ರಾಯಚೂರು: ಪಿಡಿಓ ಪರೀಕ್ಷೆ ವಿತರಣೆಯಲ್ಲಿ ಎಡವಟ್ಟು ಆರೋಪ; ಪರೀಕ್ಷಾ ಮುಖ್ಯಸ್ಥರ ಸ್ಪಷ್ಟೀಕರಣ
ರಾಯಚೂರು: ಕಲ್ಯಾಣ ಕರ್ನಾಟಕದಲ್ಲಿ ಇಂದು ಕೆ.ಪಿ.ಎಸ್.ಸಿಯಿಂದ ನಡೆಸಲಾಗುತ್ತಿರುವ ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿತರಣೆಯಲ್ಲಿ ಎಡವಟ್ಟು ನಡೆದಿರುವ ಅಭ್ಯರ್ಥಿಗಳ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಮುಖ್ಯಸ್ಥ ಬಸವರಾಜ್ ತಡಕಲ್ ಸ್ಪಷ್ಟೀಕರಣ ನೀಡಿದ್ದಾರೆ.
ಬೆಳಿಗ್ಗೆ 9:30 ನಿಮಿಷಕ್ಕೆ ವಿಡಿಯೋ ಕ್ಯಾಮೆರಾ ಸಮೇತ 4 ಪೆಟ್ಟಿಗೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಕ್ಕೆ ತರಲಾಯಿತು. ಅವುಗಳನ್ನು ತೆರೆದಿದ್ದು ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಯಿತು. ಪ್ರಶ್ನೆ ಪತ್ರಿಕೆಗಳು ಒಂದು ಎರಡು ಮೂರನೇ ಕೊಠಡಿಗೆ ಕೊಟ್ಟು ನಾಲ್ಕಕ್ಕೆ ಕೊಡಬೇಕಾದಾಗ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಅದಲು ಬದಲಾಗಿತ್ತು.
ಇದನ್ನು ಸರಿಪಡಿಸುವಷ್ಟರಲ್ಲಿ ಒಬ್ಬ ಅಭ್ಯರ್ಥಿ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ತೆರೆಯಲಾಗಿದೆ ಎಂದು ಆರೋಪ ಮಾಡುತಾ, ಸಮಾಧಾನ ಪಡಿಸಿದರೂ ಅರ್ಥ ಮಾಡಿಕೊಳ್ಳದೇ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಕೂಗುತ್ತಾ ಬೊಬ್ಬೆ ಹಾಕಿದರಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಗೊಂದಲ ಉಂಟಾಗಿ ಅವರ ಹಿಂದೆ ಹಲವು ವಿದ್ಯಾರ್ಥಿಗಳು ಹೋಗಿದ್ದರಿಂದ ಗೊಂದಲದಿಂದ ಇಷ್ಟೊಂದು ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರೆದ ಪ್ರತಿಭಟನೆ: ಇಲ್ಲಿನ ಸಿಂಧನೂರು ಸರಕಾರಿ ಮಹಾವಿದ್ಯಾಲಯದಲ್ಲಿ ನಡೆಸಲಾಗುತ್ತಿರುವ ಪಿಡಿಓ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರಶ್ನೆ ಪತ್ರಿಕೆ ವಿತರಣೆ ಎಡವಟ್ಟು ಆರೋಪಿಸಿ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯದೆ ಅಭ್ಯರ್ಥಿಗಳು , ಕಾಲೇಜಿನ ಮುಂಭಾಗದ ಕುಷ್ಟಗಿ ರಸ್ತೆಯಲ್ಲಿ ಬಹುಜನ ಸಮಾಜ ವಿದ್ಯಾರ್ಥಿಗಳ ಒಕ್ಕೂಟ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಇದರಿಂದ ಎರಡು ಕಡೆಯಲ್ಲಿ ವಾಹನಗಳು ನಿಂತಿದ್ದು, ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ. ಡಿ.ವೈ.ಎಸ್.ಪಿ. ಬಿ. ಎಸ್.ತಳವಾರ್, ಲಿಂಗಸೂಗೂರು ಸಹಾಯಕ ಆಯುಕ್ತ ಬಸವಣ್ಣಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಗಳಾದ ವೀರಾರೆಡ್ಡಿ, ದುರ್ಗಪ್ಪ ಡೊಳ್ಳಿನ್ ತಹಸೀಲ್ದಾರ್ ಅರುಣ್ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಮರು ಪರೀಕ್ಷೆ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದು, ಮಧ್ಯಾಹ್ನದ ಪರೀಕ್ಷೆಯನ್ನು ನಡೆಸುವಂತೆ ಪರೀಕ್ಷಾ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.