ಮಣಿಪುರದ ಚುರಚಂದ್ಪುರಕ್ಕೆ ರಸ್ತೆ ಮಾರ್ಗದ ಬದಲು ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದಾರೆ ರಾಹುಲ್ ಗಾಂಧಿ
ಹೊಸದಿಲ್ಲಿ: ಭದ್ರತಾ ಕಳವಳದ ಕಾರಣಕ್ಕೆ ರಾಹುಲ್ ಗಾಂಧಿಯವರ ಬೆಂಗಾವಲನ್ನು ಇಂಫಾಲ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ನಿಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಈಗ ಇಂಫಾಲ್ ಗೆ ಹಿಂದಿರುಗುತ್ತಿದ್ದು, ಚುರಚಂದ್ಪುರಕ್ಕೆ ರಸ್ತೆ ಮಾರ್ಗದ ಮೂಲಕ ಪ್ರಯಾಣಿಸುವ ಬದಲು ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದಾರೆ.
ಚುರಚಂದಪುರದವರೆಗೆ ರಸ್ತೆ ಮೂಲಕ ಪ್ರಯಾಣಿಸುವ ಬದಲು ಹೆಲಿಕಾಪ್ಟರ್ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
"ನಾವು ಅಂತಹ ಘಟನೆಗಳನ್ನು ಪುನರಾವರ್ತಿಸಲು ಬಯಸುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆಯಾಗಿ, ಬಿಷ್ಣುಪುರದಲ್ಲಿ ಸ್ಥಗಿತಗೊಳ್ಳುವಂತೆ ಬೆಂಗಾವಲು ಪಡೆಯನ್ನು ಕೋರಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಚುರಚಂದ್ಪುರ ಜಿಲ್ಲೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ರಾಜ್ಯದ ಪೊಲೀಸರು ಇಂದು ತಡೆಹಿಡಿದಿದ್ದಾರೆ.
ಮೇ 3 ರಂದು ಮಣಿಪುರದಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಘರ್ಷಣೆಗಳು ಭುಗಿಲೆದ್ದಿತ್ತು.
ರಾಜ್ಯ ರಾಜಧಾನಿ ಇಂಫಾಲ್ ಕಣಿವೆಯಲ್ಲಿ ಹಾಗೂ ಸುತ್ತಮುತ್ತ ವಾಸಿಸುವ ಮೈಟೀಸ್ ಮತ್ತು ಬೆಟ್ಟಗಳಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.