂಬೆಗಳು ಬಿದ್ದು ಹಾಗೂ ರಸ್ತೆ ಕೆಲವೆಡೆ ಕುಸಿದು, ವಾಹನ ಸಂಚಾರ ದುರ್ಲಭವಾಗಿತ್ತು.

ಕರ್ನಾಟಕ ಸರಕಾರದ ದಾಖಲೆಗಳ ಪ್ರಕಾರ, 2006-2024ರ ಅವಧಿಯಲ್ಲಿ ರಾಜ್ಯದಲ್ಲಿ 1,541 ಭೂಕುಸಿತಗಳು ಸಂಭವಿಸಿದ್ದು, 101 ಮಂದಿ ಜೀವ ಕಳೆದುಕೊಂಡಿದ್ದಾರೆ. 7 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಇಸ್ರೋದ ಲ್ಯಾಂಡ್ ಸ್ಲೈಡ್ ಅಟ್ಲಾಸ್ ಪ್ರಕಾರ, ದೇಶದ ತೀವ್ರ ಭೂಕುಸಿತಕ್ಕೆ ಈಡಾಗಬಹುದಾದ 150 ಜಿಲ್ಲೆಗಳಲ್ಲಿ ಕರ್ನಾಟಕದ 8(ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಹಾವೇರಿ) ಜಿಲ್ಲೆಗಳು ಇವೆ. ಕೊಡಗು 12ನೇ ಸ್ಥಾನದಲ್ಲಿದೆ. ಈ ವರ್ಷ ಜುಲೈವರೆಗೆ ರಾಜ್ಯದಲ್ಲಿ 46 ಭೂಕುಸಿತಗಳು ಸಂಭವಿಸಿದ್ದು, 12 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ 31,000 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆ ಇದೆ. ಕೊಡಗಿನಲ್ಲಿ 2028ರ ಭಾರೀ ಭೂಕುಸಿತದ ಬಳಿಕ, 2019 ಮತ್ತು 2020ರಲ್ಲಿ ಭೂಕುಸಿತ ಸಂಭವಿಸಿದ್ದು, 25 ಮಂದಿ ಮೃತಪಟ್ಟಿದ್ದಾರೆ.

ವಯನಾಡ್ ಭೂಕುಸಿತ:

ನಮ್ಮದು ಭೂಕುಸಿತದ ಅಪಾಯ ಹೆಚ್ಚು ಇರುವ ದೇಶಗಳಲ್ಲಿ ಒಂದು. ಜಾಗತಿಕವಾಗಿ ಮಳೆಯಿಂದಾಗುವ ಭೂಕುಸಿತದಲ್ಲಿ ದೇಶದ ಪಾಲು ಶೇ.16 ಮತ್ತು ದೇಶದ ಶೇ.12.6ರಷ್ಟು ಭೂಪ್ರದೇಶ ಭೂಕುಸಿತಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ(ಎನ್‌ಆರ್‌ಎಸ್‌ಸಿ) ದತ್ತಾಂಶದ ಪ್ರಕಾರ, ದೇಶದಲ್ಲಿ 1998-2022ರ ಅವಧಿಯಲ್ಲಿ 80,000 ಭೂಕುಸಿತಗಳು ಸಂಭವಿಸಿವೆ. ಹೆಚ್ಚಿನ ಭೂಕುಸಿತ ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಸಂಭವಿಸುತ್ತವೆ. ಕಳೆದ 2 ದಶಕದಲ್ಲಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತದಿಂದ ಜನರ ಜೀವ ಹಾಗೂ ಆಸ್ತಿ ನಾಶ ನಿರಂತರವಾಗಿ ಮುಂದುವರಿದಿದೆ.

ವಯನಾಡ್ ಭೂಕುಸಿತ ಒಂದು ಮಾನವ ನಿರ್ಮಿತ ದುರಂತ. ಭೂಕುಸಿತಕ್ಕೆ ಮಳೆಯನ್ನು ದೂಷಿಸಲಾಗುತ್ತದೆ. ಆದರೆ, ಮಳೆಗಿಂತ ಹೆಚ್ಚಾಗಿ ಮಾನವನ ಚಟುವಟಿಕೆಗಳು ಭೂಕುಸಿತಕ್ಕೆ ಕಾರಣ. ಭಾರೀ ಮಳೆ ಭೂಕುಸಿತಕ್ಕೆ ಒಂದು ಕಾರಣವಷ್ಟೇ. ಸಡಿಲ ಮಣ್ಣು, ಮಣ್ಣಿನ ಸ್ವಾಭಾವಿಕ ಸವಕಳಿ, ಅನಿಯಂತ್ರಿತ ಮತ್ತು ಅವೈಜ್ಞಾನಿಕ ಅಭಿವೃದ್ಧಿ ಕುಸಿತದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ನಗರೀಕರಣ, ನಿರ್ಮಾಣ ಕಾಮಗಾರಿ ಮತ್ತು ಕಾಡಿನ ಗುಣಮಟ್ಟ ಕುಸಿತದಿಂದ, ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಉಂಟಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಪಶ್ಚಿಮ ಘಟ್ಟ ಮತ್ತು ಕರಾವಳಿ ತೀರ ದುರ್ಬಲ ಪರಿಸರ ವ್ಯವಸ್ಥೆಗಳು. ರಸ್ತೆ ನಿರ್ಮಾಣದ ವೇಳೆ ಮಣ್ಣಿನ ಕುಸಿತವನ್ನು ತಡೆಯಬಲ್ಲ ಹಳೆಯ ಮರಗಳನ್ನು ಕಡಿಯುವುದರಿಂದ, ಮಣ್ಣು ಕುಸಿತದ ಸಾಧ್ಯತೆ ತೀವ್ರಗೊಳ್ಳುತ್ತದೆ.

ಮುಂಡಕ್ಕೈ, ಮೆಪ್ಪಾಡಿ ಮತ್ತು ಚೂರಲ್‌ಮಲದಲ್ಲಿ ಜುಲೈ 30ರಂದು ಮುಂಜಾನೆ 1 ಮತ್ತು 4 ಗಂಟೆಗೆ ಭೂಕುಸಿತ ಸಂಭವಿಸಿತು. ಕೇರಳದ ಅರ್ಧದಷ್ಟು ಭೂಪ್ರದೇಶ (19,301 ಚದರ ಕಿ.ಮೀ.) ಭೂಕುಸಿತಕ್ಕೆ ತುತ್ತಾಗುವ ಸಂಭವನೀಯತೆ ಇದೆ ಎಂದು ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಹೇಳಿದೆ. ವಯನಾಡಿನ ಶೇ.31.54 ಭಾಗ ತೀವ್ರ ಭೂಕುಸಿತಕ್ಕೆ ಈಡಾಗಬಹುದು ಎಂದು ದಿಲ್ಲಿ ಐಐಟಿ ಕೂಡ ಹೇಳಿತ್ತು. ಇಸ್ರೋ ಉಪಗ್ರಹದ ಚಿತ್ರಗಳ ಪ್ರಕಾರ, ವಯನಾಡಿನಲ್ಲಿ 86,000 ಚದರ ಮೀಟರ್ ವ್ಯಾಪ್ತಿಯ ಭೂಮಿ ಕುಸಿದು, 8 ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿತು. ಚಲಿಯಾರ್ ನದಿಯ ಉಪನದಿ ಇರುವಳಿಂಜಿಪುಳ ಉಕ್ಕಿ ಹರಿಯಿತು; ಎರಡೂ ನದಿಗಳ ದಂಡೆ ಒಡೆಯಿತು.

ನಿರ್ಮಾಣ ಕಾಮಗಾರಿಗಳ ಹೆಚ್ಚಳ ಮತ್ತು ಬೆಳೆ ಪದ್ಧತಿಯಲ್ಲಿ ಬದಲಾವಣೆ ಗಂಭೀರ ಸಮಸ್ಯೆಗಳು. ಕಳೆದ ಕೆಲವು ವರ್ಷಗಳಿಂದ ವಯನಾಡ್ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದ್ದು, ಹೋಂಸ್ಟೇಗಳು ಹಾಗೂ ಮಳೆಗಾಲದ ಪ್ರವಾಸೋದ್ಯಮ ಗರಿಗಟ್ಟಿಕೊಂಡಿದೆ. ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರ ಕಡಿತ, ಅವಘಡ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳದೆ ಇರುವುದು, ರೆಸಾರ್ಟ್-ಕೃತಕ ಕೆರೆಗಳ ನಿರ್ಮಾಣ ಮತ್ತು ಬರಿದಾದ ಕಲ್ಲಿನ ಗಣಿಗಳು ಘಟನೆಗೆ ಕಾರಣ ಎಂದು ಪ್ರೊ.ಗಾಡ್ಗೀಳ್ ಹೇಳುತ್ತಾರೆ. ಬ್ರಿಟಿಷ್ ಕಾಲದ ಟೀ ತೋಟಗಳಲ್ಲಿನ ಭೂಮಿಯ ಬಳಕೆಯಲ್ಲಿ ಭಾರೀ ಬದಲಾವಣೆ ಆಗಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಆ್ಯಂಡ್ ಪಬ್ಲಿಕ್ ಹೆಲ್ತ್ (2022) ಪ್ರಕಾರ, 1950-2018ರ ಅವಧಿಯಲ್ಲಿ ಶೇ.62ರಷ್ಟು ಅರಣ್ಯ ಕಡಿಮೆಯಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರಮಾಣ ಶೇ.1,800ರಷ್ಟು ಹೆಚ್ಚಿದೆ. ಹಳೆಯ ಮರಗಳ ಬೇರುಗಳು ಮಣ್ಣನ್ನು ದೃಢವಾಗಿ ಹಿಡಿದಿಡುತ್ತಿದ್ದವು. ಆದರೆ, ಈಗ ಏಕ ಬೆಳೆಗಳಿಂದ ಮಣ್ಣಿನ ರಚನೆ ಬದಲಾಗಿದೆ; ಮಣ್ಣು ಸಡಿಲವಾಗಿದೆ.

ವಯನಾಡಿನ ಮೆಪ್ಪಾಡಿಯ ಸನಿಹದಲ್ಲೇ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹತ್ತಿರದ ಪುತ್ತುಮಲದಲ್ಲಿ ಆಗಸ್ಟ್ 2019ರಲ್ಲಿ ಭೂಕುಸಿತ ಸಂಭವಿಸಿ, 19 ಮಂದಿ ಮೃತಪಟ್ಟಿದ್ದರು. ಹೀಗಿದ್ದರೂ, ಸುರಂಗ ರಸ್ತೆ ನಿರ್ಮಾಣ ಸರಕಾರದ ಆದ್ಯತೆಯಾಗಿದೆ. ಕೇರಳದ 2018ರ ಪ್ರವಾಹದಲ್ಲಿ 433 ಜನ ಮೃತಪಟ್ಟಿದ್ದು, 5.4 ಲಕ್ಷ ಜನರ ಮೇಲೆ ಪರಿಣಾಮ ಉಂಟಾಗಿತ್ತು. ವಯನಾಡ್ ಭೂಕುಸಿತ 2018ರಿಂದ ಕೇರಳದಲ್ಲಿ ಸಂಭವಿಸಿದ 6ನೇ ಭಾರೀ ಭೂಕುಸಿತ ಪ್ರಕರಣವಾಗಿದೆ.

2020ರಲ್ಲಿ ಕೇಂದ್ರ ಸರಕಾರ ಲೋಕಸಭೆಯಲ್ಲಿ ಕೇರಳದ 14ರಲ್ಲಿ 13 ಜಿಲ್ಲೆಗಳು ಭೂಕುಸಿತದ ಸಾಧ್ಯತೆ ಹೊಂದಿವೆ ಎಂದು ಹೇಳಿತ್ತು. 2018ರ ಪ್ರವಾಹದ ಬಳಿಕ ಜಿಯಾಲಜಿಕಲ್ ಸರ್ವೇ ನಡೆಸಿದ ಸಮೀಕ್ಷೆಯಲ್ಲಿ 2002 ಭೂಕುಸಿತಗಳು ಸಂಭವಿಸಿದ್ದು ಪತ್ತೆಯಾಗಿತ್ತು. ಜಿಎಸ್‌ಐ 2019ರಲ್ಲಿ ಮತ್ತೊಮ್ಮೆ 196 ಭೂಕುಸಿತ ಪ್ರಕರಣಗಳ ಅಧ್ಯಯನ ನಡೆಸಿ, ವರದಿ ಸಲ್ಲಿಸಿತ್ತು.

ಪರಿಹಾರ ಕೈ ಸೇರುವುದಿಲ್ಲ:

ಸ್ವಾಭಾವಿಕ ಅವಘಡಕ್ಕೆ ಸಿಲುಕಿ ಬಳಲುವ ಸ್ಥಳೀಯರಿಗೆ ನ್ಯಾಯಸಮ್ಮತ ಪರಿಹಾರ ಮರೀಚಿಕೆ. ಕೊಡಗು ಭೂಕುಸಿತ ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ ನೀಡಬೇಕು ಮತ್ತು ಪುನರ್ವಸತಿ ಕಲಿಸಬೇಕೆಂದು ನ್ಯಾಯವಾದಿ ಗೀತಾ ಮಿಶ್ರಾ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವರು ಕೊಡಗಿನವರಲ್ಲ ಎಂದು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ಪರಿಹಾರ-ಪುನರ್ವಸತಿ ಎನ್ನುವುದು ಬಹು ದೊಡ್ಡ ಹಗರಣ. ಚಿಕ್ಕಮಗಳೂರಿನಲ್ಲಿ ಆಗಸ್ಟ್ 2019ರಲ್ಲಿ ಆಸ್ತಿ ಕಳೆದುಕೊಂಡ 43 ಮಂದಿಗೆ ಈವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ(ಗುಡ್ಡೆತೋಟದ 17, ಚಂಡಾಳು 15 ಮತ್ತು ಮೂಡಿಗೆರೆಯ 11 ಕುಟುಂಬಗಳು). ಗುಡ್ಡೆತೋಟದ ಸಂತ್ರಸ್ತರಿಗೆ ಪರ್ಯಾಯ ಮನೆ-ನಿವೇಶನ ನೀಡುವವರೆಗೆ, ಬಾಡಿಗೆ ಮೊತ್ತ ನೀಡುವುದಾಗಿ ಹೇಳಲಾಗಿತ್ತು; ಆದರೆ, ಬಾಡಿಗೆ ಮನೆಗೆ ಹೋದವರಿಗೆ, 5 ತಿಂಗಳು ಮಾಸಿಕ 5,000 ರೂ. ನೀಡಿ, ಆನಂತರ ಸ್ಥಗಿತಗೊಳಿಸಲಾಯಿತು. ಅವರಿಗೆ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ, ಪರ್ಯಾಯ ಕೃಷಿ ಭೂಮಿ ಹಾಗೂ ಮನೆ ನಿರ್ಮಾಣಕ್ಕೆ ನಿವೇಶನ ನೀಡಲಿಲ್ಲ.

ಉತ್ತರ ಕನ್ನಡದ ಕಳಶೆಯ 34 ಕುಟುಂಬಗಳಲ್ಲಿ 20 ಯಲ್ಲಾಪುರಕ್ಕೆ ಸ್ವಂತ ಖರ್ಚಿನಲ್ಲಿ ಸ್ಥಳಾಂತರಗೊಂಡಿವೆ. ಆಗಾಗ ಕಳಶೆಗೆ ಹೋಗಿ, ಜಮೀನಿನ ದೇಖರೇಖಿ ನೋಡಿಕೊಂಡು ಬರುತ್ತಾರೆ. ಉತ್ತರ ಕನ್ನಡದಲ್ಲಿ ಶೇ.70ರಷ್ಟು ಪ್ರದೇಶದಲ್ಲಿ ಕಾಡು ಇರುವುದರಿಂದ, ಕೃಷಿ ಭೂಮಿಯ ಕೊರತೆ ಇದೆ. ಯಲ್ಲಾಪುರದಲ್ಲಿ ವಾಸದ ಮನೆಗೆ ಬಾಡಿಗೆ ನೀಡಲು ಆಗದೆ ಇರುವವರು, ಕಳಸೆಯಲ್ಲಿನ ಅರ್ಧ ಉರುಳಿದ ಮನೆಗಳಲ್ಲೇ ಬದುಕು ದೂಡುತ್ತಿದ್ದಾರೆ. ದಕ್ಷಿಣ ಕನ್ನಡದ ಗುರುಪುರ ಮತ್ತು ಸುಬ್ರಹ್ಮಣ್ಯದ ಭೂಕುಸಿತ ಸಂತ್ರಸ್ತರದ್ದೂ ಇದೇ ಕಥೆ. ಸುಬ್ರಮಣ್ಯದ ಸಮೀಪದ ಗ್ರಾಮಗಳು ಬೆಟ್ಟದ ಬದಿಯಲ್ಲಿ ಇರುವುದರಿಂದ, ಭೂಕುಸಿತದ ಭೀತಿ ಎದುರಿಸುತ್ತಿವೆ. ಹೀಗಾಗಿ, ಕಳೆದ 4 ವರ್ಷಗಳಿಂದ 8 ಕುಟುಂಬಗಳು ಮಳೆಗಾಲದಲ್ಲಿ ಪರಿಹಾರ ಶಿಬಿರಕ್ಕೆ ಆಗಮಿಸುತ್ತವೆ. ಪರ್ಯಾಯ ಕೃಷಿ ಭೂಮಿ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸಿ ಎನ್ನುವ ಕೂಗು ಸರಕಾರದ ಕಿವಿ ಮುಟ್ಟಿಲ್ಲ. ಪುನರ್ವಸತಿ ಸಂಕೀರ್ಣ ಪ್ರಕ್ರಿಯೆ. ಪುನರ್ವಸತಿ ಕಲ್ಪಿಸಲು ಸ್ಥಳೀಯ ಗ್ರಾಮ ಪಂಚಾಯತ್, ನಗರ ಯೋಜನೆ-ವಸತಿ-ಆರ್ಥಿಕ ಯೋಜನೆ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಹಲವು ಇಲಾಖೆಗಳ ಸಮನ್ವಯತೆ, ಸಂಯೋಜಿತ ಕಾರ್ಯ ನಿರ್ವಹಣೆ ಅಗತ್ಯ ಇರುತ್ತದೆ. ಇದರೊಟ್ಟಿಗೆ, ಕನಿಷ್ಠ ಮಾನವೀಯತೆಯೂ ಬೇಕಾಗುತ್ತದೆ. ಯಾವುದೋ ಇಲಾಖೆಯ ಒಬ್ಬ ಅಧಿಕಾರಿ ನಿರ್ಲಕ್ಷ್ಯ ತೋರಿದರೂ, ಒಟ್ಟಾರೆ ಕೆಲಸಕ್ಕೆ ಭಂಗ ಬರುತ್ತದೆ.

ಹವಾಮಾನ ಬದಲಾವಣೆ ವಿಪತ್ತು:

ಹವಾಮಾನ ಬದಲಾವಣೆ ಬೇರೆಯದೇ ರೀತಿಯಲ್ಲಿ ಪರಿಣಾಮ ಬೀರಿದೆ. ಅರಬಿ ಸಮುದ್ರ ಬಿಸಿಯಾಗುತ್ತಿರುವುದರಿಂದ, ಸಾಂದ್ರ ಮೋಡ ವ್ಯವಸ್ಥೆಗಳು ನಿರ್ಮಾಣವಾಗುತ್ತಿದೆ; ಇದರಿಂದ ಅಲ್ಪಾವಧಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಅವಧಿ ಕಡಿಮೆಯಾಗುತ್ತಿದೆ. ವಯನಾಡಿನಲ್ಲಿ ಭೂಕುಸಿತಕ್ಕೆ ಮುನ್ನ ಮುಂಡಕ್ಕೈನಲ್ಲಿ 48 ಗಂಟೆಗಳಲ್ಲಿ 527 ಮಿ.ಮೀ. ಮಳೆ ಸುರಿದಿತ್ತು. ಈ ಋತುವಿನಲ್ಲಿ ವಯನಾಡಿನಲ್ಲಿ ಸಾಧಾರಣ ಮಳೆ ಮತ್ತು ಕೇರಳದಲ್ಲಿ ಕಡಿಮೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ವರ್ಷವಿಡೀ ಹನಿ ಮಳೆಯಿಂದ ತಂಪು, ಮೋಡ ಕವಿದ ವಾತಾವರಣವಿದ್ದ ಪ್ರದೇಶದಲ್ಲಿ ಒಣ, ಬಿಸಿ ಬೇಸಗೆ ಹಾಗೂ ಮಳೆಗಾಲದಲ್ಲಿ ಭಾರೀ ಮಳೆ ಆಗುತ್ತಿದೆ. ಇದರಿಂದ ಭೂಕುಸಿತದ ಸಂಭವನೀಯತೆ ಹೆಚ್ಚಿದೆ. ಒಣಗಿದ ಮಣ್ಣು ಕಡಿಮೆ ನೀರು ಹೀರಿಕೊಳ್ಳುತ್ತದೆ; ಭಾರೀ ಮಳೆಯಿಂದ ನೀರು ವೇಗವಾಗಿ ಹರಿದು ಭೂಕುಸಿತ ಉಂಟಾಗುತ್ತಿದೆ.

ಗಾಡ್ಗೀಳ್ ವರದಿ:

ಪ್ರೊ. ಮಾಧವ ಗಾಡ್ಗೀಳ್ ಅವರು 2011ರ ತಮ್ಮ ವರದಿಯಲ್ಲಿ ಪಶ್ಚಿಮ ಘಟ್ಟದ ಆರು ರಾಜ್ಯಗಳ ಇಡೀ ಭೂಪ್ರದೇಶವನ್ನು ಅಂದರೆ, 1,29,000 ಚದರ ಕಿ.ಮೀ. ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸ ಬೇಕು. ಅದನ್ನು ಮೂರು ವಲಯಗಳಾಗಿ ವಿಂಗಡಿಸಿ, ಮೊದಲಿನ ಎರಡು ವಲಯಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದರು. ವಯನಾಡಿನ ಮೂರು ತಾಲೂಕುಗಳು 1ನೇ ವಲಯದಲ್ಲಿ ಬರಲಿವೆ. ಭೂಮಿ ಬಳಕೆ ಮೇಲೆ ನಿಷೇಧ, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆಗಳ ಮೇಲೆ ಮಿತಿ, ಹೊಸ ರೈಲು ಮಾರ್ಗ-ರಸ್ತೆ ನಿರ್ಮಾಣಕ್ಕೆ ಅವಕಾಶ ಕೂಡದು ಮತ್ತು ನಿಯಂತ್ರಿತ ಕನಿಷ್ಠ ಪರಿಸರ ಪ್ರವಾಸೋದ್ಯಮಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ್ದರು. ವರದಿ ಪ್ರಕಾರ, ಈಗ ಸಂಪೂರ್ಣವಾಗಿ ಕೊಚ್ಚಿ ಹೋಗಿರುವ ಮೆಪ್ಪಾಡಿ ಗ್ರಾಮವು ಕೇರಳದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಪ್ರಾಂತದ ಆರ್ಥಿಕ ಬೆಳವಣಿಗೆ ಹಾಗೂ ಜೀವನಾಧಾರದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಗಾಡ್ಗೀಳ್ ವರದಿಯನ್ನು ಎಲ್ಲ ಸರಕಾರಗಳೂ ತಿರಸ್ಕರಿಸಿದವು. ಆನಂತರ ನೇಮಕಗೊಂಡ ಡಾ. ಕಸ್ತೂರಿರಂಗನ್ ಅವರ ಸಮಿತಿ ಸಂರಕ್ಷಿಸ ಬೇಕಾದ ಪ್ರದೇಶವನ್ನು ಶೇ.37ಕ್ಕೆ ಇಳಿಸಿತು. ಈ ವರದಿಯಲ್ಲಿ ಕೂಡ ವಯನಾಡ್‌ಸಂಪೂರ್ಣವಾಗಿ ಸಂರಕ್ಷಿಸಬೇಕಿದ್ದ ಪ್ರದೇಶವಾಗಿತ್ತು. ಈ ವರದಿ ಕೂಡ ಮೂಲೆಗುಂಪಾಯಿತು.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಮೊದಲ ಕರಡು ಅಧಿಸೂಚನೆ ಮಾರ್ಚ್ 2014ರಲ್ಲಿ ಹೊರಬಿದ್ದಿತು. ಹತ್ತು ವರ್ಷ ವನವಾಸ ಅನುಭವಿಸಿತು. 2013ರಲ್ಲಿ ಕೇಂದ್ರ ಸರಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 59,940 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಹೇಳಿತು. 6ನೇ ಕರಡನ್ನು ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಬಿಡುಗಡೆಗೊಳಿಸಲಾಗಿದೆ. ಈ ಕರಡಿನಲ್ಲಿ ಪರಿಸರ ಸೂಕ್ಷ್ಮಪ್ರದೇಶವನ್ನು 56,826 ಚದರ ಕಿ.ಮೀ.ಗೆ ಇಳಿಸಿದ್ದು, ಕರಡಿಗೆ ಸಾರ್ವಜನಿಕರಿಂದ ಸಲಹೆ-ಆಕ್ಷೇಪಗಳನ್ನು ಕೇಳಲಾಗಿದೆ. ಕರಡಿನ ಅಂತಿಮಗೊಳಿಸುವಿಕೆಯು ಸಂಬಂಧಿಸಿದ ರಾಜ್ಯಗಳ ಸಮ್ಮತಿಯನ್ನು ಆಧರಿಸಿರುತ್ತದೆ. 2022ರಲ್ಲಿ ರಾಜ್ಯಗಳ ಕಾಳಜಿಗಳನ್ನು, ಅವಘಡಕ್ಕೆ ತುತ್ತಾಗುವ ಜನರ ಹಕ್ಕು, ಪರಿಸರ ವ್ಯವಸ್ಥೆ, ಸವಲತ್ತು ಮತ್ತು ಅಭಿವೃದ್ಧಿ ಅಗತ್ಯಗಳನ್ನು ಸಮತೋಲಗೊಳಿಸಬಲ್ಲ ಮಾರ್ಗೋಪಾಯ ಕಂಡುಹಿಡಿಯಲು ಸಮಿತಿಯೊಂದನ್ನು ನೇಮಿಸಲಾಗಿತ್ತು. ಆ ಸಮಿತಿ ಈವರೆಗೆ ವರದಿ ನೀಡಿಲ್ಲ.

ಉಪಶಮನ ಕ್ರಿಯೆ:

ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಇನ್ನಿತರ ಏಜೆನ್ಸಿಗಳು ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳ ಸಮೀಕ್ಷೆ ನಡೆಸಿವೆ. ಭೂಕುಸಿತ ತಡೆಯಲು ಹಾಗೂ ವಿಪರಿಣಾಮಗಳನ್ನು ಕಡಿಮೆಗೊಳಿಸಲು ಉಪಶಮನ ಕ್ರಮಗಳನ್ನು ಶಿಫಾರಸು ಮಾಡಿವೆ.

* ಮುನ್ಸೂಚನೆ ಸಂದೇಶಗಳು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಸಮುದಾಯವನ್ನು ತಲುಪಬೇಕು

* ಭೂಕುಸಿತ ಕುರಿತು ಜಾಗೃತಿ ಕೊರತೆಯಿಂದಾಗಿ, ಎಲ್ಲರೂ ಸುರಕ್ಷಿತ ನೆಲೆಗೆ ತಲುಪುತ್ತಿಲ್ಲ. ಹೀಗಾಗಿ, ಜಾಗೃತಿ ಮೂಡಿಸಬೇಕು

* ಪರಿಸರ ಸೂಕ್ಷ್ಮ ಮತ್ತು ಬೆಟ್ಟ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು.

* ಭೌಗೋಳಿಕವಾಗಿ ಸೂಕ್ಷ್ಮ ಪ್ರದೇಶಗಳ ಬಲವರ್ಧನೆಗೆ ಸಾಕಾಗುವಷ್ಟು ಪ್ರಯತ್ನ ನಡೆದಿಲ್ಲ.

* ಸ್ಥಳಾಂತರಗೊಂಡ ಸಮುದಾಯದ ಪುನರ್ವಸತಿಯಲ್ಲಿ ವಿಳಂಬ/ನಿರ್ಲಕ್ಷ್ಯ.

ಜಿಯಾಲಜಿಕಲ್ ಸರ್ವೇ(ಜಿಎಸ್‌ಐ) ಭೂಕುಸಿತ ಅಧ್ಯಯನಕ್ಕೆ ನೋಡಲ್ ಏಜೆನ್ಸಿಯೊಂದನ್ನು ಗುರುತಿಸಿದ್ದು, ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಹಾಗೂ ಭೂಕುಸಿತದಿಂದ ಅಪಾಯ ಕಡಿತಗೊಳಿಸಲು ಪ್ರೊಟೋಕಾಲ್ ರೂಪಿಸಲು ಹೇಳಿದೆ. ಅದಿನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಜನರ ಬಳಕೆಗೆ ಬರಲು 4-5 ವರ್ಷ ಬೇಕಾಗಲಿದೆ. ವಯನಾಡಿಗೆ ಸಂಬಂಧಿಸಿಂತೆ ರಾಜ್ಯ/ಜಿಲ್ಲಾ ಪ್ರಾಧಿಕಾರಗಳು ಹೊರಡಿಸಿದ ಮುನ್ಸೂಚನೆಗಳು, 2024ರ ಮುಂಗಾರು ಆರಂಭಗೊಂಡ ಬಳಿಕ ಹೆಚ್ಚಿನ ದಿನಗಳಲ್ಲಿ ಭೂಕುಸಿತದ ಸಾಧ್ಯತೆ ಕಡಿಮೆ ಹಾಗೂ ಜುಲೈ 30ರಂದು ‘ಮಧ್ಯಮ’ ಎಂದು ಹೇಳಿದ್ದವು.

ಮುಗಿಸುವ ಮುನ್ನ...

ಗುಡ್ಡ ಕುಸಿದು ನೀರು-ಕೆಸರು ಮನೆಯೊಳಗೆ ನುಗ್ಗಿದಾಗ, ಮುಂಡಕ್ಕೈ ನಿವಾಸಿ ಓನಪ್ಪರಂಬಿಲ್ ಮೊಯ್ದು ಎಂಬವರು ತಮ್ಮ ಮಗಳು, ಮೊಮ್ಮಗ(8 ತಿಂಗಳು)ಳನ್ನು ಎತ್ತಿಕೊಂಡು, ಕೆಲ ಕಾಲ ಸೀಲಿಂಗ್ ಫ್ಯಾನ್ ಹಿಡಿದು ನೇತಾಡಿದರು. ಕುತ್ತಿಗೆವರೆಗೆ ನೀರು ಬಂದಾಗ, ಆದದ್ದು ಆಗಲಿ ಎಂದು ಅರ್ಧ ತೆರೆದ ಬಾಗಿಲ ಮೂಲಕ ಹೊರಗೆ ಓಡಿದರು. ‘‘ಸಾವು ನನ್ನ ಮುಖವನ್ನೇ ನೋಡುತ್ತಿತ್ತು. ಇತ್ತೀಚಿನ ಬೈಪಾಸ್ ಸರ್ಜರಿಯಿಂದ ದುರ್ಬಲನಾಗಿದ್ದೆ. ಮಗಳನ್ನು ಬೆನ್ನಿನ ಮೇಲೆ, ಮೊಮ್ಮಗಳನ್ನು ತಲೆ ಮೇಲೆ ಕೂರಿಸಿಕೊಂಡು ಕೆಸರಿನಲ್ಲಿ ಸುಮಾರು 250 ಮೀಟರ್ ನಡೆದೆ’’ ಎಂದು ಅವರು ಹೇಳಿದರು. ಇರುವಳಿಂಜಿ ನದಿಯಿಂದ 50 ಮೀಟರ್ ದೂರದಲ್ಲಿದ್ದ ಅವರ ಎರಡು ಅಂತಸ್ತಿನ ಮನೆ ಈಗ ನೆಲಸಮವಾಗಿದೆ. ‘‘ಮೊದಲ ಭೂಕುಸಿತ ಪರೀಕ್ಷಾ ಡೋಸ್. ಎರಡನೆಯದು ಪ್ರಕೃತಿ ನೀಡಿದ ಚುಚ್ಚುಮದ್ದು’’ ಎಂದು ಅವರು ಹೇಳುತ್ತಾರೆ. ಆದರೆ, ಪಶ್ಚಿಮ ಘಟ್ಟಗಳ ಮೇಲೆ ನಾವು ನಡೆಸಿರುವ ಅಂದಾದುಂದಿಯನ್ನು ಸರಿಪಡಿಸಲು ಚುಚ್ಚುಮದ್ದು ಸಾಲುವುದಿಲ್ಲ: ಮೇಜರ್ ಶಸ್ತ್ರಚಿಕಿತ್ಸೆಯೇ ಆಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News